An unconventional News Portal.

ರಂಜಾನ್‌ಗೆ ಮಸೀದಿ ಉಡುಗೊರೆ: ಪಂಜಾಬ್‌ನ ಪುಟ್ಟ ಗ್ರಾಮದಲ್ಲೊಂದು ಮಾದರಿ ಬೆಳವಣಿಗೆ

ರಂಜಾನ್‌ಗೆ ಮಸೀದಿ ಉಡುಗೊರೆ: ಪಂಜಾಬ್‌ನ ಪುಟ್ಟ ಗ್ರಾಮದಲ್ಲೊಂದು ಮಾದರಿ ಬೆಳವಣಿಗೆ

ಸರಣಿ ಕೋಮು ಸಂಘರ್ಷದ ಘಟನೆಗಳ ನಡುವೆ ನೆಮ್ಮದಿಯ ನಿಟ್ಟುಸಿರು ಬಿಡುವ ಸುದ್ದಿಯೊಂದು ಹೊರಬಿದ್ದಿದೆ. 

ಪಂಜಾಬಿನ ಗ್ರಾಮವೊಂದರಲ್ಲಿ ಹಿಂದೂ ಮತ್ತು ಸಿಖ್ಖ್ ಸಮುದಾಯದವರು ಒಟ್ಟಾಗಿ ರಂಜಾನ್ ಹಬ್ಬಕ್ಕೂ ಮುನ್ನ ಮಸೀದಿಯೊಂದನ್ನು ಮುಸ್ಲಿಂ ಸಮುದಾಯಕ್ಕಾಗಿ ಕಟ್ಟಿಕೊಟ್ಟ ಕಥೆ ಇದುಇಂಥಹದ್ದೊಂದು ಅಪರೂಪದ ಪ್ರಸಂಗ ನಡೆದಿದ್ದು ಪಂಜಾಬಿನ ಗಾಲಿಬ್ ರಣ್ ಸಿಂಗ್ ವಾಲ್ ಗ್ರಾಮದಲ್ಲಿ. ಲೂಧಿಯಾನ ಪ್ರದೇಶಕ್ಕೆ ಸೇರಿದ ಪುಟ್ಟ ಗ್ರಾಮವಿದು. ಸುಮಾರು 1300 ಜನ ಈ ಗ್ರಾಮದಲ್ಲಿದ್ದಾರೆ. ಇಲ್ಲಿ ಹಿಂದೂಗಳು ಮತ್ತು ಸಿಖ್ಖರೇ ಬಹು ಸಂಖ್ಯಾತರು. ಸುಮಾರು 750 ಜನ ಸಿಖ್ಖರಾದರೆ, ಹಿಂದೂಗಳ ಜನಸಂಖ್ಯೆ ಸುಮಾರು 200.

ಉಳಿದವರಲ್ಲಿ ಸಣ್ಣ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರಿದ್ದಾರೆ. ಅಂದಾಜು 150 ಜನ. ಅವರೆಲ್ಲಾ ಭಾರತ ಪಾಕಿಸ್ತಾನ ಗಡಿ ವಿಭಜನೆ ಆದ ನಂತರ ಗ್ರಾಮದಲ್ಲಿ ನೆಲೆನಿಂತವರು. ಈ ಮುಸ್ಲಿಂ ಸಮುದಾಯದವರಿಗೊಂದು ಕೊರತೆ; ಅವರಿಗೆ ಗ್ರಾಮದಲ್ಲಿ ಸ್ವಂತ ಮಸೀದಿ ಇರಲಿಲ್ಲ. ಅದನ್ನು ಕಟ್ಟುವಷ್ಟು ಸ್ಥಿತಿವಂತರೂ ಅವರಲ್ಲ. ರಂಜಾನ್ ಬಂತೆಂದರೆ ಸಂಜೆ ಹೊತ್ತು ಪಕ್ಕದ ಗ್ರಾಮದ ಮಸೀದಿಗೆ ತೆರಳಬೇಕಾಗಿತ್ತು. ಮಾರು ದೂರದ ಮಸೀದಿ ಅದು. ಹೋಗಿ ಕತ್ತಲೆಯಲ್ಲೇ ಮರಳಿ ಬರಬೇಕು. ದುರ್ಗಮ ಹಾದಿ ಬೇರೆ.

ತಮ್ಮ ಗ್ರಾಮದ ಜನ ಧರ್ಮವನ್ನು ಆಚರಿಸಲು ಇಷ್ಟೊಂದು ಕಷ್ಟ ಪಡುವುದನ್ನು ಅಲ್ಲಿನವರಿಗೆ ನೋಡಲಾಗಲಿಲ್ಲ. ಹಿಂದೂ ಮತ್ತು ಸಿಖ್ಖ್ ಧರ್ಮೀಯರು ಒಂದಾದರು. ಈ ಮುಸ್ಲಿಂ ಸಮುದಾಯದ ಕಷ್ಟಕ್ಕೆ ಪರಿಹಾರ ಹುಡುಕಿದರು. ತಮ್ಮ ಗ್ರಾಮದಲ್ಲೇ ಮಸೀದಿ ಸ್ಥಾಪಿಸಿದರೆ ಹೇಗೆ ಎಂಬ ಆಲೋಚನೆ ಅವರ ತಲೆಯಲ್ಲಿ ಮೊಳಕೆಯೊಡೆಯಿತು.

ತಲೆಯಲ್ಲಿ ಹೊಳೆದ ಆಲೋಚನೆಯನ್ನು ಕೃತಿ ರೂಪಕ್ಕಿಳಿಸಿದರು. ಅಲ್ಲೊಂದು ಸುಂದರ ಮಸೀದಿ ತಲೆ ಎತ್ತಿಯೇ ಬಿಟ್ಟಿತು. ರಂಜಾನ್ಗೂ ಕೆಲವು ತಿಂಗಳ ಮೊದಲು ಮಸೀದಿ ಉದ್ಘಾಟನೆಯೂ ಆಯಿತು. ಮೂರು ಧರ್ಮದವರು ಸೇರಿ ಮಸೀದಿ ಆರಂಭವನ್ನು ವಿಜೃಂಭಣೆಯಿಂದ ಆಚರಿಸಿದರು. ಧರ್ಮ ಯಾವುದಾದರೇನು ಸಂಭ್ರಮಿಸಲು ಎಂಬಂತಿತ್ತು ಸಮಾರಂಭ. 

ಹಾಗೆ ನೋಡಿದರೆ ಈ ಮಸೀದಿ ನಿರ್ಮಾಣಕ್ಕೆ 1998ರಲ್ಲೇ ಅಡಿಗಲ್ಲು ಹಾಕಲಾಗಿತ್ತು. ಆದರೆ ಸ್ಥಳೀಯ ಮುಸ್ಲಿಂ ಸಮುದಾಯದವರಿಗೆ ಹಣ ಹೊಂದಿಸಲಾಗದೆ ಮಸೀದಿ ಕೆಲಸ ಅರ್ಧಕ್ಕೆ ನಿಂತಿತ್ತು. ಕೊನೆಗೆ ಸ್ಥಳೀಯ ಹಿಂದೂ ಹಾಗೂ ಸಿಖ್ಖರು ಕೈಜೋಡಿಸಿ ಧನ ಸಹಾಯ ನೀಡಿದ್ದರಿಂದ ಇದೀಗ ಒಂದು ವರ್ಷದ ಕೆಳಗೆ ಮಸೀದಿ ಕೆಲಸ ಆರಂಭವಾಗಿ ನಿರ್ಮಾಣವೂ ಮುಗಿದಿದೆ.

ಮಸೀದಿ ನಿರ್ಮಾಣ ಸ್ಥಳೀಯ ಮುಸ್ಲಿಂ ಸಮುದಾಯದವರನ್ನು ಸಂಭ್ರಮದಲ್ಲಿ ತೇಲುವಂತೆ ಮಾಡಿದೆ. “ನಮ್ಮ ಬಹುಕಾಲದ ಬೇಡಿಕೆ ಕೊನೆಗೊಂಡಿದೆ. ಈದ್ ಹಬ್ಬಕ್ಕೆ ಹಝರತ್ ಬಕರ್ ಮಸೀದಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಸಂಭ್ರಮವಾಗುತ್ತದೆ,” ಎಂದು ಟೈಮ್ಸ್ ಆಫ್‌ ಇಂಡಿಯಾಗೆ ಸ್ಥಳೀಯರಾದ ಲಿಯಾಕರ್ ಅಲಿ ಹೇಳಿಕೆ ನೀಡಿದ್ದಾರೆ. 

ಇದೊಂದು ಸಹೋದರತ್ವದ ದೊಡ್ಡ ಸಂಕೇತ. ಸ್ಥಳೀಯ ಗ್ರಾಮಸ್ಥರು ತಮ್ಮದೇ ಮಸೀದಿಗಾಗಿ ಬಹು ಕಾಲದಿಂದ ಬೇಡಿಕೆ ಮುಂದಿಟ್ಟಿದ್ದರು. ಇದೀಗ ತಮ್ಮದೇ ಮಸೀದಿಯಲ್ಲಿ ಅವರು ಪ್ರಾರ್ಥನೆ ಸಲ್ಲಿಸುವಂತಾಗಿದೆ,ಎನ್ನುತ್ತಾರೆ ಪಂಜಾಬಿನ ಶಾಹಿ ಇಮಾಮ್ ಆದ ಮೌಲಾನಾ ಹಬೀಬ್ ಉರ್ ರೆಹ್ಮಾನ್ ಸಾನಿ ಲುಧಿಯಾನ್ವಿ

ಇನ್ನು ಈ ಕುರಿತು ಹೇಳಿಕೆ ನೀಡುವ ಗ್ರಾಮದ ಸರಪಂಚ್ (ಅಧ್ಯಕ್ಷ) ಜಗದೀಪ್ ಕೌರ್, “ನಮ್ಮ ಗ್ರಾಮದಲ್ಲಿ ಮೊದಲಿನಿಂದಲೂ ಕೋಮು ಸಾಮರಸ್ಯ ಇದೆ. ಇದೀಗ ದೇವಸ್ಥಾನವೊಂದನ್ನು ಎಲ್ಲರೂ ಒಟ್ಟಾಗಿ ಕಟ್ಟುತ್ತಿದ್ದಾರೆ. ಗ್ರಾಮದಲ್ಲಿ ನನಸ್ಕರ್ ಗುರುದ್ವಾರವೂ ಇದೆ. ಇಲ್ಲಿಗಂತೂ ಎಲ್ಲರೂ ಭೇಟಿ ನೀಡುತ್ತಿರುತ್ತಾರೆ,” ಎಂದು ಹೇಳುತ್ತಾರೆ ಆಕೆ.

ಇದೇ ಮಾತನ್ನು ಪುನರುಚ್ಚರಿಸುತ್ತಾರೆ ಗ್ರಾಮದ ನಾಗರೀಕರಾದ ಜಸ್ವಿಂದರ್ ಕುಮಾರ್ ಹಾಗೂ ಓಮ್ ಕುಮಾರ್. ಮಾತ್ರವಲ್ಲ ಧರ್ಮ ಧರ್ಮಗಳ ವಿಷಯಕ್ಕೆ ಕಿತ್ತಾಡುವ ಬದಲು ಒಟ್ಟಾಗಿ ಕೆಲಸ ಮಾಡಿ ಎಂದು ಅವರು ಸಲಹೆಯನ್ನು ಮುಂದಿಡುತ್ತಾರೆ. ಬೇರೆ ಬೇರೆ ಧರ್ಮೀಯರು ಒಟ್ಟಾಗಿ ಕಲೆತು ಹೇಗೆ ಶಾಂತಿಯುತವಾಗಿ ಬಾಳ್ವೆ ಮಾಡಬಹುದು ಎಂಬುದಕ್ಕೆ ನಮ್ಮ ಗ್ರಾಮವೇ ನಿಮಗೆ ಅತ್ಯುತ್ತಮ ಉದಾಹರಣೆ, ಎಂದು ಹೆಮ್ಮೆಯಿಂದ ಹೇಳುತ್ತಾರೆ ಓಂ ಕುಮಾರ್. 

ಚಿತ್ರ ಕೃಪೆ: ಟ್ರಿಬ್ಯೂನ್ ಇಂಡಿಯಾ

ಪೂರಕ ಮಾಹಿತಿ: ಟೈಮ್ಸ್ ಆಫ್ ಇಂಡಿಯಾ

Leave a comment

FOOT PRINT

Top