An unconventional News Portal.

ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಮೊದಲ ಸವಾಲ್; ಸಿರಿಯಾ ಮಿಸೈಲ್ ಹೊಡೆದುರುಳಿಸಿದ ಇಸ್ರೇಲ್

ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಮೊದಲ ಸವಾಲ್; ಸಿರಿಯಾ ಮಿಸೈಲ್ ಹೊಡೆದುರುಳಿಸಿದ ಇಸ್ರೇಲ್

ಹಲವು ದೇಶಗಳಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವೊಂದು ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಎದುರಿಸಿ ಉತ್ತೀರ್ಣವಾದ ನಿದರ್ಶನವಿದು. ಇಸ್ರೇಲ್ ತನ್ನ ಅತ್ಯಾಧುನಿಕ ‘ಕ್ಷಿಪಣಿ ನಿರೋಧಕ ವ್ಯವಸ್ಥೆ’ಯ ಮೂಲಕ ಸಿರಿಯಾ ಮಿಸೈಲನ್ನು ಹೊಡೆದುರುಳಿಸಿ ಸದ್ದು ಮಾಡಿದೆ.

ಹಾಗೆ ನೋಡಿದರೆ ರಷ್ಯಾ, ಚೀನಾ, ಅಮೆರಿಕಾ, ಇಸ್ರೇಲ್, ಫ್ರಾನ್ಸ್ ಮೊದಲಾದ ಮುಂದುವರಿದ ಮಿಲಿಟರಿ ದೇಶಗಳ ಬಳಿ ಈ ತಂತ್ರಜ್ಞಾನವಿದೆ. ಇತ್ತೀಚೆಗೆ ಭಾರತವೂ ಪಾಕಿಸ್ತಾನದ ಸಾಂಭಾವ್ಯ ಮಿಸೈಲ್ ದಾಳಿಯನ್ನು ಎದುರಿಸಲು ಇಸ್ರೇಲಿನಿಂದ ಇದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಲು ಮುಂದಾಗಿದೆ.  ಉತ್ತರ ಕೊರಿಯಾದ ದಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ದಕ್ಷಿಣಾ ಕೊರಿಯಾವೂ ಇದೇ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದೆ. ಆದರೆ ಇಲ್ಲಿವರೆಗೆ ಈ ಕ್ಷಿಪಣಿ ನಿರೋಧಕ ತಂತ್ರಜ್ಞಾನ ಪರೀಕ್ಷಾರ್ಥ ಉಡಾವಣೆಗಳಲ್ಲಿ ಪಾಸಾಗಿತ್ತೇ ವಿನಃ ನಿಜವಾದ ‘ಪಬ್ಲಿಕ್ ಪರೀಕ್ಷೆ’ಯನ್ನು ಎದುರಿಸಿರಲಿಲ್ಲ. ಇದೀಗ ಅಂಥಹದ್ದೊಂದು ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ತನ್ನ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ ಇಸ್ರೇಲ್.

2000ನೇ ಇಸವಿಯ ಸುಮಾರಿಗೆ ಖಂಡಾಂತರ ಕ್ಷಿಪಣಿಗಳನ್ನು ತಡೆದು ನಿಲ್ಲಿಸುವ ‘ಆ್ಯರೋ’ ಹೆಸರಿನ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನ ಇಸ್ರೇಲ್ ಪ್ರತಿಷ್ಠಾಪನೆ ಮಾಡಿತ್ತು. ಇದರ ಮೂಲಕ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯನ್ನು ( ಸರ್ಫೇಸ್ ಟು ಏರ್ ಮಿಸೈಲ್) ನ್ನು ಹೊಡೆದುರುಳಿಸಲಾಗಿದೆ. ಇಸ್ರೇಲಿನ ಪ್ರತಿದಾಳಿಯಿಂದ ಈ ಮಿಸೈಲ್ ಜೋರ್ಡಾನಿನಲ್ಲಿ ಹೋಗಿ ಬಿದ್ದಿದೆ. “ಜೆರುಸಲೆಂ ಉತ್ತರಕ್ಕಿರುವ ‘ಆ್ಯರೋ’ ವ್ಯವಸ್ಥೆ ಸಿರಿಯಾ ಕ್ಷಿಪಣಿಯನ್ನು ತಡೆದಿರುವುದಾಗಿ,” ಇಸ್ರೇಲ್ ಹೇಳಿಕೊಂಡಿದೆ. ಇದೇ ವೇಳೆ ದೇಶದ ಉತ್ತರ ಭಾಗದ ಗ್ರಾಮೀಣ ಪ್ರದೇಶವೊಂದರಲ್ಲಿ ಮಿಸೈಲ್ ಬಂದು ಬಿದ್ದಿರುವುದಾಗಿ ಜೋರ್ಡಾನ್ ಒಪ್ಪಿಕೊಂಡಿದೆ. ಸಿರಿಯಾದ ಗಡಿಯಿಂದ 40 ಕಿಲೋಮೀಟರ್ ದೂರದಲ್ಲಿ ಇನ್ಬೆಹ್ ನಲ್ಲಿ ಕ್ಷಿಪಣಿ ಬಂದು ಬಿದ್ದಿದೆ ಎಂದು ಅದು ಹೇಳಿದೆ.

Israel, Jordan, Syria Map

ಸಿರಿಯಾದಲ್ಲಿ ಇಸ್ರೇಲ್ ಕಳೆದ ಕೆಲವು ದಿನಗಳಿಂದ ನಿರಂತರ ಬಾಂಬ್ ಮಳೆಗರೆಯುತ್ತಿದ್ದು,  ಬಾಂಬ್ ದಾಳಿ ನಡೆಸುತ್ತಿರುವ ಯುದ್ಧ ವಿಮಾನಗಳನ್ನು ಗುಇಯಾಗಿಸಿ ಕ್ಷಿಪಣಿಗಳನ್ನು ಉಡಾಯಿಸಲಾಗಿತ್ತು.  ಅವುಗಳಲ್ಲಿ ಒಂದು ಮಿಸೈಲನ್ನು ಇಸ್ರೇಲ್ ಹೊಡೆದುರುಳಿಸಿದೆ.  ಆದರೆ ಇನ್ನೆರಡು ಮಿಸೈಲ್ ಗಳು ಇಸ್ರೇಲ್ ನೆಲದಲ್ಲಿ ಬಂದು ಬಿದ್ದಿವೆ ಎನ್ನಲಾಗಿದೆ. ಇದೇ ವೇಳೆ ನಾವು ಇಸ್ರೇಲಿನ 1 ಪೈಟರ್ ಜೆಟ್ ನ್ನು ಹೊಡೆದುರುಳಿಸಿದ್ದಾಗಿ ಸಿರಿಯಾ ಹೇಳಿದೆ. ಆದರೆ ಈ ವಾದವನ್ನು ಇಸ್ರೇಲ್ ತಳ್ಳಿ ಹಾಕಿದ್ದು, ‘ಸಿರಿಯಾದ ಹಲವು ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಸಲಾಗಿದೆ. ಆದರೆ ಯಾವುದೇ ಯುದ್ಧ ವಿಮಾನಗಳು ಪತನವಾಗಿಲ್ಲ,” ಎಂದು ಸ್ಪಷ್ಟಪಡಿಸಿದೆ.

ಅಚ್ಚರಿಯ ಬೆಳವಣಿಗೆ

ಹಾಗೆ ನೋಡಿದರೆ ಇಸ್ರೇಲ್ ಹೇಳಿಕೆ ಹಲವು ಅಚ್ಚರಿಯ ಬೆಳವಣಿಗೆಗಳ ಬಗ್ಗೆ ಗಮನ ಸೆಳೆಯುತ್ತಿದೆ. ಮೊದಲೆನೆಯದಾಗಿ ಸಿರಿಯಾದಲ್ಲಿ ಬಾಂಬ್ ದಾಳಿ ನಡೆಸುತ್ತಿರುವುದನ್ನು ಇಸ್ರೇಲ್ ಬಹಿರಂಗವಾಗಿ ಒಪ್ಪಿಕೊಂಡಿದೆ ಇದೇ ಮೊದಲು. ಈ ಹಿಂದೆ ಕಳೆದ ಡಿಸೆಂಬರಿನಿಂದ ಕನಿಷ್ಟ ನಾಲ್ಕು ಬಾರಿ ಹಿಜ್ಬುಲ್ಲಾ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂಬ ವರದಿಗಳಿತ್ತು. ಇದನ್ನು ಇಸ್ರೇಲ್ ಒಪ್ಪಿಕೊಂಡಿರಲಿಲ್ಲ. ಎರಡನೆಯದಾಗಿ ಇಸ್ರೇಲಿನ ‘ಆ್ಯರೋ ಆ್ಯಂಟಿ ಬ್ಯಾಲಿಸ್ಟಿಕ್ ಮಿಸೈಲ್ ಸಿಸ್ಟಮ್’ ತನ್ನ ಸಾಮೃರ್ಥ್ಯ ಸಾಬೀತು ಮಾಡಿದೆ.

ಇಸ್ರೇಲ್ಸಿರಿಯಾ ಸಂಘರ್ಷ

ಸಿರಿಯಾದಲ್ಲಿ ಅಮೆರಿಕಾ, ರಷ್ಯಾ, ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸದ್ ಹಾಗೂ ಐಸಿಲ್ ನಡುವೆ ನಡೆಯುತ್ತಿದ್ದ ಬಹುಕೋನ ಸಂಘರ್ಷಕ್ಕೆ ಕೆಲವು ಸಮಯದ ಹಿಂದೆ ಇಸ್ರೇಲ್ ಕೂಡಾ ಕಾಲಿಟ್ಟಿದೆ. ಈಗಾಗಲೇ ಸಿರಿಯಾದಲ್ಲಿ ಐಸಿಲ್ ನೆಲೆಗಳ ಮೇಲೆ ಅಮೆರಿಕಾ ಮತ್ತು ರಷ್ಯಾ ಹಲವು ಸುತ್ತಿನ ದಾಳಿಗಳನ್ನು ನಡೆಸಿದ ನಂತರ ಇಸ್ರೇಲ್ ಕೂಡಾ ಸಿರಿಯಾ ನೆಲದ ಮೇಲೆ ಬಾಂಬುಗಳ ಮಳೆಗರೆದಿದೆ.

10 ದಿನಗಳ ಹಿಂದಷ್ಟೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನು ಮಾಸ್ಕೋದಲ್ಲಿ ಭೇಟಿಯಾಗಿದ್ದರು. ಈಗಾಗಲೇ ಸಿರಿಯಾದ ಹಲವು ಭಾಗಗಳ ಮೇಲೆ ರಷ್ಯಾದ ರಡಾರ್ ಗಳು ಮತ್ತು ಯುದ್ಧವಿಮಾನಗಳು ನಿಯಂತ್ರಣ ಸಾಧಿಸಿರುವುದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿತ್ತು. ಭೇಟಿ ಮುಗಿಸಿ ಬರುತ್ತಿದ್ದಂತೆ ಸಿರಿಯಾ ನೆಲದ ಮೇಲಿನ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿತ್ತು. ಈ ಮೂಲಕ ‘ಲೆಬನಾನ್ ಮೂಲದ ಸದ್ಯ ಸಿರಿಯಾದಲ್ಲಿ ಹಾವಳಿ ಎಬ್ಬಿಸುತ್ತಿರುವ ಶಿಯಾ ಬಂಡುಕೋರ ಸಂಘಟನೆ ಹಿಜ್ಬುಲ್ಲಾಗೆ ಶಸ್ತ್ರಾಸ್ತ್ರಗಳ ಪೂರೈಕೆ ಮುಂದುವರಿದರೆ ತಾನು ಸುಮ್ಮನಿರಲಾರೆ,’ ಎಂಬ ಸಂದೇಶವನ್ನು ಇಸ್ರೇಲ್ ದಾಟಿಸಿದೆ.

2011ರಲ್ಲಿ ಸಿರಿಯಾ ಯುದ್ಧ ಆರಂಭವಾದ ನಂತರ ಸಿರಿಯಾ-ಇಸ್ರೇಲ್ ಮಧ್ಯೆ ಗಡಿಯಾಚೆಗಿನ ದಾಳಿಗಳು ಸಾಮಾನ್ಯವಾಗಿದ್ದವು. ವರದಿಗಳ ಪ್ರಕಾರ ಈ ಹಿಂದೆ ಹಲವು ಬಾರಿ ಹಿಜ್ಬುಲ್ಲಾ ಶಸ್ತ್ರಕೋಠಿಯ ಮೇಲೆ ಇಸ್ರೇಲ್ ಬಾಂಬ್ ದಾಳಿಗಳನ್ನು ನಡೆಸಿದೆ. ಇದಕ್ಕೆ ಪ್ರತಿಯಾಗಿ ಬಂಡುಕೋರರು ಇಸ್ರೇಲ್ ಆಕ್ರಮಿತ ಸಿರಿಯಾದ ಗೋಲನ್ ಹೈಟ್ಸ್ ಮೇಲೆ ಶೆಲ್ ದಾಳಿಗಳನ್ನು ನಡೆಸಿದ್ದರು. ಇಸ್ರೇಲಿನ ಯುದ್ಧ ವಿಮಾನಗಳ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದ್ದರು. ಆದರೆ ಇಲ್ಲಿವರೆಗೆ ಯಾವುದೇ ವಿಮಾನ ಧರೆಗುರುಳಿದ್ದು ಮಾತ್ರ ವರದಿಯಾಗಿಲ್ಲ.

ಏನಿದು ‘ಆ್ಯರೋ’ ವ್ಯವಸ್ಥೆ

1991 ಕೊಲ್ಲಿ ಯುದ್ಧ(ಗಲ್ಫ್ ವಾರ್) ಸಮಯದಲ್ಲಿ ಈ ಕ್ಷಪಣಿ ನಿರೋಧಕ ವ್ಯವಸ್ಥೆಯನ್ನು ಇಸ್ರೇಲ್ ಮತ್ತು ಅಮೆರಿಕಾ ಸೇರಿಕೊಂಡು ಸಿದ್ದಪಡಿಸಿದ್ದವು. ಈ ಯುದ್ಧದಲ್ಲಿ ಇರಾಕಿನಿಂದ ಸಿಡಿದ39 ಮಿಸೈಲ್ ಗಳು ಇಸ್ರೇಲ್ ಭೂಮಿಯ ಮೇಲೆ ಬಂದು ಬಿದ್ದಿದ್ದವು. ಇದರಿಂದ ತಲೆಕೆಟ್ಟ ಇಸ್ರೇಲ್ ಇಂಥಹದ್ದೊಂದು ತಂತ್ರಜ್ಞಾನದ ಮೊರೆ ಹೋಗಿತ್ತು.

Arrow Anti missile Israel

2000ನೇ ಇಸವಿಯಲ್ಲಿ ಈ ವ್ಯವಸ್ಥೆ ಬಳಕೆಗೆ ಬಂತು. ಅದಾದ ನಂತರ ಈ ವ್ಯವಸ್ಥೆಯಲ್ಲಿ ಎರಡು ಬಾರಿ ಸುಧಾರಣೆಗಳನ್ನೂ ಮಾಡಲಾಗಿದೆ. ಇದೀಗ ಸಣ್ಣ, ಮಧ್ಯಮ ಮತ್ತು ಖಂಡಾಂತರ ಕ್ಷಿಪಣಿಗಳಂಥ ಬಹುದೂರ ಕ್ರಮಿಸುವ ಕ್ಷಿಪಣಿಗಳ ದಾಳಿಯನ್ನೂ ಎದುರಿಸುವ ಸಾಮರ್ಥ್ಯವನ್ನು ಆ್ಯರೋ ಹೊಂದಿದೆ.

ಇವೆಲ್ಲಾ ಒಂದು ಹಂತದ ಕ್ಷಿಪಣಿ ಮತ್ತು ಕ್ಷಿಪಣಿ ನಿರೋಧಕ ವ್ಯವಸ್ಥೆಗಳ ಮುಖಾಮುಖಿಯಷ್ಟೆ. ಇತ್ತೀಚೆಗೆ ಚೀನಾ ಮತ್ತು ಅಮೆರಿಕಾ ದೇಶಗಳು ಸಾಮಾನ್ಯ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಬೇಧಿಸುವ ಅತೀ ವೇಗದ ಕ್ಷಿಪಣಿಗಳ ವಿನ್ಯಾಸದಲ್ಲಿ ತೊಡಗಿಸಿಕೊಂಡಿವೆ. ಹೀಗೆ ತಂತ್ರ ಪ್ರತಿತಂತ್ರಗಳ ಮೇಲಾಟ ಸಮರ ಭೂಮಿಯಾಚೆಗೆ ಜಾರಿಯಲ್ಲಿದೆ.

(ಚಿತ್ರ ಕೃಪೆ: ಬಿಬಿಸಿ)

 

Leave a comment

FOOT PRINT

Top