An unconventional News Portal.

ಜಾಗತಿಕ ಸೈಬರ್ ದಾಳಿಗೆ ತಡೆ ಹಾಕಿದ 22 ವರ್ಷದ ಮಾಲ್‌ವೇರ್ ಟೆಕ್ಕಿ ಮತ್ತು ಎಚ್ಚರಿಕೆ ಗಂಟೆ!

ಜಾಗತಿಕ ಸೈಬರ್ ದಾಳಿಗೆ ತಡೆ ಹಾಕಿದ 22 ವರ್ಷದ ಮಾಲ್‌ವೇರ್ ಟೆಕ್ಕಿ ಮತ್ತು ಎಚ್ಚರಿಕೆ ಗಂಟೆ!

ಇದು ಅಂತರ್ಜಾಲ ಜಗತ್ತಿನಲ್ಲಿ ತಲ್ಲಣಗಳನ್ನು ಹುಟ್ಟುಹಾಕಿರುವ ಬೆಳವಣಿಗೆ.

ಶುಕ್ರವಾರ ಇಂಗ್ಲೆಂಡ್‌ನ ಸರಕಾರಿ ಆಸ್ಪತ್ರೆಗಳಲ್ಲಿ ಶುರುವಾದ ಬೆಳವಣಿಗೆ ಸದ್ಯ 150 ದೇಶಗಳ ಸುಮಾರು 2 ಲಕ್ಷ ಕಂಪ್ಯೂಟರ್‌ಗಳಿಗೆ ವ್ಯಾಪಿಸಿದೆ. ವನ್ನಾಕ್ರೈ ಎಂದು ಕರೆಯುವ ವೈರಸ್‌, ವಿಂಡೋಸ್‌ 8 ಹಾಗೂ ಅದಕ್ಕಿಂತ ಹಳೆಯ ತಂತ್ರಾಂಶಗಳನ್ನು ಬಳಸುತ್ತಿದ್ದ ಕಂಪ್ಯೂಟರ್‌ಗಳನ್ನು ತನ್ನ ಹತೋಟಿಗೆ ತೆಗೆದುಕೊಂಡಿದೆ. ‘300 ಡಾಲರ್‌ ನೀಡಿದರೆ, ಕಂಪ್ಯೂಟರ್‌ನಲ್ಲಿ ಶೇಖರಿಸಿ ಇಟ್ಟುಕೊಂಡಿದ್ದ ಮಾಹಿತಿಯನ್ನು ಮರಳಿ ನೀಡಲಾಗುವುದು, ಇಲ್ಲದಿದ್ದರೆ ಅಳಸಿ ಹಾಕಲಾಗುವುದು’ ಎಂದು ಹ್ಯಾಕರ್‌ಗಳು ಎಚ್ಚರಿಕೆ ನೀಡುತ್ತಿದ್ದಾರೆ. ಹಣ ಪಾವತಿಗೆ ಬಿಟ್‌ ಕಾಯಿನ್ ಎಂದು ಕರೆಯುವ ಅಂತರ್ಜಾಲದಲ್ಲಿ ಮಾತ್ರವೇ ಮಾನ್ಯತೆ ಪಡೆದಿರುವ ಕರೆನ್ಸಿಯನ್ನು ಬಳಸುವಂತೆ ತಿಳಿಸಲಾಗಿದೆ.

ಇದೊಂದು ರೀತಿಯ ಅಂತರ್ಜಾಲದ ವಸೂಲಾತಿ ಕ್ರಿಯೆ. ಹೀಗಾಗಿಯೇ, ಇದಕ್ಕೆ ಬಳಿಸಿರುವ ವೈರಸ್‌ಗೆ ರ್ಯಾನ್‌ಸಮ್‌ವೇರ್ (Ransomware) ಎಂದೂ ಕರೆಯಲಾಗುತ್ತಿದೆ. ಸದ್ಯ ಹ್ಯಾಕರ್‌ಗಳು ಇಟ್ಟಿರುವ ಹಾವಳಿ ಎಷ್ಟರ ಮಟ್ಟಿಗೆ ಪ್ರಬಲವಾಗಿದೆ ಎಂದರೆ, ಜಗತ್ತಿನ್ಯಾದ್ಯಂತ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಆಸ್ಪತ್ರೆಗಳಲ್ಲಿ ಅಸುರಕ್ಷತೆಯ ಭಾವ ಆವರಿಸಿದೆ.

ಸದ್ಯ ಭಾರತದಲ್ಲಿ ಬ್ಯಾಂಕ್‌ಗಳು ತಮ್ಮ ಆನ್‌ಲೈನ್‌ ವಹಿವಾಟುಗಳನ್ನು ಹೆಚ್ಚು ಕಡಿಮೆ ಸ್ಥಗಿತಗೊಳಿಸಿವೆ ಎಂಬ ಮಾಹಿತಿ ಇದೆ. ಸೋಮವಾರ ಮುಂಜಾನೆಯಿಂದಲೇ ಬ್ಯಾಂಕ್‌ಗಳನ್ನು ಆನ್‌ಲೈನ್ ಮೂಲಕ ಹಣದ ವಹಿವಾಟುಗಳಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ.

ಶುರುವಾಗಿದ್ದು ಹೀಗೆ:

ಜಗತ್ತಿನ ಅಂತರ್ಜಾಲ ಲೋಕದಲ್ಲಿ ತಲ್ಲಣ ಸೃಷ್ಟಿಯಾಗುತ್ತಿದ್ದಂತೆ ಮೈಕ್ರೋಸಾಫ್ಟ್ ಸಂಸ್ಥೆ ನೀಡಿರುವ ಹೇಳಿಕೆಯಲ್ಲಿ ಅಮೆರಿಕಾದ ‘ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ’ಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ.

ಮೈಕ್ರೋಸಾಫ್ಟ್ ಸಂಸ್ಥೆಯ ಹಳೆಯ ತಂತ್ರಾಂಶಗಳಲ್ಲಿ ಇಂತಹದೊಂದು ನ್ಯೂನತೆ ಇತ್ತು ಎಂಬುದನ್ನು ಎನ್‌ಎಸ್‌ಎಗೆ ಮೊದಲೇ ಗೊತ್ತಿತ್ತು. ಆದರೆ ಅದನ್ನು ಮೈಕ್ರೋಸಾಫ್ಟ್‌ಗೆ ತಿಳಿಸದೇ ಇದ್ದದ್ದು ಸಮಸ್ಯೆಯ ಮೂಲ ಎಂದು ಅದು ಹೇಳಿದೆ. ಜತೆಗೆ, ವನ್ನಾಕ್ರೈ ಎಂದು ಕರೆಯುವ ಈ ವೈರಸ್ ಎನ್‌ಎಸ್‌ಎ ವಶದಲ್ಲಿಯೇ ಇತ್ತು. ಏಪ್ರಿಲ್ ತಿಂಗಳಿನಲ್ಲಿ ಅದರ ಕೆಲವು ಭಾಗಗಳು ಹ್ಯಾಕರ್‌ಗಳಿಗೆ ಸೋರಿಕೆಯಾಗಿತ್ತು ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಈ ವೈರಸ್‌ ಕೋಡಿಂಗ್‌ ಕಂಡು ಹಿಡಿದದ್ದು ಎನ್‌ಎಸ್‌ಎ ಎಂದು ಹೇಳಲಾಗುತ್ತಿದೆಯಾದರೂ, ಈ ಕುರಿತು ಅಮೆರಿಕಾದ ತನಿಖಾ ಸಂಸ್ಥೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅನಿರೀಕ್ಷಿತ ಹೀರೊ:

ಶುಕ್ರವಾರ ಹಾಗೂ ಶನಿವಾರ ದೊಡ್ಡ ಪ್ರಮಾಣದಲ್ಲಿ ಯುಕೆಯ ಸರಕಾರಿ ಆಸ್ಪತ್ರೆಗಳ ಹಾಗೂ ಕಚೇರಿಗಳ ಕಂಪ್ಯೂಟರ್‌ಗಳನ್ನು ಹ್ಯಾಕರ್‌ಗಳು ಹತೋಟಿಗೆ ತೆಗೆದುಕೊಂಡರು. ಇದನ್ನು ಇನ್ನಷ್ಟು ಕಂಪ್ಯೂಟರ್‌ಗಳಿಗೆ ಹಬ್ಬುವ ಮುನ್ನವೇ ಅದಕ್ಕೆ ತಡೆಯನ್ನು ಹಾಕಿದ್ದು 22 ವರ್ಷದ ಯುವಕ ಎಂದು ಬಿಬಿಸಿ ವರದಿ ಮಾಡಿದೆ. ಮಾಲ್‌ವೇರ್ ಟೆಕ್ಕಿ ಎಂದು ಅಡ್ಡ ಹೆಸರಿನಿಂದ ಕರೆಯುವ ಯುವಕನೊಬ್ಬ ಹ್ಯಾಕರ್‌ಗಳ ಕುತಂತ್ರಕ್ಕೆ ತಣ್ಣೀರು ಎರಚುವ ಮೂಲಕ ಘಟಿಸಬಹುದಾದ ದೊಡ್ಡ ಅವಘಡಕ್ಕೆ ತಾತ್ಕಾಲಿಕ ಪರಿಹಾರ ಹುಡುಕಿದ್ದಾನೆ.

ಜಗತ್ತಿನಾದ್ಯಂತ ಹಳೆಯ ತಂತ್ರಾಂಶವನ್ನು ಬಳಸುವ ಕಂಪ್ಯೂಟರ್‌ಗಳನ್ನು ಗುರಿಯಾಗಿಸಿಕೊಂಡು ಹ್ಯಾಕರ್‌ಗಳು ದಾಳಿ ನಡೆಸುತ್ತಿದ್ದಾಗ ಅಖಾಡಕ್ಕೆ ಇಳಿದ ಯುವಕ, ಅವರಲ್ಲಿನ ನ್ಯೂನತೆಯನ್ನು ಗುರುತಿಸುವಲ್ಲಿ ಸಫಲವಾಗಿದ್ದಾನೆ. ಕಂಪ್ಯೂಟರ್‌ಗಳನ್ನು ಹತೋಟಿಗೆ ತೆಗೆದುಕೊಳ್ಳುವ ಮುನ್ನ ಹ್ಯಾಕರ್‌ಗಳು ಅನಾಮದೇಯ, ವಿಚಿತ್ರ ಅಕ್ಷರಗಳನ್ನು ಹೊಂದಿದ್ದ ಸವರ್ವ್‌ನ್ನು ಸಂಪರ್ಕಿಸುತ್ತಿದ್ದರು. ಸಾಮಾನ್ಯವಾಗಿ ಸರ್ವರ್‌ಗಳನ್ನು ಡೊಮೈನ್ ಹೆಸರಿನಲ್ಲಿ ನೋಂದಾವಣಿ ಮಾಡಿಕೊಳ್ಳಲಾಗುತ್ತದೆ. ಆದರೆ ಈ ವಿಚಿತ್ರ ಅಕ್ಷರಗಳ ಡೊಮೈನ್ ನೋಂದಾವಣೆ ಆಗಿರಲಿಲ್ಲ. ತಕ್ಷಣ ಮಾಲ್‌ವೇರ್ ಟೆಕ್ಕಿ ಅದನ್ನು ತನ್ನ ಹೆಸರಿಗೆ ನೋಂದಾವಣೆ ಮಾಡಿಸಿಕೊಂಡ ಎಂದು ಬಿಬಿಸಿ ವರದಿ ಹೇಳಿದೆ.

ಹೀಗಾಗಿ, ಹ್ಯಾಕರ್‌ಗಳ ಅಂತರ್ಜಾಲದ ಚಲನವಲನಗಳನ್ನು ಆತ ಗುರುತಿಸಿ ತಡೆ ಹಾಕುವಲ್ಲಿ ಯಶಸ್ವಿಯಾಗಿದ್ದಾನೆ. “ಇದು ತಾತ್ಕಾಲಿಕ ಮಾತ್ರ. ಹೊಸ ಡೊಮೈನ್‌ಗಳನ್ನು ಅವರು ಬಳಸಿ, ತಮ್ಮ ದಾಳಿಯನ್ನು ಮುಂದುವರಿಸುವ ಸಾಧ್ಯತೆ ಇದೆ,” ಎಂದು ಆತ ಬಿಬಿಸಿಗೆ ಹೇಳಿಕೊಂಡಿದ್ದಾನೆ. “ವಾರದ ರಜೆಯನ್ನು ತೆಗೆದುಕೊಂಡಿದ್ದೆ. ಆದರೆ ಜಗತ್ತಿನಾದ್ಯಂತ ಸೈಬರ್‌ ದಾಳಿ ನಡೆಯುತ್ತಿದೆ ಎಂದು ಗೊತ್ತಾಗುತ್ತಲೇ ಕೆಲಸ ಶುರುಮಾಡಿದೆ. ಅನಿರೀಕ್ಷಿತವಾಗಿ ಹ್ಯಾಕರ್‌ಗಳ ಕಾರ್ಯಾಚರಣೆ ಗಮನಕ್ಕೆ ಬಂತು,” ಎಂದು ಆತ ತಿಳಿಸಿದ್ದಾನೆ.

ಎಚ್ಚರಿಕೆ ಗಂಟೆ: 

ಸದ್ಯ ನಡೆದಿರುವ ದಾಳಿಯು ಭವಿಷ್ಯಕ್ಕೆ ಎಚ್ಚರಿಕೆ ಗಂಟೆ ಎಂದು ಮೈಕ್ರೋಸಾಫ್ಟ್‌ ಹೇಳಿದೆ. ಈಗಾಗಲೇ ಹಲವು ಐಟಿ ಕಂಪನಿಗಳು ತಮ್ಮ ಸಿಬ್ಬಂದಿಗಳಿಗೆ ಎಚ್ಚರಿಕೆಯಿಂದ ಅಂತರ್ಜಾಲವನ್ನು ಬಳಸಲು ತಿಳಿಸಿದೆ. ಭಾರತದಲ್ಲಿ ದೊಡ್ಡ ಮಟ್ಟದ ಪರಿಣಾಮಗಳು ಈವರೆಗೆ ಕಾಣಿಸಿಕೊಂಡಿಲ್ಲ. ಆದರೆ ಡಿಜಿಟಲೀಕರಣದತ್ತ ದೇಶವನ್ನು ಕೊಂಡೊಯ್ಯುವ ಸಮಯದಲ್ಲಿ ಹಲವು ಪಾಠಗಳನ್ನು ಜಾಗತಿಕವಾಗಿ ನಡೆದಿರುವ ಈ ಸೈಬರ್‌ ದಾಳಿಯಿಂದ ಕೇಂದ್ರ ಸರಕಾರ ಕಲಿಯಬೇಕಿದೆ.

ಎಲ್ಲೆಲ್ಲಿ ದಾಳಿ ನಡೆದಿದೆ? ಇಲ್ಲಿದೆ ಮಾಹಿತಿ:

ಕೃಪೆ: ಬಿಬಿಸಿ

ಕೃಪೆ: ಬಿಬಿಸಿ

 

Leave a comment

FOOT PRINT

Top