An unconventional News Portal.

‘ಬ್ಲಾಕ್‌ಮೇಲ್’ ಬೆನ್ನಲ್ಲೇ ಅನುಮಾನ ಮೂಡಿಸಿದ ಜನಶ್ರೀ ಅಕೌಂಟೆಂಟ್ ಸಾವಿನ ಪ್ರಕರಣ

‘ಬ್ಲಾಕ್‌ಮೇಲ್’ ಬೆನ್ನಲ್ಲೇ ಅನುಮಾನ ಮೂಡಿಸಿದ ಜನಶ್ರೀ ಅಕೌಂಟೆಂಟ್ ಸಾವಿನ ಪ್ರಕರಣ

ಜನಶ್ರೀ ಸುದ್ದಿ ವಾಹಿನಿಯ ‘ಬ್ಲಾಕ್‌ ಮೇಲ್’ ಪ್ರಕರಣ ಹೊರಬಿದ್ದ ಬೆನ್ನಲ್ಲೇ, ಅದರ ಅಕೌಂಟೆಂಟ್ ಒಬ್ಬರ ಸಾವಿನ ಸುತ್ತ ಈತ ದಟ್ಟ ಅನುಮಾನ ಹೊಗೆಯಾಡುತ್ತಿದೆ.

ವಾಹಿನಿಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಕಾರ್ತಿಕ ಲಾರೆನ್ಸ್‌ ಕಳೆದ ಗುರುವಾರ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಐಸಿಯುನಲ್ಲಿ ಸಾವನ್ನಪ್ಪಿದ್ದರು. ಸದ್ಯ ಪ್ರಕರಣ ಹೆಬ್ಬಾಳ ಟ್ರಾಫಿಕ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಮರಣೊತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಆದರೆ ಕಾರ್ತಿಕ್ ಸಾವಿನ ಹಿನ್ನೆಲೆಯನ್ನು ಗಮನಿಸಿದರೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುವ ಅಂಶಗಳು ಬೆಳಕಿಗೆ ಬರುತ್ತವೆ.

ಏನಿದು ಪ್ರಕರಣ?:

ಸಾವಿಗೀಡಾದ ಕಾರ್ತಿಕ್

ಸಾವಿಗೀಡಾದ ಕಾರ್ತಿಕ್

25 ವರ್ಷದ ಕಾರ್ತಿಕ್ ಬೆಂಗಳೂರಿನ ಯಲಹಂಕ ಸಮೀಪದ ಯಡಿಯೂರಪ್ಪ ನಗರದ ನಿವಾಸಿ. ಜನಶ್ರೀ ವಾಹಿನಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು.  ಮಾ. 10ರಂದು ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟ ನಂತರ ನಾಪತ್ತೆಯಾಗಿದ್ದರು. “ಅವತ್ತು ರಾತ್ರಿ 9. 30ರ ಸುಮಾರಿಗೆ ಪತ್ನಿ ಕರೆ ಮಾಡಿದಾಗ ಈಗಷ್ಟೆ ಕಚೇರಿ ಬಿಟ್ಟಿದ್ದೀನಿ. ಇನ್ನೊಂದು ಗಂಟೆಯಲ್ಲಿ ಮನೆಗೆ ಬರುತ್ತೀನಿ ಎಂದು ಹೇಳಿದ್ದ. ಅದೇ ಕೊನೆ,” ಎಂದರು ಕಾರ್ತಿಕ್ ತಂದೆ ಭದ್ರಪ್ಪ.

ಅದೇ ದಿನ ರಾತ್ರಿ 2 ಗಂಟೆ ಸುಮಾರಿಗೆ ಭದ್ರಪ್ಪ ಅವರಿಗೆ ದೂರವಾಣಿ ಮೂಲಕ ಮಗನಿಗೆ ಅಪಘಾತವಾಗಿದೆ ಎಂಬ ಸಂದೇಶ ಮುಟ್ಟಿತ್ತು. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಬಂದಾಗ ಮಗ ಕಾರ್ತಿಕ್ ಜೀವನ್ಮರಣದ ಹೋರಾಟ ನಡೆಸುತ್ತಿದ್ದ. “ಅವನ ಮುಖ ಊದಿಕೊಂಡಿತ್ತು. ರಕ್ತ ಸೋರುತ್ತಿತ್ತು. ನಾವು ಬಂದ ನಂತರ ಆತನನ್ನು ಐಸಿಯುಗೆ ಕಳುಹಿಸಿದರು. ಡಾಕ್ಟರ್‌ಗಳು ಉಳಿಯುವುದು ಕಷ್ಟ ಎಂದೇ ಹೇಳಿದರು. ನಾಲ್ಕು ದಿನಗಳ ನಂತರ ಗುರುವಾರ ಆತ ಸಾವನ್ನಪ್ಪಿದ,” ಎಂದು ಅವರು ಮಾಹಿತಿ ನೀಡಿದರು.

ಅನುಮಾನಾಸ್ಪದ ಅಂಶಗಳು:

ಕಾರ್ತಿಕ್ ಸಾವಿನ ನಂತರ ಬಯಲಾಗುತ್ತಿರುವ ಕೆಲವು ಅಂಶಗಳು ಸಹಜವಾಗಿಯೇ ಅನುಮಾನಕ್ಕೆ ಎಡೆಮಾಡಿಕೊಡುತ್ತಿವೆ. ಮೊದಲನೆಯದು, ಆತನನ್ನು ಆಸ್ಪತ್ರೆಗೆ ತಂದು ಸೇರಿದವರ ಮಾಹಿತಿ ದಾಖಲಾಗದೇ ಇರುವುದು. “ಅವತ್ತು ರಾತ್ರಿ ಟಿಟಿ ವಾಹನದಲ್ಲಿ ಬಂದ ಮೂವರು ಅಪಘಾತವಾಗಿ ಈತ ಬಿದ್ದಿದ್ದ ಎಂದು ಸ್ಟ್ರಷರ್ ಮೇಲೆ ಮಲಗಿಸಿದರ ಅಷ್ಟೆ. ನಂತರ ಅವರ ಮಾಹಿತಿಯನ್ನೂ ನೀಡದೆ ಹೊರಟು ಹೋದರು,” ಎಂದು ಆಸ್ಪತ್ರೆಯ ಮೂಲಗಳು ಹೇಳುತ್ತಿವೆ.

ಸದ್ಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. “ಆಸ್ಪತ್ರೆಯ ಎಂಟ್ರಿ ಗೇಟಿನಲ್ಲಿರುವ ಸಿಸಿಟಿವಿಯಲ್ಲಿ ಕಾರ್ತಿಕ್‌ನನ್ನು ಕರೆತಂದ ಟಿವಿ ವಾಹನದ ನಂಬರ್ ಸಿಕ್ಕಿದೆ. ತನಿಖೆ ನಡೆಸುತ್ತಿದ್ದೇವೆ,” ಎಂದು ಹೆಬ್ಬಾಳ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ‘ಸಮಾಚಾರ’ಕ್ಕೆ ತಿಳಿಸಿದರು.

ಪ್ರಕರಣ ನಡೆದು ವಾರ ಕಳೆದರೂ ಈವರೆಗೂ ಕಾರ್ತಿಕ್ ಓಡಿಸತ್ತಿದ್ದ ಪಲ್ಸರ್‌ ಬೈಕ್ ಪತ್ತೆಯಾಗಿಲ್ಲ. “ನಮಗೆ ಆತ ಎಲ್ಲಿ ಅಪಘಾತಕ್ಕೆ ಒಳಗಾದ ಎಂಬ ಮಾಹಿತಿ ಇಲ್ಲ. ಆತನ ಬೈಕ್ ಕೂಡ ಪತ್ತೆಯಾಗಿಲ್ಲ. ಪೊಲೀಸರು ಪತ್ತೆ ಮಾಡುತ್ತಿದ್ದೀವಿ ಎಂದು ಹೇಳುತ್ತಿದ್ದಾರೆ,” ಎಂದರು ಕಾರ್ತಿಕ್ ಸಂಬಂಧಿ ನಾಗೇಂದ್ರ.

ಇದರ ಜತೆಗೆ, ಕಾರ್ತಿಕ್ ಮರಣೋತ್ತರ ಪರೀಕ್ಷೆಯ ವರದಿ ಕೂಡ ಬರಬೇಕಿದೆ. “ಎಂ. ಎಸ್‌. ರಾಮಯ್ಯ ಆಸ್ಪತ್ರೆಯ ವೈದ್ಯ ಇನ್ನೆರಡು ದಿನಗಳಲ್ಲಿ ವರದಿ ನೀಡುತ್ತೀವಿ ಎಂದು ಹೇಳಿದ್ದಾರೆ.” ಎಂದು ಭದ್ರಪ್ಪ ತಿಳಿಸಿದರು.

ಮುಂದುವರಿದ ತನಿಖೆ:

ಕಾರ್ತಿಕ್ ಸಾವನ್ನಪ್ಪಿದ 2 ದಿನಗಳಿಗೆ ಜನಶ್ರೀ ಸಿಇಓ ಲಕ್ಷ್ಮೀಪ್ರಸಾದ್ ವಾಜಪೇಯಿ ಬಂಧನವಾಯಿತು. ಕೋರಮಂಗಲ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ. ಈತನ ಪೊಲೀಸ್‌ ಕಸ್ಟಡಿ ಇನ್ನೆರಡು ದಿನಗಳಲ್ಲಿ ಮುಗಿಯಲಿದೆ. ಕರ್ಮರ್ಸಿಯಲ್ ಸ್ಟ್ರೀಟ್ ಮತ್ತು ಮಹಾಲಕ್ಷ್ಮಿಪುರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಬಾಡಿ ವಾರೆಂಟ್ ಪಡೆಯುವ ಸಾಧ್ಯತೆಗಳಿವೆ.

ಈ ನಡುವೆ ‘ಪ್ರಜಾವಾಣಿ’ ಸೋಮವಾರ ಪ್ರಕರಣದ ಫಾಲೋಅಪ್ ವರದಿಯೊಂದನ್ನು ಪ್ರಕಟಿಸಿದೆ. “ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಂ.ಖಾನ್ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ₹ 10 ಕೋಟಿ ಪಡೆದಿದ್ದ ‘ಜನಶ್ರೀ’ ವಾಹಿನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಲಕ್ಷ್ಮಿಪ್ರಸಾದ್ ವಾಜಪೇಯಿ, ಅಷ್ಟು ಹಣ ಪಡೆದ ನಂತರವೂ ₹25 ಕೋಟಿ ನಗದು ಹಾಗೂ ಟೊಯೊಟಾ ಕಾರಿಗೆ ಬೇಡಿಕೆ ಇಟ್ಟಿದ್ದ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ” ಎಂದು ವರದಿ ಹೇಳಿದೆ.

 

Leave a comment

FOOT PRINT

Top