An unconventional News Portal.

ಯುಪಿಯಲ್ಲಿ ಏನಾಗುತ್ತಿದೆ?: ಯೋಗಿ ಅಭಿವೃದ್ಧಿ ಮಂತ್ರ; ತಳಮಟ್ಟದಲ್ಲಿ ಜಾತಿ ಸಂಘರ್ಷ

ಯುಪಿಯಲ್ಲಿ ಏನಾಗುತ್ತಿದೆ?: ಯೋಗಿ ಅಭಿವೃದ್ಧಿ ಮಂತ್ರ; ತಳಮಟ್ಟದಲ್ಲಿ ಜಾತಿ ಸಂಘರ್ಷ

ಪಶ್ಚಿಮ ಉತ್ತರ ಪ್ರದೇಶಕ್ಕೆ ಬಂದರೆ ಮರದ ಕರಕುಶಲ ವಸ್ತುಗಳಿಗೆ ಹೆಸರಾಗಿದ್ದ ಜಿಲ್ಲೆ ಶಹನ್ಪುರ. ಸದ್ಯ ಇಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೇಲ್ವರ್ಗದ ಸಮುದಾಯ ಠಾಕೂರ್ ಹಾಗೂ ದಲಿತರ ನಡುವೆ ಹುಟ್ಟಿಕೊಂಡ ಸಂಘರ್ಷ ಹೊಸ ದಿಕ್ಕಿಗೆ ಹೊರಳಿದೆ. ಯಾವ ಹೊತ್ತಿಗೂ ಇಲ್ಲಿ ಮತ್ತೆ ಗಲಭೆ ಹುಟ್ಟಿಕೊಳ್ಳಬಹುದು; ಪರಿಸ್ಥಿತಿ ಹಾಗಿದೆ. 

ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಂಘರ್ಷ ತಣ್ಣಗಾಗಿ ಬುಧವಾರ ಮತ್ತೆ ಸ್ಪೋಟಿಸಿದೆಗುರುವಾರ ಮುಂಜಾನೆ ವ್ಯಕ್ತಿಯೊಬ್ಬರನ್ನು ಬೈಕಿನಲ್ಲಿ ಬಂದ ಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಸಾವಿನ ವಿರುದ್ಧ ಠಾಕೂರ್ ಸಮುದಾಯದವರು ಆಸ್ಪತ್ರೆ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ ಮಿರ್ಜಾಪುರ ಗ್ರಾಮದಲ್ಲಿ ಮಲಗಿದ್ದ ಇಬ್ಬರು ದಲಿತರ ಮೇಲೆ ದಾಳಿ ಮಾಡಲಾಗಿದೆ. ಪರಿಣಾಮ ಬ್ಬರು ಸಾವನ್ನಪ್ಪಿ, ಇನ್ನೊಬ್ಬರು ತೀವ್ರ ಗಾಯಗೊಂಡಿದ್ದಾರೆ. ನಿನ್ನೆ ಶಬ್ಬೀರ್ಪುರ ಗ್ರಾಮಕ್ಕೆ ಬಿಎಸ್ಪಿ ವರಿಷ್ಠೆ ಮಾಯಾವತಿ ಭೇಟಿ ನೀಡುವುದಕ್ಕೂ, ಮೊದಲು ಠಾಕೂರ್ ಸಮಾಜದ 12 ಮನೆಗಳಿಗೆ ಅಪರಿಚಿತರು ಬೆಂಕಿ ಇಟ್ಟಿದ್ದಾರೆ. ಬೆನ್ನಿಗೇ ಮಾಯಾವತಿ ರ್ಯಾಲಿ ಮುಗಿಸಿ ಬರುವಾಗ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ. ಈ ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಹೀಗೆ, ದೇಶದ ಅತಿ ದೊಡ್ಡ ರಾಜ್ಯದಲ್ಲಿ ಹುಟ್ಟಿಕೊಂಡಿರುವ ಜಾತಿ ಸಂಘರ್ಷಕ್ಕೆ ರಸ್ತೆಗೊಂದರಂತೆ ಹೆಣ ಬೀಳುತ್ತಿದೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಹನ್ಪುರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯನ್ನೇ ಅಮಾನತು ಮಾಡಿದ್ದಾರೆ. ಇನ್ನಿಬ್ಬರು ಉನ್ನತ ಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ.

ಮುಖ್ಯಮಂತ್ರಿಯಾದ ನಂತರ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ದೊಡ್ಡ ಪ್ರಮಾಣದ ಕವರೇಜ್ ಪಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅರೆಕ್ಷಣ ಹಾವು ತುಳಿದಂತೆ ಬೆಚ್ಚಿ ಬಿದ್ದಿದ್ದಾರೆ. ಏನಾಗುತ್ತಿದೆ ಎಂದೇ ಅವರಿಗೆ ಅರ್ಥವಾಗುತ್ತಿಲ್ಲ. ಕಾಶ್ಮೀರದಂತೆ ಇಲ್ಲೂ ಮೊಬೈಲ್ ಇಂಟರ್ನೆಂಟ್, ಮೆಸೇಜ್ ಸೇವೆಗಳಿಗೆಲ್ಲಾ ಬ್ರೇಕ್ ಹಾಕಲಾಗಿದೆ. ಸೆಕ್ಷನ್ 144 ಹೇರಲಾಗಿದೆ. ಗಲಭೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಎಲ್ಲಾ ಹಂತದ ಕೆಲಸಗಳು ನಡೆಯುತ್ತಿವೆ. 

“ಘಟನೆಗೆ ಕಾರಣರಾದವರು ಮತ್ತು ಇದಕ್ಕೆ ಜವಾಬ್ದಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಾಗುವುದು,” ಎಂದು ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ. ರಾತ್ರಿ ಹೊತ್ತು ರಾಜ್ಯಪಾಲರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಯೋಗಿ ನಡೆಗಳೇ ಸಾರಿ ಹೇಳುತ್ತಿವೆ.

ಘಟನೆಗೆ ಆಡಳಿತರೂಢ ಬಿಜೆಪಿ ಸರಕಾರವೇ ಕಾರಣ ಎಂದು ದಲಿತ ರಾಜಕಾರಣದಲ್ಲೇ ಮೇಲೆದ್ದು ಬಂದ ಮಾಯಾವತಿ ಹೇಳಿದ್ದಾರೆ. ವಿಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಎರಡು ಪಕ್ಷಗಳ ರಾಜಕಾರಣಕ್ಕಿಂತ ಸಂಕೀರ್ಣವಾಗಿದೆ ಇಲ್ಲಿನ ತಳಮಟ್ಟದ ಪರಿಸ್ಥಿತಿ. ರಾಜಕೀಯದ ಆಚೆಗೆ ಸಾಮಾಜಿಕ ಸ್ಥರಗಳಲ್ಲಿ ದೊಡ್ಡ ಮಟ್ಟದ ವಿಘಟನೆಗೆ ಬೆಳವಣಿಗೆಗಳು ಸಾಕ್ಷಿಯಾಗುತ್ತಿವೆ.  

ದಲಿತ ರಾಜಕಾರಣಕ್ಕೆ ಹೊಸ ಭಾಷ್ಯ:

ಉತ್ತರ ಪ್ರದೇಶದ ದಲಿತ ರಾಜಕಾರಣವನ್ನು ರಾಜಕಾರಣದ ಕನ್ನಡಕವಿಲ್ಲದೆ ನೋಡುವುದು ಅಸಾಧ್ಯ. ಇಲ್ಲಿಯ ದಲಿತ ರಾಜಕಾರಣಕ್ಕೆ ಬುನಾದಿ ಹಾಕಿದವರು ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಂ ಮತ್ತು ಅವರ ಉತ್ತರಾಧಿಕಾರಿ ಮಾಯಾವತಿ.ಮೇಲ್ವರ್ಗದ ವಿರೋಧಿ ಹೋರಾಟವಾಗಿ ಅವರು ದಲಿತ ರಾಜಕಾರಣವನ್ನು ಹುಟ್ಟು ಹಾಕಿದರು. ಆದರೆ ಯಾವಾಗ ಈ ವರ್ಗದಲ್ಲೂ ಶಿಕ್ಷಣ, ಒಂದಷ್ಟು ತಿಳಿವಳಿಕೆ ಮೂಡಿತೋ ಅಭಿವೃದ್ಧಿ ಅಜೆಂಡಾ ಹಿಡಿದವರ ಹಿಂದೆ ಇವರೆಲ್ಲಾ ನಿಧಾನಕ್ಕೆ ಹೊರಟು ನಿಂತರು.

ಸರಿಯಾಗಿ 2000 ಇಸವಿಯಿಂದ ಬಿಜೆಪಿ ಇಲ್ಲಿನ ಒಬಿಸಿ ವರ್ಗದತ್ತ ಕೈಚಾಚಿತ್ತು. ಅದರಲ್ಲೂ ಮುಖ್ಯವಾಗಿ ಬಿಜೆಪಿ ರಣತಂತ್ರಗಾರ ಅಮಿತ್ ಶಾ ಮಹಾ ಹಿಂದೂಹೆಸರಿನಲ್ಲಿ ಮುಸ್ಲಿಂ ಜನಾಂಗಕ್ಕೆ ಹೊಡೆತ ನೀಡಲು ಹಿಂದೂ ಧರ್ಮದ ತಳ ಸಮುದಾಯಗಳ ಸಂಘಟನೆಗಳ ಕಟ್ಟಲು ಆರಂಭಿಸಿದರು. ಆದರೆ ಇದು ದಲಿತರ ನಡುವೆಯೇ ಒಂದಷ್ಟು ಕಂದಕಗಳನ್ನು ನಿರ್ಮಿಸಿತು. ಸದ್ಯ ಇದೇ ಕಂದಕಗಳು ಇವತ್ತು ಶಹನ್ಪುರ ಗಲಭೆಗೆ ಕಾರಣವಾಯ್ತು ಎನ್ನುವ ವಾದವನ್ನು ಮುಂದಿಡುತ್ತಾರೆ ಗಲಭೆ ವಿಚಾರಗಳಲ್ಲಿ ಅಧ್ಯಯನ ಮಾಡಿದ ಸುಧಾ ಪೈ ಮತ್ತು ಸಜ್ಜನ್ ಕುಮಾರ್.

ಬಿಜೆಪಿ ದಲಿತ ಗುಂಪುಗಳ ನಡುವಿನಂತರ:

ಶಹನ್ಪುರದ ಹೆಚ್ಚಿನ ದಲಿತರು ಚರ್ಮದ ಕೆಲಸಗಳನ್ನು ಮಾಡುವವರು. ಇಲ್ಲಿನ ಜಾಟವ್ ನಗರದಲ್ಲಿ ಬಿಜಪಿ ಜತೆ ಗುರುತಿಸಿಕೊಂಡ ದಲಿತರು ಮತ್ತು ಬಿಎಸ್ಪಿ ಜತೆ ಗುರುತಿಸಿಕೊಂಡ ದಲಿತರ ಗುಂಪುಗಳಿವೆ. ಬಿಜೆಪಿ ಜತೆ ಗುರುತಿಸಿಕೊಂಡ ದಲಿತರು ಸಂತ ರವಿದಾಸರನ್ನು ಪೂಜಿಸಿದರೆ, ಬಿಎಸ್ಪಿ ಜತೆ ಗುರತಿಸಿಕೊಂಡವರಿಗೆ ಬುದ್ಧ ಹಾಗೂ ಅಂಬೇಡ್ಕರರೇ ಸಮುದಾಯದ ಕಾನ್ ಗಳಾಗಿದ್ದಾರೆ.

ಎಂದಿನಂತೆ ಬಿಜೆಪಿ ಜತೆ ಗುರುತಿಸಿಕೊಂಡ ಸಂಘಟನೆಗಳ ಟಾರ್ಗೆಟ್ ಮುಸ್ಲಿಂ ಸಮುದಾಯದವರು. ಇಲ್ಲಿ ಮುಸ್ಲಿಂ ಮತ್ತು ಬಿಜೆಪಿ ಜತೆಗಿನ ದಲಿತರ ನಡುವೆ 2006ರಲ್ಲಿ ಗಲಭೆ ನಡೆದಿತ್ತು. ಇನ್ನೊಂದು ಪಂಗಡದ ದಲಿತರೂ ಮುಸ್ಲಿಮರು ಸೌಹಾರ್ಧಯುತವಾಗಿ ಬದುಕುತ್ತಿದ್ದಾರೆ. 

ಶಹನ್ಪುರ ಗಲಭೆಯ ಎರಡು ಮುಖ:

ಇವತ್ತು ಶಹನ್ಪುರದಲ್ಲಿ ನಡೆಯುತ್ತಿರುವ ಗಲಭೆಗೆ ಎರಡು ಮುಖಗಳಿವೆ. ಅದರಲ್ಲಿ ಒಂದು ಏಪ್ರಿಲ್ 20ರಂದು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ನಡೆದ ಶೋಭಾ ಯಾತ್ರೆ ವೇಳೆ ದಲಿತರು ಮತ್ತು ಮುಸ್ಲಿಂ ಸಮುದಾಯದವರ ಮಧ್ಯೆ ನಡೆದ ಗಲಭೆ. ನ್ನೊಂದು ಇವತ್ತು ನಡೆಯುತ್ತಿರುವ ರಜಪೂತ್ ಠಾಕೂರ್ ಹಾಗೂ ದಲಿತರ ನಡುವೆ ನಡೆಯುತ್ತಿರುವ ಹಿಂಸಾಚಾರ.

ಈ ದಲಿತರು ಮತ್ತು ಠಾಕೂರ್ ಸಮುದಾಯದ ಜತೆ ಸಂಘರ್ಷ ಹುಟ್ಟಿಕೊಂಡಿದ್ದು ಮೇ 5 ರಂದು. ಶಬ್ಬಿರ್ಪುರದಲ್ಲಿಮಹಾರಾಣ ಪ್ರತಾಪ್ ಶೋಭಾ ಯಾತ್ರೆ ವೇಳೆ ಈ ಠಾಕೂರ್ದಲಿತ ಗಲಭೆ ಹುಟ್ಟಿಕೊಂಡಿತು. ಶೋಭಾಯಾತ್ರೆಯ ಮೈಕುಗಳಿಗೆ ಮತ್ತು ಸಂಭ್ರಮಾಚರಣೆಯ ರೀತಿಗೆ ದಲಿತರು ಅಡ್ಡಿ ಪಡಿಸಿದರು. ಇಬ್ಬರ ನಡುವೆ ಜಗಳವಾಗಿ ಕಲ್ಲು ತೂರಾಟ ನಡೆಯಿತು. ಮುಂದಿನ ಸರದಿ 25 ದಲಿತರ ಮನೆಗಳಿಗೆ ಬೆಂಕಿ. ತಮ್ಮ ಸಮುದಾಯದ ಮೇಲೆ ದಾಳಿ ನಡೆಯುತ್ತಿದ್ದಂತೆ ಎಲ್ಲಾ ದಲಿತರೂ ಒಂದಾದರುಭೀಮ್ ಆರ್ಮಿ ಸ್ಥಾಪನೆಯಾಯಿತು. ಹಿಂದೂ ಧರ್ಮಕ್ಕೆ ಬೇಸತ್ತು 180 ಜನ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬ ಸುದ್ದಿಯಿದೆ.

ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಯುಪಿ ದಲಿತ ಹೋರಾಟಕ್ಕೆ ರಾಷ್ಟ್ರಾದ್ಯಂತ ಬೆಂಬಲ ದಕ್ಕುತ್ತಿದೆ. ಮೇ 21ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ರ್ಯಾಲಿಗೆ ಬರೋಬ್ಬರಿ 50,000 ಸಾವಿರ ಜನ ಹರಿದು ಬಂದಿದ್ದೇ ಇದಕ್ಕೆ ಸಾಕ್ಷಿ.

ಧರ್ಮದ ನೆಲೆಯಲ್ಲಿ ರಾಜಕಾರಣವನ್ನು ಕಟ್ಟಿ, ಪೋಷಿಸಿ, ಬೆಳೆಸಿದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯ ಕುರಿತು ಮಾತನಾಡುತ್ತಿದೆ. ಆದರೆ ತಳಮಟ್ಟದಲ್ಲಿ ಧಾರ್ಮಿಕ ಸಂಘರ್ಷಗಳು, ಜಾತಿಯ ಸಂಘರ್ಷಗಳು ಸಿಡಿದೆದ್ದಿವೆ. ಇದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಉತ್ತರ ಪ್ರದೇಶದ ಭವಿಷ್ಯ ನಿಂತಿದೆ.

Leave a comment

FOOT PRINT

Top