An unconventional News Portal.

ಸಾಂಪ್ರದಾಯಿಕ ಶತ್ರುಗಳ ‘ನಿರ್ಣಾಯಕ ಯುದ್ಧ’: ಕೇರಳ ನೆಪದಲ್ಲಿ ಮತ್ತೆ ಶುರುವಾದ ಸಂಘರ್ಷ

ಸಾಂಪ್ರದಾಯಿಕ ಶತ್ರುಗಳ ‘ನಿರ್ಣಾಯಕ ಯುದ್ಧ’: ಕೇರಳ ನೆಪದಲ್ಲಿ ಮತ್ತೆ ಶುರುವಾದ ಸಂಘರ್ಷ

ಅತ್ತ ಕೇರಳದ ‘ನಿಯಮ ಸಭಾ’ದ ಒಳಗೆ ಆಯವ್ಯಯ ಪತ್ರ ಮಂಡನೆಗೂ ಮುನ್ನವೇ ಸೋರಿಕೆಯಾಗಿದೆ ಎಂದು ವಿರೋಧ ಪಕ್ಷಗಳು ‘ಹೈ ಡ್ರಾಮಾ’ ನಡೆಸುತ್ತಿವೆ. ಹೊರಗೆ, ರಾಜಕೀಯ ಹತ್ಯೆಗಳು ಕೇರಳದ ಗಡಿಯನ್ನು ದಾಟಿ ಸದ್ದು ಮಾಡುತ್ತಿವೆ.

ಗುರುವಾರ ರಾತ್ರಿ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಎಲಪ್ಪುಲ್ಲಿಯಲ್ಲಿ ಇಬ್ಬರು ಡೆಮಕ್ರಾಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಡಿವೈಎಫ್ಐ ಸಿಪಿಎಂ ಪಕ್ಷದ ಯುವ ಜನರ ಸಂಘಟನೆಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡಿದ್ದು ಮೂವರು ಬಿಜೆಪಿ ಕಾರ್ಯಕರ್ತರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೋಯಿಕೋಡ್ ಜಿಲ್ಲೆಯ ವಿಷ್ಣುಮಂಗಳಂನಲ್ಲಿರುವ ಸಿಪಿಎಂ ಕಚೇರಿಗೆ ಬೆಂಕಿ ಹಾಕಲಾಗಿದೆ.  ಈ ದಾಳಿಗಳು ಇಲ್ಲಿನ  ಆರ್‌ಎಸ್‌ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದ 24 ಗಂಟೆಗಳ ಅವಧಿಯಲ್ಲಿ ನಡೆದಿವೆ.

1960ರಲ್ಲಿ ಕಣ್ಣೂರು ಜಿಲ್ಲೆಯಿಂದ ಆರಂಭಗೊಂಡ ರಾಜಕೀಯ ಹತ್ಯೆಗಳು ಹಾಗೂ ಸಿಪಿಎಂ ಮತ್ತು ಆರ್‌ಎಸ್‌ಎಸ್ ನಡುವಿನ ಸೈದ್ಧಾಂತಿಕ ಸಂಘರ್ಷ ಈಗ ಮತ್ತೆ ಗರಿಗೆದರಿದಂತೆ ಕಾಣಿಸುತ್ತಿದೆ. ಕಳೆದ ಒಂದು ತಿಂಗಳ ಅಂತರದಲ್ಲಿ ಕೇರಳದ ಈ ಸಂಘರ್ಷ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶೇಷವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಗಳು ಕೇರಳದಲ್ಲಿ ಸಿಪಿಎಂ ರಾಜಕೀಯ ಹತ್ಯೆಗಳನ್ನು ನಡೆಸುತ್ತಿದೆ ಎಂದು ದೇಶದ ಮಟ್ಟದಲ್ಲಿ ಅಭಿಯಾನವನ್ನು ಶುರು ಮಾಡಿವೆ. ಕಣ್ಣೂರನ್ನು ಕೇಂದ್ರವಾಗಿಟ್ಟುಕೊಂಡು ಸಾವನ್ನಪ್ಪಿದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಭಾವಚಿತ್ರಗಳ ಮೆರವಣಿಗೆ ನಡೆಯುತ್ತಿದೆ. ಗುರುವಾರ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಎಬಿವಿಪಿ ನಡೆಸಿದ ಮೆರವಣಿಗೆಯಲ್ಲಿಯೂ ಕಣ್ಣೂರಿನ ರಾಜಕೀಯ ಹತ್ಯೆಗಳಲ್ಲಿ ಸಾವನ್ನಪ್ಪಿದವರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ಹಾಗೆ ನೋಡಿದರೆ, ಇವತ್ತಿಗೆ ಸಿಪಿಎಂ ಅಧಿಕಾರದಲ್ಲಿರುವುದು ಕೇರಳ ಮತ್ತು ತ್ರಿಪುರ ರಾಜ್ಯಗಳಲ್ಲಿ ಮಾತ್ರ. ಪಶ್ಚಿಮ ಬಂಗಾಳದಲ್ಲಿ ಪಕ್ಷದ ಬೇರುಗಳಿದ್ದರೂ, ಕಳೆದ ಚುನಾವಣೆಯಲ್ಲಿ ಸಿಪಿಎಂ ಸೋತು ಹೋಗಿತ್ತು. ಹೀಗಿದ್ದರೂ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕೇರಳದ ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಸಲು ಉತ್ಸಾಹ ತೋರಿಸುತ್ತಿರುವುದು ಯಾಕೆ?.

“ಆರ್‌ಎಸ್‌ಎಸ್‌ ಮೂಲ ಚಿಂತನೆಯಲ್ಲಿ ಮೂವರ ಪ್ರಮುಖ ಶತ್ರುಗಳು ಎಂದು ವಿಭಾಗಿಸಲಾಗಿದೆ. ಅವರ ಅಖಂಡ ಹಿಂದೂ ರಾಷ್ಟ್ರ ಸ್ಥಾಪನೆಗೆ ಭಾರತದ ಮಟ್ಟಿಗೆ ತೊಂದರೆಯಾಗಿರುವವರು ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಕಮ್ಯೂನಿಸ್ಟರು ಎಂಬುದು ಅವರ ಭಾವನೆ. ಇಷ್ಟು ದಿನ ಅವರು ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರ ವಿರುದ್ಧ ದಾಳಿಗಳನ್ನು, ಅಪಪ್ರಚಾರಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇದೀಗ ಕಮ್ಯೂನಿಸ್ಟರ ವಿಚಾರಗಳಿಗೆ ಕೈ ಹಾಕಿದ್ದಾರೆ. ಅದರ ಭಾಗವಾಗಿಯೇ ಕೇರಳದ ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕೊಂಡೊಯ್ಯಲಾಗುತ್ತಿದೆ,” ಎನ್ನುತ್ತಾರೆ ಸಿಪಿಎಂ ಕರ್ನಾಟಕದ ರಾಜ್ಯ ಸಮಿತಿ ಸದಸ್ಯ ಪ್ರಕಾಶ್.

ಇತ್ತೀಚೆಗಷ್ಟೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಬಿಜೆಪಿ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಮಂಗಳೂರಿನಲ್ಲಿರುವ ಸಿಪಿಎಂ ಕಚೇರಿಗೆ ಬೆಂಕಿ ಹಾಕಲಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಸಂಘ ಪರಿವಾರದ ಜತೆ ಗುರುತಿಸಿಕೊಂಡಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಮಯದಲ್ಲಿ ‘ಸಮಾಚಾರ’ದ ಜತೆ ಮಾತನಾಡಿದ್ದ ಮಂಗಳೂರಿನ ಬಿಜೆಪಿ ಸಂಸದ, ನಳಿನ್ ಕುಮಾರ್ ಕಟೀಲ್, “ಕಮ್ಯೂನಿಸ್ಟರು ಕೇರಳ ದಾಟಿ ತಮ್ಮ ಪ್ರಭಾವಳಿಯನ್ನು ಮಂಗಳೂರಿಗೆ ವಿಸ್ತರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಸೌಹಾರ್ದತೆ ಎಂದು ಇಲ್ಲಿ ಬಂದು ಮಾತನಾಡುತ್ತಾರೆ. ಅದೇ ಅವರು ಅಧಿಕಾರದಲ್ಲಿರುವ ರಾಜ್ಯದಲ್ಲಿ ರಾಜಕೀಯ ವಿರೋಧಿಗಳ ಹತ್ಯೆ ನಡೆಸುತ್ತಿದ್ದಾರೆ. ಹೀಗಾಗಿ ಪಿಣರಾಯಿ ವಿಜಯನ್ ಆಗಮನಕ್ಕೆ ನಮ್ಮ ವಿರೋಧ ದಾಖಲಿಸುತ್ತಿದ್ದೇವೆ,” ಎಂದು ತಿಳಿಸಿದ್ದರು.

ಇದು ರಾಜಕೀಯ ಹತ್ಯೆಗಳ ಆಚೆಗೆ ಆರ್‌ಎಸ್‌ಎಸ್‌ ಮತ್ತು ಕಮ್ಯೂನಿಸ್ಟರ ನಡುವೆ ನಡೆದುಕೊಂಡು ಬಂದಿರುವ ಐತಿಹಾಸಿಕ ಸೌದ್ಧಾಂತಿಕ ಸಂಘರ್ಷದ ಮುಂದುವರಿದ ಭಾಗದಂತೆ ಕಾಣಿಸುತ್ತಿದೆ. ಇಬ್ಬರಿಗೂ ಭಾರತದಲ್ಲಿ ತಮ್ಮದೇ ಆದ ರಾಜಕೀಯ ನೆಲೆಯಲ್ಲಿ ಅಧಿಕಾರವನ್ನು ಪಡೆಯುವ ಕನಸಿದೆ. “ಆರ್‌ಎಸ್‌ಎಸ್‌ ಅಖಂಡ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಇಟ್ಟುಕೊಂಡಿದೆ. ಇವತ್ತಲ್ಲ ನಾಳೆ, ಅವರು ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳಗಳನ್ನು ಸೇರಿಸಿಕೊಂಡು ಅಖಂಡ ರಾಷ್ಟ್ರವೊಂದನ್ನು ಸ್ಥಾಪಿಸುತ್ತೇವೆ ಎಂದು ನಂಬಿದ್ದಾರೆ. ಇದಕ್ಕೆ ಮೂಲ ವಿರೋಧ ಇರುವುದು ಕಮ್ಯೂನಿಸ್ಟರಿಂದ. ಹೀಗಾಗಿ ಅವರಿಬ್ಬರು ಸಾಂಪ್ರದಾಯಿಕ ಶತ್ರುಗಳಾಗಿದ್ದಾರೆ,” ಎನ್ನುತ್ತಾರೆ ಸ್ವತಂತ್ರ ರಾಜಕೀಯ ವಿಶ್ಲೇಷಕರೊಬ್ಬರು.

ಸದ್ಯ ಎಬಿವಿಪಿ ಕಮ್ಯೂನಿಸ್ಟರ ವಿರುದ್ಧ ನಿರ್ಣಾಯಕ ಹೋರಾಟವನ್ನು ರೂಪಿಸುವ ತಯಾರಿ ನಡೆಸಿದೆ ಎಂದು ಸಂಘಟನೆಯ ಮೂಲಗಳು ಹೇಳುತ್ತವೆ. ಹೆಸರನ್ನು ಹೇಳಲು ಇಚ್ಚಿಸದ ಸಂಘಟನೆಯ ನಾಯಕರೊಬ್ಬರು, “ವಿದ್ಯಾರ್ಥಿಗಳಲ್ಲಿ ಕಮ್ಯೂನಿಸ್ಟ್ ಚಿಂತನೆಯ ಪ್ರಭಾವ ಹೆಚ್ಚಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ದಿಲ್ಲಿಯಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿವಾದ ಎಬ್ಬಿಸಿದ ಆಝಾದಿ ಹೋರಾಟದ ನಂತರ ಟ್ರೆಂಡ್ ಬದಲಾಗುತ್ತಿದೆ. ಹೀಗಾಗಿ ಅವರು ಕೇರಳಕ್ಕೆ ಮಾತ್ರ ಸೀಮಿತರಾಗುವಂತೆ ಕಾಣಿಸುತ್ತಿಲ್ಲ. ಹೀಗಾಗಿ ನಾವು ರಾಷ್ಟ್ರ ಮಟ್ಟದಲ್ಲಿ ಕೇರಳದ ವಿಚಾರವನ್ನು ಇಟ್ಟುಕೊಂಡು ಅಭಿಯಾನ ಆರಂಭಿಸುತ್ತಿದ್ದೇವೆ,” ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ದೇಶದ ಮಟ್ಟದಲ್ಲಿ ಎಡಪಂಥೀಯ ಮತ್ತು ಬಲಪಂಥೀಯ ಚಿಂತನೆಗಳ ಸಂಘರ್ಷ ಬೀದಿಗೆ ಬಂದಿದೆ. ಇಷ್ಟು ದಿನಗಳ ಕಾಲ ತೆರೆಮರೆಯಲ್ಲಿ ಪರಸ್ಪರ ವೈಚಾರಿಕ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದವರು ಈಗ ಬೀದಿ ಸಂಘರ್ಷಕ್ಕೆ ಇಳಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ಕೇರಳದ ಮಟ್ಟದಲ್ಲಿ ಅದು ಹಿಂಸೆಯ ರೂಪವನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ದೇಶದ ಇತರೆ ಭಾಗಗಳಲ್ಲಿ ಅದು ಪಡೆದುಕೊಳ್ಳುವ ಸ್ವರೂಪಗಳು ಸಹಜವಾಗಿಯೇ ಕುತೂಹಲಕ್ಕೂ, ಆತಂಕಕ್ಕೂ ಕಾರಣವಾಗಿದೆ.

Leave a comment

FOOT PRINT

Top