An unconventional News Portal.

‘ವೀಕೆಂಡ್‌ ವಿತ್‌ ರಮೇಶ್’ನಲ್ಲಿ ದೊರೆಸ್ವಾಮಿ ಯಾಕೆ ‘ಸಾಧಕ’ರ ಸಾಲಿನಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ?

‘ವೀಕೆಂಡ್‌ ವಿತ್‌ ರಮೇಶ್’ನಲ್ಲಿ ದೊರೆಸ್ವಾಮಿ ಯಾಕೆ ‘ಸಾಧಕ’ರ ಸಾಲಿನಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ?

ಸಾಮಾನ್ಯವಾಗಿ ರಿಯಾಲಿಟಿ ಕಾರ್ಯಕ್ರಮಗಳು; ರಿಯಾಲಿಟಿ ಮತ್ತು ಕಣ್ಕಟ್ಟುಗಳ ಸಮ್ಮಿಶ್ರಣ. ಅಂದರೆ, ರಿಯಾಲಿಟಿ ಕಾರ್ಯಕ್ರಮಗಳಲ್ಲಿ ತೋರಿಸುವ ಅಷ್ಟೂ ಸತ್ಯವೂ ಅಲ್ಲ; ಹಾಗಂತ ಸಂಪೂರ್ಣ ಸುಳ್ಳೂ ಅಲ್ಲ. ಅವು ಜನ ಮತ್ತು ಸಮಾಜದ ಮೇಲೆ ಬೀರುವ ಪರಿಣಾಮ ದೊಡ್ಡದು.

ಅದಕ್ಕೆ ನಮ್ಮೆದುರಿಗೆ ಇರುವ ಸಾಕ್ಷಿ, ನ್ಯೂಯಾರ್ಕ್‌ ನಗರದಲ್ಲಿ ಟ್ಯಾಬ್ಲಾಯ್ಡ್‌ ಪತ್ರಿಕೆಗಳಿಗೆ ಆಹಾರವಾಗಿದ್ದ ಡೊನಾಲ್ಡ್‌ ಟ್ರಂಪ್‌ ಎಂಬ ಉದ್ಯಮಿ ಅಮೆರಿಕಾದ ಅಧ್ಯಕ್ಷರಾಗಿರುವುದು. 2004ರಲ್ಲಿ ಡೊನಾಲ್ಡ್‌ ಟ್ರಂಪ್‌ ಬದುಕಿಗೆ ತಿರುವುದು ನೀಡಿದ್ದು ‘ದಿ ಅಪ್ರೈಂಟಿಸ್’ ಎಂಬ ರಿಯಾಲಿಟಿ ಶೋ. ಒಂದು ರಿಯಾಲಿಟಿ ಕಾರ್ಯಕ್ರಮದ ಫಲಾಫಲಗಳು ಪ್ರಪಂಚದ ಅತ್ಯಂತ ಅಧಿಕಾರಯುತ ಹುದ್ದೆವರೆಗೆ ಒಬ್ಬ ವ್ಯಕ್ತಿಯನ್ನು ಹೇಗೆ ಕರೆತಂದು ನಿಲ್ಲಸಬಹುದು ಎಂಬುದಕ್ಕೆ ಟ್ರಂಪ್‌ಗಿಂತ ಬೇರೆ ಉದಾಹರಣೆ ಬೇಕಿಲ್ಲ; ಅದೊಂದು ಬೇರೆಯದ್ದೇ ಕತೆ.

ಸದ್ಯ ನಮ್ಮಲ್ಲಿ ‘ವೀಕೆಂಡ್ ವಿತ್ ರಮೇಶ್’ ಎಂಬ ಝೀ ಕನ್ನಡ ವಾಹಿನಿಯಲ್ಲಿ ವಾರದ ಕೊನೆಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಚರ್ಚೆಯ ಕೇಂದ್ರದಲ್ಲಿದೆ. ಇದರಲ್ಲಿ ತಂದು ಕೂರಿಸುವ ಸಾಧಕರಿಂದ ಆರಂಭವಾಗಿ, ಕಾರ್ಯಕ್ರಮದ ನಿರೂಪಣೆವರೆಗೆ ಜನರಲ್ಲಿ ಅಭಿಪ್ರಾಯಗಳು ಮೂಡುತ್ತವೆ. ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದ ಎಸ್‌. ಆರ್. ಹಿರೇಮಠ್ ಹೀಗೆ ಹಲವರನ್ನು ‘ಸಾಧಕ’ರು ಎಂದು ಕಾರ್ಯಕ್ರಮದ ನಿರ್ಮಾಪಕರು ಪರಿಗಣಿಸಬೇಕು ಎಂಬ ಅವಹಾಲುಗಳನ್ನು ಜನ ಮಂಡಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ‘ರಿಯಾಲಿಟಿ ಕಾರ್ಯಕ್ರಮ’ ರಾಜ್ಯದ ಸಾಧಕರನ್ನು ಗುರುತಿಸಿ, ಜನರಿಗೆ ಪರಿಚಯಿಸುವ ವೇದಿಕೆ ಎಂಬ ‘ಭ್ರಮೆ’ಯೊಂದು ಬೆಳೆದಿದೆ. ‘ಭ್ರಮೆ’ಗಳನ್ನು ಹುಟ್ಟು ಹಾಕುವ ಸಶಕ್ತ ಮಾಧ್ಯಮ ಟಿವಿ ಆದ್ದರಿಂದ, ಇಂತಹ ಅಭಿಪ್ರಾಯಗಳು ಸಹಜ ಕೂಡ.

ಅನಿವಾರ್ಯತೆಗಳು:

‘ವೀಕೆಂಡ್ ವಿತ್ ರಮೇಶ್’ ಝೀ ಕನ್ನಡ ವಾಹಿನಿಯಲ್ಲಿ ಮೂರನೇ ಸೀಸನ್ ಪ್ರಸಾರವಾಗುತ್ತಿದೆ. ಮೊದಲ ಎರಡು ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿ ಕಾರ್ಯಕ್ರಮ ಹಲವು ಕಾರಣಗಳಿಗಾಗಿ ಚರ್ಚಾ ಕೇಂದ್ರದಲ್ಲಿದೆ. ಇದಕ್ಕೆ ವಾಹಿನಿಯ ಸೀಸನ್ ಜತೆಯಲ್ಲಿ ಬೆಳೆಯುತ್ತಿರುವ ವೀಕ್ಷಕರ ಆಲೋಚನೆಯೂ ಕಾರಣ ಇರಬಹುದು. ಅದೇ ವೇಳೆ, ಕಳೆದ ಎರಡು ಸೀಸನ್‌ಗಳಲ್ಲಿ ಇದ್ದ ಸೃಜನಶೀಲತೆ ಈ ಬಾರಿ ಕಳೆದು ಹೋಗಿದೆ ಎಂಬ ಆರೋಪದ ದನಿಗಳೂ ಕೇಳಿಬರುತ್ತಿವೆ. ಇವೆಲ್ಲವನ್ನೂ ಪಕ್ಕಕ್ಕಿಟ್ಟು, ಯಾಕೆ ದೊರೆಸ್ವಾಮಿ ತರದವರು ಈ ಕಾರ್ಯಕ್ರಮದ ‘ಸಾಧಕ’ರ ಸ್ಥಾನದಲ್ಲಿ ಬಂದು ಕೂರುವುದಿಲ್ಲ ಎಂದು ನೋಡದರೆ, ಪ್ರಮುಖ ಕಾರಣ- ಟೆಲಿವಿಜನ್ ರೇಟಿಂಗ್ ಪಾಯಿಂಟ್‌ ( ಟಿಆರ್‌ಪಿ). ವಾಹಿನಿ ಈ ಕಾರ್ಯಕ್ರಮದ ಮೊದಲ ಸೀಸನ್‌ನಲ್ಲಿ ಸಿನೆಮಾ ರಂಗದಿಂದ ಹೊರತಾದ ಸಾಧಕರನ್ನು ಗುರುತಿಸುವ ಕೆಲಸ ಮಾಡಿತ್ತು. ಕೋಲಾರ ಮೂಲದ ಸಮಾಜ ಸೇವಕರನ್ನು, ಕ್ಯಾಪ್ಟನ್‌ ಗೋಪಿನಾಥ್ ರೀತಿಯ ಸಾಹಸಿ ಉದ್ಯಮಿಗಳನ್ನು ತಂದು ‘ಸಾಧಕ’ರ ಸ್ಥಾನದಲ್ಲಿ ಕೂರಿಸಿತ್ತು.

“ಈ ಸಮಯದಲ್ಲಿ ಕಾರ್ಯಕ್ರಮದ ರೇಟಿಂಗ್ ಪಾತಾಳ ತಲುಪಿತ್ತು. ಅಂತವರನ್ನು ಕರೆತಂದು, ಅವರ ಕತೆಗಳನ್ನು ಮುಂದಿಟ್ಟರೆ ಜನ ನೋಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಸೀಸನ್‌ 2 ಹೊತ್ತಿಗೆ ಸಿನೆಮಾ ರಂಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು,” ಎನ್ನುತ್ತವೆ ವಾಹಿನಿಯ ಮೂಲಗಳು.

ಇದಕ್ಕೆ ಅನುಮೋದನೆ ನೀಡುವ ಕಾರ್ಯಕ್ರಮದ ನಿರೂಪಕ, ನಟ ರಮೇಶ್ ಅರವಿಂದ್, “ಕಾರ್ಯಕ್ರಮದಲ್ಲಿ ಯಾರನ್ನು ತಂದು ಕೂರಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಅಲ್ಲ. ವಾಹಿನಿ ಅದನ್ನು ನಿರ್ಧರಿಸುತ್ತದೆ. ಮನೋರಂಜನಾ ವಾಹಿನಿಯಾದ್ದರಿಂದ ಅದಕ್ಕೆ ಅದರಲ್ಲೇ ಆದ ಕಟ್ಟುಪಾಡುಗಳಿವೆ. ಜನ ದರ್ಶನ್, ಸುದೀಪ್ ಅವರ ಕಾರ್ಯಕ್ರಮಗಳನ್ನು ನೋಡಿದಷ್ಟೆ ಪ್ರೀತಿಯಿಂದ ಇಂತಹ ತೆರೆಮರೆಯ ಸಾಧಕರ ಕಾರ್ಯಕ್ರಮಗಳನ್ನೂ ನೋಡಬೇಕು. ಪ್ರೀತಿಯಿಂದ ಮಾತ್ರವಲ್ಲ ದೊಡ್ಡ ಸಂಖ್ಯೆಯಲ್ಲಿಯೂ ನೋಡಬೇಕು. ಆದರೆ ಅದು ಆಗುತ್ತಿಲ್ಲ,” ಎಂದರು. ರೋಗಿ ಬಯಸಿದ ಕತೆ ಇದು.

ರಿಯಾಲಿಟಿ ಟ್ವಿಸ್ಟ್‌: 

ಈ ಕಾರ್ಯಕ್ರಮದ ನಿರೂಪಣಾ ಶೈಲಿಯಲ್ಲಿಯೇ ಇಂತಹದೊಂದು ಮಿತಿಯೂ ಇದೆ. ಕಾರ್ಯಕ್ರಮದಲ್ಲಿ ‘ಸಾಧಕ’ರು ಎಂದು ಗುರುತಿಸುವ ಜನರ ಬದುಕು ಸಿನೆಮಾ ಶೈಲಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ. “ಇಲ್ಲಿಗೆ ಕರೆತರುವ ಸಾಧಕರು ಸಮಾಜದಲ್ಲಿ ಅಡೆತಡೆಗಳನ್ನು ಎದುರಿಸಿ ಸಾಧಕರು ಅನ್ನಿಸಿಕೊಂಡಿರಬೇಕು. ಅವರ ಬದುಕಿನಲ್ಲಿ ಒಂದು ಕತೆ ಇರಬೇಕು. ಅದು ವೀಕ್ಷಕರನ್ನು ಸೆಳೆಯುವಂತೆ ಇರಬೇಕು. ಜತೆಗೆ ಅವರು ಮಾತ್ರವಲ್ಲ, ಅವರ ಕುಟುಂಬದವರೂ ಕಾರ್ಯಕ್ರಮದ ನಿರೂಪಣೆಗೆ ಪೂರಕವಾಗಿ ಒದಗಿ ಬರಬೇಕು. ಹಾಗಾದಾಗ ಮಾತ್ರವೇ ವೇದಿಕೆಗೆ ತರೆತರಲು ಸಾಧ್ಯವಾಗುತ್ತದೆ,” ಎನ್ನುತ್ತಾರೆ ರಮೇಶ್ ಅರವಿಂದ್. ಇದು ರಿಯಾಲಿಟಿ ಶೋಗಳ ಮಿತಿಯೂ ಹೌದು, ಶಕ್ತಿಯೂ ಹೌದು.

“ಈ ಕಾರ್ಯಕ್ರಮಕ್ಕಾಗಿ ಸುಮಾರು 50 ಜನ ಸಂಶೋಧಕರು ಕೆಲಸ ಮಾಡುತ್ತಾರೆ. ದುಬಾರಿ ವೆಚ್ಚದ ಸ್ಟುಡಿಯೋ ಸೆಟ್, ಪ್ರೊಡಕ್ಷನ್ ನಡೆಯುತ್ತದೆ. ಅಷ್ಟೊಂದು ವೆಚ್ಚ ಮಾಡಿದ ಮೇಲೆ ರೇಟಿಂಗ್ ಬಾರದಿದ್ದರೆ ಯಾವ ವಾಹಿನಿಯೂ ತಡೆದುಕೊಳ್ಳುವುದು ಕಷ್ಟ. ಈ ರೇಟಿಂಗ್ ಎಂಬುದು ಕಾರ್ಯಕ್ರಮದ ವೇದಿಕೆ ಮೇಲೆ ಬಂದು ಕೂರುವವರನ್ನು ಅವಲಂಬಿಸಿದೆ,” ಎನ್ನುತ್ತವೆ ವಾಹಿನಿ ಮೂಲಗಳು.

ಒಂದು ಕಡೆ ಅಳವಡಿಸಿಕೊಂಡಿರುವ ಕಾರ್ಯಕ್ರಮ ನಿರೂಪಣಾ ಶೈಲಿ, ಮತ್ತೊಂದು ಕಡೆ ಜನ ಎಂತಹ ‘ಸಾಧಕ’ರನ್ನು ಮಾತ್ರ ಕಿರುತೆರೆಯ ಮೇಲೆ ನೋಡುತ್ತಾರೆ ಎಂಬ ಅನಿವಾರ್ಯತೆಗಳು ದೊರೆಸ್ವಾಮಿಯವರನ್ನಾಗಲೀ, ಹಿರೇಮಠ್ ಅವರನ್ನಾಗಲೀ ಕಾರ್ಯಕ್ರಮದಿಂದ ದೂರವೇ ಇಡುವಂತೆ ಮಾಡಿವೆ.

ಈ ನಡುವೆ ಇದೇ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರನ್ನು ಕರೆತರುವ ಪ್ರಯತ್ನ ಮೊದಲ ಸೀಸನ್‌ನಿಂದಲೂ ನಡೆಯುತ್ತಿದೆ. ಅದಕ್ಕೆ ಗುರುವಾಯನಕರೆಯ ನಾಗರಿಕ ಸೇವಾ ಟ್ರಸ್ಟ್‌ ನಾನಾ ಕಾರಣಗಳಿಗಾಗಿ ಪ್ರತಿರೋಧಿಸಿದೆ. ವಿಶೇಷ ಅಂದ್ರೆ ಈ ಟ್ರಸ್ಟ್‌ಗೆ ಹಿಂದೊಮ್ಮೆ ಝೀ ವಾಹಿನಿಯೇ ಗುರುತಿಸಿ ಸನ್ಮಾನವನ್ನೂ ಮಾಡಿತ್ತು. ‘ಸಾಧಕ’ರನ್ನು ಗುರುತಿಸುವುದು ಮಾತ್ರವಲ್ಲ; ಅವರ ವ್ಯಕ್ತಿತ್ವದ ಬಗ್ಗೆ ಅಪಸ್ವರಗಳೂ ಇರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ಸದ್ಯ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಮತ್ತಿತರರನ್ನು ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಕರೆತರುವ ಪ್ರಯತ್ನಗಳು ಜಾರಿಯಲ್ಲಿವೆ. ಹೀಗಿರುವಾಗಲೇ, “ಈ ಸೀಸನ್ ಕೊಂಚ ಬೇಗನೇ ಮುಗಿಯಲಿದೆ,” ಎಂದು ಮೂಲಗಳು ಹೇಳುತ್ತಿವೆ.

ಅದೆಲ್ಲದರ ಆಚೆಗೆ, ಸುದ್ದಿ ವಾಹಿನಿಗಳಿಂತ ಮನೋರಂಜನಾ ವಾಹಿನಿಗಳಲ್ಲಿ ಬರುವ ರಿಯಾಲಿಟಿ ಶೋಗಳು ಸಾಮಾಜಿಕ ಚರ್ಚೆಗೆ ಗುರಿಯಾಗುತ್ತಿರುವುದು ಕರ್ನಾಟಕದ ಪಾಲಿಗೆ ಗಮನಾರ್ಹ ಬೆಳವಣಿಗೆಗಳು. ಇಂತಹ ಚರ್ಚೆಗಳೇ ಮುಂದಿನ ದಿನಗಳಲ್ಲಿ ‘ರಿಯಾಲಿಟಿ ಶೋ’ಗಳನ್ನು ನಿಜವಾದ ರಿಯಾಲಿಟಿಗಳಿಗೆ ಹತ್ತಿರಾಗಿಸುವ ಸಾಧ್ಯತೆಯೂ ಇದೆ.

ಈ ವರದಿಗಾಗಿ ಝೀ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರನ್ನು ‘ಸಮಾಚಾರ’ ಸಂಪರ್ಕಿಸಲು ಪ್ರಯತ್ನ ನಡೆಸಿತಾದರೂ, ಅವರು ಲಭ್ಯವಾಗಲಿಲ್ಲ.

Leave a comment

FOOT PRINT

Top