An unconventional News Portal.

ಯುಪಿ ಎಂದರೆ ದೇಶವಲ್ಲ; ಆಡಳಿತ ವಿರೋಧಿ ಅಲೆಯ ಕಡೆ ಗಮನ ಯಾಕಿಲ್ಲ?

ಯುಪಿ ಎಂದರೆ ದೇಶವಲ್ಲ; ಆಡಳಿತ ವಿರೋಧಿ ಅಲೆಯ ಕಡೆ ಗಮನ ಯಾಕಿಲ್ಲ?

ಸದ್ಯ ಹೊರಬಿದ್ದಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾ?

ಈ ವಿಶ್ಲೇಷಣೆಯನ್ನು ಒಪ್ಪಿಕೊಳ್ಳುವುದೇ ಆದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಭ್ರಮಾಚರಣೆ ಪಕ್ಕಕ್ಕಿಟ್ಟು ಆತ್ಮಾವಲೋಕ ಮಾಡಿಕೊಳ್ಳಬೇಕಿರುವ ಹೊತ್ತಿದು. ಉತ್ತರ ಪ್ರದೇಶ, ಉತ್ತರಾಖಾಂಡ್, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನ ನೀಡಿರುವ ‘ಮ್ಯಾನ್‌ಡೇಟ್’ ಆಡಳಿತದ ವಿರುದ್ಧವಾಗಿದೆ ಎಂಬುದು ಗಮನಾರ್ಹ. ವಿಶೇಷವಾಗಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಖಾಂಡ್‌ ರಾಜ್ಯಗಳಲ್ಲಿ ಜನ ಸ್ಪಷ್ಟವಾಗಿ ತಮ್ಮನ್ನು ಆಳುತ್ತಿದ್ದವರನ್ನು ತಿರಸ್ಕರಿಸುವ ಮೂಲಕ ಹೊಸಬರನ್ನು ಬರಮಾಡಿಕೊಂಡಿದ್ದಾರೆ. ಗೋವಾ ಮತ್ತು ಮಣಿಪುರಗಳಲ್ಲಿ ಜನ ಗೊಂದಲಕ್ಕೆ ಒಳಗಾಗಿದ್ದಾರೆ.

UP-bjp-1

ಸಾಂದರ್ಭಿಕ ಚಿತ್ರ.

ಭಾರಿ ನಿರೀಕ್ಷೆ, ಅಬ್ಬರಗಳ ಮೂಲಕ ಸಾಕಷ್ಟು ಕುತೂಹಲಗಳನ್ನು ಹುಟ್ಟಿಹಾಕಿದ್ದ ಈ ಐದೂ ರಾಜ್ಯಗಳ ಸಾಲಿನಲ್ಲಿ ಉತ್ತರ ಪ್ರದೇಶದ ಫಲಿತಾಂಶ ಕೇಂದ್ರ ಸ್ಥಾನದಲ್ಲಿದೆ. ಕಾರಣ; ಸುಮಾರು 403 ವಿಧಾನಸಭಾ ಸ್ಥಾನಗಳ ಮೂಲಕ ಇದು ದೇಶದಲ್ಲಿಯೇ ಅತ್ಯಂತ ದೊಡ್ಡ ರಾಜ್ಯವಾಗಿರುವುದು. ಅದಕ್ಕಿಂತ ಹೆಚ್ಚಾಗಿ, ಈ ಬಾರಿ ಮೂರು ಭಿನ್ನ ನೆಲೆಯ ಸೈದ್ಧಾಂತಿಕ ರಾಜಕೀಯ ಸಂಘರ್ಷ ಇಲ್ಲಿ ನಡೆದಿರುವುದು. ಒಂದು ಕಡೆ ಸಾಕ್ಷಿ ಮಹರಾಜ್, ಯೋಗಿ ಆದಿತ್ಯನಾಥ್‌ ರೀತಿಯ ಸಂಸದರ ಮೂಲಕ ಬಿಜೆಪಿ ಇಲ್ಲಿ ಸ್ಪಷ್ಟವಾದ ಧಾರ್ಮಿಕ ರಾಜಕಾರಣಕ್ಕೆ ಇಳಿದಿತ್ತು. ಅವರ ‘ಸೋ ಕಾಲ್ಡ್ ಆಂಟಿ ರೋಮಿಯೋ ಸ್ಕ್ವಾಡ್‌’ಗಳ ಮೂಲಕ ಯುವಕರನ್ನು ಧಾರ್ಮಿಕ ನೆಲೆಯಲ್ಲಿ ಸೆಳೆಯುವ ತಂತ್ರ ನಡೆಸಿತು. ಇನ್ನೊಂದೆಡೆ ಅಖಿಲೇಶ್ ಯಾದವ್ ಉಚಿತ ಅರ್ಜಿಯನ್ನು ತುಂಬಿಸಿಕೊಂಡು, ಗೆದ್ದು ಬಂದರೆ ಮೊಬೈಲ್ ನೀಡುವುದಾಗಿ ‘ಗಿಮಿಕ್’ ರಾಜಕಾರಣಕ್ಕೆ ಇಳಿದಿದ್ದರು. ಜತೆಗೆ ಕಾಂಗ್ರೆಸ್ ಇರುವುದರಿಂದ ತಮಗೆ ಅನಾಯಾಸವಾಗಿ ಮುಸ್ಲಿಂ ಮತಗಳು ಬೀಳುತ್ತವೆ ಎಂದು ನಂಬಿದ್ದರು. ಇದೇ ವೇಳೆಗೆ ಅಧಿಕಾರದಿಂದ ದೂರ ಉಳಿದಿರುವ ಬಿಎಸ್‌ಪಿಯು, ಮಾಯಾವತಿ ನೇತೃತ್ವದಲ್ಲಿ ದಲಿತ- ಮುಸ್ಲಿಂ ಮತ ಸಮೀಕರಣದ ತಂತ್ರಗಾರಿಕೆ ಹೆಣೆದಿತ್ತು. ಹೀಗೆ, ಬಲ, ಅವಕಾಶವಾದಿ ಮತ್ತು ದಲಿತ- ಮುಸ್ಲಿಂ ರಾಜಕಾರಣ ಎಂಬ ಮೂರು ಕವಲುಗಳು ಈ ಬಾರಿ ಉತ್ತರ ಪ್ರದೇಶದ ಕದನ ಕಣದಲ್ಲಿ ಸ್ಪಷ್ಟವಾಗಿ ಕಂಡು ಬಂದಿತ್ತು.

ಇದೀಗ, ಫಲಿತಾಂಶ ಲಭ್ಯವಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಸಾಕ್ಷಿ ಮಹರಾಜ್‌ ತರದವರಿಗೆ ಇನ್ನೂಂದಿಷ್ಟು ಕಾಲ ರಾಜಕಾರಣದ ಅವಕಾಶ ಇದೆ. ಅಖಿಲೇಶ್ ಯಾದವ್ ಮತ್ತವರ ಮಿತ್ರ ಪಡೆಗಳು ಆಡಳಿತ ವಿರೋಧಿ ಅಲೆಯನ್ನು ಏರಲಾರದೆ ಸೋತು ಹೋಗಿವೆ. ಬಹುಶಃ ಮಾಯಾವತಿ ತಮ್ಮ ದಲಿತ ರಾಜಕಾರಣದ ತಾತ್ವಿಕತೆಯನ್ನು ಮರುವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಅವರ ಗುರು ಕಾನ್ಶಿರಾಮ್ ನೆನಪುಗಳು ಸಹಾಯ ಮಾಡಬಹುದು. ಆದರೆ ಅವರೀಗ ‘ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್’ಗಳನ್ನು ಟಾಂಪರ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಗೇಮ್ ಚೇಂಜರ್ ಸಿದ್ದು.

ಗೇಮ್ ಚೇಂಜರ್ ಸಿದ್ದು.

ಉತ್ತರ ಪ್ರದೇಶವನ್ನು ಹೊರತುಪಡಿಸಿದರೆ ಕುತೂಹಲ ಸೆಳೆದ ಮತ್ತೊಂದು ರಾಜ್ಯ ಪಂಜಾಬ್. ಹಸಿರು ಕ್ರಾಂತಿಯ ಮೂಲಕ ದೇಶದ ಆದುನಿಕ ಅಭಿವೃದ್ಧಿಗೆ ಹರದಾರಿ ತೋರಿಸಿದ ರಾಜ್ಯ ಇದು. ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಹಾಗೂ ಸ್ಥಳೀಯ ರಾಜಕಾರಣಕ್ಕೆ ಇಲ್ಲಿ ನೆಲೆ ಸಿಗುತ್ತಾ ಬಂದಿತ್ತು. ಅಂತಹ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಎಂಬ ಪರ್ಯಾಯ ರಾಜಕಾರಣದ ಮಂತ್ರ ಜಪಿಸುತ್ತಿರುವ ಪಕ್ಷ ಅಖಾಡಕ್ಕೆ ಇಳಿಯಿತು. ಆರಂಭದಲ್ಲಿ ಎಎಪಿ ಗೆದ್ದೇ ಬಿಡುತ್ತದೆ ಎಂಬ ವಾತಾವರಣವೂ ಇತ್ತು. ಕ್ರಿಕೆಟಿಗ, ಹಾಸ್ಯ ಕಲಾವಿದ ನವಜೋತ್ ಸಿದ್ದು ಕಾಂಗ್ರೆಸ್ ಸೇರುವ ಮೂಲಕ ಪಂಜಾಬ್ ರಾಜಕಾರಣದ ಟ್ರೆಂಡ್ ಬದಲಾಯಿತು. ಡ್ರಗ್ ಮಾಫಿಯಾಗಳನ್ನು ಪೋಷಿಸಿಕೊಂಡು ದುರಾಡಳಿತ ನೀಡಿದ ಶಿರೋಮಣಿ ಅಖಾಲಿ ದಳ ಮತ್ತು ಬಿಜೆಪಿ ಮೈತ್ರಿ ಸರಕಾರದ ವಿರುದ್ಧ ಜನರಿಗಿದ್ದ ಸಿಟ್ಟು ಕಾಂಗ್ರೆಸ್‌ ಪಕ್ಷಕ್ಕೆ ವರದಾನವಾಯಿತು. ಇಲ್ಲಿಯೂ ಸ್ಪಷ್ಟವಾಗಿ ಕಂಡು ಬರುತ್ತಿರುವ ಅಂಶ ಜನರಿಗೆ ಆಡಳಿತ ಸರಕಾರದ ಬಗ್ಗೆ ಇದ್ದ ವಿರೋಧ ಮತ್ತು ಸಿಟ್ಟು. ಇದರ ಜತೆಗೆ, ಪರ್ಯಾಯ ರಾಜಕಾರಣದಲ್ಲಿ ಅಧಿಕಾರ ಮಾತ್ರವಲ್ಲ, ವಿರೋಧ ಪಕ್ಷವಾಗಿಯೂ ಕಾರ್ಯ ನಿರ್ವಹಿಸಿ ಎಂಬ ಹೊಣೆಗಾರಿಕೆಯನ್ನು ಪಂಜಾಬ್ ಮತದಾರರು ಎಎಪಿ ಹೆಗಲಿಗೆ ವರ್ಗಾವಣೆ ಮಾಡಿದ್ದಾರೆ ಎಂಬುದು ಗಮನಾರ್ಹ. ಪ್ರಜಾಪ್ರಭುತ್ವವಾದಿ ರಾಜಕಾರಣದಲ್ಲಿ ಗೆದ್ದವರು ಯಾರು ಎಂಬುದು ಎಷ್ಟು ಮುಖ್ಯವೋ, ವಿರೋಧ ಪಕ್ಷದಲ್ಲಿ ಯಾರು ಬಂದು ಕುಳಿದ್ದಾರೆ ಎಂಬುದು ಕೂಡ ಮುಖ್ಯವಾಗುತ್ತದೆ.

ಉತ್ತರಖಾಂಡ್ ವಿಚಾರದಲ್ಲಿಯೂ ಇದೇ ಟ್ರೆಂಡ್ ಎದ್ದು ಕಾಣಿಸುತ್ತಿದೆ. ಅಧಿಕಾರಕ್ಕಾಗಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲಿ ಕಿತ್ತಾಡಿಕೊಂಡರು. ಕೊನೆಗೆ ಕೇಂದ್ರ ಸರಕಾರ ರಾಷ್ಟ್ರಪತಿ ಆಳ್ವಿಕೆಯನ್ನೂ ಹೇರಿತು. ಅದು ಕೋರ್ಟ್ ಮೆಟ್ಟಿಲೇರಿತು. ಕೊನೆಗೆ ಕೇಂದ್ರಕ್ಕೆ ಸುಪ್ರಿಂ ಕೋರ್ಟ್ ಛೀಮಾರಿಯನ್ನೂ ಹಾಕಿತ್ತು. ಕಾಂಗ್ರೆಸ್ ಪಕ್ಷದ ಹರೀಶ್ ರಾವತ್ ಮತ್ತೆ ಮುಖ್ಯಮಂತ್ರಿಯಾದರು. ಆದರೆ ಅಷ್ಟೊತ್ತಿಗಾಗಲೇ ರಾಜ್ಯದ ಟಿಂಬರ್ ಮಾಫಿಯಾ ಲಕ್ಷಾಂತರ ಎಕರೆ ಕಾಡುಗಳಿಗೆ ಬೆಂಕಿ ಇಟ್ಟಿತ್ತು. ಉತ್ತರಖಾಂಡ್‌ನ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಸದ್ಯ ಚುನಾವಣೆಯ ಫಲಿತಾಂಶ ನೋಡುತ್ತಿದ್ದರೆ ಜನ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷವನ್ನೇ ಆಹುತಿ ತೆಗೆದುಕೊಂಡಿದ್ದಾರೆ. ಬಿಜೆಪಿ ಕೈಗೆ ಅಧಿಕಾರ ಕೊಟ್ಟಿದ್ದಾರೆ. ಆಡಳಿತ ವಿರೋಧಿ ಅಲೆಯ ಪರಿಣಾಮ ಇಲ್ಲಿಯೂ ನಿಚ್ಚಳವಾಗಿ ಕಾಣಿಸುತ್ತಿದೆ.

ಉಳಿದಿರುವುದು ಮಣಿಪುರ ಮತ್ತು ಗೋವಾ- ಎರಡು ಪುಟ್ಟ ರಾಜ್ಯಗಳು. ಮಣಿಪುರದಲ್ಲಿ 2012ರ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ  42 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಈ ಬಾರಿ ಅತಂತ್ರ ವಿಧಾನಸಭೆ ಇಲ್ಲಿ ನಿರ್ಮಾಣವಾಗಿದೆ. ಯಾರಿಗೂ ಬಹುಮತ ಕೊಡದ ಮಣಿಪುರಿಗಳು ಆಡಳಿತ ಸರಕಾರದ ವಿರುದ್ಧ ತಮಗಿರುವ ಆಕ್ರೋಶಗಳನ್ನು ಮತಗಳ ಮೂಲಕ ಹೊರಹಾಕಿದ್ದಾರೆ. ಮಣಿಪುರ ವಿಚಾರದಲ್ಲಿ ಗಮನಿಸಬೇಕಿರುವ ಇನ್ನೊಂದು ಅಂಶ, ಇರೋಮ್ ಶರ್ಮಿಳಾ ಸೋಲು. ಈ ಹಿಂದೆ ‘ಸಮಾಚಾರ’ ಸಂದರ್ಶನದಲ್ಲಿ, “ಮಣಿಪುರದಲ್ಲಿ ಮೈತೇಯಿ ಸಂಸ್ಕೃತಿ ಜಾಗದಲ್ಲಿ ಬಿಜೆಪಿ ಹಿಂದೂ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿದೆ. ಭಾರಿ ಹಣ ಮತ್ತು ಪ್ರಚಾರ ಮೂಲಕ ಮಣಿಪುರದ ಯುವ ಸಮುದಾಯವನ್ನು ಅವರು ಹಾಳು ಮಾಡುತ್ತಿದ್ದಾರೆ,” ಎಂದು ಆರೋಪಿಸಿದ್ದರು. ತಮ್ಮದೇ ಪರ್ಯಾಯ ರಾಜಕೀಯ ಪಕ್ಷವೊಂದನ್ನು ಕಟ್ಟುವ ಮೂಲಕ ಸಾಂಕೇತಿಕವಾಗಿ ಈ ಬಾರಿ ಚುನಾವಣೆಗೆ ಇಳಿದಿದ್ದರು. ಅವರು ಸೋತಿದ್ದಾರೆ; ಮಣಿಪುರದಲ್ಲಿ ಬಿಜೆಪಿ ಖಾತೆ ತೆರೆದಿದೆ. ಈಶಾನ್ಯ ಭಾರತದ ರಾಜಕೀಯ ಹೆಬ್ಬಾಗಿಲು ಎಂದು ಗುರುತಿಸುವ ಮಣಿಪುರದಲ್ಲಿ ಬಿಜೆಪಿ ಸಾಧನೆ ಪಕ್ಷದ ಪಾಲಿಗೆ ಆಶಾದಾಯಕ ಬೆಳವಣಿಗೆ.

ನಮ್ಮ ನೆರೆಯ ರಾಜ್ಯ ಗೋವಾಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮವೇ ಭಾರವಾಗಿದೆ. ಒಂದು ಕಾಲದಲ್ಲಿ ಪ್ರವಾಸಿಗಳನ್ನು ನೆಚ್ಚಿಕೊಂಡು ಆರ್ಥಿಕತೆಯನ್ನು ಕಾಪಾಡಿಕೊಂಡಿದ್ದ ರಾಜ್ಯ ಇವತ್ತು ಸಂಕೀರ್ಣ ಸ್ಥಿತಿಯನ್ನು ಎದುರಿಸುತ್ತಿದೆ. ವರ್ಷದ ಕೊನೆಯಲ್ಲಿ ನಡೆಯುತ್ತಿದ್ದ ಬಿಗ್ ಈವೆಂಟ್‌ಗಳು ಈ ಬಾರಿ ರಾಜ್ಯದಿಂದ ಹೊರಹೋಗಿವೆ. ಇಲ್ಲಿನ ವ್ಯಾಪಾರಿ ಸಮುದಾಯ ಸಂಕಷ್ಟದಲ್ಲಿದೆ. ಹೀಗಿರುವಾಗಲೇ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನು ಗೆಲ್ಲಿಸುವ ಕುರಿತು ಗೋವಾ ಮತದಾರರು ಹಿಂದೇಟು ಹಾಕಿದ್ದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ದಕ್ಷಿಣ ಭಾರತದಲ್ಲಿ ಎಎಪಿ ತನ್ನ ರಾಜಕೀಯದ ಖಾತೆ ತೆರೆಯಲು ಗೋವಾವನ್ನು ಆರಿಸಿಕೊಂಡಿತ್ತು. ಆದರೆ ಗೋವಾ ಮತದಾರರು ಮತಪೆಟ್ಟಿಗೆಯಲ್ಲಿ ಪಕ್ಷಕ್ಕೆ ನಿಷ್ಟರಾಗಿಲ್ಲ ಎಂಬುದು ಎಎಪಿಯ ಶೂನ್ಯ ಸಾಧನೆ ತೋರಿಸುತ್ತಿದೆ.

ಹೀಗೆ, ಯಾವುದೇ 5 ರಾಜ್ಯಗಳ ಫಲಿತಾಂಶದ ಒಳಹೊಕ್ಕರೆ ಕಂಡು ಬರುತ್ತಿರುವ ಅಂಶಗಳಿವು. ಆದರೆ ಉತ್ತರ ಪ್ರದೇಶವನ್ನೇ ಇಡೀ ಭಾರತ ದೇಶ ಎಂದುಕೊಂಡ, ವಿಜಯದ ಸಂಭ್ರಮಾಚರಣೆಯಲ್ಲಿ ಜನರ ಮನಸ್ಥಿಯನ್ನು ಮರೆತಿರುವ ಮಾಧ್ಯಮಗಳ ಪಾಲಿದು ಇದು ಮೋದಿ ಅಲೆಯಂತೆ ಕಾಣಿಸುತ್ತಿದೆ. ಒಂದು ವೇಳೆ, ಈ ಚುನಾವಣೆಯನ್ನು ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದುಕೊಳ್ಳುವುದೇ ಆದರೆ, ಐದು ರಾಜ್ಯಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿರುವ ಆಡಳಿತ ವಿರೋಧಿ ಅಲೆಯ ಬಗ್ಗೆ ಮೊದಲ ಎಚ್ಚರಾಗಬೇಕಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ.

Leave a comment

FOOT PRINT

Top