An unconventional News Portal.

‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಜಾರಿ ಹಿಂದಿರುವ ಭನ್ವಾರಿದೇವಿಯ ಭಯಾನಕ ಕತೆ

‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಜಾರಿ ಹಿಂದಿರುವ ಭನ್ವಾರಿದೇವಿಯ ಭಯಾನಕ ಕತೆ

ಇದು ಅತ್ಯಾಚಾರದ ಅವಮಾನವನ್ನ ಮೆಟ್ಟಿ ನಿಂತು ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಧೀರ ಮಹಿಳೆಯ ಯಶೋಗಾಥೆ. ಗುಜ್ಜರ್ ಸಮುದಾಯದ ದಬ್ಬಾಳಿಕೆ ಮಿತಿ ಮೀರಿರುವ ರಾಜಸ್ಥಾನದ ಹಳ್ಳಿಯೊಂದರಲ್ಲಿ ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತುತ್ತಿರುವ ಗಟ್ಟಿಗಿತ್ತಿಯ ಸ್ಫೂರ್ತಿಯ ಕತೆಮಹಿಳೆಯೊಬ್ಬರು ತಮ್ಮ ಜೀವನವನ್ನೇ ಹೋರಾಟದ ಅಸ್ತ್ರವಾಗಿಸಿಕೊಂಡು, ದೇಶದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರನ್ನ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆ ಜಾರಿಯಾಗುವಂತೆ ಮಾಡಿದ ಸಾಹಸ ಕತೆ ಕೂಡ. ಈ ನಿಜ ಜೀವನದ ಕತೆಯ ನಾಯಕಿ ರಾಜಸ್ಥಾನದ ಭನ್ವಾರಿದೇವಿ. ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿ, ನಮ್ಮ ನಿಧಾನಗತಿಯ ಕಾನೂನು ವ್ಯವಸ್ಥೆಯಲ್ಲಿ ಹೋರಾಟ ಮಾಡಿದ ಆಕೆ ಹಲವು ಕಾರಣಗಳಿಗಾಗಿ ಆಧುನಿಕ ಭಾರತ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂತಹ ವ್ಯಕ್ತಿತ್ವ. 

ನಾನು ಭನ್ವಾರಿದೇವಿ. ರಾಜಸ್ಥಾನದ ರಾಜಧಾನಿ ಜೈಪುರದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಭಟೆರಿ ಎಂಬ ಗ್ರಾಮ ನಮ್ಮೂರು. ನಮ್ಮದು ಕೆಳಜಾತಿಯಾದ ಪಾಟರ್ ಸಮುದಾಯಕ್ಕೆ ಸೇರಿದ ಕುಟುಂಬ. ಕೃಷಿ ಮಾಡುತ್ತಿದ್ದ ನಾನು ಹಾಗೂ ನನ್ನ ಪತಿ ಮೋಹನ್ ಲಾಲ್ ಪ್ರಜಾಪತ್ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವು. ನಾನು ರಾಜಸ್ಥಾನ ಸರ್ಕಾರದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಸಾತಿನ್(ಸ್ನೇಹಿತೆ)ಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಗ್ರಾಮಗಳಲ್ಲಿ ನಡೆಯುವ ಬಾಲ್ಯವಿವಾಹಗಳನ್ನ ತಡೆಯುವುದು ನನ್ನ ಕೆಲಸ. ಹೀಗೆ, ನಮ್ಮ ಜೀವನ ಸಾಗುತ್ತಿತ್ತು. ಆದ್ರೆ, ಒಂದು ದಿನ ನನಗೆ ಸರಿಯಾಗಿ ದಿನಾಂಕ ನೆನಪಿಗೆ ಬರುತ್ತಿಲ್ಲ. ಬಹುಶ: ಸೆಪ್ಟೆಂಬರ್ 221992 ಅನ್ನಿಸುತ್ತೆ. ಅಂದು ಆಗ ತಾನೆ ಸೂರ್ಯ ಪಶ್ಚಿಮ ಕಡಲಲ್ಲಿ ಮುಳುಗಲು ಆರಂಭಿಸಿದ್ದ. ನಿಧಾನವಾಗಿ ನಮ್ಮ ಹೊಲದಲ್ಲಿ ಕತ್ತಲು ಕವಿತೊಡಗಿತ್ತು. ನಾನು ಹಾಗೂ ಪತಿ ಮೋಹನ್ ಲಾಲ್ ಕೆಲಸ ಮಾಡುತ್ತಲೇ ಇದ್ದೇವು. ಅದೊಂದು ಅತೀ ಕ್ರೂರವಾದ ಸಂಜೆ ಅಂತಾ ನನಗೆ ತಿಳಿಯಲು ಜಾಸ್ತಿ ಸಮಯ ಹಿಡಿಯಲಿಲ್ಲ. ಏಕಾಏಕಿ ನಮ್ಮ ಜಮೀನಿಗೆ ನುಗ್ಗಿದ ಐದು ಜನ, ಮೋಹನ್ ಲಾಲ್ ಮೇಲೆ ಹಲ್ಲೆ ಮಾಡೋಕೆ ಆರಂಭಸಿದ್ರು. ನನ್ನ ಕಣ್ಣೇದುರೇ ಮೋಹನ್ ಲಾಲ್ ಏಟಿನಿಂದ ನರಳಲು ಆರಂಭಿಸಿದ. ದು:ಖ ತಡೆಯಲಾರದೆ ನಾನು ಹಲ್ಲೆಕೋರರಿಂದ ಗಂಡನನ್ನ ಬಿಡಿಸಲು ಓಡಿದೆ. ಹೊಡೆಯಬೇಡಿ ಅಂತಾ ದಾಳಿಕೋರರ ಕಾಲಿಗೆ ಬಿದ್ದು ಬೇಡಿಕೊಂಡೆ. ಆದ್ರೆ, ಸ್ವಲ್ಪವೂ ಕರುಣೆ ತೋರದ ಆ ದುಷ್ಟರು ತಮ್ಮ ದುಷ್ಕೃತ್ಯ ಮುಂದುವರೆಸಿದ್ರು. ಅದೇನಾಯ್ತೋ ಗೊತ್ತಿಲ್ಲ ಹಲ್ಲೆಕೋರರಲ್ಲಿ ಮೂವರು ನನ್ನ ಮೇಲೆ ಕಣ್ಣು ಹಾಕಿದ್ರು. ಇಬ್ಬರು ಪತಿಯನ್ನ ನೆಲಕ್ಕೆ ಹಾಕಿದ್ರೆ, ಮೂವರು ನನ್ನ ಮೇಲೆ ಅತ್ಯಾಚಾರ ಎಸಗಿದ್ರು. ಇದಾದ ಬಳಿಕ ನಾನು ದೈರ್ಯದಿಂದ ನನ್ನ ಮೇಲೆ ನಡೆದ ದೌರ್ಜನ್ಯವನ್ನ ಎಲ್ಲರ ಎದುರು ಹೇಳಿಕೊಂಡೆ. ಆದ್ರೆ,ಗ್ರಾಮದ ಜನ ನನ್ನ ಮಾತು ನಂಬಲೇ ಇಲ್ಲ. ದುಷ್ಟ ಪುರಷರ ಪುಂಡಾಟಕ್ಕೆ ಸಿಕ್ಕು ನರಳಿದ್ದ ನನ್ನ ಮೇಲೆಯೇ ಜನ ಅಪವಾದ ಹೊರೆಸಿದ್ರು. ಎಲ್ಲರೂ ನಾನು ಸುಳ್ಳು ಹೇಳುತ್ತಿದ್ದೇನೆ ಅಂತಾ ಹಳಿದರು. ಅತ್ಯಾಚಾರ ನಡೆಸಿದವರು ನನ್ನ ಮಾತನ್ನ ತಳ್ಳಿ ಹಾಕಿದ್ರು. ಸತ್ಯ ಹೇಳಿದ್ದಕ್ಕೆ ನನ್ನ ಮೇಲೆಯೇ ಜಗಳಕ್ಕೆ ಬಂದರು.ಇನ್ನು, ಪೊಲೀಸರಾದರೂ ನನಗೆ ನ್ಯಾಯ ಕೊಡಿಸುತ್ತಾರೆ ಅಂತಾ ನಾನು ದೂರು ನೀಡಲು ತೆರಳಿದೆ. ಪೊಲೀಸರು ದೂರು ನೀಡಲು ತೆರಳಿದ್ದ ನನ್ನ ಜೊತೆ ತಿರಸ್ಕಾರದಿಂದ ನಡೆದುಕೊಂಡ್ರು. ನನ್ನ ದೂರನ್ನ ಗಂಭೀರವಾಗಿ ಪರಿಗಣಿಸದೆ, ತನಿಖೆಯ ದಿಕ್ಕು ತಪ್ಪಿಸಿದರು. ಘಟನೆ ನಡೆದ 24 ಗಂಟೆಗಳಲ್ಲಿ ನನ್ನನ್ನ ಮೆಡಿಕಲ್ ಟೆಸ್ಟ್ಗೆ ಒಳಪಡಿಸಬೇಕಿತ್ತು. ಆದ್ರೆ, ಪೊಲೀಸ್ರು 52 ಗಂಟೆಗಳ ಬಳಿಕ ಮೆಡಿಕಲ್ ಟೆಸ್ಟ್ ನಡೆಸಿದರು. ನನ್ನ ದೇಹದ ಮೇಲೆ ಆ ಪಾಪಿಗಳು ಮಾಡಿದ ಗೀರುಗಳು, ಮೂಗೇಟುಗಳು ರಿಪೋರ್ಟ್ನಲ್ಲಿ ದಾಖಲಾಗಲಿಲ್ಲ. ನನ್ನ ದೇಹಕ್ಕೆ ಆದ ತೊಂದರೆಗಳು ನಿರ್ಲಕ್ಷಿಸಲ್ಪಟ್ಟವು.

ಪತಿ ಜತೆಯಲ್ಲಿ ಭನ್ವಾರಿದೇವಿ.

ಪತಿ ಜತೆಯಲ್ಲಿ ಭನ್ವಾರಿದೇವಿ.

ಭನ್ವಾರಿದೇವಿ ಅವರು ನಮ್ಮ ಮೇಲೆ ನೆರೆಹೊರೆಯ ಜನ ನಡೆಸಿದ ಅತ್ಯಾಚಾರವನ್ನ ಹೀಗೆ ಮನಕಲಕುವಂತೆ ಬಿಚ್ಚಿಡುತ್ತಾರೆ. ಅತ್ಯಾಚಾರಕ್ಕೆ ಒಳಗಾದ ಮೇಲೆ ಭನ್ವಾರಿದೇವಿ ಸಮಾಜದ ಪಿಡುಗುಗಳನ್ನ ಹೊಡೆದೊಡಿಸಲು ಮನಸ್ಸನ್ನ ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1985ರಿಂದ ರಾಜಸ್ಥಾನ ಸರ್ಕಾರದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಸಾತಿನ್(ಸ್ನೇಹಿತೆ)ಯಾಗಿ ಕೆಲಸ ಮಾಡುತ್ತಿದ್ದ ಭನ್ವಾರಿದೇವಿ, ತಮ್ಮ ಜೀವನದಲ್ಲಿ ಇಂತಹ ದುರಂತ ನಡೆದ ಮೇಲೆ ತಮ್ಮನ್ನ ತಾವೂ ಹೋರಾಟಕ್ಕೆ ಸಂಪೂರ್ಣವಾಗಿ ಅಣಿಗೊಳಿಸಿದ್ರು. ಸಾತಿನ್ ಅಂದ್ರೆ, ಗ್ರಾಮಗಳಲ್ಲಿ ಪ್ರತಿ ಮನೆಯ ಬಾಗಿಲಿಗೆ ಹೋಗಿ ಸಾಮಾಜಿಕ ಪಿಡುಗುಗಳು ವಿರುದ್ಧ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ. ಸ್ವಚ್ಛತೆ, ಕುಟುಂಬ ಯೋಜನೆ,ಮಕ್ಕಳನ್ನ ಶಾಲೆಗೆ ಕಳುಹಿಸುವುದರಿಂದ ಆಗುವ ಲಾಭಗಳು, ಹೆಣ್ಣುಭ್ರೂಣ ಹತ್ಯೆ ತಡೆ, ಶಿಶುಹತ್ಯೆ ತಡೆ, ವರದಕ್ಷಿಣೆ ತಡೆ ಹಾಗೂ ಬಾಲ್ಯವಿವಾಹ ತಡೆ ಹೀಗೆ ಹಲವು ವಿಷಯಗಳ ಬಗ್ಗೆ ಭನ್ವಾರಿದೇವಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದರು. ಸ್ವತ: ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಭನ್ವಾರಿದೇವಿ ಅತ್ಯಾಚಾರಕ್ಕೆ ತುತ್ತಾಗಿದ್ದು ಹಾಗೂ ಅತ್ಯಾಚಾರಿಗಳಿಗೆ ಇನ್ನೂ ಸಹ ಶಿಕ್ಷೆಯಾಗದೆ ಇರೋದು ಭಾರತದ ಕಾನೂನು ವ್ಯವಸ್ಥೆಯ ಅಣಕವೇ ಸರಿ.

ಸುಧಾರಣೆಗೆ ಸಿಕ್ಕ ಪ್ರತಿಫಲ:

ರಾಜಸ್ಥಾನದಲ್ಲಿ ನಡೆಯುತ್ತಿರುವ ಅತ್ಯಾಚಾರದಂತಹ ಹೇಯ ಕೃತ್ಯಗಳಿಗೂ ಹಾಗೂ ಪೂರ್ವಾಗ್ರಹ ಪೀಡಿತ ಉಳಿಗಮಾನ್ಯ ಮನಸ್ಥಿತಿಗೂ ನೇರ ಸಂಬಂಧವಿದೆ ಎಂಬ ಅಂಶ ಈ ಪ್ರಕರಣದಲ್ಲೂ ಸಾಬೀತಾಯಿತು. ಭನ್ವಾರಿದೇವಿ ಅವರ ಬಾಲ್ಯವಿವಾಹ ವಿರುದ್ಧದ ಹೋರಾಟವೇ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಲು ಕಾರಣವಾಯಿತು. ಬಾಲ್ಯವಿವಾಹ ಎನ್ನುವುದು ಇಂದಿಗೂ ರಾಜಸ್ಥಾನದಲ್ಲಿ ಸರ್ವೇಸಾಮಾನ್ಯ. ಸ್ವತಭನ್ವಾರಿದೇವಿ ಮದುವೆಯಾದಾಗ ಅವರಿಗೆ ಕೇವಲ 6 ವರ್ಷ ಹಾಗೂ ಪತಿಗೆ 8 ವರ್ಷ. ಬಾಲ್ಯವಿವಾಹದ ದುರಂತವನ್ನ ಅನುಭವಿಸಿದ್ದ ಭನ್ವಾರಿದೇವಿ ಗುಜ್ಜರ್ ಸಮುದಾಯದಿಂದ ತಮಗೆ ಎಂತಹ ಆಪತ್ತು ಬರಬಹುದು ಅಂತಾ ತಿಳಿದಿದ್ದರೂ ಸಹ ಗ್ರಾಮದಲ್ಲಿ ಬಾಲ್ಯವಿವಾಹ ತಡೆಯಲು ಯತ್ನಿಸುತ್ತಿದ್ದರು. ತಮ್ಮ ನೆರೆಮನೆ ಗುಜ್ಜರ್ ಸಮುದಾಯದ ಕುಟುಂಬವೊಂದರಲ್ಲಿ ನಡೆಯುತ್ತಿದ್ದ 9 ತಿಂಗಳ ಹೆಣ್ಣು ಮಗುವಿನ ವಿವಾಹ ತಡೆಯಲು ಭನ್ವಾರಿದೇವಿ ಮುಂದಾಗಿದ್ದರು. ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಅಲ್ದೆ, ಬಾಲ್ಯವಿವಾಹ ನಡೆಸುತ್ತಿರುವವರು ಕ್ರೂರಿಗಳು, ಅವರು ತಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಕುರಿತು ಭನ್ವಾರಿದೇವಿ ಅಧಿಕಾರಿಗಳು ಹೇಳಿದ್ದರು. ಅಧಿಕಾರಿಗಳು ಮದುವೆಯನ್ನ ತಡೆದಿರುವುದಾಗಿ ಭನ್ವಾರಿದೇವಿಗೆ ಹೇಳಿದ್ದರು. ಅಲ್ಲದೆ, ಬಾಲ್ಯವಿವಾಹ ನಡೆಯುತ್ತಿದ್ದ ಮನೆಗೆ ಪೊಲೀಸರು ಭೇಟಿ ನೀಡಿದ್ದರು. ಆದ್ರೆ, ಅಧಿಕಾರಿಗಳು ಬಂದು ಹೋದ ಮರುದಿನವೇ ಆ ಮನೆಯಲ್ಲಿ ಬಾಲ್ಯವಿವಾಹ ನಡೆಯಿತು. ಮನೆಯವರು ಭನ್ವಾರಿದೇವಿ ತಮಗೆ ಮಾನಸಿಕ ಹಿಂಸೆ ನೀಡಿದ್ದಾರೆ ಅಂತಾ ಅರೋಪಿಸಿ ಅವಮಾನಿಸಿದರು. ಇದೇ ದ್ವೇಷದಿಂದ ಭನ್ವಾರಿದೇವಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಐವರು ಬಂದು ಸಾಮೂಹಿಕ ಅತ್ಯಾಚಾರ ನಡೆಸಿದರು.

ನ್ಯಾಯಾಲಯದಿಂದಲೂ ಅನ್ಯಾಯ: 

ಇಂದಿಗೂ ಸಹ ಎಷ್ಟೋ ಮಹಿಳೆಯರು ತಮ್ಮ ಮೇಲೆ ನಡೆಯೋ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ. ಅತ್ಯಾಚಾರಕ್ಕೆ ಒಳಗಾಗಿದ್ದರೂ ದೂರ ದಾಖಲಿಸದೆ ಸುಮ್ಮನಾಗುತ್ತಾರೆ. ಆದ್ರೆ, 25 ವರ್ಷಗಳ ಹಿಂದೆಯೇ ಭನ್ವಾರಿ ದೇವಿ ತಮ್ಮ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿರುದ್ಧ ಹೋರಾಟ ಮಾಡಿದರು. ಪೊಲೀಸರು ತಮ್ಮ ಪ್ರಕರಣವನ್ನ ಹಳ್ಳ ಹಿಡಿಸಿದ ಮೇಲೂ ಭನ್ವಾರಿದೇವಿ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿದರು. ಭನ್ವಾರಿದೇವಿ ಜೀವನದಲ್ಲಿ ನಡೆದ ಘೋರ ಅನ್ಯಾಯಾದ ಕುರಿತು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದವು ಹಾಗೂ ಮಹಿಳೆಯರು ಭನ್ವಾರಿದೇವಿ ಪರ ಹೋರಾಟ ನಡೆಸಿದವು. ಈ ಎಲ್ಲ ಒತ್ತಡಗಳಿಂದ ರಾಜಸ್ಥಾನ ಸರ್ಕಾರ ಈ ಪ್ರಕರಣವನ್ನ ಸಿಬಿಐ ತನಿಖೆ ವಹಿಸಿತು. ಅತ್ಯಾಚಾರ ನಡೆದ ಒಂದು ವರ್ಷದ ಬಳಿಕ ಕೊನೆಗೂ ಐದು ಆರೋಪಿಗಳನ್ನ ಬಂಧಿಸಲಾಯಿತು. ಐವರ ವಿರುದ್ಧ ಸಾಮೂಹಿಕ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಕುತಂತ್ರ ಪ್ರಕರಣ ದಾಖಲಿಸಲಾಯಿತು. ಆದರೆ, ಮುಂದೆ ನಡೆದ ವಿಚಿತ್ರ ಬೆಳವಣಿಗೆಗಳಿಂದ 1995ರ ನವೆಂಬರ್ನಲ್ಲಿ ಎಲ್ಲ ಆರೋಪಿಗಳು ಖುಲಾಷೆಯಾದರು. ಪ್ರಕರಣದ ವಿಚಾರಣೆ ವೇಳೆ ಸತತವಾಗಿ ಐದು ನ್ಯಾಯಾಧೀಶರನ್ನ ಬದಲಾಯಿಸಲಾಯಿತು. ಅತ್ಯಾಚಾರ ಆರೋಪದಿಂದ ಆರೋಪಿಗಳನ್ನ ದೋಷಮುಕ್ತಗೊಳಿಸಿದ ನ್ಯಾಯಾಲಯ ಅವರ ಮೇಲೆ ಸಣ್ಣಪುಟ್ಟ ಆರೋಪಗಳನ್ನ ಹೊರಿಸಿ ಕೇವಲ 9 ತಿಂಗಳ ಕಾಲ ಸಾಮಾನ್ಯ ಶಿಕ್ಷೆ ನೀಡಿತು. ಜೈಪುರ ಮೂಲದ ಎನ್ಜಿಒ ಸದಸ್ಯ ಭರತ್ ಅವರು ಈ ತೀರ್ಪನ್ನ ಸಂಶಯಯಾಸ್ಪದ ತೀರ್ಪು ಅಂತಾ ಆರೋಪಿಸಿದರು. ಇಡೀ ರಾಜ್ಯವೇ ನ್ಯಾಯಾಧೀಶರು ನೀಡಿದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ರು.ಇನ್ನು, ಆರೋಪಿಗಳನ್ನ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ದೋಷಮುಕ್ತಗೊಳಿಸಲು ನ್ಯಾಯಾಲಯ ನೀಡಿದ ವಿಲಕ್ಷಣ ಕಾರಣಗಳನ್ನ ನೀವೇ ಓದಿ.

  • ಗ್ರಾಮದ ಮುಖ್ಯಸ್ಥ ಅತ್ಯಾಚಾರ ಮಾಡುವುದಿಲ್ಲ.

  • ಬೇರೆಬೇರೆ ಜಾತಿಯ ಜನ ಒಟ್ಟಿಗೆ ಅತ್ಯಾಚಾರದಲ್ಲಿ ಭಾಗಿಯಾವುದಿಲ್ಲ.

  • 60-70ವರ್ಷದ ಹಿರಿಯ ಪುರುಷರು ರೇಪ್ ಮಾಡುವುದಿಲ್ಲ.

  • ಒಬ್ಬ ವ್ಯಕ್ತಿ ತನ್ನ ಸಂಬಂಧಿಕರ ಎದುರೇ ಅತ್ಯಾಚಾರ ಮಾಡುವುದಿಲ್ಲ. (ಇದು ಆರೋಪಿಗಳಲ್ಲಿ ಇದ್ದ ಮಾವ ಹಾಗೂ ಅಳಿಯ ಕುರಿತು ನೀಡಿದ ಕಾರಣ)

  • ಶುದ್ಧಿಯ ಕಾರಣದಿಂದ ಮೇಲ್ಜಾತಿಯ ಪುರುಷ ಕೆಳ ಜಾತಿಯ ಮಹಿಳೆಯನ್ನ ಅತ್ಯಾಚಾರ ಮಾಡುವುದಿಲ್ಲ.

  • ಭನ್ವಾರಿದೇವಿಯ ಪತಿ ತನ್ನ ಹೆಂಡತಿಯನ್ನ ಕಣ್ಣು ಎದುರೇ ಅತ್ಯಾಚಾರ ಮಾಡುತ್ತಿದ್ದರೆ ನೋಡಿಕೊಂಡು ಸುಮ್ಮನೆ ಇರುತ್ತಿರಲಿಲ್ಲ.

ಆರೋಪಿಗಳನ್ನ ಖುಲಾಷೆಗೊಳಿಸಲು ನ್ಯಾಯಾಧೀಶರು ನೀಡಿದ ಈ ಮೇಲಿನ ಕಾರಣಗಳು ಜಗತ್ತಿನಾದ್ಯಂತ ಆಕ್ರೋಶಕ್ಕೆ ಗುರಿಯಾದವು. ಜನ ತೀರ್ಪಿನ ವಿರುದ್ಧ ಸಿಡಿದೆದ್ದರು. ನ್ಯಾಯಕ್ಕಾಗಿ ಆಗ್ರಹಿಸಿ ಜೈಪುರದಲ್ಲಿ ಭಾರೀ ಹೋರಾಟಗಳು ನಡೆದವು.

ನ್ಯಾಯಕ್ಕಾಗಿ ಆಗ್ರಹ...

ನ್ಯಾಯಕ್ಕಾಗಿ ಆಗ್ರಹ…

ನ್ಯಾಯಾಲಯದ ಈ ತೀರ್ಪನ್ನ ರಾಜಸ್ಥಾನದ ಕಾಂಗ್ರೆಸ್ ಸಂಸದ ಗಿರಿಜಾ ವ್ಯಾಸ್ ಅವರು ರಾಜಕೀಯ ಪ್ರೇರಿತ ಅಂತಾ ಆರೋಪಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಮೊಹಿನಿ ಗಿರಿ ಆವರು ಈ ಕೋರ್ಟ್ ಆದೇಶ ನ್ಯಾಯದ ತತ್ವಗಳನ್ನ ಧಿಕ್ಕರಿಸಿದೆ ಅಂತಾ ಗಂಭೀರ ಅರೋಪ ಮಾಡಿದರು. ಇನ್ನೂ ಒಂದು ಮುಂದೆ ಹೆಜ್ಜೆ ಹೋದ ಮೊಹಿನಿ ಗಿರಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದಿದರು. ಸಾರ್ವಜನಿಕರಿಂದ ಹಾಗೂ ಸಂಘಟನೆಗಳಿಂದ ನ್ಯಾಯವನ್ನ ಕೊಂದು ಹಾಕಿದ ನ್ಯಾಯಾಲಯದ ಈ ತೀರ್ಪಿಗೆ ಭಾರೀ ವಿರೋಧ ವ್ಯಕ್ತವಾದ್ರೂ ರಾಜಸ್ಥಾನ ಸರ್ಕಾರ, ಭನ್ವಾರಿದೇವಿ ಅವರಿಗೆ ಸಹಾಯ ಮಾಡುವ ಮನಸ್ಸು ಮಾಡಲಿಲ್ಲ. ಸಾಮಾಜಿಕ ಕಾರ್ಯ ಮಾಡಿದ ಕಾರಣದಿಂದ ಭನ್ವಾರಿದೇವಿ ಮೇಲೆ ಅತ್ಯಾಚಾರ ನಡೆದಿದೆ. ಹೀಗಾಗಿ, ರಾಜ್ಯ ಸರ್ಕಾರ ನೊಂದ ಭನ್ವಾರಿದೇವಿಗೆ ಸಹಾಯ ಮಾಡಬೇಕು ಅಂತಾ ಸಂಘಟನೆಗಳು ಒತ್ತಾಯಿಸಿದ್ದವು. ಭನ್ವಾರಿದೇವಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ದೌರ್ಜನ್ಯಕ್ಕೆ ತುತ್ತಾಗಿದ್ದರಿಂದ ಸರ್ಕಾರದಿಂದ ಅಕೆಗೆ ಸಹಾಯ ಮಾಡಲು ಸಾಧ್ಯವಿಲ್ಲ ಅಂತಾ ಅಧಿಕಾರಿಗಳು ನಿರಾಕರಿಸಿದ್ದರು. ಕೊನೆಗೆ ಎಲ್ಲ ಕಡೆಗಳಿಂದ ಒತ್ತಡ ಹೆಚ್ಚಾಗಿದ್ದರಿಂದ ರಾಜಸ್ಥಾನ ಸರ್ಕಾರ,ಕೋರ್ಟ್ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತು. ದುರಂತ ಅಂದ್ರೆ, 22 ವರ್ಷಗಳ ಅವಧಿಯಲ್ಲಿ ಹೈಕೋರ್ಟ್ನಲ್ಲಿ ಕೇವಲ ಒಂದು ಬಾರಿ ಮಾತ್ರ ಪ್ರಕರಣದ ವಿಚಾರಣೆ ನಡೆಯಿತು.

ಈ ಎಲ್ಲ ಕಾರಣಗಳಿಂದ ದೆಹಲಿ ಹಾಗೂ ಜೈಪುರ ಮೂಲದ ಸಂಘಟನೆಗಳು ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆ ಹೊಣೆಯನ್ನ ಕೆಲಸ ನೀಡುವವರೇ ಹೊತ್ತುಕೊಳ್ಳುವ ಕಾನೂನು ತರಬೇಕು ಅಂತಾ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದವು. 1997ರಲ್ಲಿ ಸುಪ್ರೀಂಕೋರ್ಟ್ ಉದ್ಯೋಗದ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ನೀಡುವ ಜವಾಬ್ದಾರಿ ಉದ್ಯೋದಾತರದ್ದು ಅಂತಾ ಸುಪ್ರೀಂಕೋರ್ಟ್ ನಿದೇರ್ಶನಗಳನ್ನ ಹೊರಡಿಸಿತು. ಈ ಕುರಿತು ವಿಶಾಖಾ ಗೈಡ್ಲೈನ್ಸ್ ಎನ್ನುವ ಹೆಸರಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಖಾತ್ರಿಯಾಗಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ನಿಯಮಗಳನ್ನ ರೂಪಿಸಿತು. 2013ರಲ್ಲಿ ಲೋಕಸಭೆ ಈ ನಿದೇರ್ಶನಗಳನ್ನ ಉದ್ಯೋಗ ಸ್ಥಳದಲ್ಲಿ ಮಹಿಳೆಯರನ್ನ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆಯಾಗಿ ಪಾಸು ಮಾಡಿತು. ಭನ್ವಾರಿದೇವಿ ಅವರ ಮೂರು ದಶಕಗಳ ಸಂಘರ್ಷದಿಂದಾಗಿ ಇಂದು ಉದ್ಯೋಗ ಮಾಡುತ್ತಿರುವ ಮಹಿಳೆಯರು ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಲು ಕಾಯ್ದೆಯ ಬಲ ಹೊಂದಿದ್ದಾರೆ. ಈ ಕಾಯ್ದೆ ಜಾರಿಗೆ ಬರಲು ಭನ್ವಾರಿದೇವಿ ನೇರವಾಗಿ ಕಾರಣರಲ್ಲದಿದ್ದರೂ, ಅವರ ಹೋರಾಟ ದೇಶದಲ್ಲಿನ ಮಹಿಳೆಯರ ರಕ್ಷಣೆ ಇಂತಹದೊಂದು ಕಾಯ್ದೆಯ ಅಗತ್ಯವನ್ನ ಬಲವಾಗಿ ಪ್ರತಿಪಾದಿಸಿತು.

ಭನ್ವಾರಿದೇವಿ ಅವರ ದಿಟ್ಟ ಹೋರಾಟಕ್ಕೆ ನಮ್ಮ ಸಮಾಜ ನೀಡಿದ ಪ್ರತಿಫಲವಂತೂ ತೀರಾ ಅಮಾನವೀಯ. ನ್ಯಾಯಕ್ಕಾಗಿ ಆಗ್ರಹಿಸಿ, ತಮ್ಮ ಮೇಲೆ ನಡೆದ ಅತ್ಯಾಚಾರವನ್ನ ಬಹಿರಂಗ ಪಡಿಸಿ ಸಿಡಿದು ನಿಂತಿದ್ದಕ್ಕೆ ಅವರನ್ನ ಸಮುದಾಯದಿಂದ ಬಹಿಷ್ಕರಿಸಲಾಗಿತು. ಭನ್ವಾರಿದೇವಿ ಅವರಿಗೆ ಹಾಲು ಮಾರಿದ ಹಾಗೂ ಅವರಿಂದ ಮಡಿಕೆಗಳನ್ನ ಕೊಂಡುಕೊಂಡ ಕುಟುಂಬಗಳನ್ನೂ ಬಹಿಷ್ಕರಿಸಲಾಯಿತು. ಭನ್ವಾರಿದೇವಿ ಅವರನ್ನ ಮದುವೆ ಕಾರ್ಯಕ್ರಮಗಳಿಂದ ಹೊರಗಿಡಲಾಯಿತು. ಆದ್ರೆ, ಯಾವುದಕ್ಕೂ ಜಗ್ಗದ ಭನ್ವಾರಿದೇವಿ ಮಾತ್ರ ಯಾವುದೇ ಕ್ಷಣದಲ್ಲೂ ಹೋರಾಟದಿಂದ ಹಿಂದೆ ಸರಿಯುವ ನಿರ್ಧಾರ ಮಾಡಲಿಲ್ಲ.ಈ ಕ್ಷಣಕ್ಕೂ ತಮಗೆ ಅವಮಾನ ಮಾಡಿದ ಅದೇ ಗ್ರಾಮದಲ್ಲಿ ಭನ್ವಾರಿದೇವಿ ವಾಸಿಸುತ್ತಿದ್ದಾರೆ. ತಮಗೆ ಪ್ರತಿದಿನ ನಿಂದನೆಯನ್ನ ನೀಡಿ ಬದುಕಿನ ದಾರಿಗೆ ಮುಳ್ಳು ಎಸೆದ ನೆರೆಹೊರೆಯವರ ಮುಂದೆ ಕೆಚ್ಚೆದೆಯಿಂದ ಬದುಕಿ ತೋರಿಸುತ್ತಿದ್ದಾರೆ.

ಈ ದಿಟ್ಟ ಬದುಕಿಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಈ ಜನರ ನಡುವೆ ಎಲ್ಲರನ್ನೂ ಎದುರು ಹಾಕಿಕೊಂಡು ಬದುಕುತ್ತಿದ್ದರಲ್ಲಾ ನಿಮಗೆ ಭಯವಾಗಲ್ವಾ ಅಂತಾ ಪತ್ರಕರ್ತರು ಪ್ರಶ್ನಿಸಿದರೆ, “ನಮ್ಮ ಮನೆಯ ಬಾಗಿಲು ತೆರೆದೇ ಇರುವುದನ್ನು ನೀವು ಕಾಣಲಿಲ್ಲವೇ?” ಭನ್ವಾರಿದೇವಿ ಮರುಪ್ರಶ್ನೆ ಹಾಕುತ್ತಾರೆ. ಪತ್ನಿಯ ಪ್ರಶ್ನೆಗೆ ಧ್ವನಿಗೂಡಿಸುವ ಪತಿ ಮೋಹನ್ ಲಾಲ್ “ಭಯಪಡುವುದಕ್ಕೆ ಏನಿದೆ..? ಅಬ್ಬಬ್ಬಾ ಅಂದ್ರೆ, ನಮ್ಮನ್ನ ಕೊಲೆ ಮಾಡಬಹುದು ಅಷ್ಟೆ,” ಎನ್ನುತ್ತಾರೆ.

ಕೃಪೆ: ಬಿಬಿಸಿ

Leave a comment

FOOT PRINT

Top