An unconventional News Portal.

‘ಮೂರು ವರ್ಷಗಳ ಮೋದಿ ಆಡಳಿತ’: ದಿನಕ್ಕೆ 25 ಸಾವಿರ ಟಾಯ್ಲೆಟ್ ಕಟ್ಟಿದ ಸ್ವಚ್ಚ ಭಾರತದ ಕತೆ!

‘ಮೂರು ವರ್ಷಗಳ ಮೋದಿ ಆಡಳಿತ’: ದಿನಕ್ಕೆ 25 ಸಾವಿರ ಟಾಯ್ಲೆಟ್ ಕಟ್ಟಿದ ಸ್ವಚ್ಚ ಭಾರತದ ಕತೆ!

ಮೂರು ವರ್ಷಗಳ ಹಿಂದೆ ದೇಶಾದ್ಯಂತ ದೊಡ್ಡ ಭರವಸೆಯೊಂದಿಗೆ, ಉತ್ಸಾಹದೊಂದಿಗೆ, ಆಶಯಗಳೊಂದಿಗೆ ಅಧಿಕಾರಕ್ಕೇರಿದವರು ಪ್ರಧಾನಿ ನರೇಂದ್ರ ಮೋದಿ. ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಇದಕ್ಕೆ ಕಾರಣವಾಗಿದ್ದು ಹಿಂದಿನ ಎರಡು ಅವಧಿಗೆ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಬಗ್ಗೆ ಜನರಲ್ಲಿ ಮೂಡಿದ್ದ ಅಸಮಾಧಾನ ಹಾಗೂ ಮೋದಿ ಮುಂದಾಳತ್ವದಲ್ಲಿ ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಆಡಳಿತಾತ್ಮಕ ಭರವಸೆಗಳು.

ಮೂರು ವರ್ಷಗಳು ಕಳೆದ ನಂತರ ನರೇಂದ್ರ ಮೋದಿ ಆಡಳಿತ ಹೇಗನ್ನಿಸಿತು ಎಂಬ ಒಂದು ಸಾಲಿನ ಪ್ರಶ್ನೆಯನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಸಮೀಕ್ಷೆಗಳು ನಡೆಯುತ್ತಿವೆ. ಸಹಜವಾಗಿಯೇ ಮೋದಿ ಹಾಗೂ ಬಿಜೆಪಿ ಅಭಿಮಾನಿಗಳು ತೃಪ್ತಿದಾಯಕ ಎಂದೂ, ಅವರ ವಿರೋಧಿಗಳು ಅಸಂತೃಪ್ತಿ ಎಂದೂ ಹೇಳುತ್ತಿದ್ದಾರೆ. ಹಾಗೆ ನೋಡಿದರೆ, ಮೋದಿ ಅವರ ಆಡಳಿತವನ್ನು ಒಂದು ಸಾಲಿನ ಸಮೀಕ್ಷೆಗಳು ಕಟ್ಟಿಕೊಡಲು ಸಾಧ್ಯವಿಲ್ಲ.

ಈ ಸಮಯದಲ್ಲಿ, ‘ಇಂಡಿಯಾ ಸ್ಪೆಂಡ್’ ಎಂಬ ಡಾಟಾ ಜರ್ನಲಿಸಂ ಹಿನ್ನೆಲೆಯ ಸುದ್ದಿ ತಾಣ ಚುನಾವಣೆ ವೇಳೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳು ಹಾಗೂ ಮೋದಿ ಆಡಳಿತದಲ್ಲಿ ಅವು ಸಾಕಾರಗೊಂಡ ಬಗೆಯನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಸರಕಾರದ ನಾನಾ ಇಲಾಖೆಗಳು ಅಂಕಿಅಂಶಿಗಳನ್ನು ಒಳಗೊಂಡ ಈ ವಿಶ್ಲೇಷಣಾತ್ಮಕ ವರದಿಗಳು ನಿಜಕ್ಕೂ ಮೋದಿ ಆಡಳಿತದ ಕುರಿತು ಹೊಸ ಆಯಾಮವನ್ನೇ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ, ‘ಇಂಡಿಯಾ ಸ್ಪೆಂಡ್’ ಮಾಹಿತಿಗಳನ್ನು ಇಟ್ಟುಕೊಂಡು ‘ಸಮಾಚಾರ’ ಕನ್ನಡದ ಓದುಗರಿಗಾಗಿ ಈ ವರದಿಯನ್ನು ಸಿದ್ಧಪಡಿಸಿದೆ. ಇಲ್ಲಿ, ಪ್ರಮುಖವಾಗಿ ಸ್ವಚ್ಚ ಭಾರತ ಅಭಿಯಾನದ ವಿಚಾರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರದ ಸಾಧನೆಗಳ ಪಕ್ಷಿನೋಟ ಸಿಗಲಿದೆ.

ಸ್ವಚ್ಚ ಭಾರತದ ಕನಸು:

ದೇಶದ ಜನರಲ್ಲಿ ಸ್ವಚ್ಚತೆಯ ಕುರಿತು ಅರಿವು ಮೂಡಿಸಲು ಮೊದಲು ಪ್ರಯತ್ನ ಆರಂಭವಾಗಿದ್ದು ಗಾಂಧಿಜೀ ಅವರಿಂದ. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಸ್ವಚ್ಚತೆಯ ಅರಿವಿಗೆ ಹೊಸ ಪರಿಭಾಷೆಯನ್ನೇ ನೀಡಲಾಯಿತು. ಸರಕಾರದ ಮಟ್ಟದಲ್ಲಿ ‘ಸ್ವಚ್ಚ ಭಾರತ್ ಮಿಷನ್’ ಹೆಸರಿನಲ್ಲಿ ಯೋಜನೆಯೊಂದನ್ನು ಜಾರಿಗೆ ತರಲಾಯಿತು.

ಸ್ವಾಮಿ ವಿವೇಕಾನಂದ ಅವರ ಶೈಲಿಯಲ್ಲಿ “ಸಹೋದರ, ಸಹೋದರಿಯರೇ, ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ಈ ಸಮಯದಲ್ಲಿ ನಮ್ಮ ಮನೆಯ ತಾಯಂದಿರು, ಅಕ್ಕಂದಿರು ಬಹಿರ್ದೆಸೆಗೆ ಹೊರಗೆ ಹೋಗುವುದನ್ನು ನೋಡಿದರೆ ನೋವು ಆಗದೇ ಇರುತ್ತದೆಯೇ? ಮಹಿಳೆಯರ ಘನತೆಯನ್ನು ಎತ್ತಿಹಿಡಿಯುವುದು ನಮ್ಮ ಹೊಣೆಗಾರಿಕೆ ಅಲ್ವವೇ?” ಎಂದು ಅವರು ಸ್ವಾತಂತ್ರೋತ್ಸವ ಸಮಯದಲ್ಲಿ ಭಾಷಣ ಆರಂಭಿಸಿದ್ದರು. ಅದು ಸ್ವಚ್ಚ ಭಾರತ್ ಯೋಜನೆಯ ಆರಂಭಕ್ಕೆ ಮುನ್ನಡಿಯನ್ನೂ ಬರೆದಿತ್ತು.

2014ರಿಂದ ಇಲ್ಲೀವರೆಗೆ ದೇಶಾದ್ಯಂತ ಸುಮಾರು 4 ಕೋಟಿ ಮನೆಗಳಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆ. ವಿಶೇಷ ಎಂದರೆ ಮೇ. 1 2017ರಿಂದ ಮೇ. 21 2017ರ ನಡುವೆ ಕಟ್ಟಿರುವ ಶೌಚಾಲಯಗಳ ಸಂಖ್ಯೆಯೇ 4, 89,710. ಹಾಗಂತ ಹೇಳುತ್ತದೆ ಸ್ವಚ್ಚ ಭಾರತ್ ಮಿಷನ್- ಗ್ರಾಮೀಣ ವೆಬ್‌ಸೈಟ್. ಅಂದರೆ ಮೇ ತಿಂಗಳಿನ ಮೊದಲ 21 ದಿನಗಳಲ್ಲಿ ಪ್ರತಿ ನಿತ್ಯ ಸುಮಾರು 25 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಇದರ ಜತೆಗೆ ದೇಶದ ಒಟ್ಟು 1,93,081 ಗ್ರಾಮ ಪಂಚಾಯ್ತಿಗಳು ಈಗಾಗಲೇ ಪ್ರತಿ ಮನೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇದೆ, ತಮ್ಮ ಗ್ರಾಮಗಳಲ್ಲಿ ಯಾರೂ ಬಹಿರ್ದೆಸೆ ಹೋಗುತ್ತಿಲ್ಲ ಎಂದು ಘೋಷಿಸಿಕೊಂಡಿವೆ. ಯಾವುದೇ ಗ್ರಾಮ ಪಂಚಾಯ್ತಿ ನೈರ್ಮಲ್ಯದ ವಿಚಾರದಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಿದ್ದೀವಿ ಎಂದು ಘೋಷಿಸಿಕೊಂಡರೆ ಮೂರು ತಿಂಗಳ ಒಳಗಾಗಿ ರಾಜ್ಯ ಸರಕಾರ ಅದನ್ನು ಪರಿಶೀಲನೆ ನಡೆಸಿ ಅನುಮೋದನೆ ನೀಡಬೇಕು. 6 ತಿಂಗಳ ಒಳಗಾಗಿ ಕೇಂದ್ರ ಸರಕಾರ ಪ್ರತ್ಯೇಕ ಪರಿಶೀಲನೆ ನಡೆಸಬೇಕು. ಆದರೆ ಸದ್ಯ ಘೋಷಿಸಿಕೊಂಡಿರುವ ಗ್ರಾಮ ಪಂಚಾಯ್ತಿಗಳ ಪೈಕಿ ಶೇ. 53.9ರಷ್ಟು ಅಂಕಿ ಅಂಶಗಳನ್ನು ಪರಿಶೀಲನೆ ಮಾಡಲಾಗಿಲ್ಲ. ಸ್ವಚ್ಚ ಭಾರತ ಮಿಷನ್- ಗ್ರಾಮೀಣ ಯೋಜನೆಯಲ್ಲಿ ಶೇ. 85ರಷ್ಟು ಹಣವನ್ನು ಖರ್ಚು ಮಾಡುವ ಅಧಿಕಾರ ಹೊಂದಿರುವ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಈ ಅಂಕಿ ಅಂಶಗಳನ್ನು ಪರಿಶೀಲನೆ ಮಾಡಬೇಕಿತ್ತು.

ಸ್ವಚ್ಚ ಭಾರತ್ ಮಿಷನ್- ಗ್ರಾಮೀಣ ಯೋಜನೆ ಜಾರಿಗೆ ಬರುತ್ತಿದ್ದಂತೆ ವಿಶ್ವಸಂಸ್ಥೆ 1.5 ಬಿಲಿಯನ್ ಡಾಲರ್ ಸಾಲವನ್ನು ನೀಡಲು ಒಪ್ಪಿಕೊಂಡಿತ್ತು. ಆದರೆ ಮೂರು ವರ್ಷಗಳ ನಂತರವೂ, ವಿಶ್ವಸಂಸ್ಥೆ ವಿಧಿಸಿದ್ದ ಷರತ್ತುಗಳನ್ನು ಕೇಂದ್ರ ಸರಕಾರ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಸಾಲದ ಮೊದಲ ಕಂತೂ ಕೂಡ ಇನ್ನೂ ಸಿಕ್ಕಿಲ್ಲ. ಹೊರನೋಟಕ್ಕೆ ದಿನಕ್ಕೆ 25 ಸಾವಿರ ಶೌಚಾಲಯಗಳನ್ನು ಕಟ್ಟಲಾಗಿದೆ ಎಂದು ಸರಕಾರ ತೋರಿಸಿಕೊಂಡಿದೆಯಾದರೂ, ಅದನ್ನು ಸ್ವತಂತ್ರ ಸಂಸ್ಥೆಯೊಂದರಿಂದ ಪರಿಶೀಲನೆ ನಡೆಸದಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಅದನ್ನು ಒಪ್ಪುತ್ತಿಲ್ಲ.

ಹಾದಿ ಬದಲಾಯಿತಾ?: 

swachh-bharat-2

ಸ್ವಚ್ಚ ಭಾರತ್ ಮಿಷನ್ ಘೋಷಣೆಯ ಮುಖ್ಯ ಉದ್ದೇಶವೇ ಜನರಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸುವುದಾಗಿತ್ತು. ಹೀಗಾಗಿಯೇ ಒಟ್ಟು ಹಣದಲ್ಲಿ ಶೇ. 8ರಷ್ಟನ್ನು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕೆಲಸಗಳಿಗಾಗಿ ಎತ್ತಿಡಲಾಗಿತ್ತು. 2016-17ರ ಆರ್ಥಿಕ ವರ್ಷದ ಆಯವ್ಯಯದಲ್ಲಿ ನೀಡಿರುವ ಮಾಹಿತಿ ಪ್ರಕಾರ ಶೇ. 1ರಷ್ಟು ಹಣವನ್ನು ಮಾತ್ರವೇ ಶಿಕ್ಷಣ, ಮಾಹಿತಿ ಹಾಗೂ ಸಂವಹನಕ್ಕಾಗಿ ಬಳಕೆ ಮಾಡಲಾಗಿದೆ. ಅದೇ ವೇಳೆ, ಶೇ. 98ರಷ್ಟು ಸ್ವಚ್ಚ ಭಾರತ್ ಮಿಷನ್ ಹಣ ಶೌಚಾಲಯ ಕಟ್ಟುವುದಕ್ಕೆ ವಿನಿಯೋಗ ಮಾಡಿದೆ.

ದೇಶದಲ್ಲಿ ನಿರ್ಮಾಣ ಕಾಮಗಾರಿಗಳ ಹಣೆಬರಹ ಹಾಗೂ ಹಿನ್ನೆಲೆಯಲ್ಲಿರುವ ಭ್ರಷ್ಟಾಚಾರದ ಕೂಪವನ್ನು ಬಲ್ಲವರಿಗೆ ಈ ಶೌಚಾಲಯ ನಿರ್ಮಾಣವನ್ನು ಸಾಧನೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಸ್ವಚ್ಚ ಭಾರತ್ ಮಿಷನ್ ಹಾದಿ ತಪ್ಪಿತಾ ಎಂಬ ಅನುಮಾನವೂ ಮೂಡುತ್ತಿದೆ.

ಡಿಸೆಂಬರ್ 2015ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಗುರುತಿಸುವುದೇ ದೊಡ್ಡ ಸವಾಲಾಗಿದೆ. ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ ನಡೆಸಿದ ಅಧ್ಯಯನದಲ್ಲಿ ಕಾಗದದ ಮೇಲೆ ಮಾತ್ರವೇ ಶೌಚಾಲಯಗಳ ನಿರ್ಮಾಣವಾಗಿರುವುದರ ಮಾಹಿತಿ ಸಿಕ್ಕಿದೆ. ಸುಮಾರು ಐದು ರಾಜ್ಯಗಳ 7,500 ಮನೆಗಳನ್ನು ಈ ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಮೂರನೇ ಒಂದು ಭಾಗದಷ್ಟು ಮನೆಗಳಲ್ಲಿ ಅದಾಗಲೇ ಶೌಚಾಲಯ ವ್ಯವಸ್ಥೆ ಇತ್ತು. ಶೇ. 36ರಷ್ಟು ಮನೆಗಳಲ್ಲಿ ನಿರ್ಮಿಸಿರುವ ಶೌಚಾಲಯಗಳು ಬಳಸಲು ಅಯೋಗ್ಯವಾಗಿವೆ ಎಂಬುದನ್ನು ಅಧ್ಯಯನ ಕಂಡುಕೊಂಡಿತ್ತು. ಶೇ. 40ರಷ್ಟು ಮಂದಿ ಶೌಚಾಲಯ ನಿರ್ಮಿಸಿ, ಸರಕಾರಕ್ಕೆ ಹಣಕ್ಕಾಗಿ ಅರ್ಜಿ ಸಲ್ಲಿಸಿದ್ದರಾದರೂ, ಯೋಜನೆಯಿಂದ ಹಣ ಬಂದಿಲ್ಲ ಎಂಬುದು ಗೊತ್ತಾಗಿತ್ತು.

 

ಸ್ವಚ್ಚ ಭಾರತ್ ಮಿಷನ್- ನಗರ ಯೋಜನೆ ಕೂಡ ಅಂದುಕೊಂಡ ಸಾಧನೆಯನ್ನೇನೂ ಮಾಡಿಲ್ಲ ಎನ್ನುತ್ತವೆ ಅಂಕಿ ಅಂಶಗಳು. 2015-16ರಲ್ಲಿ ಶೇ. 25ರಷ್ಟು ಯೋಜನೆ ಹಣವನ್ನು ಘನ ತ್ಯಾಜ್ಯ ನಿರ್ವಹಣೆಗೆ ಹಾಗೂ ಶೇ. 70ರಷ್ಟನ್ನು ಶೌಚಾಲಯದ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಅದರ ಮುಂದಿನ ವರ್ಷ ಶೇ. 45ರಷ್ಟು ಹಣವನ್ನು ಘನ ತ್ಯಾಜ್ಯ ನಿರ್ವಹಣೆಗೆ ಹಾಗೂ ಶೇ. 45ರಷ್ಟನ್ನು ಶೌಚಾಲಯ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಹೀಗಿದ್ದೂ, ಗುಜರಾತ್, ಅಸ್ಸಾಂ, ಕೇರಳ ಸೇರಿದಂತೆ ಒಟ್ಟು 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಘನತ್ಯಾಜ್ಯ ನಿರ್ವಹಣೆಗಾಗಿ ಈವರೆಗೆ ಅನುದಾನ ಪಡೆದುಕೊಂಡಿಲ್ಲ ಎಂದು ಅಧ್ಯಯನ ಹೇಳಿತ್ತು. ಈ ಸಾಲಿನ ಆರ್ಥಿಕ ವರ್ಷದಲ್ಲಿ ಅನುದಾನಕ್ಕಾಗಿ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎದುರು ನೋಡುತ್ತಿವೆ.

ದೇಶಾದ್ಯಂತ ಸಂಚಲನ ಹುಟ್ಟುಹಾಕಿ, ಮಾಧ್ಯಮಗಳಲ್ಲಿ ಭಾರಿ ಪ್ರಚಾರವನ್ನು ಪಡೆದುಕೊಂಡ ಸ್ವಚ್ಚ ಭಾರತ್ ಮಿಷನ್‌ ಯೋಜನೆಯ ಅಂಕಿ ಅಂಶಗಳು ತೆರೆದಿರುವ ತಳಮಟ್ಟದ ಕತೆ ಇದು. ಇನ್ನು ಮೋದಿ ಅಧಿಕಾರಕ್ಕೇರುವ ಮುನ್ನ ನೀಡಿದ್ದ ಇತರೆ ಭರವಸೆಗಳನ್ನು, ಜಾರಿಗೆ ತಂದ ಯೋಜನೆಗಳ ಸಾಧನೆಯನ್ನೂ ಅಳೆಯುವ ಕೆಲಸ ಆಗಬೇಕಿದೆ.

ಮಾಹಿತಿ ಕೃಪೆ: ಇಂಡಿಯಾಸ್ಪೆಂಡ್

Leave a comment

FOOT PRINT

Top