An unconventional News Portal.

‘ಸ್ಟೋರಿ ಆಫ್ ಮಾರ್ಸ್ ಮಿಶನ್’: ಕುತೂಹಲ ಮೂಡಿಸಿದ ‘ಅಯಸ್ಕಾಂತೀಯ ಹೊದಿಕೆ’!

‘ಸ್ಟೋರಿ ಆಫ್ ಮಾರ್ಸ್ ಮಿಶನ್’: ಕುತೂಹಲ ಮೂಡಿಸಿದ ‘ಅಯಸ್ಕಾಂತೀಯ ಹೊದಿಕೆ’!

ಮಂಗಳಯಾನಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿಗೇ ವಿಜ್ಞಾನಿಗಳು ಹೊಸ ಆಲೋಚನೆಯೊಂದನ್ನು ಹರಿಬಿಟ್ಟಿದ್ದಾರೆ.

ಮಂಗಳ ಗ್ರಹದ ವಾತಾವರಣವನ್ನು ಕಾಪಾಡಲು ಬೃಹತ್ ಗಾತ್ರದ ಅಯಸ್ಕಾಂತೀಯ ಹೊದಿಕೆಯನ್ನು ರೂಪಿಸಿದರೆ, ಮುಂದಿನ ದಿನಗಳಲ್ಲಿ ಕೆಂಪು ಗ್ರಹದ ಮೇಲೂ ಮನುಷ್ಯ ಮನೆ ಮಾಡಿಕೊಂಡಿರಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2030ರ ಹೊತ್ತಿಗೆ ಮೊದಲ ಬಾರಿಗೆ ಮನುಷ್ಯನನ್ನು ಮಂಗಳ ಗ್ರಹದ ಮೇಲೆ ಇಳಿಸಲು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಸಿದ್ಧತೆ ಮಾಡಿಕೊಳ್ಳುತ್ತಿದೆ. 90ರ ದಶಕದಲ್ಲಿ ಶುರುವಾದ ಈ ಯೋಜನೆಗಾಗಿ ಸಾಕಷ್ಟು ಪ್ರಯೋಗಗಳು ಜಾರಿಯಲ್ಲಿವೆ. ಹೀಗಿರುವಾಗಲೇ, ಬೃಹತ್ ಅಯಸ್ಕಾಂತೀಯ ಹೊದಿಕೆಯನ್ನು ರೂಪಿಸುವ ಸಾದ್ಯತೆಯೊಂದನ್ನು ಮುಂದಿಟ್ಟಿರುವುದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.

ಸುಮಾರು 4. 2 ಬಿಲಿಯನ್ (420 ಕೋಟಿ) ವರ್ಷಗಳ ಹಿಂದೆ ಮಂಗಳ ಗ್ರಹದ ಸುತ್ತ ಅಯಸ್ಕಾಂತೀಯ ಹೊದಿಕೆಯೊಂದು ಇದ್ದಕ್ಕಿದ್ದಂತೆ ಕಾಣೆಯಾಯಿತು ಎಂದು ಸಂಶೋಧಕರು ಹೇಳುತ್ತಿದ್ದಾರೆ. ಆ ನಂತರ ಮುಂದಿನ 50 ಕೋಟಿ ವರ್ಷಗಳಲ್ಲಿ ಕೆಂಪು ಗ್ರಹದ ವಾತಾವರಣದಲ್ಲಿ ಬಿಸಿ ಹೆಚ್ಚಾಗುತ್ತಾ ಬಂದಿತು. ತಂಪಾಗಿರುವ ಜಾಗಗಳು ಇನ್ನಷ್ಟು ಕನಿಷ್ಠ ಉಷ್ಣಾಂಶಕ್ಕೆ ಇಳಿದವು. ಹೀಗಾಗಿ ಇಲ್ಲಿ ವಾಸಯೋಗ್ಯ ವಾತಾವರಣವನ್ನು ಕಳೆದುಕೊಳ್ಳಲು ಕಾರಣವಾಯಿತು ಎಂಬುದು ವಿಜ್ಞಾನಿಗಳ ಪ್ರತಿಪಾದನೆ.

 

ಸದ್ಯ ಅತಿಯಾದ ಬಿಸಿ ಮತ್ತು ಅತ್ಯಂತ ಕಡಿಮೆ ಉಷ್ಠಾಂಶದ ಜಾಗಗಳು ಮಂಗಳ ಗ್ರಹದಲ್ಲಿವೆ. ಇದರ ಜತೆಗೆ ವಿಕಿರಣಗಳು ಸೂಸುತ್ತಿರುವುದರಿಂದ ವಾಸಕ್ಕೆ ಕಷ್ಟ ಎಂಬುದು ನಾಸಾ ವಿಜ್ಞಾನಿಗಳ ಸಂಶೋಧನೆಗಳಿಂದ ತಿಳಿದು ಬಂದಿದೆ. ಹೀಗಾಗಿಯೇ, 2030ರ ‘ಮಾರ್ಸ್ ಮಿಶನ್’ಗೂ ಮುನ್ನವೇ ಇಡೀ ಗ್ರಹಕ್ಕೆ ಅಯಸ್ಕಾಂತೀಯ ಹೊದಿಕೆ ನಿರ್ಮಿಸಲು ಆಲೋಚನೆ ನಡೆದಿದೆ.

ಇದನ್ನು ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಸರಣಿ ಪ್ರಯೋಗಗಳು ಈಗಾಗಲೇ ಶುರುವಾಗಿವೆ. ಮಂಗಳ ಗ್ರಹದ ಲ್ಯಾಗ್‌ರೇಂಜ್ ಪಾಯಿಂಟ್ (ಎಲ್‌1) ಎಂದು  ಗುರುತಿಸಿರುವ ಸ್ಥಳದಲ್ಲಿ ಅಯಸ್ಕಾಂತೀಯ ಅಲೆಗಳನ್ನು ಸೃಷ್ಟಿಸಲು ಕೃತಕವಾದ ಡೈ- ಪೋಲ್‌ಗಳನ್ನು ನಿರ್ಮಿಸಲಾಗುವುದು. ಈ ಮೂಲಕ ಸೂರ್ಯನಿಂದ ಬರುವ ವಿಕಿರಣಗಳನ್ನು ತಡೆಯಲು ಹಾಗೂ ವಾಸಕ್ಕೆ ಯೋಗ್ಯವಾದ ವಾತಾವರಣ ನಿರ್ಮಿಸಲು ಅನುಕೂಲವಾಗಲಿದೆ ಎಂದು ನಾಸಾ ವಿಜ್ಞಾನಿಗಳ ಹೇಳಿಕೆಯನ್ನು ‘ಯೂನಿವರ್ಸ್ ಟುಡೆ’ ವರದಿ ಮಾಡಿದೆ.

 

ಮಂಗಳನೆಡೆಗೆ ಪಯಣ: 

ನಾಸಾ ಬಿಡುಗಡೆ ಮಾಡಿರುವ ಮಾರ್ಸ್ ಮಿಶನ್ ಚಿತ್ರ.

ನಾಸಾ ಬಿಡುಗಡೆ ಮಾಡಿರುವ ಮಾರ್ಸ್ ಮಿಶನ್ ಚಿತ್ರ.

ಬಾಹ್ಯಕಾಶ ಸಂಶೋಧನೆಗಳ ಪೈಕಿ ಅತ್ಯಂತ ಕುತೂಲಹ ಮೂಡಿಸಿರುವ ‘ಮಂಗಳಯಾನ- 2030’ಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ನಾಸಾ ವೆಬ್‌ಸೈಟ್ ತಿಳಿಸುತ್ತದೆ. “ಕಳೆದ ಒಂದು ದಶಕದಿಂದ ಮಂಗಳ ಗ್ರಹಕ್ಕೆ ಕಳುಹಿಸಿರುವ ಲ್ಯಾಂಡ್‌ ರೋವರ್‌ಗಳು ಮತ್ತು ಆರ್ಬಿಟ್ರರಿಗಳು ಕಳುಹಿಸಿದ ಮಾಹಿತಿ ಕೆಂಪುಗ್ರಹದ ಕುರಿತು ನಮಗಿರುವ ತಿಳಿವಳಿಕೆಯನ್ನು ನಾಟಕೀಯ ಪ್ರಮಾಣದಲ್ಲಿ ಹೆಚ್ಚಿಸಿವೆ,” ಎಂದು ಅವರು ಹೇಳಿದೆ.

ಮಂಗಳ ಗ್ರಹ ತಲುಪಿರುವ ಕ್ಯೂರಿಯಾಸಿ ರೋವರ್ ಅಲ್ಲಿನ ವಿಕಿರಣಗಳ ಮಾಹಿತಿಯನ್ನು ನಾಸಾಗೆ ಕಳುಹಿಸಿದೆ. 202ರ ಹೊತ್ತಿಗೆ ‘ಮಾರ್ಸ್ 2020 ರೋವರ್’ ಕೂಡ ಮಂಗಳ ಗ್ರಹದಲ್ಲಿ ಇಳಿಯಲಿದೆ. ಇದರಿಂದಾಗಿ ಮುಂದಿನ 10 ವರ್ಷಗಳಲ್ಲಿ ಕಳುಹಿಸುವ ಮನುಷ್ಯರಿಗೆ ಉಸಿರಾಡಲು ಆಮ್ಲಜನಕ ಸೇರಿದಂತೆ ಇತರೆ ವಾಸಕ್ಕೆ ಯೋಗ್ಯವಾಗುವ ಮಾಹಿತಿ ಸಿಗಲಿದೆ ಎಂದು ನಾಸಾ ಹೇಳಿಕೊಂಡಿದೆ.

 

ಮನುಷ್ಯ ನಾಗರೀಕತೆಯ ಅತ್ಯಂತ ಪ್ರಮುಖವಾದ ಈ ಮಂಗಳಯಾನ ‘ಪಯಣ’ವು ಒಟ್ಟು ಮೂರು ಹಂತಗಳಲ್ಲಿ ನಾಸಾ ನಡೆಸಲಿದೆ. ಮೊದಲನೆಯದು ‘ಅರ್ತ್ ರಿಯಲಂಟ್’. ಈ ಹಂತದಲ್ಲಿ ಮನುಷ್ಯ ಭೂಮಿಯನ್ನು ಬಿಟ್ಟು ಬಾಹ್ಯಕಾಶದಲ್ಲಿ ಅತಿ ಹೆಚ್ಚು ದಿನ ಬದುಕಲು ಇರುವ ಸಾಧ್ಯತೆಗಳನ್ನು ಕಂಡುಕೊಳ್ಳಲಾಗುತ್ತದೆ. ಬಾಹ್ಯಕಾಶದಲ್ಲಿ ಮನುಷ್ಯ ದೇಹ ಸ್ಪಂದಿಸುವ ರೀತಿಯನ್ನು ಈ ಹಂತದಲ್ಲಿ ಗಣನೆಗೆ, ಪ್ರಯೋಗಕ್ಕೆ ಒಡ್ಡಲಾಗುತ್ತದೆ. ಅಂದರೆ, ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಗಳಲ್ಲಿ ಈ ಪ್ರಯೋಗ ನಡೆಯಲಿದೆ. 2020- 24ರ ನಡುವೆ ನಡೆಯಲಿರುವ ಈ ಪ್ರಯೋಗ ಮುಂದಿನ ಜೀವಮಾನದ ಪಯಣಕ್ಕೆ ಒತ್ತಾಸೆಗಳನ್ನು ನೀಡಲಿದೆ.

ಎರಡನೇ ಹಂತದ ಪ್ರಯೋಗಗಳಿಗೆ ನಾಸಾ ‘ಪ್ರೂವಿಂಗ್ ಗ್ರೌಂಡ್’ ಎಂದು ಹೆಸರಿಟ್ಟಿದೆ. ಈ ಹಂತದಲ್ಲಿ, ಚಂದ್ರ ಗ್ರಹದ ಹತ್ತಿರ ಹಲವು ಪ್ರಯೋಗಗಳು ನಡೆಯಲಿವೆ. ಈ ಪ್ರಯೋಗ ಸ್ಥಳಕ್ಕೆ ‘ಸಿಸ್‌ಲ್ಯೂನಾರ್ ಸ್ಪೇಸ್’ ಎಂದು ಕರೆಯಲಾಗಿದೆ. ಇಲ್ಲಿ ಮಂಗಳ ಗ್ರಹದ ಮೇಲೆ ಕಾಲಿಡಲು ಮತ್ತು ಬದುಕಲು ಅಗತ್ಯವಾಗಿರುವ ಪ್ರಯೋಗಗಳು ನಡೆಯಲಿವೆ. ಒಂದು ವೇಳೆ, ಬಾಹ್ಯಕಾಶದ ಈ ನೆಲದಲ್ಲಿ ನೆಲೆ ನಿಲ್ಲು ಸಾಧ್ಯವಾದರೆ, ಇಲ್ಲಿಂದ ಮುಂದೆ ಮಂಗಳ ಗ್ರಹದ ಪಯಣ ಕೆಲವೇ ದಿನಗಳ ಹಾದಿಯಾಗಲಿದೆ. ಈ ಹಿಂದೆ ಯಾವ ಮನುಷ್ಯರೂ ಇಷ್ಟು ದೂರ ಬಾಹ್ಯಕಾಶದಲ್ಲಿ ಪ್ರಯಾಣಿಸಿಲ್ಲ ಎಂಬುದು ಗಮನಾರ್ಹ.

ಕೊನೆಯ ಹಂತ 2030ರ ಹೊತ್ತಿಗೆ ಕಾರ್ಯರೂಪಕ್ಕೆ ಬರಲಿದೆ. ‘ಅರ್ತ್ ಇಂಡಿಪೆಂಡೆಂಟ್’ ಎಂದು ಕರೆಯುವ ಈ ಹಂತದಲ್ಲಿ ಮನುಷ್ಯ ಮಂಗಳ ಗ್ರಹದ ಮೇಲೆ ಕಾಲಿಡಲಿದ್ದಾನೆ. ಅಲ್ಲಿಯೇ ಸ್ವತಂತ್ರವಾದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರಯೋಗಗಳಿಗೆ ಒಡ್ಡಿಕೊಳ್ಳಲಿದ್ದಾನೆ.

ಈಗಾಗಲೇ ಮಂಗಳ ಗ್ರಹದ ಪಯಣಕ್ಕೆ ಆಯ್ಕೆ ಪ್ರತಿಕ್ರಿಯೆ ಶುರುವಾಗಿದೆ. ಇನ್ನೊಂದು ಕಡೆ ಇಡೀ ಯೋಜನೆ ಸಾಧ್ಯವೇ ಇಲ್ಲ ಎಂಬ ವಾದಗಳು ಗಟ್ಟಿಯಾಗಿ ಕೇಳಿಬರುತ್ತಿವೆ. ಇವುಗಳ ನಡುವೆಯೇ ಕೋಟ್ಯಾಂತರ ರೂಪಾಯಿ ವೆಚ್ಚದ ಯೋಜನೆ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. ಒಂದು ವೇಳೆ, ನಾಸಾ ಶುರುಮಾಡಿರುವ ಈ ಮಹತ್ವಾಕಾಂಕ್ಷಿ ಯೋಜನೆ ಸಫಲವಾದರೆ ಮುಂದಿನ 20 ವರ್ಷಗಳ ಅಂತರದಲ್ಲಿ ಮನುಷ್ಯ ಕೂಡ ಮಂಗಳ ಗ್ರಹದಲ್ಲಿ ಮನೆಯನ್ನು ಮಾಡಿಕೊಳ್ಳಲಿದ್ದಾನೆ. ಮುಂದಿನ ಬೆಳವಣಿಗೆಗಳು ನಿಮ್ಮ ಊಹೆಗೆ ಬಿಟ್ಟ ವಿಚಾರಗಳು.

Leave a comment

FOOT PRINT

Top