An unconventional News Portal.

‘ಹತ್ಯೆಯಾದ ಯುವತಿಯ ಚಾರಿತ್ರ್ಯ ಹರಣ’: ಪಾತಕ ಕಾರ್ಯಕ್ರಮಗಳ ನಿರ್ಮಾಪಕರಿಗೆ ಒಂದು ಪತ್ರ!

‘ಹತ್ಯೆಯಾದ ಯುವತಿಯ ಚಾರಿತ್ರ್ಯ ಹರಣ’: ಪಾತಕ ಕಾರ್ಯಕ್ರಮಗಳ ನಿರ್ಮಾಪಕರಿಗೆ ಒಂದು ಪತ್ರ!

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಂಬೆಳಗ್ಗೆಯೇ ಯುವತಿಯೊಬ್ಬಳ ಹತ್ಯೆ ನಡೆಯಿತು. ಅದಾದ ಎರಡು ಗಂಟೆಗಳ ಅಂತರದಲ್ಲಿ ಪೊಲೀಸರು, “ಕೊಲೆಗೀಡಾದ ಶೋಭಾಗೆ ಇನ್ನೊಬ್ಬ ವ್ಯಕ್ತಿಯ ಜತೆ ಸಂಬಂಧ ಇತ್ತು. ಆಕೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಯಿತು,” ಎಂದು ಹೇಳಿಕೆ ನೀಡಿದರು. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವತಿಯ ಹತ್ಯೆ ಎಂಬ ಕಾರಣಕ್ಕೆ ಸುದ್ದಿ ವಾಹಿನಿಗಳಲ್ಲಿ ಆ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿತು. ಗಂಟೆ ಗಟ್ಟಲೆ ಕ್ರೈಂ ಎಪಿಸೋಡ್ ಪ್ರಸಾರವಾದವು.

ಇದು ಕನ್ನಡದ ಅಷ್ಟೂ ಸುದ್ದಿವಾಹಿನಿಗಳಲ್ಲಿ ದಿನಕ್ಕೆ ಅರ್ಧ ಗಂಟೆ ಲೆಕ್ಕದಲ್ಲಿ ಪ್ರಸಾರವಾಗುವ ‘ಅಪರಾಧ ಕಾರ್ಯಕ್ರಮ’ಗಳ ಒಂದು ಮುಖ ಅಷ್ಟೆ. ಆದರೆ ಇದೀಗ, ಶೋಭಾ ಕುಟುಂಬ ನ್ಯಾಯಕ್ಕಾಗಿ ಬೀದಿಗೆ ಇಳಿದಿದೆ. ಅವರ ಬೇಡಿಕೆಗೆ ಒಂದಷ್ಟು ಸಂಘಟನೆಗಳು ಬೆಂಬಲ ನೀಡಿವೆ. ಗಡಸು ದನಿಯಲ್ಲಿ ದಿನಕ್ಕೊಂದು ಕ್ರೈಂ ಎಪಿಸೋಡು ಪ್ರಸಾರ ಮಾಡುವ ವಾಹಿನಿಗಳ ಹಾಗೂ ಕಾಟಾಚಾರಕ್ಕೆ ತನಿಖೆ ನಡೆಸುವ ಪೊಲೀಸರ ಹೊಣೆಗಾರಿಕೆಯನ್ನು ಪ್ರಶ್ನಿಸುವ ಮೊದಲ ನಡೆ ಇದಾಗಿದೆ. ಕ್ರೈಂ ಕಾರ್ಯಕ್ರಮಗಳು ಸೂಕ್ಷ್ಮತೆ ಕಳೆದುಕೊಂಡರೆ ಹೇಗೆ ಸಾಮಾನ್ಯ ಕುಟುಂಬವೊಂದು ಜರ್ಜರಿತವಾಗುತ್ತದೆ ಎಂಬುದಕ್ಕೆ ಈ ಬೆಳವಣಿಗೆ ಉದಾಹರಣೆಯಾಗಿದೆ.

ಕೊಲೆಗೀಡಾದ ಶೋಭಾ ಸಹೋದರ ರಾಜ್ಯದ ಜನರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ…

ಅದಕ್ಕೂ ಮುನ್ನ ಶೋಭಾ ಹತ್ಯೆ ಕುರಿತು ಕನ್ನಡದ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮ ಮತ್ತು ಅದರಲ್ಲಿ ಬಳಸಿದ ಭಾಷೆಗೆ ಸಾಕ್ಷಿ ಇಲ್ಲಿದೆ. 

ಮಾನ್ಯರೇ,

ಏಪ್ರಿಲ್ 11ರ ಮುಂಜಾನೆ, ನನ್ನ ತಂಗಿ ಶೋಭಾ, ಮನೆಯ ಮುಂದೆ ಬಟ್ಟೆ ಒಗೆಯುತ್ತಿದ್ದಳು. ನಮ್ಮ ಮನೆ ದೀಪಾಂಜಲಿನಗರ ಮೆಟ್ರೋ ಸ್ಟೇಶನ್ನಿಂದ 50ಮೀ. ದೂರದಲ್ಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಗಿರೀಶ್ ಅವಳ ಮೇಲೆ ಚಾಕುವನ್ನು ಹಿಡಿದು ಹಲ್ಲೆ ನಡೆಸಿದನು. ಪಕ್ಕದ ಮನೆ ಅಜ್ಜಿಯೊಬ್ಬಳು ಶೋಭಾಳ ಸಹಾಯಕ್ಕೆ ಬಂದಾಗ, ಗಿರೀಶ್ ಅವರಿಗೂ ಚಾಕು ಹಾಕಿದನು. ಯಾವುದೇ ಚಿಕಿತ್ಸೆ ಪಡೆಯುವ ಮುನ್ನ, ಶೋಭಾ ರಕ್ತಸ್ರಾವದಿಂದ ಸಾವನ್ನೊಪ್ಪಿದಳು. ಪಕ್ಕದ ಮನೆಯವರಿಗೆ ಮಾರಣಾಂತಿಕ ಗಾಯಗಳು ಆದವು.

ನಾಲ್ಕು ತಿಂಗಳುಗಳಿಂದ ಗಿರೀಶ್ ನನ್ನ ತಂಗಿ ಶೋಭಾಳನ್ನು ಹಿಂಬಾಲಿಸುತ್ತಿದ್ದ. ಅವಳು ಮೂರು ಬಾರಿ ಫೋನ್ ನಂಬರ್ರನ್ನು ಬದಲಾಯಿಸಿದ್ದಳು. ಇಷ್ಟಾದರೂ ಅವನ ಕಿರುಕುಳ ನಿಲ್ಲುತ್ತಿರಲಿಲ್ಲ. ಗಿರೀಶನಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಶೋಭಾ ಒಲ್ಲೆ ಅಂದರೂ, ಅವನು ಅವಳ ನಿರಾಕರಣೆಯನ್ನು ಒಪ್ಪಲಿಲ್ಲ. ಅವಳಿಗೆ ಮದುವೆ ನಿಗದಿಯಾಗಿದೆ ಎಂಬುದು ಗೊತ್ತಾದ ಮೇಲೆ ಅವಳನ್ನು ಕೊಂದುಬಿಟ್ಟ. ಅವನು ಕೊಲೆ ಮಾಡಿದ ಕಾರಣ, ಅವಳ ನಿರಾಕರಣೆ.

ಆದರೆ, ಮಾಧ್ಯಮದವರು ಈ ಕಥೆಯನ್ನು ವರದಿ ಮಾಡಿಲ್ಲ. ಅವರು ಬೇರೆಯೇ ಪ್ರಶ್ನೆಗಳನ್ನೆತ್ತಿದ್ದರು – ತಪ್ಪಾದ, ಪರಿಶೀಲಿಸದ ವರದಿಯು, ನನ್ನ ತಂಗಿಯ ಸಾವಿಗೆ ಅವಳೇ ಕಾರಣ ಎಂದು ತೋರಿಸಿದರು.

ಏಪ್ರಿಲ್ 15ರಂದು (ಶನಿವಾರ), ಸುವರ್ಣಾ ನ್ಯೂಸ್ ರವರು 30 ನಿಮಿಶಗಳ ‘ಎಫ್.ಐ.ಆರ್’ ಎಂಬ ಕಾರ್ಯಕ್ರಮದಲ್ಲಿ ಈ ಘಟನೆ ಕುರಿತು ಪ್ರಸಾರ ಮಾಡಿದರು. ಪ್ರಜಾ ಟಿ.ವಿಯು, ಏಪ್ರಿಲ್ 17ರಂದು (ಸೋಮವಾರ), ಸ್ಪೆಶಲ್ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತು. ಎರಡೂ ಕಾರ್ಯಕ್ರಮಗಳಲ್ಲಿ, ಹಲವಾರು ಟಿ.ವಿ ಚ್ಯಾನೆಲ್ಗಳಲ್ಲಿ, ಈ ಘಟನೆಯ ಬಗ್ಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಗಿರೀಶ್ ಹಾಗು ಶೋಭಾಳ ಮಧ್ಯೆ ಸಂಬಂಧವನ್ನು ಕಟ್ಟಿ, ಸುಳ್ಳು ಪ್ರಸಾರ ಮಾಡಿದರು. ಈ ಚ್ಯಾನೆಲ್ಗಳು, ಶೋಭಾನೇ ಗಿರೀಶ್ ಜೊತೆಗೆ ಸಂಬಂಧ ಬೆಳೆಸಿದಳು ಎಂದು ಹೇಳಿದವು. ಅಷ್ಟಲ್ಲದೆ, ಅವಳ ಸಾವಿಗೆ ಅವಳೇ ಕಾರಣ ಎಂದು ಅಪನಿಂದೆ ಮಾಡಿದ್ದಾರೆ. ಅವರ ವರದಿಯು ಅಸಹ್ಯಕರವಾಗಿದ್ದು, ಸತ್ಯದ ಅಣಕವಾಗಿದೆ. ಮಾಧ್ಯಮದ ನೀತಿಸಂಹಿತೆಯ ಉಲ್ಲಂಘನೆಯಾಗಿದೆ.

ಕೆಲವು ಮಾಧ್ಯಮದವರು ಅನುಮತಿಯಿಲ್ಲದೆ, ನಮ್ಮ ಮನೆಯೊಳಗೆ ನುಗ್ಗಿ ವೀಡಿಯೋ ಮಾಡಿದ್ದಾರೆ. ಒಂದು ಸಾರಿಯೂ ಮಾಧ್ಯಮದವರು ನನ್ನನ್ನೇ ಆಗಲಿ ಅಥವಾ ನನ್ನ ಕುಟುಂಬದವರನ್ನೇ ಆಗಲಿ ಮಾತನಾಡಿಸಲು ಪ್ರಯತ್ನಿಸಿಲ್ಲ. ಅವರು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮದ ವಿಷಯವನ್ನು ಎಲ್ಲಿಂದ ಪಡೆದುಕೊಂಡರೆಂದು ನಮಗೆ ಗೊತ್ತಿಲ್ಲ. ಅದನ್ನು ಒಂದು ಬಾರಿಯಲ್ಲ, ಪದೇ ಪದೇ ಪ್ರಸಾರ ಮಾಡಿದ್ದಾರೆ. ನಮ್ಮ ಕುಟುಂಬದವರಿಗೆ ನನ್ನ ತಂಗಿಯ ಭೀಕರ ಕೊಲೆಯಿಂದ ಆದ ನೋವಿನ ಬಗ್ಗೆ ಸೂಕ್ಷ್ಮವೂ ಅವರಿಗಿದ್ದಂತೆ ಕಾಣಿಸುತ್ತಿಲ್ಲ. ಪ್ರಸಾರವಾದ ಕಾರ್ಯಕ್ರಮವು ನಮ್ಮ ಕುಟುಂಬದವರ ಮೇಲೆ ಎಂತಹ ಪರಿಣಾಮ ಬೀರಿದೆ ಎಂದು ಅವರು ಆಲೋಚನೆ ಮಾಡಿಲ್ಲ.

ಇದರ ಮೇಲೆ, ಉಪ ಪೋಲೀಸ್ ಆಯುಕ್ತರು – ಪಶ್ಚಿಮ ಎಮ್.ಎನ್. ಅನುಚೇತರವರು ಮಾಧ್ಯಮದವರಿಗೆ ಘಟನೆಯಾದ ಎರಡು ಗಂಟೆಯೊಳಗೆ ಯಾವುದೇ ಪುರಾವೆಯಿಲ್ಲದೆ, ತನಿಖೆ ನಡೆಸದೆ ಶೋಭಾ ಮತ್ತು ಗಿರೀಶ್ “ಅಕ್ರಮ” ಸಂಬಂಧದಲ್ಲಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಸಂವಿಧಾನದ ಸಂರಕ್ಷಣೆಯಲ್ಲದೆ, ಸಂತ್ರಸ್ತರ ಹಿತಾಸಕ್ತಿಯನ್ನು ಕಾಪಾಡ ಬೇಕಾದವರು ಪೋಲೀಸರು. ಅಪರಾಧಿಯನ್ನು ಹುಡುಕುವ ಬದಲು, ಸುಳ್ಳು ಕಥೆಗಳನ್ನು ಹಬ್ಬಿಸುವುದೇ ಇವರ ಕೆಲಸ! ಉರಿ ಬಿಸಿಲಿನಲ್ಲಿ ನಡೆದ ಹತ್ಯೆಯ ಅಪರಾಧಿಯನ್ನು ಹಿಡಿಯಲು ಇವರಿಗೆ ನಾಲ್ಕು ದಿನಗಳು ಬೇಕಾದವು. ಆದರೆ, ನನ್ನ ಸತ್ತ ತಂಗಿಯ ಚಾರಿತ್ರ್ಯವನ್ನು ಕೆಡಸಲು 2 ಗಂಟೆ ಸಾಕಾಯಿತು.

ನಾವು ಮೂವರು ಅಣ್ಣಾ-ತಂಗಿಯರು, ನಮ್ಮ ತಂದೆ-ತಾಯಿಯನ್ನು ಬಹಳ ಹಿಂದೆಯೇ ಕಳೆದುಕೊಂಡವರು. ಆಗ ಶೋಭಾಳಿಗೆ 10 ವಯಸ್ಸು. ಅವಳನ್ನು ಬಿ.ಏ, ಎಂ.ಏ, ಬಿ.ಎಡ್ ಓದಿಸಿದೆ. ಒಠಾರದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಅವಳನ್ನು ಬರ್ಬರವಾಗಿ ಬೆಳ್ಳಂಬೆಳಗ್ಗೆಯೇ ಗಿರೀಶ್ ಕೊಂದು ಹಾಕಿದ್ದಾನೆ. ನ್ಯಾಯಕ್ಕಾಗಿ ಹೋರಾಡುವುದನ್ನು ಬಿಟ್ಟು, ಮಾಧ್ಯಮದವರು ಹಾಗು ಪೋಲೀಸರು ಅವಳ ನಡತೆ ಬಗ್ಗೆ ಅವಮಾನ ವ್ಯಕ್ತಪಡಿಸಿದರು. ಅವಳ ವ್ಯಕ್ತಿತ್ವವನ್ನು ನಿಂದನೆಗೊಳಪಡಿಸಿದರು ಮತ್ತು ಅಸಹನೀಯ ಭಾಷೆಯಲ್ಲಿ ಅವಳ ಬಗ್ಗೆ ಪ್ರಚಾರ ಮಾಡಿದರು.

ಗಿರೀಶ್ ಮತ್ತು ಶೋಭಾಳ ಸಂಬಂಧವೇನು ಎಂಬುದು ಇಲ್ಲಿ ಏಕೆ ಪ್ರಶ್ನೆಯಾಗಿದೆ? ಇದು ಅವಳ ಹತ್ಯೆಯ ಸಮರ್ಥನೆಯೆ?

ಅವಳು ಯಾವ ಬಟ್ಟೆ ಧರಿಸಿದ್ದಳು, ಏನು ಮಾಡುತ್ತಿದ್ದಳು, ಏನು ಯೋಚಿಸುತ್ತಿದ್ದಳು ಎಂಬುದು ಪ್ರಮುಖವೇ? ಅವಳಿಗಾದ ಕಿರುಕುಳ, ಹಿಂಸೆ, ದೌರ್ಜನ್ಯವನ್ನು ಸಮರ್ಥಿಸುತ್ತಿದ್ದಾರೆಯೇ?

ಅವಳ ಕೊಲೆ ಮಾಡಿದ ಅಮಾನುಷ ವ್ಯಕ್ತಿಯ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ?

ಆ ಕೊಲೆಗಡುಕನಿಗೆ ಅವಳು ಒಲ್ಲೆ ಅಂದಿದ್ದು ಅರ್ಥವಾಗಿಲ್ಲವೇ? ಅವಳನ್ನು ಸುಮ್ಮನೆ ಬಿಡಬಹುದಿತ್ತಲ್ಲವೇ?

ಶೋಭಾ ಒಬ್ಬಳು ದಲಿತ ಮಹಿಳೆ. ಅವಳಿಗೆ ಆಸ್ತಿಯೂ ಇಲ್ಲ, ಅಧಿಕಾರವೂ ಇರಲಿಲ್ಲ. ಈ ಕಾರಣ ಮಾಧ್ಯಮದವರು, ಪೋಲೀಸರು ಅವಳನ್ನು ಅಪಮಾನಗೊಳಿಸುತ್ತಿದ್ದಾರೆಯೇ?

ಈ ಪ್ರಶ್ನೆಗಳಿಗೆ ಮಾಧ್ಯಮದವರಿಗಾಗಲಿ, ಪೋಲೀಸರಿಗಾಗಲೀ ಉತ್ತರವಿದೆಯೇ?

ನಮಗೆ ಉತ್ತರಗಳು ಬೇಕು. ಯಾರು ಹೊಣೆಗಾರಿಕೆ ಹೊತ್ತುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ಅದಕ್ಕಿಂತ ಹೆಚ್ಚಾಗಿ ಸತ್ತ ಶೋಭಾಳಿಗೆ ನ್ಯಾಯ ಬೇಕು…

ನಮ್ಮ ಕುಟುಂಬದ ಹಕ್ಕೊತ್ತಾಯಗಳು ಹೀಗಿವೆ –

  1. ಸುವರ್ಣಾ ನ್ಯೂಸ್, ಪ್ರಜಾ ಟಿ.ವಿ, ಸಮಯ ನ್ಯೂಸ್, ಪಬ್ಲಿಕ್ ಟಿ.ವಿ, ಹಾಗು ಮುಂತಾದ ಮಾಧ್ಯಮದವರು ಪ್ರಸಾರ ಮಾಡಿರುವ ಕಾರ್ಯಕ್ರಮಗಳನ್ನು ಹಿಂಪಡೆಯ ಬೇಕು. ನಮ್ಮ ಕುಟುಂಬದವರಿಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು.
  2. ಮಾನ್ಯ ಮುಖ್ಯ ಮಂತ್ರಿಗಳು ಶೋಭಾಳ ಹತ್ಯೆಯ ಬಗ್ಗೆ ಹೇಳಿಕೆಯನ್ನು ನೀಡಿ, ಉಪ ಪೋಲೀಸ್ ಆಯುಕ್ತರಾದ ಅನುಚೇತರವರ ಹೇಳಿಕೆ ಬಗ್ಗೆ ಮೌನ ಮುರಿಯಲಿ.
  3. ಉಪ ಪೋಲೀಸ್ ಆಯುಕ್ತಾರದ ಅನುಚೇತರವರು ಸಾರ್ವಜನಿಕವಾಗಿ ನಮ್ಮ ಕುಟುಂಬದವರಿಗೆ ಕ್ಷಮಾಪಣೆ ಕೇಳಬೇಕು.
  4. ಮಹಿಳೆಯರಿಗೆ ಸುರಕ್ಷತೆ ನೀಡಲು ಸಿ.ಸಿ.ಟಿ.ವಿ ಕ್ಯಾಮೆರಾಗಳು ಬೇಕಿಲ್ಲ. ಸರ್ಕಾರಗಳಿಂದ ರಸ್ತೆ, ಫುಟ್ಪಾಥ್, ಕೆಲಸದ ಜಾಗಗಳಲ್ಲಿ ಮತ್ತು ಮನೆಯ ಸುತ್ತಾಮುತ್ತಲು ಸರಕ್ಷತೆಯಿದೆ ಎಂಬ ಆಶ್ವಾಸನೆ ಬೇಕು. ನಗರಗಳು ಮಹಿಳೆಯರಿಗೆ ಸುರಕ್ಷವಾಗಿದೆ ಎಂಬ ಭಾವನೆ ಬರಬೇಕು.
  5. ಮಹಿಳೆಯರ ವಿರುದ್ಧ ದೌರ್ಜನ್ಯ ಮಾಡುವ ಗಂಡಸರನ್ನು ಶಿಕ್ಷಿಸಬೇಕು. ಮಾಧ್ಯಮದವರು ಹಾಗು ಪೋಲೀಸರು ಅವರುಗಳನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು.
  6. ಎಲ್ಲಾ ಮಾಧ್ಯಮದವರು ಅವರಿಗೆ ಬದ್ಧವಾದ ರಾಷ್ಟ್ರೀಯ ಪ್ರಸಾರ ಸಂಘದ ಕೋಡ್ ಆಫ್ ಕಾಂಡಕ್ಟನ್ನು ಪಾಲಿಸಬೇಕು
  7. ಪೋಲೀಸರು ಶೋಭಾಳ ಹತ್ಯೆಯ ತನಿಖೆಯನ್ನು ವೇಗವಾಗಿ ಮತ್ತು ದಕ್ಷೆತೆಯಲ್ಲಿ ನಡೆಸಿ, ನನ್ನ ತಂಗಿಗೆ ನ್ಯಾಯ ದೊರಕಿಸಿಕೊಡಬೇಕು.

ತಮ್ಮ ವಿಶ್ವಾಸಿ,

ಮಾರುತಿ


More Reading: ‘ಕ್ರೈಂ ಸ್ಟೋರಿ’ಯಲ್ಲಿ ರಕ್ತಪಾತ ನೋಡಿಯೇ ಮಲಗುತ್ತಿದ್ದ ವೀಕ್ಷಕರೆಲ್ಲಾ ಎಲ್ಲಿ ಮಾಯವಾದರು?


 

Leave a comment

FOOT PRINT

Top