An unconventional News Portal.

ಭಾರತೀಯ ಸೇನೆ; ಕಾಶ್ಮೀರದಲ್ಲಿರುವ ಭಾರತೀಯರು: ಇವರ ನಡುವೆ ಯಾಕಿಷ್ಟು ತಿಕ್ಕಾಟ?

ಭಾರತೀಯ ಸೇನೆ; ಕಾಶ್ಮೀರದಲ್ಲಿರುವ ಭಾರತೀಯರು: ಇವರ ನಡುವೆ ಯಾಕಿಷ್ಟು ತಿಕ್ಕಾಟ?

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಉಪಚುನಾವಣೆಯನ್ನು ಅಲ್ಲಿನ ಜನ ಸರಸಗಾಟಾಗಿ ತಿರಸ್ಕರಿಸುವುದರೊಂದಿಗೆ ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟತೀವ್ರ ಸ್ವರೂಪ ಪಡೆದುಕೊಂಡಿರುವ ಸೂಚನೆ ಸಿಕ್ಕಿದೆ. ಇದೇ ವೇಳೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಶ್ಮೀರದ ವಿರೋಧ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ 11 ಸೆಕೆಂಡುಗಳ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅಂತರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ.

ಈ ಆಘಾತಕಾರಿ ವಿಡಿಯೋದಲ್ಲಿ ಸೇನಾ ಪಡೆ ತನ್ನ ಬೆಂಗಾವಲು ವಾಹನವನ್ನು ಕಲ್ಲು ತೂರಾಟದ ಮಧ್ಯೆ ಸುಲಭವಾಗಿ ಹಾದು ಹೋಗುವಂತಾಗಲು ಯುವಕನೊಬ್ಬನನ್ನು ಜೀಪಿನ ಮುಂಭಾಗಕ್ಕೆ ಕಟ್ಟಿದ್ದು ದಾಖಲಾಗಿದೆ. ಹೀಗೆ ಮಾನವ ಗುರಾಣಿಯ ಬಳಕೆಯ ಕಾರಣಕ್ಕೆ ಭಾರತೀಯ ಸೇನೆ ಭಾರಿ ಟೀಕೆಗೆ ಗುರಿಯಾಗಿದೆ.

ಬುದ್ಗಾಮ್ ಜಿಲ್ಲೆಗೆ ಸೇರಿದ ಗುಂಡಿಪೋರಾದಲ್ಲಿ ಭಾನುವಾರ ಮತದಾನ ನಡೆದಿತ್ತು. (ಕೆಲವು ಮತಗಟ್ಟೆಗಳಲ್ಲಿ ಗುರುವಾರ ಮರು ಮತದಾನವೂ ನಡೆದಿತ್ತು) ಈ ವೇಳೆ ಭೀಕರ ಹಿಂಸಾಚಾರಕ್ಕೆ 8 ನಾಗರಿಕರು ಸಾವನ್ನಪ್ಪಿದ್ದರು. 200 ಕ್ಕೂ ಹೆಚ್ಚು ಕಾಶ್ಮೀರಿಗಳು, 100 ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದರು. ಅದೇ ದಿನಮಾನವ ಗುರಾಣಿ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನು ತೆಗೆದವರು ಯಾರು? ಎಲ್ಲಿ? ಯಾವಾಗ? ತೆಗೆದರು ಎಂದು ಸ್ಪಷ್ಟವಾಗಿಲ್ಲ. ಆದರೆ ಜೀಪೊಂದರ ಮೇಲೆ ಬರೆದ ಲೈಸನ್ಸ್ ನಂಬರ್ 339 ಸ್ಪಷ್ಟವಾಗಿ ಕಾಣಿಸುತ್ತದೆ. ಇದರಿಂದ ಇದನ್ನು ತನಿಖೆ ನಡೆಸುವುದು ಸುಲಭವಾಗಲಿದೆ.

ನ್ಯಾಷನಲ್ ಕಾನ್ಫರೆನ್ಸ್ ನ ವಕ್ತಾರ ಜುನೈದ್ ಅಜೀಮ್ ಮಟ್ಟು ಈ ವಿಡಿಯೋ ಪೋಸ್ಟ್ ಮಾಡಿದ್ದು, ಜೀಪು ಚಲಿಸುತ್ತಿರುವಾಗ ಹಿಂದಿಯಲ್ಲಿ ಸೈನಿಕನೊಬ್ಬ ಯಾರೆಲ್ಲಾ ಕಲ್ಲು ತೂರಾಟ ಮಾಡುತ್ತಾರೋ ಅವರಿಗೆ ಇದೇ ಗತಿಯಾಗಲಿದೆ,” ಎಂದು ಕಿರುಚುವುದು ಕೇಳಿಸಿದೆ. ಈ ಕುರಿತು ಸೇನೆಯ ಕಾಶ್ಮೀರ ವಕ್ತಾರ ಕೊಲೋನೆಲ್ ರಾಜೇಶ್ ಕಾಲಿಯಾರನ್ನು ‘ದಿ ವೈರ್’ ಸಂಪರ್ಕಿಸಿದ್ದು, “ವಿಡಿಯೋದಲ್ಲಿರುವ ವಸ್ತುವಿನ ಸತ್ಯಾಸತ್ಯತೆಯನ್ನು ತನಿಖೆಗೊಳಪಡಿಸಬೇಕಾಗಿದೆ,” ಎಂದು ಹೇಳಿದ್ದಾರೆ.

ಇದು ಸ್ರೇಲ್ ಉಪಾಯ

ಹಾಗೆ ನೋಡಿದರೆ ಮನುಷ್ಯರನ್ನೇ ವಿರೋಧಿಗಳಿಗೆ ಗುರಾಣಿಯಾಗಿ ಉಪಯೋಗಿಸುವ ತಂತ್ರವನ್ನು ಜನಪ್ರಿಯಗೊಳಿಸಿದ್ದು ಇಸ್ರೇಲ್. ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಆರೋಪಗಳ ಬೆಟ್ಟವನ್ನೇ ಹೊತ್ತ ಅಲ್ಲಿನ ಸೇನೆ, ಆಕ್ರಮಿತ ಪ್ಯಾಲೆಸ್ತೀನಿನ ಭೂ ಭಾಗದಲ್ಲಿ ಹಲವು ಬಾರಿ ಇಂಥಹ ತಂತ್ರ ಬಳಸಿದೆ. ಇದೀಗ ಮೊದಲ ಬಾರಿಗೆ ಬಂಡುಕೋರರನ್ನು, ಕಲ್ಲು ತೂರುವವರನ್ನು ಎದುರಿಸಲು ಭಾರತೀಯ ಸೇನೆಯೂ ಇದೇ ತಂತ್ರದ ಮೊರೆ ಹೋಗಿರುವು ವಿಡಿಯೋದಿಂದ ತಿಳಿದು ಬಂದಿದೆ. ಸಹಜವಾಗಿಯೇ ಇದು ಭಾರತೀಯ ಸೇನೆಯ ವಿರುದ್ಧ ಮಾನವ ಹಕ್ಕು ಉಲ್ಲಂಘನೆಯ ಗಂಭೀರ ಆರೋಪ ಕೇಳಿ ಬರಲು ಕಾರಣವಾಗಿದೆ.

ಒಂದೊಮ್ಮೆ ಈ ವಿಡಿಯೋ ತುಣುಕು ನಿಜವಾಗಿದ್ದೇ ಆದಲ್ಲಿ ಭಾರತೀಯ ಕಾನೂನಿಗೆ ವಿರುದ್ಧವಾಗಿ ಸೇನೆ ನಡೆದುಕೊಂಡಂತಾಗುತ್ತದೆ. ಜತೆಗೆ ಭಾರತೀಯ ಸಂವಿಧಾನದ ಮೂಲಭೂತ ಹಕ್ಕಾದ ಬದುಕುವ ಹಕ್ಕಿ ಉಲ್ಲಂಘನೆಯೂ ಆಗಲಿದೆ.

ಆದರೆ ಕಾಶ್ಮೀರದಲ್ಲಿ ಸೇನೆ ಇಂಥಹ ಮಾನವ ವಿರೋಧಿ ನಡವಳಿಕೆಯನ್ನು ಹಿಂದೆಯೂ ತೋರಿದೆ ಎಂಬ ಆರೋಪಗಳೂ ಇದೇ ಸಂದರ್ಭದಲ್ಲಿ ಕೇಳಿ ಬಂದಿದೆ. ಈ ಹಿಂದೆ ಮಾತನಾಡಿದ್ದ ಸ್ವತಃ ಬಿಜೆಪಿಪಿಡಿಪಿ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ 1990ರ ದಶಕದಲ್ಲಿ ಸೇನೆ ಮನುಷ್ಯರನ್ನೇ ಗುರಾಣಿಯಾಗಿ ಬಳಸಿಕೊಳ್ಳುತ್ತಿತ್ತು ಎಂದು ಹೇಳಿದ್ದರು. ಜತೆಗೆ, “ಯಾರ ಗಮನಕ್ಕೂ ಬರದ ಇಂಥಹ ಅಪರಾಧಗಳು ಇಲ್ಲಿ ದಶಕಗಳಿಂದ ನಡೆಯುತ್ತಾ ಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸ್ಪೋಟಗೊಂಡ ಕಾರಣಕ್ಕೆ ಈ ಘಟನೆ ಹೊರ ಬಂದಿದೆ ಅಷ್ಟೇ,” ಎನ್ನುತ್ತಾರೆ ಕಾಶ್ಮೀರದ ಸಾಮಾಜಿಕ ಹೋರಾಟಗಾರ ಕುರ್ರಾಮ್ ಪರ್ವೀಜ್.

ಸೇನೆ ವಿರುದ್ಧ ನಿಂತ ನಾಗರಿಕರು: 

ಜಮ್ಮು ಮತ್ತು ಕಾಶ್ಮೀರಾದಲ್ಲಿ ಕಳೆದ 30 ವರ್ಷಗಳಲ್ಲಿ ಕಂಡು ಬಾರದ ಹಿಂಸಾಚಾರ, ಭಾರತ ವಿರೋಧಿ ಮನಸ್ಥಿತಿ ಕಳೆದ ಒಂದೂವರೆಗೆ ವರ್ಷಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಭಾರತೀಯ ಸೈನಿಕರ ವಿರುದ್ಧ ಅಲ್ಲಿನ ನಾಗರಿಕರು ಕಲ್ಲು ತೂರುವ, ಮತ ಯಂತ್ರಗಳನ್ನು ಸಾಗಿಸುವ ಸೈನಿಕರ ಮೇಲೆ ಹಲ್ಲೆ ನಡೆಸುವ ದೃಶ್ಯಗಳು ಇದಕ್ಕೆ ಸಾಕ್ಷಿ ಒದಗಿಸುತ್ತಿವೆ. ಒಂದು ಕಡೆ ಭಾರತೀಯ ಸೇನೆ ಮತ್ತೊಂದು ಕಡೆ ಭಾರತೀಯರೇ ಆದ ಕಾಶ್ಮೀರದ ನಾಗರಿಕರು. ಇವೆರಲ್ಲಿ ಯಾರು ಸರಿ ಎಂಬ ಜಿಜ್ಞಾಸೆ ಹುಟ್ಟುವಂತೆ ಮಾಡಿದೆ.

ಯಾವುದೇ ದೇಶವಾಗಲಿ, ತನ್ನದೇ ನಾಗರಿಕರ ಮೇಲೆ ಸೇನಾ ಬಲ ಪ್ರಯೋಗದಿಂದ ಹೆಚ್ಚಿನ ಕಾಲ ವ್ಯವಸ್ಥೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಬಹುಶಃ ಇದೇ ಮಾದರಿಯ ಬಿಕ್ಕಟ್ಟು ಮುಂದುವರಿದಿದ್ದೇ ಆದರೆ ಅದರ ಸಂಪೂರ್ಣ ಲಾಭ ಆಗುವುದು ಪ್ರತ್ಯೇಕತಾವಾದವನ್ನು ಮುಂದಿಡುತ್ತಿರುವ ಸಂಘಟನೆಗಳಿಗೆ ಹಾಗೂ ನೆರೆಯ ಪಾಕಿಸ್ತಾನಕ್ಕೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ನಾಗರಿಕರ ಮತ್ತು ಸೇನಾ ನಡುವಿನ ಸಂಘರ್ಷಕ್ಕೆ ತಾರ್ಕಿಕ ಅಂತ್ಯವೊಂದನ್ನು ಕೇಂದ್ರ ಸರಕಾರ ಆದಷ್ಟು ಬೇಗ ಕಂಡುಕೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Leave a comment

FOOT PRINT

Top