An unconventional News Portal.

ಐಸಿಜೆ ಮುಂದೆ ಕುಲಭೂಷಣ್ ಪ್ರಕರಣ: ಏನಿದು ‘ಅಂತಾರಾಷ್ಟ್ರೀಯ ನ್ಯಾಯಾಲಯ’ದ ಹೂರಣ?

ಐಸಿಜೆ ಮುಂದೆ ಕುಲಭೂಷಣ್ ಪ್ರಕರಣ: ಏನಿದು ‘ಅಂತಾರಾಷ್ಟ್ರೀಯ ನ್ಯಾಯಾಲಯ’ದ ಹೂರಣ?

ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಸಮಾಧಾನಕರ ಹೆಜ್ಜೆಯನ್ನು ಇಟ್ಟಿದೆ.

ಜಾದವ್ ಅವರನ್ನು ಮರಣದಂಡನೆಗೆ ಗುರಿಪಡಿಸಿದ ಪಾಕ್‌ ಮಿಲಿಟರಿ ನ್ಯಾಯಾಲಯದ ಆದೇಶಕ್ಕೆ ತಡೆಯನ್ನು ನೀಡುವಂತೆ ‘ಇಂಟರ್‌ನ್ಯಾಷನಲ್ ಕೋರ್ಟ್ ಆಫ್‌ ಜಸ್ಟಿಸ್’ (ಐಸಿಜೆ) ಪಾಕ್‌ಗೆ ಪತ್ರವನ್ನು ಬರೆದಿದೆ. ಭಾರತ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧ್ಯಕ್ಷ ರೊನ್ನಿ ಅಬ್ರಾಹಂ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಕುರಿತು ನಮ್ಮ ಮಾಧ್ಯಮಗಳು ಪಾಕ್‌ಗೆ ಮುಖಭಂಗ, ಭಾರತದ ಗೆಲುವು ಎಂದೆಲ್ಲಾ ವ್ಯಾಖ್ಯಾನ ಮಾಡುತ್ತಿವೆ. ಆದರೆ, ವಾಸ್ತವದಲ್ಲಿ ಕುಲಭೂಷಣ್ ಪ್ರಕರಣದಲ್ಲಿ ಇದು ಆರಂಭಿಕ ಹೆಜ್ಜೆ ಅಷ್ಟೆ. ತಾರ್ಕಿಕ ಅಂತ್ಯಕ್ಕೆ ಇನ್ನೂ ಸಾಕಷ್ಟು ಕಾನೂನುಗಳ, ಪ್ರಕ್ರಿಯೆಗಳ ಅಡ್ಡಿ ಎದುರಿಗಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕ್‌ಗೆ ಮಾಡಿಕೊಂಡ ಮನವಿ ಹಾಗೂ ಅದು ಕೆಲಸ ಮಾಡುವ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಏನಿದು ಬೆಳವಣಿಗೆ?:

ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷರು ಪಾಕಿಸ್ತಾನಕ್ಕೆ ಬರೆದಿರುವ ಪತ್ರದಲ್ಲಿ, “ನನ್ನ ಕಾರ್ಯವ್ಯಾಪ್ತಿಯ ಅಡಿಯಲ್ಲಿ ನ್ಯಾಯಾಲಯದ ಆರ್ಟಿಕಲ್ 74ರ ನಾಲ್ಕನೇ ಪ್ಯಾರಾ ಪ್ರಕಾರ, ನಾನು ನಿಮ್ಮ ಗೌರವಾನ್ವಿತ ಸರಕಾರವನ್ನು ಕೇಳಿಕೊಳ್ಳುವುದು ಏನೆಂದರೆ, ಲಭ್ಯ ಇರುವ ಪ್ರಕ್ರಿಯೆಗಳ ಅನುಸಾರ ನಿಮ್ಮ ನ್ಯಾಯಾಲಯದ ಆದೇಶವನ್ನು ತಡೆಹಿಡಿಯಿರಿ,” ಎಂದು ವಿನಂತಿ ಮಾಡಿಕೊಂಡಿದ್ದಾರೆ. ಇದು ತೀರ್ಪಲ್ಲ, ವಿನಂತಿ ಅಷ್ಟೆ ಎಂಬುದು ಗಮನಾರ್ಹ.

ಸೋಮವಾರ ಭಾರತ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾದವ್ ವಿಚಾರದಲ್ಲಿ ದಾವೆಯನ್ನು ಹೂಡಿತ್ತು. ಅದರಲ್ಲಿ, “ಪಾಕಿಸ್ತಾನ ವಿಯನ್ನಾ ಶೃಂಗಸಭೆಯಲ್ಲಿ ತೆಗೆದುಕೊಂಡ ರಾಯಭಾರಿ ಸಂಬಂಧದ ಸೂತ್ರಗಳನ್ನು ಗಾಳಿಗೆ ತೂರಿದೆ,” ಎಂದು ಆರೋಪಿಸಿತ್ತು. ಮುಖ್ಯವಾಗಿ, ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಜಾದವ್‌ ಅವರ ಬಂಧನ ಹಾಗೂ ಸುದೀರ್ಘ ವಿಚಾರಣೆ ಸಮಯದಲ್ಲಿ ಅವರ ಹಕ್ಕುಗಳನ್ನು ಪಡೆಯಲು ನಿರಾಕರಿಸಲಾಗಿದೆ ಎಂದು ದೂರಿತ್ತು.

ಪಾಕಿಸ್ತಾನದ ಅಧಿಕಾರಿಗಳು ಭಾರತದ ಸಮಾಲೋಚಕರನ್ನು ಭೇಟಿ ಮಾದಲು ಜಾದವ್‌ಗೆ ಅವಕಾಶ ನೀಡಲಿಲ್ಲ. 16 ಬಾರಿ ಪದೇ ಪದೇ ಮಾಡಿಕೊಂಡ ಮನವಿಗಳನ್ನು ತಿರಸ್ಕರಿಸಲಾಗಿದೆ. ಜಾದವ್ ಪ್ರಕರಣದಲ್ಲಿ ಅದಿಕೃತವಾಗಿ ಭಾರತಕ್ಕೆ ಯಾವುದೇ ಮಾಹಿತಿಯನ್ನು ಪಾಕಿಸ್ತಾನ ನೀಡಲಿಲ್ಲ; ಬದಲಿಗೆ ಪತ್ರಿಕಾ ಹೇಳಿಕೆ ಮೂಲಕ ಮರಣದಂಡನೆ ವಿಧಿಸಿರುವ ವಿಚಾರ ಗೊತ್ತಾಯಿತು ಎಂದು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದೆ.

ಕುಲಭೂಷಣ್ ಜಾದವ್ ಇರಾನ್‌ ದೇಶದಲ್ಲಿ ಉದ್ಯಮ ನಡೆಸುತ್ತಿದ್ದರು ಎಂಬ ಬಗ್ಗೆ ನಮ್ಮ ಬಳಿ ಸ್ಪಷ್ಟ ಮಾಹಿತಿ ಇದೆ. ಭಾರತದ ನೌಕಾ ಪಡೆಯಿಂದ ನಿವೃತ್ತರಾದ ನಂತರ ಇರಾನ್‌ ದೇಶದಲ್ಲಿ ಉದ್ಯಮವನ್ನು ಸ್ಥಾಪಿಸಿದ್ದರು. ಅವರನ್ನು ಮಾ. 3, 2016ರಲ್ಲಿ ಬಲೂಚಿಸ್ತಾನ ಪ್ರದೇಶದಲ್ಲಿ ಬಂಧಿಸಿದ್ದಾಗಿ ಪಾಕಿಸ್ತಾನ ಹೇಳುತ್ತಿದೆ. ಬಂಧನದ ನಂತರ ಭಾರತ ಜಾಧವ್‌ ಅವರನ್ನು ಸಂಪರ್ಕಿಸಲು ಅವಕಾಶ ಮಾಡಿಕೊಡಲಿಲ್ಲ ಎಂದು ಭಾರತದ ದೂರಿನಲ್ಲಿ ಹೇಳಲಾಗಿದೆ.

ಪಾಕಿಸ್ತಾನ ಕುಲಭೂಷಣ್ ಜಾದವ್ ಭಾರತದ ಗುಪ್ತಚರ ಸಂಸ್ಥೆ ‘ರಿಸರ್ಚ್‌ ಅಂಡ್ ಅನಾಲಿಸಿಸ್ ವಿಂಗ್’ (ರಾ)ಗೆ ಕೆಲಸ ಮಾಡುತ್ತಿದ್ದರು ಎಂದು ಆರೋಪ ಮಾಡಿದೆ. ಇದೇ ಆರೋಪಕ್ಕಾಗಿ ಅಲ್ಲಿನ ಮಿಲಿಟರಿ ನ್ಯಾಯಾಲಯ ಮರಣದಂಡನೆಯನ್ನೂ ವಿಧಿಸಿದೆ. ಇದಕ್ಕೂ ಮೊದಲು ಮಾಧ್ಯಮಗಳಿಗೆ ಕುಲಭೂಷಣ್ ಜಾದವ್‌ ಅವರ ತಪ್ಪೊಪ್ಪಿಗೆಯ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಪ್ರಕರಣದ ಅಂತಾರಾಷ್ಟ್ರೀಯ ನ್ಯಾಯಾಲಯದ ಅಂಗಳಕ್ಕೆ ಬಂದಿದೆ.

ಏನಿದು ಅಂತಾರಾಷ್ಟ್ರೀಯ ನ್ಯಾಯಾಲಯ?:

ನೆದರ್‌ಲ್ಯಾಂಡ್‌ನ ಹೇಗ್ಯುನಲ್ಲಿರುವ 'ಇಂಡರ್‌ನ್ಯಾಷನಲ್ ಕೋರ್ಟ್‌ ಆಫ್ ಜಸ್ಟಿಸ್'.

ನೆದರ್‌ಲ್ಯಾಂಡ್‌ನ ಹೇಗ್ ನಲ್ಲಿರುವ ‘ಇಂಟರ್ ನ್ಯಾಷನಲ್ ಕೋರ್ಟ್‌ ಆಫ್ ಜಸ್ಟಿಸ್’.

ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಅದರ ಅಡಿಯಲ್ಲಿ ಬರುವ ಈ ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಭಾರತ ಕೂಡ ‘ಇಂಟರ್‌ನ್ಯಾಷನ್ ಕೋರ್ಟ್‌ ಆಫ್ ಜಸ್ಟಿಸ್‌’ನ ಸದಸ್ಯ ರಾಷ್ಟ್ರಗಳಲ್ಲೊಂದು. ಪಾಕಿಸ್ತಾನ ಸೆ. 30, 1960ರಲ್ಲಿ ಇದೇ ನ್ಯಾಯಾಲಯಕ್ಕೆ ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನು ಬಗೆಹರಿಸಲು ಒಪ್ಪಿಗೆ ಸೂಚಿಸಿದೆ.

ಒಟ್ಟು 15 ನ್ಯಾಯಧೀಶರನ್ನು ಒಳಗೊಂಡಿರುವ ಈ ನ್ಯಾಯಾಲಯ ಜಾದವ್ ವಿಚಾರದಲ್ಲಿ ಅಧ್ಯಕ್ಷರ ಮೂಲಕ ಮನವಿಯೊಂದನ್ನು ಕಳಿಸಿದೆ. ನ್ಯಾಯಾಲಯದ ಕಾಯ್ದೆಗಳ ಪ್ರಕಾರ ಪಾಕಿಸ್ತಾನ ತನ್ನ ವಶದಲ್ಲಿದ್ದ ಅಂತಾರಾಷ್ಟ್ರೀಯ ಕೈದಿಯೊಬ್ಬರ ಮೂಲಭೂತ ಹಕ್ಕನ್ನು ತಿರಸ್ಕರಿಸಿದೆ. ವಿಯನ್ನಾ ಶೃಂಗಸಭೆಯ ನಿಯಮಗಳ ಪ್ರಕಾರ ಅಂತಾರಾಷ್ಟ್ರೀಯ ಕೈದಿಗಳಿಗೆ ಅವರ ಮಾತೃ ದೇಶದ ಸಮಾಲೋಚಕರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂಬ ನಿಯಮ ಇದೆ. ಇದನ್ನು ಪಾಕಿಸ್ತಾನ ತಿರಸ್ಕರಿಸಿದೆ ಎಂದು ಭಾರತ ತನ್ನ ಪ್ರಾಥಮಿಕ ದೂರಿನಲ್ಲಿ ಮುಂದಿಟ್ಟಿತ್ತು. ಭಾರತದ ಪರಿವಾಗಿ ಹಿರಿಯ ವಕೀಲ ಹರೀಶ್ ಸಾಲ್ವೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ನ್ಯಾಯಾಲಯದ ವ್ಯಾಪ್ತಿ: 

ನೆದರ್‌ಲ್ಯಾಂಡ್‌ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಕಾನೂನು ವ್ಯಾಪ್ತಿ ಎಲ್ಲಾ ವಿಶ್ವಸಂಸ್ಥೆ ರಾಷ್ಟ್ರಗಳನ್ನೂ ಒಳಗೊಂಡಿರುತ್ತದೆ; ಆದರೆ ಕೆಲವೊಂದು ವಿಚಾರಗಳನ್ನು ಹೊರತುಪಡಿಸಿ ಎಂಬುದು ಗಮನಾರ್ಹ. ಇದನ್ನು ಭಾರತ ಮತ್ತು ಪಾಕಿಸ್ತಾನಗಳೂ ಒಪ್ಪಿಕೊಂಡಿವೆ.

ಸದ್ಯ ಪಾಕಿಸ್ತಾನ ”ತನ್ನ ಸ್ಥಳೀಯ ಕಾನೂನು ವ್ಯಾಪ್ತಿಯಲ್ಲಿರುವ ಕುಲಭೂಷಣ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಹಸ್ತಕ್ಷೇಪ ಸಾದ್ಯವಿಲ್ಲ,” ಎಂದು ವಾದಿಸುತ್ತಿದೆ. ಗೂಢಾಚಾರಿಕೆ ಆರೋಪದ ಮೇಲೆ ಜಾದವ್‌ರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಸಮಾಲೋಚಕರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಪಾಕ್‌ ಹೇಳುತ್ತಿದೆ. ಆದರೆ ಎರಡೂ ರಾಷ್ಟ್ರಗಳು ಪರಸ್ಪರರ ನಡುವಿನ ವ್ಯಾಜ್ಯಗಳನ್ನು ಬಗೆಹರಿಸಲು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅವಕಾಶವನ್ನು ನೀಡಿರುವ ಹಿನ್ನೆಲೆಯಲ್ಲಿ ಜಾದವ್ ವಿಚಾರದಲ್ಲಿ ಭಾರತಕ್ಕೆ ಸೀಮಿತ ಅವಕಾಶ ದೊರೆತಿದೆ.

ಐಸಿಜೆ ವೆಬ್‌ಸೈಟ್‌ ನೀಡುವ ಮಾಹಿತಿ ಪ್ರಕಾರ, ‘ಅಂತಾರಾಷ್ಟ್ರೀಯ ನ್ಯಾಯಾಲಯ ನೀಡುವ ಆದೇಶಗಳನ್ನು ಸದಸ್ಯ ರಾಷ್ಟ್ರಗಳು ಪಾಲಿಸಬೇಕು ಮತ್ತು ಆದೇಶಗಳ ಅನುಷ್ಠಾನ ಮಾಡದಿರುವ ಸಾಧ್ಯತೆಗಳು ಕಡಿಮೆ. ವ್ಯಾಜ್ಯಗಳನ್ನು ಬಗೆಹರಿಸುವ ನಿಟ್ಟಿಯಲ್ಲಿ ನ್ಯಾಯಾಲಯ ಎರಡೂ ದೇಶಗಳಿಗೂ ಸಮಾನ ಅವಕಾಶವನ್ನು ನೀಡಲಿದೆ.’

ಹೀಗಿದ್ದೂ, ಅಂತಾರಾಷ್ಟ್ರೀಯ ನ್ಯಾಯಾಲಯ ತನ್ನ ಆದೇಶವನ್ನು ನೀಡಬಹುದೇ ಹೊರತು ಅದನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂಬುದನ್ನು ಗಮನಿಸಬೇಕಿದೆ. ಒಂದು ವೇಳೆ, ಯಾವುದೇ ದೇಶ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶವನ್ನು ಪಾಲನೆ ಮಾಡದಿದ್ದರೆ ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿಯ (ಯುಎನ್ ಸೆಕ್ಯುರಿಟಿ ಕೌನ್ಸಿಲ್) ಮುಂದೆ ದೂರು ಸಲ್ಲಿಸುವ ಅವಕಾಶ ಇದೆ.

ಕೆಲವೊಂದು ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶಗಳು ಪಾಲನೆಯಾದ ನಿದರ್ಶನಗಳೂ ಇವೆ. ನಿಕಾರಗುವಾ ಮತ್ತು ಅಮೆರಿಕಾ ನಡುವಿನ ವ್ಯಾಜ್ಯದಲ್ಲಿ ಅಮೆರಿಕಾ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿತ್ತು. ಇದನ್ನು ಅಮೆರಿಕಾ ಪಾಲನೆ ಮಾಡದೆ ಇದ್ದಾಗ ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿ ಮುಂದೆ ದೂರು ಸಲ್ಲಿಕೆಯಾಗಿತ್ತು. ಸುರಕ್ಷಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗಿರುವ ಅಮೆರಿಕಾ ತನ್ನ ಬಳಿ ಇರುವ ‘ವಿಟೋ’ ಅಧಿಕಾರವನ್ನು ಬಳಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿದ ಉದಾಹರಣೆ ಇದೆ.

ಜಾದವ್ ಪ್ರಕರಣದಲ್ಲಿ ಮುಂದೇನು?:

ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಒಂದು ವೇಳೆ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಹೋದರೆ, ಭಾರತ ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿಯ ಮುಂದೆ ದೂರು ದಾಖಲಿಸುವ ಅವಕಾಶ ಇದೆ. ಆದರೆ ಸುರಕ್ಷಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ  ಪಡೆದಿರುವ ಚೈನಾ ಅಥವಾ ಉಳಿದ ರಾಷ್ಟ್ರಗಳು ಭಾರತದ ಪರವಾಗಿ ನಿಲ್ಲದೇ ಹೋಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸದ್ಯ,  ಜಾದವ್ ವಿಚಾರ ಅಂತಾರಾಷ್ಟ್ರೀಯ ನ್ಯಾಯಾಲಯದ ಅಂಗಳದಲ್ಲಿದೆ. ಅಲ್ಲಿ ಎರಡೂ ರಾಷ್ಟ್ರಗಳು ತಮ್ಮ ಕಡೆಯಿಂದ ಮೊದಲು ಮೌಖಿಕವಾಗಿ ನಂತರ ಲಿಖಿತ ರೂಪದಲ್ಲಿ ಅವಹಾಲುಗಳನ್ನು ಸಲ್ಲಿಸಲಿವೆ. ಒಂದು ವೇಳೆ, ಇಬ್ಬರೂ ಒಪ್ಪಿಕೊಂಡರೆ ಉಭಯ ದೇಶಗಳು ಸಲ್ಲಿಸುವ ಲಿಖಿತ ಅವಹಾಲುಗಳು ಬಹಿರಂಗಗೊಳ್ಳುತ್ತವೆ. ಇದಾದ ನಂತರ ನ್ಯಾಯಾಲಯ ಬಹಿರಂಗವಾಗಿಯೇ ತನ್ನ ಅಂತಿಮ ತೀರ್ಮಾನವನ್ನು ಪ್ರಕಟಿಸಲಿದೆ. ಇದರ ಮೇಲೆ ಎರಡೂ ರಾಷ್ಟಗಳು ಮೇಲ್ಮನವಿ ಹೋಗಲು ಅವಕಾಶ ಇರುವುದಿಲ್ಲ. ಬದಲಿಗೆ ತೀರ್ಪಿನ ಪುನರ್‌ ವಿಮರ್ಶೆಗೆ ಮಾತ್ರವೇ ಮನವಿ ಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಕುಲಭೂಷಣ್ ವಿಚಾರದಲ್ಲಿ ಪಾಕಿಸ್ತಾನಕ್ಕೆ ಸೋಲು, ಭಾರತಕ್ಕೆ ಗೆಲುವು ಎಂದು ಬೀಗುವುದು ಅವಸರದ ನಡೆಯಾಗುತ್ತದೆ.


INSIGHT FULL: ಪಾಕಿಸ್ತಾನ ನೆಲದಲ್ಲಿ ಭಾರತದ ಸಿಕ್ರೇಟ್ ಏಜೆಂಟ್ಸ್: ‘ರಾ’ ಸಂಸ್ಥೆಯ ರೋಚಕ ಅಧ್ಯಾಯಗಳು!


 

Leave a comment

FOOT PRINT

Top