An unconventional News Portal.

‘ರಿಯಲಿಸ್ಟಿಕ್ ಬಿಬಿಎಂಪಿ ಬಜೆಟ್’: ಯೋಚನೆ, ಯೋಜನೆ ಮತ್ತು ‘ಆರ್ಥಿಕ ಶಿಸ್ತಿ’ನ ಮಂತ್ರ!

‘ರಿಯಲಿಸ್ಟಿಕ್ ಬಿಬಿಎಂಪಿ ಬಜೆಟ್’: ಯೋಚನೆ, ಯೋಜನೆ ಮತ್ತು ‘ಆರ್ಥಿಕ ಶಿಸ್ತಿ’ನ ಮಂತ್ರ!

‘ರಿಯಲಿಸ್ಟಿಕ್ ಬಜೆಟ್’ ಎಂಬ ಟ್ಯಾಗ್‌ಲೈನ್ ಪಡೆದುಕೊಂಡಿದ್ದ 2017-18ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯವ್ಯಯ ಪತ್ರದ ಮಂಡನೆಯಾಗಿದೆ.

ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಸುಮಾರು 4249 ಕೋಟಿ ನೆರವಿನೊಂದಿಗೆ ಮುಂದಿನ ಒಂದು ವರ್ಷದ ಅವಧಿಗೆ 9, 241 ಕೋಟಿ ಬಜೆಟ್‌ನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ ಮುಂದಿಟ್ಟಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ದೊಡ್ಡ ಮಟ್ಟದ ಬದಲಾವಣೆಗಳು ಕಾಣದಿದ್ದರೂ ‘ಆರ್ಥಿಕ ಶಿಸ್ತಿನ’ ಕಡೆಗೆ ಬಿಬಿಎಂಪಿ ನಡಿಗೆ ಎದ್ದು ಕಾಣಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಆಡಳಿತ ಎರಡನೇ ಬಜೆಟ್ ಇದಾಗಿದೆ.

ಕಳೆದ ಬಾರಿ ಇದೇ ಆಡಳಿತ ಮಂಡಿಸಿದ್ದ ಬಜೆಟ್ ಗಾತ್ರ 8, 994. 41 ಕೋಟಿಯಷ್ಟಿತ್ತು. ಪರಿಷ್ಕರಣೆಗೊಂಡ ನಂತರ ಇದರ ಗಾತ್ರ ಸುಮಾರು 5 ಸಾವಿರ ಕೋಟಿಗೆ ಇಳಿದಿತ್ತು. ಆದರೆ ಮೊದಲ ಬಾರಿಗೆ ಆದಾಯ ಮತ್ತು ವ್ಯಯದ ನಡುವೆ ಸಮತೋನವನ್ನು ಕಾಯ್ದುಕೊಳ್ಳುವ ಕಸರತ್ತು ಕಂಡು ಬಂದಿತ್ತು. ಅದರಾಚೆಗೆ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುರಿತು ಸೀಮಿತ ನೋಟವನ್ನು ಇದು ಹೊಂದಿತ್ತು. ವಾರ್ಡ್‌ವಾರು ಹಂಚಿಕೆಯಲ್ಲಿಯೇ ಕಳೆದ ಬಜೆಟ್ ಮುಗಿದು ಹೋಗಿತ್ತು.

ಇದಕ್ಕೆ ಹೋಲಿಸಿದರೆ ಈ ಬಾರಿ ಬಿಬಿಎಂಪಿ ಬಜೆಟ್ ತನ್ನ ಗಾತ್ರದಲ್ಲೂ, ಸಮತೋಲನದಲ್ಲೂ ಹಾಗೂ ಸಮಗ್ರ ಒಳನೋಟಗಳ ವಿಚಾರದಲ್ಲಿ ಕಳೆದ ಬಾರಿಗಿಂತ ಕೊಂಚ ಭಿನ್ನವಾಗಿದೆ ಅಥವಾ ಸುಧಾರಣೆಗೊಂಡಂತೆ ಕಾಣಿಸುತ್ತಿದೆ.

ಮನೆ ಕಟ್ಟಿ ನೋಡು:

ಈ ಬಾರಿಯ ಬಜೆಟ್‌ನ ಅಂಕಿ ಅಂಶಗಳ ಆಚೆಗೆ ಗಮನ ಸೆಳೆಯುವ ಅಂಶ ಇರುವುದು ಮನೆಗಳನ್ನು ಕಟ್ಟುವ ವಿಚಾರದಲ್ಲಿ ಬಿಬಿಎಂಪಿ ತೆಗೆದುಕೊಂಡು ನಿರ್ಧಾರಗಳು. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾರೇ ಮನೆ, ಕಟ್ಟಡಗಳನ್ನು ಕಟ್ಟಬೇಕು ಎಂದರೂ, ತಳಪಾಯವಾಗುತ್ತಿದ್ದಂತೆ ಅದು ಬಿಬಿಎಂಪಿ ಖಾತೆಗೆ ವರ್ಗಾವಣೆಗೊಳ್ಳುತ್ತದೆ. ನಿರ್ಮಾಣ ಕಾಮಗಾರಿ ಮುಗಿದ ನಂತರ ಕಾನೂನಿನ ಅಡಿಯಲ್ಲಿ ಪರಿಷ್ಕರಣೆಗೆ ಒಳಗಾದ ನಂತರವೇ ಖಾತೆಯನ್ನು ಮೂಲ ಮಾಲೀಕರಿಗೆ ವರ್ಗಾವಣೆಯಾಗುತ್ತದೆ. ಆದರೆ ಈ ನೀತಿ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದೇ ವೇಳೆ ಬೆಂಗಳೂರಿನ ವ್ಯಾಪ್ತಿಯಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರವನ್ನು ಹಾಸು ಹೊದ್ದು ಮಲಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುವ ಕಾನೂನು ಬಾಹಿರ ಲೇಔಟ್‌ಗಳ ಕಡಿವಾಣಕ್ಕೆ ಕ್ರಮ ಏನಿದೆ? ಎಂಬ ಪ್ರಶ್ನೆಯೂ ಮೂಡುತ್ತದೆ. ಬಿಬಿಎಂಪಿಗೆ ಇರುವ ಸೀಮಿತ ವ್ಯಾಪ್ತಿಯನ್ನೂ ಇದು ಪರಿಚಯಿಸುತ್ತದೆ.

ಇದರ ಆಚೆಗೆ, ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ಬಿಬಿಎಂಪಿ ಹೊಸ ನಡೆಯನ್ನು ಇಡಲು ಮುಂದಾಗಿದೆ. ಆಸ್ತಿಗಳ ಡಿಜಿಟಲೀಕರಣದ ಪ್ರಯೋಗವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ಜಾಹೀರಾತು ಮೂಲದ ಆದಾಯ ಹೆಚ್ಚಳಕ್ಕೆ ಸರಿಯಾದ ಕ್ರಮಗಳು ಇಲ್ಲದಿರುವುದು ಅನುಮಾನ ಮೂಡಿಸುತ್ತದೆ. ‘ಜಾಹೀರಾತು ಮಾಫಿಯಾ’ವನ್ನು ಸೆದೆ ಬಡಿಯಲು ಪಾಲಿಕೆ ಕೈ ಸಾಧ್ಯವಾಗುತ್ತಿಲ್ಲ ಎಂಬುದು ಈ ಬಾರಿಯ ಬಜೆಟ್‌ನಲ್ಲಿ ಆದಾಯ ಮೂಲದ ಅಂಕಿ ಅಂಶಗಳು ಸಾರಿ ಹೇಳುತ್ತಿವೆ.

ರುಧ್ರಭೂಮಿಗಳ ಅಭಿವೃದ್ಧಿ:

ಬೆಂಗಳೂರಿನ ಯಾವುದೇ ಪ್ರಜೆಯ ಕಟ್ಟ ಕಡೆಯ ಮೂಲಭೂತ ಹಕ್ಕು ಸ್ಮಶಾನಗಳು ಅಥವಾ ರುಧ್ರಭೂಮಿಗಳು. ಇವುಗಳ ಅಭಿವೃದ್ಧಿಗೆ ಈ ಬಾರಿ 168. 50 ಕೋಟಿ ರೂಪಾಯಿ ಎತ್ತಿಡಲಾಗಿದೆ. ಚಾಮರಾಜಪೇಟೆಯಲ್ಲಿ ಅತ್ಯಾಧುನಿಕ ಚಿತಾಗಾರವನ್ನು ತೆರೆಯಲು ಆಲೋಚನೆ ಮಾಡಲಾಗಿದೆ. ವಿಲ್ಸನ್‌ ಗಾರ್ಡನ್‌ ಸ್ಮಶಾನದ ಅಭಿವೃದ್ಧಿಗೆ 1. 20 ಕೋಟಿ ಮೀಸಲಿಡಲಾಗಿದೆ. ಸ್ಮಶಾನ ಕೆಲಸಗಾರರ ಗೌರವ ಧನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇವು ಅಗತ್ಯವಾಗಿದ್ದ ಕ್ರಮಗಳಾಗಿದ್ದವು. ಸದ್ಯ ಬೆಂಗಳೂರಿನಲ್ಲಿರುವ ಸ್ಮಶಾನಗಳಲ್ಲಿ ಸ್ಥಳದ ಅಭಾವ ಕಾಡಲು ಶುರುವಾಗಿದೆ. ಹೆಣಗಳನ್ನು ಹೂಳಲು ಜಾಗ ಸಾಕಾಗುತ್ತಿಲ್ಲ. ಜತೆಗೆ, ಸ್ಮಶಾನ ಕೆಸಲಗಾರರಿಗೆ ಸರಿಯಾದ ಗೌರವ ಧನವೂ ಕೈ ಸೇರುತ್ತಿಲ್ಲ. ಇಂತಹ ಸಮಯದಲ್ಲಿ ಬಿಬಿಎಂಪಿ ತನ್ನ ಬಜೆಟ್‌ ಘೋಷಣೆಯಲ್ಲಿ ಈ ವಿಚಾರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ವಾಗತಾರ್ಹ. ಈ ಘೋಷಣೆಗಳು ತಳಮಟ್ಟದಲ್ಲಿ ಹೇಗೆ ಅನುಷ್ಠಾನಕ್ಕೆ ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಸಸಿ ನೆಡುವ ಕಾರ್ಯ: 

ಬೆಂಗಳೂರಿನ ಅಭಿವೃದ್ಧಿ ಮತ್ತು ಪರಿಸರ ಆಗಾಗ್ಗೆ ಮುಖಾಮುಖಿಯಾಗುವ ಅಂಶಗಳು. ಯಾವುದೇ ಅಭಿವೃದ್ಧಿ ಯೋಜನೆ ಕೈಗೊಂಡರೂ ಒಂದಷ್ಟು ಮರಗಳನ್ನು ಬಲಿ ಕೊಡುವ ಕೆಲಸ ನಡೆದುಕೊಂಡು ಬಂದಿದೆ. ಉದಾಹರಣೆಗೆ ಬೆಂಗಳೂರು ಮೆಟ್ರೋ ರೈಲು ಯೋಜನೆ. ಈ ಯೋಜನೆಗಾಗಿ ಸಾವಿರಾರು ಮರಗಳನ್ನು ಕಡಿದು ಉರುಳಿಸಲಾಯಿತು. ಬದಲಿಗೆ ಲಕ್ಷ ಸಸಿಗಳನ್ನು ನೆಡುತ್ತೀವಿ ಎಂಬ ಭರವಸೆಯನ್ನೂ ಕೊಡಲಾಯಿತು. ಆದರೆ ಈ ವರೆಗೆ ಮೆಟ್ರೊ ಬೆಳೆಸಿದ ಗಿಡಿಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ನಿಖರ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ.

ಹೀಗಿರುವಾಗಲೇ ಬಿಬಿಎಂಪಿ ಬಜೆಟ್‌ನಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಕುರಿತು ಹೊಸ ಘೋಷಣೆಯಾಗಿದೆ. ಇದು ಘೋಷಣೆ ಮಾತ್ರವೇ ಆಗಿರದೆ, ಪ್ರತಿ ಗಿಡದ ಬೆಳವಣಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ಮಂಡಿಸಿದ ಗುಣಶೇಖರ್ ಹೇಳಿದ್ದಾರೆ. ಗಿಡ ನೆಡಲು 6 ಕೋಟಿ, ಅವುಗಳಿಗೆ ಕಬ್ಬಿಣದ ಬೇಲಿ ನಿರ್ಮಿಸಲು 4 ಕೋಟಿ, ಹೊಸ ನರ್ಸರಿಗಳಿಗಾಗಿ 5 ಕೋಟಿ ಹೀಗೆ ಹಸಿರು ಬೆಳೆಯುವ ನಿಟ್ಟಿನಲ್ಲಿ ಬಜೆಟ್‌ ಹಣ ಮೀಸಲಿಟ್ಟಿದೆ. ಗಾರ್ಡನ್ ಸಿಟಿಯ ಲಕ್ಷ ಸಸಿಗಳ ಬೆಳವಣಿಗೆಯನ್ನು ಬಿಬಿಎಂಪಿ ವೆಬ್‌ಸೈಟ್ ಹೇಗೆ ಕಟ್ಟಿಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜಾಹೀರಾತಿಗೆ 7 ಕೋಟಿ:

ಈ ಬಾರಿಗೆ ಬಜೆಟ್‌ನಲ್ಲಿ ಪಾಲಿಕೆ ತನ್ನ ಕೆಲಸಗಳನ್ನು ಪ್ರಚಾರ ಮಾಡಲು 7 ಕೋಟಿ ಹಣವನ್ನು ಮೀಸಲಿಟ್ಟಿದೆ. ಸಾಕ್ಷ್ಯ ಚಿತ್ರಗಳ ನಿರ್ಮಾಣದ ಜತೆಗೆ ಜನರಿಗೆ ಮಾಹಿತಿ ತಲುಪಿಸಲು ಸಾರ್ವಜನಿಕ ಸಂಪರ್ಕ ವಿಭಾಗಕ್ಕೆ ಈ ಹಣವನ್ನು ನೀಡಲಾಗಿದೆ. ಇದರ ಜತೆಗೆ ಕಾನೂನು ಕೋಶವನ್ನು ಬಲಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.

ತನ್ನ ಆಸ್ತಿಗಳನ್ನು ಅಡಮಾನ ಇಡುವ ಮೂಲಕ ದಿವಾಳಿಯ ಹಂತವನ್ನು ತಲುಪಿದ್ದ ಬಿಬಿಎಂಪಿ ನಿಧಾನವಾಗಿ ಮತ್ತೆ ಸಹಜತೆಗೆ ಮರಳುತ್ತಿರುವ ಸೂಚನೆಗಳು ಈ ಬಜೆಟ್‌ನಲ್ಲಿ ಸಿಕ್ಕಿದೆ. ರಾಜ್ಯ ಹಾಗೂ ಕೇಂದ್ರದ ನೆರವಿನ ಜತೆಗೆ ಸ್ಥಳೀಯ ವರಮಾನಗಳ ಅಭಿವೃದ್ಧಿ ಕಡೆಗೂ ದೃಷ್ಟಿ ಇದೆ. ಆದರೆ ಅದು ಸಂಪ್ರದಾಯದ ಚೌಕಟ್ಟುಗಳ ಒಳಗಡೆಯೇ ಇದೆ ಎಂಬುದು ಬೇಸರ ಸಂಗತಿ. ಮೇಯರ್ ಪದ್ಮಾವತಿ ಈ ಬಾರಿ ‘ರಿಯಲಿಸ್ಟಿಕ್ ಬಜೆಟ್’ ಮಂಡಿಸುತ್ತೇವೆ ಎಂದು ಹೇಳಿಕೊಂಡು ಬಂದಿದ್ದರು. ಇದೀಗ ಮಂಡನೆಯಾಗಿದೆ. ಅದರ ಅನುಷ್ಠಾನ ಕೂಡ ‘ರಿಯಲಿಸ್ಟಿಕ್’ ಆಗಿರಲಿ ಎಂದು ಜನ ಸಹಜವಾಗಿಯೇ ನಿರೀಕ್ಷೆ ಮಾಡುತ್ತಾರೆ.

Leave a comment

FOOT PRINT

Top