An unconventional News Portal.

ಯುಎಸ್‌- ಭಾರತೀಯರಿಗೆ ವೀಸಾ ಮರ್ಮಾಘಾತ: ‘ವಿ ಲವ್ ಟ್ರಂಪ್’ ಅಂದವರು ಈಗೇನಂತಾರೆ?

ಯುಎಸ್‌- ಭಾರತೀಯರಿಗೆ ವೀಸಾ ಮರ್ಮಾಘಾತ: ‘ವಿ ಲವ್ ಟ್ರಂಪ್’ ಅಂದವರು ಈಗೇನಂತಾರೆ?

ಭಾರತವೂ ಸೇರಿದಂತೆ ವಿದೇಶಿ ವಲಸೆ ಕೆಲಸಗಾರರಿಗೆ ಮರ್ಮಾಘಾತವನ್ನು ನೀಡುವಂತಹ ಎಚ್‌- 1ಬಿ ವೀಸಾ ಯೋಜನೆ ಸುಧಾರಣೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೇನು ಸಹಿ ಹಾಕಲಿದ್ದಾರೆ.

ಇದು ಅಮೆರಿಕಾ ಇತಿಹಾಸದಲ್ಲಿಯೇ, ಉದ್ಯೋಗ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಸ್ಥಿತ್ಯಂತರವನ್ನು ಮೂಡಿಸುವ ಹೆಜ್ಜೆಯಾಗಲಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ವೀಸಾ ನೀಡಲು ಸಂಪೂರ್ಣವಾಗಿ ಹೊಸ ರಚನೆಯನ್ನು ಇದು ಸ್ಥಾಪಿಸಲಿದೆ. ಇಂತಹದೊಂದು ಯೋಜನೆಗೆ ಸಹಿ ಹಾಕಲು ಕ್ಷಣಗಣನೆ ಆರಂಭವಾಗಿದ್ದು ‘ಅಮೆರಿಕಾದ ಉತ್ಪನ್ನಗಳನ್ನೇ ಕೊಳ್ಳಿ- ಅಮೆರಿಕಾದವರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಿ’ ಎಂಬ ಘೋಷಣೆಯನ್ನು ಟ್ರಂಪ್ ಮತ್ತೊಮ್ಮೆ ಗಟ್ಟಿ ದನಿಯಲ್ಲಿ ಮೊಳಗಿಸಲಿದ್ದಾರೆ.

ಮೇಲ್ನೋಟಕ್ಕೆ ಹೊಸ ವೀಸಾ ಯೋಜನೆ ಜಾರಿಗೆ ಬಂದರೆ ಅಮೆರಿಕಾದಲ್ಲಿ ಕೌಶಲ್ಯ ಹಾಗೂ ಬುದ್ಧಿಮತ್ತೆಯ ಆಧಾರದ ಮೇಲೆ ಕೆಲಸಗಾರರ ನೇಮಕ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಆಳದಲ್ಲಿ ವಿದೇಶಿ ವಲಸೆ ಕೆಲಸಗಾರರಿಗೆ ನಿರ್ಬಂಧ ಹೇರುವ ಜಾಣ ನಡೆ ಇದರ ಹಿಂದಿದೆ. ಈ ವರ್ಷದ ಅಕ್ಟೋಬರ್‌ನಿಂದ ಆರಂಭಗೊಳ್ಳಲಿರುವ ಮುಂದಿನ ಒಂದು ಆರ್ಥಿಕ ವರ್ಷಕ್ಕೆ ಒಟ್ಟು 65 ಸಾವಿರ ಎಚ್‌- 1ಬಿ ವೀಸಾಗಳನ್ನು ನೀಡಲು ‘ಅಮೆರಿಕಾ ಪೌರತ್ವ ಮತ್ತು ವಲಸೆ ಸೇವೆ’ ಇಲಾಖೆ ತೀರ್ಮಾನಿಸಿದೆ. ಇದರಲ್ಲಿ 20 ಸಾವಿರ ವೀಸಾಗಳನ್ನು ಅಮೆರಿಕಾದ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಮುಗಿಸಿದವರಿಗೆ ಲಾಟರಿ ಮೂಲಕ ನೀಡಲು ಸ್ಥಳೀಯ ಸರಕಾರ ಮುಂದಾಗಿದೆ. ಇದು ಪರೋಕ್ಷವಾಗಿ ಅಮೆರಿಕಾದ ನೆಲದವರಿಗೆ ಅಥವಾ ಅಲ್ಲಿಯೇ ಉನ್ನತ ಶಿಕ್ಷಣ ಮುಗಿಸಿದವರಿಗೆ ಉದ್ಯೋಗದ ಭರವಸೆ ನೀಡಿದಂತಾಗುತ್ತದೆ.

ವಿಶೇಷ ಅಂದರೆ, ಹೊಸ ವೀಸಾ ನೀತಿ ಬರುವ ಮುನ್ನವೇ ಭಾರತ ಮೂಲದ ಐಟಿ ಕಂಪನಿಗಳು ಅಮೆರಿಕಾದ ಕಾಲೇಜುಗಳಿಂದ ‘ಕ್ಯಾಂಪಸ್‌ ಸೆಲೆಕ್ಷನ್’ ಶುರು ಮಾಡಿಯಾಗಿದೆ. ಈ ಮೂಲಕ ವಲಸೆ ನೀತಿಗೆ ಕಡಿವಾಣ ಹಾಕಲು ಮುಂದಾದ ಟ್ರಂಪ್‌ ಸರಕಾರದ ಬಿಸಿಯನ್ನು ಅವು ಮೊದಲೇ ಅರ್ಥ ಮಾಡಿಕೊಂಡಂತೆ ಕಾಣಿಸುತ್ತಿದೆ.

ವೀಸಾ ದುರ್ಬಳಕೆ ಆರೋಪ:

 

ಈ ಹಿಂದೆಯೂ ಲಾಟರಿ ಮೂಲಕ ಎಚ್‌- 1ಬಿ ವೀಸಾಗಳನ್ನು ನೀಡುವ ಪದ್ಧತಿ ಇತ್ತು. ಆದರೆ ಇದನ್ನು ಕಂಪನಿಗಳು ವಿದೇಶಗಳಿಂದ ಕಡಿಮೆ ವೇತನಕ್ಕೆ ಕೆಲಸಗಾರರನ್ನು ಕರೆಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದವು. ಹೀಗಾಗಿ ಈ ಬಾರಿ ಅವುಗಳನ್ನು ಅಮೆರಿಕಾದ ಕಾಲೇಜುಗಳಲ್ಲಿ ಕಲಿತವರಿಗೆ ಆದ್ಯತೆ ರೂಪದಲ್ಲಿ ನೀಡಲು ವೈಟ್‌ಹೌಸ್‌ ಅಧಿಕಾರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ. ಇದರ ಮೊದಲ ಪರಿಣಾಮ ಬೀರುವುದು ‘ಸ್ಟೆಮ್ ಜಾಬ್ಸ್‌’ ಎಂದು ಕರೆಯುವ ‘ಸೈನ್ಸ್ , ಟೆಕ್ನಾಲಜಿ, ಎಂಜಿನಿಯರಿಂಗ್ ಮತ್ತು ಮ್ಯಾಥ್’ ಹಿನ್ನೆಲೆಯ ಕೆಲಸಗಳ ಮೇಲೆ.

“ಸ್ಟೆಮ್‌ ಕೆಲಸಗಳಿಗೆ ದೇಶದ ಕಾಲೇಜುಗಳಲ್ಲಿ ಪ್ರತಿ ವರ್ಷ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುತ್ತಿದ್ದಾರೆ,” ಎಂಬುದು ಅಮೆರಿಕಾ ವಲಸೆ ನೀತಿ ಅಧಿಕಾರಿಗಳ ವಾದವಾಗಿದೆ.

ಎಚ್‌- 1ಬಿ ವೀಸಾ ನೀತಿಯನ್ನು ಕಂಪನಿಗಳು ನಾನಾ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬುದು ಟ್ರಂಪ್ ಸರಕಾರದ ಅಧಿಕಾರಿಗಳ ಆರೋಪ. ಈ ವೀಸಾ ನೀತಿ ಅಡಿಯಲ್ಲಿ ಒಟ್ಟು ನಾಲ್ಕು ಹಂತಗಳ ಸಂಬಳವನ್ನು ಜಾರಿಗೆ ತರಲಾಗಿತ್ತು. ಆದರೆ ಅತಿ ಹೆಚ್ಚು ಸಂಬಳ ನೀಡುವ ಮೊದಲ ಹಂತದ ಕೆಲಸಗಾರರನ್ನು ಕಡಿಮೆ ಪ್ರಮಾಣದಲ್ಲಿ ಕಂಪನಿಗಳು ನೇಮಕ ಮಾಡಿಕೊಳ್ಳುತ್ತಿದ್ದವು. ಶೇ. 80ರಷ್ಟು ವಲಸೆ ಕೆಲಸಗಾರರಿಗೆ ಅವರ ಯೋಗ್ಯತೆಗಿಂತ ಕಡಿಮೆ ಸಂಬಳ ನೀಡಲಾಗುತ್ತಿತ್ತು. ಇದು ಅಮೆರಿಕಾದ ಮೂಲದ ಕೆಲಸಗಾರರಿಗೆ ಹೋಲಿಸಿದರೆ ಕಡಿಮೆ ವೆಚ್ಚವಾಗಿರುತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧ್ಯಕ್ಷ ಟ್ರಂಪ್,  ಎಚ್‌- 1ಬಿ ವೀಸಾ ನೀಡುವ ಪ್ರಕ್ರಿಯೆಯಲ್ಲಿಯೇ ದೊಡ್ಡ ಬದಲಾವಣೆ ತರಲು ಹೊರಟಿದೆ. ಸಹಜವಾಗಿಯೇ ಅಮೆರಿಕಾ ಮೂಲಕ ಕಂಪನಿಗಳು ಸ್ಥಳೀಯರಿಗೆ ಮೊದಲ ಮನ್ನಣೆ ನೀಡಬೇಕಾಗುತ್ತದೆ. ಜತೆಗೆ ಅವರಿಗೆ ಅಲ್ಲಿನ ನೆಲದ ಕಾನೂನಿನ ಅಡಿಯಲ್ಲಿ ನಿಗದಿತ ಸಂಬಳವನ್ನೂ ನೀಡಬೇಕಾಗುತ್ತದೆ.

ಟ್ರಂಪ್‌ ಸ್ವಾಗತಿಸಿದವರಿಗೆ ಬಿಸಿ: 

ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿಯೇ ಇಂತಹದೊಂದು ಕಠಿಣ ವಲಸೆ ನೀತಿ ತರುವುದಾಗಿ ಹೇಳಿದ್ದರು. ಆ ಮೂಲಕವೇ ಸ್ಥಳೀಯ ಜನರ ಮನಸ್ಸನ್ನು ಅವರು ಸೆಳೆದಿದ್ದರು. ಇದೇ ಸಮಯದಲ್ಲಿ ಭಾರತದ ಕೆಲವು ‘ಹಿಂದೂ ಸೇನೆ’ ಹೆಸರಿನ ಸಂಘಟನೆಗಳು ಟ್ರಂಪ್ ಬೆಂಬಲಕ್ಕೆ ನಿಂತಿದ್ದವು. ಟ್ರಂಪ್ ಹುಟ್ಟು ಹಬ್ಬವನ್ನೂ ಆಚರಿಸಿದ್ದವು.

ಇದೀಗ, ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ‘ದೇಶ ಪ್ರೇಮ’ವನ್ನು ಪ್ರದರ್ಶಿಸುತ್ತಿದ್ದಾರೆ. ಅದರ ಪರಿಣಾಮ ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗವನ್ನು ಅರಸಿಕೊಂಡು ಅಮೆರಿಕಾಗೆ ಹೋಗುತ್ತಿದ್ದ ಭಾರತೀಯರಿಗೆ ಹೊಡೆತ ಬೀಳಲಿದೆ. ಮುಂದಿನ ದಿನಗಳಲ್ಲಿ ಒಂದು ವರ್ಗದ ಜನರ ‘ಸಿಲಿಕಾನ್ ವ್ಯಾಲಿ’ ಕನಸಿಗೆ ತಣ್ಣೀರು ಬಟ್ಟೆ ಬೀಳಲಿದೆ.

 

 

Leave a comment

FOOT PRINT

Top