An unconventional News Portal.

ಅವರಿಗೆ 39; ಪತ್ನಿಗೆ 64: ಫ್ರಾನ್ಸ್ ಅಧ್ಯಕ್ಷ ಹುದ್ದೆಗೆ ಸಮೀಪದಲ್ಲಿ ‘ಅಪರೂಪದ ದಾಂಪತ್ಯ’!

ಅವರಿಗೆ 39; ಪತ್ನಿಗೆ 64: ಫ್ರಾನ್ಸ್ ಅಧ್ಯಕ್ಷ ಹುದ್ದೆಗೆ ಸಮೀಪದಲ್ಲಿ ‘ಅಪರೂಪದ ದಾಂಪತ್ಯ’!

ಐರೋಪ್ಯ ಒಕ್ಕೂಟ ಎಂದು ಕರೆಯುವ ‘ಯುರೋಪಿಯನ್ ಯೂನಿಯನ್’ ದೇಶಗಳ ಪೈಕಿ ಒಂದಾದ ಫ್ರಾನ್ಸ್ ದೇಶದ ಅಧ್ಯಕ್ಷೀಯ ಚುನಾವಣೆ ನಾನಾ ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ.

ಏಪ್ರಿಲ್ 23ರಂದು ನಡೆದ ಮೊದಲ ಸುತ್ತಿನ ಮತದಾನದ ನಂತರ ಕಣದಲ್ಲಿ ಇಬ್ಬರು ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಒಬ್ಬರು ಬಲಪಂಥೀಯ ವಿಚಾರಧಾರೆಯ ‘ಫ್ರಂಟ್ ನ್ಯಾಷನಲ್’ ಪಕ್ಷದ ಮರೀನ್ ಲಿ ಪೆನ್; ಮತ್ತೊಬ್ಬರು ತಮ್ಮನ್ನು ತಾವು ‘ಮಧ್ಯಮ ಪಂಥೀಯ’ (ಸೆಂಟ್ರಿಸ್ಟ್) ಎಂದು ಘೋಷಿಸಿಕೊಂಡ ಎಮ್ಯಾನುಯಲ್‌ ಮ್ಯಾಕ್ರನ್‌.

ಮೊದಲ ಸುತ್ತಿನಲ್ಲಿ 47 ಮಿಲಿಯನ್ ಮತದಾರರ ಪೈಕಿ ಶೇ. 69ರಷ್ಟು ಮಂದಿ ಮತ ಚಲಾಯಿಸಿದ್ದರು. ಕಣದಲ್ಲಿ ಎಡಪಂಥೀಯ ಹಾಗೂ ಬಲಪಂಥೀಯ ಪಕ್ಷಗಳಿಂದ ತಲಾ ಇಬ್ಬರು ಅಭ್ಯರ್ಥಿಗಳು ಹಾಗೂ ವರ್ಷದ ಹಿಂದಷ್ಟೆ ‘ಆಮ್ ಮಾರ್ಶ್’ (ನಡೆ ಮುಂದೆ) ಎಂಬ ಮಧ್ಯಮ ಪಂಥೀಯ ಚಳವಳಿಯೊಂದನ್ನು ಹುಟ್ಟು ಹಾಕಿದ್ದ ಮ್ಯಾಕ್ರನ್ ಇದ್ದರು. ಇವರ ಪೈಕಿ ಅತಿ ಹೆಚ್ಚು ಮತ ಪಡೆದ ಲಿ ಪೆನ್ ಮತ್ತು ಮ್ಯಾಕ್ರನ್ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ. ಮೊದಲ ಸುತ್ತಿನಲ್ಲಿ ಲಿ ಪೆನ್‌ (ಶೇ. 21. 4) ಅವರಿಗಿಂತ ಹೆಚ್ಚಿನ ಮತಗಳನ್ನು ಪಡೆದ ಮ್ಯಾಕ್ರನ್ (ಶೇ. 23. 9)  ಎಲ್ಲರ ಕುತೂಹಲದ ಕೇಂದ್ರವಾಗಿದ್ದಾರೆ. ಕೊನೆಯ ಸುತ್ತಿನಲ್ಲಿ ಮತದಾರರ ಮನವೊಲಿಸಲು ಅವರು ಸಫಲವಾದಲ್ಲಿ ಫ್ರಾನ್ಸ್ ದೇಶದ ಅಧ್ಯಕ್ಷ ಹುದ್ದೆ ಒಲಿದು ಬರಲಿದೆ.

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ ನಡೆಯುವುದು ಹೀಗೆ (ಕೃಪೆ: ಆಲ್‌ ಜಝೀರಾ)

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ ನಡೆಯುವುದು ಹೀಗೆ (ಕೃಪೆ: ಆಲ್‌ ಜಝೀರಾ)

ಆರ್ಥಿಕ ಅಸ್ಥಿರತೆ, ವೈಚಾರಿಕ ಖಾಲಿತನ, ಹೆಚ್ಚುತ್ತಿರುವ ಭಯೋತ್ಪಾದನೆ, ಬಲವಾಗುತ್ತಿರುವ ಜನಾಂಗೀಯ, ಯುರೋಪಿಯನ್ವಾ ಒಕ್ಕೂಟದ ಜತೆಗೆ ಮುಂದುವರಿಯುವ ಬಗೆಗಿನ ಜಿಜ್ಞಾಸೆ… ಹೀಗೆ ಹಲವು ಸಾಮಾಜಿಕ ಮತ್ತುಆರ್ಥಿಕ ಸಮಸ್ಯೆಗಳಿಂದ ಜಟಿಲಗೊಂಡಿರುವ ಫ್ರಾನ್ಸ್‌ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನ ಸವಾಲಿನ ಹುದ್ದೆ. ಈ ಹುದ್ದೆಗಾಗಿ ನಡೆಯುವ ನೇರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಎಮ್ಯಾನುಯಲ್ ಮ್ಯಾಕ್ರನ್ ಘೋಷಣೆ ಮಾಡುತ್ತಿದ್ದಂತೆ ಒಂದು ಸಹಜ ಕುತೂಹಲ ಮನೆ ಮಾಡಿದೆ. ಇದಕ್ಕೆ ಕಾರಣ, ಮ್ಯಾಕ್ರನ್‌ ಅವರ ವಯಸ್ಸು ಮತ್ತು ಅವರ ವೈಯಕ್ತಿಕ ಬದುಕು.

ಯಾರೀ ಮ್ಯಾಕ್ರನ್?:

ಫ್ಯಾನ್ಸ್ ದೇಶದ ಪುಟ್ಟ ನಗರ ಎಮಿಎನ್ಸ್‌ನಲ್ಲಿ ಹುಟ್ಟಿ ಬೆಳೆದ ಮ್ಯಾಕ್ರನ್ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದವರು. ಅಲ್ಲಿಯೇ ಶಾಲೆ ಕಲಿತ ನಂತರ ದೇಶದ ರಾಜಧಾನಿ ಪ್ಯಾರೀಸ್‌ಗೆ ಹೆಚ್ಚಿನ ಶಿಕ್ಷಣಕ್ಕಾಗಿ ಬಂದಿಳಿದರು. 2004ರಲ್ಲಿ ಸಾರ್ವಜನಿಕ ಆಡಳಿತದಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದರು. ಅದೇ ವರ್ಷ ಫ್ರಾನ್ಸ್ ಸರಕಾರದ ಹಣಕಾಸು ಇಲಾಖೆಯಲ್ಲಿ ಇನ್ಸ್‌ಪೆಕ್ಟರ್‌ ಕೆಲಸಕ್ಕೆ ಸೇರಿಕೊಂಡರು. 2007ರಲ್ಲಿ ಫ್ಯಾನ್ಸ್ ದೇಶದ ಹಣಕಾಸು ವ್ಯವಸ್ಥೆಯನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಮ್ಯಾಕ್ರನ್ ಒಂದಷ್ಟು ಸಲಹೆಗಳನ್ನು ಮುಂದಿಟ್ಟರು. ಆದರೆ ಅವುಗಳನ್ನು ಸರಕಾರ ಸ್ವೀಕರಿಸದ ಹಿನ್ನೆಲೆಯಲ್ಲಿ 2008ರಲ್ಲಿ ಸರಕಾರದ ಕೆಲಸ ಬಿಟ್ಟು ಹೊರನಡೆದರು. ನಂತರ ಅವರು ಇನ್ವೆಸ್ಟ್‌ಮೆಂಟ್ ಬ್ಯಾಂಕರ್‌ ಆಗಿ ಕೆಲಸ ನಿರ್ವಹಿಸಿದರು.

ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಫ್ರಾನ್ಸ್‌ನ ಸೋಸಿಯಲಿಸ್ಟ್ ಪಾರ್ಟಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. 2012ರಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕಾಯಿಸ್ ಹಾಲಂಡೆ ಸರಕಾರದಲ್ಲಿ ಪ್ರಮುಖ ಹುದ್ದೆಯನ್ನು ನಿರ್ವಹಿಸಿದರು. ಆದರೆ ಸರಕಾರ ಮತ್ತು ತಾವು ಪ್ರತಿನಿಧಿಸುತ್ತಿದ್ದ ಸೋಷಿಯಲಿಸ್ಟ್ ಪಾರ್ಟಿಯ ವಿಚಾರಧಾರೆಗಳ ಬಗ್ಗೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ, 2015ರಲ್ಲಿ ಸರಕಾರ ಮತ್ತು ಪಕ್ಷದಿಂದ ಹೊರಬಿದ್ದರು.

ಆಗಸ್ಟ್ 2016ರಲ್ಲಿ ಕೇವಲ 200 ಜನ ಆಪ್ತರ ಜತೆ ಕರೆದ ಸಭೆಯಲ್ಲಿ ‘ಆಮ್ ಮಾರ್ಶ್’ (En March) ಹೆಸರಿನಲ್ಲಿ ಚಳವಳಿಯೊಂದನ್ನು ಆರಂಭಿಸುವುದಾಗಿ ಪ್ರಕಟಿಸಿದರು ಮ್ಯಾಕ್ರನ್. ಫ್ರಾನ್ಸ್ ದೇಶದ ಇವತ್ತಿಗೆ ಎಡ ಮತ್ತು ಬಲ ಎಂಬ ಎರಡು ಸೈದ್ಧಾಂತಿಕ ಕವಲುಗಳಾಗಿ ಒಡೆದು ಹೋಗಿದೆ. ಇಲ್ಲಿ ಪಾತಾಳ ತಲುಪಿರುವ ಹಣಕಾಸು ಪರಿಸ್ಥಿತಿಯನ್ನು ಮೇಲತ್ತಲೂ ಈ ಎರಡೂ ಸೈದ್ಧಾಂತಿಕ ಹಿನ್ನೆಲೆಯ ಜನ ಮತ್ತು ಪಕ್ಷಗಳು ಭಿನ್ನವಾದ ನಿಲುವುಗಳನ್ನು ತಳೆದಿವೆ. ಇಂತಹ ಸಮಯದಲ್ಲಿ ‘ನಡೆ ಮುಂದೆ’ ಎಂದು ಹೊರಟ ಮ್ಯಾಕ್ರನ್ ಕಡಿಮೆ ಸಮಯದಲ್ಲಿಯೇ ಯುವ ಜನರ ಗಮನ ಸೆಳೆದರು. ಇಡೀ ದೇಶಕ್ಕೆ ಹೊಸ ಮಾದರಿಯ ಹಣಕಾಸು ನೀತಿಯನ್ನು ರೂಪಿಸಬೇಕು ಎಂಬುದು ಅವರ ಮುಂದಿಟ್ಟ ದೊಡ್ಡ ಅಜೆಂಡಾಗಳಲ್ಲಿ ಒಂದಾಗಿದೆ. ಈ ಮಧ್ಯಮ ಪಂಥೀಯ ಚಳವಳಿ ಕಾವು ಪಡೆದುಕೊಳ್ಳುತ್ತಿದ್ದಂತೆ ಮ್ಯಾಕ್ರನ್ ನೇರವಾಗಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದರು. ಆರಂಭದಲ್ಲಿ ಅಷ್ಟಾಗಿ ಗಮನ ಸೆಳೆಯದಿದ್ದರೂ, ಮೊನ್ನೆ ಮುಗಿದ ಮೊದಲ ಸುತ್ತಿನ ಮತದಾನ ನಂತರ ಮ್ಯಾಕ್ರನ್ ಪಡೆದ ಮತಗಳು ಫ್ರಾನ್ಸ್‌ ದೇಶದ ಭವಿಷ್ಯವನ್ನು ನಿರ್ಧರಿಸಲಿವೆ ಅನ್ನಿಸಲು ಶುರುವಾಗಿದೆ.

ಅಪರೂಪದ ಪ್ರೇಮಿ:

ಇಂದಿಗೂ, ಅಂದಿಗೂ, ಎಂದೆಂದಿಗೂ...

ಇಂದಿಗೂ, ಅಂದಿಗೂ, ಎಂದೆಂದಿಗೂ…

ಫ್ರಾನ್ಸ್ ದೇಶದ ರಾಜಧಾನಿ ಪ್ಯಾರೀಸ್; ಪ್ರೇಮಿಗಳು ನಗರ ಎಂದೇ ಹೆಸರುವಾಸಿ. ಫ್ರಾನ್ಸ್ ಪ್ರಜೆಗಳು ಅಪರೂಪದ ಪ್ರೇಮ ಕತೆಗಳ ನಾಯಕ, ನಾಯಕಿಯರು ಎಂಬುದನ್ನು ಇತಿಹಾಸ ಹೇಳುತ್ತದೆ. ಹಾಲಿ ಅಧ್ಯಕ್ಷ ಹಾಲಂಡೆ ಕೂಡ ಅವರ ಪ್ರೇಮ ಕತೆಯ ಕಾರಣಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. ಅಂತವರ ಸಾಲಿನಲ್ಲಿ ಈಗ ಮ್ಯಾಕ್ರನ್ ಅವರ ‘ಪ್ರೇಮ ಕಾವ್ಯ’ ತುಸು ಹೆಚ್ಚೇ ಸದ್ದು ಮಾಡುತ್ತಿದೆ. ಕಾರಣ, ಮ್ಯಾಕ್ರನ್ ವಯಸ್ಸು ಇನ್ನೂ 39. ಅವರ ಪತ್ನಿ ಬ್ರಿಝಿತ್ ತ್ರೋನ್ಯಾಗೆ ವಯಸ್ಸು 64! ಮ್ಯಾಕ್ರನ್ ಶಾಲೆಯಲ್ಲಿದ್ದಾಗ ಹುಟ್ಟಿದ ಪ್ರೀತಿ ಅದು. ಆಗ ತ್ರೋನ್ಯಾ ಶಿಕ್ಷಕಿ. ಈ ದಂಪತಿ ನಡುವ ಇರುವ ವಯಸ್ಸಿನ ಅಂತರ 25 ವರ್ಷಗಳು.

ಮ್ಯಾಕ್ರನ್ ಎಮಿಎನ್ಸ್‌ ನಗರದ ಶಾಲೆಯಲ್ಲಿ ಕಲಿಯುತ್ತಿದ್ದಾಗ ತ್ರೋನ್ಯಾ ಅಲ್ಲಿ ರಂಗಭೂಮಿ ಶಿಕ್ಷಕಿಯಾಗಿದ್ದರು. ಅವರಿಗಾಗಲೇ ಮದುವೆಯಾಗಿ ಮೂವರು ಮಕ್ಕಳೂ ಆಗಿದ್ದರು. ಆದರೆ ಅದೊಂದು ದಿನ ನಾಟಕವೊಂದನ್ನು ಬರೆಯುವ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಯಿತು. “ಜೀವನದ ಹಲವು ಗಳಿಗೆಗಳಲ್ಲಿ ಪ್ರೀತಿಗೆ ಜಾರುವ ಗಳಿಗೆ ಯಾವುದು ಎಂದು ಹೇಳುವುದು ಕಷ್ಟ,” ಎನ್ನುತ್ತಾರೆ ತ್ರೋನ್ಯ. ಹಾಗೆ, ಪರಸ್ಪರ ಪ್ರೀತಿಗೆ ಬಿದ್ದರಾದರೂ, ಆಗಿನ್ನೂ ಬಾಲಕ ಮ್ಯಾಕ್ರನ್ ಮನೆಯಲ್ಲಿ ವಿರೋಧ ವ್ಯಕ್ತವಾಯಿತು. ವೈದ್ಯರಾಗಿದ್ದ ತಂದೆ, ಮಗನನ್ನು ಪ್ಯಾರೀಸ್‌ ಕಾಲೇಜಿಗೆ ಸೇರಿಸಿದರು. ಶಿಕ್ಷಣ ಮುಂದುವರಿಸುವ ಜತೆಗೆ, ಮ್ಯಾಕ್ರನ್ ತಮ್ಮ ಹಳೆಯ ಪ್ರೀತಿಯನ್ನೂ ಮುಂದುವರಿಸಿದರು. ಮುಂದೆ, ಅವರಿಬ್ಬರು ಮದುವೆಯಾದರು. ಮೊಮ್ಮಕ್ಕಳನ್ನು ಆಡಿಸುವ ವೇಳೆಯಲ್ಲಿ ತ್ರೋನ್ಯಾ ತಮ್ಮ ಎರಡನೇ ಸುತ್ತಿನ ದಾಂಪತ್ಯ ಬದುಕಿಗೆ ಕಾಲಿಟ್ಟರು.

“ಇವತ್ತು ನಾನೇನು ಆಗಿದ್ದೆನೋ, ಅದರ ಹಿಂದಿರುವುದು ನನ್ನ ಟೀಚರ್ ಕಮ್ ವೈಫ್,” ಎಂದು ಮ್ಯಾಕ್ರನ್ ತಮ್ಮ ಪ್ರಚಾರ ಸಭೆಗಳಲ್ಲಿ ಹೇಳಿಕೊಂಡು ಬರುತ್ತಿದ್ದಾರೆ. ಅವರ ಹೊಸ ಮಾದರಿಯ ಹಣಕಾಸು ನೀತಿಗಳು, ಫ್ಯಾನ್ಸ್ ಜನರಿಗೆ ನೀಡಿರುವ ಭವಿಷ್ಯದ ಭರವಸೆಗಳ ಜತೆಗೆ, ಅವರ ವೈಯಕ್ತಿಕ ಬದುಕಿನ ಪ್ರೇಮ ಕಾವ್ಯ ಕೂಡ ಜನರನ್ನು ಸೆಳೆಯುವ ಅಂಶವಾಗಿದೆ. ಸದ್ಯ ಇನ್ನೊಂದು ಸುತ್ತಿನ ಮತದಾನ ಬಾಕಿ ಇದೆ. ಮೊದಲ ಸುತ್ತಿನಲ್ಲಿ ಸಾಧಿಸಿರುವ ಮುನ್ನಡೆಯನ್ನು ಮ್ಯಾಕ್ರನ್ ಕಾಯ್ದುಕೊಂಡಿದ್ದೇ ಆದರೆ, ಫ್ರಾನ್ಸ್ ದೇಶ ಹೊಸ ಅಧ್ಯಕ್ಷರನ್ನೂ ಮಾತ್ರವಲ್ಲ; ಅಪರೂಪದ ದಂಪತಿಯನ್ನೂ ತನ್ನ ಪ್ರಥಮ ಪ್ರಜೆಯ ಸ್ಥಾನದಲ್ಲಿ ನೋಡಲಿದೆ.

 

 

Leave a comment

FOOT PRINT

Top