An unconventional News Portal.

ಮೋದಿ ಸರಕಾರದ ‘ಗೋ- ಸೂಚನೆ’: ಬದುಕಿ- ಬದುಕಲು ಬಿಡಿ ಮತ್ತು ಗ್ರೌಂಡ್ ರಿಯಾಲಿಟಿ

ಮೋದಿ ಸರಕಾರದ ‘ಗೋ- ಸೂಚನೆ’: ಬದುಕಿ- ಬದುಕಲು ಬಿಡಿ ಮತ್ತು ಗ್ರೌಂಡ್ ರಿಯಾಲಿಟಿ

ನೋಟು ಅಮಾನ್ಯೀಕರಣದ ನಂತರ ದೇಶವನ್ನು ತುದಿಗಾಲಿನ ಮೇಲೆ ನಿಲ್ಲಿಸಿ, ನಾನಾ ಆಯಾಮಗಳ ಚರ್ಚೆಯನ್ನು ನಾಲ್ಕು ದಿನಗಳ ಹಿಂದಿನ ಕೇಂದ್ರ ಸರಕಾರ ಅಧಿಸೂಚನೆ ಹುಟ್ಟುಹಾಕಿದೆ. ಜಾನುವಾರುಗಳನ್ನು, ಅದರಲ್ಲೂ ವಿಶೇಷವಾಗಿ ದನ, ಕರು, ಗೊಡ್ಡು ಹಸು, ಹೋರಿ, ಎಮ್ಮೆ, ಕೋಣ, ಒಂಟೆಗಳನ್ನು ಮಾರಾಟ ಮಾಡಲು ವಿಧಿವಿಧಾನಗಳನ್ನು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಕೇಂದ್ರ ಸರಕಾರವು ‘ಗೋ ಹತ್ಯಾ ನಿಷೇಧ’ ಎಂಬ ದೇಶದ ಜನಪ್ರಿಯ ಕಾನೂನೊಂದನ್ನು ರೂಪಿಸಲು ನಡೆಸುತ್ತಿರುವ ತಯಾರಿ ಎಂದು ಕೆಲವರು ಬಣ್ಣಿಸಿದ್ದಾರೆ.

ಹೀಗಿರುವಾಗಲೇ, ಗೋ ರಾಜಕಾರಣದ ಆಯಾಮಗಳನ್ನು ಚರ್ಚೆಗೆ ತರಲಾಗುತ್ತಿದೆ. ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕದಲ್ಲಿಯೂ ಅಧಿಸೂಚನೆ ಕೊಂಚ ಹೆಚ್ಚೇ ಸದ್ದು ಮಾಡುತ್ತಿದೆ. ನಗರ ಪ್ರದೇಶಗಳಿಂದ ಹಿಡಿದು, ಹಳ್ಳಿಗಳಲ್ಲಿ ಇವತ್ತಿಗೂ ಹೈನುಗಾರಿಕೆ ರೂಪದಲ್ಲಿ, ಕೃಷಿ ಚಟುವಟಿಕೆಗಳ ಹಿನ್ನಲೆಯಲ್ಲಿ ದನ ಮತ್ತು ಎಮ್ಮೆಗಳನ್ನು ಸಾಕುವವರೂ ಕೇಂದ್ರ ಸರಕಾರ ‘ಗೋ ಹತ್ಯಾ ನಿಷೇಧ’ ಕಾನೂನನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತರಬೇಕು ಎಂದು ಹೇಳುತ್ತಿದ್ದಾರೆ. ವಿಪರ್ಯಾಸ ಎಂದರೆ, ರೈತಾಪಿ ವರ್ಗದ ಬಗ್ಗೆ ಚಿಂತಿಸುವ ವರ್ಗ, “ಕೇಂದ್ರ ಸರಕಾರದ ಈ ನಡೆ, ಮುಂದೊಂದು ದಿನ ದೇಶದಲ್ಲಿ ಕೃಷಿ ಬಿಕ್ಕಟ್ಟನ್ನು ಹುಟ್ಟುಹಾಕುತ್ತದೆ,” ಎಂದು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಅವರ ಕಾಳಜಿಗಳನ್ನು ಅನುಮಾನಿಸುವ ಕೆಲಸವೂ ನಡೆಯುತ್ತಿದೆ.

ಇದು ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ನಡೆದುಕೊಂಡು ಬಂದ ಹಲವು ಚರ್ಚೆಗಳು ಪುನರಾವರ್ತನೆಯಂತೆ ಕಾಣುತ್ತಿದೆ. ಆದರೆ, ಈ ಸಮಯದಲ್ಲಿ ಗಮನ ಸೆಳೆಯಬೇಕಿರುವುದು; ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ ಮತ್ತಿತರ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳು. ಬಲಪಂಥೀಯ ವಿಚಾರಧಾರೆಯನ್ನು ಪ್ರತಿನಿಧಿಸುವ ಬಿಜೆಪಿಯ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಮೂರು ವರ್ಷ ಪೂರೈಸಿದ ಸಮಯದಲ್ಲಿ ಉದ್ಯೋಗ ನೀಡುವ ಅವರ ಚುನಾವಣಾ ಸಮಯದ ಭರವಸೆ ಚರ್ಚೆಗೆ ಬರಬೇಕಿತ್ತು. ಆದರೆ ಅಂತಹದೊಂದು ಚರ್ಚೆ ಆರೋಗ್ಯಪೂರ್ಣವಾಗಿ ಬೆಳೆಯುವ ಮೊದಲೇ, ಗೋ ಹತ್ಯೆ ನಿಷೇಧ ವಿಚಾರ ಮುಖ್ಯ ಭೂಮಿಕೆಗೆ ಬಂದಿದೆ.

ಮೂರು ವರ್ಷಗಳಲ್ಲಿ ಅತ್ಯಂತ ಬಿಕ್ಕಟ್ಟಿನ ಸಮಯದಲ್ಲಿಯೇ ಹೀಗೆ ಸಾಂಸ್ಕೃತಿಕ ಹಕ್ಕಿನ ವಿಚಾರಗಳು ಚರ್ಚೆಗೆ ಬರುತ್ತಿರುವುದರ ಹಿಂದೆ ತನ್ನದೇ ಆದ ಸ್ವರೂಪವೊಂದು ಇದ್ದಂತೆ ಕಾಣಿಸುತ್ತಿದೆ. ಇದನ್ನು ‘ಪ್ಯಾಟರ್ನ್ಸ್’ ಎಂದು ಕರೆಯಬಹುದು. ಅವುಗಳನ್ನು ಬಿಡಿಸಲು ಇನ್ನಷ್ಟು ಸಮಯ ಬೇಕಾಗಲೂಬಹುದು. ಸದ್ಯ, ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಇಲಾಖೆಯು ಪಶು ಹಿಂಸಾ ನಿಯಂತ್ರಣ (ಪಶು ಮಾರುಕಟ್ಟೆ ನಿಯಂತ್ರಣ) ನಿಯಮಗಳು- 2017ನ್ನು ಅಧಿಸೂಚನೆ ಮೂಲಕ ಪ್ರಕಟಿಸಿದೆ.

ಕೇಂದ್ರ ಸರಕಾರದ ಇಲಾಖೆಯ ಅಧಿಸೂಚನೆ.

ಕೇಂದ್ರ ಸರಕಾರದ ಇಲಾಖೆಯ ಅಧಿಸೂಚನೆ.

ಅಧಿಸೂಚನೆಯಲ್ಲೇನಿದೆ?:

ಕೇಂದ್ರದ ಇಲಾಖೆಯೊಂದರ ಅಧಿಸೂಚನೆಯ ಮುಖ್ಯಾಂಶಗಳೇನು ಎಂಬುದನ್ನು ಸುರೇಶ್ ಖಂಜಾರ್ಪಣೆ ಎಂಬ ಸ್ವತಂತ್ರ ಅಧ್ಯಯನಕಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕೆಳಕಂಡಂತೆ ವಿವರಿಸಿದ್ದಾರೆ: 

 ಪ್ರತೀ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ, ಮುಖ್ಯ ಪಶು ವೈದ್ಯ ಅಧಿಕಾರಿ, ಅರಣ್ಯ ಅಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಪ್ರಾಣಿ ಹಿಂಸಾ ಪ್ರತಿಬಂಧನ ಸಂಘದ ಪ್ರತಿನಿಧಿ, ಪ್ರಾಣಿ ಕಲ್ಯಾಣ ಸಂಘಗಳ ಇಬ್ಬರು ಪ್ರತಿನಿಧಿಗಳು ನೇತೃತ್ವದಲ್ಲಿ ಸಮಿತಿ ರಚನೆ. ಇದಕ್ಕೆ ‘ಕೋರಂ’ ಎಂದು ಹೆಸರು. 

 ಸ್ಥಳೀಯವಾಗಿ ಅಗತ್ಯವಿರುವ ಕಡೆ ಪಶು ಮಾರುಕಟ್ಟೆ ಸಮಿತಿ ರಚನೆ ಕಡ್ಡಾಯ. ಈ ಸಮಿತಿಗೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕಾರ್ಯದರ್ಶಿಯಾಗಿರುತ್ತಾರೆ. ಸ್ಥಳೀಯ ಮಟ್ಟದ ಅಧಿಕಾರಿಗಳ ಹಾಗೂ ಸ್ವಯಂ ಸೇವಕ ಸದಸ್ಯತ್ವದೊಂದಿಗೆ ಒಂದು ಕೋರಂ. 

 ಎಲ್ಲಾ ಜಾನುವಾರುಗಳನ್ನು ಈ ಮಾರುಕಟ್ಟೆಗೇ ತರಬೇಕು. ತಂದಾಗ ಆ ಪ್ರಾಣಿಯನ್ನು ಪರೀಕ್ಷಿಸಿ ಅದಕ್ಕೆ ಸರ್ಟಿಫಿಕೇಟ್ ನೀಡಬೇಕು. ಹಾಗೇ ವಾಹನಕ್ಕೆ ಲೋಡ್ ಮಾಡುವಾಗಲು ಉಸ್ತುವಾರಿ ಮಾಡಬೇಕು. ಒಂಟೆಗಳಿಗೆ ಲೋಡ್‌ನಿಂದ ಮುಕ್ತಿ. 

 ಕೊಂಬು ನಯಗೊಳಿಸಿ ಬಣ್ಣ ಹಚ್ಚುವುದು, ಕರು ಹಾಲು ಕುಡಿಯದಂತೆ ಏನನ್ನಾದರೂ ಕೆಚ್ಚಲಿಗೆ ಕಟ್ಟುವುದು, ಹಾಲು ಕುಡಿಯದಂತೆ ಕರುವಿನ ಬಾಯಿಗೆ ಮುಚ್ಚಿಕೆ/ ಚೀಲಕಟ್ಟುವುದು, ಅಲಂಕಾರದ ಆಭರಣಗಳನ್ನು ತೊಡಿಸುವುದು,ಆಕ್ಸಿಟಾಸಿನ್ ಬಳಕೆ, ಸ್ಥಳಿಯವಾಗಿ ಹಿಡ ಮಾಡಿಸುವುದು, ಮೇವು ತುಂಬಿದ ಚೀಲಗಳನ್ನು ಬಾಯಿಗೆ ತೊಡಿಸುವುದು ಇತ್ಯಾದಿ ಸಂಪೂರ್ಣವಾಗಿ ನಿಷೇಧ. 

 ಮಾರುಕಟ್ಟೆಯಲ್ಲಿ ಪ್ರಾಣಿಯನ್ನು, ಬಾಲ, ಕಾಲು, ಕತ್ತು, ಕೊಂಬು, ರೆಕ್ಕೆ ಹಿಡಿದು ನಿರ್ವಹಿಸುವಂತಿಲ್ಲ. ಕೋಳಿಗಳನ್ನು ತಲೆಕೆಳಗಾಗಿ ಒಯ್ಯುವಂತಿಲ್ಲ. 

 ಆಯಾ ಜಾತಿಯ ಪ್ರಾಣಿಗಳಿಗೆ ಪ್ರತ್ಯೇಕ ಕೊಟ್ಟಿಗೆ ಇರಬೇಕು..( ದನ, ಹಂದಿ, ಕೋಳಿ ಇತ್ಯಾದಿ)

 ಒಟ್ಟಿಗೆ ಸಾಕಿದ ಮಂದೆಯದ್ದಾದರೆ, ಹೋರಿಗಳಿದ್ದರೆ ಕಟ್ಟಿ ಹಾಕದೇ ಹಸುಗಳೊಂದಿಗೇ ಬಿಡಬಹುದು. ಇಲ್ಲವಾದರೆ ಹಗ್ಗ ಕಟ್ಟಿ ಬಿಡಬೇಕು. ಒಂದು ಗುಂಪಿನ ಪಶುಗಳನ್ನು ಇನ್ನೊಂದು ಗುಂಪಿನ ಪಶುಗಳೊಂದಿಗೆ ಕಟ್ಟಬಾರದು. 

 ಪಶುವಿನ ಮಾಲೀಕನು ಪಶುವಿಗೆ ಬೇಕಾದ ಮೇವು, ಹಿಂಡಿ, ನೀರು ವ್ಯವಸ್ಥೆ ಮಾಡಬೇಕು, ಪ್ರತಿ ದಿನ ಆರು ಗಂಟೆಗೊಮ್ಮೆ ಪಶು ಈ ಮಾರುಕಟ್ಟೆಯಲ್ಲಿರುವಷ್ಟು ದಿನ ಆತ ಆಹಾರ ನೀರು ಕೊಡಬೇಕು. ಸಮಿತಿಯ ಕಾರ್ಯದರ್ಶಿಯು ಪ್ರಾಣಿಗಳಿಗೆ ಅವಶ್ಯವಿರುವ ಕಡೆ ಬೆಡ್ಡಿಂಗ್ ವ್ಯವಸ್ಥೆ ಮಾಡಬೇಕು. ಪಶು ಮಾರುಕಟ್ಟೆಗೆ ಪಶು/ಪ್ರಾಣಿಯನ್ನು ತರುವವನು ತನ್ನ ಮಾಲೀಕತ್ವದ ಪುರಾವೆ ನೀಡಬೇಕು. ತನ್ನ ಗುರುತಿನ ಚೀಟಿ ನೀಡಬೇಕು. ಪ್ರಾಣಿಯ ಗುರುತಿನ ವಿವರ ನೀಡಬೇಕು. ಕಸಾಯಿಖಾನೆಗೆ ಮಾರಲು ತಂದಿಲ್ಲ ಎಂದು ಹೇಳಿಕೆ ನೀಡಬೇಕು.

ಜಾನುವಾರು ಮಾರಾಟಕ್ಕೂ ಮುನ್ನ…

 ಪಶು ಮತ್ತು ಮನುಷ್ಯರಿಗಾದ ವೆಚ್ಚವನ್ನು ವಸೂಲು ಮಾಡಬೇಕು.

 ಕೃಷಿಗೆ ಮಾತ್ರಾ ಕಸಾಯಿಖಾನೆಗಲ್ಲ ಎಂಬ ಹೇಳಿಕೆ ತೆಗೆದುಕೊಳ್ಳಬೇಕು.

 ಕೊಂಡವನ ವಿವರಗಳನ್ನು ಪಡೆದು ದಾಖಲಿಸಬೇಕು.

 ಕೊಂಡವನು ಕೃಷಿಕನೇ ಎಂಬುದನ್ನು ದಾಖಲೆ ಸಮೇತ ಖಚಿತಪಡಿಸಿಕೊಳ್ಳಬೇಕು.

 ಆರು ತಿಂಗಳವರೆಗೆ ಕೊಂಡ ಪಶುವನ್ನು ಮರು ಮಾರಾಟ ಮಾಡುವುದಿಲ್ಲ ಎಂಬ ಹೇಳಿಕೆ ಬರೆಸಿಕೊಳ್ಳಬೇಕು. ಆರು ತಿಂಗಳವರೆಗೆ ಆತ ಈ ರಶೀದಿ ಇಟ್ಟುಕೊಳ್ಳಬೇಕು.

 ಇನ್ಸ್ಪೆಕ್ಟರ್ ಈ ಅವಧಿಯಲ್ಲಿ ಪರಿಶೀಲನೆ/ತನಿಖೆ ಮಾಡುವಾಗ ಅದನ್ನು ತೋರಿಸಬೇಕು.

 ಈ ಮಾರಾಟದ ಐದು ಪ್ರತಿ ಮಾಡಿ, ಕೊಂಡವನು, ಮಾರಿದವನು, ತಹಶೀಲ್ದಾರ ಕಚೇರಿ, ಪಶುವೈದ್ಯವರಿಗೆ ನೀಡಿ ಒಂದು ಪ್ರತಿಯನ್ನು ಸಮಿತಿಯು ರಕ್ಷಿಸಿಡಬೇಕು.

 ಈ ಪಶುಗಳ ಸಾಕಣೆ, ಶುಶ್ರೂಷೆಗೆ ತಗಲುವ ವೆಚ್ಚವನ್ನು ಪಶು ಮಾಲೀಕನಿಂದಲೇ ವಸೂಲು ಮಾಡಬೇಕು.

ಸುಮಾರು 20 ವರ್ಷಗಳ ಹಿಂದೆ ಹೈನುಗಾರಿಕೆ ಮಾಡುತ್ತಿದ್ದವರು ಸುರೇಶ್. ಸದ್ಯ ಸ್ವತಂತ್ರ ಸಂಶೋಧಕರಾಗಿ ಕೃಷಿ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ‘ಸಮಾಚಾರ’ ಜತೆ ಶನಿವಾರ ಮಾತನಾಡಿದ ಅವರು, “ಪಶುಸಂಗೋಪನಾ ಇಲಾಖೆಯಲ್ಲಿ ಶೇ. 40ರಷ್ಟು ಹುದ್ದೆಗಳು ಖಾಲಿ ಬಿದ್ದಿವೆ. ಜನರಿಗೆ ಹೈನುಗಾರಿಕೆ ಮಾಡುವುದೇ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಅವರ ಮೇಲೆಯೇ ಜಾನುವಾರುಗಳ ಮಾರಾಟದ ಭಾರವನ್ನೂ ಹಾಕಿದರೆ ಕಷ್ಟವಾಗುತ್ತದೆ. ಹಸುಗಳ ಮೇಲೆ ಸಾಕುವವರಿಗೆ ಎಷ್ಟೇ ಪ್ರೇಮ ಇದ್ದರೂ, ಕೊನೆಯ ಹಂತದಲ್ಲಿ ಅವು ಭಾರ ಅನ್ನಿಸುತ್ತವೆ. ಹೀಗಾಗಿಯೇ ಅವುಗಳನ್ನು ಮಾರುವ, ಅದರ ಚರ್ಮ ಮತ್ತಿತರ ಅಂಗಗಳ ಮೂಲಕ ಉತ್ಪನ್ನಗಳನ್ನು ತಯಾರಿಸಿಕೊಂಡೇ ಮನುಷ್ಯ ನಾಗರಿಕತೆ ಬೆಳೆದು ಬಂದಿದೆ. ಹೀಗಾಗಿಯೇ ಎಲ್ಲವನ್ನೂ ಕೊಡುವ ಕಾಮಧೇನು ಅಂತ ಹಸುಗಳನ್ನು ಕರೆಯಲಾಗುತ್ತಿದೆ. ಇದೀಗ ಕೇಂದ್ರ ಸರಕಾರ ಅಧಿಸೂಚನೆ ಮೂಲಕ ಪಶು ಸಾಕಣೆ ಮತ್ತು ಹಸ್ತಾಂತರ ಭಾರವನ್ನು ರೈತರ ಮೇಲೆ ಹಾಕುತ್ತಿದೆ,” ಎಂದರು.

ಪಶು ಸಾಕುವವರು ಏನಂತಾರೆ?: 

ದಕ್ಷಿಣ ಕನ್ನಡದ ಜೈನ್ ಸಮುದಾಯದ, ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ಮಹಿಳೆ ತಮ್ಮ ಕೊಟ್ಟಿಗೆಯಲ್ಲಿ, ಹಾಲು ಕರೆಯುವ ಯಂತ್ರವನ್ನು ವೀಕ್ಷಿಸುತ್ತಿರುವುದು. ಇದರ ಅಭಿಪ್ರಾಯ ಕೂಡ ವರದಿಯ ಮುಂದಿನ ಪ್ಯಾರಾದಲ್ಲಿದೆ. (ಚಿತ್ರ: ಸಮಾಚಾರ)

ದಕ್ಷಿಣ ಕನ್ನಡದ ಜೈನ್ ಸಮುದಾಯದ, ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ಮಹಿಳೆ ತಮ್ಮ ಕೊಟ್ಟಿಗೆಯಲ್ಲಿ, ಹಾಲು ಕರೆಯುವ ಯಂತ್ರವನ್ನು ವೀಕ್ಷಿಸುತ್ತಿರುವುದು. ಇವರ ಅಭಿಪ್ರಾಯ ಕೂಡ ವರದಿಯ ಮುಂದಿನ ಪ್ಯಾರಾದಲ್ಲಿದೆ. (ಚಿತ್ರ: ಸಮಾಚಾರ)

ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಇವತ್ತಿಗೂ ಹಳ್ಳಿಗಳಲ್ಲಿ ಪಶು ಸಾಕಣೆ ಮಾಡುವವರನ್ನು ದೂರವಾಣಿ ಮೂಲಕ ಸಂಪರ್ಕಿಸಿತು. ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣ ಕನ್ನಡದವರೆಗೆ ನಾನಾ ರೀತಿಯ ರೈತರು ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಮುಂದಿಟ್ಟರು. ಅವರಲ್ಲಿ ಬಹುತೇಕರಿಗೆ ಕೇಂದ್ರ ಸರಕಾರದ ಹೊಸ ಅಧಿಸೂಚನೆ ಕುರಿತು ಮಾಹಿತಿ ಇಲ್ಲದಿದ್ದರೂ, ಗೋ ಹತ್ಯೆ ವಿಚಾರದಲ್ಲಿ ಸಹಮತವನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರು ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಪರವಾಗಿ ಕೆಲಸವನ್ನೂ ಮಾಡುತ್ತಿದ್ದಾರೆ. ನಾನಾ ಭಿನ್ನ ಅಭಿಪ್ರಾಯಗಳ ನಡುವೆಯೇ ಅವರೆಲ್ಲವೂ ಪಶು ಸಂಗೋಪನೆಗೆ ಸರಕಾರದ ಅನುದಾನ ಹೆಚ್ಚಳವಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಜತೆಗೆ, ಪಶು ಸಂಗೋಪನೆ ಹಿನ್ನೆಲೆಯಲ್ಲಿ ಕರ್ನಾಟಕದ ನಾನಾ ರಾಜ್ಯ ಸರಕಾರಗಳು ನೀಡುತ್ತ ಬಂದ ಪ್ರೋತ್ಸಾಹ ಧನವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ.

“ಬಡವರಿಗೆ, ಹಸಿದವರಿಗೆ ಕಡಿಮೆ ದುಡ್ಡಿನಲ್ಲಿ ಅಕ್ಕಿ ನೀಡುವುದು ರಾಜ್ಯ ಸರಕಾರದ ಯೋಜನೆ. ಇದು ಅಗತ್ಯವಾಗಿ ಸರಕಾರ ಮಾಡಬೇಕಾದ ಕೆಲಸ. ಆದರೆ ಜಾನುವಾರುಗಳ ವಿಚಾರಕ್ಕೆ ಬಂದರೆ ಇದೇ ಮಟ್ಟದ ಕಾಳಜಿ ಕಾಣಿಸುವುದಿಲ್ಲ,” ಎನ್ನುತ್ತಾರೆ ತೀರ್ಥಹಳ್ಳಿ ಮೂಲದ ರೈತ ಎಚ್‌. ಜಿ. ದಯಾನಂದ್. ಹಿಂದೆ ಮೈಸೂರು ಮಿನರಲ್ಸ್ ಲಿ.,ನಲ್ಲಿ ಅವರು ಲೋಹಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಒಂದು ಹಂತದಲ್ಲಿ ಸರಕಾರಿ ಸ್ವಾಮ್ಯದ ಕಂಪನಿಯಿಂದ ಸ್ವಯಂ ಪ್ರೇರಣೆಯಿಂದ ನಿವೃತ್ತಿ ಪಡೆದು ಈಗ ಹಳ್ಳಿಯಲ್ಲಿ ಮಧ್ಯಮ ವರ್ಗದ ರೈತರಾಗಿದ್ದಾರೆ.

ಅವರ ಮನೆಯಲ್ಲಿ ಹತ್ತಕ್ಕೂ ಹೆಚ್ಚು ಜಾನುವಾರುಗಳಿವೆ. ವಾರಕ್ಕೆ ಒಂದು ಮೂಟೆ ಹಿಂಡಿ (ಹಸುಗಳಿಗೆ ನೀಡುವ ಪೌಷ್ಠಿಕ ಆಹಾರ) ಖರ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಮೂಟೆ (ಸುಮಾರು 50 ಕೆಜಿ) ಗೆ 1600 ರೂಪಾಯಿವರೆಗೆ ಇದೆ. “ಅನ್ನಭಾಗ್ಯದ ಮಾದರಿಯಲ್ಲಿಯೇ ಹಿಂಡಿ ಕೊಳ್ಳಲು ರೈತರಿಗೆ ಸರಕಾರ ನೆರವು ನೀಡಬೇಕು,” ಎಂದವರು ಒತ್ತಾಯಿಸುತ್ತಾರೆ. “ಹುಲ್ಲಿನ ಬೀಜಗಳನ್ನು ಸರಕಾರ ಬೇಸಿಗೆ ಸಮಯದಲ್ಲಿ ಕೊಡಲು ಮುಂದಾಗುತ್ತದೆ. ಮಳೆಗಾಲಕ್ಕೆ ಮುನ್ನ ರೈತರಿಗೆ ಸಿಗುವಂತೆ ನೋಡಿಕೊಳ್ಳಬೇಕಿದೆ,” ಎಂಬ ಸಲಹೆಯನ್ನೂ ಅವರು ಮುಂದಿಡುತ್ತಾರೆ. ಹೀಗಾದರೆ, ಮುದಿ, ಗೊಡ್ಡು ಜಾನುವಾರುಗಳನ್ನು ಸಾಕುವುದು ಕಷ್ಟವೇನಲ್ಲ ಎಂದು ಸ್ವಂತ ಅನುಭವದಿಂದ ಅವರು ವಿವರಿಸುತ್ತಾರೆ.

ಸರಕಾರದ ಕಡೆಯಿಂದ:

ಪಶು ಸಂಗೋಪನೆ ಇಲಾಖೆ ಅಧಿಕಾರಿ ಆರ್. ಕೆ. ಚೆಲುವಯ್ಯ.

ಪಶು ಸಂಗೋಪನೆ ಇಲಾಖೆ ಅಧಿಕಾರಿ ಆರ್. ಕೆ. ಚೆಲುವಯ್ಯ.

ಕರ್ನಾಟಕ ರಾಜ್ಯ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಕೇಂದ್ರ ಸರಕಾರದ ಅಧಿಸೂಚನೆ “ಯಾವುದೇ ಹೊಸ ವಿಚಾರಗಳನ್ನು ಒಳಗೊಂಡಿಲ್ಲ. 1964ರಲ್ಲಿ ರಾಜ್ಯದಲ್ಲಿ ಗೋ ಹತ್ಯೆ ಬಗ್ಗೆ ಇರುವ ಕಾನೂನಿನಲ್ಲಿಯೇ ಈ ಎಲ್ಲಾ ಅಂಶಗಳಿವೆ. ಆದರೆ ಅವು ಅನುಷ್ಠಾನಕ್ಕೆ ಬರುತ್ತಿಲ್ಲ ಅಷ್ಟೆ,” ಎನ್ನುತ್ತಾರೆ. ‘ಸಮಾಚಾರ’ ಜತೆ ಮಾತನಾಡಿದ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಅಪರ) ಆರ್‌. ಕೆ. ಚೆಲುವಯ್ಯ, “ನಮಗಿನ್ನೂ ಅಧಿಕೃತವಾಗಿ ಅಧಿಸೂಚನೆ ಸಿಕ್ಕಿಲ್ಲ. ಪತ್ರಿಕೆಗಳಲ್ಲಿ ಬಂದ ನಂತರ ಗೊತ್ತಾಗಿದ್ದು. ಈ ಕುರಿತು ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು. ಎಪಿಎಂಸಿಗಳ ಹೊಣೆಗಾರಿಕೆ ಹೆಚ್ಚಿದೆ ಎನ್ನಿಸುತ್ತದೆ,” ಎಂದರು.

2017-18ನೇ ರಾಜ್ಯ ಬಜೆಟ್‌ನಲ್ಲಿ ಪಶುಸಂಗೋಪನಾ ಇಲಾಖೆಗೆ ಸುಮಾರು 2245 ಕೋಟಿ ರೂಪಾಯಿ ಅಂದಾಜು ಮಾಡಲಾಗಿದೆ. ಇದರಲ್ಲಿ 1300 ಕೋಟಿಯಷ್ಟು ಹಣವನ್ನು ಹಾಲಿನ ಉತ್ಪನ್ನಗಳಿಗೆ, 900 ಕೋಟಿ ವಿಶ್ವವಿದ್ಯಾನಿಲಯ, ನಿಗಮ- ಮಂಡಳಿಗಳು, ಮಾಸಿಕ ಸಂಬಳ ಮತ್ತಿತರೆ ಆಡಳಿತಾತ್ಮಕ ವೆಚ್ಚಗಳಿಗೆ ಬಳಕೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದೇ ಇಲಾಖೆ ಅಡಿಯಲ್ಲಿ, ಹೈನುಗಾರಿಕೆ ಮಾಡುವವರಿಗೆ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನವನ್ನು ನೀಡುವ ಕೆಲಸವಾಗುತ್ತಿದೆ.

ಗಂಡು ಕರು ಸಮಸ್ಯೆ:

“ದಿನಕ್ಕೆ ನೂರು ಲೀಟರ್ ಡೈರಿಗೆ ಹಾಕಿದರೆ 400 ರೂಪಾಯಿ ಸಿಗುತ್ತದೆ. ಇದು ನಮ್ಮ ನಿಜವಾದ ಉಳಿತಾಯ,” ಎನ್ನುತ್ತಾರೆ ಜೈನ್ ಸಮುದಾಯದ ಮಹಿಳೆಯೊಬ್ಬರು. ಕಳೆದ 12 ವರ್ಷಗಳ ಹಿಂದೆ ಹೈನುಗಾರಿಕೆಯನ್ನು ದಕ್ಷಿಣ ಕನ್ನಡದ ಮೂಡಬಿದ್ರೆ ತಾಲೂಕಿನ ತಮ್ಮ ಹಳ್ಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಶುರುಮಾಡಿದರು. ಸದ್ಯ 14 ಜಾನುವಾರುಗಳು ಅವರ ಕೊಟ್ಟಿಗೆಯಲ್ಲಿವೆ. “ನಾವು ನಮ್ಮ ಅಗತ್ಯಕ್ಕೆ ಶುರು ಮಾಡಿದ್ದು. ಇದರಲ್ಲಿ ತೃಪ್ತಿ ಇದೆ. ಪ್ರಚಾರ ಬೇಕಿಲ್ಲ. ದಯವಿಟ್ಟು ಹೆಸರು ಹಾಕಬೇಡಿ,” ಎಂದು ‘ಸಮಾಚಾರ’ ಅವರನ್ನು ಸಂಪರ್ಕಿಸಿದಾಗ ಕೇಳಿಕೊಂಡರು.

ಇವರ ಹೈನುಗಾರಿಕೆ ಆಚರಣೆಗೆ ಸಮಸ್ಯೆಯಾಗಿರುವುದು ಗಂಡು ಕರುಗಳು. ಕೊಟ್ಟಿಗೆಯಲ್ಲಿಯೇ ನಡೆಯುವ ಬಾಣಂತನದಲ್ಲಿ ಕರುಗಳು ಬೆಳೆದು ದೊಡ್ಡದಾಗುತ್ತವೆ. ಅವು ಉಪಯೋಗಕ್ಕೂ ಬರುವುದಿಲ್ಲ.  ಹೀಗಾಗಿ ಅವುಗಳ ಸಾಕಣೆ ಭಾರವನ್ನು ಹೊರಲಾರದೆ ಸಣ್ಣ ಪ್ರಮಾಣದ ಹೈನುಗಾರಿಕಾ ಉದ್ಯಮ ಮಾಡಿಕೊಂಡವರು ಗಂಡು ಕರುಗಳು ಹುಟ್ಟದಿರಲಿ ಎಂದು ಬೇಡಿಕೊಳ್ಳುತ್ತಾರೆ. ಒಂದು ವೇಳೆ ಗಂಡು ಕರು ಹುಟ್ಟಿದರೆ, ಹೊಟ್ಟೆ ಹುಳಕ್ಕೆ ಲಸಿಕೆ ಹಾಕದೆ ಸಾಯಲು ಬಿಡುತ್ತಾರೆ. “ನಾವಾದ್ರೂ ಏನು ಮಾಡಲು ಸಾಧ್ಯ. ಈಗ ನೋಡಿ ದನಗಳ ಮಾರಾಟಕ್ಕೂ ಕಡಿವಾಣ ಬೀಳುತ್ತೆ ಅಂತಿದಾರೆ. ಹಾಗಾದರೆ ಉಪಯೋಗಕ್ಕೆ ಬಾರದ ಗಂಡು ಕರುಗಳನ್ನು ದೊಡ್ಡ ಮಾಡುವುದು ಉಪಯೋಗವೂ ಇಲ್ಲ. ಹೀಗಾಗಿ ಕರುವಿದ್ದಾಗಲೇ ಹೊಟ್ಟೆ ಹುಳಗಳು ಅತಿರೇಕಕ್ಕೆ ಹೋಗಿ ಸಾಯಿಸಲು ಬಿಡುತ್ತೇವೆ,” ಎಂದರು ಮಹಿಳೆ.

ಮಲೆನಾಡಿನಲ್ಲಿ ಭತ್ತದ ಬೆಳೆ ನಾಟಿ ವೇಳೆ ಟಿಲ್ಲರ್ ಉಪಯೋಗಿಸುತ್ತಿರುವುದು (ಚಿತ್ರ: ಸಮಾಚಾರ)

ಮಲೆನಾಡಿನಲ್ಲಿ ಭತ್ತದ ಬೆಳೆ ನಾಟಿ ವೇಳೆ ಟಿಲ್ಲರ್ ಉಪಯೋಗಿಸುತ್ತಿರುವುದು. ಕೆಲವೇ ವರ್ಷಗಳ ಹಿಂದೆ ಎತ್ತುಗಳಿಂದ ಈ ಕೆಲಸ ನಡೆಯುತ್ತಿತ್ತು. (ಚಿತ್ರ: ಸಮಾಚಾರ)

ಗಂಡು ಕರುಗಳ ವಿಚಾರಕ್ಕೆ ಬಂದರೆ ಇದೇ ಮಾದರಿಯನ್ನು ಎಲ್ಲಾ ಕಡೆಯ ರೈತರು ಅನುಸರಿಸುತ್ತಾರೆ ಎಂದೇನಿಲ್ಲ. ದಕ್ಷಿಣ ಕನ್ನಡ ಮೂಲದ, ಸದ್ಯ ಮಲೆನಾಡಿನ ಕೊಪ್ಪ ತಾಲೂಕಿನ ಕುಗೆ ಎಂಬ ಹಳ್ಳಿಯಲ್ಲಿ ನೆಲೆ ನಿಂತಿರುವ ಜೈರಾಮ್ ಬಿಜೆಪಿಯ ಗೋ ಹತ್ಯಾ ನಿಷೇಧ ಯೋಚನೆಯನ್ನು ಬೆಂಬಲಿಸುತ್ತಾರೆ. ಅವರ ಕೊಟ್ಟಿಗೆಯಲ್ಲಿ 3 ಜರ್ಸಿ ಹಸುಗಳು ಸೇರಿದಂತೆ ಒಟ್ಟು 4 ಜಾನುವಾರುಗಳಿವೆ. “ನಮ್ಮಲ್ಲಿ ಗಂಡು ಕರುಗಳು ಹುಟ್ಟಿದರೆ, ಸ್ವಲ್ಪ ದೊಡ್ಡದಾದ ಮೇಲೆ ಬಯಲುಸೀಮೆ ಕಡೆಗೆ ಮಾರಿ ಬಿಡುತ್ತೇವೆ,” ಎಂದರು.

ಬಯಲುಸೀಮೆ ಎಂದು ಕರೆಯುವ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಮಲೆನಾಡಿನಿಂದ ಹೋರಿಗರುಗಳನ್ನು ಮಾರಲು ಕಾರಣವೂ ಇದೆ. ಮಲೆನಾಡಿನಲ್ಲಿ ಎತ್ತುಗಳನ್ನು ವಿಶೇಷವಾಗಿ ಭತ್ತದ ಕೃಷಿಗೆ ಬಳಸುತ್ತಿದ್ದರು. ಈಗ ಟಿಲ್ಲರ್ ಮತ್ತು ಟ್ರ್ಯಾಕ್ಟರಿಗಳಂತಹ ಯಂತ್ರಗಳು ಬಂದ ನಂತರ ಎತ್ತುಗಳ ಅಗತ್ಯವೂ ಬೀಳುತ್ತಿಲ್ಲ. ಇತ್ತೀಚಿಗೆ ಭತ್ತದ ಗದ್ದೆಗಳು ಅಡಿಕೆತೋಟಗಳಾಗಿ ಬದಲಾಗುತ್ತಿರುವುದು ಎತ್ತುಗಳ ಬಳಕೆಯ ಸಾಧ್ಯತೆಯನ್ನೇ ಕೊಂದು ಹಾಕಿದೆ.

ಬಯಲುಸೀಮೆಗೆ ಹೋದ ಹೋರಿಗರು ಕತೆ ಏನಾಗುತ್ತೆ? “ಬಹುತೇಕ ಹೋರಿ ಮರಿಗಳು ಸಾಯುತ್ತವೆ. ಇನ್ನು ಕೆಲಸವನ್ನು ವ್ಯವಸಾಯಕ್ಕೆ ಬಳಸುತ್ತಾರೆ. ನಮ್ಮ ಕಡೆಯಿಂದ ಅವುಗಳನ್ನು ಕಸಾಯಿಖಾನೆಗೆ ಕೊಡಲಿಲ್ಲ ಎಂಬುದಷ್ಟೆ ನೆಮ್ಮದಿ,” ಎನ್ನುತ್ತಾರೆ ಸುರೇಶ್.

ಮುದಿ ಹಸುಗಳನ್ನು ಕಳಿಸಿಕೊಡಿ:

ಕರ್ನಾಟಕದಲ್ಲಿ ಗೋವಿನ ಕುರಿತು ಚರ್ಚೆಗಳು ಬಂದಾಗಲೆಲ್ಲಾ ನೆನಪಾಗುವವರು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ. ಗೋ ರಕ್ಷಣೆ ವಿಚಾರದಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿರುವ ಹವ್ಯಕ ಮಠದ ಆವರಣದಲ್ಲಿಯೇ ಕೊಟ್ಟಿಗೆಯನ್ನು ಅವರು ನಿರ್ಮಿಸಿದ್ದಾರೆ. ಅತ್ಯಾಚಾರದಂತಹ ಗುರುತರ ಆರೋಪಕ್ಕೆ ಗುರಿಯಾದ ಅವರು ಕೇಂದ್ರ ಸರಕಾರದ ಅಧಿಸೂಚನೆಯನ್ನು ಸ್ವಾಗತಿಸಿದ್ದಾರೆ.

“ಕಟುಕರ ಕೇಂದ್ರಿತ ಮಾರುಕಟ್ಟೆಗೆ ಬ್ರೇಕ್ ಬಿದ್ದಿದೆ. ಕೇಂದ್ರ ಸರಕಾರ ನಿಯಮ ಮಾಡಿದೆ. ಗೋ ಹತ್ಯೆಯ ಬೇರನ್ನು ಕತ್ತರಿಸುವ ಕೆಲಸ ಇದು. ಇದು ಕಟ್ಟು ನಿಟ್ಟಾಗಿ ಜಾರಿಗೆ ಬರಬೇಕು. ಇಷ್ಟು ದಿನ ಕಾನೂನು ಬರಲಿ ಎಂದು ಕಾಯುತ್ತಿದ್ದೆವು. ಇನ್ನು ಮೇಲೆ ಅದರ ಅನುಷ್ಠಾನಕ್ಕೆ ನಾವು ಹೋರಾಟ ನಡೆಸುತ್ತೇವೆ,” ಎಂದು ಮಠದ ಕಡೆಯಿಂದ ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಅವರು ತಿಳಿಸಿದ್ದಾರೆ.

ಈ ವಿಡಿಯೋದ ಕೊನೆಯಲ್ಲಿ ಮಾತನಾಡಿದ ಅವರು, “ಗೋ ಹತ್ಯಾ ನಿಷೇಧದಿಂದ ರೈತರಿಗೆ, ದೇಶಕ್ಕೆ ಅಷ್ಟೆ ಅಲ್ಲ ವಿಶ್ವಕ್ಕೆ ಒಳ್ಳೆಯದಾಗುತ್ತದೆ. ಜಾಗತಿಕ ತಾಪಮಾನ ಕಡಿಮೆಯಾಗುತ್ತದೆ,” ಎನ್ನುತ್ತಾರೆ.

‘ಸಮಾಚಾರ’ ರಾಘವೇಶ್ವರ ಭಾರತಿ ಸ್ವಾಮಿ ಅವರ ಮಾಧ್ಯಮ ಕಾರ್ಯಾಲಯವನ್ನು ಸಂಪರ್ಕಿಸಿದಾಗ “ವಿಡಿಯೋ ಮಾತ್ರ ನೀಡಬಹುದು. ಮಾತನಾಡಲು ಸ್ವಾಮೀಜಿ ಬ್ಯುಸಿ ಇದ್ದಾರೆ,” ಎಂದು ತಿಳಿಸಿದರು. ಗೋ ಹತ್ಯಾ ನಿಷೇಧದಿಂದ ಜಾಗತಿಕ ತಾಪಮಾನ ಕಡಿಮೆಯಾಗುತ್ತದೆ ಎಂಬುದಕ್ಕೆ ಆಧಾರ ಏನಿತ್ತು? ಎಂಬ ಪ್ರಶ್ನೆಗೆ, ಐಎಎನ್‌ಎಸ್ ಸುದ್ದಿ ಸಂಸ್ಥೆಯ ಮಾಹಿತಿ ಆಧಾರವಾಗಿಟ್ಟುಕೊಂಡು ‘ಪೈನಾನ್ಸಿಯಲ್ ಟೈಮ್ಸ್’ ಪತ್ರಿಕೆಯ ವರದಿಯೊಂದರ ಲಿಂಕ್‌ ಹಂಚಿಕೊಂಡರು. (ವರದಿ ಇಲ್ಲಿದೆ.)

ಹೀಗೆ, ನಾಲ್ಕು ದಿನಗಳ ಹಿಂದೆ ಹೊರಬಿದ್ದ ಕೇಂದ್ರ ಸರಕಾರದ ಅಧಿಸೂಚನೆ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇ ವೇಳೆ, ಅಧಿಸೂಚನೆಯಲ್ಲಿರುವ ಕಾನೂನಿನ ನ್ಯೂನತೆಗಳ ಬಗ್ಗೆಯೂ ವಿಶ್ಲೇಷಣೆಯೊಂದರನ್ನು ‘ಲೈವ್ ಲಾ’ ಸುದ್ದಿ ತಾಣ ಪ್ರಕಟಿಸಿದೆ.

ಇವೆಲ್ಲಾ ಏನೇ ಇರಲಿ, ಗೋ ಹತ್ಯೆ ಪೂರ್ಣ ಪ್ರಮಾಣದಲ್ಲಿ ನಿಷೇಧಗೊಂಡ ನಿಯಮ ಜಾರಿಗೆ ಬರುವ ಮುನ್ನ ಕೃಷಿ ಹಿನ್ನೆಲೆಯಲ್ಲಿ ಹೈನುಗಾರಿಕೆಯನ್ನು ನೆಚ್ಚಿಕೊಂಡರ ಸಲಹೆ ಮತ್ತು ತಕರಾರುಗಳನ್ನು ಕೇಂದ್ರ ಸರಕಾರ ಕೇಳಿಕೊಳ್ಳಬೇಕಿದೆ. ಅದೇ ಹೊತ್ತಿಗೆ ಕರ್ನಾಟಕ ರಾಜ್ಯ ಸರಕಾರ ಜಾನುವಾರು ಸಾಕಣೆದಾರರಿಗೆ ನೆರವು ನೀಡಬೇಕಿದೆ. ಇಲ್ಲವಾದರೆ,  ಗೊತ್ತಿದ್ದೋ ಗೊತ್ತಿಲ್ಲದೆಯೋ ಕೃಷಿ ಕ್ಷೇತ್ರದಲ್ಲಿ ಗೋ ಹತ್ಯಾ ನಿಷೇಧ ದೊಡ್ಡ ಬಿಕ್ಕಟ್ಟನ್ನು ಶಾಶ್ವತವಾಗಿ ಮೂಡಿಸಿಬಿಡುವ ಅಪಾಯ ಇದೆ.

Leave a comment

FOOT PRINT

Top