An unconventional News Portal.

ಸಕ್ಕರೆ ನಾಡಿನ ಕಹಿ ಕತೆಗಳು: ವಿಷದ ಬಾಟ್ಲಿಯನ್ನು ‘ಅಲ್ಲಾಡಿಸುತ್ತ’ ಇರುವವರು ಕಬ್ಬು ಬೆಳೆಗಾರರು

ಸಕ್ಕರೆ ನಾಡಿನ ಕಹಿ ಕತೆಗಳು: ವಿಷದ ಬಾಟ್ಲಿಯನ್ನು ‘ಅಲ್ಲಾಡಿಸುತ್ತ’ ಇರುವವರು ಕಬ್ಬು ಬೆಳೆಗಾರರು

ದಕ್ಷಿಣ ಭಾರತದಲ್ಲಿ ಲಭ್ಯ ಇರುವ ಫಲವತ್ತಾದ ಭೂಮಿ ಮತ್ತು ಮಳೆ ನೀರಿನಿಂದಾಗಿ ಸುಮಾರು 10 ಸಾವಿರ ವರ್ಷಗಳ ಹಿಂದಿನಿಂದ ಕೃಷಿ ಭೂಮಿಯಲ್ಲಿ ರೈತರು ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.

ಮಹಾತ್ಮಗಾಂಧಿ ಕೂಡ ತಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ರೈತರನ್ನು ಕೇಂದ್ರ ಸ್ಥಾನದಲ್ಲಿ ಇರಿಸಿದ್ದರು. ಅವರ ‘ಹಿಂದ್ ಸ್ವರಾಜ್’ ಪುಸ್ತಕದಲ್ಲಿ, ಸಾಂಪ್ರದಾಯಿಕ ಕೃಷಿ ಪದ್ಧತಿಯ ಪರವಾಗಿ ವಾದ ಮಂಡಿಸಿದ್ದರು. 1947ರಲ್ಲಿ ದೇಶ ಸ್ವತಂತ್ರಗೊಂಡ ನಂತರ 1960ರಲ್ಲಿ ಹೆಚ್ಚುತ್ತಿದ್ದ ಜನಸಂಖ್ಯೆಗೆ ಆಹಾರದ ಉತ್ಪಾದನೆಯ ಸಲುವಾಗಿ ‘ಹಸಿರು ಕ್ರಾಂತಿ’ಯನ್ನು ಜಾರಿಗೆ ತರಲಾಯಿತು. ಕೃಷಿಯಲ್ಲಿ ಮೊದಲ ಬಾರಿಗೆ ಆಧುನಿಕ ಕೃಷಿ ಸಲಕರಣೆಗಳು ಹಾಗೂ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಪರಿಚಯಿಸಲಾಯಿತು.

1990ರಲ್ಲಿ ದೇಶ ಹೊಸ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಸುಧಾರಣೆಗೆ ಮುಂದಾಯಿತು. ಮುಕ್ತ ಮಾರುಕಟ್ಟೆಯ ಅವಕಾಶಗಳ ಮೂಲಕ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿತು. ಅಭಿವೃದ್ಧಿ ಹೊಂದಿದ ದೇಶಗಳ ಆಧುನಿಕ ರೈತರ ಎದುರಿಗೆ ಭಾರತದ ರೈತರೂ ಕೂಡ ಅವರ ಶ್ರಮದ ಫಲವನ್ನು ಪಡೆದುಕೊಳ್ಳುತ್ತಾರೆ ಎಂದು ಭಾವಿಸಲಾಯಿತು.

ಆದರೆ ಕಳೆದ ಮೂರು ದಶಕಗಳ ಅಂತರದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ತಮ್ಮ ದಿನದ ದುಡಿಮೆಗಾಗಿ ಕಷ್ಟ ಪಡುತ್ತಿದ್ದಾರೆ, ನೂರಾರು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದಕ್ಷಿಣ ಭಾರತದ ಕರ್ನಾಟಕದಲ್ಲಿ 2015ರಲ್ಲಿ 1 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ. 90ರಷ್ಟು ರೈತರು ಕಬ್ಬು ಬೆಳೆಯನ್ನು ನೆಚ್ಚಿಕೊಂಡಿರುವ ಮಂಡ್ಯ ಜಿಲ್ಲೆಯವರಾಗಿದ್ದಾರೆ. 2016ರ ಅಂಕಿ ಅಂಶಗಳು ಇನ್ನೂ ಲಭ್ಯವಾಗಿಲ್ಲವಾದರೂ, ಕಳೆದ ಜುಲೈ ತಿಂಗಳ ಅಂತ್ಯಕ್ಕೆ ಸುಮಾರು 200 ರೈತರು ಆತ್ಮಹತ್ಯೆಗೆ ಶರಣಾದ ಕುರಿತು ವರದಿಯಾಗಿದೆ.

ರೈತರ ಈ ‘ಆತ್ಮಹತ್ಯೆ ಅಲೆ’ಗೆ ನಿರ್ದಿಷ್ಟ ಕಾರಣ ಇಲ್ಲವಾದರೂ, ಎಲ್ಲಾ ಪ್ರಕರಣಗಳಲ್ಲಿ ಸಾಮಾನ್ಯ ಅಂಶಗಳಿವೆ. ಅದರಲ್ಲಿ ವೈಯಕ್ತಿಕ ಸಾಲದ ಪ್ರಮಾಣ ಹೆಚ್ಚುತ್ತಿರುವುದು ಪ್ರಮುಖ ಅಂಶ.

ದೇಶದ ಇತರೆ ರೈತರಿಗೆ ಹೋಲಿಸಿದರೆ ಕಬ್ಬು ಬೆಳೆಗಾರರು ತಮ್ಮನ್ನು ತಾವು ಉಳಿಸಿಕೊಳ್ಳಲು ಹಾಗೂ ಕೃಷಿಯನ್ನು ಮುಂದುವರಿಸಲು ಸಾಲ ಪಡೆಯುವುದು ಅನಿವಾರ್ಯವಾಗಿದೆ. ಈ ಬಿಕ್ಕಟ್ಟು ಕೇವಲ ರೈತರನ್ನು ಮಾತ್ರವಲ್ಲದೆ, ಅವರ ವಿಧವಾ ಪತ್ನಿಯರು, ಮಕ್ಕಳು ಹಾಗೂ ಕುಟುಂಬಸ್ಥರನ್ನು ಸಾಲದ ಸುಳಿಗೆ ನೂಕುತ್ತಿದೆ. ಇದಕ್ಕೆಲ್ಲಾ ಕಾರಣ ಕಬ್ಬು ಬೆಳೆ ಎಂದು ಅವರು ಹೇಳುತ್ತಾರೆ. ಒಂದು ಕಾಲದಲ್ಲಿ ಅತ್ಯಂತ ಲಾಭದಾಯಕ ಕೃಷಿ ಎನ್ನಿಸಿಕೊಂಡಿದ್ದ ಕಬ್ಬು ಬೆಳೆಯ ಕೃಷಿಯ ಪರಿಸ್ಥಿತಿ ಇವತ್ತು ಬದಲಾಗಿದೆ.

 

ಶಿವಣ್ಣನ ಕತೆ:

ರೈತ ಶಿವಣ್ಣನ ಕುಟುಂಬ.

ರೈತ ಶಿವಣ್ಣನ ಕುಟುಂಬ.

ಮಂಡ್ಯ ಜಿಲ್ಲೆಯಲ್ಲಿ ಎತ್ತ ನೋಡಿದರೂ ವಿಶಾಲವಾಗಿ ಹರಡಿ ನಿಂತ ಕಬ್ಬು ಬೆಳೆಯ ಕೃಷಿ ಭೂಮಿ ಕಾಣಸಿಗುತ್ತದೆ. ಮಂಡ್ಯದ ಜಿಲ್ಲಾ ಕೇಂದ್ರದಿಂದ ಸಮೀಪದಲ್ಲಿರುವ ಸದೋಲಾಲು ಹಳ್ಳಿಯ 35ವರ್ಷದ ಕಬ್ಬು ಬೆಳೆಗಾರ; ಶಿವಣ್ಣ. 7 ಜನರ ಇಡೀ ಕುಟುಂಬದ ಆರ್ಥಿಕ ಆಧಾರವಾಗಿದ್ದಾತ. ಆತನ ತಾಯಿ ಮತ್ತು ಪತ್ನಿಗೆ ಥೈರಾಯ್ಡ್ ಕಾಯಿಲೆ ಇದೆ. ಸಹೋದರ ಕೂಡ ಕಾಯಿಲೆ ಬಿದ್ದಿದ್ದಾರೆ. ಅತ್ತಿಗೆ ಮತ್ತು ತನ್ನಿಬ್ಬರ ಮಕ್ಕಳನ್ನು ಶಿವಣ್ಣನೇ ದುಡಿದು ಸಾಕುತ್ತಿದ್ದ.

2015ರ ಜುಲೈ ತಿಂಗಳಿನಲ್ಲಿ ಮಕ್ಕಳನ್ನು ಶಾಲೆ ಬಿಟ್ಟು ಬಂದ ಶಿವಣ್ಣ ನಗರಕ್ಕೆ ಹೋಗಿ ಮದ್ಯ ಮತ್ತು ಕೀಟನಾಶಕ ಖರೀದಿಸಿದ್ದ. ಮಧ್ಯಾಹ್ನದ ಊಟದ ನಂತರ ಎಂದಿನಂತೆ ತನ್ನ ಹೊಲಕ್ಕೆ ಹೋಗಿದ್ದ. ಸಂಜೆ 5 ಗಂಟೆ ಸುಮಾರಿಗೆ ಸೊಸೆ ಕರೆ ಮಾಡಿದಾಗ ತಾನು ಕೀಟನಾಶಕ ಸೇವಿಸಿದ್ದಾಗಿ ತಿಳಿಸಿದ ಆತ, ಕೊನೆಯ ಬಾರಿ ನಿಮ್ಮನ್ನೆಲ್ಲಾ ನೋಡಬೇಕು ಎಂದು ಕೋರಿಕೆ ಮುಂದಿಟ್ಟಿದ್ದ. ಇಡೀ ಕುಟುಂಬ ಹೊಲಕ್ಕೆ ಓಡಿ ಬಂದು ನರಳಾಡುತ್ತಿದ್ದ ಶಿವಣ್ಣನನ್ನು ಆಸ್ಪತ್ರೆಗೆ ಸೇರಿಸಿದರಾದರೂ, ಆತ ಬದುಕುಳಿಯಲಿಲ್ಲ.

ಶಿವಣ್ಣ ಮಾಡಿದ ಸಾಲದ ಪ್ರಮಾಣ ಸುಮಾರು 6 ಲಕ್ಷದಷ್ಟಿತ್ತು. ಆತನಿಗಿದ್ದ ಐದು ಎಕರೆ ಹೊಲದಲ್ಲಿ ಆತ 6 ಬೆಳೆಗಳನ್ನು ತೆಗೆದಿದ್ದರೆ ಮಾತ್ರವೇ ಕನಿಷ್ಟ ಸಾಲ ತೀರಿಸುವಷ್ಟು ಆತ ದುಡಿದುಕೊಳ್ಳಬಹುದಿತ್ತು.

ಅಲ್ಲೀವರೆಗೂ ಶಿವಣ್ಣ ಸಾಲದ ಸುಳಿಯಲ್ಲಿ ಸಿಲುಕಿದ್ದ ಎಂಬುದು ಮನೆಯವರಿಗೆ ಗೊತ್ತೇ ಇರಲಿಲ್ಲ. “ಅವನು ತನ್ನ ಕಷ್ಟವನ್ನು ಯಾರ ಬಳಿಯೂ ಹಂಚಿಕೊಳ್ಳುತ್ತಿರಲಿಲ್ಲ,” ಎಂದರು ಶಿವಣ್ಣನ ತಾಯಿ ಸಾವಿತ್ರಮ್ಮ. ಆತ ಅದಕ್ಕೂ ಮುಂಚೆ ಎಂದೂ ಮದ್ಯ ಸೇವಿಸುತ್ತಿರಲಿಲ್ಲ ಎಂದವರು ಹೇಳುತ್ತಾರೆ.

“ಆತ ತನಗೆ ಎರಡನೇ ಮಗು ಹೆಣ್ಣಾಗಿದೆ ಎಂದು ಅತ್ಯಂತ ಖುಷಿ ಪಟ್ಟಿದ್ದ. ಮಗಳನ್ನು ದೇವಸ್ಥಾನದಿಂದ ಹಿಡಿದು ಜ್ಯೋತಿಷಿಗಳವರೆಗೆ ಕರೆದುಕೊಂಡು ಹೋಗಿದ್ದ,” ಎಂದು ತಾಯಿ ನೆನಪು ಮಾಡಿಕೊಳ್ಳುತ್ತಾರೆ.

ಶಿವಣ್ಣನ ಸಾವಿನ ನಂತರ ಕುಟುಂಬ ಆತನ ತಲೆಯ ಮೇಲಿದ್ದ ಸಾಲದ ಭಾರವನ್ನು ಅನುಭವಿಸತೊಡಗಿತು. ಅವರ ಆರ್ಥಿಕತೆ ಕುಸಿದು ಬಿದ್ದಿತ್ತು. ಸಾಲ ಮರುಪಾವತಿಗಾಗಿ ಹಲವು ವರ್ಷಗಳ ಕಾಲ ಅವರು ಬಡತನದ ಬದುಕು ಸಾಗಿಸಬೇಕಿತ್ತು. ಅದರ ಜತೆಯಲ್ಲಿ ಶಿವಣ್ಣನ  ಅಂತ್ಯ ಸಂಸ್ಕಾರಕ್ಕಾಗಿ ಮತ್ತೊಂದಿಷ್ಟು ಸಾಲ ಮಾಡಿದ್ದರು. ಶಿವಣ್ಣನ ಪತ್ನಿ ತನ್ನ ಬಳಿ ಇದ್ದ ಎಲ್ಲಾ ಒಡವೆಗಳನ್ನು ಮಾಡಿದರು. ಅದರಲ್ಲಿ ಪವಿತ್ರ ಎಂದು ಪರಿಗಣಿಸುವ ಮಾಂಗಲ್ಯ ಸರವೂ ಸೇರಿತ್ತು.

ಸದ್ಯ ಅವರ ಬಳಿ ಉಳಿದುಕೊಂಡಿರುವುದು ಒಂದು ಹಸು ಅಷ್ಟೆ. ಅದರ ಹಾಲನ್ನು ಮಾರಿ ಬಂದ ವರಮಾನದಲ್ಲಿ ಕುಟುಂಬ ಬದುಕುತ್ತಿದೆ.

“ಹೊಲದಲ್ಲಿ ಭಿತ್ತನೆ ಮಾಡಲು ಕೃಷಿ ಕೂಲಿಯೂ ಸೇರಿಕೊಂಡು ಒಮ್ಮೆಗೆ 25 ಸಾವಿರ ಬೇಕಾಗುತ್ತಿತ್ತು. ಯಾರೂ ಸಹಾಯಕ್ಕೆ ಇಲ್ಲದ ಕಾರಣಕ್ಕೆ ಅನಿವಾರ್ಯವಾಗಿ ಕೂಲಿಯವರನ್ನು ಬಳಸಿಕೊಳ್ಳಬೇಕಾಗುತ್ತಿತ್ತು,” ಎಂದು ಶಿವಣ್ಣನ ತಂದೆ ಕೆಂಪೆಗೌಡ ಲೆಕ್ಕ ಮುಂದಿಡುತ್ತಾರೆ. ಜತೆಗೆ, ಶಿವಣ್ಣ ದುಬಾರಿ ರಸ ಗೊಬ್ಬರಗಳಾದ ನೈಟ್ರೋಜನ್, ಫಾಸ್ಪರಸ್ ಮತ್ತು ಪೊಟ್ಯಾಶಿಯಂ ಬಳಸುತ್ತಿದ್ದ. ಯೂರಿಯಾ ಎಂದು ರೈತರಿಂದ ಗುರುತಿಸುವ ಇವುಗಳನ್ನು ಪರಿಚಯಿಸಿದ್ದು ‘ಹಸಿರು ಕ್ರಾಂತಿ’. ಇವುಗಳನ್ನು ಒಮ್ಮೆ ಬಳಸಿದರೆ ಕೃಷಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ. ಪ್ರತಿ ಬಾರಿಯೂ ಹೆಚ್ಚು ಹೆಚ್ಚು ಪ್ರಮಾಣದ ಯೂರಿಯಾ ಬಳಸಬೇಕಾದ ಅನಿವಾರ್ಯತೆಗೆ ರೈತರು ಸಿಲುಕುತ್ತಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ರಸಗೊಬ್ಬರಗಳಿಗೆ ಹೂಡುವ ಹಣದ ಪ್ರಮಾಣವೂ ಹೆಚ್ಚಾಗುತ್ತದೆ.

ಹೀಗೆ, ಇವೆಲ್ಲವೂ ಶಿವಣ್ಣನ ಲಾಭದ ಪ್ರಮಾಣವನ್ನು ಕಡಿಮೆ ಮಾಡುತ್ತ ಬಂದವು. ಜತೆಗೆ, ಹಳೆಯ ಸಾಲ ತೀರಿಸಲು ಇನ್ನೊಂದಿಷ್ಟು ಸಾಲ ಮಾಡಬೇಕಾದ ಅನಿವಾರ್ಯತೆಗೆ ದೂಡಿದವು. 2014ರಲ್ಲಿ ಮಳೆ ಅಭಾವದಿಂದಾಗಿ ಕಬ್ಬು ಕೈಕೊಟ್ಟಿತು. ಅದೇ ವರ್ಷ ಸಕ್ಕರೆ ಕಾರ್ಖಾನೆಗಳೂ ಕೂಡ ಕಬ್ಬಿನ ಬೆಳೆಗೆ ದರವನ್ನು 2 ಸಾವಿರದಿಂದ 1. 5 ಸಾವಿರಕ್ಕೆ ಇಳಿಸಿದವು. ಅದೂ ಕೂಡ ಈವರೆಗೂ ಅನೇಕ ರೈತರ ಕೈಗೆ ಸಿಕ್ಕಿಲ್ಲ. ಶಿವಣ್ಣ ಸಾಯುವ ಹೊತ್ತಿಗೆ ಆತನಿಗೆ ಸಕ್ಕರೆ ಫ್ಯಾಕ್ಟರಿಗಳಿಂದ ಹಣ ಬರುವುದು ಬಾಕಿ ಇತ್ತು.

ಸಾಲ ಬೆಳೆಯುವುದು ಹೀಗೆ:

sugar-cane-farmer-1

ಶಿವಣ್ಣನ ಮನೆಯಿಂದ ಸಮೀಪದಲ್ಲಿರುವ ಚೋಳಗೌಡನ ದೊಡ್ಡಿಯಲ್ಲಿರುವ ರತ್ನಮ್ಮ ಅವರ ಪತಿ ಮರಿಯಪ್ಪ ಕೂಡ ತಮ್ಮ 45ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಸಾಯುವಾಗ ತಲೆಯ ಮೇಲೆ ಸುಮಾರು 7 ಲಕ್ಷ ರೂಪಾಯಿ ಸಾಲ ಇತ್ತು.

“ಅವರು ಪಕ್ಕದ ಮನೆಯಲ್ಲಿ ಕಾಫಿ ಕುಡಿಯಲು ಹೋಗುತ್ತಿದ್ದೇನೆ ಎಂದು ಹೇಳಿ ಹೋದರು,” ಎಂದು ರತ್ನಮ್ಮ ನೆನಪು ಮಾಡಿಕೊಳ್ಳುತ್ತಾರೆ. “ಆಮೇಲೆ ಅವರು ವಾಪಾಸ್ ಬರಲಿಲ್ಲ. ಹೊಲದಲ್ಲಿ ಅವರ ಹೆಣ ಸಿಕ್ಕಿತು. ಆ ವರ್ಷ ಬರ ಬಂದಿತ್ತು. ನೀರು ಇಲ್ಲದ ಕಾರಣ ನಾವು ಕಬ್ಬ ಬೆಳೆಯಲು ಸಾಧ್ಯವಾಗಿರಲಿಲ್ಲ,” ಎಂದು ಅವರು ಕಣ್ಣೀರು ಹಾಕುತ್ತಾರೆ.

ಸದ್ಯ ರತ್ನಮ್ಮ ಕೃಷಿ ಕೂಲಿಯಾಗಿ ಇನ್ನೊಬ್ಬರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಿಮ ವರ್ಷದ ಪದವಿ ಓದುತ್ತಿದ್ದ ಮಗ ತಂದೆಯ ಸಾವಿನ ಹಿನ್ನೆಲೆಯಲ್ಲಿ ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿಕೊಂಡಿದ್ದಾನೆ.

“ನಮ್ಮ ಸುತ್ತಮುತ್ತ ಒಳ್ಳೆಯ ಕಾಲೇಜುಗಳಿಲ್ಲ. ಹೀಗಾಗಿ ಮಂಡ್ಯದ ಖಾಸಗಿ ಕಾಲೇಜಿಗೆ 15 ಸಾವಿರ ಖರ್ಚು ಮಾಡಿ ಸೇರಿಸಿದ್ದೆವು. ಈಗ ಅವನು ಕೂಡ ಓದು ಬಿಟ್ಟು ಬಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾನೆ. ಸಾಲ ತೀರಿಸಲು ಬೇರೆ ದಾರಿಗಳು ಕಾಣಿಸುತ್ತಿಲ್ಲ,” ಎನ್ನುತ್ತಾರೆ ರತ್ನಮ್ಮ.

2015ರಲ್ಲಿ ‘ಕರ್ನಾಟಕ ಜನಶಕ್ತಿ’ (ಕೆಜೆಎಸ್) ಎಂಬ ಸ್ಥಳೀಯ ಅಧ್ಯಯನಶೀಲರ, ಹೋರಾಟಗಾರರ ಹಾಗೂ ರೈತರ ಸಂಘಟನೆ ಮಂಡ್ಯ ಜಿಲ್ಲೆಯ ರೈತರ ಆತ್ಮಹತ್ಯೆ ಕುರಿತು ವರದಿಯೊಂದನ್ನು ತಯಾರಿಸಿದೆ. ಅದರಲ್ಲಿ ‘ಹೆಚ್ಚುತ್ತಿರುವ ಸಾಲದ ಪ್ರಮಾಣ ಮತ್ತು ಆರ್ಥಿಕ ಅಸುರಕ್ಷತೆಗಳೇ’ ರೈತರ ಆತ್ಮಹತ್ಯೆಗಳಿಗೆ ಕಾರಣ ಎಂದು ತಿಳಿಸಲಾಗಿದೆ.

ಒಂದು ಎಕರೆ ಪ್ರದೇಶದಲ್ಲಿ ಸುಮಾರು 40 ಟನ್ ಕಬ್ಬು ಬೆಳೆಯಬಹುದು. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದ್ದ ಪಕ್ಷದಲ್ಲಿ, ಕೃಷಿ ಕೂಲಿ, ಕೀಟ ನಾಶಕ, ರಸಗೊಬ್ಬರ ಹಾಗೂ ಫ್ಯಾಕ್ಟರಿಗೆ ಸಾಗಿಸುವ ಖರ್ಚು ಕಳೆದ ಅಂದಾಜು 28 ಸಾವಿರದಷ್ಟು ಉಳಿಸಿಕೊಳ್ಳಬಹುದು. ಆದರೆ ಕೆಲವೊಮ್ಮೆ ಎಕರೆಗೆ 10 ಟನ್‌ನಷ್ಟು ಬೆಳೆ ಕಡಿಮೆಯಾಗುತ್ತದೆ. ಅದೇ ವೇಳೆ ಸಕ್ಕರೆ ಫ್ಯಾಕ್ಟರಿಗಳಲ್ಲಿಯೂ ಕೊಳ್ಳುವ ಬೆಲೆ ಇಳಿಮುಖವಾಗುತ್ತದೆ. ಇಂತಹ ಸಮಯದಲ್ಲಿ ರೈತರ ತಲೆಯ ಮೇಲೆ ಪ್ರತಿ ಎಕರೆಗೆ 10- 13 ಸಾವಿರ ರೂಪಾಯಿಗಳ ಹೊರೆ ಬೀಳುತ್ತದೆ. ಅತ್ಯಂತ ಕಡಿಮೆ ಲಾಭದ ಪ್ರಮಾಣ, ಕೆಲವೊಮ್ಮೆ ಅದೂ ಇಲ್ಲದೆ ಇರುವಾಗ ಸಹಜವಾಗಿಯೇ ರೈತರ ಸಾಲ ಭಾರ ಹೆಚ್ಚಾಗುತ್ತಲೇ ಹೋಗುತ್ತದೆ.

ಕರ್ನಾಟಕ ಜನ ಶಕ್ತಿಯ ವರದಿ ಪ್ರಕಾರ, ಈವರೆಗೆ ಆತ್ಮಹತ್ಯೆಗೆ ಶರಣಾದ ರೈತರ ಸಾಲದ ಪ್ರಮಾಣದ ಸರಾಸರಿ 5 ಲಕ್ಷದಷ್ಟಿದೆ. ಕರ್ನಾಟಕದ ಪ್ರತಿ ಪ್ರಜೆಯ ತಲಾ ಆದಾಯವೇ 18 ಸಾವಿರ ಇರುವಾಗ ಇದು ದೊಡ್ಡ ಮೊತ್ತವೇ ಆಗಿದೆ.

“ಕಬ್ಬು ಬೆಳೆ ಹಿಂದಿನ ಹಾಗೆ ರೈತರಿಗೆ ಲಾಭ ತಂದುಕೊಡುವ ಬೆಳೆಯಾಗಿ ಉಳಿದಿಲ್ಲ,” ಎಂದು ವರದಿ ಹೇಳುತ್ತದೆ. ಆದರೆ ರೈತರಿನ್ನೂ ಕಬ್ಬು ಬೆಳೆಯನ್ನೇ ನೆಚ್ಚಕೊಂಡಿದ್ದಾರೆ. ಶಿವಣ್ಣ ಮತ್ತು ರತ್ನಮ್ಮ ಅವರ ಕತೆಗಳೂ ಕೂಡ ಹೇಗೆ ಸಾಲದ ಸುಳಿಯಲ್ಲಿ ರೈತರು ಸಿಲುಕುತ್ತಿದ್ದಾರೆ ಎಂಬುದನ್ನು ಸಾರಿ ಹೇಳುತ್ತಿವೆ.

ಶಿವಣ್ಣ ತನ್ನ ಕುಟುಂಬದ ಏಕೈಕ ಆರ್ಥಿಕ ಮೂಲವಾಗಿದ್ದರೆ, ರತ್ನಮ್ಮ ತನ್ನ ಗಂಡ ಬಿಟ್ಟು ಹೋದ ಸಾಲ ಹೊರೆಯನ್ನು ತೀರಿಸಲು ಮಗನ ಓದನ್ನೂ ನಿಲ್ಲಿಸಿದ್ದಾರೆ. ರೈತರ ಸಾಲ ಕೇವಲ ಕೃಷಿಯ ಕಾರಣಕ್ಕೆ ಮಾತ್ರ ಬೆಳೆಯುತ್ತಿಲ್ಲ. ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ವಾಸಕ್ಕೊಂದು ಮನೆಯನ್ನು ಕಟ್ಟುವ ಕಾರಣಕ್ಕೂ ಸಾಲ ಬೆಳೆಯುತ್ತಿದೆ. ತಮ್ಮಲ್ಲಿ ಸ್ವಲ್ಪ ಕೃಷಿ ಭೂಮಿ ಇದ್ದರೂ ಸಾಕು, ರೈತರಿಗೆ ಇವತ್ತಲ್ಲ ನಾಳೆ ಲಾಭ ಆಗುತ್ತದೆ ಎಂಬ ಭರವಸೆ ಕೂಡ ಸಾಲ ಮಾಡಿಸುತ್ತಿದೆ. ಇದ್ಯಾವುದೂ ಇಲ್ಲದಿದ್ದರೆ ಪರ್ಯಾಯ ಅಂತ ಇರುವುದು ರತ್ನಮ್ಮ ರೀತಿಯಲ್ಲಿ ಇನ್ನೊಬ್ಬರ ಹೊಲದಲ್ಲಿ ಕೆಲಸ ಮಾಡುವುದಷ್ಟೆ.

“ನಮಗೆ ಪ್ರತಿ ಕಟ್ಟಿಗೆ 2 ರೂಪಾಯಿ ನೀಡುತ್ತಾರೆ,” ಎನ್ನುತ್ತಾರೆ ಇನ್ನೊಬ್ಬರು ಕೃಷಿ ಕೂಲಿ ಮಹಿಳೆ ಕಮಲಮ್ಮ. 55 ವರ್ಷದ ಅವರು ಮತ್ತೊಂದು ಹಳ್ಳಿಯ ಕಬ್ಬಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. “ಕೆಲವು ದಿನ ನಾನು 200 ರೂಪಾಯಿವರೆಗೂ ದುಡಿಯುತ್ತೇನೆ. ನಾನು ಕನಿಷ್ಟ ಹಣವನ್ನಾದರೂ ಮನೆಗೆ ತೆಗೆದುಕೊಂಡು ಹೋಗುತ್ತೇನೆ. ಆದರೆ ರೈತರು ಬೆಳೆ ಕೈಕೊಟ್ಟರೆ ಯಾವುದೇ ಹಣ ಇಲ್ಲದೆ ಒದ್ದಾಟಕ್ಕೆ ಸಿಲುಕುತ್ತಾರೆ,” ಎಂದವರು ಅನುಭವನ್ನು ಬಿಚ್ಚಿಡುತ್ತಾರೆ.

ಬದಲಾಗುತ್ತಿರುವ ಹವಾಮಾನ:

sugar-cane-farmer-2

ಇಂತಹ ಸಮಸ್ಯೆಗಳ ಜತೆಗೆ ರೈತರು ಹವಾಮಾನದ ಬದಲಾವಣೆ ಬಗ್ಗೆಯೂ ದೂರುತ್ತಾರೆ. ಕಬ್ಬಿಗೆ ಹೆಚ್ಚು ನೀರಿನ ಅಗತ್ಯ ಇರುವ ಕಾರಣ ಕೆಲವೊಮ್ಮೆ ಸಕಾಲದಲ್ಲಿ ಮಳೆ ಬೀಳದೆ ಹೋದರೆ ಇಡೀ ಬೆಳೆಯೇ ಕೈ ಕೊಡುತ್ತದೆ. ಮಂಡ್ಯ ಜಿಲ್ಲೆಯ ಶೇ. 42 ರಷ್ಟು ಕೃಷಿ ಭೂಮಿಗೆ ಕೃಷ್ಣ ರಾಜ ಸಾಗರ ಅಣೆಕಟ್ಟಿನಿಂದ ನೀರಿನ ಪೂರೈಕೆ ಆಗುತ್ತದೆ. ಹೆಚ್ಚಿನ ಸಂಖ್ಯೆ ರೈತರು ಮಳೆಯನ್ನೇ ಅವಲಂಭಿಸಿದ್ದಾರೆ ಇಲ್ಲವೇ ಬೋರ್‌ವೆಲ್‌ಗಳನ್ನು ನಂಬಿಕೊಂಡಿದ್ದಾರೆ.

ಇಲ್ಲಿನ ಹುಲಿವಾನ ಹಳ್ಳಿಯ 32 ವರ್ಷದ ರೈತ ಪ್ರಸನ್ನ ಕೂಡ ಕಬ್ಬು ಬೆಳೆಯುತ್ತಿದ್ದಾರೆ. ಅವರ ಅಜ್ಜ ತಮ್ಮ ಹೊಲದಲ್ಲಿ ಬಾವಿ ತೋಡಿಸಿದ್ದರಿಂದ ಇವತ್ತಿಗೂ ಬರದ ಸಮಯದಲ್ಲಿ ನೀರಿನ ಅಭಾವ ಅವರಿಗೆ ತಟ್ಟದಂತೆ ತಡೆಯುತ್ತಿದೆ. ಪ್ರಸನ್ನ ಅಣ್ಣ ಕೂಡ ಜತೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಕೃಷಿ ಕೂಲಿಗೆ ಹೆಚ್ಚು ಖರ್ಚು ಮಾಡುವ ಅಗತ್ಯ ಅವರಿಗೆ ಬಿದ್ದಿಲ್ಲ. ಸಗಣಿ ಗೊಬ್ಬರವನ್ನು ಹೆಚ್ಚು ಬಳಸುವ ಮೂಲಕ ರಸಗೊಬ್ಬರಗಳಿಂದ ಅವರು ದೂರ ಉಳಿದಿದ್ದಾರೆ.

“ಈವರೆಗೆ ನೀರಿನ ಅಭಾವ ತಟ್ಟದಂತೆ ಹೆಂಗೂ ಮ್ಯಾನೇಜ್ ಮಾಡಿದ್ದೀನಿ,” ಎನ್ನುತ್ತಾರೆ ಪ್ರಸನ್ನ. “ಇಲ್ಲವಾದರೆ ಇಷ್ಟೊತ್ತಿಗೆ ನಮ್ಮ ಕೃಷಿ ಭೂಮಿ ಬರಡಾಗುತ್ತಿತ್ತು. ಈವರೆಗೂ ಸಾಲ ಮಾಡಲು ಹೆದರುತ್ತಿದ್ದೆ. ಈಗೀಗ ನೀರಿನ ಪ್ರಮಾಣ ಕಡಿಮೆಯಾದ್ದರಿಂದ ಬಾವಿ ತೋಡಿಸಲು 1 ಲಕ್ಷ ಸಾಲ ಮಾಡಬೇಕಿದೆ,” ಎಂದು ತಿಳಿಸುತ್ತಾರೆ.

ಬರ ವರ್ಷದಿಂದ ವರ್ಷಕ್ಕೆ ತೀವ್ರವಾಗುತ್ತಿದೆ. 2016ರ ನವೆಂಬರ್‌ ತಿಂಗಳಲ್ಲಿ ಕರ್ನಾಟಕ ಸರಕಾರ ಕಳೆದ ಎರಡು ವರ್ಷಗಳಲ್ಲಿ ಕೃಷಿ ವಲಯ ಸುಮಾರು 12 ಸಾವಿರ ಕೋಟಿ ನಷ್ಟ ಅನುಭವಿಸಿದೆ ಎಂದು ಲೆಕ್ಕಹಾಕಿತ್ತು. ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನೀರಿನ ಮೂಲಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯೂ ರೈತರನ್ನು ಹೆಚ್ಚು ಹೆಚ್ಚು ಸಾಲ ಮಾಡುವಂತೆ ಮಾಡುತ್ತಿದೆ.

ಈ 21ನೇ ಶತಮಾನದ ಮುಕ್ತ ಮಾರುಕಟ್ಟೆಯ ಯುಗದಲ್ಲಿಯೂ ಭಾರತದ ಕೃಷಿಕರು ಬೆಳೆದ ಬೆಳೆಗಳನ್ನು ಜಾಗತಿಕ ಮಾರುಕಟ್ಟೆ ತಲುಪಿಸಲು ಕಷ್ಟವಾಗುತ್ತಿದೆ.

ಕಬ್ಬು ಬಳೆ; ಜಾಗತಿಕ ನೋಟ:

ಕಳೆದ ದಶಕದಲ್ಲಿ ಮುಕ್ತ ಆರ್ಥಿಕ ನೀತಿ ಭಾರತದ ಆರ್ಥಿಕತೆಯನ್ನು ಆಧುನಿಕ ಹಾದಿಯಲ್ಲಿ ಮುನ್ನಡೆಸಿವೆ. ಮುಕ್ತ ಮಾರುಕಟ್ಟೆ ಜಾಗತಿಕ ಮಾರುಕಟ್ಟೆಗೆ ಪ್ರವೇಶ ನೀಡಿದೆ. ಹೀಗಾಗಿ ಸಣ್ಣ ಕಬ್ಬು ಬೆಳೆಗಾರರು ಜಾಗತಿಕ ದೊಡ್ಡ ಕೃಷಿಕರ ಜತೆ ಪೈಪೋಟಿ ನಡೆಸಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಿದೆ. ಬ್ರೆಸಿಲ್‌ನಂತಹ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶಗಳು ಭಾರತದ ಕಬ್ಬು ಬೆಳೆಗಾರರಿಗೆ ಹೋಲಿಸಿದರೆ ಕಡಿಮೆ ಬೆಲೆ ಕಬ್ಬು ಬೆಳೆಯನ್ನು ರಫ್ತು ಮಾಡುತ್ತಿವೆ.

ಹೊಸ ಆರ್ಥಿಕ ನೀತಿಗಳಿಂದಾಗಿ ಕೃಷಿ ಆರ್ಥಿಕತೆಯಲ್ಲಿ ಸರಕಾರಗಳ ಪಾತ್ರವನ್ನು ಅತ್ಯಂತ ಕಡಿಮೆಯಾಗಿದೆ. ಸಬ್ಸಿಡಿಗಳು ಕಡಿತವಾಗಿವೆ. ಮಾರುಕಟ್ಟೆಯ ಬೆಲೆಯ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಕಬ್ಬು ಬಳೆಯ ಮೇಲೂ ಇದು ಪರಿಣಾಮ ಬೀರಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಸರಕಾರ ಕಬ್ಬು ಬಳೆಗೆ ಸಬ್ಸಿಡಿ ನೀಡುವ ಮೂಲಕ ಸಕ್ಕರೆ ಫ್ಯಾಕ್ಟರಿಗಳು ತಮ್ಮ ಉತ್ಪಾದನೆಯ ರಫ್ತಿಗೆ  ಅನುಕೂಲ ಮಾಡಿಕೊಡಲು ಮುಂದಾಗಿತ್ತು. ಆದರೆ ಬ್ರೆಸಿಲ್ ಸೇರಿದಂತೆ ಯುರೋಪಿಯನ್ ಯೂನಿಯನ್‌ನ ಹಲವು ರಾಷ್ಟ್ರಗಳು ಜಾಗತಿಕ ಸಕ್ಕರೆ ಉದ್ಯಮದ ಮೇಲೆ ಇದು ಪರಿಣಾಮ ಬೀರುತ್ತದೆ ಎಂಬ ಕಾರಣ ನೀಡಿ ವಿರೋಧ ವ್ಯಕ್ತಪಡಿಸಿದ್ದವು.

2031ರ ಹೊತ್ತಿಗೆ ಭಾರತದ ಜನಸಂಖ್ಯೆಯ ಶೇ. 40ರಷ್ಟು ಜನ ನಗರ ವಾಸಿಗಳಾಗಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಹಳ್ಳಿಗಳಲ್ಲಿನ ರೈತರನ್ನು ಮರೆಯುವ ಸ್ಥಿತಿ ಬಂದಿದೆ.

“ಹಿಂದೆ ಕೃಷಿಕರು ತಮ್ಮ ಜಾನುವಾರುಗಳ ಜತೆಗೆ ಬದುಕುತ್ತಿದ್ದರು. ಅವರ ಜೀವನ ಶೈಲಿಗೂ ಕೃಷಿಗೂ ನಡುವೆ ಅಂತರ್‌ ಸಂಬಂಧ ಇತ್ತು. ಆದರೆ ಆಧುನಿಕತೆ ಈ ಸಂಬಂಧವನ್ನು ಕಡಿದು ಹಾಕಿದೆ. ಇದರಿಂದ ಕುಟುಂಬಗಳು, ಸಮಾಜ ಬಿಕ್ಕಟ್ಟನ್ನು ಎದುರಿಸುತ್ತಿದೆ,” ಎನ್ನುತ್ತಾರೆ ಕರ್ನಾಟಕ ಜನ ಶಕ್ತಿ ಸಂಘಟನೆಯ ಡಾ. ವಾಸು ಎಚ್‌. ವಿ.

 

ಚಿತ್ರ, ವರದಿ: ಆಲ್‌ ಜಝೀರಾ.

Leave a comment

FOOT PRINT

Top