An unconventional News Portal.

‘ಸಿದ್ದರಾಮಯ್ಯ ಬಜೆಟ್’: ನಿರೀಕ್ಷೆಗಳೇನಿಲ್ಲ; ಮುಂದಕ್ಕೆ ಹೋಗಿ ಅನ್ನುತ್ತಿದ್ದಾರೆ ಜನ!

‘ಸಿದ್ದರಾಮಯ್ಯ ಬಜೆಟ್’: ನಿರೀಕ್ಷೆಗಳೇನಿಲ್ಲ; ಮುಂದಕ್ಕೆ ಹೋಗಿ ಅನ್ನುತ್ತಿದ್ದಾರೆ ಜನ!

”ನಮಗೆ ಈ ಬಜೆಟ್‌ನಿಂದ ಯಾವ ನಿರೀಕ್ಷೆಗಳೂ ಇಲ್ಲ…”

ಹೀಗಂತ ಹೇಳಿದವರು ರಾಜಕೀಯ ಪಕ್ಷಗಳ ಮುಖಂಡರು, ಮಾಜಿ ಅಧಿಕಾರಿಗಳು, ಹೋರಾಟಗಾರರು ಮತ್ತು ಸಾಮಾನ್ಯ ಜನತೆ. ಇದೇ ತಿಂಗಳ ಮಧ್ಯದಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ‘ಸಮಾಚಾರ’ ಸಮಾಜದ ಸ್ಥರಗಳಲ್ಲಿರುವ ನಿರೀಕ್ಷೆಗಳೇನು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಯಿತು. ಈ ಸಮಯದಲ್ಲಿ ಮಾತನಾಡಿಸಿದ ಬಹುತೇಕರು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2017- 18ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಅದು 2 ಲಕ್ಷ ಕೋಟಿಯ ಗರಿಷ್ಠ ಆಯವ್ಯಯ ಪತ್ರವಾಗಿರಲಿದೆ ಎಂದು ವರದಿಗಳು ಹೇಳುತ್ತಿವೆ. ಜತೆಗೆ, ಜನಪ್ರಿಯ ಮಾದರಿಯ ಘೋಷಣೆಗಳು, ಯೋಜನೆಗಳಿಗೆ ಮುಂಗಡ ಪತ್ರದಲ್ಲಿ ಸ್ಥಾನ ಸಿಗಬಹುದು ಎಂಬ ಸಹಜ ನಿರೀಕ್ಷೆಯೂ ಇದೆ.

“ಬಜೆಟ್ ಎಂದರೇನು ಎಂಬುದು ಜನರಿಗೆ ಚೆನ್ನಾಗಿಯೇ ಅರ್ಥವಾಗಿದೆ. ಸರಕಾರ ಯಾವ ಯಾವ ಮೂಲಗಳಿಂದ ಹಣ ಸಂಗ್ರಹಿಸಲಿದೆ? ಏನಕ್ಕೆ ಖರ್ಚು ಮಾಡುತ್ತಿದೆ ಎಂದು ಜನ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಇರುವುದಿಲ್ಲ,” ಎನ್ನುತ್ತಾರೆ ಮಾಜಿ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್.

ಬಜೆಟ್ ಕುರಿತು ವೈಯಕ್ತಿಕ ಮಟ್ಟದಲ್ಲಿ ಯಾವುದೇ ನಿರೀಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಬಜೆಟ್ ತಯಾರು ಮಾಡುವಾಗ ಶೇ. 1ರಿಂದ 3ರಷ್ಟು ಬದಲಾವಣೆ ಮಾಡುವ ಅವಕಾಶ ಎಲ್ಲಾ ಕಾಲಕ್ಕೂ ಇರುತ್ತದೆ. ಕೇಂದ್ರ ಬಜೆಟ್ ಆದರೆ ಹೊಸ ಆದಾಯದ ಮೂಲಗಳನ್ನು ಅನ್ವೇಷಣೆ ಮಾಡಬಹುದು. ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯ ಸರಕಾರಗಳಿಗೆ ಅದೂ ಕೂಡ ಕಷ್ಟವಾಗಲಿದೆ. ಅದರಾಚೆಗೆ ಅಂಕಿ ಅಂಶಗಳನ್ನು ಹೊರತು ಪಡಿಸಿ ಜನರಿಗೆ ಬಜೆಟ್ ಕುರಿತು ಭರವಸೆ ಉಳಿದಿಲ್ಲ,” ಎಂದರು.

“ರಾಜ್ಯ ಬಜೆಟ್ ಯಾವಾಗ?” ಎಂದು ಮಾತು ಶುರುಮಾಡಿದ ಹೊಸೂರು ಮುಖ್ಯರಸ್ತೆಯ ಬೀಡಾ ಅಂಗಡಿ ಮಾಲೀಕ ಉಮೇಶ್, “ಏನಾಗುತ್ತೆ? ಸಿಗರೇಟಿನ ಬೆಲೆ ಜಾಸ್ತಿ ಆಗುತ್ತೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ ಯಾವ ಬಜೆಟ್‌ನಿಂದಾದರೂ ಬಂದಿದ್ಯಾ?.” ಎಂದು ಪ್ರಶ್ನಿಸಿದರು. ಅವರ ಪ್ರಕಾರ ಬಜೆಟ್ ಎಂದರೆ ವಸ್ತುಗಳ ಬೆಲೆ ಹೆಚ್ಚಳ ಮತ್ತು ಕಡಿಮೆ ಮಾಡುವ ಸರಳ ಸರಕಾರಿ ಪ್ರಕ್ರಿಯೆ ಅಷ್ಟೆ.

ಇನ್ನು ರಾಜಕೀಯ ಪಕ್ಷಗಳಲ್ಲಿಯೂ ಈ ಬಾರಿಯ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿರುವ ಹಾಗೆ ಕಾಣಿಸುತ್ತಿಲ್ಲ. “ಕೇಂದ್ರ ಸರಕಾರದ ಡಿ- ಮಾನಟೈಸೇಶನ್ (ಅನಾಣ್ಯೀಕರಣ) ನಂತರ ರಾಜ್ಯ ಸರಕಾರದ ಆದಾಯದಲ್ಲಿಯೂ ಕೊರತೆ ಕಂಡು ಬಂದಿದೆ ಎಂಬ ಮಾಹಿತಿ ಇದೆ. ಹೀಗಾಗಿ ದೊಡ್ಡ ಮೊತ್ತದ ಬಜೆಟ್ ಮಂಡಿಸುವುದು ಕಷ್ಟವಾಗಬಹುದು. ಒಂದು ವೇಳೆ ಮಂಡಿಸಿದರೆ ಅದು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಬಜೆಟ್ ಆಗಲಿದೆ,” ಎನ್ನುತ್ತಾರೆ ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ರಮೇಶ್ ಬಾಬು.

“ಬಜೆಟ್ ಎಂಬುದು ಚುನಾವಣೆಯ ಅಸ್ತ್ರಗಳಾಗಿ ಬಳಕೆಯಾಗುತ್ತ ಬಂದಿವೆ. ಹೀಗಾಗಿ ಜನ ಭರವಸೆ ಕಳೆದುಕೊಂಡಿದ್ದಾರೆ. ಈ ಬಾರಿಯೂ ಬಜೆಟ್ ಮಂಡನೆಯಾಗುತ್ತದೆ. ಅದು ನಡೆಯಬೇಕಿರುವ ಸಂಪ್ರದಾಯ,” ಎನ್ನುತ್ತಾರೆ ರಮೇಶ್ ಬಾಬು.

ಈ ಬಾರಿಯ ಬಜೆಟ್ ಘೋಷಣೆಗಳಿಗೂ ಅನುಷ್ಠಾನಗಳಿಗೂ ಸಂಬಂಧ ಕಲ್ಪಿಸುವುದು ಕಷ್ಟ ಎನ್ನುತ್ತಾರೆ ಹಿರಿಯ ಪತ್ರಕರ್ತ ಎಲ್. ಪ್ರಕಾಶ್. “ಈ ಬಾರಿ ಬಜೆಟ್ ಮಂಡನೆಯಾಗುತ್ತದೆ. ಅದು ಅನುಷ್ಠಾನ ಹಂತದಲ್ಲಿರುವಾಗಲೇ ಚುನಾವಣೆಯೂ ಘೋಷಣೆಯಾಗಬಹುದು. ಹೊಸ ಸರಕಾರ ಬಂದರೆ ಈ ಬಜೆಟ್‌ಗೆ ಉತ್ತರದಾಯಿಯಾಗಿ ಇರಬೇಕಿಲ್ಲ. ಇದೇ ಪಕ್ಷ ಅಧಿಕಾರ ಬಂದರೆ ಸಮಜಾಯಿಷಿ ರೂಪದಲ್ಲಿ ಉತ್ತರ ಒಂದು ಜನರಿಗೆ ಸಿಗಬಹುದು. ಅದನ್ನು ಬಿಟ್ಟರೆ ಹೆಚ್ಚಿನ ನಿರೀಕ್ಷೆಗಳೇನಿಲ್ಲ,” ಎನ್ನುತ್ತಾರೆ ಅವರು.

ಕಳೆದ ತಿಂಗಳ ‘ಟೈಮ್ಸ್ ಆಫ್ ಇಂಡಿಯಾ’ ವರದಿಯೊಂದರ ಪ್ರಕಾರ, “ಈ ಬಾರಿಯ ಬಜೆಟ್‌ನಲ್ಲಿ ಜನಪ್ರಿಯ ಯೋಜನೆಗಳನ್ನು ಅದೇ ವೇಳೆ ವಾಸ್ತವಕ್ಕೆ ಹತ್ತಿರವಾಗಿರುವ ಯೋಜನೆಗಳನ್ನು ಸೂಚಿಸುವಂತೆ ಇಲಾಖೆಗಳಿಗೆ ತಿಳಿಸಲಾಗಿದೆ.” ಈ ಮೂಲಕ ಈ ಬಾರಿಯ ಬಜೆಟ್ ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯ ಮಾದರಿಯನ್ನು ಒಳಗೊಳ್ಳುವುದು ಸ್ಪಷ್ಟವಿದೆ. ವಾಸ್ತವದಲ್ಲಿ ಅದರ ಅನುಷ್ಠಾನದ ವಿಚಾರ ಹೆಚ್ಚು ಚರ್ಚೆಗೆ ಬಾರದ ಕಾರಣ, ‘ಏನೇ ಘೋಷಿಸಿದರೂ ನಡೆಯುತ್ತದೆ’ ಎಂಬ ಆಲೋಚನೆ ಆಡಳಿತಗಾರರಲ್ಲಿದೆ.

ರಾಜ್ಯದಲ್ಲಿ ನಾಲ್ಕು ದಶಕಗಳ ಅವಧಿಯಲ್ಲಿ ಕಂಡು ಬಂದ ಭೀಕರ ಬರಗಾಲ ಆವರಿಸಿದೆ. ರೈತಾಪಿ ಬದುಕು ಸಂಕಷ್ಟದಲ್ಲಿದೆ. ಅನಾಣ್ಯೀಕರಣದ ನಂತರ ಸಣ್ಣ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಸಾಲ ಮನ್ನಾದ ನಿರೀಕ್ಷೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಇವೆಲ್ಲವುಗಳ ನಡುವೆಯೇ,  ‘ಉಗಾದಿ ಮರಳಿ ಬರುತ್ತಿದೆ’ ಎಂಬಂತೆ ಮತ್ತೊಮ್ಮ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಹೆಚ್ಚಿನ ನಿರೀಕ್ಷೆಗಳೇನಿಲ್ಲ; ಮುಂದಕ್ಕೊಗಿ ಎನ್ನುತ್ತಿದ್ದಾರೆ ಜನ.

Leave a comment

FOOT PRINT

Top