An unconventional News Portal.

ಮುಂಬೈ ಇಂಡಿಯನ್ಸ್ ಓನರ್ ನೀತಾ ಅಂಬಾನಿ: ಭರತನಾಟ್ಯದಿಂದ ಕಾರ್ಪೊರೇಟ್ ರಂಗಸ್ಥಳಕ್ಕೆ!

ಮುಂಬೈ ಇಂಡಿಯನ್ಸ್ ಓನರ್ ನೀತಾ ಅಂಬಾನಿ: ಭರತನಾಟ್ಯದಿಂದ ಕಾರ್ಪೊರೇಟ್ ರಂಗಸ್ಥಳಕ್ಕೆ!

ಆತ ರಿಲಾಯನ್ಸ್ ಜಿಯೋ ಟೆಲಿಕಾಂ ಕಂಪನಿಯಲ್ಲಿ ಟವರ್‌ ರಿಪೇರಿ ಮಾಡುವ ಸಾಮಾನ್ಯ ಉದ್ಯೋಗಿ. ಭಾನುವಾರ ಐಪಿಎಲ್ ಪಂದ್ಯಾವಳಿಯ ಕೊನೆಯ ಹಣಾಹಣಿಯ ರೋಚಕತೆಯನ್ನು ತನ್ನ ಪುಟ್ಟ ಮೊಬೈಲ್ ಪರದೆಯ ಮೇಲೆ ಆಸ್ವಾದಿಸುತ್ತಿದ್ದ ಆತ, “ಮುಂಬೈ ಗೆದ್ರೆ ಜಿಯೋ ಆಫರ್ ಮುಂದುವರಿಯಬಹುದು,” ಎಂಬ ಭರವಸೆಯನ್ನು ಇಟ್ಟುಕೊಂಡಿದ್ದ. ಆತನ ಆಶಯ ಹುಸಿ ಹೋಗಲಿಲ್ಲ. ಐಪಿಎಲ್ ಟೂರ್ನಿಯನ್ನು ಮುಂಬೈ ಇಂಡಿಯನ್ಸ್ ಜಯಗಳಿಸಿತು. ಇದರಿಂದ ಜಿಯೋ ಆಫರ್‌ ಅವಧಿ ಹೆಚ್ಚಾಗುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ಸಹಜವಾಗಿಯೇ ಇದು ತಂಡದ ಪ್ರೊಮೋಟರ್ಗಳಾದ ನೀತಾ ಅಂಬಾನಿ ಮತ್ತು ಇತರ ಪ್ರಾಯೋಜಕರಿಗೆ ಅತೀವ ಹರ್ಷವನ್ನು ತಂದುಕೊಟ್ಟಿತು. 

nita-ambani-2

ತಂಡವಾಗಿ ಮುಂಬೈ ಇಂಡಿಯನ್ಸ್ ಗೆ ಗೆಲುವು ಎಷ್ಟು ಅಗತ್ಯವಾಗಿತ್ತೊಗೊತ್ತಿಲ್ಲ; ಸದ್ಯಕ್ಕಂತೂ ಭಾರತೀಯ ಕ್ರಿಕೆಟ್ ಆಟಗಾರರು ದುಡ್ಡಿನ ಹೊಳೆಯಲ್ಲಿ ಈಜುತ್ತಿದ್ದು ಸೋಲು ಗೆಲುವಿನ ಅಂತರವನ್ನೇ ಮರೆತು ಬಿಟ್ಟಿದ್ದಾರೆ. ಆದರೆ ಲೀಗ್ ಕ್ರೀಡೆ ಉದ್ಯಮಿಗಳಿಗೆ ಪ್ರತಿಷ್ಠೆಯ ಪ್ರಶ್ನೆ. ಅದಕ್ಕೆಂದೇ ನೀರಿನಂತೆ ಹಣ ಸುರಿಯುತ್ತಾರೆ. ಗೆದ್ದಾಗ ಬೀಗುತ್ತಾರೆ; ಸೋತವರು ನಾನಾ ಕಾರಣಗಳಿಗಾಗಿ ನಷ್ಟವನ್ನು ಅನುಭವಿಸುತ್ತಾರೆ. ಈ ಸೋಲು ಮತ್ತು ಗೆಲುವಿನ ಉದ್ಯಮದ ನಡುವೆಯೇ, ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯನ ಲಿಪ್ ಲಾಕ್, ನೀತಾ ಅಂಬಾನಿ, ಪ್ರೀತಿ ಜಿಂಟಾ , ಶಿಲ್ಪಾ ಶೆಟ್ಟಿ ಮುಂತಾದವರ ಅನ್ಯೂಸುವಲ್ ಅಪ್ಪುಗೆಗಳು ಕಾಣ ಸಿಕ್ಕುವುದೇ ಈ ಲೀಗ್ ಪಂದ್ಯಾವಳಿಗಳ ಗೆಲುವಿನ ಉನ್ಮಾದದಲ್ಲಿ ಎಂಬುದು ವಿಶೇಷ. 

ಭಾನುವಾರ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸುತ್ತಿದ್ದಂತೆ ಆಟಗಾರರಿಗಿಂತ ಹೆಚ್ಚು ಸಂಭ್ರಮಿಸಿದವರು, ಅದರ ಓನರ್ ನೀತಾ ಅಂಬಾನಿ. ಒಂದು ರನ್ ಅಂತರದಲ್ಲಿ ಅವರ ತಂಡ ಜಯ ದಾಖಲಿಸುತ್ತಿದ್ದಂತೆ ಮಗನಿಗೆ ಮುತ್ತಿಟ್ಟು, ಆಟಗಾರರನ್ನು ಬಿಗಿ ದಪ್ಪಿ ತಮ್ಮ ಸಂಭ್ರಮವನ್ನು ಅವರು ವ್ಯಕ್ತಪಡಿಸಿದರು. ನೀತಾ ಅಂಬಾನಿ ಭಾರತದ ಕಾರ್ಪೊರೇಟ್ ಪ್ರಪಂಚದ ಮೊದಲ ಕುಟುಂಬ ಎಂದೇ ಗುರುತಿಸುವ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ.ಭಾರತದ ಅತ್ಯಂತ ಶ್ರೀಮಂತ ಕುಟುಂಬದ ಸದಸ್ಯೆಯಾಗಿ ನೀತಾ ಸಾಗಿ ಬಂದ ಹಾದಿಯೇ ಒಂದು ಕುತೂಹಲಕಾರಿ ಕತೆ. 

ಅವರು ಮುಂಬೈ ಇಂಡಿಯನ್ಸ್ ತಂಡದ ಓನರ್ ಜತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕಿ ಕೂಡ. ಜತೆಗೆ ರಿಲಾಯನ್ಸ್ ಫೌಂಡೇಷನ್ ಅಧ್ಯಕ್ಷೆಯೂ ಹೌದು. ಭಾರತದಿಂದ ಅಂತರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ ಸದಸ್ಯತ್ವ ಪಡೆದ ಏಕೈಕ ಭಾರತೀಯ ಮಹಿಳೆ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಅವರಿಗಿದೆ. ನೀತಾ ದಲಾಲ್‌ ಆಗಿದ್ದ ಅವರು ನೀತಾ ಅಂಬಾನಿ ಆದ ನಂತರವೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವ ಕೆಲಸ ಮಾಡುತ್ತಿದ್ದರು. ಇವತ್ತು ಬೆಳಗ್ಗೆ ಎದ್ದ ಕೂಡಲೇ ಮೂರು ಲಕ್ಷದ ಗ್ರೀನ್ ಟೀ ಕುಡಿಯುತ್ತಾರೆ ಎಂಬಲ್ಲಿಂದ ಹಿಡಿದು, ನೀತಾ ಬಗ್ಗೆ ಅನೇಕ ಕತೆಗಳು ಚಾಲ್ತಿಯಲ್ಲಿವೆ.   

1963ರಲ್ಲಿ ಹುಟ್ಟಿದ ನೀತಾ ಅಂಬಾನಿಗೆ ಸದ್ಯ 53 ವರ್ಷ ವಯಸ್ಸು. 1984ರಲ್ಲಿ ಅವರು ಮುಖೇಶ್ ಅಂಬಾನಿಯನ್ನು ವರಿಸಿದರುಮುಂಬೈ ಸಾಂತ್ರಕೂಜ್ ಪ್ರದೇಶ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನೀತಾ ಆಗಿನ್ನೂ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು.ಸಾಂಪ್ರದಾಯಿಕ ನೃತ್ಯ ಭರತನಾಟ್ಯದಲ್ಲಿ ಪಳಗಿದ್ದ ನೀತಾ ಅಂಬಾನಿಯ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಈ ಕಾರ್ಯಕ್ರಮ ವೀಕ್ಷಣೆಗೆ ಬಂದವರಲ್ಲಿ ಅಂಬಾನಿ ಕುಟುಂಬದವರೊಬ್ಬರೂ ಇದ್ದರು; ಅವರು ಮತ್ಯಾರೂ ಅಲ್ಲ ಮುಖೇಶ್ ಅಂಬಾನಿ ತಾಯಿ ಕೋಕಿಲಾ ಬೆನ್.

ಮರು ದಿನ ನೀತಾ ಅಂಬಾನಿ ಮನೆಗೆ ರೆಯೊಂದು ಬಂತು. ಅತ್ತಲಿಂದ “ನಾನು ಧೀರೂಬಾಯಿ ಅಂಬಾನಿ.. ನೀತಾ ದಲಾಲ್ ಜತೆ ಮಾತನಾಡಬಹುದಾ?”ಎಂದಿತು ಆ ಧ್ವನಿ. “ಜೋಕ್ ಬೇಡ ನೀವು ಯಾರೂ ಹೇಳಿ” ಎಂದರು ಫೋನೆತ್ತಿಕೊಂಡ ನೀತಾ. ಮರುಕ್ಷಣವೇ ವಾಪಾಸ್ ಕುಕ್ಕಿದ್ದರು. ಮತ್ತದೇ ಪುನಾರಾವರ್ತನೆ.. ಈ ಬಾರಿ ಸಿಟ್ಟಾದ ನೀತಾ, “ನೀವು ಧೀರೂಬಾಯಿಯಾದರೆ; ನಾನು ಎಲಿಜಬೆತ್ ಟೇಲರ್,” ಎಂದು ಹೇಳಿ ಫೋನಿಟ್ಟರು. ಹೀಗೆ ಪರಸ್ಪರ ಅಪರಿಚಿತವಾಗಿದ್ದ ಧ್ವನಿಗಳ ನಡುವೆ ಸಂಭಾಷಣೆ ನಡೆದು ಕೊನೆಗೂ ಅತ್ತಲಿಂದ ಇರುವುದು ಧೀರೂಬಾಯಿ ಅಂಬಾನಿಯೇ ಎಂಬುದು ಗೊತ್ತಾಯಿತು.

ಧೀರೂಬಾಯಿ ಅಂಬಾನಿ ಆಕೆಯನ್ನು ತಮ್ಮ ಕಚೇರಿಗೆ ಬರ ಹೇಳಿದರು. ಅಲ್ಲಿ ಅವರ ಭಾವಿ ಸೊಸೆಯನ್ನು ಭೇಟಿ ಮಾಡಿದರು. ಸ್ನೇಹಿತೆ ಜತೆ ತೆರಳಿದ್ದ ನೀತಾ ಉದ್ಯಮಿಯಾಗಿ ಬೆಳೆದಿದ್ದ ಸೀನಿಯರ್ ಅಂಬಾನಿ ಜತೆ ಅಳುಕಿನಿಂದಲೇ ಮಾತನಾಡಿದರು. ಹಾಗಂತ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

1997ರ ಸುಮಾರಿಗೆ ಅಧಿಕೃತವಾಗಿ ಕಾರ್ಪೊರೇಟ್ ಪ್ರಪಂಚದ ಹೊಣೆಗಾರಿಕೆಯನ್ನು ಅವರು ಹೊತ್ತುಕೊಂಡರು. ಜಾಮ್‌ನಗರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ನೌಕರರಿಗಾಗಿ ಟೌನ್‌ಶಿಪ್ ನಿರ್ಮಾಣದ ಉಸ್ತುವಾರಿಕೆಯನ್ನು ನೀತಾ ನೋಡಿಕೊಂಡರು. ಅದರ ಜತೆಗೆ, ಜಗತ್ತಿನ ಅತ್ಯಂತ ದೊಡ್ಡ ಬಂಗಲೆಯನ್ನು ಮುಂಬೈನ ಕೊಳೆಗೇರಿ ಪಕ್ಕದಲ್ಲಿಯೇ ನೀತಾ ಕುಟುಂಬ ಸ್ವಂತಕ್ಕಾಗಿ ನಿರ್ಮಿಸಿಕೊಂಡಿತ್ತು. ಇದರ ಬಹುತೇಕ ಕೆಲಸವನ್ನೂ ನೋಡಿಕೊಂಡವರು ನೀತಾ ಎಂದು ವರದಿಗಳು ಹೇಳುತ್ತವೆ.

ಭಾರತದಲ್ಲಿ ಫೂಟ್ಬಾಲ್‌ನ್ನು ತಳಮಟ್ಟದಿಂದ ಕಟ್ಟುವ ಕೆಲಸ ಆರಂಭವಾಗಿದೆ. ಇದರ ಹಿಂದಿರುವುದು ಕೂಡ ನೀತಾ ಅಂಬಾನಿ. ಮಕ್ಕಳ ದಿನಾಚರಣೆ ಸಮಯದಲ್ಲಿ ಈ ಕುರಿತು ಮಾತನಾಡಿದ ಅವರು, “ಕ್ರೀಡೆಯಿಂದ ದೇಶದ ವಿಕಾಸ ಸಾಧ್ಯ,” ಎಂದು ನಂಬಿಕೊಂಡಿದ್ದಾರೆ.

ಈ ದೇಶದ ಬ್ಯಾಂಕ್‌ಗಳಿಂದ ದೊಡ್ಡ ಮೊತ್ತ ಸಾಲ ಪಡೆದುಕೊಂಡು ಮರಳಿ ನೀಡದ ಕಾರ್ಪೊರೇಟ್ ಕುಟುಂಬಗಳ ಪೈಕಿ ನೀತಾ ಅಂಬಾನಿ ಕುಟುಂಬ ಮೊದಲ ಸ್ಥಾನದಲ್ಲಿದೆ. ಅದೇ ವೇಳೆ, ಅತಿ ದೊಡ್ಡ ಉದ್ಯಮದ ಒಡೆತನವೂ ಅವರ ಕುಟುಂಬದ ಕೈಲಿದೆ. ಒಂದು ಕಡೆ ಅಪಾರವಾದ ದುಡ್ಡು, ಇನ್ನೊಂದೆಡೆ ಅದನ್ನು ಕ್ರೀಡಾ ಉದ್ಯಮದ ಮೂಲಕ ಪ್ರತಿಷ್ಠೆಗಾಗಿ ಖರ್ಚು ಮಾಡುವ ಹೊಣೆಯನ್ನು ಹೊತ್ತುಕೊಂಡಿರುವ ನೀತಾ ಸದ್ಯ ಯಶಸ್ವಿ ಐಪಿಎಲ್ ತಂಡದ ಓನರ್. ಮುಂಬೈ ಇಂಡಿಯನ್ಸ್ ತಂಡ ಹತ್ತು ವರ್ಷ ಪೂರೈಸಿದ ಸಮಯದಲ್ಲಿ ಅವರು, ಕರ್ನಾಟಕದ ಮೂಲದ ಕುಂಬ್ಳೆ ಹಾಗೂ ಸಚಿನ್ ತೆಂಡೂಲ್ಕರ್‌ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಹೇಳಿದ್ದರು. ಇದೀಗ ಅವರ ಜಾಹೀರಾತುದಾರರು ನೀತಾ ಅವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ. ಐಪಿಎಲ್ ಅಭಿಮಾನಿಗಳ ಪಾಲಿಗೆ ಸೋಲು, ಗೆಲುವಿನ ವಿಚಾರ ಮಾತ್ರವಾದರೆ, ನೀತಾ ತರದವರ ಪಾಲಿಗೆ ಅದು ಪ್ರತಿಷ್ಠೆಯ ಪ್ರಶ್ನೆ ಕೂಡ.

Leave a comment

FOOT PRINT

Top