An unconventional News Portal.

ಪೂರ್ವದಿಂದ ಪಶ್ಚಿಮದವರೆಗೆ: ಐಟಿ ಉದ್ಯೋಗಿಗಳಿಗೆ ಅಪ್ಪಳಿಸಿದ ‘ರಾಷ್ಟ್ರೀಯತೆಯ ಸುನಾಮಿ’!

ಪೂರ್ವದಿಂದ ಪಶ್ಚಿಮದವರೆಗೆ: ಐಟಿ ಉದ್ಯೋಗಿಗಳಿಗೆ ಅಪ್ಪಳಿಸಿದ ‘ರಾಷ್ಟ್ರೀಯತೆಯ ಸುನಾಮಿ’!

ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಬೀಸುತ್ತಿರುವ ‘ರಾಷ್ಟ್ರೀಯತೆ’ಯ ಸುನಾಮಿಗೆ ಭಾರತೀಯರು ಕೆಲಸಗಳನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಅಮೆರಿಕಾ ಫಸ್ಟ್’ ಎನ್ನುವ ಮೂಲಕ ಅಧಿಕಾರ ಬಂದ ಡೊನಾಲ್ಡ್ ಟ್ರಂಪ್ ಎಚ್‌- 1ಬಿ ವೀಸಾ ಯೋಜನೆಗೆ ಮಹತ್ವದ ಬದಲಾವಣೆ ಮಾಡಿಯಾಗಿದೆ. ಆದರೆ, ‘ಸ್ಥಳೀಯರಿಗೆ ಮೊದಲ ಆದ್ಯತೆ’ ಎಂಬ ಟ್ರೆಂಡ್ ಅಮೆರಿಕಾ ಮಾತ್ರವಲ್ಲ ಪ್ರಪಂಚ ಹಲವು ದೇಶಗಳಲ್ಲಿ ನಿಧಾನವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ವಿದೇಶಗಳಲ್ಲಿ ಕೆಲಸದಲ್ಲಿದ್ದ ಭಾರತದ ಮೂಲದ ಎಂಜಿನಿಯರಿಂಗ್‌ ಕ್ಷೇತ್ರದ ನೌಕರರು ಕೆಲಸ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಹಲವು ದೇಶಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿವೆ. ಇದರಿಂದಾಗಿ, ಭಾರತದಿಂದ ಹೊರಗೆ ಕೆಲಸವನ್ನು ಹುಡುಕುವುದು ಭವಿಷ್ಯದಲ್ಲಿ ಕಷ್ಟವಾಗಲಿದೆ.

‘ಅಮೆರಿಕಾ ಫಸ್ಟ್’ ಜ್ವರ:

ಇದೇ ಏಪ್ರಿಲ್ 18ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್‌- 1ಬಿ ವೀಸಾ ಯೋಜನೆಗೆ ಬದಲಾವಣೆಗಳನ್ನು ಸೂಚಿಸುವ ಸರಕಾರಿ ಆದೇಶಕ್ಕೆ ಸಹಿ ಹಾಕಿದರು. ಈ ಮೂಲಕ 6 ವರ್ಷಗಳ ಕಾಲ ಅಮೆರಿಕಾದಲ್ಲಿ ಕೆಲಸ ಮಾಡಲು ವಿದೇಶಿಗರಿಗೆ ನೀಡುತ್ತಿದ್ದ ಸ್ವಾತಂತ್ರ್ಯ ಮೊಟಕುಗೊಂಡಿತು. ಇದು ಅಮೆರಿಕಾದಲ್ಲಿ ಬೇರು ಬಿಟ್ಟು, ಉದ್ಯಮ ನಡೆಸುತ್ತಿದ್ದ ಭಾರತ ಮೂಲದ ಕಂಪನಿಗಳಾದ ಇನ್ಫೋಸಿಸ್, ವಿಪ್ರೊ ಮತ್ತಿತರ ಐಟಿ ಕಂಪನಿಗಳಿಗೆ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮರುವಿನ್ಯಾಸಗೊಳಿಸುವ ಅನಿವಾರ್ಯತೆಯನ್ನು ತಂದೊಡ್ಡಿದೆ.

ಅಮೆರಿಕಾದಲ್ಲಿ ಕೌಶಲ್ಯಪೂರ್ಣ ಕೆಲಸಗಳಲ್ಲಿ ಸ್ಥಳೀಯರಿಗೆ ಆದ್ಯತೆ ಇಲ್ಲ ಎಂಬ ಕೂಗು ಆರಂಭವಾಗಿ ದಶಕಗಳೇ ಕಳೆದಿದ್ದವು. ಜನರ ಈ ಸೆಂಟಿಮೆಂಟನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದು ಡೊನಾಲ್ಡ್ ಟ್ರಂಪ್. ಅದನ್ನೇ ತಮ್ಮ ಚುನಾವಣಾ ಪ್ರಚಾರ ಸಾಮಾಗ್ರಿಯಾಗಿ ಅವರು ಬಳಸಿದರು ಕೂಡ. ಅದರ ಪರಿಣಾಮ ಜಗತ್ತಿನ ಅತ್ಯಂತ ಶಕ್ತಿಶಾಲಿ ಹುದ್ದೆಗೆ ಅವರು ಆಯ್ಕೆಯಾದರು.

ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಜನಾಂಗೀಯ ದ್ವೇಷ ಹೆಚ್ಚಲಾರಂಭಿಸಿದೆ. ಈಗಾಗಲೇ ಅಲ್ಲಿನ ಭಾರತೀಯರ ಮೇಲೆ ಹಲ್ಲೆಗಳು ಶುರುವಾಗಿವೆ. ಅನಿವಾರ್ಯವಾಗಿ ಅನಿವಾಸಿ ಭಾರತ ಮೂಲದ ಉದ್ಯೋಗಿಗಳು ಸ್ವದೇಶಕ್ಕೆ ಮರಳುವ ಅಥವಾ ಇನ್ಯಾವುದಾದರೂ ದೇಶಕ್ಕೆ ಕೆಲಸ ಅರಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಡಿಸೆಂಬರ್‌ನಿಂದ ಮಾರ್ಚ್‌ ತಿಂಗಳ ಅಂತ್ಯದವರೆಗಿನ ಅಂಕಿ ಅಂಶಗಳು, ಹೀಗೆ ಕೆಲಸ ಅರಸುವವರ ಸಂಖ್ಯೆಯಲ್ಲಿ 10 ಪಟ್ಟು ಹೆಚ್ಚಾಗಿದೆ ಎಂದು ಹೇಳುತ್ತಿವೆ. ಈವರೆಗೆ ಸುಮಾರು 7 ಸಾವಿರ ಐಟಿ ಉದ್ಯೋಗಿಗಳು ಭಾರತದಲ್ಲಿ ಕೆಲಸಕ್ಕಾಗಿ ತಮ್ಮ ಬಯೋಡಾಟವನ್ನು ಸಲ್ಲಿಸಿದ್ದಾರೆ ಎಂದು ‘ಮಿಂಟ್’ ವರದಿ ಮಾಡಿದೆ.

ಯುಕೆಯಲ್ಲೂ ಇದೇ ಕತೆ: 

ಜಗತ್ತಿನಾದ್ಯಂತ ಬಲಗೊಳ್ಳುತ್ತಿರುವ ರಾಷ್ಟ್ರೀಯವಾದ. (ಸಾಂದರ್ಭಿಕ ಚಿತ್ರ).

ಜಗತ್ತಿನಾದ್ಯಂತ ಬಲಗೊಳ್ಳುತ್ತಿರುವ ರಾಷ್ಟ್ರೀಯವಾದ. (ಸಾಂದರ್ಭಿಕ ಚಿತ್ರ).

ಇದೇ ಮಾದರಿಯ ಸ್ಥಳೀಯರಿಗೆ ಆದ್ಯತೆ ನೀಡುವ ಪ್ರಕ್ರಿಯೆ ಅಮೆರಿಕಾ ಮಾತ್ರವಲ್ಲ, ಪಕ್ಕದ ಯುಕೆಯಲ್ಲಿಯೂ ಆರಂಭವಾಗಿದೆ. ಅಲ್ಲಿ ಭಾರತ ಮೂಲದ ಉದ್ಯೋಗಿಗಳ ಜತೆಯಲ್ಲಿ ವಿದ್ಯಾಭ್ಯಾಸಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ.

2012ರಲ್ಲಿಯೇ ವಿದ್ಯಾಭ್ಯಾಸದ ನಂತರ ವಿದೇಶಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಕೆಲಸದ ವೀಸಾ ನೀಡುವ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಲಂಡನ್‌ ಅಥವಾ ಯುಕೆಯ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಓದು ಮುಗಿಯುತ್ತಿದ್ದಂತೆ ತಮ್ಮ ಗಂಟು ಮೂಟೆಯನ್ನು ಕಟ್ಟಿಕೊಂಡು ಸ್ವದೇಶಕ್ಕೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿದೆ. 2015ರಲ್ಲಿ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಯಲ್ಲಿ ಅವರ ಜೀವನ ನಿರ್ವಹಣೆಗೆ ಅಗತ್ಯವಿರುವ ಮೊತ್ತದ ಶೇ. 24ರಷ್ಟು ಹಣವನ್ನು ಇರಲೇಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಪರಿಣಾಮ, ಯುಕೆ ವಿಶ್ವವಿದ್ಯಾನಿಲಯಗಳಿಗೆ ದಾಖಲಾಗುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣ ಇಳಿಕೆ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದೆ.

ಯುಕೆ ಕಂಪನಿಗಳಲ್ಲಿ ಕೆಲಸ ಮಾಡುವ ಕೌಶಲ್ಯಪೂರ್ಣ ಕೆಲಸಗಾರರಲ್ಲಿ ಶೇ. 60ರಷ್ಟು ಭಾರತೀಯರೇ ಇದ್ದಾರೆ. ಇವರನ್ನು ಮರಳಿ ಸ್ವದೇಶಗಳಿಗೆ ಕಳುಹಿಸುವ ಸಲುವಾಗಿ ಅಮೆರಿಕಾ ಮಾದರಿಯಲ್ಲಿಯೇ ಸಂಬಳ ಹೆಚ್ಚಿಸುವ ಕಾನೂನುಗಳನ್ನು ಯುಕೆ ಸರಕಾರ ಜಾರಿ ತಂದಿದೆ. ಜತೆಗೆ, ಕಂಪನಿಗಳ ನಡುವೆ ವರ್ಗಾವಣೆಗೆ ಇದ್ದ ಅವಕಾಶಗಳಿಗೆ ಏ. 6ರಂದು ಕಡಿವಾಣ ತರಲಾಗಿದೆ.

ಸದ್ಯ ಸುಮಾರು 30 ಸಾವಿರ ಭಾರತ ಮೂಲದ ಐಟಿ ಉದ್ಯೋಗಿಗಳು ಯುಕೆಯಲ್ಲಿದ್ದಾರೆ. ಇವರೆಲ್ಲರ ವೀಸಾವನ್ನು ಅವಧಿ ಮುಗಿದ ನಂತರ ಮುಂದುವರಿಸದಿರಲು ನಿರ್ಧರಿಸಲಾಗಿದೆ. ಪರಿಣಾಮ ಭಾರತಕ್ಕೆ ಮರಳುವವರ ಸಂಖ್ಯೆ ಹೆಚ್ಚಾಗಲಿದೆ.

ಸಿಂಗಪೂರದಲ್ಲೂ ಕಡಿವಾಣ:

ಅಮೆರಿಕಾ, ಯುಕೆ ನಂತರದ ಸ್ಥಾನದಲ್ಲಿ 56 ಲಕ್ಷ ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಸಿಂಗಪೂರ ಕೂಡ ಭಾರತ ಮೂಲದ ಉದ್ಯೋಗಿಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ‘ಸಿಂಗಪೂರ್ ಕೂರ್‌’ ಹೆಸರಿನಲ್ಲಿ ಇಲ್ಲಿ ಬೆಳೆಯುತ್ತಿರುವ ರಾಷ್ಟ್ರೀಯ ವಾದಕ್ಕೆ ವಿದೇಶಿ ಉದ್ಯೋಗಿಗಳ ತಮ್ಮ ಕೆಲಸದ ಭದ್ರತೆಯನ್ನು ಬಲಿಕೊಡಬೇಕಾಗಿ ಬಂದಿದೆ.

2015ರಲ್ಲಿ ಫೇರ್ ಕನ್ಸಿಡರೇಷನ್ ಫ್ರೇಮ್‌ವರ್ಕ್‌’ ಹೆಸರಿನಲ್ಲಿ ಜಾರಿಗೆ ತಂದ ಕಾನೂನಿನ ಅಡಿಯಲ್ಲಿ ಖಾಲಿ ಇರುವ ಉದ್ಯೋಗಿಗಳಿಗೆ ಸಿಂಗಪೂರ ಪ್ರಜೆಗಳನ್ನೇ ನೇಮಕ ಮಾಡಬೇಕು ಎಂದು ಸರಕಾರ ಹೇಳಿದೆ. ಇದರ ಪ್ರಕಾರ, 25 ಜನರಿಗಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಪ್ರತಿ ಕಂಪನಿಯೂ ಖಾಲಿ ಹುದ್ದೆಗಳನ್ನು ತುಂಬುವ ಮೊದಲು ಸ್ಥಳೀಯರ ನೇಮಕಾತಿಗೆ ಜಾಹೀರಾತು ನೀಡಬೇಕಿದೆ. ಎರಡು ವಾರಗಳ ನಂತರ ಸ್ಥಳೀಯರು ಸಿಗದಿದ್ದರೆ ಮಾತ್ರವೇ ವಿದೇಶಿ ಉದ್ಯೋಗಿಗಳಿಗೆ ಅವಕಾಶ ನೀಡಬೇಕು ಎಂದು ಹೇಳಲಾಗಿದೆ. ಪರಿಣಾಮ, ನಿಧಾನವಾಗಿ ವಿದೇಶಿ ಉದ್ಯೋಗಿಗಳಿಗೆ ಕಡಿವಾಣ ಹಾಕುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

ಸಿಂಗಪೂರದಲ್ಲಿ ಭಾರತ ಮೂಲದ 10 ಸಾವಿರಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರ ಉದ್ಯೋಗದ ಅವಕಾಶ ಕ್ಷೀಣಿಸುತ್ತಿದೆ ಎಂದು ನ್ಯಾಸ್ಕಾಮ್ ಅಧ್ಯಯನ ವರದಿ ಹೇಳುತ್ತಿದೆ.

ಆಸ್ಟ್ರೇಲಿಯಾ ಜನಾಂಗೀಯ ಪ್ರೇಮ:

ದೇಶದ ಪ್ರೇಮದ ಮರೆಯಲ್ಲಿ ರಾಷ್ಟ್ರೀಯತೆಯ ಮೆರದಾಟ (ಸಾಂದರ್ಭಿಕ ಚಿತ್ರ)

ದೇಶದ ಪ್ರೇಮದ ಮರೆಯಲ್ಲಿ ರಾಷ್ಟ್ರೀಯತೆಯ ಮೆರದಾಟ (ಸಾಂದರ್ಭಿಕ ಚಿತ್ರ)

ಮೊದಲಿನಿಂದಲೂ ಆಸ್ಟ್ರೇಲಿಯಾದಲ್ಲಿ ಜನಾಂಗೀಯವಾದ ಬಲವಾಗಿದೆ. ಕ್ರಿಕೆಟ್ ತರಹದ ಕ್ರೀಡೆಯಲ್ಲಿಯೂ ಅವರ ಸ್ಥಳೀಯ ದುರಾಭಿಮಾನ ಆಗಾಗ ಪ್ರದರ್ಶನಗೊಂಡಿದೆ. ಮೊನ್ನೆ ಅಮೆರಿಕಾದಲ್ಲಿ ವೀಸಾ ನೀತಿಗೆ ಬದಲಾವಣೆ ಘೋಷಣೆಯಾಗುತ್ತಿದ್ದ ಬೆನ್ನಿಗೇ ಆಸ್ಟ್ರೇಲಿಯಾದಲ್ಲಿಯೂ 457 ಹೆಸರಿನ ವೀಸಾಕ್ಕೆ ಕತ್ತರಿ ಹಾಕಲಾಗಿದೆ. ಇದರ ಅಡಿಯಲ್ಲಿ ಆಸ್ಟ್ರೇಲಿಯಾ ಮೂಲದ ಕಂಪನಿಗಳು ನಾಲ್ಕು ವರ್ಷದ ಅವಧಿಗೆ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಅವಕಾಶ ಇತ್ತು. ಇದರ ಕಾಲು ಭಾಗವನ್ನು ಭಾರತ ಮೂಲದ ಉದ್ಯೋಗಿಗಳೇ ಅನುಭವಿಸುತ್ತಿದ್ದರು. ಇದೀಗ, ವೀಸಾ ಯೋಜನೆಯನ್ನೇ ರದ್ದುಗೊಳಿಸುವ ಮೂಲಕ ಆಸ್ಟ್ರೇಲಿಯಾ ಸರಕಾರ ಭಾರತೀಯರು ಸೇರಿದಂತೆ ವಿದೇಶಿ ಉದ್ಯೋಗಿಗಳನ್ನು ತನ್ನ ದೇಶದಿಂದ ಹೊರಕ್ಕೆ ಕಳುಹಿಸಲು ಕಠಿಣ ಕ್ರಮ ಕೈಗೊಂಡಿದೆ.

ಸದ್ಯ ಆಸ್ಟ್ರೇಲಿಯಾ 457 ವೀಸಾ ಜಾಗದಲ್ಲಿ ಎರಡು ಹೊಸ ವೀಸಾ ಯೋಜನೆಗಳನ್ನು ಜಾರಿಗೆ ತಂದಿದೆ. ಒಂದು ಎರಡು ವರ್ಷಗಳ ಅವಧಿಯ ವೀಸಾ ಯೋಜನೆ. ಮತ್ತೊಂದು ನಾಲ್ಕು ವರ್ಷಗಳ ಅವಧಿಯ ಯೋಜನೆ ಆದರೂ, ಅದರ ಅಡಿಯಲ್ಲಿ ವೀಸಾ ಪಡೆಯುವುದು ವಿದೇಶಿಗರಿಗೆ ಕಷ್ಟವಾಗುಂತಹ ನಿಯಮಾವಳಿಗಳನ್ನು ರೂಪಿಸಿದೆ. ಸದ್ಯ ಆಸ್ಟ್ರೇಲಿಯಾದಲ್ಲಿ ಉದ್ಯೋಗ ಬೇಕು ಎಂದು ಭಾರತೀಯ ಮೂಲದ ಐಟಿ ಉದ್ಯೋಗಿಗಳು ಇಂಗ್ಲಿಷ್‌ ಭಾಷೆಯ ಮೇಲಿನ ಹಿಡಿತವನ್ನು ಹಾಗೂ ಹಳೆಯ ಉದ್ಯೋಗದ ಅನುಭವಗಳನ್ನು ಹೊಂದಿರಬೇಕಾಗುತ್ತದೆ.

ಇತ್ತೀಚೆಗಷ್ಟೆ ಇಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ 457 ವೀಸಾ ಯೋಜನೆ ಅಡಿಯಲ್ಲಿ ಆಸ್ಟ್ರೇಲಿಯಾಕ್ಕೆ ಬಂದ ವಿದೇಶಿ ಉದ್ಯೋಗಿಗಳ ಪೈಕಿ ಶೇ. 70ರಷ್ಟು ಮಂದಿ ಅಲ್ಲಿನ ಪೌರತ್ವಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಸರಕಾರ ಇಡೀ ವೀಸಾ ಯೋಜನೆಯನ್ನೇ ರದ್ದುಗೊಳಿಸುವ ಮೂಲಕ ಅಂತವರ ಆಸೆಗೆ ತಣ್ಣೀರು ಸುರಿಯುವ ಕೆಲಸ ಮಾಡಿದೆ.

ಅದೇ ದಾರಿಯಲ್ಲಿ ನ್ಯೂಝಿಲ್ಯಾಂಡ್:

ಅತ್ತ ಆಸ್ಟ್ರೇಲಿಯಾ ವಿದೇಶಿ ಉದ್ಯೋಗಿಗಳಿಗೆ ಮರ್ಮಾಘಾತ ನೀಡಿದ ಬೆನ್ನಲ್ಲೇ ಪಕ್ಕದ ನ್ಯೂಝಿಲ್ಯಾಂಡ್ ಕೂಡ ಕಠಿಣ ಕ್ರಮಗಳನ್ನು ಘೋಷಿಸಿದೆ. ಅಲ್ಲಿನ ನಗರಗಳು ಅಗತ್ಯಕ್ಕಿಂತ ಹೆಚ್ಚು ಜನರಿಂದ ತುಂಬಿಕೊಂಡಿವೆ. ರಸ್ತೆಗಳು ಕಿಕ್ಕಿದಿವೆ. ಹೀಗಾಗಿ ದೇಶದ ವಲಸೆ ನೀತಿಗೆ ಕಡಿವಾಣ ಹಾಕುವ ಮೂಲಕ ಜನಸಂಖ್ಯೆಯ ನಿಯಂತ್ರಣಕ್ಕೆ ನ್ಯೂಝಿಲ್ಯಾಂಡ್ ಮುಂದಾಗಿದೆ ಎಂದು ‘ದಿ ಗಾರ್ಡಿಯನ್’ ವಿಸ್ತೃತ ವರದಿ ಮಾಡಿದೆ.

ಇದರ ಜತೆಗೆ ಅಲ್ಲಿ ಬೆಳೆಯುತ್ತಿರುವ ರಾಷ್ಟ್ರೀಯವಾದ ಭಾರತ ಮೂಲದ ಉದ್ಯೋಗಿಗಳಿಗೆ ಮುಳುವಾಗಿದೆ. ಸದ್ಯ ಅಲ್ಲಿನ ಕಾಲೇಜುಗಳಲ್ಲಿ ಭಾರತ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ, ಮುಂದಿನ ದಿನಗಳಲ್ಲಿ ಅವರ ಉದ್ಯೋಗ ಸಾಧ್ಯತೆಗಳನ್ನು ಕಿತ್ತುಕೊಳ್ಳುವ ಮೂಲಕ ‘ನ್ಯೂಝಿಲ್ಯಾಂಡ್ ಫಸ್ಟ್’ ಎಂದಿದೆ ಸ್ಥಳೀಯ ಸರಕಾರ.

ಭಾರತದಲ್ಲಿ ‘ರಾಷ್ಟ್ರೀಯ ವಾದ’ ಬೆಳೆಯಲು ದೊಡ್ಡ ಪ್ರಮಾಣದಲ್ಲಿ ನೆರವು ನೀಡಿದ್ದು ಇದೇ ವರ್ಗದ ಜನ. ಇದೀಗ, ಪ್ರಪಂಚದ ಹಲವು ದೇಶಗಳಲ್ಲಿ ರಾಷ್ಟ್ರೀಯ ವಾದದ ಸುನಾಮಿ ಏಳುತ್ತಿದ್ದರೆ, ಅದರ ಮೊದಲ ಪರಿಣಾಮ ಬೀರುತ್ತಿರುವುದೂ ಕೂಡ ಇದೇ ವರ್ಗದ ಜನರಿಗೆ ಎಂಬುದು ವಿಪರ್ಯಾಸ.

ಯಾವುದೇ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರೆ ಉದ್ಯೋಗಗಳನ್ನು ಹೆಚ್ಚಿಸುವ ಯೋಜನೆಗಳನ್ನು ರೂಪಿಸಬೇಕು. ಆದರೆ, ರಾಷ್ಟ್ರೀಯವಾದವನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಸರಕಾರಗಳು ವಿದೇಶಿ ಉದ್ಯೋಗಿಗಳನ್ನು ಹೊರಗಟ್ಟುವ ಜನಪ್ರಿಯ ಕ್ರಮಕ್ಕೆ ಮುಂದಾಗುತ್ತಿವೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಜನರನ್ನು ಗಡಿ, ದೇಶ, ಭಾಷೆ, ಪ್ರಾದೇಶಿಕತೆ, ಧರ್ಮದ ನೆಲಯಲ್ಲಿ ‘ಒಡೆದು ಆಳುವ’ ಮನಸ್ಥಿತಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕೆ ಇದು ಉದಾಹರಣೆ, ಅಷ್ಟೆ. 

Leave a comment

FOOT PRINT

Top