An unconventional News Portal.

ದೇಶಪ್ರೇಮಿಗಳ ‘ಸೇನಾಭಿಮಾನ’: ಪ್ರತಿ ಭಾರತೀಯನೂ ಮಿಲಿಟರಿಯನ್ನೇಕೆ ಪ್ರೀತಿಸಲೇ ಬೇಕು?

ದೇಶಪ್ರೇಮಿಗಳ ‘ಸೇನಾಭಿಮಾನ’: ಪ್ರತಿ ಭಾರತೀಯನೂ ಮಿಲಿಟರಿಯನ್ನೇಕೆ ಪ್ರೀತಿಸಲೇ ಬೇಕು?

‘ನಾವು ಮನೆಯಲ್ಲಿ ಅರಾಮಾಗಿ ಹೆಂಡತಿ ಮಕ್ಕಳ ಜತೆಯಲ್ಲಿ ಊಟ ತಿಂಡಿ ಮಾಡಿಕೊಂಡು ಮಲಗಿರುವಾಗ, ಗಡಿಯಲ್ಲಿ ಜೀವವನ್ನು ಪಣಕ್ಕಿಟ್ಟು ದೇಶವನ್ನು ಕಾಯುವವರು ಸೈನಿಕರು…’, ‘ಸೈನಿಕರು ಎಂದರೆ ಒಣ ರೊಟ್ಟಿ ತಿಂದುಕೊಂಡು, ಮೂರೊತ್ತು ಸರಿಯಾದ ಊಟವೂ ಇಲ್ಲದೆ ನಮ್ಮನ್ನು ಕಾಯುವ ಯೋಧರು…’, ‘ಸೇನೆಯ ವಿಚಾರಕ್ಕೆ ಬಂದರೆ ಎಲ್ಲವೂ ನಗಣ್ಯ…’, ‘ನೀವು ದೇಶವನ್ನು ಇಷ್ಟಪಡುವವರೇ ಆಗಿದ್ದರೆ, ಸೇನೆಯನ್ನೂ ಇಷ್ಟಪಡಬೇಕು…’

ಈ ಮೇಲಿನ ವಾಕ್ಯಗಳು, ಪದಪುಂಜಗಳು ಭಾರತದ ಪ್ರಸ್ತುತ ಸಮಯದಲ್ಲಿ ಭಾವನಾತ್ಮಕವಾಗಿ ಬಳಕೆಯಾಗುತ್ತಿವೆ. ಆದರೆ ಇಂತಹ ವಾದಗಳು ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮತ್ತು, ಭಾವನೆಗಳ ಆಚೆಗೆ ಇಂತಹ ವಾಕ್ಯಗಳ ಬಳಕೆಯ ಹಿಂದೆ ರಾಜಕೀಯವೂ ಕೆಲಸ ಮಾಡುತ್ತದೆ.

ಇಷ್ಟಕ್ಕೂ ನಾವೇಕೆ ದೇಶದ ಸೇನೆಯನ್ನು ಇಷ್ಟಪಡಲೇಬೇಕು ಎಂದು ವರ್ಗದ ಜನ ಒತ್ತಾಯಿಸುತ್ತಾರೆ? ಇದರಿಂದ ಅವರಿಗೆ ಆಗುವ ಲಾಭಗಳೇನು? ಅಂತಹವರು ಸೈನಿಕರ ಬಗ್ಗೆ, ಸೇನೆಯ ಬಗ್ಗೆ ತೋರಿಸುವ ಕಾಳಜಿ ನಿಜಕ್ಕೂ ಪ್ರಾಮಾಣಿಕವಾಗಿದೆಯಾ? ಇಂತಹ ಪ್ರಶ್ನೆಗಳನ್ನು ಹಾಕಿಕೊಂಡರೆ, ಒಂದಷ್ಟು ಹೊಸ ಹೊಳವುಗಳು ಸಿಗುತ್ತವೆ.

ಅಮೆರಿಕಾ ರಾಜಕೀಯ:

Joint Service Color Guard performs during Super Bowl

ಅದು 2015ರ ನವೆಂಬರ್ ತಿಂಗಳ ಮೊದಲ ವಾರ. ಅಮೆರಿಕಾದ ಸೆನೆಟ್‌ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಅಮೆರಿಕಾ ಸೇನೆಯ ಕುರಿತು ಪ್ರಚಾರ ಮಾಡಲು ಬ್ಯಾಸ್ಕೆಟ್‌ ಬಾಲ್‌ ತಂಡಗಳ ಮೇಲೆ ಜನರ ತೆರಿಗೆ ಹಣವನ್ನು ಸುರಿಯಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಲಾಗಿತ್ತು.

ಅಲ್ಲಿನ ಡಿಪಾರ್ಟ್‌ಮೆಂಟ್ ಆಫ್ ಡಿಫೆನ್ಸ್ (ಡಿಓಡಿ) ಸುಮಾರು 90 ಲಕ್ಷ ಡಾಲರ್‌ ಹಣವನ್ನು ಅಮೆರಿಕಾದ ಎನ್‌ಎಫ್‌ಎಲ್, ಎನ್‌ಬಿಎ, ಎಂಎಲ್‌ಬಿ, ಎಂಎಲ್‌ಎಸ್, ಎನ್‌ಎಚ್‌ಎಲ್ ಹೆಸರಿನ ಬ್ಯಾಸ್ಕೆಟ್‌ ಬಾಲ್‌ ತಂಡಗಳ ಮೇಲೆ ಸುರಿದಿತ್ತು. ನಮ್ಮಲ್ಲಿ ಕ್ರಿಕೆಟ್‌ ಆಟದ ರೀತಿಯಲ್ಲಿ ಅಮೆರಿಕಾದಲ್ಲಿ ಬ್ಯಾಸ್ಕೆಟ್‌ ಬಾಲ್‌ ಕ್ರೀಡೆ ಮನೆಮನಗಳಲ್ಲಿ ಜನಪ್ರಿಯವಾಗಿದೆ. ಇಂತಹ ಕ್ರೀಡಾಕೂಟಗಳು ನಡೆಯುವ ಮುಂಚೆ ಮತ್ತು ಮುಗಿದ ನಂತರ ಅಮೆರಿಕಾ ಸೇನೆಯ ಕುರಿತು ಅಭಿಮಾನ ಮೂಡಿಸುವ ವಿಡಿಯೋಗಳನ್ನು ಪ್ರಸಾರ ಮಾಡಲು ಮತ್ತು ವೀಕ್ಷಕರಲ್ಲಿ ಸೇನಾಭಿಮಾನವನ್ನು ಮೂಡಿಸಲು ಜನರ ತೆರಿಗೆ ಹಣದಲ್ಲಿಯೇ ಜಾಹೀರಾತು ನೀಡಲಾಗಿತ್ತು.

ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಸೆನೆಟ್ ವರದಿಯಲ್ಲಿ, “ಇದನ್ನು ಜನರಲ್ಲಿ ದೇಶಾಭಿಮಾನ ಮೂಡಿಸಲು ಬಳಕೆ ಮಾಡಿದ್ದಲ್ಲ. ಬದಲಿಗೆ ಈಗಾಗಲೇ ಹಣದಿಂದ ಕೊಬ್ಬಿರುವ ಆಯೋಜಕರ ಜೇಬು ತುಂಬಿಸಲು ಬಳಸಲಾಗಿದೆ,” ಎಂದು ಹೇಳಲಾಗಿತ್ತು.

ಹೀಗೆ ಜನಪ್ರಿಯ ಕ್ರೀಡಾಕೂಟಗಳನ್ನು ಆಯಾ ದೇಶಗಳ ಸೇನೆಯ ಕುರಿತು ಜಾಹೀರಾತು ನೀಡುವ ಸಂಪ್ರದಾಯ ಕೇವಲ ಅಮೆರಿಕಾ ಮಾತ್ರವಲ್ಲ, ಫ್ರಾನ್ಸ್ ಸೇರಿದಂತೆ ಹಲವು ಯುರೋಪಿಯನ್ ದೇಶಗಳಲ್ಲಿಯೂ ಕಂಡು ಬರುತ್ತದೆ. ಫುಟ್ಬಾಲ್‌ ವಿಶ್ವಕಪ್‌ ಸಂದರ್ಭದಲ್ಲಿ ಇದು ಕಂಡು ಬಂದಿತ್ತು ಕೂಡ.

ಇವುಗಳ ಹಿಂದೆ, ಕ್ರೀಡೆ, ಸೇನೆ, ದೇಶಪ್ರೇಮಗಳಿಂದ ಹೊರತಾದ ಆರ್ಥಿಕ ಹಿತಾಸಕ್ತಿಗಳು ಕೆಲಸ ಮಾಡುತ್ತವೆ ಎಂಬುದಕ್ಕೆ ಪ್ರಪಂಚ ಇತರೆ ಎಲ್ಲಾ ದೇಶಗಳಿಂತ ಹೆಚ್ಚು ಮಿಲಿಟರಿ ಮೇಲೆ ಹಣ ಹೂಡುವ ಅಮೆರಿಕಾದ ಸೆನೆಟ್‌ ವರದಿ ಉದಾಹರಣೆ ಅಷ್ಟೆ. ಆದರೆ, ಯಾಕೆ ಜನರಲ್ಲಿ ಸೇನೆಯ ಕುರಿತು ಅಭಿಮಾನ ಮೂಡಿಸುವ ಪ್ರಯತ್ನಗಳು ಪ್ರಪಂಚದಾದ್ಯಂತ ನಡೆಯುತ್ತವೆ? ಅದಕ್ಕಿರುವ ಉತ್ತರ ಸೇನೆ, ಯೋಧರು ಎಂಬುದಕ್ಕಿಂತ ಅವರನ್ನು ಬಳಸಿಕೊಂಡು ನಡೆಸುವ ಯುದ್ಧಗಳ ಹಿಂದಿರುವ ಆರ್ಥಿಕ ಲಾಭಿ.

ಯುದ್ಧಕ್ಕಿರುವ ಮಾರುಕಟ್ಟೆ:

defence-contractors

ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತರ ಕೋರಿಯಾ ಮತ್ತು ಅಮೆರಿಕಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದೆ. ಅದನ್ನೇ ನೆಪವಾಗಿಟ್ಟುಕೊಂಡು ಮೂರನೇ ಪ್ರಪಂಚ ಯುದ್ಧವೊಂದು ನಡೆದು ಹೋಗುತ್ತದೆ ಎಂಬ ಭವಿಷ್ಯವನ್ನು ಅರಿವಿದ್ದೋ, ಅರಿವಿಲ್ಲದೆಯೋ ಹರಿಯ ಬಿಡುವ ಕೆಲಸ ನಡೆಯುತ್ತಿದೆ.

ಈ ಯುದ್ಧೋನ್ಮಾದ ಭಾವನೆ ಯಾವುದೇ ದೇಶಕ್ಕಾದರೂ ಭವಿಷ್ಯದಲ್ಲಿ ಅಪಾಯವನ್ನು ತಂದೊಡ್ಡಲಿದೆ. ಹಾಗಂತ ಹೇಳಿದ್ದು 1961ರಲ್ಲಿ ಅಮೆರಿಕಾ ಅಧ್ಯಕ್ಷೀಯ ಪದವಿಯಿಂದ ಇಳಿದ ಡ್ವಿಲೈಟ್ ಡಿ ಐಸೆನ್‌ಹೋವರ್‌. ಅವರ ಕೊನೆಯ ಭಾಷಣದಲ್ಲಿ, “ಯುದ್ದವನ್ನು ಬಯಸುವ ಮಿಲಿಟರಿ ಉದ್ಯಮದ ಗುತ್ತಿಗೆದಾರರು ಮತ್ತು ಲಾಭಿಕೋರರಿಂದ ಬಹದೊಡ್ಡ ಅಪಾಯ ಎದುರಾಗಲಿದೆ,” ಎಂದು ಹೇಳಿದ್ದರು.

ಇವತ್ತು ಪ್ರಪಂಚ ಯಾವುದೇ ಮೂಲೆಯಲ್ಲಿ ಯುದ್ಧ ನಡೆದರೂ ಅದರ ಲಾಭದ ದೊಡ್ಡ ಪಾಲವನ್ನು ಹಂಚಿಕೊಳ್ಳುತ್ತಿರುವವರು ಅಮೆರಿಕಾದ ಮಿಲಿಟರಿ ಗುತ್ತಿಗೆದಾರರು. ಪ್ರತಿ ಯುದ್ಧಗಳು ನಡೆದರೆ ಅಥವಾ ದೇಶದೊಳಗಿನ ಸಂಘರ್ಷಗಳು ನಡೆದರೆ ಮದ್ದು ಗುಂಡುಗಳು ದೊಡ್ಡ ಪ್ರಮಾಣದಲ್ಲಿ ಬಿಕರಿಯಾಗುತ್ತವೆ. ಇವುಗಳನ್ನು ಆಯಾ ಸರಕಾರಗಳೇ ಖರೀದಿಸುತ್ತವಾದರೂ, ಹಣದ ಮೂಲ ಆಯಾ ದೇಶಗಳ ಜನಸಾಮಾನ್ಯರು ಕಟ್ಟುವ ತೆರಿಗೆ.

ಭಾರತದ ವಿಚಾರಕ್ಕೆ ಬರುವುದಾದರೆ, 2016-17ರಲ್ಲಿ ಆಯವ್ಯಯದಲ್ಲಿ ಮಿಲಿಟರಿಗಾಗಿ ಎತ್ತಿಟ್ಟಿದ್ದ ಮೊತ್ತ ಸುಮಾರು 2,49,099 ಕೋಟಿ ರೂಪಾಯಿಗಳು. 2017-18ನೇ ಸಾಲಿನಲ್ಲಿ ಇದೇ ಮೊತ್ತ 2,62,389.8 ಕೋಟಿಗೆ ಏರಿಕೆಯಾಗಿದೆ. ನಾವು ಜನರ ತೆರಿಗೆ ಹಣದಲ್ಲಿ ಸೇನೆಗೆ ವಿನಿಯೋಗಿಸಿಕೊಂಡು ಬಂದ ಹಣದ ಇನ್ನಷ್ಟು ವಿವರ ಇಲ್ಲಿ ಸಿಗುತ್ತದೆ.

ಸೇನಾಭಿಮಾನ ಲೇಪಿತ ಯುದ್ಧ ಉನ್ಮಾದ ಹಿಂದಿರುವ ಆರ್ಥಿಕತೆ ಯಾವುದೇ ದೇಶದ ಒಳಗಿರುವ ಆಂತರಿಕ ಸಂಘರ್ಷಗಳನ್ನು (ಉದಾಹರಣೆ: ಕಾಶ್ಮೀರಾ) ಅಥವಾ ದೇಶಗಳ ನಡುವೆ ಇರುವ ಸಂಘರ್ಷಗಳನ್ನು (ಉದಾಹರಣೆಗೆ: ಭಾರತ ಮತ್ತು ಪಾಕಿಸ್ತಾನ) ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಬಿಡುವುದಿಲ್ಲ. ಬದಲಿಗೆ ಆಯಾ ದೇಶಗಳು ಅವುಗಳ ಸೇನೆಯ ಮೇಲೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ತೆರಿಗೆ ಹಣವನ್ನು ಹೂಡಿಕೆ ಮಾಡುವಂತೆ ಅವು ಪ್ರಚೋದನೆ ನೀಡುತ್ತಲೇ ಇರುತ್ತವೆ ಎಂಬುದು ಸಾಮಾನ್ಯ ಜ್ಞಾನ ಇರುವವರಿಗೆ ಅರ್ಥವಾಗುವ ಸತ್ಯಗಳು.

ಕಾಶ್ಮೀರ ವಿಚಾರದಲ್ಲಿ: 

Kashmir Protests

ಸದ್ಯ ಇಷ್ಟೆಲ್ಲಾ ಸೇನೆಯ ಕುರಿತು ಚರ್ಚೆಗೆ ಕಾರಣವಾಗಿರುವುದು ಕಾಶ್ಮೀರದಲ್ಲಿ ನಡೆಯುತ್ತಿರುವ ಮಿಲಿಟರಿ ಮತ್ತು ನಾಗರೀಕರ ನಡುವಿನ ಸಂಘರ್ಷಗಳು. ಸ್ವಾತಂತ್ರ್ಯ ನಂತರ, ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ದೇಶಗಳು ಸೃಷ್ಟಿಗೊಂಡ ದಿನದಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ವಿರೋಧಿ ಮನಸ್ಥಿತಿ ಕೆಲಸ ಮಾಡುತ್ತಿದೆ. ಅಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಮೊದಲ ಪ್ರಧಾನಿ ನೆಹರೂ ನೀಡಿದ ಆಶ್ವಾಸನೆ ಉಳಿಸಿಕೊಳ್ಳಲಿಲ್ಲ ಎಂಬ ವಾದ ಅವತ್ತಿಂದ ಇವತ್ತಿನವರೆಗೂ ಜೀವಂತವಾಗಿದೆ. ಅದಕ್ಕೆ ಪೂರಕವಾಗಿ ಅಲ್ಲಿನ ಶಶಸ್ತ್ರ ಪ್ರತ್ಯೇಕತಾವಾದ ಕಾಲಕಾಲಕ್ಕೆ ಅಮೆರಿಕಾ ಮತ್ತು ಪಾಕಿಸ್ತಾನದ ಬೆಂಬಲದೊಂದಿಗೆ ಬಲಗೊಂಡಿದೆ ಮತ್ತು ಶಕ್ತಿಯನ್ನು ಕಳೆದುಕೊಂಡಿದೆ. ಅಲ್ಲಿಯೂ ಕೆಲಸ ಮಾಡಿರುವುದು ಮತ್ತದೇ ಮಿಲಿಟರಿ ಗುತ್ತಿಗೆ ಲಾಭಿಗಳು.

ಕಳೆದ 30 ವರ್ಷಗಳಲ್ಲಿ ನಿಧಾನವಾಗಿಯಾದರೂ ಶಾಂತಿ ನೆಲಸುವ ಸಾಧ್ಯತೆಗಳು ಇದ್ದವು. ಆದರೆ, ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವನಿ ಎನ್‌ಕೌಂಟರ್ ನಂತರ ಕಾಶ್ಮೀರದ ಕಣಿವೆ ಅಕ್ಷರಶಃ ರಕ್ತಸಿಕ್ತವಾಗಿದೆ. ಜನ ಸೇನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸೇನೆ ಕೂಡ ಮಾನವ ಹಕ್ಕುಗಳ ದಮನಕ್ಕೆ ಹೊರಟಿದೆ.

ಅದರ ಅತಿರೇಕಗಳು ಎಷ್ಟರ ಮಟ್ಟಿಗೆ ಹುಟ್ಟಿಕೊಂಡಿವೆ ಎಂದರೆ, ಕರ್ನಾಟಕದ ಸುದ್ದಿ ವಾಹಿನಿ ಟಿವಿ9 ಪ್ರಸಾರ ಮಾಡಿದ ‘ಸೇನೆಯಿಂದ ದೌರ್ಜನ್ಯ?’ ವರದಿಗೆ ಭಾವನೆಗಳ ಲೇಪಿತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದರೆ ಸದ್ಯದ ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಪರಿಹಾರಗಳೇನಿವೆ? ಪರಿಹಾರ ಯಾರಿಗೂ ಬೇಕಾಗಿಲ್ಲದಿರುವಾಗ ಅಂತಹ ಆಲೋಚನೆ ಹುಟ್ಟದಂತೆ ನೋಡಿಕೊಳ್ಳಬೇಕಿದೆ, ಅಷ್ಟೆ. ಅದರ ಭಾಗವಾಗಿಯೇ ಮೇಲಿನ ಪದಪುಂಜಗಳು, ವಾಕ್ಯಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ.

ಇವುಗಳ ಆಚೆಗೆ ಸೇನೆಯ ಕುರಿತು, ಯೋಧರ ಕುರಿತು ಅಭಿಮಾನ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಅದು ಭಾವನಾತ್ಮಕ ನೆಲೆಯಲ್ಲಿ ಪ್ರತಿಕ್ರಿಯೆ ಮಾತ್ರವೇ ಆಗಿದ್ದರೆ ಅದು ದೇಶವಾಸಿಗಳಿಗೆ ಸಾಮಾನ್ಯ ಬದುಕಿಗೆ ದೊಡ್ಡ ಅಪಾಯ ತಂದೊಡ್ಡಬಲ್ಲದು. ಅಂತಹ ಪಾಠಗಳನ್ನು ಯುದ್ಧದಾಹಿ ಸ್ವತಃ ಅಮೆರಿಕಾ ಹೇಳುತ್ತಿದೆ; ಕೇಳಿಸಿಕೊಳ್ಳುವ ವ್ಯವಧಾನ ಇರಬೇಕು, ಅಷ್ಟೆ.

Leave a comment

FOOT PRINT

Top