An unconventional News Portal.

ಎಡವೂ ಬೇಡ; ಬಲವೂ ಬೇಡ: ಮಧ್ಯಮ ಪಂಥೀಯ ಮ್ಯಾಕ್ರನ್ ಗೆಲ್ಲಿಸಿದ ಫ್ಯಾನ್ಸ್ ಜನತೆ

ಎಡವೂ ಬೇಡ; ಬಲವೂ ಬೇಡ: ಮಧ್ಯಮ ಪಂಥೀಯ ಮ್ಯಾಕ್ರನ್ ಗೆಲ್ಲಿಸಿದ ಫ್ಯಾನ್ಸ್ ಜನತೆ

ಪ್ರಪಂಚದಾದ್ಯಂತ ಕುತೂಹಲವನ್ನು ಹುಟ್ಟುಹಾಕಿದ್ದ ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಮ ಪಂಥೀಯ ‘ಆಮ್ ಮಾರ್ಶ್’ ಪಕ್ಷದ ಎಮ್ಯಾನುಯಲ್ ಮ್ಯಾಕ್ರನ್ ಜಯಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಲಪಂಥೀಯ ಪಕ್ಷ ‘ನ್ಯಾಷನಲ್ ಫ್ರಂಟ್’ನ ಲಿ ಪೆನ್‌ರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿದ ಮ್ಯಾಕ್ರನ್, ನೆಪೋಲಿಯನ್ ನಂತರ ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಶವೊಂದರ ಅಧ್ಯಕ್ಷ ಸ್ಥಾನಕ್ಕೇರಿದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಅದೆಲ್ಲಕ್ಕಿಂತ ಹೆಚ್ಚಾಗಿ ಪ್ರಪಂಚದ ಹಲವು ದೇಶಗಳಲ್ಲಿ ಜನಪ್ರಿಯ, ಬಲಪಂಥೀಯ, ಒಡೆದಾಳುವ, ಧಾರ್ಮಿಕ ನೆಲೆಯ ರಾಜಕೀಯದ ಗಾಳಿ ಬೀಸುತ್ತಿರುವ ವೇಳೆಯಲ್ಲಿಯೇ, ಆರ್ಥಿಕ ವ್ಯವಸ್ಥೆ ಸುಧಾರಣೆಯ ಆಶ್ವಾಸನೆ ಹಿನ್ನೆಲೆಯಲ್ಲಿ, ಎಡವೂ ಅಲ್ಲದ, ಬಲವೂ ಅಲ್ಲದ, ಮಧ್ಯಮ ಪಂಥೀಯ ರಾಜಕೀಯದ ನೆಲೆಯ ರಾಜಕೀಯ ಶಖೆ ಆರಂಭಕ್ಕೆ ಮ್ಯಾಕ್ರನ್ ಗೆಲುವು ಭರವಸೆ ಬಿತ್ತಿದೆ.

ರಾಜಕೀಯ ಹಿನ್ನೆಲೆ: 

ಆಗಸ್ಟ್ 2016ರಲ್ಲಿ ಕೇವಲ 200 ಜನ ಆಪ್ತರ ಜತೆ ಕರೆದ ಸಭೆಯಲ್ಲಿ ‘ಆಮ್ ಮಾರ್ಶ್’ (En March) ಹೆಸರಿನಲ್ಲಿ ಚಳವಳಿಯೊಂದನ್ನು ಆರಂಭಿಸುವುದಾಗಿ ಪ್ರಕಟಿಸಿದರು ಮ್ಯಾಕ್ರನ್. ನಂತರ ಅದೇ ಹೆಸರಿನಲ್ಲಿ ಪಕ್ಷವನ್ನು ಸ್ಥಾಪಿಸಿದರು. ಫ್ರಾನ್ಸ್ ದೇಶ ಎಡ ಮತ್ತು ಬಲ ಎಂಬ ಎರಡು ಸೈದ್ಧಾಂತಿಕ ಕವಲುಗಳಾಗಿ ಒಡೆದು ಹೋದ ಸಮಯದಲ್ಲಿ ಮಧ್ಯಮ ಪಂಥೀಯ ನೆಲೆಯ ರಾಜಕೀಯ ಪಕ್ಷ ಇದಾಗಿತ್ತು.

ಇಲ್ಲಿ ಪಾತಾಳ ತಲುಪಿರುವ ಹಣಕಾಸು ಪರಿಸ್ಥಿತಿಯನ್ನು ಮೇಲತ್ತಲು ಎಡ ಮತ್ತು ಬಲದ ಸೈದ್ಧಾಂತಿಕ ಹಿನ್ನೆಲೆಯ ಜನ ಮತ್ತು ಪಕ್ಷಗಳು ಭಿನ್ನವಾದ ನಿಲುವುಗಳನ್ನು ತಳೆದಿವೆ. ಇಂತಹ ಸಮಯದಲ್ಲಿ ‘ನಡೆ ಮುಂದೆ’ ಎಂದು ಹೊರಟ ಮ್ಯಾಕ್ರನ್ ಕಡಿಮೆ ಸಮಯದಲ್ಲಿಯೇ ಯುವ ಜನರ ಗಮನ ಸೆಳೆದರು. ಸ್ವತಃ ಹಣಕಾಸು ವ್ಯವಸ್ಥೆಯಲ್ಲಿ ಬ್ಯಾಂಕರ್‌ ಆಗಿದ್ದ ಮ್ಯಾಕ್ರನ್ ದೇಶದ ಯುವಜನರ ಮುಂದೆ ಹೊಸ ಮಾದರಿಯ ಹಣಕಾಸು ನೀತಿಯನ್ನು ಮುಂದಿಟ್ಟಿದ್ದರು. ಈ ಮಧ್ಯಮ ಪಂಥೀಯ ಚಳವಳಿ ಕಾವು ಪಡೆದುಕೊಳ್ಳುತ್ತಿದ್ದಂತೆ ಮ್ಯಾಕ್ರನ್ ನೇರವಾಗಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದರು. ಆರಂಭದಲ್ಲಿ ಅಷ್ಟಾಗಿ ಗಮನ ಸೆಳೆಯದಿದ್ದರೂ, ಮೊನ್ನೆ ಮುಗಿದ ಮೊದಲ ಸುತ್ತಿನ ಮತದಾನ ನಂತರ ಮ್ಯಾಕ್ರನ್ ಪಡೆದ ಮತಗಳು ಫ್ರಾನ್ಸ್‌ ದೇಶದ ಭವಿಷ್ಯವನ್ನು ನಿರ್ಧರಿಸಲಿವೆ ಅನ್ನಿಸಲು ಶುರುವಾಗಿತ್ತು. ಎರಡನೇ ಸುತ್ತಿನಲ್ಲಿ ಮ್ಯಾಕ್ರನ್ ಶೇ. 65.5 ರಷ್ಟು ಮತಗಳನ್ನು ಪಡೆಯುವ ಮೂಲಕ ಅದನ್ನು ನಿಜವಾಗಿಸಿದ್ದಾರೆ.

ಗೆಲುವಿನ ಹಿಂದಿರುವ ಕಾರಣಗಳು:

ಕೇವಲ ವರ್ಷದ ಕೆಳಗೆ ಇಮ್ಯಾನುಯಲ್ ಮ್ಯಾಕ್ರನ್ ಗುರುತರ ಆರೋಪಗಳಿಗೆ, ಅಪಖ್ಯಾತಿಗೆ ಗುರಿಯಾಗಿದ್ದ ಫ್ರಾನ್ಸ್ ಆಡಳಿತದಲ್ಲಿ ಪಾಲುದಾರರಾಗಿದ್ದವರು. ಹಿಂದೆಂದೂ ಇಲ್ಲದಷ್ಟು ವಿರೋಧಗಳನ್ನು ಸರಕಾರ ಕಟ್ಟಿಕೊಂಡಿತ್ತು. ಇಂತಹ ಸಮಯದಲ್ಲಿ ಸರಕಾರದಿಂದ ಹೊರಬಂದ ಮ್ಯಾಕ್ರನ್ ತಮ್ಮದೇ ಹೊಸ ಪಕ್ಷವೊಂದನ್ನು ಹುಟ್ಟುಹಾಕಿದರು. ಈ ಸಮಯದಲ್ಲಿ ಎಡ ಪಕ್ಷಗಳ ಪ್ರಮುಖ ನಾಯಕರ ಮೇಲೆ ಗುರುತರದ ಆರೋಪಗಳು ಕೇಳಿಬಂದವು. ಈ ಸಮಯದಲ್ಲಿ ಎಡವೂ ಅಲ್ಲದ ಬಲವೂ ಅಲ್ಲದ ಮಧ್ಯಮ ಪಂಥೀಯ ನೆಲೆಯಲ್ಲಿ ಹೊಸ ಮಾದರಿಯ ರಾಜಕಾರಣವನ್ನು ಮ್ಯಾಕ್ರನ್ ಶುರುಮಾಡಿದ್ದು ವರವಾಯಿತು ಎನ್ನುತ್ತವೆ ವಿಶ್ಲೇಷಣೆಗಳು.

ಆರಂಭದಲ್ಲಿ ಮ್ಯಾಕ್ರನ್ ಆರಂಭಿಸಿದ ಪಕ್ಷ ಹೆಚ್ಚಿನ ಗಮನ ಸೆಳೆಯಲಿಲ್ಲವಾದರೂ, ಕ್ರೀಯಾಶೀಲ ತಂಡವೊಂದನ್ನು ಕಟ್ಟುವಲ್ಲಿ ಅವರು ಸಫಲರಾದರು. ಅಮೆರಿಕಾದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಆರಂಭಿಸಿದ್ದ ‘ಗ್ರಾಸ್‌ ರೂಟ್’ ಚಳವಳಿಯನ್ನು ಮಾದರಿಯಾಗಿಟ್ಟುಕೊಂಡ ಮ್ಯಾಕ್ರನ್, ಫ್ಯಾನ್ಸ್ ದೇಶದ ಜನರನ್ನು ಸಕಾರಾತ್ಮಕ ವಿಚಾರಗಳ ರಾಜಕಾರಣಕ್ಕೆ ಸೆಳೆಯಲು ಆರಂಭಿಸಿದರು. ಅವರ 15 ನಿಮಿಷಗಳ ಹಲವು ವಿಡಿಯೋಗಳನ್ನು ಜನರಿಗೆ ತಲುಪಿಸುವ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಫ್ರಾನ್ಸ್ ದೇಶದ ಹಣಕಾಸಿನ ಬಿಕ್ಕಟ್ಟನ್ನು ಸರಿ ಮಾಡಲು ಇರುವ ವಾಸ್ತವಿಕ ಯೋಜನೆಗಳೇನು ಎಂಬುದನ್ನು ವಿವರಿಸಲಾಯಿತು. ಅದರ ಜತೆಗೆ ಉದ್ಯಮಗಳ ಕುರಿತು ಕಾಳಜಿಯನ್ನು ಮ್ಯಾಕ್ರನ್ ಹೊಂದಿದ್ದರು.

ಇವೆಲ್ಲವುಗಳ ಜತೆಗೆ, ಮ್ಯಾಕ್ರನ್ ಜತೆಗೆ ಫ್ರಾನ್ಸ್‌ನ ದೊಡ್ಡ ಮಾಧ್ಯಮ ಸಂಸ್ಥೆಗಳು ನಿಂತವು. ಇಷ್ಟು ವರ್ಷಗಳ ಕಾಲ ಎಡ ಮತ್ತು ಬಲ ಪಕ್ಷಗಳ ನಡುವೆ ಹೊಯ್ದಾಡುತ್ತಿದ್ದ ಅವುಗಳಿಗೆ, ಉದ್ಯಮಿ ಸ್ನೇಹಿ ಯುವಕ ಸಹಜವಾಗಿಯೇ ಆಕರ್ಷಕವಾಗಿ ಕಾಣಿಸಿಕೊಂಡಿದ್ದ. ಹೀಗಾಗಿ, ಮ್ಯಾಕ್ರನ್ ಹೊಸ ಪಕ್ಷವನ್ನು ಆರಂಭಿಸಿದ ಒಂದೇ  ವರ್ಷಕ್ಕೆ ದೇಶದ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಜನರ ನಿರೀಕ್ಷೆಗಳ ಭಾರವನ್ನು ಹೊತ್ತಿದ್ದಾರೆ.

Related: ಅವರಿಗೆ 39; ಪತ್ನಿಗೆ 64: ಫ್ರಾನ್ಸ್ ಅಧ್ಯಕ್ಷ ಹುದ್ದೆಗೆ ಸಮೀಪದಲ್ಲಿ ‘ಅಪರೂಪದ ದಾಂಪತ್ಯ’!

 

 

Leave a comment

FOOT PRINT

Top