An unconventional News Portal.

ಉದ್ಯಮಿಯ ‘ಘನತೆಗೆ ಧಕ್ಕೆ’: ‘ದಿ ವೈರ್’ ವರದಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ

ಉದ್ಯಮಿಯ ‘ಘನತೆಗೆ ಧಕ್ಕೆ’: ‘ದಿ ವೈರ್’ ವರದಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ

ದೇಶದ ಟಿಜಿಟಲ್ ಪತ್ರಿಕೋದ್ಯಮದಲ್ಲಿ ‘ಸ್ವತಂತ್ರ’ ಮಾಧ್ಯಮವಾಗಿ ದಾಪುಗಾಲಿಡುತ್ತಿರುವ ‘ದಿ ವೈರ್ ಡಾಟ್ ಇನ್‌’ ಪ್ರಕಟಿಸಿದ ಎರಡು ವರದಿಗಳಿಗೆ ಬೆಂಗಳೂರಿನ ನ್ಯಾಯಾಲಯವೊಂದು ಅನೀಕ್ಷಿತ ನಡೆಯಲ್ಲಿ ತಡೆಯಾಜ್ಷೆ ನೀಡಿದೆ. ಇದೇ ತಿಂಗಳ ಕೊನೆಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಸಂಸದ, ಉದ್ಯಮಿ ರಾಜೀವ್‌ ಚಂದ್ರಶೇಖರ್ ಬೆಂಗಳೂರಿನ 40ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾ. 2 ರಂದು ‘ಘನತೆಗೆ ಧಕ್ಕೆ ಮಾಡುವ’ ವರದಿಗಳ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿನರಲ್ಕರ್ ಭೀಮರಾವ್ ಲಗಮಪ್ಪ ‘ದಿ ವೈರ್’ ಪ್ರಕಟಿಸಿದ ಎರಡು ವರದಿಗಳ ವಿರುದ್ಧ ತಡೆಯಾಜ್ಞೆ ನೀಡಿದ್ದಾರೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಾ. 6ರಂದು ಸುದ್ದಿ ತಾಣ ರಾಜೀವ್ ಚಂದ್ರಶೇಖರ್ ಕುರಿತು ಪ್ರಕಟಿಸಿದ ಎರಡು ವರದಿಗಳನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದೆ.

ಏನೀ ವರದಿಗಳು?: 

‘ದಿ ವೈರ್’ ಜನವರಿ 25ರಂದು ಅರ್ನಾಬ್ ಗೋಸ್ವಾಮಿ ನೇತೃತ್ವದಲ್ಲಿ ಆರಂಭವಾಗಲಿರುವ ‘ರಿಪಬ್ಲಿಕ್’ ಮಾಧ್ಯಮದಲ್ಲಿ ಹೂಡಿಕೆಗಳ ಕುರಿತು ವರದಿ ಮಾಡಿತ್ತು. ‘ರಿಪಬ್ಲಿಕ್’ ಪ್ರಚಾರ ಸಭೆಗಳಲ್ಲಿ ಪತ್ರಕರ್ತ ಅರ್ನಾಬ್ ಗೋ ಸ್ವಾಮಿ ಸ್ವತಂತ್ರ ಮಾಧ್ಯಮವನ್ನು ಕಟ್ಟುತ್ತಿರುವುದಾಗಿ ಘೋಷಿಸಿದ್ದರು. ಅದರಲ್ಲಿ ರಾಜೀವ್‌ ಚಂದ್ರಶೇಖರ್ ಹೂಡಿಕೆ ಮಾಡುತ್ತಿರುವುದರಿಂದ ಸಹಜವಾಗಿಯೇ ‘ಸ್ವತಂತ್ರ’ ಮಾಧ್ಯಮದ ಕುರಿತು ಪ್ರಶ್ನೆಗಳು ಎದ್ದಿದ್ದವು. ಈ ಕುರಿತು ವಿಶ್ಲೇಷಣಾತ್ಮಕ ವರದಿಯೊಂದನ್ನು ‘ದಿ ವೈರ್’ ಪ್ರಕಟಿಸಿತ್ತು.

ಅರ್ನಾವ್ ಗೋಸ್ವಾಮಿ ಅವರ ರಿಪಬ್ಲಿಕ್ ಮಾಧ್ಯಮದ ಕುರಿತು ವೈರ್ ಪ್ರಕಟಿಸಿದ ವರದಿ.

ಅರ್ನಾವ್ ಗೋಸ್ವಾಮಿ ಅವರ ರಿಪಬ್ಲಿಕ್ ಮಾಧ್ಯಮದ ಕುರಿತು ವೈರ್ ಪ್ರಕಟಿಸಿದ ವರದಿ.

ಇದೇ ಸುದ್ದಿ ತಾಣದಲ್ಲಿ ಫೆ. 17ರಂದು ಮತ್ತೊಂದು ವರದಿ ಪ್ರಕಟಗೊಂಡಿತ್ತು. ಕೇರಳ ಮೂಲದ ಉದ್ಯಮಿ, ಮಾಧ್ಯಮ ಸಂಸ್ಥೆಗಳ ಮಾಲೀಕ ರಾಜೀವ್ ಚಂದ್ರಶೇಖರ್ ಮಿಲಿಟರಿಗೆ ಸಂಬಂಧಪಟ್ಟ ಕಂಪನಿಗಳಲ್ಲಿ ಹೂಡಕೆ ಮಾಡಿದ್ದಾರೆ. ಇದೇ ವೇಳೆ ಅವರು ಸೇನೆಯ ಸಂಸದೀಯ ಸಮಿತಿಯ ಸದಸ್ಯರಾಗಿದ್ದಾರೆ. ಇದು ‘ಹಿತಾಸಕ್ತಿಗಳ ಸಂಘರ್ಷ’ವಾಗುತ್ತಿದೆ ಎಂದು ‘ದಿ ವೈರ್’ ವರದಿ ಪ್ರತಿಪಾದಿಸಿತ್ತು.

ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿರುವ ಮತ್ತೊಂದು ವರದಿ.

ಸದ್ಯ ಈ ಎರಡೂ ವರದಿಗಳಿಂದ ತಮ್ಮ ‘ಘನತೆ’ಗೆ ಧಕ್ಕೆ ಆಗುತ್ತಿದೆ ಎಂದು ಆರೋಪಿಸಿರುವ ರಾಜೀವ್ ಚಂದ್ರಶೇಖರ್ ವರದಿಗಳ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ವಿಶೇಷ ಅಂದರೆ ಮಾ. 2ರಂದು ನ್ಯಾಯಾಲಯ ತಡೆಯಾಜ್ಞೆ ಆದೇಶವನ್ನು ನೀಡಿದ ನಂತರವೇ ‘ದಿ ವೈರ್’ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಅದಕ್ಕೂ ಮುಂದೆ ಎರಡೂ ಕಡೆಯವರ ವಾದಗಳನ್ನು ಆಲಿಸದಿರುವುದು ಅನಿರೀಕ್ಷತ ನಡೆಯಾಗಿದೆ ಎಂದು ‘ಸ್ಕ್ರಾಲ್ ಡಾಟ್ ಇನ್’ ವರದಿ ಪ್ರಕಟಿಸಿದೆ.

ಇದೇ ಸುದ್ದಿತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ‘ದಿ ವೈರ್’ ಸಂಪಾದಕ ಸಿದ್ದಾರ್ಥ್ ವರದರಾಜನ್, “ವಿಚಾರಣೆ ಸಮಯದಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ರಾಜೀವ್ ಚಂದ್ರಶೇಖರ್ ಕಡೆಯ ವಕೀಲರು ನೋಟಿಸ್ ನೀಡಿದ ನಂತರವೇ ಮಾಹಿತಿ ಗೊತ್ತಾಯಿತು. ಈ ಕುರಿತು ಕಾನೂನು ಹೋರಾಟ ಮುಂದುವರಿಸಲಾಗುವುದು,” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಹೇಳಿಕೆಯನ್ನು’ದಿ ವೈರ್’ ತನ್ನೆರಡು ವರದಿಗಳ ಕೆಳಗೂ ಈಗ ಪ್ರಕಟಿಸಿದೆ. ಇದೇ ತಿಂಗಳ ಕೊನೆಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ನ್ಯಾಯಾಲಯದಲ್ಲಿ ದಾವೆ ಹೂಡಿದ ಕುರಿತು ಪ್ರತಿಕ್ರಿಯಸಿರುವ ರಾಜೀವ್ ಚಂದ್ರಶೇಖರ್, “ನನ್ನ ವಿರುದ್ಧ ಕಾಂಗ್ರೆಸ್ ಮತ್ತು ಅವರ ಜತೆ ಸಂಬಂಧ ಹೊಂದಿರುವ ಮಾಧ್ಯಮಗಳಿಂದ ಅಪಪ್ರಚಾರ ನಡೆಯುತ್ತಿದೆ,” ಎಂದು ಆರೋಪಿಸಿದ್ದಾರೆ.

“ಬೆಂಗಳೂರಿನ ನ್ಯಾಯಾಲಯ ನೀಡಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ಪ್ರಶ್ನಿಸಬೇಕಿದೆ. ಇಲ್ಲವಾದರೆ, ಅಧಿಕಾರ ಕೇಂದ್ರದಲ್ಲಿರುವ ಜನರಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಇಂತಹ ನಡೆಗಳು ಹೆಚ್ಚಾಗುತ್ತವೆ,” ಎಂದು ಸಿದ್ದಾರ್ಥ್ ವರದರಾಜನ್ ಹೇಳಿದ್ದಾರೆ ಎಂದು ‘ಸ್ಕ್ರಾಲ್’ ಪ್ರಕಟಿಸಿದೆ.

Leave a comment

FOOT PRINT

Top