An unconventional News Portal.

‘ಜನರ ದುಡ್ಡಲ್ಲಿ ವಿಶ್ರಾಂತಿ ರಜೆ’: ಮೈಸೂರು ವಿವಿ ಒಳಗೆ ‘ಪುಸ್ತಕ’ದ ಹೆಸರಿನಲ್ಲಿ ಬಾನಗಡಿ!

‘ಜನರ ದುಡ್ಡಲ್ಲಿ ವಿಶ್ರಾಂತಿ ರಜೆ’: ಮೈಸೂರು ವಿವಿ ಒಳಗೆ ‘ಪುಸ್ತಕ’ದ ಹೆಸರಿನಲ್ಲಿ ಬಾನಗಡಿ!

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ, ಬಿ. ಆರ್. ಅನಂತನ್ ವಿರುದ್ದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅದೇಶಿಸಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಬಾನಗಡಿಗಳಿಗೆ ತಾಜಾ ಉದಾಹರಣೆಯೊಂದು ಸಿಕ್ಕಂತಾಗಿದೆ.

ಪ್ರೊಫೆಸರ್ ಅನಂತನ್ ಮೈಸೂರು ವಿಶ್ವವಿದ್ಯಾನಿಲಯದ ಬಿ. ಎನ್. ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ವೇತನ ಸಹಿತ ವಿಶ್ರಾಂತಿ ರಜೆ (ಸಬಾಟಿಕಲ್ ಲೀವ್)ಯನ್ನು ತೆಗೆದುಕೊಂಡಿದ್ದರು. ನಂತರ ಅವರು ಅದನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂಬ ಗುರುತರ ಆಪಾದನೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಆದೇಶಿಸಿದೆ.

2007-2008 ರಲ್ಲಿ, ಅನಂತನ್ ಮೈಸೂರು ವಿವಿಗೆ ಪುಸ್ತಕವೊಂದನ್ನು ಬರೆಯಲು ವೇತನ ಸಹಿತ ವಿಶ್ರಾಂತಿ ರಜೆಯನ್ನು ಪಡೆದುಕೊಂಡಿದ್ದರು. ಆದರೆ ಅವರಿಂದ ಆ ವರ್ಷದಲ್ಲಿ ಯಾವುದೇ ಪುಸ್ತಕ ಬರೆಯದೇ ಇರುವುದು ಬಯಲಿಗೆ ಬಂದಿದೆ. ‘ಸಮಾಚಾರ’ಕ್ಕೆ ಈ ಕುರಿತಾದ ದಾಖಲೆಗಳು ಲಭ್ಯವಾಗಿವೆ.

ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಸರಕಾರ ನೀಡಿದ ಆದೇಶದ ಪ್ರತಿ. (ಮೂಲ: ಶೇಖರ್, ಮಾಹಿತಿ ಹಕ್ಕು ಕಾರ್ಯಕರ್ತ)

ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಸರಕಾರ ನೀಡಿದ ಆದೇಶದ ಪ್ರತಿ. (ಮೂಲ: ಶೇಖರ್, ಮಾಹಿತಿ ಹಕ್ಕು ಕಾರ್ಯಕರ್ತ)

ಅನಂತನ್, 2010ರ ಸಮಯದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಕಗೊಂಡರು. ಅದಾದ ನಾಲ್ಕು ವರ್ಷಗಳ ನಂತರ 2014 ರಲ್ಲಿ 2007-2008 ರಲ್ಲಿ ಪುಸ್ತಕ ಬರೆದಿದ್ದಾಗಿ ಮೈಸೂರು ವಿವಿಗೆ ವರದಿ ಮಾದರಿಯ ಸ್ಪೈರಲ್ ಬೈಂಡಿಗ್ ಮಾಡಿದ ಪುಸ್ತಕವನ್ನು ಪ್ರಸ್ತತ ಪಡಿಸಿದ್ದರು. ತಮಾಷೆ ಏನೆಂದರೆ, 2007-2008 ರಲ್ಲಿ ಬರೆದ ಪುಸ್ತಕದಲ್ಲಿ, ಅವರು 2012 ಹಾಗು 2013 ರಲ್ಲಿ ಬರೆದ ಲೇಖನಗಳನ್ನು ಉಲ್ಲೇಖಿಸಿದ್ದಾರೆ. “2007-2008 ರಲ್ಲಿ ಈ ಪುಸ್ತಕ ರಚಿತವಾಗಿದ್ದರೆ, 2012,2013 ರಲ್ಲಿ ಬರೆದ ಲೇಖನಗಳ ಉಲ್ಲೇಖ ಮಾಡಲು ಹೇಗೆ ಸಾಧ್ಯ,” ಎಂದು ಪ್ರಶ್ನಿಸುತ್ತಾರೆ ಆರ್ ಟಿ ಐ ಕಾರ್ಯಕರ್ತ ಶೇಖರ್ ಅಯ್ಯರ್.

ಶೇಖರ್ 2015ರಲ್ಲಿ ಅನಂತನ್ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. 2014 ರ ಹೊತ್ತಿಗೆ ಕುಲಪತಿಯಾಗಿ ಅವರು ನಿವೃತ್ತಿ ಹೊಂದಿದ್ದ ಸಮಯದಲ್ಲಿ, ಶೇಖರ್ ಮೈಸೂರು ವಿವಿಗೆ ಆರ್ ಟಿ ಐ ಮೂಲಕ ಅನಂತ್ ಬರೆದಿರುವ ಪುಸ್ತಕದ ಪ್ರತಿಯನ್ನು ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ವಿವಿ, ಅನಂತ್ ಯಾವುದೇ ಪುಸ್ತಕವನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿಲ್ಲ ಎಂದು ತಿಳಿಸಿದೆ. ಆ ನಂತರವೇ ಸ್ಪೈರಲ್ ಬೈಂಡಿಂಗ್ ಪುಸ್ತಕವನ್ನು ವಿವಿಗೆ ಸಲ್ಲಿಸುವ ಕೆಲಸ ನಡೆದಿದೆ ಎನ್ನುತ್ತಾರೆ ಶೇಖರ್.

ಅನಂತ್ ತಮ್ಮ ವರದಿ ಮಾದರಿಯ ಪುಸ್ತಕವನ್ನು ಒಪ್ಪಿಸಿದ ಬಳಿಕ ಮೈಸೂರು ವಿವಿ ಅದರ ಪ್ರತಿಯನ್ನು ಶೇಖರ್ ಅವರಿಗೆ ತಲುಪಿಸಿದೆ. ಆ ಹೊತ್ತಗೆಯಲ್ಲಿರುವ  ವಿಚಾರಗಳ ಅಸಲಿಯತ್ತನ್ನು ಪರೀಕ್ಷಿಸುವ ತಂತ್ರಾಂಶದಲ್ಲಿ ಪರಿಕ್ಷೆಗೆ ಒಳಪಡಿಸಿದಾಗ, ಪುಸ್ತಕದಲ್ಲಿರುವ ಒಟ್ಟಾರೆ ವಿಚಾರಗಳಲ್ಲಿ ಶೇಕಡ 74%  ಬೇರೆ ಬೇರೆ ಮೂಲಗಳಿಂದ ನಕಲು ಮಾಡಿರುವುದು ಕಂಡುಬಂದಿದೆ.

ಲೋಕಾಯುಕ್ತ ಬಳಿ ದೂರು ದಾಖಲಾಗಿ, ಎರಡು ವರ್ಷಗಳ ಬಳಿಕ, ಮುಂದುವರಿದ ಭಾಗವೆಂಬಂತೆ ಹೊಸ ಬೆಳವಣಿಗೆಯೊಂದು ನಡೆದಿದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮೈಸೂರು ವಿವಿಯ ಕುಲಸಚಿವರಿಗೆ ಸಿವಿಲ್ ನ್ಯಾಯಾಲಯದಲ್ಲಿ ಅನಂತ್ ವಿರುದ್ದ ದಾವೆ ಹೂಡಬೇಕೆಂದು 14 ಫಬ್ರವರಿ, 2017 ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ, “ಪ್ರೊ. ಬಿ. ಆರ್. ಅನಂತನ್ ಇವರು ಪ್ರಸ್ತತ ನಿವೃತ್ತಿ ಹೊಂದಿದ್ದು, ಅವರುಗಳ ಮೇಲೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ, ಸರ್ಕಾರಕ್ಕೆ ಆದಂತಹ ನಷ್ಟವನ್ನು ಕಾಲಪರಿಮಿತಿ ಅಧಿನಿಯಮದ ಆರ್ಟಿಕಲ್ 112 ರ ಪ್ರಕಾರ ವಸೂಲಿ ಮಾಡಿಕೊಳ್ಳಲು 30 ವರ್ಷದವರೆಗೆ ಅವಕಾಶವಿರುತ್ತದೆ. ಅದರಂತೆ ಕೂಡಲೆ ಕ್ರಮ ತೆಗೆದುಕೊಂಡು ಸರ್ಕಾರಕ್ಕೆ ವರದಿಯನ್ನು ಕಳುಹಿಸಿಕೊಡುವಂತೆ ತಮ್ಮನ್ನು ಕೋರಲು ನಾನು ನಿರ್ದೇಶಿತನಾಗಿದ್ದೇನೆ,” ಎಂದು ತಿಳಿಸಲಾಗಿದೆ.

ಸದ್ಯ ಮೈಸೂರು ವಿವಿ ಕುಲಸಚಿವ ರಾಜಣ್ಣ ಅವರನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ನಾನು ಆ ಆದೇಶ ಪ್ರತಿಯನ್ನು ಗಮನಿಸಲಿಲ್ಲ, ನಿಮ್ಮ ಬಳಿ ಆದೇಶ ಪ್ರತಿ ಇದ್ದರೆ ಅದನ್ನು ವಾಟ್ಸ್ಯಾಪ್ ಮೂಲಕ ಕಳುಹಿಸಿಕೊಡಿ ನಾನು ನೋಡುತ್ತೇನೆ. ನಾನು ನಾಲ್ಕು ತಿಂಗಳ ಹಿಂದೆಯಷ್ಟೇ ಕುಲಸಚಿವನಾಗಿ ಆಯ್ಕೆಯಾಗಿದ್ದೇನೆ,” ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

“ಇದು 10 ವರ್ಷದ ಹಳೆಯ ವಿಚಾರ. ನನ್ನ ಮಾನ ಹಾನಿ ಮಾಡಲು ಸುಳ್ಳು ಆರೋಪ ಮಾಡುತಿದ್ದಾರೆ. ನೂರಕ್ಕೂ ಹೆಚ್ಚು ಪ್ರಾಧ್ಯಾಪಕರು ಸಬಾಡಿಕಲ್ ಲೀವ್ ತೆಗೆದು ಕೊಳ್ಳುತ್ತಾರೆ ಅವರೆಲ್ಲಾ ಪುಸ್ತಕ ಬರೆದಿದ್ದಾರ? ನನ್ನನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ”  ಎಂದು ಅನಂತನ್ ಪ್ರಶ್ನಿಸಿದರು.

ನಕಲು ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ, ಹಲುವು ಸೈಟೇಶನ್ ಗಳನ್ನು ಉಲ್ಲೇಖಿಸುವುದು ನಕಲು ಆಗುವುದಿಲ್ಲ ಎಂದು ವಾದಿಸಿದರು.

ಈ ಮೂಲಕ ವಿವಿಗಳ ಸೆಬಾಟಿಕಲ್ ಲೀವ್‌ಗಳ ಕುರಿತು ತಳಮಟ್ಟದ ತನಿಖೆಯ ಅಗತ್ಯವಿದೆ. ಜನರ ತೆರಿಗೆ ಹಣದಲ್ಲಿ ರಜೆ ತೆಗೆದುಕೊಳ್ಳುವ ಉಪನ್ಯಾಸಕರ ನಂತರ ಜ್ಞಾನಶಾಖೆಗಳಿಗೆ ನೀಡಿರುವ ಕೊಡುಗೆ ಏನಿವೆ ಎಂಬುದನ್ನು ಪರೀಕ್ಷೆಗೆ ಒಳಪಡಿಸಬೇಕಿದೆ. ಸದ್ಯ ಅನಂತನ್ ಪ್ರಕರಣ ವಿಶ್ವವಿದ್ಯಾನಿಲಯಗಳ ಒಳಗಿನ ಅನಾರೋಗ್ಯಕರ ಶೈಕ್ಷಣಿಕ ಪರಿಸರವನ್ನು ಬಿಂಬಿಸುತ್ತಿದೆ.

Leave a comment

FOOT PRINT

Top