An unconventional News Portal.

‘ಪ್ರೀತಿ ಮಾಯೆ ಹುಷಾರು’: ಐಸಿಸ್ ನಾಯಕನನ್ನು ಮದುವೆಯಾಗಿ ಓಡಿಬಂದಾಕೆ ಎಫ್‌ಬಿಐ ಏಜೆಂಟ್!

‘ಪ್ರೀತಿ ಮಾಯೆ ಹುಷಾರು’: ಐಸಿಸ್ ನಾಯಕನನ್ನು ಮದುವೆಯಾಗಿ ಓಡಿಬಂದಾಕೆ ಎಫ್‌ಬಿಐ ಏಜೆಂಟ್!

ಸದಾ ಕೋಮು ಘಟನೆಗಳ ಕಾರಣಕ್ಕೆ ಸುದ್ದಿಯಲ್ಲಿರುವ ಕರ್ನಾಟಕದ ಕರಾವಳಿ ಜಿಲ್ಲೆ ಮಂಗಳವಾರ ವಿಚಿತ್ರ ಕಾರಣವೊಂದಕ್ಕೆ ಸುದ್ದಿಯಲ್ಲಿತ್ತು. ಉಡುಪಿಯ ಕುಂದಾಪುರದ ಹಿಂದೂಮುಸ್ಲಿಂ ಜೋಡಿಯೊಂದು ಸರಳ ವಿವಾಹವಾಗುವ ಮೂಲಕ ಜಾತಿಭಾಷೆ, ಧರ್ಮ, ದೇಶ, ಸಂಸ್ಕೃತಿಗಳನ್ನು ಮೀರುವ ಪ್ರೀತಿಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿತ್ತು. ಎಲ್ಲಿ ಹಿಂದೂಮುಸ್ಲಿಂ ಜೋಡಿ ಜತೆ ಜತೆಗೆ ಓಡಾಡುವುದು ಕಷ್ಟವಿತ್ತೋ, ಅದೇ ನೆಲದಲ್ಲಿ ಹುಟ್ಟಿದ ಅಂತರ್ಧರ್ಮೀಯ ಪ್ರೀತಿ ಮದುವೆಯ ಬಂಧನಕ್ಕೆ ಒಳಗಾಗಿ, ಜೋಡಿಗಳಿಬ್ಬರು ಸರಳ ವಿವಾಹವಾಗಿದ್ದು ಎಲ್ಲರ ಹುಬ್ಬೇರಿಸಿತ್ತು.

ಇದೀಗ ಅಂಥಹದ್ದೇ ಪ್ರಕರಣವೊಂದು ತಡವಾಗಿ ಅಮೆರಿಕಾದಿಂದ ವರದಿಯಾಗಿದೆ. ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರ ಸಾರಿರುವ ದೇಶದ ತನಿಖಾ ಸಂಸ್ಥೆಯ ಏಜೆಂಟ್‌ ಒಬ್ಬಾಕೆಯೇ ಭಯೋತ್ಪಾದಕನ ಪ್ರೀತಿಗೆ ಬಿದ್ದ ವಿಚಿತ್ರ ಕತೆ ಇದು.  

ಯಾವುದೇ ಸಿನಿಮಾದ ಕಥೆಗೂ ಕಡಿಮೆ ಇಲ್ಲದ ಅಮೆರಿಕಾದ ಈ ಪ್ರೇಮ ಕತೆಯನ್ನು ಬೆಟ್ಟದ ನೆಲ್ಲಿಸಮುದ್ರದ ಉಪ್ಪಿಗೆ ಹೋಲಿಸಬಹುದು. ಆಕೆ ಅಮೆರಿಕಾದ ಪ್ರತಿಷ್ಠಿತ ತನಿಖಾ ಸಂಸ್ಥೆ ಎಫ್.ಬಿ.ಐ ಉದ್ಯೋಗಿ. ಆತ ಮಾಜಿ ಪಾಪ್ ಸಿಂಗರ್; ಸದ್ಯ ಐಸಿಲ್ (ಹಿಂದಿನ ಐಸಿಸ್) ಸಂಘಟನೆಯ ಸದಸ್ಯ. ಇಬ್ಬರ ನಡುವೆ ಹಾದು ಹೋದ ಸಣ್ಣ ಸಂಪರ್ಕದ ಕೊಂಡಿಯೊಂದು ಪ್ರೀತಿಯ ಉಗಮಕ್ಕೆ ಕಾರಣವಾಯಿತು. ಆಕೆ ತನ್ನೆಲ್ಲಾ ಮಿತಿಗಳನ್ನು ಮೀರಿ ಸಿರಿಯಾಗೆ ಹೋದಳು. ಮಾತ್ರವಲ್ಲ ಸದ್ಯದ ವಾಸ್ತವ ಜಗತ್ತಿನ ಪವಾಡವೆಂಬಂತೆ ಆತನನ್ನೇ ವರಿಸಿದಳು. ತಾನು ಪ್ರೀತಿಸಿದ ತಪ್ಪಿಗೆ ಜೈಲು ಶಿಕ್ಷೆಗೂ ಗುರಿಯಾಗಿ ಸದ್ಯ ಬಿಡುಗಡೆ ಹೊಂದಿದ್ದಾಳೆ.

ಹೀಗೆ ಪ್ರೀತಿ ಎಲ್ಲಿ, ಯಾವಾಗ, ಯಾಕೆ ಹುಟ್ಟುತ್ತೆ ಎನ್ನುವುದಕ್ಕೆ ಸ್ಪಷ್ಟತೆಗಳಿಲ್ಲ ಎಂಬುದನ್ನು ಈ ಐಸಿಲ್ಎಫ್.ಬಿ.ಐ ಲವ್ ಸ್ಟೋರಿ ಮತ್ತೊಮ್ಮೆ ಸಾರಿ ಹೇಳಿದೆ.

ತನಿಖೆ ಮಾಡಲು ಹೋಗಿ ಪ್ರೀತಿಯ ಬಲೆಯಲ್ಲಿ ಬಂಧಿ:

ಡೇನಿಯಲ್ ಗ್ರೀನೆ ಜರ್ಮನ್ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಳು. ಈ ಕಾರಣಕ್ಕೆ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಆಕೆಯನ್ನು ದುಭಾಷಿಯಾಗಿ ಕೆಲಸಕ್ಕೆ ತೆಗೆದುಕೊಂಡಿತ್ತು. ಆಕೆಯ ಕೆಲಸ ಜರ್ಮನ್ ಮೂಲದ ರ್ಯಾಪ್ ಸಂಗೀತಗಾರ, ಐಸಿಲ್ ಸಂಘಟನೆಯ ಬಲು ಜನಪ್ರಿಯ ನೇಮಕಾತಿದಾರ ಡೆನಿಸ್ ಕಸ್ಪರ್ಟ್ ಬಗ್ಗೆ ಮಾಹಿತಿ ಕಲೆ ಹಾಕುವುದಾಗಿತ್ತು. ಈ ಮಾಹಿತಿಗಳನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡುವ ಹೊಣೆ ಆಕೆಯ ಮೇಲಿತ್ತು. 2014ರ ಜನವರಿಯಲ್ಲಿ ಗ್ರೀನೆ ಈ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಳು.

ಡೆನಿಸ್ ಕಸ್ಪರ್ಟ್ ಐಸಿಲ್ ನ ಬಲು ಜನಪ್ರಿಯ ನಾಯಕ. ಆತ ಒಂದು ಕಾಲದಲ್ಲಿ ಅಮೆರಿಕಾದ ಡಿಎಂಎಕ್ಸ್ ಸಂಸ್ಥೆಗಾಗಿ ಲೈವ್ ಕಾನ್ಸರ್ಟ್ ಕೂಡಾ ನೀಡಿದ್ದ. ಆದರೆ ನಂತರದ ದಿನಗಳಲ್ಲಿ ಐಸಿಸ್ ಸೇರುವಂತೆ ಯುವ ಜನರ ಮನವೊಲಿಸಲು ತನ್ನ ರ್ಯಾಪ್ ಕಲೆಯನ್ನು ಬಳಸಿಕೊಂಡಿದ್ದ. ಈ ಮೂಲಕ ಐಸಿಲ್ ಸಂಘಟನೆಯ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದಹಾಡುಗಳ ಮೂಲಕ ಒಸಾಮ ಬಿನ್ ಲಾಡೆನ್ ನನ್ನು ಆತ ಹಾಡಿ ಹೊಗಳಿದ್ದ. ಹಲವರ ಕುತ್ತಿಗೆ ಸೀಳುವ ವಿಡಿಯೋಗಳನ್ನು ಹರಿಯಬಿಟ್ಟು ಬರಾಕ್ ಒಬಾಮಗೆ ಎಚ್ಚರಿಕೆಗಳನ್ನು ರವಾನಿಸಿದ್ದ.

isis-denis-cuspert-fbi-agent

ಹೀಗೆ ವಿಲಕ್ಷಣ ನಡವಳಿಕೆ ಹೊಂದಿರುವ ಕಸ್ಪರ್ಟ್ ಮಾಹಿತಿಗಳನ್ನು ಜಾಲಾಡುತ್ತಿದ್ದ ಡೇನಿಯಲ್ ಗ್ರಿನೆಗೆ ಆತನ ಎರಡು ಸ್ಕೈಪ್ ಅಕೌಂಟ್ ಗಳು ಸಿಕ್ಕಿದ್ದವು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಅದೇನು ಸಂಭಾಷಣೆಗಳು ನಡೆಯಿತೋ ಗೊತ್ತಿಲ್ಲಜೂನ್ 2014ರಲ್ಲಿ ತನ್ನ ಕುಟುಂಬಸ್ಥರನ್ನು ನೋಡಲು ಜರ್ಮನಿಗೆ ಹೋಗುತ್ತೇನೆ ಎಂದು ಹೇಳಿ ರಜೆ ಹಾಕಿದಳು ಗ್ರೀನೆ. ಆದರೆ ಆಕೆ ಜರ್ಮನಿಗೆ ಹೋಗಲಿಲ್ಲ ಬದಲಿಗೆ ಟರ್ಕಿ ಮಾರ್ಗ ಬಳಸಿ ನೇರ ಐಸಿಲ್ ಹೋರಾಟಗಾರರ ನಾಡು ಸಿರಿಯಾಕ್ಕೆ ಬಂದಿಳಿದಳುಇಷ್ಟೆಲ್ಲವನ್ನೂ ಆಕೆ ತನಿಖಾ ಸಂಸ್ಥೆ ಎಫ್‌ಬಿಐ ಕಣ್ಣು ತಪ್ಪಿಸಿಯೇ ನಡೆಸಿದ್ದಳು.

ಸಿರಿಯಾಕ್ಕೆ ಕಾಲಿಟ್ಟವಳು ಜಗತ್ತಿನ ಪಾಲಿಗೆ ಕ್ರೂರ ಉಗ್ರತನ್ನ ಪ್ರಿಯಕರ ಡೆನಿಸ್ ಕಸ್ಪರ್ಟ್ ನನ್ನು ವರಿಸಿದಳು. ಮಾತ್ರವಲ್ಲ ನಿನ್ನ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂಬ ಅತಿ ಸೂಕ್ಷ್ಮ ಮಾಹಿತಿಯನ್ನು ತನ್ನ ಪ್ರಿಯತಮನಿಗೆ ನೀಡಿದಳು. ಆದರೆ ಕೆಲವೇ ದಿನಗಳಲ್ಲಿ ಆಕೆಗೆ ಅಲ್ಲಿನ ಬದುಕು ಸರಿ ಬರಲಿಲ್ಲ. ಕೊನೆಗೆ ತನ್ನ ತವರಿಗೆ ವಾಪಾಸಾಗಲು ಇರುವ ಮಾರ್ಗಗಳನ್ನು ಹುಡುಕತೊಡಗಿದಳು. ಕೊನೆಗೆ ಗ್ರೀನೆ ಅಮೆರಿಕಾಗೆ ಬಂದಿಳಿಯುತ್ತಿದ್ದಂತೆ ಪೊಲೀಸರು ಬಂಧಿಸಿದರು; ಜೈಲಿಗಟ್ಟಿದರುಆದರೆ ಅತ್ತ ಕಸ್ಪರ್ಟ್ ಮಾತ್ರ ತನ್ನ ಕ್ರೂರ ಕೃತ್ಯಗಳನ್ನು ಮುಂದುವರಿಸುತ್ತಲೇ ಇದ್ದ.

ಇತ್ತ ಬಂಧನಕ್ಕೆ ಒಳಗಾಗಿದ್ದ ಗ್ರೀನೆ ವಿಚಾರಣೆಯನ್ನು ಎದುರಿಸಬೇಕಾಯಿತು. ಆಕೆಯ ಪ್ರಕರಣದ ವಿಚಾರಣೆ ಗುಪ್ತವಾಗಿ ಅಮೆರಿಕಾದ ಕೋರ್ಟ್‌ಗಳಲ್ಲಿ ನಡೆಯಿತು. ಜರ್ಮನಿಗೆ ಹೋಗುತ್ತೇನೆಂದು ಸುಳ್ಳು ಹೇಳಿದ್ದನ್ನು ಆಕೆ ವಿಚಾರಣೆ ವೇಳೆ ಒಪ್ಪಿಕೊಂಡಳು. ‘ಸಾರ್ವಜನಿಕ ನಂಬಿಕೆಯನ್ನು, ತಾನು ಕೆಲಸ ಮಾಡುತ್ತಿದ್ದ ಸಂಸ್ಥೆ ಆಕೆಯ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಮುರಿದಿದ್ದಕ್ಕಾಗಿ, ಜತೆಗೆ ದೇಶದ ಸುರಕ್ಷತೆಯನ್ನು ಅಪಾಯಕ್ಕೀಡು ಮಾಡಿದಕಾರಣಕ್ಕೆ ಆಕೆಗೆ ಎರಡು ವರ್ಷ ಜೈಲು ಶಿಕ್ಷೆಯನ್ನು ನೀಡಲಾಯಿತು.

ಹಾಗೆ ನೋಡಿದರೆ ಐಸಿಲ್ ಹಾಗೂ ಉಗ್ರ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿಸಿಕೊಂಡೂ ಅತೀ ಕಡಿಮೆ ಶಿಕ್ಷೆ ಅನುಭವಿಸಿದಾಕೆ ಗ್ರೀನೆ. ಅಮೆರಿಕಾದಲ್ಲಿ ಐಸಿಲ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸರಾಸರಿ 13.5 ವರ್ಷ ಜೈಲು ಶಿಕ್ಷೆ ನೀಡಲಾಗುತ್ತದೆ. ಅದರಲ್ಲೂ ಈ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಮಾನವ ಹಕ್ಕುಗಳ ಉಲ್ಲಂಘನೆಯ ಕೂಪ, ಚಿತ್ರ ಹಿಂಸೆ ನೀಡಿ ಖೈದಿಗಳನ್ನು ದಂಡಿಸುವ ಗ್ವಂತನಮೋ ಬೇ ಕ್ಯಾಂಪ್ ನಂಥ ಜೈಲುಗಳಿಗೆ ಅಟ್ಟಲಾಗುತ್ತಿತ್ತು.ಇಂಥಹ ದೇಶದಲ್ಲಿ ಗ್ರೀನೆ ಕೇವಲ ಎರಡು ವರ್ಷ ಜೈಲು ಶಿಕ್ಷೆ ಪಡೆದು 2016ರ ಆಗಸ್ಟ್ ನಲ್ಲಿ ಬಿಡುಗಡೆಯೂ ಆಗಿದ್ದಾಳೆ.

ಸದ್ಯ ಎಲ್ಲರ ಪಾಲಿಗೆ ಅಪರಿಚಿತರಾಗಿ ಗ್ರೀನೆ ಅಮೆರಿಕಾದ ಹೊಟೇಲೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಕೆಯ ಪ್ರಿಯತಮ ಕಸ್ಪರ್ಟ್ ಸಿರಿಯಾದ ಯಾವುದೋ ಮೂಲೆಯಲ್ಲಿ ಆತನೂ ಜಗತ್ತಿನ ಪಾಲಿಗೆ ಅಪರಿಚಿತನಾಗಿ ಬದುಕುತ್ತಿದ್ದಾನೆ.ಅವರಿಬ್ಬರ ಪ್ರೀತಿ ಈಗ ಮುರಿದು ಬಿದ್ದಿದೆ. ‘ಪ್ರೀತಿ ಮಾಯೆ ಹುಷಾರು’ ಅಂತ ಅಮೆರಿಕಾದ ಎಫ್‌ಬಿಐ ತನ್ನ ಏಜೆಂಟರಿಗೆ ಪಾಠ ಹೇಳಿಕೊಡುವ ಅನಿವಾರ್ಯತೆ ಎದುರಾಗಿದೆ. 

 

Leave a comment

FOOT PRINT

Top