An unconventional News Portal.

ಲೆಫ್ಟ್ ವರ್ಸಸ್ ರೈಟ್: ಫೆ. 25ಕ್ಕೆ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ‘ಸೈದ್ಧಾಂತಿಕ ಸಂಘರ್ಷ’

ಲೆಫ್ಟ್ ವರ್ಸಸ್ ರೈಟ್: ಫೆ. 25ಕ್ಕೆ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ‘ಸೈದ್ಧಾಂತಿಕ ಸಂಘರ್ಷ’

ರಾಜ್ಯದಲ್ಲಿ ನಡೆಯುತ್ತಿರುವ ಎಡ ಮತ್ತು ಬಲದ ‘ಸೈದ್ಧಾಂತಿಕ ಸಂಘರ್ಷ’ಕ್ಕೆ ಇದೇ ತಿಂಗಳ 25ರಂದು ಮಂಗಳೂರಿನ ಬೀದಿಗಳು ಸಾಕ್ಷಿಯಾಗಲಿವೆ.

ಸಿಪಿಎಂ ಕರ್ನಾಟಕ ಪಕ್ಷವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳಲಿದ್ದಾರೆ. ‘ಕೋಮುವಾದಕ್ಕೆ ಸೋಲಾಗಲಿ; ಸೌಹಾರ್ದತೆ ಗಟ್ಟಿಯಾಗಲಿ’ ಎಂಬುದು ಕಾರ್ಯಕ್ರಮದ ಘೋಷವಾಕ್ಯ. ಕಾರ್ಯಕ್ರಮದ ಮಾಹಿತಿ ಹೊರ ಬೀಳುತ್ತಿದ್ದಂತೆ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಭಜರಂಗದಳ ಮತ್ತು ಬಿಜೆಪಿ, ಪಿಣರಾಯಿ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿವೆ. ಕಾರ್ಯಕ್ರಮದ ವಿರುದ್ಧ ಫೆ. 24ರಂದು ಮೆರವಣಿಗೆ ಮತ್ತು ಫೆ. 25ರಂದು ಬಂದ್ ನಡೆಸುವುದಾಗಿ ಪ್ರಕಟಿಸಿವೆ.

ಸದ್ಯ ಸಿಪಿಎಂ ಕಾರ್ಯಕ್ರಮಕ್ಕೆ ಮಂಗಳೂರು ಪೊಲೀಸರು ಅನುಮತಿ ನೀಡಿದ್ದಾರೆ. ಪಕ್ಷದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ಕಾರ್ಯಕ್ರಮಕ್ಕೆ ಪೊಲೀಸ್ ರಕ್ಷಣೆಗೆ ಒಪ್ಪಿಗೆ ಸಿಕ್ಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನೊಂದೆಡೆ, ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಮತ್ತು ಬಿಜೆಪಿ ಹಮ್ಮಿಕೊಂಡಿರುವ ಮೆರವಣಿಗೆ ಮತ್ತು ಬಂದ್‌ಗೆ ಅನುಮತಿ ಇನ್ನೂ ಸಿಕ್ಕಿಲ್ಲ. ಕೊನೆಯ ಕ್ಷಣದಲ್ಲಾದರೂ ತಮಗೆ ಅನುಮತಿ ಸಿಗಬಹುದು ಎಂದು ಸಂಘಟನೆ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಯಾಕೀ ವಿರೋಧ?: 

ಕೋಮು ಸೌಹಾರ್ದದ ನೆಲೆಯಲ್ಲಿ ಸಿಪಿಐಎಂ- ಕರ್ನಾಟಕ ‘ಐಕ್ಯತಾ ರ್ಯಾಲಿ’ಯನ್ನು ಮಂಗಳೂರಿನಲ್ಲಿ ಹಮ್ಮಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ಬಲಪಂಥೀಯ ಸಂಘಟನೆಗಳ ಕೇಂದ್ರಸ್ಥಾನವಾಗಿ ಬದಲಾಗಿತ್ತು. ‘ಹಿಂದೂಸ್ತಾನ್ ಟೈಮ್ಸ್’ ವರದಿಯೊಂದರ ಪ್ರಕಾರ, ಬಿಜಪಿ ಸರಕಾರದ ಕೊನೆಯ 9 ತಿಂಗಳ ಅವಧಿಯಲ್ಲಿ ಒಟ್ಟು 124 ಕೋಮು ಸಂಘರ್ಷಗಳಿಗೆ ಮಂಗಳೂರು ಸಾಕ್ಷಿಯಾಗಿತ್ತು. 2014ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೊದಲ 9 ತಿಂಗಳಿನಲ್ಲಿ ಮಂಗಳೂರಿನಲ್ಲಿ ನಡೆದ ಕೋಮು ಸಂಘರ್ಷದ ಘಟನೆಗಳ ಸಂಖ್ಯೆ 100 ದಾಟಿತ್ತು. ವಿಶೇಷ ಅಂದರೆ, ಜಿಲ್ಲೆಯ 8 ವಿಧಾನಸಭಾ ಸ್ಥಾನಗಳ ಪೈಕಿ 7 ಕಾಂಗ್ರೆಸ್ ಕೈಲಿವೆ.

ಕಡಲ ತಡಿಯ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳಲ್ಲಿ ಒಂದಾದ ಸಿಪಿಐಎಂ ಕೂಡ ತನ್ನ ಬೇರುಗಳನ್ನು ಬಿಟ್ಟಿದೆ. ಪಕ್ಕದ ಕೇರಳದಲ್ಲಿ ಪಕ್ಷ ಅಧಿಕಾರದಲ್ಲಿದೆ. ಅಲ್ಲಿನ ಕೆಳವರ್ಗದ ಈಳವ ಸಮುದಾಯಕ್ಕೆ ಸೇರಿದ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿದ್ದಾರೆ. “ಕೇರಳದಲ್ಲಿರುವ ಈಳವ ಸಮುದಾಯ ಮಂಗಳೂರಿನಲ್ಲಿ ಬಿಲ್ಲವ ಸಮುದಾಯ ಶ್ರೇಣಿಯಲ್ಲಿಯೇ ಬರುತ್ತಾರೆ. ಹೀಗಾಗಿ ವಿಜಯನ್ ಬಂದು ಮಾತನಾಡುವುದು ಬಿಜೆಪಿ ಮತ್ತು ಸಂಘಪರಿವಾರದ ಮತಬ್ಯಾಂಕ್‌ ಮೇಲೆ ಪರಿಣಾಮ ಬೀರುತ್ತದೆ. ಇದು ಅವರ ವಿರೋಧಕ್ಕೆ ನಿಜವಾದ ಕಾರಣ,” ಎನ್ನುತ್ತಾರೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.

ಬಿಜೆಪಿಯ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ, ಬಿಜೆಪಿ ಪಕ್ಷದ ನವೀನ್ ಕುಮಾರ್ ಕಟೀಲ್ ಇದನ್ನು ಅಲ್ಲಗೆಳೆಯುತ್ತಾರೆ. “ಕೇರಳದಲ್ಲಿ ಸಿಪಿಐಎಂ ರಾಜಕೀಯ ಹತ್ಯೆಗಳನ್ನು ಮಾಡಿಸುತ್ತಿದೆ. ಇತ್ತೀಚೆಗಷ್ಟೆ 11 ಜನರ ಕಗ್ಗೊಲೆ ನಡೆದಿದೆ. ಪಿಣರಾಯಿ ವಿಜಯನ್ ಗ್ರಾಮದಲ್ಲಿಯೇ ಒಂದು ಕೊಲೆ ಮಾಡಿಸಲಾಗಿದೆ. ಅಲ್ಲಿನ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಚೇರಿಗಳ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ಅಂತವರು ಬಂದು ಮಂಗಳೂರಿನಲ್ಲಿ ಸೌಹಾರ್ದದ ಮಾತನಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸುತ್ತಾರೆ.


More Reading:  left-right

ದೇವರನಾಡಲ್ಲಿ ‘ರಾಜಕೀಯ ಹತ್ಯೆ’ಗಳು: ಕೇಸರಿ v/s ಕೆಂಬಾವುಟ ನಡುವಿನ ಕದನದ ಅಸಲಿಯತ್ತು ಇದು!


ಪಿಣರಾಯಿ ವಿಜಯನ್ ಆಗಮನಕ್ಕೆ ವಿರೋಧಿಸುತ್ತಿರುವ ಭಜರಂಗದಳ ಕೂಡ ಇದೇ ಮಾದರಿಯ ಪ್ರತಿಕ್ರಿಯೆ ನೀಡುತ್ತಿದೆ. ‘ಸಮಾಚಾರ’ ಜತೆ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಶರಣ್ ಪಂಪ್ವೇಲ್, “ಕೇರಳದಲ್ಲಿ ಕಮ್ಯುನಿಸ್ಟರಿಂದ ಹಿಂದೂಗಳ ಹತ್ಯೆ ನಡೆಯುತ್ತಿದೆ. ಇಡೀ ಹಿಂದೂ ಸಮಾಜವನ್ನೇ ನಿರ್ನಾಮ ಮಾಡಲು ಪಿಣರಾಯಿ ವಿಜಯನ್‌ ಹೊರಟಿದ್ದಾರೆ. ಅಂತವರು ಬಂದು ಮಂಗಳೂರಿನಲ್ಲಿ ಭಾಷಣ ಮಾಡುವ ಅಗತ್ಯವಿಲ್ಲ,” ಎಂದರು. ಫೆ. 25ರಂದು ಮಂಗಳೂರಿನಲ್ಲಿ ಸ್ವಯಂ ಘೋಷಿತ ಬಂದ್ ಮಾಡಲು ಕರೆ ನೀಡುತ್ತಿದ್ದೇವೆ, ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಹೇಳಿದರು. ”ಬಂದ್ ವೇಳೆ ಹಿಂಸೆ ನಡೆಯುವ ಸಾಧ್ಯತೆಗಳಿವೆಯಾ” ಎಂಬ ಪ್ರಶ್ನೆಗೆ, “ಯಾವುದೇ ಕಾರಣಕ್ಕೂ ಪಿಣರಾಯಿ ವಿಜಯನ್‌ ಇಲ್ಲಿಗೆ ಬಂದು ಭಾ‍ಷಣ ಮಾಡಬಾರದು. ಒಂದು ವೇಳೆ ಭಾಷಣ ಮಾಡಿದ್ದೇ ಆದರೆ ಪರಿಸ್ಥಿತಿ ಬಿಗಡಾಯಿಸಲಿದೆ,” ಎಂದು ಉತ್ತರಿಸಿದರು. ಹಿಂದೂ ಜಾಗರಣ ವೇದಿಕೆಯ ನಾಯಕ ಜಗದೀಶ್ ಶೆನಾವಾ ಕೂಡ ಇದೇ ಮಾದರಿಯಲ್ಲಿ ಪಿಣರಾಯಿ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದರು.

“ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಬಂದು ಭಾ‍ಷಣ ಮಾಡಬಹುದು. ಇದರ ಹಿಂದಿರುವುದು ಆರ್‌ಎಸ್‌ಎಸ್‌ ಕುತಂತ್ರ. ಇಂತಹ ಸೌಹಾರ್ದ ಕಾರ್ಯಕ್ರಮಗಳನ್ನು ಅದು ಹಿಂದಿನಿಂದಲೂ ವಿರೋಧಿಸಿಕೊಂಡೇ ಬಂದಿದೆ. ಈಗಲೂ ವಿರೋಧ ಮಾಡುತ್ತಿದೆ. ಕೇರಳದಲ್ಲಿ ಹಿಂದೂಗಳ ಹತ್ಯೆ ನಡೆದಿದೆ ಎಂದು ಅವರು ಹೇಳುತ್ತಾರೆ. ಅಲ್ಲಿ 300ಕ್ಕೂ ಹೆಚ್ಚು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಕೊಲೆ ನಡೆದಿದೆ. ಅದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ,” ಎನ್ನುತ್ತಾರೆ ಮುನೀರ್ ಕಾಟಿಪಳ್ಳ.

ಹೀಗೆ, ಪರ ಮತ್ತು ವಿರೋಧದ ನೆಲೆಯಲ್ಲಿ ಮಂಗಳೂರಿನಲ್ಲಿ ನೆರೆ ರಾಜ್ಯದ ಮುಖ್ಯಮಂತ್ರಿ ಆಗಮನ ಸಂಘರ್ಷದ ಕಿಡಿಯನ್ನು ಹೊತ್ತಿಸುವ ಹಾಗೆ ಕಾಣುತ್ತಿದೆ. ಕಾರ್ಯಕ್ರಮದ ಭದ್ರತೆ ಮತ್ತು ಇಲಾಖೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿಗಾಗಿ ಮಂಗಳೂರು ಪೊಲೀಸರನ್ನು ಸಂಪರ್ಕಿಸಲಾಯಿತಾದರೂ, ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

Leave a comment

FOOT PRINT

Top