An unconventional News Portal.

ನೋಟುಗಳ ಅಮಾನ್ಯೀಕರಣಕ್ಕೆ 6 ತಿಂಗಳು: ಉತ್ತರಕ್ಕಾಗಿ ಕಾಯುತ್ತಿರುವ ಆರು ಪ್ರಶ್ನೆಗಳು!

ನೋಟುಗಳ ಅಮಾನ್ಯೀಕರಣಕ್ಕೆ 6 ತಿಂಗಳು: ಉತ್ತರಕ್ಕಾಗಿ ಕಾಯುತ್ತಿರುವ ಆರು ಪ್ರಶ್ನೆಗಳು!

ಆರು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಚಲಾವಣೆಯಲ್ಲಿದ್ದ ದೊಡ್ಡ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದರು. ನಂತರದ ಕೆಲವು ತಿಂಗಳುಗಳ ಕಾಲ ದೇಶದಲ್ಲಿ ‘ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ’ಯನ್ನು ಹೇರಿದ ಹಾಗಿತ್ತು ಸನ್ನಿವೇಶಗಳು. ಸಾಮಾನ್ಯ ಜನ ಬ್ಯಾಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತರು, ಕೆಲವರು ಸಾವನ್ನೂ ಅಪ್ಪಿದರು. ಇದಾದ ನಂತರ ಸದ್ಯ ಎಲ್ಲವೂ ಯಥಾಸ್ಥಿತಿಗೆ ಬಂದು ನಿಂತಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ನೋಟುಗಳ ಅಮಾನ್ಯೀಕರಣ ಘೋಷಣೆ ವೇಳೆ ಪ್ರಧಾನಿ ಮೋದಿ, ‘ಕಪ್ಪುಹಣ, ನಕಲಿ ನೋಟುಗಳು ಹಾಗೂ ಭಯೋತ್ಪಾದನೆ’ ವಿರುದ್ಧದ ಸಮರ ಇದು ಎಂದು ಬಿಂಬಿಸಿದ್ದರು. ನಂತರದ ದಿನಗಳಲ್ಲಿ ದೇಶವನ್ನು ‘ನಗದು ರಹಿತ’ ವ್ಯವಸ್ಥೆಯತ್ತ ಕೊಂಡೊಯ್ಯುವ ಭರವಸೆ ನೀಡಿದರು. ಹೀಗೆ ದಿನಕ್ಕೊಂದು ಘೋಷಣೆ, ಆಶ್ವಾಸನೆ ರೂಪದ ಭರವಸೆಗಳನ್ನು ನೀಡುತ್ತಿರುವ ವೇಳೆಯಲ್ಲಿಯೇ ದೇಶದ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಎಸ್‌ಬಿಐ ಕೆಳಗೆ ತರಲಾಯಿತು. ಹಣಕಾಸು ವ್ಯವಸ್ಥೆ ಹಿಂದೆಂದೂ ಇಲ್ಲದಷ್ಟು ಕೇಂದ್ರೀಕರಣಕ್ಕೆ ಒಳಗಾಯಿತು. ‘ಡಿಜಿಟಲ್ ಎಕಾನಮಿ’ ಪರಿಣಾಮ ದೊಡ್ಡ ಉದ್ಯಮ ಸಂಸ್ಥೆಗಳು ಲಾಭದಿಂದ ತುಂಬಿ ತುಳಕತೊಡಗಿದವು.

ಇಷ್ಟೆಲ್ಲಾ ಆದ ಮೇಲೂ, ನೋಟುಗಳ ಅಮಾನ್ಯೀಕರಣದ ಕುರಿತು ಕೆಲವು ವಿಚಾರಗಳು ಕಾಡುತ್ತಲೇ ಇವೆ. ದೇಶದ ಆರ್ಥಿಕ ವ್ಯವಸ್ಥೆಯನ್ನೇ ಒಮ್ಮೆ ಅಲ್ಲಾಡಿಸಿ ಹಾಕಿದ್ದ ಕೇಂದ್ರ ಸರಕಾರದ ಭಾರಿ ಘೋಷಣೆಯ ಕುರಿತು ಸಾಮಾನ್ಯ ಜನರಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರ ಮಾತ್ರ ಇನ್ನೂ ಅಧಿಕೃತವಾಗಿ ಲಭ್ಯವಾಗಿಲ್ಲ.

ಅಂತಹ 6 ಪ್ರಶ್ನೆಗಳು ಹೀಗಿವೆ:

ಪ್ರಶ್ನೆ -1:

500 ಹಾಗೂ 1,000 ಮುಖಬೆಲೆಯ ಎಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಹಿಂತಿರುಗಿವೆ?

ರಾಜ್ಯದಲ್ಲಿ ನಾಗರಾಜ್ ಎಂಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಈತ ಬಿಡುಗಡೆ ಮಾಡುತ್ತಿರುವ ಸಿಡಿಗಳಲ್ಲಿ, ‘ಕೆಲವು ಪೊಲೀಸರ ಬಳಿ ಇನ್ನೂ ಕಪ್ಪು ಹಣ ಇದೆ’ ಎಂಬ ಗಂಭೀರ ಆರೋಪ ಮಾಡಿದ್ದಾನೆ. ಇದಕ್ಕೆ ಪೂರಕ ಎಂಬಂತೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಆಗಲೀ, ಕೇಂದ್ರ ಹಣಕಾಸು ಇಲಾಖೆಯಾಗಲೀ, ನೋಟುಗಳ ಅಮಾನ್ಯೀಕರಣದ ನಂತರ ಎಷ್ಟು ಹಳೆಯ ನೋಟುಗಳು ಬ್ಯಾಂಕ್‌ಗಳಿಗೆ ಹಿಂತಿರುಗಿವೆ ಎಂಬ ಬಗ್ಗೆ ಈವರೆಗೆ ಮಾಹಿತಿ ನೀಡಿಲ್ಲ. ಸದ್ಯ ಮಾಧ್ಯಮಗಳ ವರದಿಗಳ ಆಧಾರದ ಮೇಲಷ್ಟೆ, ಸುಮಾರು 15.44 ಲಕ್ಷ ಕೋಟಿ ಹಳೆಯ ನೋಟುಗಳನ್ನು ಜನ ಬದಲಾಯಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ಪ್ರಶ್ನೆ- 2:

ಎಷ್ಟು ಕಪ್ಪು ಹಣವನ್ನು ಪತ್ತೆ ಮಾಡಲಾಯಿತು?

ನ. 8, 2016ರಂದು ರಾತ್ರಿ ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆಯನ್ನು ಘೋಷಿಸಿದ್ದ ಪ್ರಧಾನಿ ಮೋದಿ, ಇದು ಕಪ್ಪು ಹಣದ ವಿರುದ್ಧ ಸಮರ ಎಂದು ಸಾರಿದ್ದರು. ಆದರೆ ಆರು ತಿಂಗಳ ನಂತರ ದೇಶದಲ್ಲಿ ಇದ್ದ ಕಪ್ಪು ಹಣದ ಪೈಕಿ ಎಷ್ಟು ಹಣವನ್ನು ಅಮಾನ್ಯೀಕರಣ ಪ್ರಕ್ರಿಯೆಯಿಂದ ಮುಖ್ಯವಾಹಿನಿಗೆ ತರಲಾಯಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದನ್ನು ಗಮನಿಸಬೇಕಿದೆ.

ಪ್ರಶ್ನೆ- 3:

ನಕಲಿ ನೋಟುಗಳ ಕತೆ ಏನು?

ಡಿಮಾನಟೈಸೇಶನ್ ಪ್ರಕ್ರಿಯೆಯ ಪ್ರಮುಖ ಗುರಿ ನಕಲಿ ನೋಟುಗಳನ್ನು ತಡೆಯುವುದು ಎಂದು ಹೇಳಲಾಗಿತ್ತು. ಹೊಸ ನೋಟುಗಳ ಚಲಾವಣೆಗೆ ಬಿಡುತ್ತಲೆ, ನಕಲಿ ನೋಟುಗಳ ಹಾವಳಿ ಕಡಿಮೆಯಾಗುತ್ತದೆ. ಈ ಮೂಲಕ ಪರೋಕ್ಷವಾಗಿ ಗಡಿಯಾಚೆಗಿನ ಭಯೋತ್ಪಾದಕ ಸಂಘಟನೆಗಳು ಮರ್ಮಾಘಾತವಾಗಲಿದೆ ಎಂದು ಬಿಂಬಿಸಲಾಗಿತ್ತು. ಆದರೆ ಈವರೆಗೆ ಎಷ್ಟು ಪ್ರಮಾಣದ ನಕಲಿ ನೋಟುಗಳನ್ನು ಚಲಾವಣೆಯಿಂದ ದೂರ ಮಾಡಲಾಗಿದೆ ಎಂಬ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಬದಲಿಗೆ, ಹೊಸ 2000 ಮುಖಬೆಲೆಯ ನಕಲಿ ನೋಟುಗಳು ಚಲಾವಣೆಗೆ ಬಂದಿವೆ.

ಪ್ರಶ್ನೆ- 4:

ಬ್ಯಾಂಕ್‌ಗಳಿಗೆ ಹಿಂತಿರುಗಿ ಬಂದ ನೋಟುಗಳ ಕತೆ ಏನಾಯ್ತು?

ಅಮಾನ್ಯೀಕರಣ ಘೋಷಣೆಯಾಗುತ್ತಲೇ ಜನ ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ಬದಲಾಯಿಸಿಕೊಂಡರು. ಇದರ ಪ್ರಮಾಣ ಎಷ್ಟು ಎಂಬುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಸದ್ಯ ಮಾಹಿತಿ ಪ್ರಕಾರ 15.44 ಲಕ್ಷ ಕೋಟಿ ಎಂದು ಹೇಳಲಾಗುತ್ತಿದೆ. ಆದರೆ, ಈ ಹಣದ ಪರಿಸ್ಥಿತಿ ಏನಾಯಿತು? ಮರಳಿ ಅಷ್ಟೇ ಪ್ರಮಾಣದ ಹಣ ಚಲಾವಣೆಗೆ ಬಂದಿದೆಯಾ? ಈ ಕುರಿತು ಆರ್‌ಬಿಐ ಎಲ್ಲಿಯೂ ಈವರೆಗೆ ಬಾಯಿ ಬಿಟ್ಟಿಲ್ಲ.

ಪ್ರಶ್ನೆ- 5:

ಅಮಾನ್ಯೀಕರಣದ ಸಾಧಕ- ಬಾಧಕಗಳೇನು?

ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದುಮಾಡಿದ ಪರಿಣಾಮ ದೇಶದ ಅರ್ಥ ವ್ಯವಸ್ಥೆಯಲ್ಲಿ ಭಾರಿ ಏರುಪೇರುಗಳಾಗಿವೆ. ಸಣ್ಣ ಹಣಕಾಸು ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾಗಿವೆ. ಆರ್‌ಬಿಐ ಆಗಲೀ, ಕೇಂದ್ರ ಹಣಕಾಸು ಇಲಾಖೆಯಾಗಲೀ ಈವರೆಗೆ ದೇಶದ ಅರ್ಥ ವ್ಯವಸ್ಥೆಯಲ್ಲಿ ತೆಗೆದುಕೊಂಡ ಗಂಭೀರ ತೀರ್ಮಾನದ ಪರಿಣಾಮಗಳೇನಾಯಿತು ಎಂದು ಈವರೆಗೆ ಜನರ ಮುಂದಿಟ್ಟಿಲ್ಲ. ಆರು ತಿಂಗಳ ನಂತರವೂ ಅವು ಜನರಿಗೆ ಉತ್ತರದಾಯಿಗಳಾಗಿಲ್ಲ ಎಂಬುದು ವಿಶೇಷ.

ಪ್ರಶ್ನೆ- 6:

ನೋಟುಗಳ ಅಮಾನ್ಯೀಕರಣಕ್ಕೆ ಸಿದ್ಧತೆಗಳೇನಿದ್ದವು? 

ಸ್ವಾತಂತ್ರ್ಯ ನಂತರ ದೇಶದ ಅರ್ಥ ವ್ಯವಸ್ಥೆಯಲ್ಲಿ ನಡೆದ ಬಹುದೊಡ್ಡ ಪ್ರಯೋಗ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ. ಆದರೆ ಇದಕ್ಕೆ ಆರ್‌ಬಿಐ ಅಥವಾ ಕೇಂದ್ರ ಸರಕಾರ ಮಾಡಿಕೊಂಡ ಸಿದ್ಧತೆಗಳೇನಿದ್ದವು? ಈ ಕುರಿತು ಮಾಹಿತಿ ಈವರೆಗೂ ಲಭ್ಯವಿಲ್ಲ.

ಮಾಹಿತಿ: ಮನಿ ಕಂಟ್ರೋಲ್

Leave a comment

FOOT PRINT

Top