An unconventional News Portal.

ಹೊಸ ಸಾವಿರ ರೂಪಾಯಿ ‘ನೋಟಿನ ಮರ್ಮ’; ಬೀರುತ್ತಿರುವ ಅನಾಣ್ಯೀಕರಣದ ಪರಿಣಾಮ

ಹೊಸ ಸಾವಿರ ರೂಪಾಯಿ ‘ನೋಟಿನ ಮರ್ಮ’; ಬೀರುತ್ತಿರುವ ಅನಾಣ್ಯೀಕರಣದ ಪರಿಣಾಮ

ಮಳೆ ನಿಂತು ಹೋದ ಮೇಲೂ ಹನಿಗಳು ಉದುರುವುದು ಇನ್ನೂ ನಿಂತಿಲ್ಲ. ಅನಾಣ್ಯೀಕರಣದ ಪರಿಣಾಮಗಳ ‘ಕಲೆ’ ಅಷ್ಟು ಸುಲಭಕ್ಕೆ ಮಾಸುವಂತೆಯೂ ಕಾಣಿಸುತ್ತಿಲ್ಲ.

ಕಳೆದ ನ. 8ರಂದು ರಾತ್ರಿ ಪ್ರಧಾನಿ ಮೋದಿ 500 ಹಾಗೂ 1000 ರೂಪಾಯಿ ಮುಖಬೆಲೆ ನೋಟುಗಳಿಗೆ ಮೌಲ್ಯವಿಲ್ಲ ಎಂದು ಘೋಷಿಸಿದರು. ಆ ಮೂಲಕ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ. 86ರಷ್ಟು ನಗದು ಹಣ ಬೆಲೆ ಕಳೆದುಕೊಂಡಿತು. ಆರಂಭದಲ್ಲಿ ಕಪ್ಪು ಹಣದ ವಿರುದ್ಧದ ಸಮರ ಇದು, ಜತೆಗೆ, ಕಳ್ಳನೋಟು ದಂಧೆಗೆ ಕಡಿವಾಣ, ಭಯೋತ್ಪಾದನೆ ವಿರುದ್ಧ ಸಮರ ಎಂದು ಈ ಕ್ರಮವನ್ನು ಬಣ್ಣಿಸಲಾಯಿತು. ನಂತರ ದಿನಗಳಲ್ಲಿ ‘ಕ್ಯಾಶ್ ಲೆಸ್ ಎಕಾನಮಿ’ಯ ಅಸ್ತ್ರವನ್ನು ಬಳಸಲಾಯಿತು.

ಮೇಲ್ನೋಟಕ್ಕೆ ಕೇಂದ್ರ ಸರಕಾರದ ಈ ನಿರ್ಧಾರದ ಹಿಂದಿನ ಉದ್ದೇಶವನ್ನು ಪ್ರಮುಖ ಪ್ರತಿಪಕ್ಷಗಳೇ ಪ್ರಶ್ನಿಸಲು ಹಿಂಜರಿದವು. ದಿಲ್ಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಕೇಂದ್ರದ ನಡೆ ವಿರುದ್ಧ ಬೀದಿಗೆ ಇಳಿದರು. ರಾಜಕೀಯ ಮೇಲಾಟಗಳು ಆರಂಭವಾದ ಹೊತ್ತಿಗೆ ಈ ದೇಶದ ಸಾಮಾನ್ಯ ನಾಗರಿಕರು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ನೋಡು ನೋಡುತ್ತಿದ್ದಂತೆ ‘ಜನಧನ್ ಖಾತೆ’ದಾರರಾಗಿದ್ದವರು ಭ್ರಷ್ಟಾಚಾರದ ಆರೋಪ ಹೊತ್ತುಕೊಂಡರು.

ನೋಟುಗಳ ಅನಾಣ್ಯೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲು ಕೋರಿಕೊಂಡಿದ್ದ ಗಡುವು ಮುಗಿದು ಹೋಗಿದೆ. ಅದರ ಬೆನ್ನಲ್ಲೇ ದೇಶದ ಆರ್ಥ ವ್ಯವಸ್ಥೆಯಲ್ಲಿ ಗಾಳಿ ಸುದ್ದಿಗಳು ರಾರಾಜಿಸುತ್ತಿವೆ. ಮೊದಲು 10 ರೂಪಾಯಿ ನಾಣ್ಯಗಳ ಚಲಾವಣೆ ನಿಂತು ಹೋಯಿತು ಎಂದು ಸುಳ್ಳು ಹರಡಿತು. ನಂತರ ಒಂದು ಸಾವಿರ ಮುಖಬೆಲೆ ನೋಟುಗಳು ಚಲಾವಣೆಗೆ ಬರಲಿವೆ ಎಂಬ ಸುದ್ದಿ ಹಬ್ಬಿತ್ತು. ಈ ಸುಳ್ಳು ಸುದ್ದಿಗೆ ಇನ್ನಷ್ಟು ತುಪ್ಪ ಸುರಿಯಂತೆ, ಬಣ್ಣ ಬದಲಿಸಿದ ಹೊಸ 1000 ರೂಪಾಯಿ ನೋಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆದ 1000 ರೂ. ಫೇಕ್ ನೋಟ್.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆದ 1000 ರೂ. ಫೇಕ್ ನೋಟ್.

ಹೀಗೆ, ಹೊಸ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಬರುತ್ತವೆ ಎಂಬ ಸುದ್ದಿ ಹರಡಲು ಕಾಣರವಾಗಿದ್ದು ಆರ್ಥಿಕ ವ್ಯವಹಾರಗಳ ಶಕ್ತಿಕಾಂತ್ ದಾಸ್ ಹೇಳಿಕೆಯೇ. ಅನಾಣ್ಯೀಕರಣ ಘೋಷಣೆಯಾಗಿ ಎರಡು ದಿನಗಳ ನಂತರ ಎಕನಾಮಿಕ್ ಎಡಿಟರ್ಸ್ ಜತೆಗಿನ ಮಾತುಕತೆಯಲ್ಲಿ “ಹೊಸ ರೂಪದಲ್ಲಿ 1000 ರೂಪಾಯಿಗಳ ನೋಟು ಚಲಾವಣೆ ಬರಲಿದೆ,” ಎಂದವರು ತಿಳಿಸಿದ್ದರು. ಇದು ವರದಿಯಾದ ನಂತರ, ಸಾವಿರ ರೂಪಾಯಿ ನೋಟುಗಳ ಕುರಿತು ನಾನಾ ಸುದ್ದಿಗಳು, ಊಹಾಪೋಹಗಳು ಹುಟ್ಟಿಕೊಂಡಿದ್ದವು. ಬುಧವಾರ ಯೂ- ಟರ್ನ್‌ ತೆಗೆದುಕೊಂಡ ಅವರು ಶಕ್ತಿಕಾಂತ್ ದಾಸ್‌ ಅವರೇ ಟ್ವೀಟ್ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಶಕ್ತಿಕಾಂತ್ ದಾಸ್ ಟ್ವೀಟ್.

ಶಕ್ತಿಕಾಂತ್ ದಾಸ್ ಟ್ವೀಟ್.

ಇಲ್ಲಿ ಗಮನಿಸುವ ಪ್ರಮುಖ ಅಂಶವೊಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಟ್ವೀಟ್‌ನಲ್ಲಿದೆ. ಸಾವಿರ ರೂಪಾಯಿ ನೋಟುಗಳ ತೀರ್ಮಾನದಿಂದ ಸರಕಾರ ಹಿಂದೆ ಸರಿದಿದೆಯಾ? ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ಇದರ ಜತೆಗೆ, 500 ರೂಪಾಯಿ ಹಾಗೂ ಕಡಿಮೆ ಮುಖಬೆಲೆ ನೋಟುಗಳ ಮುದ್ರಣಕ್ಕೆ ಒತ್ತು ನೀಡುವ ಕುರಿತು ಪ್ರಸ್ತಾಪಿಸಿದ್ದಾರೆ.

1000 ಹಾಗೂ 500 ಮುಖಬೆಲೆ ನೋಟುಗಳ ಅಪಮೌಲ್ಯೀಕರಣದ ನಂತರ ಸರಕಾರ ಬದಲಿಗೆ 2000 ಸಾವಿರ ನೋಟುಗಳನ್ನು ಬಿಡುಗಡೆ ಮಾಡಿತ್ತು. ಇದು ಜನಸಾಮಾನ್ಯ ಕೈಗೆ ಕೊಂಚ ನಿಧಾನವಾಗಿಯಾದರೂ ತಲುಪಿತ್ತು. ಜತೆಗೆ ದೇಶದಲ್ಲಿ ಚಿಲ್ಲರೆ ಸಮಸ್ಯೆಗೆ ಇದು ಎಡೆಮಾಡಿಕೊಟ್ಟಿತ್ತು. ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ಕೆಳಮಧ್ಯಮ ವರ್ಗದ ಜನರಿಗೆ 2 ಸಾವಿರ ಮುಖಬೆಲೆ ನೋಟು ‘ಊಟಕ್ಕಿಲ್ಲದ ಉಪ್ಪಿನಕಾಯಿ’ಯಂತಾಗಿತ್ತು.

ಇದೀಗ ಕಡಿಮೆ ಮುಖಬೆಲೆಯ ನೋಟುಗಳ ಮುದ್ರಣದ ಕುರಿತು ಗಮನ ಹರಿಸುವುದಾಗಿ ಹಿರಿಯ ಅಧಿಕಾರಿ ಹೇಳುವ ಮೂಲಕ ಕೇಂದ್ರ ಸರಕಾರ ಸಮಸ್ಯೆಯನ್ನು ಗ್ರಹಿಸಿದಂತೆ ಕಾಣಿಸುತ್ತಿದೆ. ಇದೇ ನಿರ್ಧಾರವನ್ನು ಮುಂಚೆಯೇ ತೆಗೆದುಕೊಂಡಿದ್ದರೆ ದೇಶದ ಜನರಿಗಾದ ಸಮಸ್ಯೆಯನ್ನು ಇನ್ನಷ್ಟು ಕಡಿಮೆ ಮಾಡಬಹುದಿತ್ತು. ಈ ಕಾಲ ಮಿಂಚಿ ಹೋಗಿದೆ. ಇದರ ಜತೆಗೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿರುವುದು, ತೆರಿಗೆ ಸಂಗ್ರಹದಲ್ಲಿ ಖೋತ ಬೀಳುತ್ತಿರುವುದು, ಕೃಷಿ ಆಧಾರಿತ ಆರ್ಥಿಕತೆ ನೆಲಕ್ಕಿಚ್ಚಿರುವುದು ಹೀಗೆ ಪರಿಣಾಮಗಳ ಪಟ್ಟಿ ಬೆಳೆಯುತ್ತಿದೆ.

ಇಷ್ಟರ ನಡುವೆಯೂ ಅನಾಣ್ಯೀಕರಣದಂತಹ ದೇಶದ ಆರ್ಥುಕತೆ ಮೇಲೆ ಗುರುತರ ಪರಿಣಾಮ ಬೀರುವಂತಹ ತೀರ್ಮಾನವನ್ನು ಕೇಂದ್ರ ಸರಕಾರ ಯಾಕೆ ತೆಗೆದುಕೊಂಡಿತ್ತು? ಪ್ರಶ್ನೆ ಸ್ಪಷ್ಟ ಉತ್ತರ ಇನ್ನೂ ಸಿಗಬೇಕಿದೆ.

Leave a comment

FOOT PRINT

Top