An unconventional News Portal.

Bullet to Ballot: ಗದ್ದರ್ ಎಂಬ ಕ್ರಾಂತಿಕವಿಯೂ; ‘ಆಧ್ಯಾತ್ಮಿಕ ಪ್ರಜಾಪ್ರಭುತ್ವ’ದ ತುಡಿತವೂ…

Bullet to Ballot: ಗದ್ದರ್ ಎಂಬ ಕ್ರಾಂತಿಕವಿಯೂ; ‘ಆಧ್ಯಾತ್ಮಿಕ ಪ್ರಜಾಪ್ರಭುತ್ವ’ದ ತುಡಿತವೂ…

“ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿದರೆ ಮಾತ್ರವೇ ಮಾರ್ಕ್ಸ್‌ಸಿಸಂ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸಬಲ್ಲದು…”

ಹೀಗೊಂದು ಹೇಳಿಕೆ ನೀಡುವ ನೀಡುವ ಅಚ್ಚರಿಗೆ ಕಾರಣರಾಗಿರುವವರ ಹೆಸರು ಗದ್ದರ್ ಅಲಿಯಾಸ್ ಗುಮ್ಮಡಿ ವಿಠಲ್ ರಾವ್. ಅದು 90ರ ದಶಕ. ಕರ್ನಾಟಕದ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ನಕ್ಸಲ್ ಚಳವಳಿ ಅಬ್ಬರದಲ್ಲಿದ್ದ ದಿನಗಳು. ದೊಡ್ಡ ಮಟ್ಟದಲ್ಲಿ ಸರಕಾರವನ್ನು ನಡುಗಿಸುತ್ತಿದ್ದ ಶಶಸ್ತ್ರ ಹೋರಾಟಕ್ಕೆ ಸಾಂಸ್ಕೃತಿಕ ಪ್ರಚಾರದ ರಾಯಭಾರಿಯಾಗಿದ್ದವರು ಗದ್ದರ್. ‘ಜನನಾಟ್ಯ ಮಂಡಳಿ’ ಎಂಬ ಸಂಘಟನೆ ಅಡಿಯಲ್ಲಿ ಗದ್ದರ್, ಒಂದಷ್ಟು ಕಾಲ ಭೂಗತವಾಗಿದ್ದುಕೊಂಡು, ನಂತರ ಮುಖ್ಯವಾಹಿನಿಯಲ್ಲಿ ಬಂದೂಕಿನ ನಳಿಕೆಯಿಂದ ಸಿಡಿಯುವ ಗುಂಡುಗಳು ಸಮಾಜದಲ್ಲಿ ಸಮಾನತೆಯನ್ನು ತರಬಲ್ಲವು ಎಂಬ ಪ್ರಚಾರದಲ್ಲಿ ತೊಡಗಿದ್ದರು. ಇವತ್ತು ಅದೇ ಗದ್ದರ್ ದೇವಸ್ಥಾನಗಳನ್ನು ಅಲೆಯುತ್ತಿದ್ದಾರೆ. ಪೂಜಾರಿಗಳ ಮುಂದೆ ಮಂಡಿಯೂರಿ ಕುಳಿತು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ ಬಳಿ ಭೂಮಿಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ತಮ್ಮ ಗತಕಾಲದ ನಡವಳಿಕೆಗಳಿಗೆ, ಹೇಳಿಕೆಗಳಿಗೆ ವ್ಯತಿರಿಕ್ತವಾದ ಆಧ್ಯಾತ್ಮಿಕ ನೆಲೆಯನ್ನು ಅಪ್ಪಿಕೊಂಡಿದ್ದಾರೆ. 71ರ ಇಳೀ ವಯಸ್ಸಿನಲ್ಲಿ ಯಾಕೆ ಇಂತಹದೊಂದು ಬದಲಾವಣೆ?

ಹೀಗೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ‘ಸಮಾಚಾರ’ ತೆಲಂಗಾಣದ ಹಿರಿಯ ಪತ್ರಕರ್ತರು, ಎಡಪಕ್ಷದ ನಾಯಕರು ಮತ್ತು ಸ್ವತಃ ಗದ್ದರ್ ಅವರನ್ನು ಮಾತನಾಡಿಸಿತು. ವ್ಯಕ್ತಿಯೊಬ್ಬನ ವೈಚಾರಿಕ ನೆಲೆಯಲ್ಲಿ ಪಲ್ಲಟಗಳು ಹೇಗೆಲ್ಲಾ ಸಂಭವಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಇದು.

ದಲಿತ ಯೋಗಿ:

ಯವ್ವನದಲ್ಲಿ ಗದ್ದರ್.

ಯವ್ವನದಲ್ಲಿ ಗದ್ದರ್.

1949ರಲ್ಲಿ ಸೇಸಯ್ಯ ಮತ್ತು ಲಚುಮಮ್ಮ ದಂಪತಿಗಳಿಗೆ ಹುಟ್ಟಿದ ಮಗುಗೆ ಅವರಿಟ್ಟ ಹೆಸರು ವಿಠಲ್ ರಾವ್. ಬಡತನದ ಬೇಗೆಯಲ್ಲಿದ್ದ ದಲಿತ ಕುಟಂಬ ಅದು. ಸೇಸಯ್ಯ ಅವತ್ತಿಗಾಗಲೇ ಅಂಬೇಡ್ಕರ್‌ ಅವರ ವಿಚಾರಗಳಿಗೆ ಆಕರ್ಷಿತರಾಗಿದ್ದರು. ಈ ಕಾರಣಕ್ಕೇ ಏನೋ, ಮಗನನ್ನು ಓದಿಸುವ ಹಂಬಲ ಅವರಿಗಿತ್ತು. ಅವರ ಇಚ್ಚೆಗೆ ಅನುಗುಣವಾಗಿ ಚೆನ್ನಾಗಿಯೇ ಓದಿದ ವಿಠಲ್ ರಾವ್ ಮುಂದೆ ಹೈದ್ರಾಬಾದಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಿಕೊಂಡರು. ಈ ಸಮಯದಲ್ಲಿ ಅವರು ಹೋಟೆಲ್‌ಗಳಲ್ಲಿ ಪಾರ್ಟ್‌ಟೈಮ್ ಉದ್ಯೋಗವನ್ನೂ ಮಾಡುತ್ತಿದ್ದರು. ಹೀಗಿರುವಾಗಲೇ 60ರ ದಶಕದ ಕೊನೆಯ ಭಾಗದಲ್ಲಿ ತಲಂಗಾಣ ರಾಜ್ಯದ ಕೂಗು ಜೋರಾಗಿ ಕೇಳಿಬಂತು. ವೈಚಾರಿಕ ಹಿನ್ನೆಲೆಯ ಕುಟುಂಬದಿಂದ ಬಂದ ವಿಠಲ್ ರಾವ್ ಸಹಜವಾಗಿಯೇ ಆ ಕಡೆಗೆ ಆಕರ್ಷಿತರಾದರು.

ಎಂಜಿನಿಯರಿಂಗ್ ಓದುವಾದ ವಿಠಲ್ ರಾವ್ ಬದುಕನ್ನು, ಆಲೋಚನೆಗಳನ್ನು ಬದಲಾಯಿಸಿದ್ದು ನರಸಿಂಗ ರೆಡ್ಡಿ ಎಂಬ ಕಲಾವಿದ. ‘ಕಲೆ ಜನರಿಗಾಗಿ’ ಎಂಬ ಜನಪ್ರಿಯ ಘೋಷಣೆ ಹಿನ್ನೆಲೆಯಲ್ಲಿ ವಿಠಲ್ ರಾವ್ ತನ್ನಲ್ಲಿದ್ದ ಕಲೆಯನ್ನು ಜನರಿಗಾಗಿ ಮುಡುಪಿಡಲು ಪ್ರೇರಣೆ ನೀಡಿದ್ದು ರೆಡ್ಡಿ. ಈ ಸಮಯದಲ್ಲಿಯೇ ವಿಠಲ್ ರಾವ್ ತಮ್ಮ ಹೆಸರನ್ನು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಗದ್ದರ್ ಪಾರ್ಟಿಯ ನೆನಪಿನಲ್ಲಿ ಗದ್ದರ್ ಎಂದು ಬದಲಾಯಿಸಿಕೊಂಡರು. ಜಾನಪದದ ಹಾಡುಗಳಿಗೆ ಹೊಸ ರೂಪ ನೀಡುವುದು, ಗ್ರಾಮೀಣ ಜನರ ಮಾತುಗಳನ್ನೇ ಹಾಡುಗಳನ್ನಾಗಿ ಪರಿವರ್ತಿಸಿ ಹಾಡುವುದು ಶುರುವಾಯಿತು. ಗದ್ದರ್ ಜನಪ್ರಿಯತೆ ಎಡೆಗೆ ಒಂದೊಂದೆ ಹೆಜ್ಜೆಗಳನ್ನು ಇಡತೊಡಗಿದರು.

ಪೆಂಗ್ವಿನ್ ಪ್ರಕಾಶನ ಹೊರತಂದ, ‘ದಿ ಅನ್‌ಟೋಲ್ಡ್ ಚಾರ್‌ಮಿನಾರ್’ ಎಂಬ ಪುಸ್ತಕದಲ್ಲಿ ಡಿ. ವೆಂಕಟ್ ರಾವ್ ಗದ್ದರ್ ಕುರಿತು ಒಂದು ಲೇಖನವನ್ನು ಬರೆದಿದ್ದಾರೆ. “ರಷ್ಯಾದಲ್ಲಿ ಮಾಕ್ಸಿಂ ಗಾರ್ಕಿಯಂತೆ, ಚೈನಾದಲ್ಲಿ ಕಾದಂಬರಿಕಾರ ಲೂ ಸನ್‌ರಂತೆ ಭಾರತದಲ್ಲಿ ಗದ್ದರ್” ಎಂದವರು ಬಣ್ಣಿಸಿದ್ದಾರೆ. ಅವತ್ತಿಗಾಗಲೇ ಗದ್ದರ್ ಹಾಡುಗಳ ಸುಮಾರು 3 ಲಕ್ಷ ಕ್ಯಾಸೆಟ್‌ಗಳು ಮಾರಾಟವಾಗಿದ್ದವರು ಎಂಬುದು ಗಮನಾರ್ಹ.

ಆಂಧ್ರ ಪ್ರದೇಶದ ದಲಿತ ಚಿಂತಕ ಕಂಚ ಇಲಯ್ಯ ಗದ್ದರ್ ಜನಪ್ರಿಯತೆ ಕುರಿತು ಇನ್ನಷ್ಟು ಒಳನೋಟಗಳನ್ನು ತಮ್ಮ ಪುಸ್ತಕ ‘ಬಫೆಲೋ ರಿಪಬ್ಲಿಕ್‌’ನಲ್ಲಿ ನೀಡುತ್ತಾರೆ. “ಗದ್ದರ್‌ಗಿರುವ ಜನಪ್ರಿಯತೆಗೆ ಅವರು ಚುನಾವಣಾ ರಾಜಕೀಯಕ್ಕೆ ಇಳಿಯಬೇಕಿತ್ತು,” ಎಂದವರು ಹೇಳುತ್ತಾರೆ. ಅವಿಭಜಿತ ಆಂಧ್ರಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ದಲಿತರು ಮತ್ತು ಹಿಂದುಳಿದ ವರ್ಗಗಳ ನಡುವೆ ಕೊಂಡಿಯಾಗಿ ಗದ್ದರ್‌ ಇದ್ದರು ಎಂದು ಅವರು ಗುರುತಿಸುತ್ತಾರೆ. ಆದರೆ ಗದ್ದರ್ ಆಯ್ದುಕೊಂಡ ಹಾದಿ ಬೇರೆಯದ್ದೇ ಆಗಿತ್ತು.

ಭೂಗತ ಜೀವನದಡೆಗೆ:

ಕ್ರಾಂತಿಗೀತೆಯನ್ನು ಹಾಡುತ್ತಿರುವ ಗದ್ದರ್.

ಕ್ರಾಂತಿಗೀತೆಯನ್ನು ಹಾಡುತ್ತಿರುವ ಗದ್ದರ್.

ಅದು 1984. ಸುಮಾರು 9 ವರ್ಷ ಅಲ್ಲಿನ ಕೆನರಾ ಬ್ಯಾಂಕಿನಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದ ಗದ್ದರ್ ವೃತ್ತಿ ಜೀವನಕ್ಕೆ ಪೂರ್ಣ ವಿರಾಮವನ್ನು ಇಟ್ಟರು. ಸಿಪಿಐ (ಎಂಲ್) ಪೀಪಲ್ಸ್ ವಾರ್ ಪಕ್ಷ (ಇವತ್ತಿನ ಸಿಪಿಐ- ಮಾವೋವಾದಿ)ದ ಸಾಂಸ್ಕೃತಿಕ ಸಂಘಟನೆ ‘ಜನನಾಟ್ಯ ಮಂಡಳಿ’ ಸೇರಿಕೊಂಡರು. ಆಂಧ್ರ ಪ್ರದೇಶದ ಹಳ್ಳಿಗಳಲ್ಲಿ ಗದ್ದರ್ ಹಾಡುಗಳು ಭಾರಿ ಜನಪ್ರಿಯತೆ ಕಂಡುಕೊಳ್ಳಲು ಬಹಳ ಸಮಯವೇನೂ ಬೇಕಾಗಲಿಲ್ಲ. 1985ರಲ್ಲಿ ಆಂಧ್ರ ಪೊಲೀಸರು ಗದ್ದರ್ ಮನೆಯ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಗದ್ದರ್ ಭೂಗತರಾದವರು ಮತ್ತೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಮುಂದಿನ ಐದು ವರ್ಷಗಳ ಕಾಲ ಆಂಧ್ರ, ಒರಿಸ್ಸಾ, ಬಿಹಾರಗಳ ಗಡಿ ಭಾಗಗಳ ಹಳ್ಳಿಗಳಲ್ಲಿ ಗದ್ದರ್ ಹಾಡುಗಳ ಮೊರೆತ ಕೇಳಿ ಬರುತ್ತಿತ್ತು.

1990ರಲ್ಲಿ ಆಂಧ್ರದಲ್ಲಿ ಮರಿ ಚೆನ್ನಾ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂತು. ಈ ಸಮಯದಲ್ಲಿ ಶಶಸ್ತ್ರ ಹೋರಾಟ ನಡೆಸುತ್ತಿದ್ದ ನಕ್ಸಲೀಯರನ್ನು ಮತ್ತು ಅವರ ಬೆಂಬಲಿಗರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ನಡೆಯಿತು. ಇದರ ಭಾಗವಾಗಿ ಗದ್ದರ್ ಭೂಗತ ಜೀವನ ಅಂತ್ಯಗೊಳಿಸಿ ಜನರ ಮುಂದೆ ಬಂದರು. ಹೈದ್ರಾಬಾದಿನ ನಿಝಾಮ ಕಾಲೇಜಿನ ಮೈದಾನದಲ್ಲಿ ಅವರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಅಂದು ಗದ್ದರ್ ನೋಡಲು ಬಂದ ಜನರ ಸಂಖ್ಯೆಯೇ ಸುಮಾರು 2 ಲಕ್ಷ ದಾಟಿತ್ತು. ಅದು ಭೂಗತವಾಗಿದ್ದುಕೊಂಡು ಗದ್ದರ್ ಪಡೆದುಕೊಂಡಿದ್ದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

2004ರಲ್ಲಿ ವೈ. ಎಸ್. ರಾಜಶೇಖರ್ ರೆಡ್ಡಿ ಸರಕಾರ ನಕ್ಸಲೀಯರ ಜತೆ ‘ಶಾಂತಿ ಮಾತುಕತೆ’ಗೆ ಮುಂದಾಯಿತು. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಶನೆಯನ್ನು ಸರಕಾರ ಈಡೇರಿಸುವ ಭರವಸೆ ನೀಡಿತು. ಈ ಸಮಯದಲ್ಲಿ ನಕ್ಸಲೀಯರು ಮತ್ತು ಸರಕಾರದ ನಡುವೆ ಸಂಧಾನಕಾರರಾರಲ್ಲಿ ಗದ್ದರ್ ಕೂಡ ಒಬ್ಬರಾಗಿದ್ದರು. ಆದರೆ ಮಾತುಕತೆ ಮುರಿದು ಬಿದ್ದು ಮತ್ತೆ ನಕ್ಸಲ್‌ ಮತ್ತು ಪೊಲೀಸರ ನಡುವೆ ಅಶಾಂತಿ ತಲೆದೋರಿದು. ಗದ್ದರ್ ನಿಧಾನವಾಗಿ ‘ಬುಲೆಟ್’ನಿಂದ ದೂರ ಸರಿಯಲು ಶುರುಮಾಡಿದರು.

ಇದಾದ ನಂತರ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ಹುಟ್ಟಿಕೊಳ್ಳುತ್ತಲೇ ಗದ್ದರ್ ತಮ್ಮ ಬೆಂಬಲವನ್ನು ನೀಡಿದರು. ಜನರನ್ನು ಸಂಘಟಿಸುವ ಕೆಲಸ ಶುರುಮಾಡಿದರು. ಅತ್ತ ಕಾಡಿಗೆ ಮರಳಿದ ನಕ್ಸಲೀಯರಿಗೂ ಗದ್ದರ್‌ಗೂ ನಡುವಿನ ಬಂಧವೂ ಕಡಿಮೆಯಾಗಿತ್ತು. ಹೀಗಾಗಿ ಗದ್ದರ್ ನಾಡಿನಲ್ಲಿಯೇ ತಮ್ಮ ಹೋರಾಟವನ್ನು ತಮ್ಮದೇ ಆದ ಮಾದರಿಯಲ್ಲಿ ಮುಂದುವರಿಸಿದರು. ತೆಲಂಗಾಣ ರಾಜ್ಯ ಸ್ಥಾಪನೆ ನಂತರ ಕೆಸಿಆರ್‌ ನೇತೃತ್ವದ ಸರಕಾರ ಅಧಿಕಾರ ಬರುತ್ತಲೇ ಗದ್ದರ್ ಮುಖ್ಯಮಂತ್ರಿಗೆ ಹತ್ತಿರಾದರು. ‘ಗ್ರೇಟ್ ಆಂಧ್ರ’ ಎಂಬ ವೆಬ್‌ ತಾಣವೊಂದು ಡಿಸೆಂಬರ್‌, 2016ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ‘ಗದ್ದರ್ ಕೆಸಿಆರ್‌ ಬಳಿ ತಮ್ಮ ಅಗಲಿದ ಮಗನ ಹೆಸರಿನಲ್ಲಿ ಜಾಗಕ್ಕಾಗಿ ಬೇಡಿಕೆ ಮುಂದಿಟ್ಟರು. ಕೆಸಿಆರ್‌ ಸರಕಾರವನ್ನು ಬೆಂಬಲಿಸಿ ಮಾತನಾಡಿದರು.’

ಇದೀಗ 71ನೇ ಇಳೀ ವಯಸ್ಸಿನಲ್ಲಿ ಗದ್ದರ್ ದೇವಸ್ಥಾನಗಳನ್ನು ಸುತ್ತಲು ಶುರುಮಾಡಿದ್ದಾರೆ. “ಬುಲೆಟ್‌ ಬಿಟ್ಟಾಕಿ ಬ್ಯಾಲೆಟ್‌ ಮೂಲಕ ಬದಲಾವಣೆಗೆ ಗದ್ದರ್ ಮನಸ್ಸು ಮಾಡಿದ್ದಾರೆ. ಎರಡು ದಿನಗಳ ಹಿಂದೆ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆಯಲ್ಲಿ ಸಿಕ್ಕಿದವರು ಇದನ್ನೇ ಹೇಳಿದರು. ಜನ ಏನೇ ಮಾಡಿದರೂ ಧಾರ್ಮಿಕ ನಂಬಿಕೆಗಳಿಂದ ಹೊರಬರುತ್ತಿಲ್ಲ. ಹೀಗಾಗಿ ಅವರ ಮಟ್ಟಕ್ಕೆ ಇಳಿಯಬೇಕು ಎಂಬುದು ಅವರ ಹೊಸ ಆಲೋಚನೆಯಾಗಿದೆ,” ಎನ್ನುತ್ತಾರೆ ಸಿಪಿಐ ತೆಲಂಗಾಣ ರಾಜ್ಯ ಸಮಿತಿಯ ಕಾರ್ಯದರ್ಶಿ ತಾಡಾ ವೆಂಕಟ ರೆಡ್ಡಿ. ಗದ್ದರ್ ಅವರಲ್ಲಾಗಿರುವ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಿರುವ ರೆಡ್ಡಿ, ಭಿನ್ನಾಭಿಪ್ರಾಯಗಳ ಆಚೆಗೆ ಚುನಾವಣಾ ರಾಜಕೀಯದ ಬಗೆಗೆ ಅವರ ಇತ್ತೀಚಿನ ಆಸಕ್ತಿಗಳನ್ನು ಸ್ವಾಗತಿಸುತ್ತಿದ್ದಾರೆ.

“ಗದ್ದರ್ ಆಲೋಚನೆ ದೇವಸ್ಥಾನಗಳಿಗೆ ಮಾತ್ರ ಸೀಮಿತ ಅಂತ ಅನ್ನಿಸುವುದಿಲ್ಲ. ಅವರೇ ಒಂದು ರಾಜಕೀಯ ಶಕ್ತಿ. ಹೊಸ ರಾಜಕೀಯ ಪಕ್ಷ ಕಟ್ಟಬಹುದು ಎಂಬ ಮಾತುಕತೆ ಇದೆ,” ಎನ್ನುತ್ತಾರೆ ‘ಆಂಧ್ರ ಪ್ರಭ’ದ ಸಿಟಿ ಬ್ಯುರೋ ಚೀಫ್ ಶಾಮ್ ಸುಂದರ್ ರೆಡ್ಡಿ.

“ಗದ್ದರ್ ರಾಜಕೀಯ ಪಕ್ಷ ಕಟ್ಟುವುದಿಲ್ಲ. ಬದಲಿಗೆ ಪ್ರಗತಿಪರವಾಗಿರುವ ರಾಜಕೀಯ ಶಕ್ತಿಗಳಿಗೆ ಬೆಂಬಲ ನೀಡಲಿದ್ದಾರೆ,” ಎಂಬುದು ತಾಡಾ ವೆಂಕಟ ರೆಡ್ಡಿ ಅವರ ಅಭಿಪ್ರಾಯ.

ಈ ಬೆಳವಣಿಗಳ ಆಚೆಗೆ, ತಮ್ಮ ಮೇಲೆ ನಡೆದ ಹತ್ಯಾ ಯತ್ನದಲ್ಲಿ ಬದುಕುಳಿದ, ಇವತ್ತಿಗೂ ದೇಹದಲ್ಲಿ ಒಂದು ಗುಂಡನ್ನು ಉಳಿಸಿಕೊಂಡೇ ಓಡಾಡುತ್ತಿರುವ ಗದ್ದರ್ ಜೀವನ ಒಂದು ವೃತ್ತ ಪೂರ್ಣಗೊಳಿಸಿದೆ. ಅವರಲ್ಲಿನ ಹೋರಾಟದ ಶಕ್ತಿ ಇನ್ನೂ ಜೀವಂತವಾಗಿದೆ. ಅದರ ಮೂಲ ಆಲೋಚನೆ ಬದಲಾಗಿದ್ದರೂ, ಮನುಷ್ಯನ ಕ್ರೀಯಾಶೀಲತೆಯಲ್ಲಿ ಕೊರತೆಯಾಗಿಲ್ಲ. ಆದರೆ ಆಧ್ಯಾತ್ಮಿಕತೆ ಕಡೆಗಿನ ಅವರ ಸೆಳೆತವನ್ನು ವಿವರಿಸಲು ಸಾಧ್ಯವಾಗದೇ ಅವರ ಸುತ್ತಮುತ್ತಲಿನವರು ಗೊಂದಲಕ್ಕೆ ಒಳಗಾಗಿದ್ದಾರೆ. ಈ ಕುರಿತು ಸ್ವತಃ ಗದ್ದರ್ ಏನಂತಾರೆ?

ಅವರೊಟ್ಟಿಗೆ ‘ಸಮಾಚಾರ’ ನಡೆಸಿದ ಮಾತುಕತೆ ಇಲ್ಲಿದೆ:

gaddar-10

ಸಮಾಚಾರ: ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿದರೆ ಮಾತ್ರವೇ ಮಾರ್ಕ್ಸ್‌ಸಿಸಂ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸಬಲ್ಲದು… ಎಂಬ ನಿಮ್ಮ ಹೇಳಿಕೆಯನ್ನು ಸ್ವಲ್ಪ ವಿವರಿಸುತ್ತೀರಾ?

ಗದ್ದರ್: ಹಾಗಂತ ನಾನೆಲ್ಲಿ ಹೇಳಿದ್ದೇನೆ?

ಸಮಾಚಾರ: ರಾಷ್ಟ್ರೀಯ ಪತ್ರಿಕೆಯೊಂದು ನಿನ್ನ ಆಧ್ಯಾತ್ಮದೆಡೆಗಿನ ಪಯಣದ ಕುರಿತು ವರದಿಯೊಂದು ಪ್ರಕಟಿಸಿದೆ. ಅದು ಕರ್ನಾಟಕದಲ್ಲಿಯೂ ಚರ್ಚೆಗೆ ಎಡೆ ಮಾಡಿಕೊಟ್ಟಿದೆ… 

ಗದ್ದರ್: ಅದನ್ನು ಬರೆದವನು ಹಿಂದೆ ನನ್ನ ಜತೆಯಲ್ಲಿಯೇ ಕ್ರಾಂತಿಕಾರಿ ಹೋರಾಟದಲ್ಲಿದ್ದ. ಇವತ್ತು ಅವನು ಮತ್ತು ಅವನ ಸಹೋದರ ವೆಂಕಯ್ಯ ನಾಯ್ಡುಗೆ ಸಹಾಯಕರಾಗಿದ್ದಾರೆ. ಕಳೆದ ವಾರ ಆತ ಕರೆ ಮಾಡಿದಾಗ ಸ್ಪಷ್ಟವಾಗಿ ಹೇಳಿದ್ದೆ. ನಾನೊಬ್ಬ ದಲಿತ. ನನ್ನನ್ನು ದೇವಸ್ಥಾನದ ಒಳಗೆ ಬಿಟ್ಟುಕೊಂಡಿದ್ದಾರೆ. ಅದೇ ದೊಡ್ಡ ಬದಲಾವಣೆ. ನಾನು ಯಾದಗೀರ್ ಗುಡ್ಡದ ದೇವಸ್ಥಾನದಲ್ಲಿ ಹಾಡಿದ ಹಾಡನ್ನು ನೀವೊಮ್ಮೆ ಕೇಳಿ. ನಾನು ದೇವರನ್ನೂ ಪ್ರಶ್ನೆ ಮಾಡಿದ್ದೇನೆ. ಅದೆಲ್ಲವನ್ನೂ ಪಕ್ಕಕ್ಕಿಟ್ಟು ಗದ್ದರ್ ಆಧ್ಯಾತ್ಮದೆಡೆ ಹೋದ ಎಂದರೆ ಅದೆಂತಹ ಪತ್ರಿಕೋದ್ಯಮ. ಸೆನ್ಸೇಷನ್ ಮಾಡುವ ಪ್ರಯತ್ನ ಅಷ್ಟೆ. ನಾನು ಈಗಲೂ ಹೇಳುತ್ತಿದ್ದೇನೆ, ‘ಸ್ಪಿರಿಚುಲ್ ಡೆಮಾಕ್ರಸಿ’ ಬೇಕಿದೆ. ಅದು ಮಾತ್ರವೇ ನಮ್ಮ ಮುಂದಿರುವ ಪರಿಹಾರ ಅಂತ.

ಸಮಾಚಾರ: ಏನಿದು ಸ್ಪಿರಿಚುಯಲ್ ಡೆಮಾಕ್ರಿಸಿ ಅಂದರೆ. ನೀವು ದೇವಸ್ಥಾನಗಳ ಭೇಟಿಯನ್ನು ಸಮರ್ಥಿಸಿಕೊಳ್ಳುತ್ತಿದ್ದೀರಾ ಅಂತ ನಿಮ್ಮ ಅಭಿಮಾನಿಗಳಿಗೆ ಅನ್ನಿಸುತ್ತಿದೆಯಲ್ಲಾ? 

ಗದ್ದರ್: ಗದ್ದರ್ ಕುರಿತು ಚರ್ಚೆ ನಡೆಯಲಿ. ಅದರ ಬಗ್ಗೆ ನನ್ನ ಭಿನ್ನಾಭಿಪ್ರಾಯ ಇಲ್ಲ. ನಾನೊಬ್ಬ ದಲಿತ ಕುಟುಂಬದಿಂದ ಬಂದವನು. ಇವತ್ತು ನನ್ನ ಗರ್ಭಗುಡಿಯ ಒಳಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅದು ಬದಲಾವಣೆ ಅಲ್ಲವಾ?

ನನ್ನ ಮನೆಯ ಮುಂದೆ ತುಳಸಿ ಗಿಡ ಇದೆ. ನನ್ನ ಅಜ್ಜಿ ಅದನ್ನು ಪೂಜೆ ಮಾಡುತ್ತಾರೆ. ಹಾಗಂತ ಅವರು ದೇವರನ್ನು ಪೂಜೆ ಮಾಡುವುದಿಲ್ಲ. ಅವರು ತುಳಸಿ ಪೂಜೆ ಮಾಡುವ ನಂಬಿಕೆಯನ್ನು ಮಾವೋವಾದಿಗಳಾಗಲೀ, ಯಾವುದೇ ಸಿದ್ಧಾಂತವಾಗಲಿ ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಆಧ್ಯಾತ್ಮಿಕ ನೆಲೆಯಲ್ಲಿ ಪ್ರಜಾಪ್ರಭುತ್ವವನ್ನು ಕಟ್ಟಬೇಕಿದೆ. ನನ್ನ ಈ ಮಾತುಗಳು, ನನ್ನ ದೇವಸ್ಥಾನಗಳ ಭೇಟಿಗಳು ನಿಜವಾಗಿಯೂ ಬಿಜೆಪಿಯವರಿಗೆ ತಲೆನೋವು ತರಬೇಕು. ಅವರು ಚಿಂತೆಗೆ ಒಳಗಾಗಬೇಕು. ಆದರೆ ನನ್ನ ಜತೆಯಲ್ಲಿ ಇರುವವರು ನನ್ನ ಬಗ್ಗೆ ಮರುಕ ವ್ಯಕ್ತಪಡಿಸುವುದು ಅಚ್ಚರಿ ಅನ್ನಿಸುತ್ತದೆ. ಇರಲಿ, ನನ್ನ ಬಗ್ಗೆ ಚರ್ಚೆ ನಡೆಯಲಿ. ನಾನು ಸಾವಿರಾರು ಜನರನ್ನು ಒಟ್ಟಿಗೆ ಕಡೆದುಕೊಂಡು ಹೋಗುತ್ತಿದ್ದೇನೆ. ಸರಿ ತಪ್ಪುಗಳನ್ನು ಕಾಲ ನಿರ್ಧರಿಸುತ್ತದೆ.

ಸಮಾಚಾರ: ನೀವು ಹೊಸ ಪಕ್ಷ ಕಟ್ಟುತ್ತೀರಿ ಎಂದು ಗಾಳಿ ಸುದ್ದಿ ಇದೆ. ನಿಜನಾ?

ಗದ್ದರ್: ಹೊಸ ಪಕ್ಷ ಕಟ್ಟುತ್ತೇನೆ. ಅದು ಚುನಾವಣೆಯಲ್ಲಿ ಭಾಗವಹಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೋಡಿ, ಇವತ್ತು ಸಮಾಜದಲ್ಲಿ ಹೊಸ ಸಾಮಾಜಿಕ ಸ್ಥರಗಳ ನಿರ್ಮಾಣವಾಗಿವೆ. ಬ್ರಾಹ್ಮಣ್ಯ ಹೊಸ ರೀತಿಯಲ್ಲಿ ನಮ್ಮನ್ನು ಪ್ರವೇಶ ಮಾಡಿದೆ. ಈ ಸಮಯದಲ್ಲಿ ಹೊಸ ತಲೆಮಾರಿನ ಸಾಂಸ್ಕೃತಿಕ ಚಟುವಟಿಕೆಯನ್ನು ಆರಂಭಿಸುತ್ತಿದ್ದೇವೆ. ಅದಕ್ಕಾಗಿ ಹೊಸ ಪಕ್ಷ, ಸಂಘಟನೆ ಕಟ್ಟುತ್ತಿದ್ದೇವೆ. ಈಗಾಗಲೇ ಇಲ್ಲಿ (ತೆಲಂಗಾಣ)ದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ಕುರಿತು ಆಸಕ್ತಿ ಇದ್ದರೆ ಒಮ್ಮೆ ಬನ್ನಿ. ಅದರಾಚೆಗೆ ನನಗೆ ಹೇಳಲು ಏನೂ ಇಲ್ಲ. ಇನ್ನೊಮ್ಮೆ ಸ್ಪಷ್ಟಪಡಿಸುತ್ತೇನೆ; ನಮಗೆ ಬೇಕಿರುವುದು ‘ಸ್ಪಿರಿಚುಯಲ್ ಡೆಮಾಕ್ರಸಿ’. ನಾನು ಸ್ಪಿರಿಚುವಲ್ ಅಲ್ಲ.

Leave a comment

FOOT PRINT

Top