An unconventional News Portal.

‘ಜೆಡಿಎಸ್ ಹೆಣಗಾಟಗಳು’: ಜೆಪಿ ಜಪ; ಸಾಲ ಮನ್ನಾ ಆಶ್ವಾಸನೆ; ಪಾದಯಾತ್ರೆಯ ಹುಮ್ಮಸ್ಸು!

‘ಜೆಡಿಎಸ್ ಹೆಣಗಾಟಗಳು’: ಜೆಪಿ ಜಪ; ಸಾಲ ಮನ್ನಾ ಆಶ್ವಾಸನೆ; ಪಾದಯಾತ್ರೆಯ ಹುಮ್ಮಸ್ಸು!

ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವೊಂದರ ಹೆಣಗಾಟ ಹೇಗುತ್ತದೆ ಎಂಬುದನ್ನು ಜಾತ್ಯಾತೀತ ಜನತಾದಳ (ಜೆಡಿಎಸ್‌) ಪಾಳೆಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾರಿ ಹೇಳುತ್ತಿವೆ.

ಪಕ್ಷದ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಜಯಪ್ರಕಾಶ್ ನಾರಾಯಣ್ ಜಪ ಆರಂಭಿಸಿದ್ದಾರೆ. ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವ ಆಶ್ವಾಸನೆಯನ್ನು ತೂರಿಬಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಬೃಹತ್ ಸಮಾವೇಶ ನಡೆಸಿರುವ ಪಕ್ಷ, ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿಯ ಭಾಗವಾಗಿ ‘ಪಾದಯಾತ್ರೆ’ ಮಾಡುವುದಾಗಿ ಹೇಳಿದೆ.

ಈ ಬೆಳವಣಿಗಳಲ್ಲಿ ಬಿಡಿಬಿಡಯಾಗಿಯೇ ಮೂರು ಪ್ರಮುಖ ವಿಚಾರಗಳು ಪ್ರಸ್ತಾಪವಾಗಿವೆ ಎಂಬುದು ಗಮನಾರ್ಹ.

ಜೆಪಿ ನೆರಳಿನಲ್ಲಿ:

ಜೆಡಿಎಸ್‌ ತನ್ನ ಹೊಸ ಕಚೇರಿಗೆ ‘ಜೆಪಿ ಭವನ’ ಎಂದು ಹೆಸರಿಟ್ಟಿದೆ. ತನ್ನ ಸಮಾವೇಶದ ವೇದಿಕೆಯಲ್ಲಿಯೂ ಗಾಂಧಿ ಮತ್ತು ಜೆಪಿ ಭಾವಚಿತ್ರಗಳನ್ನು ಬಳಸಿಕೊಂಡಿದೆ. ಈ ಮೂಲಕ ಹಳೆಯ ಜನತಾ ಪರಿವಾರದ ನೆನಪುಗಳನ್ನು ದೇವೇಗೌಡರು ರಾಜ್ಯದ ಜನರಿಗೆ ಮಾಡಿಸಲು ಹೊರಟಂತಿದೆ.

ಸಮಾವೇಶಕ್ಕೆ ಆಗಮಿಸಿದ ಅವರು ವೇದಿಕೆ ಪಕ್ಕದಲ್ಲಿ ಇಟ್ಟಿದ್ದ ಜೆಪಿ ಭಾವಚಿತ್ರವನ್ನು ತದೇಕಚಿತ್ತದಿಂದ ದಿಟ್ಟಿಸಿ ನೋಡಿದ್ದಾರೆ. ನಂತರ ವೇದಿಕೆ ಮೇಲೆ ಕುಳಿತವರು, ಜೆಪಿ ಕುರಿತಾದ ಕಿರುಹೊತ್ತಿಗೆಯನ್ನು ತರಿಸಿಕೊಂಡು ಓದಲು ಶುರುಮಾಡಿದ್ದಾರೆ. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕರು ದೇವೇಗೌಡರನ್ನು ಜೆಪಿಯವರ ಪೀಳಿಗೆ ಎಂದು ಬಣ್ಣಿಸಿದ್ದಾರೆ.

ಸಮಾವೇಶದ ವೇದಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ.

ಸಮಾವೇಶದ ವೇದಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ.

ಈ ಸಮಯದಲ್ಲಿ ಮಾತನಾಡಿದ ದೇವೇಗೌಡರು, “ಜಯಪ್ರಕಾಶ್ ನಾರಾಯಣ್ ನೆನಪು ಮಾಡಿಕೊಂಡರೆ ನನ್ನ ಮನಸ್ಸು ಕರಗುತ್ತದೆ. ಗಾಂಧೀಜಿ ಬಿಟ್ಟರೆ ಈ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಿದವರು ಜೆಪಿ. ಆ ಕಾರಣಕ್ಕೆ ಅವರ ಹೆಸರನ್ನು ಜೆ.ಡಿ.ಎಸ್ ಕಚೇರಿಗೆ ಇಡಲಾಗಿದೆ. ಚಂಬಲ್ ಕಣಿವೆ ಡಕಾಯಿತೆ ಪೂಲಂ ದೇವಿಯಂಥವರನ್ನೂ ಸರಿ ದಾರಿಗೆ ತಂದು ಲೋಕಸಭೆ ಸದಸ್ಯೆಯಾಗುವಂತೆ ಮಾಡಿದವರು ಅವರು. ಅವರ ಮುಂದೆ ನಾವೆಲ್ಲಾ ಹುಳುಗಳಿದ್ದ ಹಾಗೆ,” ಎಂದರು. ಜನತಾಪಕ್ಷದಿಂದ ದೂರ ಸರಿದ ಒಂದು ತಲೆಮಾರನ್ನು ಮತ್ತೆ ಜೆಡಿಎಸ್‌ ನೆರಳಿಗೆ ಕರೆಯುವ ಪ್ರಯತ್ನದಂತೆ ಇದು ಕಾಣಿಸುತ್ತಿದೆ.

ಸಾಲ ಮನ್ನಾ ವಿಚಾರ:

ಮಾಜಿ ಸಿಎಂ ಕುಮಾರಸ್ವಾಮಿ ಭಾಷಣದಲ್ಲಿ ಮತ್ತೆ ರೈತರ ಸಾಲ ಮನ್ನಾ ವಿಚಾರ ಪ್ರಸ್ತಾಪವಾಗಿದೆ. ಸಮಾವೇಶದ ನಿರ್ಣಯಗಳಲ್ಲಿಯೂ ಇದೇ ವಿಚಾರ ಸ್ಥಾನ ಪಡೆದುಕೊಂಡಿದೆ. ಈ ಬಾರಿಯ ಬಜೆಟ್‌ನಲ್ಲಿ ಸಾಲ ಮನ್ನಾ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ದೇವೇಗೌಡರು ಪತ್ರವನ್ನು ಬರೆದಿದ್ದರು. ಮಾಧ್ಯಮಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಹೊಣೆಯನ್ನು ವರ್ಗಾವಣೆ ಮಾಡುವ ಮೂಲಕ ಸಾಲ ಮನ್ನಾ ಘೋಷಣೆ ಮಾಡದೆ ಹೋಗಿದ್ದರು. ಇದೀಗ ಅದನ್ನೇ ಮುಂದಿನ ಚುನಾವಣೆಯ ಅಸ್ತ್ರವಾಗಿ ಜೆಡಿಎಸ್ ಬಳಸಿಕೊಳ್ಳುವ ಸಾಧ್ಯತೆ ಕಾಣಿಸುತ್ತಿದೆ. ಹೀಗಾಗಿಯೇ ಕುಮಾರಸ್ವಾಮಿ ಪದೇ ಪದೇ ಸಾಲ ಮನ್ನಾ ಮಾಡುವ ಕುರಿತು ಗಮನ ಸೆಳೆಯುತ್ತಿದ್ದಾರೆ.

ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಹಾಗೂ ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಮಾಡಿದರೆ ಹೆಚ್ಚು ಅನುಕೂಲ ಆಗುವುದು ರೈತರಿಗೆ. ಇಲ್ಲಿ ರೈತರು ಎಂದರೆ ದೊಡ್ಡ ಸಂಖ್ಯೆಯಲ್ಲಿ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದವರು ಫಲಾನುಭವಿಗಳಾಗುತ್ತಾರೆ. ಹೀಗಾಗಿ, ಒಕ್ಕಲಿಗರ ಮತಬ್ಯಾಂಕ್‌ ನಂಬಿಕೊಂಡಿರುವ ಜೆಡಿಎಸ್‌ಗೆ ಈ ಘೋಷಣೆ ಸಹಜವಾಗಿಯೇ ಲಾಭ ತಂದುಕೊಡಬಹುದು ಎಂಬುದು ಲೆಕ್ಕಾಚಾರ.

“ಸಾಲ ಮನ್ನಾ ಮಾಡುವುದು ರಾಜಕೀಯ ತೀರ್ಮಾನ. ಆದರೆ ಅದು ತಳಮಟ್ಟದಲ್ಲಿ ಎಷ್ಟರ ಮಟ್ಟಿಗೆ ರೈತರಿಗೆ ಅನುಕೂಲವಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ,” ಎನ್ನುತ್ತಾರೆ ಸಹಕಾರಿ ಸಂಘಗಳಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು.

‘ಪಾದ ಯಾತ್ರೆ’ ಗೇಮ್‌ ಚೇಂಜರ್‌:

ಅಧಿಕಾರ ರಾಜಕಾರಣದಲ್ಲಿ ಪಾದಯಾತ್ರೆಗಳು ಗೇಮ್‌ ಚೇಂಜರ್ ಆಗುತ್ತವೆ ಎಂಬುದಕ್ಕೆ ಪಕ್ಕದ ಆಂಧ್ರ ಪ್ರದೇಶ ಉದಾಹರಣೆ. ತೆಲಗು ದೇಸಂ ಪಕ್ಷದ ಚಂದ್ರಬಾಬು ನಾಯ್ಡು ಜನಪ್ರಿಯತೆಯ ಉತ್ತುಂಗದಲ್ಲಿದ್ದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ವೈ. ಎಸ್. ರಾಜಶೇಖರ್ ರೆಡ್ಡಿ ಪಾದಯಾತ್ರ ನಡೆಸಿದ್ದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರಸ್ ಪಕ್ಷ ಭರ್ಜರಿ ಜಯ ದಾಖಲಿಸಿತ್ತು. ಇದರಿಂದ ಪರೋಕ್ಷ ಪ್ರೇರಣೆ ಪಡೆದ ಕುಮಾರಸ್ವಾಮಿ ಹಿಂದೊಮ್ಮೆ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದರು ಕೂಡ. ಆದರೆ, ಪಾದಯಾತ್ರೆಯನ್ನು ಕಾರ್ಯರೂಪಕ್ಕೆ ತಂದವರು ಸಿದ್ದರಾಮಯ್ಯ. ಬಳ್ಳಾರಿ ಗಣಿ ಧಣಿಗಳ ವಿರುದ್ಧ ತೊಡೆತಟ್ಟಿ ಪಾದಯಾತ್ರೆ ನಡೆಸಿದ್ದರು. ಅದರ ಫಲ ಕಣ್ಣ ಮುಂದಿದೆ.

ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಜೆಡಿಎಸ್ ಕೂಡ ಪಾದಯಾತ್ರೆ ಮಾಡುವುದಾಗಿ ಹೇಳುತ್ತಿದೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕುಮಾರಸ್ವಾಮಿ ಕಾಣಿಸಿಕೊಳ್ಳುತ್ತಿದ್ದಾರೆ. ಇವತ್ತಿಗೂ ರಾಜ್ಯದ ಮಹಿಳೆಯರು ಮತ್ತು ಯುವ ಜನರಲ್ಲಿ ಕುಮಾರಸ್ವಾಮಿ ಕುರಿತು ಅಭಿಮಾನ ಇದೆ. ಆದರೆ ಅವು ಮತಗಳಾಗಿ ಬದಲಾಗುತ್ತವಾ ಎಂಬ ಅನುಮಾನವೂ ಇದೆ.

ಹೀಗಿರುವಾಗಲೇ ಪ್ರಾದೇಶಿಕ ಪಕ್ಷದ ಪ್ರಾಮುಖ್ಯತೆ, ಸಮಾಜವಾದಿ ಹಿನ್ನೆಲೆ, ರೈತರ ಸಾಲ ಮನ್ನಾ, ಪಾದಯಾತ್ರೆ ಹೀಗೆ ಹಲವು ಆಯಾಮಗಳ ಆಲೋಚನೆಗಳು ಜೆಡಿಎಸ್‌ ವಲಯದಲ್ಲಿ ಚಲಾವಣೆಗೆ ಬಂದಿವೆ. ಮುಂದಿನ ದಿನಗಳಲ್ಲಿ ಘೋಷಣೆಗಳಿಗಿಂತ ಕೆಲಸ ಮಾತ್ರವೇ ಜೆಡಿಎಸ್‌ ಭವಿಷ್ಯವನ್ನು ನಿರ್ಧರಿಸಲಿದೆ.

Leave a comment

FOOT PRINT

Top