An unconventional News Portal.

‘ನನ್ನ ತಂದೆಯನ್ನು ಕೊಂದಿದ್ದು ಪಾಕ್ ಅಲ್ಲ’: ಗುರ್‌ಮೆಹರ್‌ ವಿಡಿಯೋದಲ್ಲಿ ನಿಜಕ್ಕೂ ಏನಿದೆ?

‘ನನ್ನ ತಂದೆಯನ್ನು ಕೊಂದಿದ್ದು ಪಾಕ್ ಅಲ್ಲ’: ಗುರ್‌ಮೆಹರ್‌ ವಿಡಿಯೋದಲ್ಲಿ ನಿಜಕ್ಕೂ ಏನಿದೆ?

“ಹಾಯ್, ನನ್ನ ಹೆಸರು ಗುರ್‌ಮೆಹರ್ ಕೌರ್. ನಾನು ಭಾರತದ ಜಲಂಧರ್‌ನವಳು. ಇದು ನನ್ನ ತಂದೆ ಕ್ಯಾಪ್ಟನ್ ಮಂದೀಪ್ ಸಿಂಗ್. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಅವರು ಸಾವನ್ನಪ್ಪಿದಾಗ ನಾನು 2 ವರ್ಷದ ಬಾಲಕಿ. ನನಗೆ ಅವರ ಕೆಲವೇ ನೆನಪುಗಳಿವೆ. ಅದಕ್ಕಿಂತ ಹೆಚ್ಚಾಗಿ ತಂದೆ ಇಲ್ಲದೆ ಇರುವ ಭಾವ ಕಾಡುತ್ತಿದೆ. ಜತೆಗೆ, ನನ್ನ ತಂದೆಯನ್ನು ಕೊಂದಿದ್ದಕ್ಕಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನಿಯರನ್ನು ಎಷ್ಟು ದ್ವೇಷಿಸುತ್ತಿದೆ ಎಂಬುದು ನೆನಪಿದೆ. ನಾನು ಮುಸ್ಲಿಂರನ್ನು ದ್ವೇಷಿಸುತ್ತಿದೆ, ಯಾಕೆಂದರೆ ನಾನು ಎಲ್ಲಾ ಮುಸಲ್ಮಾನರೂ ಪಾಕಿಸ್ತಾನಿಯರೇ ಎಂದು ನಂಬಿದ್ದೆ. ನಾನು 6 ವರ್ಷದವಳಾಗಿದ್ದಾಗ,ಬುರ್ಖಾ ಧರಿಸಿದ್ದ ಮಹಿಳೆಗೆ ಚೂರಿ ಇರಿಯಲು ಹೋಗಿದ್ದೆ. ಯಾಕೆಂದರೆ, ನನ್ನ ತಂದೆಯ ಸಾವಿಗೆ ಅವಳೇ ಕಾರಣ ಎಂದು ನನಗೆ ಅನ್ನಿಸಿತ್ತು. ನನ್ನ ತಾಯಿ ಅವತ್ತು ನನ್ನನ್ನು ತಡೆದರು ಮತ್ತು ನನಗೆ ಅರ್ಥಪಡಿಸಿದ್ದರು. ‘ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ; ಯುದ್ಧ ಕೊಂದಿತು’. ಇದು ನನಗೆ ಅರ್ಥಮಾಡಿಕೊಳ್ಳಲು ನನಗೆ ಸಯಮ ಹಿಡಿಯಿತು. ಇವತ್ತು ನನ್ನೊಳಗಿನ ದ್ವೇಷ ಮರೆಯಾಗಿದೆ. ಇದು ಸುಲಭ ಅಲ್ಲ; ಹಾಗಂತ ಕಷ್ಟವೂ ಅಲ್ಲ. ನನಗೆ ಇದು ಸಾಧ್ಯವಾಗಿದೆ ಎಂದರೆ ನಿಮಗೂ ಇದು ಸಾಧ್ಯ. ಇವತ್ತು ನನ್ನ ತಂದೆಯಂತೆಯೇ ನಾನೂ ಕೂಡ ಯೋಧೆ. ನಾನು ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿಗಾಗಿ ಹೋರಾಟ ಮಾಡುತ್ತಿದ್ದೇನೆ. ಯಾಕೆಂದರೆ, ನಮ್ಮ ನಡುವೆ ಯುದ್ಧವೇ ನಡೆದಿಲ್ಲದ್ದರೆ ನನ್ನ ತಂದೆ ನಮ್ಮ ಜತಗೇ ಇರುತ್ತಿದ್ದರು. ನಾನು ಈ ವಿಡಿಯೋ ತಯಾರಿಸುತ್ತಿರುವ ಕಾರಣ, ಎರಡೂ ಸರಕಾರಗಳು ತೋರುಗಾಣಿಕೆಯ ನಾಟಕವನ್ನು ನಿಲ್ಲಿಸಬೇಕಿದೆ ಮತ್ತು ಸಮಸ್ಯೆಯನ್ನು ಬಗೆಹರಿಸಬೇಕಿದೆ. 2ನೇ ಮಹಾಯುದ್ಧದ ನಂತರ ಫ್ರಾನ್ಸ್ ಮತ್ತು ಜರ್ಮನಿ ಸ್ನೇಹ ರಾಷ್ಟ್ರಗಳಾಗುವುದಾದರೆ, ಜಪಾನ್ ಮತ್ತು ಯುಎಸ್‌ಎ ತಮ್ಮ ಗತವನ್ನು ಹಿಂದೆ ಬಿಟ್ಟು ಅಭಿವೃದ್ಧಿಗಾಗಿ ಸ್ನೇಹಹಸ್ತ ಚಾಚಲು ಸಾಧ್ಯವಾಗುವುದಾದರೆ, ನಮಗೇಕೆ ಸಾಧ್ಯವಾಗುವುದಿಲ್ಲ?. ಬಹುತೇಕ ಸಾಮಾನ್ಯ ಭಾರತೀಯರು ಮತ್ತು ಪಾಕಿಸ್ತಾನಿಯರಿಗೆ ಶಾಂತಿ ಬೇಕಿದೆ; ಯುದ್ಧವಲ್ಲ. ನಾನು ಎರಡೂ ರಾಷ್ಟ್ರಗಳ ನಾಯಕತ್ವವನ್ನು ಪ್ರಶ್ನಿಸುತ್ತಿದ್ದೇನೆ. ನಾವು ಮೂರನೇ ದರ್ಜೆಯ ನಾಯಕತ್ವವನ್ನು ಇಟ್ಟುಕೊಂಡು ಪ್ರಥಮ ದರ್ಜೆಯ ದೇಶದ ಕನಸು ಕಟ್ಟಲು ಸಾಧ್ಯವಿಲ್ಲ. ಮೊದಲು ನಿಮ್ಮ ಕವಚಗಳಿಂದ ಹೊರಬಂದು, ಪರಸ್ಪರ ಮಾತುಕತೆ ನಡೆಸಿ ಮತ್ತು ಶಾಂತಿ ಸ್ಥಾಪಿಸಿ. ಅಧಿಕಾರದ ಕೇಂದ್ರದಲ್ಲಿರುವವರು ಪ್ರಯೋಜಿಸುತ್ತಿರುವ ಭಯೋತ್ಪಾನೆ ಸಾಕಾಗಿದೆ. ಅಧಿಕಾರ ಕೇಂದ್ರದಲ್ಲಿರುವವರು ಪ್ರಾಯೋಜಿಸುತ್ತಿರುವ ಗೂಢಾಚಾರಿಕೆಯೂ ಸಾಕಾಗಿದೆ. ಅಧಿಕಾರ ಕೇಂದ್ರದಲ್ಲಿರುವವರು ಪ್ರಾಯೋಜಿಸುತ್ತಿರುವ ದ್ವೇಷವೂ ಸಾಕಾಗಿದೆ. ಗಡಿಯ ಎರಡೂ ಭಾಗಗಳಲ್ಲಿ ಸಾಕಷ್ಟು ಜನ ಪ್ರಾಣವನ್ನು ಅರ್ಪಿಸಿದ್ದಾರೆ. ಸಾಕು ಎಂದರೆ ಸಾಕು, ಅಷ್ಟೆ. ನನ್ನಂತೆಯೇ ತಂದೆಯನ್ನು ಕಳೆದುಕೊಳ್ಳದ ಬಾಲಕಿಯರು ಬದುಕುವ ನಾಡಿನಲ್ಲಿ ನನಗೆ ಬದುಕಬೇಕು ಎಂಬ ಇಷ್ಟವಿದೆ. ನಾನು ಒಬ್ಬಳೇ ಅಲ್ಲ. ನನ್ನಂತೆಯೇ ಹಲವರಿದ್ದಾರೆ. #profileforpeace.”

ಇದು ಇವತ್ತು ನಡೆಯುತ್ತಿರುವ ‘ದೇಶಪ್ರೇಮಿ’ಗಳು ವರ್ಸಸ್ ‘ದೇಶ ದ್ರೋಹಿ’ಗಳ ಚರ್ಚೆಯಲ್ಲಿ ದೇಶದ್ರೋಹಿಗಳ ಸಾಲಿನಲ್ಲಿ ನಿಂತು, ಅತ್ಯಾಚಾರ ಬೆದರಿಕೆಯನ್ನೂ, ಅವಾಚ್ಯ ಬೈಗುಳಗಳಿಗೆ ಗುರಿಯಾಗಿರುವ 20 ವರ್ಷದ ವಿದ್ಯಾರ್ಥಿ ಗುರ್‌ಮೆಹರ್ ಕೌರ್ 2016ರ ಮೇ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ವಿಡಿಯೋದ ಅಕ್ಷರ ರೂಪ.

ಇದರಲ್ಲಿ ಆಕೆ ಹೇಳಬೇಕಾದ್ದನ್ನು ಹೇಳಿದ್ದಳು. ಕೇಳಿಕೊಳ್ಳುವವರು ಕೇಳಿಸಿಕೊಂಡಿದ್ದರು. ಆದರೆ, ಇವತ್ತು ಆಕೆಯ ಈ ಮಾತುಗಳಲ್ಲಿ ಒಂದು ವಾಕ್ಯವಷ್ಟೆ ಮತ್ತೆ ಚರ್ಚೆಯ ಕೇಂದ್ರಕ್ಕೆ ಬಂದಿದೆ. ‘ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ; ಯುದ್ಧ ಕೊಂದಿತು’ ಎಂಬ ಆಕೆಯ ಮಾತಿಗೆ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ನಟ ರಣದೀಪ್ ಹೂಡ ವ್ಯಂಗ್ಯವಾಡಿದ್ದಾರೆ. ಆಕೆಯನ್ನು ‘ದೇಶ ದ್ರೋಹಿ’ ಎಂದು ಕರೆಯಲಾಗುತ್ತಿದೆ. ಆಕೆಯ ಬಗ್ಗೆ ಅತ್ಯಂತ ಕೀಳುಮಟ್ಟದ ಟ್ರಾಲಿಂಗ್ ಶುರುವಾಗಿದೆ. ದಿಲ್ಲಿಯ ಕಾಲೇಜೊಂದರಲ್ಲಿ ಕಳೆದ ವಾರ ನಡೆದ ಘರ್ಷಣೆ ನಂತರ ಗುರ್‌ಮೆಹರ್ ಕೌರ್ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ವಿರುದ್ದ ಅಭಿಯಾನವನ್ನು ಶುರುಮಾಡಿದ್ದು ಇಷ್ಟಕ್ಕೆಲ್ಲ ಕಾರಣ. 

ವಿದ್ಯಾರ್ಥಿಗಳ ಸಂಘರ್ಷ: 

ದಿಲ್ಲಿ ವಿಶ್ವವಿದ್ಯಾನಿಲಯ ಅಡಿಯಲ್ಲಿ ಬರುವ ರಮ್ಜಾಸ್‌ ಕಾಲೇಜು ‘ಕಲ್ಚರ್ ಆಫ್ ಪ್ರೊಟೆಸ್ಟ್’ ಎಂಬ ಕಾರ್ಯಕ್ರಮವೊಂದನ್ನು ಕಳೆದ ವಾರ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಜವಹರ್‌ಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಉಮರ್ ಖಾಲಿದ್ ಮತ್ತು ಶೈಲಾ ರಶೀದ್‌ ಅವರನ್ನು ಅಹ್ವಾನಿಸಲಾಗಿತ್ತು. ಜೆಎನ್‌ಯುನಲ್ಲಿ ಕಳೆದ ವರ್ಷದಿಂದೀಚೆಗೆ ಎಬಿವಿಪಿ ಮತ್ತು ಎಡ ಪಕ್ಷದ ವಿದ್ಯಾರ್ಥಿ ಸಂಘಟನೆ ಎಐಎಸ್‌ಎ ನಡುವೆ ಸಂಘರ್ಷ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯಾರ್ಥಿ ನಾಯಕರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಿದ್ದನ್ನು ಸಹಜವಾಗಿಯೇ ಎಬಿವಿಪಿ ಸದಸ್ಯರು ವಿರೋಧಿಸಿದರು. ಕೊನೆಗದು ಘರ್ಷಣೆಯ ಹಂತಕ್ಕೆ ತಲುಪಿತು. ವರದಿಗಳ ಪ್ರಕಾರ, ಎಬಿವಿಪಿ ಸದಸ್ಯರು ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನೂ ನಡೆಸಿದರು.

ಈ ಸಮಯದಲ್ಲಿ, ಎಬಿವಿಪಿ ಸದಸ್ಯರು ನಡೆಸಿದ ಹಲ್ಲೆಯನ್ನು ವಿರೋಧಿಸಿ ಕಾಲೇಜಿನ ಸಾಹಿತ್ಯ ವಿದ್ಯಾರ್ಥಿಯಾದ ಗುರ್‌ಮೆಹರ್ ಕೌರ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಎಬಿವಿಪಿ ವಿರುದ್ಧ ಅಭಿಯಾನ ಶುರುಮಾಡಿದಳು.

gurmehar-fb-post

ಗುರ್‌ಮೆಹರ್‌ ಕೌರ್ ಫೇಸ್‌ಬುಕ್ ಪೋಸ್ಟ್.

ಇದು ಜನಪ್ರಿಯವಾಗುತ್ತಿದ್ದಂತೆ ಗುರ್‌ಮೆಹರ್ ಕೌರ್ ಹಳೆಯ ವಿಡಿಯೋದ ಒಂದು ಕ್ಲಿಪ್ಪಿಂಗ್ ಹೊರಬಿತ್ತು. ಅದಕ್ಕೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದರು.

vs-tweet-1

‘ತ್ರಿಶತಕವನ್ನು ನಾನು ಹೊಡೆದಿಲ್ಲ, ನನ್ನ ಬ್ಯಾಟ್‌ ಹೊಡೆಯಿತು’ ಎನ್ನುವ ಮೂಲಕ ವಿರೇಂದ್ರ ಸೆಹ್ವಾಗ್ ಗುರ್‌ಮೆಹರ್ ತಂದೆಯ ಬಲಿದಾನವನ್ನು ವ್ಯಂಗ್ಯವಾಡಿದರು. ಇದಾಗುತ್ತಿದ್ದಂತೆ ನಟ ರಣ್‌ದೀಪ್ ಹೂಡ ಕೂಡ 20 ವರ್ಷದ ವಿದ್ಯಾರ್ಥಿ ಗುರ್‌ಮೆಹರ್‌ಗೆ ಇಂತಹದ್ದೇ ಪ್ರತಿಕ್ರಿಯೆ ನೀಡಿದರು. ಇದರ ಬೆನ್ನಲ್ಲೇ ಆಕೆಯ ಮೇಲೆ ಬೈಗುಳಗಳು ಶುರುವಾದವು.

ಹೆಣ್ತನದ ವ್ಯಂಗ್ಯ: 

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಂಗಸರು ಎತ್ತುವ ಪ್ರಶ್ನೆಗಳಿಗೆ ಬರುವಂತಹ ಕೆಳಮಟ್ಟದ, ಕೀಳು ಅಭಿರುಚಿಯ ಪ್ರತಿಕ್ರಿಯೆ ಈ ಬಾರಿಯೂ ವ್ಯಕ್ತವಾಗಿದೆ. ಗುರ್‌ಮೆಹರ್‌ ತಂದೆಯ ಬಲಿದಾನವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾಳೆ ಎಂಬಲ್ಲಿಂದ ಶುರುವಾಗಿದೆ, ಪ್ರಚಾರ ಬೇಕಿದ್ದರೆ ಆಕೆ ಸನ್ನಿ ಲಿಯೋನ್‌ ರೀತಿಯಲ್ಲಿ ನೀಲಿ ಚಿತ್ರಗಳಲ್ಲಿ ನಟಿಸಲಿ ಎಂಬಲ್ಲಿವರೆಗೆ ‘ದೇಶದ್ರೋಹಿ’ ಎಂದು ಹೀಗಳಿಯುವ ಮಂದಿ ಪ್ರತಿಕ್ರಿಯೆ ತೋರಿಸಿದ್ದಾರೆ.

ಇವುಗಳ ನಡುವೆಯೇ ಗುರ್‌ಮೆಹರ್ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಪ್ರಕಟಿಸಿದ್ದಾರೆ. ನನ್ನ ಬಗ್ಗೆ ವ್ಯಕ್ತವಾಗುತ್ತಿರುವ ಕೆಳ ಮಟ್ಟದ ಪ್ರತಿಕ್ರಿಯೆಗಳನ್ನು ಓದಲು ಹೋಗಲ್ಲ ಎಂದಾಕೆ ಪ್ರತಿಕ್ರಿಯಿಸಿದ್ದಾಳೆ.

ಸದ್ಯ ದೇಶದಲ್ಲಿ ನಡೆಯುತ್ತಿರುವ ‘ದೇಶ ಪ್ರೇಮಿ’ ಮತ್ತು ‘ದೇಶ ದ್ರೋಹಿ’ಗಳು ಎಂಬ ಅತ್ಯಂತ ತೆಳುವಾದ, ಮೇಲ್ಮಟ್ಟದ ಘರ್ಷಣೆಗಳಿಗೆ ಈ ಘಟನೆ ಮತ್ತೊಂದು ಸೇರ್ಪಡೆ ಅಷ್ಟೆ. ಅದರ ಜತೆಗೆ, ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಯಾವ ವಿಚಾರ, ಎಲ್ಲಿ ಮತ್ತು ಹೇಗೆ ಉಪಯೋಗಕ್ಕೆ ಬರುತ್ತದೆ ಎಂಬುದಕ್ಕೆ ಆಕೆಯಯ ವರ್ಷದ ಹಿಂದಿನ ವಿಡಿಯೋ ಸಾಕ್ಷಿ ಒದಗಿಸಿದೆ.

Leave a comment

FOOT PRINT

Top