An unconventional News Portal.

ತ್ಯಾಗ; ಕ್ರೌರ್ಯದ ಮೇಲಾಟದಲ್ಲಿ ತೆರೆಮರೆಗೆ ಸರಿದ ಆದಿವಾಸಿಗಳ ನೈಜ ಚಿತ್ರಣ ಇದು!

ತ್ಯಾಗ; ಕ್ರೌರ್ಯದ ಮೇಲಾಟದಲ್ಲಿ ತೆರೆಮರೆಗೆ ಸರಿದ ಆದಿವಾಸಿಗಳ ನೈಜ ಚಿತ್ರಣ ಇದು!

ದೇಶದಲ್ಲಿ ದಶಕಗಳ ಕಾಲ ಜೀವಂತವಾಗಿರುವ ‘ಸರಕಾರ ಮತ್ತು ಮಾವೋವಾದಿ’ಗಳ ನಡುವಿನ ಆಂತರಿಕ ಸಂಘರ್ಷಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ. ಸೋಮವಾರ ನಡೆದ ಗೆರಿಲ್ಲಾ ದಾಳಿಯಲ್ಲಿ 24 ಮಂಡಿ ಸಿಆರ್‌ಪಿಎಫ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ ಒಂದು ದಶಕದ ಅಂತರದಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಸಾವು ನೋವಿನ ಪಟ್ಟಿಗೆ ಹೊಸ ಸೇರ್ಪಡೆಯಾದಂತಾಗಿದೆ.

ವರದಿಗಳ ಪ್ರಕಾರ, 1996ರಿಂದ 2016ರ ನಡುವೆ ಭಾರತದಲ್ಲಿ ಮಾವೋವಾದಿ ಮತ್ತು ಪೊಲೀಸರು, ಅರೆಸೇನಾಪಡೆಗಳ ನಡುವಿನ ಸಂಘರ್ಷದಲ್ಲಿ ಸಾವನ್ನಪ್ಪಿರುವ ನಾಗರಿಕರು, ಆದಿವಾಸಿಗಳ ಸಂಖ್ಯೆಯೇ ಸುಮಾರು 8 ಸಾವಿರ. ಜತೆಗೆ, ಸುಮಾರು 3 ಸಾವಿರ ಪೊಲೀಸರು ಮತ್ತು ಸೈನಿಕರು ಹಾಗೂ ಅಷ್ಟೇ ಸಂಖ್ಯೆಯ ಮಾವೋವಾದಿಗಳೂ ಸಾವನ್ನಪ್ಪಿದ್ದಾರೆ. ಒಟ್ಟಾರೆ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ 14 ಸಾವಿರ.

ಹೀಗೆ, ಪ್ರತಿ ಬಾರಿಯೂ ಇಂತಹ ದಾಳಿಗಳು ನಡೆದಾಗ ಒಂದಷ್ಟು ಚರ್ಚೆಗಳು ಆಗುತ್ತವೆ. ಅರೆಸೇನಾ ಪಡೆಯ ತ್ಯಾಗ, ಮಾವೋವಾದಿಗಳ ಕ್ರೌರ್ಯಗಳ ಕುರಿತು ಮಾತುಗಳು ಕೇಳಿಬರುತ್ತವೆ. ಆದರೆ ಅದರಾಚೆಗೆ, ಅತ್ತ ಪೊಲೀಸ್‌ ಮತ್ತು ಮಿಲಿಟರಿ ಪಡೆಗಳು, ಇತ್ತ ಮಾವೋವಾದಿಗಳ ಬಂದೂಕಿನ ನಡುವೆ ಸಿಲುಕಿರುವ ಆದಿವಾಸಿಗಳು ಮತ್ತವರ ಸಮಸ್ಯೆಗಳ ಕುರಿತು ಗಮನ ಹರಿಯದೇ ಹೋಗುತ್ತದೆ.

ಈ ಬಾರಿ ಕೂಡ, ಛತ್ತೀಸ್‌ಘಡ ರಾಜ್ಯ, ಅಲ್ಲಿನ ಖನಿಜ ಸಂಪತ್ತು, ಅದನ್ನು ಲೂಟಿ ಹೊಡೆಯಲು ಹೊರಟಿರುವ ಕಾರ್ಪೊರೇಟ್ ಕಂಪನಿಗಳು ಮತ್ತು ಅದರ ವಿರುದ್ಧ ಹೋರಾಟಕ್ಕೆ ಇಳಿದಿರುವ ಮಾವೋವಾದಿಗಳ ಗುಂಡೇಟಿಗೆ ಬಲಿಯಾದ ಮಿಲಿಟರಿ ಪಡೆಗಳ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ದಾಳಿಗೆ ಯಾರು ಹೊಣೆ? ಎಂದು ತೀರ್ಮಾನಿಸುವ ಆತುರಗಳು ಕಾಣಿಸುತ್ತಿವೆ. ಆದರೆ ಇವರಿಬ್ಬರನ್ನು ದಾಟಿ ನಡುವೆ ಸಿಲುಕಿರುವ ಆದಿವಾಸಿಗಳ ಬದುಕಿನ ಕುರಿತು ಮೇಲ್ಮಟ್ಟದ ಮಾತುಗಳು ತೇಲಿ ಬರುತ್ತಿವೆ.

ನಿಜಕ್ಕೂ ಆದಿವಾಸಿಗಳ ಬದುಕು ಹೇಗಿದೆ? ಅವರು ಯಾಕೆ ಮಾವೋವಾದಿಗಳ ಶಶಸ್ತ್ರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ? ಅದು ಭಯಕ್ಕೋ? ಇಲ್ಲಾ ಬದುಕಿನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಕಾರಣಕ್ಕೋ? ಇಂತಹ ಪ್ರಶ್ನೆಗಳನ್ನು ನಾಗರಿಕ ಸಮಾಜ ಕೇಳಿಕೊಳ್ಳಬೇಕಿದೆ.

ಈ ಭಾಗದ ಆದಿವಾಸಿ ಹಳ್ಳಿಗಳಲ್ಲಿ ಓಡಾಡಿದ ಸತ್ನಾಮ್‌ ಎಂಬ ಲೇಖಕರು ‘ಜಂಗಲ್‌ ನಾಮ’ ಎಂಬ ಪುಸ್ತಕದಲ್ಲಿ ತಳಮಟ್ಟದ ಪರಿಸ್ಥಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ಕನ್ನಡಕ್ಕೆ ಪತ್ರಕರ್ತ ಕುಮಾರ್‌ ಬುರಡಿಕಟ್ಟಿ ತಂದಿದ್ದಾರೆ. ಆ ಪುಸ್ತಕ ಆಯ್ದ ಭಾಗವೊಂದನ್ನು ‘ಸಮಾಚಾರ’ ಪ್ರಕಟಿಸುತ್ತಿದೆ.

*

jungle-naama-1ನಾರಂಗ್‍ನೊಂದಿಗೆ ಸಮಯ ಕಳೆದದ್ದು ಆದಿವಾಸಿ ಗ್ರಾಮೀಣ ಬದುಕಿನ ಬಗ್ಗೆ ಅರಿತುಕೊಳ್ಳುವುದಕ್ಕೆ ಸಹಕರಿಸಿತು. ಮಾತನಾಡುತ್ತಲೇ ಸುತ್ತಮುತ್ತ ಒಂದಿಷ್ಟು ತಿರುಗಾಡುವುದಕ್ಕೆ ನಿರ್ಧರಿಸಿದೆವು.

“ನಾರಂಗ್ ಅಣ್ಣಾ! ಬಹಳ ದೂರ ಹೋಗಬೇಡಿ” ಚಂದನ್ ಕೂಗಿ ಹೇಳಿದ.

“ಇಲ್ಲ, ಇಲ್ಲೇ ಹಳ್ಳಿಗೆ ಹೋಗುತ್ತಿದ್ದೇವಷ್ಟೆ.”

ಪ್ರತಿಯೊಂದು ಆದಿವಾಸಿ ಹಳ್ಳಿಯೂ ಅಲ್ಲಲ್ಲಿ ಚದುರಿದ ಮನೆಗಳ ಒಂದು ಸಮುಚ್ಛಯ. ಅಲ್ಲಿ ರಸ್ತೆ ಮತ್ತು ಒಳಚರಂಡಿಗಳಂಥ ನಾಗರಿಕ ಸೌಕರ್ಯಗಳ ಪ್ರಶ್ನೆಯೇ ಇಲ್ಲ. ಒಂದು ಗುಡಿಸಲು ಇಲ್ಲಿ, ಇನ್ನೊಂದು ಅಲ್ಲಿ ದೂರದಲ್ಲಿ; ಒಂದು ಮನೆಗೆ ನಾಲ್ಕೈದು ದಾರಿಗಳು. ಮನೆಯ ಅಂಗಳದ ಸುತ್ತ ಬಿದಿರಿನ ಬೊಂಬುಗಳಿಂದ ನಿರ್ಮಿಸಲಾದ ಬೇಲಿ. ಪ್ರತಿಯೊಂದು ಅಂಗಳದಲ್ಲೂ ಐದರಿಂದ ಏಳು ಕೋಳಿಗಳನ್ನೊಳಗೊಂಡ ಕೋಳಿದೊಡ್ಡಿ. ಕುರಿಗಳಿಗಾಗಿ ದಪ್ಪನೆಯ ಮರದ ತೊಲೆಗಳನ್ನು ನೆಲದೊಳಗೆ ನೆಟ್ಟು ನಿರ್ಮಿಸಲಾದ ಐದು ಅಡಿ ಎತ್ತರದ ದಸಿಗೋಡೆ. ದನಗಳಿಗೆ ಯಾವುದೇ ಕೊಟ್ಟಿಗೆಯಿಲ್ಲ; ಅಂಗಳದ ತುಂಬ ಸ್ವತಂತ್ರವಾಗಿ ವಿರಮಿಸುತ್ತವೆ. ಅವುಗಳನ್ನು ನಿಯಂತ್ರಿಸುವುದಕ್ಕೆ ಯಾವುದೇ ದನಗಾಹಿ ಕೂಡ ಇರುವುದಿಲ್ಲ.

ಪ್ರತಿಯೊಂದು ಮನೆಯಲ್ಲೂ ಮಣ್ಣುಲೇಪಿತ ಗೋಡೆಗಳನ್ನೊಳಗೊಂಡ ಒಂದು ಅಥವಾ ಎರಡು ಕೊಠಡಿಗಳು. ಗುಡಿಸಲಿನ ಒಳಗೋಡೆಗಳನ್ನು ಸಾಮಾನ್ಯವಾಗಿ ಸಾಗವಾನಿ ಮರದ ಹಲಗೆಗಳಿಂದ ನಿರ್ಮಿಸಲಾಗಿದ್ದರೆ ಹೊರಗೋಡೆಗಳಿಗೆ ಮಣ್ಣು ಲೇಪಿಸಲಾಗಿರುತ್ತದೆ. ಗೋಡೆಗಳ ಮೇಲೆ ಹೂವುಗಳ, ಎಲೆಗಳ ಮತ್ತು ಹಕ್ಕಿಗಳ ಚಿತ್ರ ಬಿಡಿಸಿರುತ್ತಾರೆ. ಮೇಲ್ಛಾವಣಿ ಸಾಮಾನ್ಯವಾಗಿ ಹತ್ತರಿಂದ ಹನ್ನೊಂದು ಅಡಿ ಎತ್ತರವಿರುತ್ತದೆ. ಇದ್ದುದರಲ್ಲಿ ಸ್ವಲ್ಪ ಜಾಸ್ತಿ ಆದಾಯ ಬರುವ ಆದಿವಾಸಿ ರೈತರು ಮೇಲ್ಚಾವಣಿಗೆ ಹೆಂಚು ಹೊದಿಸಿರುತ್ತಾರೆ. ಆದರೆ, ಬಹುತೇಕ ಹಳ್ಳಿಗಳಲ್ಲಿ ಹೆಂಚಿನ ಮನೆಗಳು ಸಿಗುವುದು ತೀರಾ ವಿರಳ. ಮರಗಳನ್ನು ಕಡಿಯುವುದಕ್ಕೆ, ತಮ್ಮ ಗುಡಿಸಲುಗಳನ್ನು ಕಟ್ಟಿಕೊಳ್ಳುವುದಕ್ಕೆ ಆದಿವಾಸಿಗಳು ಬಳಸುವ ಏಕೈಕ ಸಲಕರಣೆ ಎಂದರೆ ಕೊಡಲಿ. ಗರಗಸವನ್ನೂ ಉಪಯೋಗಿಸುವುದಿಲ್ಲ, ಉಜ್ಜುಗೊರಡನ್ನೂ ಉಪಯೋಗಿಸುವುದಿಲ್ಲ. ಆದಿವಾಸಿಗಳ ಹತ್ತಿರ ಹೆಚ್ಚು ಪಾತ್ರೆಪಗಡಗಳಿರುವುದಿಲ್ಲ.

ಒಂದು ಮನೆಯಲ್ಲಿ ಒಂದೆರಡು ತಟ್ಟೆಗಳು, ಲೋಟಗಳು, ಕಪ್ಪುಗಳು, ಒಂದು ಬೋಗುಣಿ, ಮರದ ಸೌಟು, ಒಂದು ಹೂಜಿ, ಎರಡು ಹಿಡಿಗಳ ಹೂಜಿ, ಸಮತಟ್ಟಾದ ಹುರಿಯುವ ಪಾತ್ರೆ, ಒಂದಿಷ್ಟು ಮಡಿಕೆ-ಕುಡಿಕೆಗಳು ಅಷ್ಟೆ. ಬಹುತೇಕ ಆದಿವಾಸಿಗಳ ಮನೆಯಲ್ಲಿ ಇರುವ ಪಾತ್ರೆಪಗಡಗಳೆಂದರೆ ಇವೆ. ಒಂದೊಂದು ಗುಡಿಸಲಿನಲ್ಲೂ ಭತ್ತ ಕುಟ್ಟುವ ಒರಳಿರುತ್ತದೆ; ಪ್ರತಿಯೊಂದು ಮನೆಯಲ್ಲೂ ಒಂದು ಕೊಡಲಿ, ಬೃಹತ್ ಕುಡುಗೋಲು ಹಾಗೂ ಎಣ್ಣೆ ತೆಗೆಯುವುದಕ್ಕೆ ಕಲ್ಲಿನ ಹಾಸುಗಳೂ ಇರುತ್ತವೆ. ಕೆಲವು ಮನೆಗಳಲ್ಲಿ ನಾಲ್ಕು ಅಡಿಗಳಷ್ಟು ಉದ್ದದ ಪುಟ್ಟ ಮೇಜು ಕಾಣಸಿಗುತ್ತದೆ. ಪ್ರತಿಯೊಂದು ಆದಿವಾಸಿ ಗುಡಿಸಲಿನಲ್ಲೂ ಡೊಳ್ಳು ಅಥವಾ ಡ್ರಮ್ ಎಂಬ ಸಂಗೀತ ಸಲಕರಣೆ ಸಾಮಾನ್ಯವಾಗಿ ಇದ್ದೇ ಇರುತ್ತದೆ.

ಸ್ವಲ್ಪ ದೊಡ್ಡ ಹಳ್ಳಿಗಳಲ್ಲಿ ಸಾಮಾನ್ಯವಾಗಿ ನಾಲ್ಕು ಬಗೆಯ ಕುಶಲಿಗಳಿರುತ್ತಾರೆ: ಸೂಲಗಿತ್ತಿ, ಕಮ್ಮಾರ, ಕುಂಬಾರ ಮತ್ತು ಮಂತ್ರವಾದಿ. ಬಟ್ಟೆ ನೇಯುವವರು, ಚರ್ಮದ ಕೆಲಸ ಮಾಡುವವರು, ಬಡಗಿಗಳು ಮುಂತಾದ ಕುಶಲಕರ್ಮಿಗಳು ಕಾಣಸಿಗುವುದಿಲ್ಲ. ಮನೆಯಲ್ಲಿ ಯಾವುದೇ ದೇವ-ದೇವತೆಗಳ ಮೂರ್ತಿಯಾಗಲೀ ಅಥವಾ ಹಳ್ಳಿಯಲ್ಲಿ ದೇವಸ್ಥಾನವಾಗಲಿ ಎಲ್ಲೂ ಕಾಣುವುದಿಲ್ಲ. ಹಳ್ಳಿಯ ಹೊರವಲಯದಲ್ಲಿ ಒಂದು ಗುಡಿಸಲನ್ನು ನಿರ್ಮಿಸಿ ಅಲ್ಲಿ ಆನೆ ಅಥವಾ ಕುರಿಗಳ ಸಂಕೇತಗಳನ್ನು ಅಥವಾ ಪ್ರತೀಕಗಳನ್ನು ಇಟ್ಟಿರುತ್ತಾರಷ್ಟೆ. ವರ್ಷದಲ್ಲಿ ಒಮ್ಮೆಯೋ ಅಥವಾ ಎರಡು ಬಾರಿಯೋ ಹಬ್ಬಗಿಬ್ಬ ಬಂದರೆ ಈ ಮೂರ್ತಿಗಳನ್ನು ಸ್ವಚ್ಛಗೊಳಿಸುತ್ತಾರೆ. ಕೆಲವೇ ಕೆಲವು ಮನೆಗಳಲ್ಲಿ ದೀಪಗಳಿದ್ದು ಅವುಗಳನ್ನೂ ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ. ಪ್ರತಿಯೊಂದು ಗುಡಿಸಲಿನಲ್ಲೂ ಬಿದಿರುಜಾಲರಿ ಮಾತ್ರ ಇದ್ದೇ ಇರುತ್ತದೆ; ಆದರೆ, ಕಣೆ ಮತ್ತು ಹುಲ್ಲುಗಳಿಂದ ಹೆಣೆದ ಸ್ಟೂಲು ಕೆಲವೇ ಮನೆಗಳಲ್ಲಿ ಮಾತ್ರ ಕಾಣಸಿಗುತ್ತದೆ. ಇನ್ನು ಕುರ್ಚಿ ಮತ್ತು ಮೇಜುಗಳಂತೂ ಯಾರ ಮನೆಯಲ್ಲೂ ಇಲ್ಲ. ಒಂದು ಮನೆಯಲ್ಲಿ ಎಷ್ಟು ಪುರುಷರಿರುತ್ತಾರೋ ಅಷ್ಟು ಬಿಲ್ಲುಗಳಿರುತ್ತವೆ. ಸಾಮಾನ್ಯವಾಗಿ ಬಾಣಗಳನ್ನು ಬತ್ತಳಿಕೆಯಲ್ಲಿ ಇಟ್ಟಿರುವುದಿಲ್ಲ; ಅವುಗಳನ್ನು ಮೇಲ್ಛಾವಣಿಯ ಅಡಿಯಲ್ಲಿರುವ ತೊಲೆಗಳ ಸಂದಿನಲ್ಲಿ ಸಿಕ್ಕಿಸಿಟ್ಟಿರುತ್ತಾರೆ. ಕೆಲವು ಮನೆಗಳಲ್ಲಿ ಬಹಳ ಸುದೀರ್ಘ ಕಾಲದಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಸಿಂಹದ ಅಥವಾ ಹುಲಿಯ ಚರ್ಮಗಳೂ ಕಾಣಸಿಗುತ್ತವೆ. ಪ್ರತಿ ಮನೆಯಲ್ಲಿ ಭತ್ತ ಶೇಖರಿಸಿಟ್ಟುಕೊಳ್ಳುವುದಕ್ಕೆ ಬಿದಿರಿನ ಬುಟ್ಟಿಗಳಿರುತ್ತವೆ; ಆದರೆ, ಕೆಲವೇ ಮನೆಗಳಲ್ಲಿ ಟಿನ್ನಿನ ಡಬ್ಬಗಳು ಕಾಣಸಿಗುತ್ತವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿದ್ದಿರುವಂತೆ ಕಾಣುವುದಿಲ್ಲ.

ಬಸ್ತಾರ್ ಅರಣ್ಯದ ಆದಿವಾಸಿ ಮಹಿಳೆಯರು.

ಬಸ್ತಾರ್ ಅರಣ್ಯದ ಆದಿವಾಸಿ ಮಹಿಳೆಯರು.

ಸಾಮಾನ್ಯವಾಗಿ ಜನ ಬೂಟುಗಳನ್ನು ಹಾಕಿಕೊಳ್ಳುವುದಿಲ್ಲ. ಕೆಲವು ಕುತೂಹಲಿ ಯುವಕರು ನಗರಗಳಿಂದ ಬೂಟುಗಳನ್ನು ಖರೀದಿಸಿ ಧರಿಸುವುದೂ ಉಂಟು; ಆದರೆ, ಮಹಿಳೆಯರಿಗಾಗಿ ಮಾತ್ರ ಅವುಗಳನ್ನು ಎಂದೂ ಕೊಂಡು ತರುವುದಿಲ್ಲ. ತಮಗಾಗಿ ಕೊಂಡು ತಂದರೂ ಅವುಗಳನ್ನು ಹೆಚ್ಚು ಉಪಯೋಗಿಸುವುದೇ ಇಲ್ಲ. ಸಾಮಾಜಿಕ ಅಂತಸ್ತಿನ ಸಂಕೇತವಾಗಿ ಅವುಗಳನ್ನು ಜೋಪಾನವಾಗಿ ಕಾಯ್ದಿಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ ಮಕ್ಕಳು ಬಹುತೇಕ ಬೆತ್ತಲೆ ತಿರುಗಾಡುತ್ತಿರುತ್ತವೆ. ಗೊಂಡಿಯಲ್ಲಿ ಪನೋಡೆ ಎಂದು ಕರೆಯಲಾಗುವ ಉಡಿದಾರವನ್ನು ಎಲ್ಲಾ ಮಕ್ಕಳ ಸೊಂಟದ ಸುತ್ತಲೂ ಬಳಸಿ ಕಟ್ಟಿರುತ್ತಾರೆ. ಒಂದು ಮನೆಯಲ್ಲಿ ಮೂರು ಅಥವಾ ನಾಲ್ಕಕ್ಕಿಂತ ಹೆಚ್ಚು ಮಕ್ಕಳು ಕಾಣಸಿಗುವುದು ತೀರಾ ವಿರಳ. ಹೆರಿಗೆ ಸಮಯದಲ್ಲಿ ಮಹಿಳೆಯರು ಸಾಯುವುದು ಇಲ್ಲಿ ಸರ್ವೇಸಾಮಾನ್ಯ; ಶಿಶುಮರಣದ ಪ್ರಮಾಣವೂ ತೀರಾ ಹೆಚ್ಚಾಗಿದೆ.

ಆದಿವಾಸಿ ಪುರುಷ-ಮಹಿಳೆಯರಿಬ್ಬರೂ ತಂಬಾಕನ್ನು ಜಗಿಯುತ್ತಾರೆ, ಸೇದುತ್ತಾರೆ. ಪುರುಷರು ಬೀಡಿಯನ್ನೂ ಸೇದುತ್ತಾರೆ. ಗೆರಿಲ್ಲಾಗಳು ಸ್ಥಾಪಿಸಿರುವ ವೈದ್ಯಕೀಯ ಘಟಕದ ಕಾರ್ಯಕರ್ತರ ಹಿತವಚನಗಳಿಗೆ ತದ್ವಿರುದ್ಧವಾಗಿ ಆದಿವಾಸಿಗಳು ತಮ್ಮ ಪಾತ್ರೆಗಳನ್ನು ಬೂದಿಯಿಂದ ತಿಕ್ಕಿ ಸ್ವಚ್ಛಗೊಳಿಸದೇ ಮಣ್ಣಿನಿಂದ ತಿಕ್ಕುತ್ತಾರೆ.

ಪ್ರತೀ ಆದಿವಾಸಿ ಕುಟುಂಬಕ್ಕೂ ಅಲ್ಪಸ್ವಲ್ಪ ಜಮೀನಿದೆ. ಕಳೆದ ಕೆಲವು ವರ್ಷಗಳಿಂದೀಚೆಗಷ್ಟೇ ಅವರು ಒಂದೆಡೆ ನೆಲೆನಿಂತ ಕೃಷಿಯನ್ನು ಪ್ರಾರಂಭಿಸಿದ್ದಾರೆ. ಅದಕ್ಕೂ ಮೊದಲು ಪ್ರತೀ ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಬೇರೆಬೇರೆ ಕಡೆ ಹೋಗಿ ಹೊಸ ಹೊಸ ಜಮೀನಿನಲ್ಲಿ ಕೃಷಿ ಮಾಡುವ ಪೋಡು ಬೇಸಾಯ ಪದ್ಧತಿಯನ್ನು ಅನುಸರಿಸುತ್ತಿದ್ದರು. ಗೆರಿಲ್ಲಾಗಳು ದೂರದೂರದ ಪ್ರದೇಶಗಳ ಆದಿವಾಸಿಗಳನ್ನು ಒಗ್ಗೂಡಿಸಿ ಅವರಿಗೆ ಭೂಮಿಯನ್ನು ಹಂಚಿದ್ದಾರೆ. ಗೆರಿಲ್ಲಾಗಳು ಈಗ ಅವರಿಗೆ ಭೂಮಿಯ ಒಡೆತನದ ಹಕ್ಕನ್ನೂ ನೀಡಲಾರಂಭಿಸಿದ್ದಾರೆ. ಹಳ್ಳಿಗಳಲ್ಲಿದ್ದ ಕೆಲವು ಪಟೇಲ್‍ಗಳು, ಭೂಮಾಲಿಕರು ತಮ್ಮ ಊರುಗಳನ್ನು ತೊರೆದು ನಗರಕ್ಕೆ ಹೊರಟುಹೋಗಿದ್ದರೆ ಉಳಿದುಕೊಂಡವರು ಬೇಸಾಯ ಮಾಡುತ್ತಿದ್ದಾರೆ. ಆದರೆ, ಸಾಮಾನ್ಯ ಆದಿವಾಸಿಗೆ ನೀಡಿರುವ ಜಮೀನಿಗಿಂತ ಒಂದು ತುಣುಕು ಹೆಚ್ಚು ಭೂಮಿಯನ್ನೂ ಯಾವ ವ್ಯಕ್ತಿಯೂ ಹೊಂದುವಂತಿಲ್ಲ. ಒಂದು ವೇಳೆ ಒಂದು ನಿರ್ದಿಷ್ಟ ಕುಟುಂಬ ಗಾತ್ರದಲ್ಲಿ ದೊಡ್ಡದಿದ್ದರೆ ಮಾತ್ರ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಭೂಮಿ ನೀಡಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜಮೀನಿನಲ್ಲಿ ಬೇಸಾಯ ಮಾಡಬೇಕು. ತಮ್ಮ ಜಮೀನಿನಲ್ಲಿ ಕೆಲಸ ಮಾಡುವುದಕ್ಕೆ ಕೂಲಿ ಆಳುಗಳನ್ನು ಬಳಸುವ ಪದ್ಧತಿ ಜಾರಿಯಲ್ಲಿ ಇಲ್ಲ. ಇದ್ದರೂ ತೀರಾ ಅಪರೂಪ. ತನ್ನಿಂದ ಎಷ್ಟು ಪ್ರಮಾಣದ ಭೂಮಿಯನ್ನು ಉಳುಮೆ ಮಾಡುವುದಕ್ಕೆ ಸಾಧ್ಯವೋ ಅಷ್ಟು ಭೂಮಿಯನ್ನು ಪಡೆದುಕೊಳ್ಳುವುದಕ್ಕೆ ಕಾಡನ್ನು ಕಡಿಯುವಂತೆ ಈಗ್ಗೆ ಎಂಟು ವರ್ಷಗಳ ಹಿಂದೆ ಪ್ರತೀ ಕುಟುಂಬಕ್ಕೂ ಹೇಳಲಾಗಿತ್ತು. ಆದರೆ, ಈಗ ಎಲ್ಲಾ ಕುಟುಂಬಗಳಿಗೂ ಭೂಮಿ ಸಿಕ್ಕಿರುವುದರಿಂದ ಕಾಡನ್ನು ಕಡಿಯುವ ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದಿವಾಸಿಯೇತರ ಜನರು ಇಲ್ಲಿ ಬಂದು ನೆಲೆಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಯಾರಾದರೂ ಏನಾದರೂ ವ್ಯಾಪಾರ, ವಹಿವಾಟು ನಡೆಸಬೇಕೆಂದರೆ ಅವರು ಮೊದಲು ಗೆರಿಲ್ಲಾಗಳ ಅನುಮತಿ ಪಡೆಯಬೇಕು. ಗೆರಿಲ್ಲಾಗಳ ಪರವಾನಿಗೆ ಇಲ್ಲದೇ ಯಾರೂ ಯಾವುದೇ ರೀತಿಯ ವಾಣಿಜ್ಯ ವ್ಯವಹಾರಗಳನ್ನು ಮಾಡುವಂತಿಲ್ಲ.

ಹಾತ್ ಎಂದು ಕರೆಯುವ ಆದಿವಾಸಿಗಳ ಸ್ಥಳೀಯ ಸಂತೆ.

ಹಾತ್ ಎಂದು ಕರೆಯುವ ಆದಿವಾಸಿಗಳ ಸ್ಥಳೀಯ ಸಂತೆ.

ಹಾತ್ ಎಂದು ಕರೆಯಲಾಗುವ ಸಂತೆಗಳಲ್ಲಿ ಆದಿವಾಸಿಗಳಿಗೆ ಮೋಸವಾಗುವುದನ್ನು ತಡೆಯುವುದಕ್ಕಾಗಿ ಅಲ್ಲೂ ಕೂಡ ಗೆರಿಲ್ಲಾಗಳು ತಮ್ಮ ಮಿಲಿಟರಿ ಸಮವಸ್ತ್ರ ಧರಿಸಿಕೊಂಡೇ ತಿರುಗಾಡುತ್ತಾರೆ. ನನ್ನೊಂದಿಗೆ ಮಾತನಾಡಿದ ವ್ಯಾಪಾರಿಗಳೂ ಕೂಡ ಗೆರಿಲ್ಲಾಗಳು ಎಂದೂ, ಯಾವ ರೀತಿಯಲ್ಲೂ ತಮಗೆ ಬೆದರಿಸುವುದಿಲ್ಲ ಎಂದೇ ಹೇಳುತ್ತಿದ್ದರು. ನಿಜ ಹೇಳಬೇಕೆಂದರೆ, ಗೆರಿಲ್ಲಾಗಳ ನಿಯಂತ್ರಣದಲ್ಲಿರುವ ಇಡೀ ಪ್ರದೇಶದಲ್ಲಿ ಕಳ್ಳತನ ಮತ್ತು ದರೋಡೆಗಳ ಭಯವೇ ಇಲ್ಲವಾದ್ದರಿಂದ ವ್ಯಾಪಾರಿಗಳೂ ಕೂಡ ನೆಮ್ಮದಿಯಿಂದ ವ್ಯವಹಾರ ಮಾಡಲು ಸಾಧ್ಯವಾಗುತ್ತಿದೆಯಂತೆ. ಹಾತ್‍ಗಳಲ್ಲಿ ತೀರಾ ಮೂಲಭೂತವಾದ ಮತ್ತು ಅತ್ಯವಶ್ಯಕವಾದ ವಸ್ತುಗಳ ವ್ಯಾಪಾರ ನಡೆಯುತ್ತದೆ; ಆದರೂ ವಹಿವಾಟಿನ ಪ್ರಮಾಣ ಮಾತ್ರ ಬೃಹತ್ತಾಗಿರುತ್ತದೆ. ವ್ಯಾಪಾರ, ವಹಿವಾಟು ಯಾವುದೇ ಸಮಸ್ಯೆಯಿಲ್ಲದೇ, ಯಾವುದೇ ಗೋಜುಗೊಂದಲಗಳಿಲ್ಲದೇ ಸುಸೂತ್ರವಾಗಿ ನಡೆಯುತ್ತದೆ. ಪ್ರತೀ ಹತ್ತು ಅಥವಾ ಹದಿನೈದು ದಿನಗಳಿಗೊಮ್ಮೆ ನಿರ್ದಿಷ್ಟ ಪ್ರದೇಶದಲ್ಲಿ ಹಾತ್ ಆಯೋಜನೆಗೊಳ್ಳುತ್ತದೆ. ಸುತ್ತಮುತ್ತಲ ಎಲ್ಲಾ ಆದಿವಾಸಿ ಹಳ್ಳಿಗಳಿಂದ ಜನ ಮೂಲಭೂತ ಅವಶ್ಯಕ ವಸ್ತುಗಳನ್ನು ಕೊಳ್ಳಲು, ತಮ್ಮ ಉತ್ಪನ್ನಗಳನ್ನು ಮಾರಲು ಅಲ್ಲಿ ಜಮಾಯಿಸುತ್ತಾರೆ. ಹಾತ್ ಆಯೋಜನೆಗೊಳ್ಳುವ ಹಳ್ಳಿಗೆ ವ್ಯಾಪಾರಿಗಳು ಒಂದು ದಿನ ಮುಂಚಿತವಾಗಿಯೇ ತಲುಪಿ ಯಾವುದೇ ಭಯಭೀತಿಗಳಿಲ್ಲದೇ ರಾತ್ರಿ ಕಳೆಯುತ್ತಾರೆ. ಇಡೀ ಭಾರತದಾದ್ಯಂತ ಆದಿವಾಸಿ ಪಟ್ಟಿಗಳಲ್ಲಿ ಹಸಿವಿನ ಸಾವುಗಳು ಸರ್ವೇಸಾಮಾನ್ಯವಾಗಿದ್ದರೂ ಗೆರಿಲ್ಲಾ ನಿಯಂತ್ರಣದ ಈ ಆದಿವಾಸಿ ಪ್ರದೇಶಗಳಲ್ಲಿ ಅಂಥ ಸಾವುಗಳನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಕ್ಷಾಮ, ವೇಶ್ಯಾವಾಟಿಕೆ, ಕೊಲೆ, ದರೋಡೆ ಮತ್ತು ಇನ್ನಿತರ ಚಿಕ್ಕ-ದೊಡ್ಡ ಅಪರಾಧಗಳಿಂದ ಜನರನ್ನು ಮುಕ್ತಿಗೊಳಿಸಲಾಗಿದೆ.

ಹಳ್ಳಿಯ ಒಂದೊಂದು ಮನೆಯ ಬಿಡಿಬಿಡಿ ತರಕಾರಿ ಕೈತೋಟಗಳನ್ನು, ಗೊಬ್ಬರ ಗುಂಡಿಗಳನ್ನು, ಶೆಡ್‍ಗಳನ್ನು ಹಾಗೂ ಸಹಕಾರಿ ಜಮೀನುಗಳನ್ನು ಪರಿವೀಕ್ಷಿಸುವುದಕ್ಕಾಗಿ ನಾನು ಮತ್ತು ನಾರಂಗ್ ಇಬ್ಬರೂ ಹಳ್ಳಿಯ ಸುತ್ತಮುತ್ತ ತಿರುಗಾಡಿದೆವು. ತರಕಾರಿ ಬೆಳೆಯುವ ಪ್ರಯೋಗವನ್ನು ಈಗ್ಗೆ ಎರಡು ವರ್ಷಗಳ ಹಿಂದೆಯಷ್ಟೇ ಪ್ರಾರಂಭಿಸಲಾಗಿದೆ. ನಾರಂಗ್ ಮತ್ತು ಆತನ ತಂಡದವರು ಹಳ್ಳಿಹಳ್ಳಿ ತಿರುಗಾಡಿ ಬೆಂಡೆ, ಟೋಮ್ಯಾಟೋ, ಬದನೆ, ಗಜ್ಜರಿ, ಮೂಲಂಗಿ, ಸೋರೆಕಾಯಿ ಮುಂತಾದ ಬೀಜಗಳನ್ನು ಆದಿವಾಸಿಗಳಿಗೆ ವಿತರಿಸಿದ್ದರು. ಬಹುತೇಕ ಹಳ್ಳಿಗರು ಮೊಟ್ಟ ಮೊದಲ ಬಾರಿಗೆ ತರಕಾರಿಯನ್ನು ಕಾಣಲಾರಂಭಿಸಿದರು. ಯಾವುದೇ ಮನೆಯಲ್ಲಿ ಸ್ವಂತ ಹ್ಯಾಂಡ್ ಪಂಪ್ ಇಲ್ಲವಾದ್ದರಿಂದ ಸಾಮುದಾಯಿಕ ಹ್ಯಾಂಡ್ ಪಂಪನ್ನೇ ಎಲ್ಲರೂ ಉಪಯೋಗಿಸುತ್ತಾರೆ. ಹಾಗಾಗಿ, ತರಕಾರಿ ಬೆಳೆಯುವುದಕ್ಕೆ ಸಾಕಷ್ಟು ನೀರು ಸಿಗುವುದಿಲ್ಲ. ಆದರೂ, ಸಿಗುವಷ್ಟು ನೀರನ್ನು ಸದ್ಬಳಕೆ ಮಾಡಿಕೊಂಡು ತರಕಾರಿ ಬೆಳೆಯಲು ಪ್ರಯತ್ನಿಸಲಾಗುತ್ತಿದೆ. ಅಡುಗೆ ಮನೆಯ ತ್ಯಾಜ್ಯ ನೀರನ್ನು ಬೆಳೆ ಬೆಳೆಯುವುದಕ್ಕೆ ಸದ್ಬಳಕೆ ಮಾಡಿಕೊಳ್ಳುವುದನ್ನು ಗೆರಿಲ್ಲಾಗಳು ಜನರಿಗೆ ಕಲಿಸಿದ್ದಾರೆ.

ಆದರೂ, ಕೆಲವು ಆದಿವಾಸಿ ಜನ ಇನ್ನೂ ಮಡಿಗಳಲ್ಲಿ ತರಕಾರಿ ಬೆಳೆಯುವುದನ್ನು ಚೆನ್ನಾಗಿ ಕಲಿತಿಲ್ಲ. ತರಕಾರಿ ಬೆಳೆಯುವ ಭೂಮಿ ಪೂರ್ತಿ ಕಲ್ಲು, ಜಲ್ಲಿ, ಕಳೆಗಳಿಂದ ತುಂಬಿಕೊಂಡಿತ್ತು. ಆದಿವಾಸಿಗಳು ತಾವು ಹಿಂದೆ ಮಾಡುತ್ತಿದ್ದಂತೆಯೇ ಈಗಲೂ ಎಲ್ಲಾ ರೀತಿಯ ಬೀಜಗಳನ್ನು ಬೆರೆಸಿ ಹೊಲದಲ್ಲಿ ಚೆಲ್ಲಿ ಬರುತ್ತಾರಷ್ಟೆ. ಹಾಗಾಗಿ ಬೆಳೆಯುವ ಗಿಡಗಳೂ ಕೂಡ ಒಂದಕ್ಕೊಂದು ತಳಕುಹಾಕಿಕೊಂಡು ಹಾಸುಹೊಕ್ಕಾಗಿ ಬೆಳೆದಿದ್ದವು. ಕೆಲವು ಕುಟುಂಬಗಳು ಬಿತ್ತನೆಗೆ ಮುಂಚೆ ಮಡಿಗಳನ್ನು ಚೆನ್ನಾಗಿ ಉತ್ತಿ, ಹಸನು ಮಾಡಿ ಅಣಿಗೊಳಿಸಿದ್ದರು. ಈ ಮಡಿಗಳಲ್ಲಿ ತರಕಾರಿಗಳು ಬಹಳ ಸುಂದರವಾಗಿ, ಸೊಗಸಾಗಿ ಬೆಳೆದುನಿಂತಿದ್ದವು. ವಾಸ್ತವದಲ್ಲಿ ಸುಂದರವಾಗಿ ಬೆಳೆದಿದ್ದ ಈ ತರಕಾರಿ ಮಡಿಗಳು ಎರಡನೇ ಬಾರಿಗೆ ತರಕಾರಿ ಬೆಳೆದಿದ್ದ ಜನರಿಗೆ ಸೇರಿದ್ದವು. ಮೊದಲ ಬಾರಿಗೆ ಉಳುಮೆ ಮಾಡಿದ ಮಡಿಗಳನ್ನು ಕಾಡುಬಳ್ಳಿಗಳು ಹಾಳುಗೆಡವಿದ್ದವು. ಕಳೆಕೀಳುವ ಕಲೆಯನ್ನು ಆದಿವಾಸಿಗಳಿನ್ನೂ ಕರಗತ ಮಾಡಿಕೊಂಡಿಲ್ಲ. ಈ ವರ್ಷ ನಾರಂಗ್ ಜನರಿಗೆ ತರಕಾರಿ ಮಡಿಗಳನ್ನು ಹೇಗೆ ನೋಡಿಕೊಳ್ಳಬೇಕೆಂಬ ಬಗ್ಗೆ ಕಲಿಸುತ್ತಿದ್ದ.

*

ದಿನಿತ್ಯದ ಆದಿವಾಸಿಗಳ ಬದುಕು.

ದಿನಿತ್ಯದ ಆದಿವಾಸಿಗಳ ಬದುಕು.

ಆದಿವಾಸಿಗಳು ಕಾಡಿನಿಂದ ಸಂಗ್ರಹಿಸಿದ ಮಹೂವಾ ಹೂವುಗಳನ್ನು ಮತ್ತು ಕಾಡು ಗಿಡಮೂಲಿಕೆಗಳನ್ನು ಬುಟ್ಟಿಗಟ್ಟಲೆ ಕೊಟ್ಟು ಅದರ ಬದಲಿಗೆ ಈ ವಸ್ತುಗಳನ್ನು ಪಡೆಯುತ್ತಾರೆ. ಈ ವರ್ಷ ಆದಿವಾಸಿಗಳು ಮಾಮೂಲಿ ಕುಂಬಳಕಾಯಿ ಮತ್ತು ಸೋರೆಕಾಯಿಗಳಲ್ಲದೇ ಹೊಸ ಹೊಸ ತರಕಾರಿಗಳ ರುಚಿ ನೋಡಲಿದ್ದರು. ಮುಂದಿನ ವರ್ಷ ನಾರಂಗ್ ಅರಿಶಿಣ, ಶುಂಠಿ, ಮೆಣಸಿನ ಕಾಯಿ, ಈರುಳ್ಳಿ, ಬೆಳ್ಳುಳ್ಳಿ ಮುಂತಾದವುಗಳನ್ನು ಬೆಳೆಯುವುದಕ್ಕೆ ವ್ಯವಸ್ಥೆ ಮಾಡುವವನಿದ್ದ. ಹಾಗೇನಾದರೂ ಆದರೆ ಆದಿವಾಸಿಗಳು ಇಷ್ಟು ವಸ್ತುಗಳ ವಿಚಾರದಲ್ಲಿ ಸ್ವಾವಲಂಬಿಗಳಾಗುತ್ತಾರೆ; ತಮ್ಮ ಕಾಡಿನ ಉತ್ಪನ್ನಗಳನ್ನು ಬೇರೆ ಇನ್ನಿತರ ಅವಶ್ಯಕ ವಸ್ತುಗಳನ್ನು ಪಡೆಯುವುದಕ್ಕಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಬಸ್ತರ್‍ನಲ್ಲಿ ನೀರಾವರಿ ಸಮಸ್ಯೆಯನ್ನು ಬಗೆಹರಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ಅನೇಕ ನದಿಗಳು, ತೊರೆಗಳು, ಕೆರೆಕಟ್ಟೆಗಳು ಇವೆಯಾದರೂ ತಗ್ಗುದಿಣ್ಣೆಗಳಿಂದ ಕೂಡಿದ, ಕಲ್ಲುಬಂಡೆಗಳಿಂದ ಆವೃತವಾದ ಈ ಕಠಿಣ ಭೌಗೋಳಿಕ ಪ್ರದೇಶದಲ್ಲಿ ನೀರು ಹರಿಯುವುದಕ್ಕೆ ಇಳಿಜಾರು ಕಾಲುವೆಗಳನ್ನು ತೋಡುವುದು ಬಹಳ ಕಠಿಣ ಮತ್ತು ಶ್ರಮದಾಯಕ ಕೆಲಸ. ಆದರೆ, ನಾರಂಗ್ ಮಾತ್ರ ಕೆರೆಗಳಿಂದ ಸಮಷ್ಟಿ ಹೊಲಗದ್ದೆಗಳಿಗೆ ನೀರು ಹಾಯಿಸುವುದಕ್ಕೆ ದೃಢನಿಶ್ಚಯ ಮಾಡಿದ್ದಾನೆ. ಭೂಗರ್ಭದಿಂದ ನೀರೆತ್ತುವುದು ಅದಕ್ಕಿಂತ ಕಷ್ಟ. ಕಲ್ಲುಬಂಡೆಗಳಿಂದ ಕೂಡಿದ ಭೂಮಿಯೊಳಗೆ 250ರಿಂದ 300 ಅಡಿ ಆಳ ಕೊಳವೆ ಬಾವಿ ಕೊರೆಯುವುದು ಭಾರಿ ಕಠಿಣ ಶ್ರಮವನ್ನು ಬೇಡುತ್ತದೆ. ಅದರಲ್ಲೂ ಇಲ್ಲಿ ವಿದ್ಯುಚ್ಛಕ್ತಿಯೂ ಇಲ್ಲ ಅಥವಾ ಕೊಳವೆ ಬಾವಿ ತೋಡುವ ಮಷೀನ್‍ಗಳನ್ನು ಸಾಗಿಸುವುದಕ್ಕೆ ರಸ್ತೆಗಳೂ ಇಲ್ಲ. ಹಾಗಾಗಿ ಅಷ್ಟು ಆಳದ ಬಾವಿ ತೋಡುವುದು, ಅದಕ್ಕಾಗಿ ಡೀಸೆಲ್ ಎಂಜಿನ್‍ಗಳನ್ನು, ಪೈಪುಗಳನ್ನು ಸಾಗಿಸುವುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ. ಇನ್ನೂ ದೊಡ್ಡ ಸಮಸ್ಯೆ ಎಂದರೆ ಕಾಡಿನ ಹೊರಗಿನ ಪ್ರದೇಶಗಳನ್ನು ನಿಯಂತ್ರಿಸುತ್ತಿರುವ ಸರ್ಕಾರ ಇದನ್ನೆಲ್ಲಾ ಮಾಡುವುದಕ್ಕೆ ಅವಕಾಶವನ್ನೂ ಕೊಡುವುದಿಲ್ಲ. ಹಾಗಾಗಿ, ನಾರಂಗ್ ಮತ್ತು ಆತನ ಚಳವಳಿ ಖುದ್ದಾಗಿ ತಾವೇ ಅದನ್ನೆಲ್ಲಾ ಸಾಧಿಸಬೇಕಾಗಿದೆ; ಅದಕ್ಕಾಗಿ ಅವರು ಅಪಾರ ಪ್ರಯತ್ನಗಳನ್ನು ಹಾಕುತ್ತಿದ್ದಾರೆ.

ಬೇರೆ ಪ್ರದೇಶದ ಜನರು ಈ ಸಮಸ್ಯೆಯನ್ನು ಬಹಳ ಯಶಸ್ವಿಯಾಗಿ ನಿಭಾಯಿಸಿರುವುದನ್ನು ಮುಂದಿನ ದಿನಗಳಲ್ಲಿ ನಾನು ಕಂಡುಕೊಂಡೆ. ಅವರು ಕೆರೆಯ ಮಟ್ಟದಿಂದ ಬಹಳಷ್ಟು ಕೆಳಗಿರುವ ತಗ್ಗು ಪ್ರದೇಶದಲ್ಲಿ ಉಳುಮೆ ಮಾಡಲಾರಂಭಿಸಿದ್ದು ಕೆರೆಯಿಂದ ಇಳಿಜಾರು ಕಾಲುವೆಗಳನ್ನು ತೋಡಿ ತಮ್ಮ ಹೊಲಗದ್ದೆಗಳಿಗೆ ನೀರುಣಿಸುವ ವಿಧಾನ ಕಂಡುಕೊಂಡಿದ್ದರು. ಕಲ್ಲುಬಂಡೆಗಳಿಂದ ಕೂಡಿದ ಇಂಥ ಕಠಿಣ ಭೌಗೋಳಿಕ ಪ್ರದೇಶದಲ್ಲಿ ಕಾಲುವೆಗಳನ್ನು ತೋಡುವುದು ಅಷ್ಟು ಸುಲಭ ಕೆಲಸವಲ್ಲ. ಆದರೂ ಇಡೀ ಹಳ್ಳಿಯ ಜನರು ತಮ್ಮ ಸಾಮೂಹಿಕ ಶ್ರಮದಿಂದ ಈ ಕೆಲಸ ಮಾಡಿದ್ದರು. ಸಾಮೂಹಿಕವಾಗಿ ಕಷ್ಟಪಟ್ಟು ಕೆರೆಯನ್ನು ನಿರ್ಮಿಸಿದ್ದಂತೆಯೇ ಗುದ್ದಲಿ, ಸಲಿಕೆ ಮತ್ತು ಬುಟ್ಟಿಗಳನ್ನು ಬಳಸಿ ಬಹಳ ಪರಿಶ್ರಮಪಟ್ಟು ಈ ಕಾಲುವೆಗಳನ್ನೂ ತೋಡಿದ್ದರು.

ದಕ್ಷಿಣ ಬಸ್ತರ್‍ನಲ್ಲಿ ಮುಂದೆ ಸಾಗುತ್ತಿರುವ ಇಂಥ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಯಾವುದೇ ವೃತ್ತಪತ್ರಿಕೆಯಲ್ಲಿ ಎಂದೂ ಒಂದು ಸಣ್ಣ ಪ್ರಸ್ತಾಪವೂ ಬಂದಿಲ್ಲ. ಇದು ವಿಶ್ವಬ್ಯಾಂಕ್ ಯಾವುದೋ ಒಂದು ಯೋಜನೆಯಡಿ ಸರ್ಕಾರೇತರ ಸಂಘಟನೆಗಳು (ಎನ್‍ಜಿಓ) ಮಾಡಿದ ಕೆಲಸವಾಗಿರಲಿಲ್ಲ, ಬದಲಿಗೆ ಹಳ್ಳಿಗರೆಲ್ಲರೂ ಒಗ್ಗೂಡಿ ಸಾಮೂಹಿಕ ಪರಿಶ್ರಮದ ಮೂಲಕ ಮಾಡಿದ ಅಮೋಘ ಸಾಧನೆಯಾಗಿತ್ತು. ಹೀಗಾಗಿ, ಸಹಜವಾಗಿ ಪತ್ರಿಕೆಗಳು, ಪ್ರಶಸ್ತಿ ವಿಜೇತ ಸಂಘಸಂಸ್ಥೆಗಳು ಇದು ಗುರುತಿಸಲು ಯೋಗ್ಯವಾಗಿರುವ ಒಂದು ಸಾಧನೆ ಎಂದು ಪರಿಗಣಿಸಲೇ ಇಲ್ಲ. ಯಾವುದೇ ಮಾಧ್ಯಮದ ಪ್ರತಿನಿಧಿಗಳು ಜನರ ಸಂದರ್ಶನಗಳನ್ನು ಪಡೆಯುವುದಕ್ಕೆ ಇಲ್ಲಿಗೆ ಬರಲಿಲ್ಲ.

ಯಾವಾಗಲೂ ಚರ್ಚೆಗಳು, ಪ್ರಚಾರ, ಜಾಹಿರಾತು ಎಲ್ಲವನ್ನೂ ಸಿರಿವಂತ ಮತ್ತು ಬಲಿಷ್ಠ ಜನರೇ ನಿಯಂತ್ರಿಸುತ್ತಾರೆ. ಅವರಿಗೆ ಏನು ಬೇಕೋ ಅದನ್ನು ಉತ್ತೇಜಿಸುತ್ತಾರೆ, ಏನು ಬೇಡವೋ ಅದನ್ನು ಹೊಸಕಿಹಾಕುತ್ತಾರೆ. ಈಗ ಅವರು ಬಸ್ತರ್‍ನ ‘ದರೋಡೆಕೋರರನ್ನು’ ಮುಖ್ಯವಾಹಿನಿಗೆ ತರಬೇಕೆಂದು ಹುಯಿಲೆಬ್ಬಿಸುತ್ತಿದ್ದಾರೆ. ಬಸ್ತರ್‍ನ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುವುದಕ್ಕಾಗಿ, ಬಸ್ತರ್ ಬದುಕಿನ ಸೌಂದರ್ಯವನ್ನು ನಿಯಂತ್ರಿಸುವುದಕ್ಕಾಗಿ ಹವಣಿಸುತ್ತಿದ್ದಾರೆ. ಆದಿವಾಸಿ ಸಂಸ್ಕೃತಿ ಮತ್ತು ಬದುಕುಗಳನ್ನು ವಸ್ತುಸಂಗ್ರಹಾಲಯದ ಅಪರೂಪದ ವಸ್ತುಗಳನ್ನಾಗಿ ಮಾಡುವುದಕ್ಕೆ, ಆ ಮೂಲಕ ಬಸ್ತರ್‍ನ್ನು ಪ್ರವಾಸಿ ಸ್ವರ್ಗವನ್ನಾಗಿ ಪರಿವರ್ತಿಸಿ ಲಾಭ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಛತ್ತೀಸ್‍ಗಡದ ಜಾಶ್ಪುರ್ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗಾಲ್ಫ್ ಮೈದಾನಗಳನ್ನು ನಿರ್ಮಿಸುವುದರ ಬಗ್ಗೆ, ಅದನ್ನೊಂದು ಪ್ರವಾಸಿತಾಣವನ್ನಾಗಿ ಪರಿವರ್ತಿಸುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಪುರಾತನ ಅರಾವೋಂನ್ ಮತ್ತು ಪಹರಿ ಕೋರ್ವ ಬುಡಕಟ್ಟು ಸಮುದಾಯಗಳನ್ನು ‘ನಾಗರಿಕತೆ’ಯ ಮಡಿಲಿಗೆ ತರುವ ಅಪರಾಧಿ ಷಡ್ಯಂತ್ರಗಳು ಜೋರಾಗಿ ಸಾಗಿವೆ. ಪ್ರವಾಸಿತಾಣಗಳೆಂದರೆ ಅಪರಾಧ, ವೇಶ್ಯಾವಾಟಿಕೆಗಳೆಂದೇ ಅರ್ಥ; ಸಿರಿವಂತರ ಮೋಜಿಗಾಗಿ ಸ್ವೇಚ್ಛಾಚಾರದ ತಾಣಗಳನ್ನು ನಿರ್ಮಿಸುವುದೆಂದೇ ಅರ್ಥ. ಆದಿವಾಸಿಗಳ ನೆಮ್ಮದಿಯ ಬದುಕಿನಲ್ಲಿ ಅನಗತ್ಯವಾಗಿ ನುಗ್ಗಿ ಅಶಾಂತಿಯುಂಟು ಮಾಡುವ ಈ ಅಪರಾಧವನ್ನು ‘ಅಭಿವೃದ್ಧಿ’ ಮತ್ತು ‘ಆದಿವಾಸಿಗಳಿಗೆ ಉದ್ಯೋಗಾವಕಾಶ’ ಎಂದು ಬಿಂಬಿಸಲಾಗುತ್ತಿದೆ.

ವಾಸ್ತವದಲ್ಲಿ ಈ ಅಭಿವೃದ್ಧಿ ವಿಶಾಲ ಜನಸಮುದಾಯದ ಜೀವನ ಮಟ್ಟವನ್ನು ಹೆಚ್ಚಿಸುವ ಅಭಿವೃದ್ಧಿಯೇ ಹೊರತು ಲಾಭದ ಉದ್ದೇಶದಿಂದ ಸರಕುಗಳ ಉತ್ಪಾದನೆಯನ್ನು ಹೆಚ್ಚಿಸುವ ಅಭಿವೃದ್ಧಿಯಲ್ಲ. ಇದು ಬೃಹತ್ ಗಣಿಗಾರಿಕೆ ನಡೆಸುವ ಮತ್ತು ಬೃಹತ್ ಅಣೆಕಟ್ಟುಗಳನ್ನು ಕಟ್ಟುವ ಅಭಿವೃದ್ಧಿ ಮಾದರಿಗೆ ಮುಖಾಮುಖಿಯಾಗಿ ನಿಂತಿರುವ ಅಭಿವೃದ್ಧಿ ಮಾದರಿ.
* * * * *

Leave a comment

FOOT PRINT

Top