An unconventional News Portal.

ಗಣಿ ಧಣಿಯ ಜನಮನದಲ್ಲಿ ‘ಬ್ಲಾಕ್ ಮೇಲ್’ ಅಬ್ಬರ: ಜನಶ್ರೀ ಸಿಇಓ ಬಂಧನದ ಸುತ್ತ…

ಗಣಿ ಧಣಿಯ ಜನಮನದಲ್ಲಿ ‘ಬ್ಲಾಕ್ ಮೇಲ್’ ಅಬ್ಬರ: ಜನಶ್ರೀ ಸಿಇಓ ಬಂಧನದ ಸುತ್ತ…

ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ಇದೊಂದು ಬಾಕಿ ಇತ್ತು. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಕೆಲವು ಪತ್ರಕರ್ತರ ಹಾಗೂ ವಾಹಿನಿಗಳ ‘ಬ್ಲಾಕ್‌ ಮೇಲ್‌’ ದಂಧೆಗೆ ಈ ಅಧಿಕೃತ ಮುದ್ರೆ ಬಿದ್ದಿದೆ. ಜನಶ್ರೀ ಸುದ್ದಿವಾಹಿನಿಯ ಸಿಇಓ ಲಕ್ಷ್ಮೀಪ್ರಸಾದ್ ವಾಜಪೇಯಿ ಬಂಧನವಾಗಿದೆ. ಕೋರಮಂಗಲ ಪೊಲೀಸರು ಆತ ಸೇರಿದಂತೆ ಇಬ್ಬರನ್ನು ಶುಕ್ರವಾರ ರಾತ್ರಿ ಚಾನಲ್‌ ಕಚೇರಿಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ನೈತಿಕವಾಗಿ ಅಧಃಪತನಗೊಳ್ಳುತ್ತಿರುವ ಸುದ್ದಿ ವಾಹಿನಿಗಳ ಅಂತರಾಳದ ದರ್ಶನವಾದಂತಾಗಿದೆ.

ಏನಿದು ಬೆಳವಣಿಗೆ?: 

vajipeyi-2

ಜನಶ್ರೀ ವಾಹಿನಿ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ದಿನಗಳಿವು. ಕಳೆದ ನಾಲ್ಕು ತಿಂಗಳ ಸಂಬಳವನ್ನು ಇತ್ತೀಚೆಗಷ್ಟೆ ಇಲ್ಲಿನ ನೌಕರರಿಗೆ ನೀಡಲಾಗಿತ್ತು. ಕೆಲವು ತಿಂಗಳ ಹಿಂದೆ ಆಂಧ್ರ ಮೂಲದ ಲಕ್ಷ್ಮೀಪ್ರಸಾದ್ ವಾಜಪೇಯಿ ಎಂಬಾತ ವಾಹಿನಿಗೆ ಸಿಇಓ ಆಗಿ ನೇಮಕಗೊಂಡಿದ್ದ. ಈತನ ವಿರುದ್ಧ ಆಂಧ್ರದಲ್ಲಿಯೂ ‘ಆರ್‌ಕೆ ನ್ಯೂಸ್’ ಹೆಸರಿನಲ್ಲಿ ಬ್ಯಾಕ್‌ಮೇಲೆ ನಡೆಸಿದ ಆರೋಪ ಕೇಳಿಬಂದಿತ್ತು. ಅಲ್ಲಿನ ‘ಎಬಿಪಿ ನ್ಯೂಸ್’ ರಹಸ್ಯ ಕಾರ್ಯಾಚರಣೆ ಮೂಲಕ ಈತನ ತಂಡದ ಕರ್ಮಕಾಂಡವನ್ನು ಬಯಲಿಗೆ ಎಳೆದಿತ್ತು. ನಂತರ ತಲೆ ಮರೆಸಿಕೊಂಡಿದ್ದ ಆತ ಆಂಧ್ರದ ಶಾಸಕರೊಬ್ಬರ ಕೃಪಾ ಕಟಾಕ್ಷದಿಂದ ಜನಾರ್ಧನ ರೆಡ್ಡಿ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಜನಶ್ರೀಗೆ ಕಾಲಿಟ್ಟ ಎನ್ನುತ್ತವೆ ಮೂಲಗಳು.

ಜನಶ್ರೀ ವಾಹಿನಿಗೆ ಬರುತ್ತಲೇ ಉದ್ಯಮಿಗಳು, ಅಧಿಕಾರಿಗಳಿಂದ ಎತ್ತುವಳಿ ದಂಧೆಯನ್ನು ಶುರುಮಾಡಿದ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ‘ಬ್ಲಾಕ್‌ ಮೇಲ್‌’ ಕೇಸುಗಳು ದಾಖಲಾದವು. ಇಂತಹದ್ದೇ ಒಂದು ಪ್ರಕರಣದಲ್ಲಿ ಇನ್‌ಜಾಝ್ ಗ್ರೂಪ್‌ ಹೆಸರಿನ ರಿಯಲ್‌ ಎಸ್ಟೇಟ್ ಉದ್ಯಮಿಗಳಾದ ಸುಹೈಲ್ ಷರೀಫ್ ಮತ್ತು ಮಿಸ್‌ಬಾ ಮುಖಾರಾಮ್ ಎಂಬುವವರು ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ವಿರುದ್ಧ ಜನಶ್ರೀ ವಾಹಿನಿಯಲ್ಲಿ ವರದಿಯೊಂದು ಪ್ರಸಾರವಾಗಿತ್ತು. ಹೆಚ್ಚಿನ ಪ್ರಸಾರ ತಡೆಯಲು ಹಣ ಬೇಡಿಕೆ ಮುಂದಿಡಲಾಗಿತ್ತು. ಹಣವನ್ನು ನೀಡುವ ಸಮಯದಲ್ಲಿಯೇ ಎಲ್‌ಪಿ ವಾಜಪೇಯಿ ಮತ್ತು ಪುನೀತ್ ಎಂಬಾತನನ್ನು ಬಂಧಿಸಲಾಯಿತು.

ಮೋಡೆಸ್ ಆಪರೆಂಡಿ:

ಆಂಧ್ರದಿಂದ ಕರ್ನಾಟಕಕ್ಕೆ ಬಂದ ವಾಜಪೇಯಿ ಉದ್ಯಮಿಗಳನ್ನು ಹಾಗೂ ಅಧಿಕಾರಿಗಳನ್ನು ‘ಬ್ಲಾಕ್‌ ಮೇಲ್’ ಮಾಡಲು ಒಂದೇ ಮಾದರಿಯ ತಂತ್ರವನ್ನು ಅನುಸರಿಸುತ್ತಿದ್ದ. “ಮೊದಲ ಅವರ ನ್ಯೂನತೆಗಳನ್ನು ತನ್ನ ವರದಿಗಾರರ ಮೂಲಕ ತರಿಸಿಕೊಳ್ಳುತ್ತಿದ್ದ. ಅವರಿಗೆ ಆಗದವರಿಂದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದ. ನಂತರ ಅದರ ಕುರಿತು ಪ್ರೊಮೊ ಒಂದನ್ನು ತಯಾರಿಸುತ್ತಿದ್ದ. ಅದನ್ನು ಅವರಿಗೆ ತೋರಿಸಿ ಹಣದ ಬೇಡಿಕೆ ಮುಂದಿಡುತ್ತಿದ್ದ. ಹಲವರು ಹಣ ನೀಡಿದ್ದರು. ಕೆಲವರು ದೂರು ದಾಖಲಿಸಿದ್ದರು,” ಎಂದು ಮಾಹಿತಿ ನೀಡಿತ್ತಾರೆ ಜನಶ್ರೀ ವಾಹಿನಿಯ ಸಿಬ್ಬಂದಿಯೊಬ್ಬರು.

ಇದೇ ಮಾದರಿಯಲ್ಲಿ ವಾಜಪೇಯಿ ಉದ್ಯಮಿ ನರಸಿಂಹ ಮೂರ್ತಿ ಎಂಬುವವರಿಗೆ ಹಣದ ಬೇಡಿಕೆ ಮುಂದಿಟ್ಟಿದ್ದ. ಈ ಕುರಿತು ಅವರು ಮಾ. 22ರಂದು ಮಹಾಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಾಜಿಪೇಯಿ ವಿರುದ್ಧ ದಾಖಲಾದ ದೂರು.

ವಾಜಪೇಯಿ ವಿರುದ್ಧ ದಾಖಲಾದ ದೂರು.

“ನನಗೆ ಮಾತ್ರವಲ್ಲ, ಡಿಎಸ್‌ ಮ್ಯಾಕ್ಸ್‌ ಮಾಲೀಕರಾದ ದಯಾನಂದ್ ಸೇರಿದಂತೆ ದಿನಿ ಥಾಮಸ್‌ ಮತ್ತಿತರಿಗೂ ಆತ ಇದೇ ಮಾದರಿಯಲ್ಲಿ ಬೆದರಿಕೆ ಒಡ್ಡಿದ್ದ. ಅವರೆಲ್ಲರೂ ದೂರು ದಾಖಲಿಸಿದ್ದಾರೆ. ಮಾಧ್ಯಮಗಳು ಈ ಹಂತಕ್ಕೆ ಬಂದು ನಿಂತಿವೆ ನೋಡಿ. ಇವರಿಗೆ ಬುದ್ದಿ ಕಲಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈಗ ಈತನ ವಿರುದ್ಧ ಯಾರೂ ವರದಿ ಮಾಡುವುದಿಲ್ಲ. ಅದೇ ಅವರಿಗೆ ಶ್ರೀರಕ್ಷೆಯಾಗಿದೆ,” ಎಂದು ಅಳಲು ತೋಡಿಕೊಂಡರು ನರಸಿಂಹ ಮೂರ್ತಿ.

ಧಣಿಯ ಜನ ಮನ:

ಬಳ್ಳಾರಿ ಗಣಿ ಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಮಾಲೀಕತ್ವದಲ್ಲಿ 2011ರ ವೇಳೆಗೆ ಕನ್ನಡದಲ್ಲಿ ಜನಶ್ರೀ ಸುದ್ದಿ ವಾಹಿನಿ ಆರಂಭವಾಯಿತು. ಅವತ್ತಿಗೆ ಕನ್ನಡದಲ್ಲಿ ಅತಿ ದೊಡ್ಡ ಹೂಡಿಕೆ ಕಂಡ ವಾಹಿನಿ ಇದಾಗಿತ್ತು. ಆಕರ್ಷಕ ಸಂಬಳ ಹಾಗೂ ಮೂಲಭೂತ ಸೌಕರ್ಯಗಳಿಂದಾಗಿ ಕನ್ನಡ ಮಾಧ್ಯಮ ಲೋಕದಲ್ಲಿ ಜನಶ್ರೀ ವಾಹಿನಿ ಗಮನ ಸೆಳೆದಿತ್ತು.

ಆದರೆ ರೆಡ್ಡಿ ಗಣಿ ಅಕ್ರಮ ಪ್ರಕರಣದಲ್ಲಿ ಚುಂಚಲಗುಡ ಜೈಲು ಪಾಲಾಗುವ ಮೂಲಕ ವಾಹಿನಿಯ ಗ್ರಹಗತಿ ಬದಲಾಗಿ ಹೋಯಿತು. ಅದರಲ್ಲೂ ಶ್ರೀರಾಮುಲು ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿಕೊಂಡು ಪಾದಯಾತ್ರೆ ಶುರುಮಾಡುತ್ತಿದ್ದಂತೆ ಜನಶ್ರೀ ಪೂರ್ಣ ಪ್ರಮಾಣದಲ್ಲಿ ರೆಡ್ಡಿ ಕುಟುಂಬದ ರಾಜಕೀಯ ನಡೆಗಳ ‘ಮೌತ್ ಪೀಸ್’ ಆಗಿ ಬದಲಾಯಿತು.

ರೆಡ್ಡಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ವಾಹಿನಿಗೆ ಪುನರುಜ್ಜೀವನ ಕೊಡಲು ಮುಂದಾದರು. ಈ ಸಮಯದಲ್ಲಿ ‘ಸಮಾಚಾರ’ದ ಜತೆ ಮಾತನಾಡಿದ್ದ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, “ಮೂರು ನಾಲ್ಕು ಜನ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಜನಶ್ರೀಯನ್ನು ರಿ- ಲಾಂಚ್ ಮಾಡಲಾಗುವುದು,” ಎಂದಿದ್ದರು. ಇದಕ್ಕೆ ಪೂರಕವಾಗಿ ವಾಹಿನಿಯನ್ನು ಕಟ್ಟಿದ್ದ ಹಿರಿಯ ಪತ್ರಕರ್ತ ಅನಂತ ಚಿನಿವಾರ್ ಸಂಪಾದಕೀಯ ಸಲಹೆಗಾರರಾಗಿ ಮರಳಿದ್ದರು.


RELATED: ಜನಶ್ರೀಗೆ ಮರುಹುಟ್ಟು: ಹಳೇ ದೋಣಿಗೆ ಅನಂತ ಚಿನಿವಾರ್ ಹುಟ್ಟು!


ವಾಹಿನಿ ಮೇಲ್ನೋಟಕ್ಕೆ ರಿ- ಲಾಂಚ್ ಆಗಿತ್ತಾದರೂ, ಸಂಬಳಗಳನ್ನು ನೀಡಲು ಆರ್ಥಿಕ ಅಡಚಣೆ ಉಂಟಾಗಿತ್ತು. ಈ ಸಮಯದಲ್ಲಿ ವಾಹಿನಿಗೆ ಕಾಯಕಲ್ಪ ನೀಡುತ್ತೀನಿ ಎಂದು ಬಂದಿದ್ದು ಲಕ್ಷ್ಮೀಪ್ರಸಾದ್ ವಾಜಪೇಯಿ. ಆತ ಕಾಲಿಡುತ್ತಿದ್ದಂತೆ ಅನಂತ ಚಿನಿವಾರ್ ಮತ್ತಿತರರು ಹೊರಕ್ಕೆ ಹೋಗಿದ್ದರು. ಮೂರ್ನಾಲ್ಕು ತಿಂಗಳ ನಂತರ ಮೊನ್ನೆ ಮೊನ್ನೆ ವಾಹಿನಿಯ ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಸಂಬಳ ನೀಡಲಾಗಿತ್ತು. ಅದರ ಬೆನ್ನಲ್ಲೇ ವಾಜಪೇಯಿ ಬಂಧನವೀಗ ಆಗಿದೆ.

ಅನುಮಾನ ಎಡೆಮಾಡಿದ ಸಾವು: ಕೆಲವು ದಿನಗಳ ಹಿಂದೆ ಇದೇ ವಾಹಿನಿಯಲ್ಲಿ ಅಕೌಂಟೆಂಟ್ ಆಗಿದ್ದ ಕಾರ್ತಿಕ್ ಎಂಬ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಅದೊಂದು ಅಪಘಾತ ಎಂದು ಹೇಳಲಾಗುತ್ತಿದೆಯಾದರೂ, ಹಲವರಿಗೆ ಸಾವಿನ ಕುರಿತು ಅನುಮಾನಗಳಿವೆ. ಕಾರ್ತಿಕ್ ಸಾವಿನ ಸಮಯದಲ್ಲಿ ಆತನಿಗೆ ಮದುವೆಯಾಗಿ ಆರು ತಿಂಗಳಾಗಿತ್ತು. ಪತ್ನಿ ಮೂರು ತಿಂಗಳ ಗರ್ಭಿಣಿ. ಸದ್ಯ ಪೊಲೀಸರು ನಡೆಸುತ್ತಿರುವ ತನಿಖೆ ಈ ಕುರಿತು ಬೆಳಕು ಚೆಲ್ಲಬಹುದು ಎಂದು ನಿರೀಕ್ಷೆ ಇದೆ.

ಆತನೊಬ್ಬನಿದ್ದ ನಾಯಕ್:

ಹೆಚ್ಚು ಕಡಿಮೆ ಇದೇ ಮಾದರಿಯಲ್ಲಿ ಸುದ್ದಿ ವಾಹಿನಿಗಳಿಗೆ ಯಥೇಚ್ಚ ಜಾಹೀರಾತು ಹಾಗೂ ಹೂಡಿಕೆ ಮಾಡುತ್ತಿದ್ದ ಇನ್ನೊಬ್ಬನ ಹೆಸರು ಸಚಿನ್ ನಾಯಕ್. ಈತನ ಕುರಿತು ‘ಸಮಾಚಾರ’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಈತನ ಡ್ರೀಮ್ಸ್ ಜಿಕೆ ಮತ್ತಿತರ ಕಂಪನಿಗಳು ಬೆಂಗಳೂರಿನಲ್ಲಿ ಮನೆ ಕೊಳ್ಳುವ ಕನಸು ಇಟ್ಟುಕೊಂಡವರಿಗೆ ಟೋಪಿ ಹಾಕಿತ್ತು. ಸಚಿನ್ ನಾಯಕ್ ವಿರುದ್ಧವೂ ದೂರುಗಳು ದಾಖಲಾಗಿವೆ. ತನಿಖೆಯೂ ನಡೆಯುತ್ತಿದೆ. ಆದರೆ ಕನ್ನಡದ ಯಾವ ಸುದ್ದಿ ವಾಹಿನಿಗಳೂ ಆತನ ಪ್ರಕರಣದ ಕುರಿತು ವರದಿ ಪ್ರಸಾರ ಮಾಡುತ್ತಿಲ್ಲ. ಇದೀಗ ಲಕ್ಷ್ಮೀಪ್ರಸಾದ್ ವಾಜಪೇಯಿ ವಿಚಾರದಲ್ಲಿಯೂ ಅದೇ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ.

ಕನ್ನಡದಲ್ಲಿ ಸುದ್ದಿ ವಾಹಿನಿಗಳು ದಿನದಿಂದ ದಿನಕ್ಕೆ ಜನರಲ್ಲಿ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ. ಇಂತಹ ಪ್ರಕರಣಗಳು ಸುದ್ದಿಯಾದಾಗ ಅವುಗಳ ‘ಕ್ರೆಡಿಬಿಲಿಟಿ’ ಕುರಿತು ಸಹಜವಾಗಿಯೇ ಪ್ರಶ್ನೆಗಳು ಏಳುತ್ತವೆ. ಆದರೆ ಅದಕ್ಕೆ ಉತ್ತರಿಸುವ ಹೊಣೆಗಾರಿಕೆಗಿಂತ ಜಾಣಮೌನದ ನಡೆಯನ್ನು ಅವು ಅನುಸರಿಸುವ ಮೂಲಕ ಅಪನಂಬಿಕೆಯನ್ನು ಇನ್ನಷ್ಟು ಗಟ್ಟಿ ಮಾಡುತ್ತಿವೆ. ಪರಿಣಾಮ ಕನ್ನಡ ಪತ್ರಿಕೋದ್ಯಮದಲ್ಲಿ ಭ್ರಷ್ಟತೆ, ಅವಿಶ್ವಾಸದ ‘ಪ್ರಾಬಲ್ಯ’ ಬೆಳೆಯುತ್ತಿದೆ.

Leave a comment

FOOT PRINT

Top