An unconventional News Portal.

‘ಓದುಗರು ಏನಂತಾರೆ?’: ಆನ್ ಲೈನ್ ಪತ್ರಿಕೋದ್ಯಮದ ಸಂಪ್ರದಾಯಗಳನ್ನು ಮುರಿದಿದ್ದು ‘ಸಮಾಚಾರ’!

‘ಓದುಗರು ಏನಂತಾರೆ?’: ಆನ್ ಲೈನ್ ಪತ್ರಿಕೋದ್ಯಮದ ಸಂಪ್ರದಾಯಗಳನ್ನು ಮುರಿದಿದ್ದು ‘ಸಮಾಚಾರ’!


*ಗುರು ಕುಂಟವಳ್ಳಿ, ಡಿಜಿಟಲ್ ಪತ್ರಕರ್ತ.

guru-kuntavalli-1ಇದು ಸುಮಾರು ಮೂರು ವರ್ಷಗಳ ಹಿಂದಿನ ಮಾತು. ಸೌತ್ ಅಂಡ್ ಸರ್ಕಲ್ ಬಳಿಯ ಆನ್‌ಲೈನ್ ಸುದ್ದಿ ಮಾಧ್ಯಮದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಫೋನ್ ಕರೆ ಬಂತು. ‘ಸಂಜೆ ಸಿಗುವೆ’ ಎಂದೆ. ಅಶೋಕ ಪಿಲ್ಲರ್ ಬಳಿ ಭೇಟಿ, ‘ಏನಪ್ಪ ಸಮಾಚಾರ?’ ಎಂದು ಮಾತು ಶುರು ಆಯಿತು. ವೆಬ್ ಸೈಟ್ ಬಗ್ಗೆ ಒಂದಷ್ಟು ಮಾಹಿತಿ ವಿನಿಮಯವಾಯಿತು. ಕನ್ನಡದಲ್ಲಿ ವೆಬ್‌ಸೈಟ್‌ಗಳು ಎಷ್ಟಿವೆ? ಹೇಗಿವೆ? ಜನ ಓದುತ್ತಾರಾ? ಯಾವ ರೀತಿಯ ವಿಷಯಗಳನ್ನು ಹೇಗೆ ಓದುತ್ತಾರೆ? ಸನ್ನಿ ಲಿಯೋನ್ ಕುರಿತು ಬರೆದರೆ ಹಿಟ್ಸ್ ಬರುತ್ತಾ? ಹೀಗೆ ಪ್ರಶ್ನೋತ್ತರ ಕಲಾಪವೊಂದು ನಡೆಯಿತು.

ಕೆಲವು ದಿನಗಳ ಬಳಿಕ ಕರೆ ಮಾಡಿದಾಗ ‘ಸಮಾಚಾರ.ಕಾಮ್’ ಕಾರ್ಯರೂಪಕ್ಕೆ ಬಂದ ಬಗ್ಗೆ ತಿಳಿಯಿತು. ವಿಲ್ಸನ್‌ ಗಾರ್ಡನ್‌ನ ಪುಟ್ಟ ರೂಮಿನಲ್ಲಿ ಹೊರಜಗತ್ತಿಗೆ ‘ಸಮಾಚಾರ’ ಪರಿಚಯವಾಗುವ ಮುಂಚೆಯೇ ನಾನು ಅದರ ಲ್ಯಾಂಡಿಂಗ್ ಪೇಜ್ ನೋಡಿದ್ದೆ. ಇದ್ಯಾಕೋ ಬೇರೆ ತರನಾಗಿದೆಯೆಲ್ಲಾ ಅನ್ನಿಸಿತ್ತು.

ಅವತ್ತಿಗಾಗಲೇ ಟಿಜಿಟಲ್ ಪತ್ರಿಕೋದ್ಯಮ ಎಂಬ ಅತೀ ಅವಸರದ ಪತ್ರಿಕೋದ್ಯಮದ ಬಗ್ಗೆ ನನಗೆ ಕೊಂಚ ಮಟ್ಟಿಗೆ ತಿಳಿದಿತ್ತು. ಪೇಜ್ ವ್ಯೂ, ಯೂನಿಕ್ ವಿಸಿಟರ್ಸ್, ಗೂಗಲ್ ಅನಲಿಟಿಕ್ಸ್, ಫೇಸ್ ಬುಕ್ ಲೈಕ್ ಮತ್ತು ಶೇರ್, ಟ್ವಿಟರ್ ಹೀಗೆ ಇಂಟರ್ ನೆಟ್ ಎಂಬ ಸಮುದ್ರದಲ್ಲಿ ಈಜಾಡುತ್ತಿದ್ದೆ. ಹೀಗಾಗಿ ನನ್ನ ಅನುಭವಗಳ ಆಧಾರದ ಮೇಲೆ ಕಳೆದ ಒಂದು ವರ್ಷದಿಂದ ‘ಸಮಾಚಾರ’ವನ್ನು ಗಮನಿಸುತ್ತಾ ಬಂದಿದ್ದೇನೆ.

‘ಸಮಾಚಾರ’ ವರ್ಷ ಪೂರೈಸಿದೆ. ವೆಬ್ ಸೈಟ್ ಆರಂಭಿಸುವ ಮೊದಲು ಬರವಣಿಗೆಯೇ ನಮ್ಮ ಬಂಡವಾಳ, ಬ್ರೇಕಿಂಗ್ ನ್ಯೂಸ್ ಹಿಂದೆ ಬೀಳಲ್ಲ ಎಂದು ಹೇಳಿದ್ದು ಇನ್ನೂ ನೆನಪಿದೆ. ಇಂಟರ್ ನೆಟ್ ನಲ್ಲಿ ದೊಡ್ಡ ಲೇಖನಗಳನ್ನು ಜನರು ಓದೋಲ್ಲ ಎಂಬ ಮಾತನ್ನು ‘ಸಮಾಚಾರ’ ಸುಳ್ಳು ಮಾಡಿದೆ. ಬ್ರೇಕಿಂಗ್ ನ್ಯೂಸ್ ನಾವೇ ಮೊದಲು ಕೊಡಬೇಕು ಎಂಬ ಹಪಹಪಿಗೆ ಎಂದೂ ‘ಸಮಾಚಾರ’ ಅಂಟಿಕೊಂಡಂತೆ ಕಂಡು ಬರಲಿಲ್ಲ. ಆದರೆ, ಸುದ್ದಿಯ ಹಿಂದಿರುವ ಸತ್ಯವನ್ನು ನ್ಯಾಯಯುತವಾಗಿ ಹೇಳುವ ರೀತಿಯನ್ನು ಓದುಗರು ಒಪ್ಪಿದ್ದಾರೆ. ಆದ್ದರಿಂದ, ವಿಶ್ಲೇಷಣಾತ್ಮಕ ಲೇಖನಗಳಿಗೆ ಬೇಡಿಕೆ ಹೆಚ್ಚಿದೆ. ಬರವಣಿಗೆ ಮೂಲಕವೇ ಓದುಗರನ್ನು ಪಡೆಯಬಹುದು ಎಂಬುದಕ್ಕೆ ‘ಸಮಾಚಾರ’ದ ಸಾಧನೆಯೇ ಸಾಕ್ಷಿ.

ದಿನಕ್ಕೆ ಹತ್ತು-ಹಲವು ಪೋಸ್ಟ್ ಹಾಕಬೇಕು, ಆಕರ್ಷಕ ಫೋಟೋ ಬೇಕು, ಸಾಮಾಜಿಕ ಜಾಲ ತಾಣದಲ್ಲಿ ಭರ್ಜರಿ ಪ್ರಚಾರ ಮಾಡಬೇಕು, ದಿನಕ್ಕೆ ಕನಿಷ್ಠ ಮೂರು ಬಾರಿ ಹೆಡ್ ಲೈನ್ ಬದಲಾಯಿಸಬೇಕು ಮುಂತಾದ ಡಿಜಿಟಲ್ ಪತ್ರಿಕೋದ್ಯಮ ಪಾಲಿಸಿಕೊಂಡು ಬಂದ ಕಟ್ಟು ಕಟ್ಟಲೆಗಳನ್ನು, ಸಂಪ್ರದಾಯಗಳನ್ನು ಮುರಿದಿದ್ದು ‘ಸಮಾಚಾರ’. ಹೀಗಾಗಿಯೇ ಇದು, Purely Unconventional.

ಕನ್ನಡದ ಮಟ್ಟಿಗೆ ಡಿಜಿಟಲ್ ಪತ್ರಿಕೋದ್ಯಮಕ್ಕೆ ಓದುಗರು ಕಡಿಮೆಯೇ. ಜನರು ಕೇವಲ ಬ್ರೇಕಿಂಗ್ ನ್ಯೂಸ್ ಓದಲು ವೆಬ್ ಸೈಟ್ ಓದುತ್ತಾರೆ ಎಂಬ ನಂಬಿಕೆ ಇತ್ತು. ಇದನ್ನು ಸುಳ್ಳು ಮಾಡಿದ್ದು ‘ಸಮಾಚಾರ’ದ ಬರಹಗಳು. ಸುದ್ದಿ, ಅದರ ಅಂತರಾಳ, ಸುದ್ದಿಯಾಚೆಗಿನ ಸತ್ಯವನ್ನು ಜನರ ಮುಂದೆ ನೇರವಾಗಿ ಇಟ್ಟು, ಅದರಿಂದಲೇ ಓದುಗರನ್ನು ಸಂಪಾದಿಸಿದೆ. ಬ್ರೇಕಿಂಗ್ ನ್ಯೂಸ್ ಹಿಂದೆ ಓಡದಿದ್ದರೂ, ಜನರ ಬೇಡಿಕೆಯಲ್ಲಿ ಇದೆ ಎಂಬುದಕ್ಕೆ ಒಂದು ವರ್ಷದ ಹಾದಿಯೇ ಸಾಕ್ಷಿ.

‘ಸಮಾಚಾರ.ಕಾಂ’ ಯಾರದ್ರಿ?, ದುಡ್ಡು ಹಾಕಿರೋದು ಯಾರು?, ಇವೆಲ್ಲ ಸುಮ್ನೆ ಕೆಲವು ದಿನ ಮಾತ್ರ… ಒಬ್ಬರೇ ಬರೀತಾರಾ?, ಆದಾಯ ಹೆಂಗೆ ಬರುತ್ತೆ? ಮುಂತಾದ ಪ್ರಶ್ನೆಗಳನ್ನು ಹಲವು ಜನರು ನನ್ನ ಬಳಿ ಕೇಳಿದ್ದಾರೆ. ಅದೇ ವೇಳೆ ‘ಸಮಾಚಾರ’ದಲ್ಲಿ ಡಿಟೇಲ್ ಆಗಿ ಬರೆದಿದ್ದಾರೆ. ಮಣಿಪುರದಲ್ಲಿ ಸಮಾಚಾರದವ್ರು ಇದಾರಾ?, ಕೆ.ಜೆ.ಜಾರ್ಜ್ ಬಗ್ಗೆ ಅಷ್ಟು ಡಿಟೇಲ್ ಅವರಿಗೆ ಹೆಂಗೆ ಸಿಗುತ್ತೆ? ಅಂತ ಅಚ್ಚರಿ ವ್ಯಕ್ತಪಡಿಸಿದವರೂ ಇದ್ದಾರೆ.

ಬರವಣಿಗೆ ಮೂಲಕ ಓದುಗರನ್ನು ಬಳಗವನ್ನು ಸೃಷ್ಟಿಸಬಹುದು ಎಂಬುದಕ್ಕೆ ‘ಸಮಾಚಾರ’ದ ಸಾಧನೆ ಕಣ್ಣ ಮುಂದಿದೆ. ಬಿಡುವು ಮಾಡಿಕೊಂಡು ದಿನಕ್ಕೊಮ್ಮೆ ಓದಬೇಕಾದ ಕನ್ನಡ ಸುದ್ದಿತಾಣ ‘ಸಮಾಚಾರ’ . ಮುಂದಿನ ಬಾರಿ ಯಾರಾದರೂ ಸಿಕ್ಕಾಗ, ಏನ್ರೀ ಸಮಾಚಾರ? ಎಂದು ಮಾತಾಡುವಾಗ ‘ಸಮಾಚಾರ.ಕಾಮ್’ ನೆನಪಾಗದಿದ್ದರೆ ಕೇಳಿ.

ವರ್ಷ ಪೂರೈಸಿದ ಸಂತಸದಲ್ಲಿರುವ ‘ಸಮಾಚಾರ.ಕಾಮ್’ ಬಳಗಕ್ಕೆ ಅಭಿನಂದನೆಗಳು; ಆಲ್ ದಿ ಬೆಸ್ಟ್.


*ಶೃತಿ ನೆಲಮಾಕನಹಳ್ಳಿ, ವಿದ್ಯಾರ್ಥಿ ನಾಯಕಿ

shruthi-sfi-1

ಪತ್ರಿಕಾ ರಂಗವನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆದರೆ ಪ್ರಸ್ತುತ ಪತ್ರಿಕಾ ರಂಗವು ಪತ್ರಿಕಾ+ಉದ್ಯಮವಾಗಿ ಮಾರ್ಪಾಟಾಗಿದೆ. ಕೇವಲ ಲಾಭದಾಸೆಗೆ ಪತ್ರಿಕಾ ಧರ್ಮವನ್ನು ಮರೆತು ಟಿ.ಆರ್.ಪಿ.ಯ ಸುತ್ತ ಸುತ್ತುತ್ತಿವೆ. ರಾಜಕೀಯ ಪಕ್ಷಗಳ ಪ್ರತಿನಿಧಿಯಂತೆ ವರ್ತಿಸುತ್ತಾ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತಿವೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಮಾಧ್ಯಮಗಳ ಪಾತ್ರವೇನು? ಎಂಬ ಪ್ರಶ್ನೆಯನ್ನಿಟ್ಟು ಹುಡುಕುತ್ತಿರುವಾಗ, ಈ ಮಾಧ್ಯಮಗಳಿಗೆ ಪರ್ಯಾಯವಾಗಿ ಹೊಸತನವನ್ನು ಮೈಗೂಡಿಸಿಕೊಂಡು ‘ಸಮಾಚಾರ ಡಾಟ್ ಕಾಮ್’ ವೆಬ್ ಪತ್ರಿಕೆಯು ಮೂಡಿಬರುತ್ತಿದೆ.

ಪ್ರತಿನಿತ್ಯ ಕ್ರೌರ್ಯದ ಅತಿರೇಕ, ಮೂಢನಂಬಿಕೆಗಳಂತಹ ಕಾರ್ಯಕ್ರಮಗಳನ್ನು, ದುಡ್ಡಿಗಾಗಿ ಸುದ್ದಿ ಮಾಡುವಂತಹ ಮಾಧ್ಯಮಗಳಿಂದಾಚೆಗೆ ವೀಕ್ಷಕರನ್ನು ಮತ್ತೊಂದು ಕಡೆಗೆ ವಾಲುವಂತೆ ಮಾಡಿದ್ದು ಆನ್‍ಲೈನ್ ಮೂಲಕ ಪ್ರಸಾರವಾಗುತ್ತಿರುವ ‘ಸಮಾಚಾರ’. ನಾಡಿನ ಪ್ರಜ್ಞಾವಂತರಿಗೆ ಮಾಧ್ಯಮಗಳ ಬಗ್ಗೆ ಆಶಾಭಾವನೆ ಇಟ್ಟುಕೊಳ್ಳುವ, ಮಾದ್ಯಮಗಳ ಮೇಲೆ ಪ್ರೀತಿ ಇಟ್ಟುಕೊಂಡು ರಾಜಕೀಯ, ಹೋರಾಟಗಳ ಸುದ್ದಿಗಳನ್ನು, ದೇಶ-ವಿದೇಶಗಳ ಪ್ರಸ್ತುತ ಸುದ್ದಿಗಳನ್ನು ಜನರಿಗೆ ತಲುಪುವಲ್ಲಿ ‘ಸಮಾಚಾರ’ದ ಕಾರ್ಯ ಅಭಿನಂದನೀಯ.

‘ಸಮಾಚಾರ’ ಆರಂಭಗೊಂಡು 1 ವರ್ಷ ತುಂಬುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಚಾರ ಡಾಟ್ ಕಾಮ್‍ನಂತಹ ಮಾದ್ಯಮಗಳು ತಮ್ಮ ನ್ಯಾಯಯುತ ಮತ್ತು ಸತ್ಯಾಧಾರಿತ ಸುದ್ದಿಗಳನ್ನು ಇನ್ನಷ್ಟು ಜನರಿಗೆ ಮುಟ್ಟಿಸಲಿ ಎಂದು ಶುಭಕೋರುತ್ತೇನೆ.


*ಮುರಳಿ ಮೋಹನ್ ಕಾಟಿ, ಪ್ರಾಧ್ಯಪಕರು- ಬದುಕು ಕಮ್ಯುನಿಟಿ ಕಾಲೇಜು.

murali-mohan-kati-1‘ಸಮಾಚಾರ’ ಕನ್ನಡ ಪತ್ರಿಕೋದ್ಯಮದ ಹಲವು ಕೊರತೆಗಳನ್ನು ನೀಗಿಸಿದೆ. ಹಿಂದೆ ಎಷ್ಟೋ ಸಲ ಇಂಗ್ಲಿಷ್ನಲ್ಲಿ ಕೆಲವು ಸುದ್ದಿ ವೆಬ್‌ಸೈಟ್, ಪತ್ರಿಕೆಗಳನ್ನು ಓದುವಾಗ ಛೇ ಕನ್ನಡದಲ್ಲೂ ಕೂಡ ಇವೆಲ್ಲ ಲಭ್ಯವಾದರೆ ಎಷ್ಟು ಉಪಯುಕ್ತ ಎಂದು ಅಂದುಕೊಂಡಿದ್ದೆ. ಮಾಧ್ಯಮ ಅಧ್ಯಯನ ಮಾಡುವ ಯುವಜನರು ಓದಲೇಬೇಕಾದ ಬರಹಗಳು ಕನ್ನಡದಲ್ಲಿ ಇಲ್ಲವಲ್ಲ ಎಂದು ಪರಿತಪಿಸಿದ್ದೆ. ಕೊನೆಗೂ ಆ ಕೊರತೆಗಳನ್ನು ನೀಗಿಸುವಲ್ಲಿ ‘ಸಮಾಚಾರ’ ಅತ್ಯುತ್ತಮ ಪ್ರಯತ್ನ.

‘ಸಮಾಚಾರ’ ಸಮಕಾಲೀನ ವಿದ್ಯಮಾನಗಳನ್ನು ನೋಡುವ ಹಾಗು ಪ್ರಸ್ತುತ ಪಡಿಸುವ ಕ್ರಮ ,ಭಾಷೆ ಹಾಗು ನಿಖರತೆ ಇತರ ಮಾಧ್ಯಮಗಳಿಗೆ ಮಾದರಿಯಾಗಿ ನಿಲ್ಲುತ್ತದೆ. ಹಾಗೆ ಮಾಧ್ಯಮ ಜಗತ್ತಿನ ಕುರಿತಾದ ಬೆಳವಣಿಗೆಗಳ ಕುರಿತು ಬರೆಯುವ ವರದಿಗಳು ಮಾಧ್ಯಮದ ಎಚ್ಚರದ ದನಿಯಾಗಿ ರೂಪುಗೊಂಡಿದೆ.

ಕನ್ನಡದಲ್ಲಿ ಅಂತರಾಷ್ಟ್ರೀಯ ವಿಚಾರಗಳ ಕುರಿತ ಸುದ್ದಿ ಹಾಗು ವಿಶ್ಲೇಷಣೆಗಳು ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ವಿರಳ. ಪ್ರಕಟವಾಗುವ ಬಹುತೇಕ ಸುದ್ದಿಗಳು ನ್ಯೂಸ್ ಎಜೆನ್ಸಿಯ ವರದಿ ಭಾಷಾಂತರ ಮಾತ್ರವಾಗಿರುತ್ತದೆ. ಅದರೆ ‘ಸಮಾಚಾರ’ದ ವರದಿಗಳು,ವಿಶ್ಲೇಷಣೆ ಕನ್ನಡ ಜಗತ್ತಿಗೆ ಅತ್ಯಂತ ಜರೂರಿನದಾಗಿತ್ತು. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಗ್ರಾಮರ್ ಅನ್ನು ಇದು ನೀಡಿದೆ.

ಪೋಕಸ್, ಪಾಸಿಟಿವ್, ಮೀಡಿಯಾ ಇವು ನನ್ನ ಅಂಕಣಗಳು . ಹಳ್ಳಿ-ನಗರ, ಗಂಡು-ಹೆಣ್ಣು, ವಿಚಾರಗಳಲ್ಲಿ ಪೂರ್ವಾಗ್ರಹ ಪೀಡಿತ, ಸರಳೀಕೃತ ಗ್ರಹಿಕೆಗಳಿಂದ ಹೊರಗಿರುವ ಬರಹಗಳು ಮತ್ತೆ ಮತ್ತೆ ‘ಸಮಾಚಾರ’ವನ್ನು ತೆರೆದು ನೋಡುವಂತೆ ಮಾಡುತ್ತವೆ. ಪ್ರಭುತ್ವ ತನಗೆ ಬೇಕಾದ “ಜನಾಭಿಪ್ರಾಯ”ವನ್ನು ಮಾಧ್ಯಮಗಳ ಮೂಲಕ ಉತ್ಪಾದಿಸುತ್ತಿರುವ ಈ‌ ಸಂದರ್ಭದಲ್ಲಿ ನ್ಯಾಯ ಹಾಗು ನೆಮ್ಮದಿಯನ್ನು ನಿರೀಕ್ಷಿಸುತ್ತಿರುವ ಜನ ಸಮುದಾಯಕ್ಕೆ ‘ಸಮಾಚಾರ’ದ ಪ್ರಯತ್ನಗಳು ಅತೀ ಅವಶ್ಯಕ. ‘ಸಮಾಚಾರ’ ಕೋಟಿ ಕೋಟಿ ಮನಸ್ಸುಗಳನ್ನು ತಲುಪಲಿ ಎಂದು ಅಶಿಸುತ್ತೇನೆ.


 

Leave a comment

FOOT PRINT

Top