An unconventional News Portal.

ಬೆಚ್ಚಿ ಬೀಳಿಸಿದ ‘ವಾನ್ನಾಕ್ರೈ’ ಸೈಬರ್ ದಾಳಿ ಮತ್ತು ಬದಲಾದ ಮೂರನೇ ಮಹಾಯುದ್ಧದ ಸ್ವರೂಪ

ಬೆಚ್ಚಿ ಬೀಳಿಸಿದ ‘ವಾನ್ನಾಕ್ರೈ’ ಸೈಬರ್ ದಾಳಿ ಮತ್ತು ಬದಲಾದ ಮೂರನೇ ಮಹಾಯುದ್ಧದ ಸ್ವರೂಪ

ವಿಶ್ವದ ಹಲವು ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಗಡಿಯಲ್ಲಿ ಚಕಮಕಿಗಳು ನಿರಂತರವಾಗಿವೆ. ಎರಡೂ ದೇಶಗಳ ಮಧ್ಯೆ ಯಾವ ಕ್ಷಣದಲ್ಲಿ ಬೇಕಾದರೂ ಯುದ್ಧ ಸಂಭವಿಸಬಹುದು ಎಂಬ ವಾತಾವರಣವೊಂದು ನಿರ್ಮಾಣವಾಗಿದೆ. ಇದೇ ರೀತಿ ಆಫ್ರಿಕಾ, ದಕ್ಷಿಣ ಅಮೆರಿಕಾ ಖಂಡದ ಕೆಲವು ದೇಶಗಳಲ್ಲಿ ಆಂತರಿಕ ಕಲಹಗಳು ಬಿರುಸಾಗಿವೆ. ಅತ್ತ ಸಿರಿಯಾದ ಸಂಘರ್ಷ ವಿಶ್ವವ್ಯಾಪಿ ಹರಡಿಕೊಂಡಿದೆ. ಇದೇ ವಿಚಾರಕ್ಕೆ ಮೂರನೇ ಮಹಾಯುದ್ಧ ನಡೆಯಲಿದೆ ಎಂಬ ಚರ್ಚೆಗಳು ಹುಟ್ಟಿಕೊಂಡೇ ವರ್ಷಗಳು ಕಳೆದಿವೆ. ತಣ್ಣಗಾಗಿದ್ದ ಈ ಮೂರನೇ ಮಹಾಯುದ್ಧಕ್ಕೆ ಇತ್ತೀಚೆಗೆ ತುಪ್ಪ ಸುರಿದಿದ್ದು ಉತ್ತರ ಕೊರಿಯಾ. ತಂದೆಯ ಪುಣ್ಯತಿಥಿಯ ನೆಪದಲ್ಲಿ ಅಲ್ಲಿನ ಸರ್ವಾಧಿಕಾರಿ ನಡೆಸಿದ ಮಿಲಿಟರಿ ಪ್ರದರ್ಶನಗಳು, ದಿನಕ್ಕೊಂದು ಮಿಸೈಲ್ ಗಳ ಪರೀಕ್ಷಾರ್ಥ ಉಡಾವಣೆಗಳೆಲ್ಲಾ ಇನ್ನೇನು ಮೂರನೇ ಮಾಹಾಯುದ್ಧ ಸಮೀಪಿಸಿದೆ ಎಂಬ ಭೀತಿಯನ್ನು ಸೃಷ್ಟಿಸಿದೆ.

ಹೀಗೆ ಜಗತ್ತೇ ನೇರಾ ನೇರಾ ಕೊಚ್ಚಿ ಕೊಲ್ಲುವ ಯುದ್ಧದ ಮಾತನಾಡುತ್ತಿದ್ದರೆ, ಇದಕ್ಕೆಲ್ಲಾ ಬ್ರೇಕ್ ಹಾಕಿದ್ದು ವಾನ್ನಾಕ್ರೈ ಎಂಬ ರಾನ್ಸಮ್ವೇರ್ ದಾಳಿ; ಅರ್ಥಾತ್ ಸೈಬರ್ ದಾಳಿ. ಇಡೀ ವಿಶ್ವವೇ ಈ ಸೈಬರ್ ದಾಳಿಗೆ ಪತರಗುಟ್ಟಿ ಹೋಗಿದೆ. ಪ್ರಪಂಚದ 150 ಕ್ಕೂ ಹೆಚ್ಚು ರಾಷ್ಟ್ರಗಳ 3,00,000 ಕ್ಕೂ ಅಧಿಕ ಕಂಪ್ಯೂಟರ್ ಗಳು ವಾನ್ನಾಕ್ರೈ ವೈರಸ್ ದಾಳಿಗೆ ತುತ್ತಾಗಿವೆ. ದೇಶದ ವಿವಿಧ ಕಂಪನಿ, ಬ್ಯಾಂಕ್, ಆಸ್ಪತ್ರೆ ಮುಂತಾದವುಗಳಿಗೆ ಸೇರಿದ ಮಾಹಿತಿ ಕದ್ದು, (ಎನ್ಕ್ರಿಪ್ಟ್ ಮಾಡಿ ಅದನ್ನು ಮತ್ತೆ ಡಿಕ್ರಿಪ್ಟ್ ಮಾಡಲು) ಅದನ್ನು ವಾಪಸ್ ನೀಡಲು ಹಣ ಕೊಡಿ ಎಂದು ಬೇಡಿಕೆ ಮುಂದಿಡಲಾಗಿದೆ. ಹೀಗೆ ಸೈಬರ್ ದಾಳಿ ಹೇಗಿರುತ್ತದೆ ಎಂಬ ಚಿತ್ರಣ ಲಭ್ಯವಾಗುತ್ತಿದೆ.

ವಿಂಡೋಸ್ ಎಕ್ಸ್ಪಿ ಮತ್ತು ಅದಕ್ಕಿಂತ ಹಳೆಯ ಕಾರ್ಯಾಚರಣೆ ವ್ಯವಸ್ಥೆ (ಒಎಸ್) ಹೊಂದಿರುವ ಕಂಪ್ಯೂಟರ್ ಗಳ ಮೇಲೆ ವಾನ್ನಾಕ್ರೈ ವಕ್ರದೃಷ್ಠಿ ಬಿದ್ದಿದೆ. ಇಂಥಹದ್ದೊಂದು ದಾಳಿ ಹಿಂದೆ ಅಮೆರಿಕಾ ಕೈವಾಡ ಇದೆ ಎನ್ನಲಾಗುತ್ತಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಈ ವಾನ್ನಾಕ್ರೈ ಸಾಫ್ಟ್ ವೇರ್ ಮಾಡಿದ್ದೇ ಅಮೆರಿಕಾದ ಭದ್ರತಾ ಸಂಸ್ಥೆ ಎನ್ಎಸ್ಎಎಂದು ಪ್ರಖ್ಯಾತ ವಿಷಲ್ ಬ್ಲೋವರ್ ಎಡ್ವರ್ಡ್ ಸ್ನೂಡೆನ್ ಆದಿಯಾಗಿ ಹಲವರು ಹೇಳಿದ್ದಾರೆ. ಜತೆಗೆ ಇಂಥಹದ್ದೊಂದು ಲೋಪವನ್ನು ಬೇಕೆಂದೇ ವಿಂಡೋಸ್ ಸರಿ ಮಾಡಿರಲಿಲ್ಲ ಎಂದೂ ಆರೋಪಿಸಿದ್ದಾರೆ. ಆದರೆ ಈ ಸಾಫ್ಟ್ ವೇರ್ ಹ್ಯಾಕರ್ಸ್ ಕೈಗೆ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ. ಸದ್ಯ ಉತ್ತರ ಕೊರಿಯಾ ಈ ಕೃತ್ಯ ಮಾಡಿದೆ ಎಂದು ಹೇಳಲಾಗುತ್ತಿದೆ. ಹೀಗಿದ್ದೂ ಇದಕ್ಕೆ ನಿಖರ ಸಾಕ್ಷ್ಯಗಳು ಮಾತ್ರ ಸಿಕ್ಕಿಲ್ಲ. ಯಾವ ದೇಶ ಈ ದಾಳಿ ಮಾಡಿದೆ ಎಂಬುದು ಇನ್ನು ನಿಗೂಢವಾಗಿಯೇ ಉಳಿದುಕೊಂಡಿದೆ. ಅಗಾಧ ಮಿಲಿಟರಿ ಶಕ್ತಿ ಹೊಂದಿರುವ, ತಂತ್ರಜ್ಞಾನದಲ್ಲಿ ಮುಂದುವರೆದಿರುವ ದೇಶಗಳೇ ವಾನ್ನಾಕ್ರೈ ದಾಳಿಗೆ ಬೆಚ್ಚಿ ಬಿದ್ದಿವೆ ಎಂಬುದು ಮಾತ್ರ ವಾಸ್ತವ.

1988ರಿಂದ ಇಲ್ಲಿಯ ತನಕ ವಿವಿಧ ದೇಶಗಳ ಮೇಲೆ ಸೈಬರ್ ದಾಳಿ ನಡೆದಿದೆ. ಹಲವು ದೇಶಗಳು ಯುದ್ಧಕ್ಕೂ ಮೊದಲು ಹ್ಯಾಕರ್ ಗಳ ಮೂಲಕ ಮಾಹಿತಿ ಕದಿಯಲು ಪ್ರಯತ್ನ ನಡೆಸಿದ್ದಿದೆ. ಹ್ಯಾಕರ್ ಗಳು ಎಂದ ತಕ್ಷಣ ವಿವಿಧ ದೇಶಗಳು ಚೀನಾದತ್ತ ಕೈ ತೋರಿಸುತ್ತವೆ. ಆದರೆ, ವಾನ್ನಾಕ್ರೈ ಹಿಂದೆ ಯಾವ ದೇಶವಿದೆ? ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

(ಕೃಪೆ: ಬೀಪಿಂಗ್ ಕಂಪ್ಯೂಟರ್)

(ಕೃಪೆ: ಬೀಪಿಂಗ್ ಕಂಪ್ಯೂಟರ್)

ಏನಿದು ಸೈಬರ್ ದಾಳಿ?

ಉದ್ದೇಶ ಪೂರ್ವಕವಾಗಿ ಒಂದು ದೇಶ ಅಥವಾ ಸಂಸ್ಥೆಗೆ ಹಾನಿ ಮಾಡುವುದಕ್ಕಾಗಿ ಕಂಪ್ಯೂಟರ್ ಮೂಲಕ ಸೈಬರ್ ದಾಳಿ ಮಾಡಲಾಗುತ್ತದೆ. ರಕ್ಷಣೆ, ಆರ್ಥಿಕ ವಿಚಾರದಲ್ಲಿ ದೇಶಕ್ಕೆ ಹಾನಿ ಮಾಡಲು ತಂತ್ರಜ್ಞರ ತಂಡವೇ ಇದೆ. ಎಕೆ 47, ಪರಮಾಣು ಬಾಂಬ್ ಮುಂತಾದ ಯಾವುದೇ ಆಯುಧಗಳಿಲ್ಲದೇ ಕಂಪ್ಯೂಟರ್ ಮುಂದೆ ಕುಳಿತು ಅವರು ಯುದ್ಧ ಸಾರುತ್ತಾರೆ.

ಬದಲಾದ ಹ್ಯಾಕಿಂಗ್ ಸ್ವರೂಪ

1988ರಿಂದಲೂ ಹ್ಯಾಕರ್ ಗಳು ಸಕ್ರಿಯರಾಗಿದ್ದಾರೆ ಎನ್ನುತ್ತವೆ ಒಂದಿಷ್ಟು ಮಾಹಿತಿಗಳು. ಕಂಪ್ಯೂಟರ್ ನಲ್ಲಿರುವ ವೈಯಕ್ತಿಕ ಮಾಹಿತಿಗಳಿಗೆ ಖನ್ನ ಹಾಕುವುದು, ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಹಣ ಕದಿಯುವುದು ಈ ಮೊದಲಿದ್ದ ಮಾದರಿ. ಆದರೆ, 2008ರ ಬಳಿಕ ಸೈಬರ್ ದಾಳಿಗಳ ಸ್ವರೂಪ ಬದಲಾಗಿದೆ.

ಸದ್ಯ, ಸರ್ಕಾರಿ ಸಂಸ್ಥೆಗಳ ವೆಬ್ ಸೈಟ್, ಕಚೇರಿಗಳ ಕಂಪ್ಯೂಟರ್ ಗಳ ಮೇಲೆ ದಾಳಿ ನಡೆಯುತ್ತಿದೆ. 2008ರ ಆಗಸ್ಟ್ ನಲ್ಲಿ ನಾಸಾದ ಅಂತರಾಷ್ಟ್ರೀಯ ಸೆಕ್ಷನ್ ಲ್ಯಾಪ್ ಟಾಪ್ ಗಳಲ್ಲಿ ವೈರಸ್ ಕಂಡು ಬಂದಿತ್ತು. ಇದಾಗಿ ಮೂರು ತಿಂಗಳ ನಂತರ ರಷ್ಯಾದ ಹ್ಯಾಕರ್ಸ್ ಪೆಂಟಗಾನ್ (ಅಮೆರಿಕಾ ಮಿಲಿಟರಿಯ ಕೇಂದ್ರ ಕಚೇರಿ) ನಲ್ಲಿನ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿ ಮಾಹಿತಿ ಕದ್ದಿದ್ದರು.

ರಕ್ಷಣಾ ವಿಭಾಗದ ನಂತರ ಹ್ಯಾಕರ್ಸ್ ಆರ್ಥಿಕ ಕ್ಷೇತ್ರದತ್ತ ಬಂದರು. 2008ರ ಡಿಸೆಂಬರ್ 25ರಂದು ಭಾರತದ ಸ್ಟೇಟ್ ಬ್ಯಾಂಕ್ ಇಂಡಿಯಾದ ವೆಬ್ ಸೈಟ್ ಮೇಲೆ ದಾಳಿ ನಡೆದಿತ್ತು. ಪಾಕಿಸ್ತಾನದಲ್ಲಿ ಕುಳಿತು ಹ್ಯಾಕರ್ಸ್ ಈ ದಾಳಿ ಮಾಡಿದ್ದರು. ಯಾವುದೇ ಮಾಹಿತಿ ನಾಶವಾಗಿರಲಿಲ್ಲ. ಆದರೆ, ವೆಬ್ ಸೈಟನ್ನು ಕೆಲವು ದಿನಗಳ ಮಟ್ಟಿಗೆ ಮುಚ್ಚಿ ಅದನ್ನು ಸರಿಪಡಿಸಲಾಯಿತು.

ಉದ್ದೇಶಪೂರ್ವಕ ದಾಳಿಗಳು

ಎಲ್ಲೋ ಕುಳಿತ ಹ್ಯಾಕರ್ಸ್ ಒಂದು ದೇಶದ ಮೇಲೆ ದಾಳಿ ನಡೆಸುತ್ತಾರೆ ಎಂಬುದು ಎಷ್ಟು ಸತ್ಯವೋ, ಉದ್ದೇಶಪೂರ್ವಕವಾಗಿ ಇಂತಹ ದಾಳಿಗಳನ್ನು ನಡೆಸಲಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಇದಕ್ಕೆ ಸಾಕಷ್ಟು ಸಾಕ್ಷಿಗಳು ದೊರಕಿವೆ. 1988ರಲ್ಲಿ ಅಮೆರಿಕಾ ಸರ್ಬಿಯಾದ ಏರ್ ಟ್ರಾಫಿಕ್ ಕಂಟ್ರೋಲ್ ಮೇಲೆ ದಾಳಿ ಮಾಡಿ, ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಉತ್ತರ ಯುರೋಪ್ ನ ಎಷ್ಟೋನಿಯಾ ಎಂಬ ದೇಶದ ಮೇಲೆ ರಷ್ಯಾ ಸೈಬರ್ ದಾಳಿ ನಡೆಸಿತ್ತು. ಎರಡು ದೇಶಗಳ ನಡುವಿನ ಸಂಬಂಧ ಹಾಳು ಮಾಡವುದು ಈ ಉದ್ದೇಶ ಪೂರ್ವಕ ದಾಳಿಯ ಹಿಂದಿದ್ದ ಉದ್ದೇಶವಾಗಿತ್ತು.

2007ರಲ್ಲಿ ಯಾವುದೋ ದೇಶದ ಹ್ಯಾಕರ್ಸ್ ಅಮೆರಿಕದ ಮಿಲಿಟರಿಯ ರಹಸ್ಯ ಮಾಹಿತಿಗಳನ್ನು ಕದ್ದಿದ್ದರು. 2009ರಲ್ಲಿ ಗೋಸ್ಟ್ ನೆಟ್ ಹೆಸರಿನಲ್ಲಿ ಸುಮಾರು 100 ದೇಶಗಳ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಮಾಹಿತಿಯನ್ನು ಕದಿಯಲಾಗಿತ್ತು. ಈ ಸಮಯದಲ್ಲಿ ಎಲ್ಲಾ ದೇಶಗಳು ಚೀನಾದತ್ತ ಬೊಟ್ಟು ಮಾಡಿದ್ದವು. ಆದರೆ, ಅವತ್ತು ಚೀನಾ ಈ ಆರೋಪವನ್ನು ತಳ್ಳಿ ಹಾಕಿತ್ತು.

ಭಾರತದಲ್ಲಿ ದಾಳಿ ತಡೆಯುವುದು ಹೇಗೆ?

ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆ ಹ್ಯಾಕರ್ ಗಳ ದಾಳಿ ತಡೆಯಲು 2004ರಲ್ಲಿ ಇಂಡಿಯನ್ ಕಂಪ್ಯೂಟರ್ ಎರ್ಮಜೆನ್ಸಿ ರೆಸ್ಪಾನ್ಸ್ ಟೀಮ್ ಸ್ಥಾಪನೆ ಮಾಡಿದೆ. ಇದರ ಅಡಿಯಲ್ಲೇ 2011ರಲ್ಲಿ National Critical Information Infrastructure Protection Centre ಎಂಬ ಉಪ ವಿಭಾಗವನ್ನು ಸ್ಥಾಪನೆ ಮಾಡಲಾಗಿದೆ. ಬಾಹ್ಯಾಕಾಶ, ಇಂಧನ, ಸಾರಿಗೆ, ಬ್ಯಾಂಕಿಂಗ್, ಟೆಲಿಕಾಂ, ಡಿಫೆನ್ಸ್ ಮುಂತಾದ ಸಂಸ್ಥೆಗಳ ಮೇಲೆ ದಾಳಿಯಾಗದಂತೆ ಈ ಸಂಸ್ಥೆ ಉಸ್ತುವಾರಿ ನೋಡಿಕೊಳ್ಳುತ್ತದೆ.

ವಾನ್ನಾಕ್ರೈ ಕೆಲಸ ಮಾಡುವ ಮಾದರಿ (ಕೃಪೆ: ಗ್ರಾಝ್ಪ್ ಡಾಟ್ ಕಾಂ)

ವಾನ್ನಾಕ್ರೈ ಕೆಲಸ ಮಾಡುವ ಮಾದರಿ (ಕೃಪೆ: ಗ್ರಾಝ್ಪ್ ಡಾಟ್ ಕಾಂ)

ವಾನ್ನಾಕ್ರೈ ಮತ್ತು ಭವಿಷ್ಯದ ಅಪಾಯಗಳು

ವಿಂಡೋಸ್ ನಲ್ಲಿದ್ದ ಸಣ್ಣ ತಪ್ಪು (ಬಗ್) ‘ಎಂಎಸ್17-010′ ಬಳಸಿಕೊಂಡು ವಾನ್ನಾಕ್ರೈ ದಾಳಿ ನಡೆಸಲಾಗಿದೆ. ಇದೀಗ ವಿಂಡೋಸ್ ನಲ್ಲಿದ್ದ ಇದೇ ಲೋಪನ್ನು ಬಳಸಿಕೊಂಡು ಅಡಿಲ್ಕುಝ್ಎಂಬ ಮಾಲ್ವೇರ್ ಮೂಲಕ ಮತ್ತೊಂದು ಸೈಬರ್ ದಾಳಿ ಸದ್ದಿಲ್ಲದೇ ನಡೆದಿರುವುದು ಬೆಳಕಿಗೆ ಬಂದಿದೆ. ವಾನ್ನಾಕ್ರೈಗೂ ಮೊದಲೇ ನಡೆದ ಈ ದಾಳಿಯ ತೀವ್ರತೆ ವಾನ್ನಾಕ್ರೈ ದಾಳಿಗಿಂತಲೂ ಹೆಚ್ಚಾಗಿದೆ ಎಂಬ ಅಂಶವನ್ನು ಅಮೆರಿಕಾ ಮೂಲದ ಸೈಬರ್ ಭದ್ರತಾ ಸಂಸ್ಥೆ ಪ್ರೂಫ್ ಪಾಯಿಂಟ್ಹೇಳಿದೆ. ಅಡಿಲ್ಕುಝ್ಕಂಪ್ಯೂಟರ್ ಮೇಲೆ ದಾಳಿ ನಡೆಸಿ ಡಿಜಿಟಲ್ ಕರೆನ್ಸಿ ಅಥವಾ ಮೊನೆರೋಕ್ರಿಪ್ಟೋಕರೆನ್ಸಿಯನ್ನು ಸೃಷ್ಟಿಸುತ್ತವೆ. ಇಂಥಹದ್ದೊಂದು ಮೊನೆರೋಎಂಬ ಕ್ರಿಪ್ಟೋ ಕರೆನ್ಸಿ ಮಾಲ್ವೇರನ್ನು ಉತ್ತರ ಕೊರಿಯಾ ಮೂಲದ ಹ್ಯಾಕರ್ಸ್ 2014ರಲ್ಲಿ ಸೃಷ್ಠಿ ಮಾಡಿದ್ದರು. ಡ್ರಗ್ ಮಾರಾಟ, ಕ್ರೆಡಿಟ್ ಕಾರ್ಡುಗಳಿಂದ ಹಣ ಎಗರಿಸುವುದು, ನಕಲಿ ಗೂಡ್ಸ್ ಗಳನ್ನು ಸೃಷ್ಟಿ ಮಾಡಲು ಇವುಗಳನ್ನು ಬಳಸಲಾಗುತ್ತಿತ್ತು.

ಸರಳವಾಗಿ ಈ ದಾಳಿಯನ್ನು ವಿವರಸಬೇಕೆಂದರೆ ನಿಮ್ಮ ಕಂಪ್ಯೂಟರ್ ಅಥವಾ ಸರ್ವರ್ ಮೇಲೆ ದಾಳಿ ನಡೆಸಿ ಅಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಸಾಫ್ಟ್ ವೇರ್ ಗಳ ಮೇಲೆ ತಮ್ಮ ಹ್ಯಾಕಿಂಗ್ ಚಳಕ ತೋರಿಸಲಾಗುತ್ತದೆ. ಮತ್ತು ಅವರಿಗೆ ಬೇಕಾದ ಹಣವನ್ನು ಅದೇ ಸಾಫ್ಟ್ ವೇರ್ ನಿಂದ ಗಳಿಸಿಕೊಳ್ಳುತ್ತಾರೆ.

ಆದರೆ ಇಂಥಹದ್ದೊಂದು ಹಣ ಮಾಡುವ ಉದ್ದೇಶವೇ ವಾನ್ನಾಕ್ರೈ ರಾನ್ಸಮ್ವೇರ್ದಾಳಿಯ ಮೂಲ ಉದ್ದೇಶವಾಗಿರಲಿಕ್ಕಿಲ್ಲ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಅವರು ನೀಡುವ ಕಾರಣ ವಾನ್ನಾಕ್ರೈಗಿಂತ ಕಡಿಮೆ ತೀವ್ರತೆಯ ದಾಳಿ ನಡೆಸಿ ಹೆಚ್ಚು ಹಣ ಸಂಗ್ರಹಿಸಲಾಗಿದೆ. ಮತ್ತು ಈ ರೀತಿ ಕಂಪ್ಯೂಟರ್ ಹ್ಯಾಕ್ ಮಾಡಿ ಹಣ ಮಾಡುವ ದಂಧೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಎಲ್ಲಾ ದೃಷ್ಠಿಕೋನಗಳಿಂದ ಹಣ ಗಳಿಸುವುದೊಂದೇ ವಾನ್ನಾಕ್ರೈ ದಾಳಿಯ ಗುರಿಯಲ್ಲ ಎಂಬುದು ಅವರ ಅಭಿಮತ.

ಇದರ ಬೆನ್ನಿಗೆ ವಾನ್ನಾಕ್ರೈಸೈಬರ್ ದಾಳಿಯನ್ನು ಮೀರಿಸುವ ಮತ್ತಷ್ಟು ದಾಳಿಗಳು ಮುಂದಿನ ದಿನಗಳಲ್ಲಿ ನಡೆಯಲಿವೆ. ಇದಕ್ಕೆ ಬೇಕಾದ ಸಿದ್ದತೆಗಳು ಜಾರಿಯಲ್ಲಿವೆ ಎಂದು ರಷ್ಯಾದ ಪ್ರಮುಖ ಮಾಧ್ಯಮ ರಷ್ಯಾ ಟುಡೇವರದಿ ಮಾಡಿದೆ. ಸದ್ಯಕ್ಕೆ ಒಂದಂತೂ ಸತ್ಯ ವಾನ್ನಾಕ್ರೈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಬಯಲಾಗಿಲ್ಲ. ಹಾಗಾಗಿ ಇವರ ಉದ್ದೇಶಗಳೇನು ಎಂಬುದನ್ನು ಅರ್ಥಮಾಡಿಕೊಳ್ಳುವುದೂ ಕಷ್ಟ.

ಇದೇ ಸಂದರ್ಭದಲ್ಲಿ ವಾನ್ನಾಕ್ರೈ ದಾಳಿಯ ಬೆನ್ನಿಗೆ ಹೇಳಿಕೆ ನೀಡಿರುವ ಆಸ್ಟ್ರೇಲಿಯಾದ Charles Sturt University (CSU)ಯ ಸಹಾಯಕ ಪ್ರಾಧ್ಯಾಪಕ ತನ್ವೀರ್ ಜಿಯಾ, ‘ವಾನ್ನಾಕ್ರೈ ವೈರಸ್ ದಾಳಿ ಮುಂದಿನ ಜಾಗತಿಕ ಯುದ್ಧದ ಸ್ವರೂಪವನ್ನು ಸ್ಪಷ್ಟಪಡಿಸಿದೆ’ ಎಂದು ಹೇಳಿದ್ದಾರೆ. ಹೌದು, ಮುಂದಿನ ಮಹಾಯುದ್ಧ ನಡೆದರೆ ಅದರಲ್ಲಿ ಸೈಬರ್ ದಾಳಿ ಸೇರಿರುತ್ತದೆ ಎಂಬುದನ್ನು ಇಂದು ಎಲ್ಲರೂ ಒಪ್ಪಲೇಬೇಕಾಗಿದೆ.

Leave a comment

FOOT PRINT

Top