An unconventional News Portal.

ಕೇಂಬ್ರಿಡ್ಜ್ ರಿಟರ್ನ್ ಮಿಸ್ ಭಾಟಿಯಾ ಮತ್ತು ಸಂಘರ್ಷದ ನಾಡಿನ ಕೊಲೆ ಬೆದರಿಕೆಗಳು

ಕೇಂಬ್ರಿಡ್ಜ್ ರಿಟರ್ನ್ ಮಿಸ್ ಭಾಟಿಯಾ ಮತ್ತು ಸಂಘರ್ಷದ ನಾಡಿನ ಕೊಲೆ ಬೆದರಿಕೆಗಳು

ಸದ್ಯ ದೇಶದ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಹೊಸತಲ್ಲ. ಹಾಗಂತ ಹೋರಾಟ ಎಂಬುದು ಸುಂದರ ಗುಲಾಬಿಗಳನ್ನು ಹೊಂದಿರುವ ತೋಟವೇನೂ ಅಲ್ಲ. ಅದರಲ್ಲೂ, ಬಸ್ತಾರ್‌ನಂತಹ ಸೇನಾಪಡೆ ಮತ್ತು ನಕ್ಸಲೀಯರ ನಡುವೆ ನಿರಂತರ ಕಾಳಗಕ್ಕೆ ಸಾಕ್ಷಿಯಾಗಿರುವ ಪ್ರದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಇನ್ನೂ ಕಷ್ಟ. ಅಂತಹದೊಂದು ಕಷ್ಟವನ್ನು ಮೈಮೇಲೆ ಎಳೆದುಕೊಂಡವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದುಕೊಂಡು ಬಂದಿರುವ ಮಿಸ್. ಭಾಟಿಯಾ.

ಆದಿವಾಸಿಗಳಿರುವ ಛತ್ತೀಸ್‌ಗಢ ರಾಜ್ಯದ ಪರ್ಪಾ ಗ್ರಾಮದಲ್ಲಿ ಭಾಟಿಯಾ ಅವರು ವಾಸಿಸುತ್ತಿದ್ದು, ಅಲ್ಲಿನ ಜನರ ಏಳಿಗೆಗಾಗಿ ಧ್ವನಿ ಎತ್ತುತ್ತಿದ್ದಾರೆ. ಪರ್ಪಾ ಗ್ರಾಮದಲ್ಲಿ ಇತ್ತೀಚೆಗೆ ಆತಂಕಕಾರಿ ಘಟನೆ ನಡೆದಿದೆ. ಭಾಟಿಯಾ ಅವರು ಮೊಬೈಲ್ ಸಿಗ್ನಲ್ಗಾಗಿ ಇದೇ ಜನವರಿ 23ರ ಬೆಳಗ್ಗೆ ಮನೆಯ ವಾರಾಂಡ್ದಲ್ಲಿ ತಡಕಾಡುತ್ತಿದ್ದರು. ಈ ವೇಳೆಗೆ ಸರಿಯಾಗಿ ಭಾಟಿಯಾ ಅವರ ಮನೆ ಮುಂದೆ ಜೀಪ್ ಹಾಗೂ ಬೈಕ್ಗಳು ದೊಡ್ಡದಾಗಿ ಸೌಂಡ್ ಮಾಡುತ್ತಾ ಬಂದು ನಿಂತವು. ವಾಹನಗಳಲ್ಲಿದ್ದ 30 ಜನರ ಗುಂಪು ಮನೆ ಎದುರು ಇಳಿಯಿತು. ಗುಂಪಿನಲ್ಲಿದ್ದ ಇಬ್ಬರು ಮನೆ ಎದುರಿರುವ ನಲ್ಲಿಯ ಬಳಿಗೆ ಬಂದಿದ್ದನ್ನ ಕಂಡು ಭಾಟಿಯಾ ಅವರ ಪ್ರೀತಿಯ ನಾಯಿ ಸಮಾರಿ ಆಗಂತುಕರತ್ತ ಬೊಗಳುವ ಮೂಲಕ ತನ್ನ ಅಸಮಾಧಾನ ದಾಖಲಿಸಿತು. ಆಗಂತುಕರಲ್ಲಿ ಒಬ್ಬ, “ನಿನ್ನನ್ನ ಕತ್ತರಿಸಿ ಹಾಕುತ್ತೇವೆ,” ಎಂದು ಬಂದ ಉದ್ದೇಶವನ್ನ ನೇರವಾಗಿ ಹೇಳಿದ. ಬಳಿಕ ಕುಡಿದ ಮತ್ತಿನಲ್ಲಿದ್ದ ಜನರ ಗುಂಪು ಸಂಶೋಧಕಿಯ ಮನೆಯೊಳಗೆ ನುಗ್ಗಿದರು. “24 ಗಂಟೆಗಳಲ್ಲಿ ನೀನು ಬಸ್ತಾರನ್ನು ತೊರೆಯದಿದ್ರೆ, ಮನೆಯನ್ನ ಸುಟ್ಟು ಹಾಕುವುದಾಗಿ,” ಭಾಟಿಯಾ ಅವರಿಗೆ ಬೆದರಿಕೆ ಹಾಕಿ ಹೊರಟು ಹೋದರು.

ಈ ದಾಳಿ ನಡೆದ ಹಿಂದಿನ ರಾತ್ರಿಯೂ ಸಹ ಕೆಲವರು ಭಾಟಿಯಾ ಅವರ ಮನೆಗೆ ದಾಳಿಯಿಟ್ಟಿದ್ದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಗೂಂಡಾಗಳು ಬಾಗಿಲನ್ನು ಜೋರಾಗಿ ತಟ್ಟಿದ್ದರುಅವರಲ್ಲಿ ಒಬ್ಬ ಭಾಟಿಯಾ ಜೊತೆಗಿದ್ದವರನ್ನು ಹೊರಗೆ ಬರುವಂತೆ ಗದರಿಸಿದ್ದಾನೆ. ಇದರಿಂದ ಭೀತಿಗೊಂಡ ಭಾಟಿಯಾ ಹಾಗೂ ಜತೆಗಾರರು ಬಾಗಿಲನ್ನು ಭದ್ರವಾಗಿ ಹಾಕಿಕೊಂಡಿದ್ದಾರೆ. ಕೆಲ ಹೊತ್ತು ಮನೆ ಹೊರಗೆ ಅಡಗಿ ಕುಳಿತು ಭಾಟಿಯಾ ಹೊರಬರುವುದನ್ನು ಕಾದ ಗೂಂಡಾಗಳ ನಂತರ ಹಿಂದಿರುಗಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವ, ಕಳೆದ 30 ವರ್ಷಗಳಿಂದ ದಲಿತ ಹಾಗೂ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಭಾಟಿಯಾ ಇಂತಹ ಆತಂಕದ ಕ್ಷಣಗಳಲ್ಲಿ ಜೀವ ಕೈಯಲ್ಲಿ ಹಿಡಿದು ಕಳೆಯುತ್ತಿದ್ದಾರೆ.

ಈ ಎರಡು ಘಟನೆಗಳು ಬಸ್ತಾರ್ ಪ್ರಾಂತ್ಯದಲ್ಲಿ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಸಣ್ಣ ಉದಾಹರಣೆಗಳಷ್ಟೆ. ಇದಕ್ಕೂ ಮೊದಲು ಭಾಟಿಯಾ ಅವರನ್ನ ಬಸ್ತಾರ್ನಿಂದ ಓಡಿಸುವ ಹಲವು ಕುತಂತ್ರಗಳ ನಡೆದಿದೆ. ಭಾಟಿಯಾ ಅವರಿಗೆ ಕರೆ ಮಾಡಿ, “ನೀವು ಮಾವೋವಾದಿಗಳ ಕೈಗೊಂಬೆ,” ಅಂತಾ ಜರಿಯಲಾಗಿದೆ. ಭಾಟಿಯಾ ವಿರುದ್ಧ ಕರಪತ್ರಗಳನ್ನೂ ಸಹ ಹಂಚಲಾಗಿದೆ.

ದಾಳಿಯ ಮೂಲ: 

ಬಸ್ತಾರ್ ಪ್ರದೇಶದಲ್ಲಿ ನಡೆದುಕೊಂಡು ಬರುತ್ತಿರುವ ಮಾವೋವಾದಿಗಳು ಮತ್ತು ಸೇನಾಪಡೆಗಳ ಕಾಳಗದಲ್ಲಿ ನಡುವೆ ಸಿಲುಕಿರುವ ಆದಿವಾಸಿಗಳು.

ಬಸ್ತಾರ್ ಪ್ರದೇಶದಲ್ಲಿ ನಡೆದುಕೊಂಡು ಬರುತ್ತಿರುವ ಮಾವೋವಾದಿಗಳು ಮತ್ತು ಸೇನಾಪಡೆಗಳ ಕಾಳಗದಲ್ಲಿ ನಡುವೆ ಸಿಲುಕಿರುವ ಆದಿವಾಸಿಗಳು.

ಬಸ್ತಾರ್ ಮಾವೋವಾದಿಗಳ ಹಾಗೂ ಸಶಸ್ತ್ರಪಡೆಗಳ ನಡುವಿನ ಯದ್ಧ ಭೂಮಿ. ಸರ್ಕಾರಿ ಪಡೆಗಳು ಹಾಗೂ ಮಾವೋದಿಗಳ ನಡುವೆ ನಿರಂತರ ಕಾಳಗಗಳು ನಡೆಯೋ ಬಸ್ತಾರ್ನಲ್ಲಿ ಸರ್ಕಾರ ಹೆಚ್ಚಿನ ಭದ್ರತೆ ಒದಗಿಸಿದ್ದು, ಅದು ಒಂದು ಕೋಟೆಯಂತಿದೆ. ಶಸ್ತ್ರಾಸ್ತ್ರಗಳನ್ನ ಕೈಗೆತ್ತಿಕೊಂಡಿರುವ ಮಾವೋವಾದಿಗಳು ದಶಕಗಳಿಂದಲೂ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಾಗಿರುವ ಬಡವರ ಪರವಾಗಿ ತಾವು ಹೋರಾಡುತ್ತಿದ್ದೇವೆ ಅಂತಾ ಹೇಳಿಕೊಳ್ಳುತ್ತಾರೆ. ಆದರೆ, ಮಾವೋವಾದಿಗಳ ಹೋರಾಟ ಸೈದ್ಧಾಂತಿಕ ಹಿನ್ನೆಲೆ ಹೊಂದಿದೆ ಅಂತಾ ಸರ್ಕಾರ ವಾದಿಸುತ್ತೆ. ಜೊತೆಗೆ, ಮಾವೋವಾದಿಗಳನ್ನ ಮಟ್ಟಹಾಕಲು ಸರ್ಕಾರಗಳು ಅನುಸರಿಸುತ್ತಿರುವ ಮಾರ್ಗ ಅಮಾನವೀಯವಾಗಿದೆ.

ಬಸ್ತಾರ್ ಪ್ರಾಂತ್ರ್ಯದಲ್ಲಿ ಮಾವೋವಾದಿಗಳು ಬುಡಕಟ್ಟು ಜನರಿಂದ ಪಡೆಯುತ್ತಿರುವ ಸಹಾಯಕ್ಕೆ ಬ್ರೇಕ್ ಹಾಕುವ ನೆಪದಲ್ಲಿ ಸರ್ಕಾರ, ಸಶಸ್ತ್ರ ಪಡೆಗಳಿಗೆ ಆದಿವಾಸಿಗಳು ಹಕ್ಕುಗಳನ್ನ ನಾಶ ಮಾಡಲು ಅವಕಾಶ ನೀಡುತ್ತಿರೋದನ್ನ ಆದಿವಾಸಿಗಳ ಹಕ್ಕುಗಳ ಹೋರಾಟಗಾರರು ಖಂಡಿಸುತ್ತಾ ಬಂದಿದ್ದಾರೆ. ಮಾವೋವಾದಿಗಳ ವಿರುದ್ಧದ ಹೋರಾಟ ನೆಪದಲ್ಲಿ ಸಶಸ್ತ್ರ ಪಡೆಗಳು ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ ಅನ್ನೋ ಆರೋಪಗಳು ಇಂದು ಕೇವಲ ಆರೋಪವಾಗಿ ಉಳಿದಿಲ್ಲ.

2015-16ನೇ ಸಾಲಿನಲ್ಲಿ ಛತ್ತೀಸ್ಗಡ್ ಪೊಲೀಸರು 16 ಆದಿವಾಸಿಯ ಮಹಿಳೆಯರನ್ನು ಅತ್ಯಾಚಾರ ಮಾಡಿದ್ದಾರೆ ಅಂತಾ ಮಾನವ ಹಕ್ಕಗಳು ಸಂಘಟನೆಗಳ ಅಂಕಿ ಅಂಶಗಳನ್ನು ಮುಂದಿಡುತ್ತಿವೆ. ಅಲ್ಲದೆ, 20 ಸಂತ್ರಸ್ತೆಯರ ಹೇಳಿಕೆಗಳ ದಾಖಲೆ ತನ್ನ ಬಳಿಯಿದೆ ಅಂತಾ ಅವು ತಿಳಿಸಿವೆ. ಇತ್ತ, ಪೊಲೀಸರು ಈ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ಸರ್ಕಾರಿ ಅಧಿಕಾರಿಗಳು ಹಾಗೂ ದೇಶದ ಕೆಲ ಮಾಧ್ಯಮಗಳು, ಯೋಧರು ಹಾಗೂ ಹಿರಿಯ ರಾಜಕಾರಣಿಗಳನ್ನ ಹತ್ಯೆ ಮಾಡುವ ಮಾವೋವಾದಿಗಳು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತಾ ಆಗ್ರಹಿಸುತ್ತಾರೆ. ಭಾಟಿಯಾ ಅವರಂತ ಹೋರಾಟಗಾರರು ಬಸ್ತಾರ್ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಸಶಸ್ತ್ರ ಪಡೆಗಳು ನಡೆಸುತ್ತಿರುವ ಹತ್ಯೆಗಳನ್ನ ಖಂಡಿಸುತ್ತಾರೆಜತೆಗೆ ಸೇನೆ ನಡೆಸುತ್ತಿರುವ ಹತ್ಯೆಗಳ ಬಗ್ಗೆ ತನಿಖೆ ಆಗಬೇಕು ಅಂತಾ ಒತ್ತಾಯಿಸುತ್ತಾರೆ. ಸಾಮಾಜಿಕ ಕಾಳಜಿ ಹೊಂದಿರುವ ಭಾಟಿಯಾರಂತ ಸಾಮಾಜಿಕ ಕಾರ್ಯಕರ್ತರು, ಮಾವೋವಾದಿಗಳಿಗೆ ಸೈದ್ಧಾಂತಿಕ ಬೆಂಬಲ ನೀಡುತ್ತಿದ್ದಾರೆ ಹಾಗೂ ಮಾವೋವಾದಿಗಳು ನಡೆಸುತ್ತಿರುವ ಹಿಂಸಾಚಾರಗಳ ಮೇಲೆ ಬೆಳಕು ಚೆಲ್ಲುವುದಿಲ್ಲ ಅನ್ನೋ ಆರೋಪ ಎದುರಿಸುತ್ತಿದ್ದಾರೆ.

ಪೂರ್ವಾಗ್ರಹ ಪೀಡಿತ ಮನಸ್ಸುಗಳು:

ಇನ್ನು ಕೆಲವರು ಭಾಟಿಯಾ ಅವರನ್ನ ವೈಟ್ ಕಾಲರ್ ಮಾವೋವಾದಿ ಅಂತಲೂ ಟೀಕಿಸಿದ್ದಾರೆ. ಭಾಟಿಯಾ ಅವರ ವಿರುದ್ಧ ಜನರನ್ನ ಎತ್ತಿ ಕಟ್ಟುತ್ತಿರುವ ವಕೀಲ ಆನಂದ್ ಮೋಹನ ಮಿಶ್ರಾ, “ಭಾಟಿಯಾ ಅವರು ಪೂರ್ವಾಗ್ರಹ ಪೀಡತರು, ಭಾಟಿಯಾ ಮಾವೋವಾದಿಗಳ ನಡೆಸುತ್ತಿರುವ ರಕ್ತಪಾತದ ಬಗ್ಗೆ ಮಾತನಾಡುವುದಿಲ್ಲ,” ಅಂತಾ ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನ ತಮ್ಮ ಹೋರಾಟದ ಮೂಲಕವೇ ಅಲ್ಲಗಳೆಯುವಲ್ಲಿ ಭಾಟಿಯಾ ಯಶ ಕಂಡಿದ್ದಾರೆ. ಭಾಟಿಯಾ ಅವರು ಮಾವೋವಾದಿಗಳ ಹಿಂಸಾಚಾರದ ಕುರಿತು ಸಾಕಷ್ಟು ಬರೆದಿದ್ದಾರೆ. ಮಾವೋವಾದಿಗಳ ರಕ್ತಪಾತದಿಂದ ನೊಂದವರು ಬೆಳಕಿಗೆ ಬರುತ್ತಾರೆ. ಜೊತೆಗೆ ಅವರಿಗೆ ಪರಿಹಾರ ಸಹ ಸಿಗುತ್ತದೆ. ಸರ್ಕಾರಿ ಪಡೆಗಳಿಂದ ದೌರ್ಜನ್ಯಕ್ಕೆ ತುತ್ತಾದವರು ಕತ್ತಲೆಯಲ್ಲೇ ಕೊಳೆಯುತ್ತಾರೆ ಅಂತಾ ಭಾಟಿಯಾ ವಸ್ತು ಸ್ಥಿತಿಯನ್ನ ಬಿಚ್ಚಿಡುತ್ತಾರೆ.

ಗಟ್ಟಿಗಿತ್ತಿ ಭಾಟಿಯಾ ಅವರ ಗುಂಡಿಗೆಯನ್ನ ಇತ್ತೀಚಿನ ದಾಳಿಗಳು ನಡುಗಿಸಿವೆ. ತಮ್ಮ ಮನೆ ಮೇಲೆ ನಡೆಯುತ್ತಿರುವ ದಾಳಿಗಳಿಂದ ಅವರು ಆತಂಕಗೊಂಡಿದ್ದಾರೆಹೀಗಾಗಿ, ಭಾಟಿಯಾ ತಮಗೆ ಪ್ರಾಣ ಬೆದರಿಕೆ ಹಾಕುತ್ತಿರುವರರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಛತ್ತೀಸ್ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಆದರೂ ಸಹ ದಾಳಿ ಸಂಬಂಧ ಇಲ್ಲಿಯವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಜನ ಭಾಟಿಯಾರನ್ನು ಕೊಲ್ಲುವುದಾಗಿ ಘೋಷಣೆಗಳನ್ನು ಕೂಗುತ್ತಾ ತಿರುಗಾಡುವುದು ಸಾಮಾನ್ಯವಾಗಿದೆ. ಕಳೆದ ವರ್ಷ ಯೋಧರು ತಮ್ಮ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ವಿರುದ್ಧ ದೂರು ನೀಡಲು ಆದಿವಾಸಿ ಮಹಿಳೆಯರಿಗೆ ಭಾಟಿಯಾ ಸಹಾಯ ಮಾಡಿದ್ದು, ಸ್ಥಳೀಯ ಅಧಿಕಾರಿಗಳ ಕಣ್ಣು ಕೆಂಪಾಗಿಸಿದೆ ಅಂತಾ ಪತ್ರಕರ್ತರೊಬ್ಬರು ಹೇಳುತ್ತಾರೆ. ಸತ್ಯದ ಪರವಾಗಿ ಮಾತನಾಡಿದ್ದಕ್ಕೆ ಪತ್ರಕರ್ತ ಅಕುಲ್ ಪತುಲ್ಗೆ ಬೆದರಿಕೆ ಕರೆಗಳು ಬಂದಿವೆ. ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ ಅಧಿಕಾರದಲ್ಲಿರುವವರೇ ಬಸ್ತಾರ್ನಿಂದ ಸಾಮಾಜಿಕ ಕಾರ್ಯಕರ್ತರನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಪ್ರಗತಿಪರ ಚಿಂತನೆ ಹೊಂದಿರುವ ವಕೀಲರಿಗೆ, ಪತ್ರಕರ್ತರಿಗೆ ಹಾಗೂ ಹೋರಾಟಗಾರರಿಗೆ ಆದಿವಾಸಿಗಳ ನಾಡು ನರಕವಾಗಿ ಪರಿಣಮಿಸಿದೆ.

ಈ ಎಲ್ಲಾ ಸಂದಿಗ್ಧ ಸ್ಥಿತಿಗಳನ್ನು ಮೆಟ್ಟಿ ನಿಂತಿರುವ ಭಾಟಿಯಾ ಅವರು ನಾನು ಬಸ್ತಾರ್ನ್ನ ಬಿಡುವುದಿಲ್ಲ ಅನ್ನೋ ತಲೆ ಬರಹದ ಬಹಿರಂಗ ಪತ್ರ ಬರೆದಿದ್ದಾರೆ. ಸಂಘರ್ಷಗಳಿಂದ ತುಂಬಿರುವ ಪ್ರದೇಶದಲ್ಲಿ ಸರ್ಕಾರಿ ಸಂಸ್ಥೆಗಳ ಎಲ್ಲಾ ನಡೆಗಳು ಕಾನೂನಿನ ಮೀತಿಯಲ್ಲಿ ಇರುವಂತೆ ನಾವು ಮಾಡಬೇಕಿದೆನಾನು ಬಸ್ತಾರ್ನಲ್ಲೇ ಬದುಕಬೇಕು ಹಾಗೂ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ಎಲ್ಲ ಅಡಚಣೆಗಳನ್ನು ಮೀರಿ ಬಸ್ತಾರ್ನಲ್ಲಿ ಬದುಕುತ್ತಿದ್ದೇನೆ ಹಾಗೂ ಇಲ್ಲಿಯೇ ಬದುಕುತ್ತೇನೆ ಅಂತಾ ಭಾಟಿಯಾ ಪತ್ರದಲ್ಲಿ ತಿಳಿಸಿದ್ದಾರೆ.

ಕೃಪೆ: ಬಿಬಿಸಿ

Leave a comment

FOOT PRINT

Top