An unconventional News Portal.

ಉತ್ತರ ಕೊರಿಯಾ ‘ಸರ್ವಾಧಿಕಾರಿ’ಯ ಸೋದರನ ‘ನಿಗೂಢ ಕೊಲೆ’ ಎಬ್ಬಿಸಿದ ತಲ್ಲಣಗಳು

ಉತ್ತರ ಕೊರಿಯಾ ‘ಸರ್ವಾಧಿಕಾರಿ’ಯ ಸೋದರನ ‘ನಿಗೂಢ ಕೊಲೆ’ ಎಬ್ಬಿಸಿದ ತಲ್ಲಣಗಳು

ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರ ಕಿಮ್ ಜಾಂಗ್ ನಾಮ್ ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಜನನಿಬಿಡ ವಿಮಾನ ನಿಲ್ದಾಣದಲ್ಲೇ ಕೊಲೆಯಾಗಿ ಹೋಗಿದ್ದಾರೆ. ಫೆಬ್ರವರಿ 13ರಂದು ನಡೆದ ಈ ಕೊಲೆ ವಿಶ್ವದಾದ್ಯಂತ ತಲ್ಲಣದ ಅಲೆ ಎಬ್ಬಿಸಿದೆ. ಅದಕ್ಕೆ ಕಾರಣ ಕೊಲೆಯ ಹಿಂದಿರುವ ರಾಜಕೀಯ, ಗೌಪ್ಯತೆ ಮತ್ತು ಸ್ವತಃ ಸರ್ವಾಧಿಕಾರಿ ತಮ್ಮನೇ ಕೊಲೆ ಮಾಡಿದ್ದಾನೆ ಎಂಬ ಅನುಮಾನಗಳು.

ಕೊಲೆಗೆ ಸಂಬಂಧಿಸಿದಂತೆ ಮಲೇಷ್ಯಾ ಪೊಲೀಸರು ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಯುವತಿಯರಾದರೆ, ಓರ್ವ ಉತ್ತರ ಕೊರಿಯಾ ಪ್ರಜೆಯಾಗಿದ್ದಾನೆ. ಘಟನೆಯಲ್ಲಿ ಇನ್ನೂ ನಾಲ್ವರ ಕೈವಾಡ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಅವರಿಗಾಗಿ ಬಲೆ ಬೀಸಿದ್ದಾರೆ. ಆದರೂ ಕೊಲೆಯ ಮೂಲ ಎಳೆಯನ್ನೂ ಭೇದಿಸಲು ಪೊಲೀಸರಿಂದ ಇನ್ನೂ ಸಾಧ್ಯವಾಗಿಲ್ಲ.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕೊಲೆ ಆರೋಪಿ ಯುವತಿ

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕೊಲೆ ಆರೋಪಿ ಯುವತಿ

ಏನಾಯಿತು?

ಕೌಲಾಲಂಪುರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದದ ಶಾಪಿಂಗ್ ಮಾಲ್‌ನಲ್ಲಿ ಸೋಮವಾರ ಅಪರಿಚಿತ ವ್ಯಕ್ತಿಯೊಬ್ಬರು ಕುಸಿದು ಬಿದ್ದದ್ದರು. ವ್ಯಕ್ತಿಯನ್ನ ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಬದುಕುಳಿಯಲಿಲ್ಲ. ಆಸ್ಪತ್ರೆಗೆ ಕರೆದೊಯ್ಯುವಾಗ ವ್ಯಕ್ತಿಯು ತನ್ನ ಮೇಲೆ ಕೆಮಿಕಲ್ ಸ್ಪ್ರೇ ಬಳಸಿ ದಾಳಿ ಮಾಡಲಾಯಿತು ಎಂದಷ್ಟೇ ಹೇಳಿದ್ದರು.

ವ್ಯಕ್ತಿಯ ಪಾಸ್ಪೋರ್ಟಿನಲ್ಲಿ ‘ಕಿಮ್ ಕೋಲ್’ ಎಂಬ ಹೆಸರಿತ್ತು. ಆದರೆ ಮುಂದೆ ಇದೇ ವ್ಯಕ್ತಿಯೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಣ್ಣ ಕಿಮ್ ಜಾಂಗ್ ನಾಮ್ ಎಂದು ಗೊತ್ತಾಯಿತು. 46 ವರ್ಷದ ಕಿಮ್ ಜಾಂಗ್ ನಾಮ್ ಹೆಸರು ಬದಲಿಸಿಕೊಂಡಿದ್ದರು. ಅವರು ಕೌಲಾಲಂಪುರದಿಂದ ಚೀನಾದ ಆಡಳಿತಕ್ಕೊಳಪಟ್ಟ ಮಕಾವ್ ಪ್ರದೇಶಕ್ಕೆ ಹೋಗಬೇಕಾಗಿತ್ತು. ವಿಮಾನ ಹತ್ತುವ ಮೊದಲು ಕೌಲಾಲಂಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಾಪಿಂಗ್ ಮಾಲ್ ಒಂದಕ್ಕೆ ಹೊಕ್ಕಿದ್ದರು ನಾಮ್. ಅಲ್ಲಿ ಅವರ ಮೇಲೆ ಮಾರಕ ಕೆಮಿಕಲ್ ಸ್ಪ್ರೇ ಮಾಡಿ ಕೊಲೆ ಮಾಡಲಾಗಿತ್ತು.

ಬುಧವಾರ ಕಿಮ್ ಜಾಂಗ್ ನಾಮ್ ದೇಹದ ಮೊದಲ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಆದರೆ ಪರೀಕ್ಷೆ ಯಾವುದೇ ತೀರ್ಮಾನಕ್ಕೆ ಬರದ ಹಿನ್ನಲೆಯಲ್ಲಿ ಮತ್ತೆ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಸರ್ವಾಧಿಕಾರಿ ತಮ್ಮನ ಕೈವಾಡ?:

ಈ ಕೊಲೆಯನ್ನು ತನ್ನ ಗೂಢಚರರನ್ನು ಬಿಟ್ಟು ಸ್ವತಃ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾಡಿದ್ದಾನೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ. ಇಬ್ಬರು ಮಹಿಳಾ ಗೂಢಚರರನ್ನು ಬಿಟ್ಟು ನಾಮ್ ರನ್ನು ಕೊಲೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾ ಸಂಸತ್ ಸದಸ್ಯರೊಬ್ಬರು ಆರೋಪಿಸಿದ್ದಾರೆ. “ಒಂದೊಮ್ಮೆ ಇದು ನಿಜವೇ ಆಗಿದ್ದರೆ ಉತ್ತರ ಕೊರಿಯಾ ಸರ್ವಾಧಿಕಾರಿಯ ಕ್ರೂರತೆ ಮತ್ತು ಮನುಷ್ಯ ವಿರೋಧಿ ನಿಲುವಿಗೆ ಹಿಡಿದ ಕೈಗನ್ನಡಿ,” ಅಂತ ದಕ್ಷಿಣ ಕೊರಿಯಾ ಪ್ರಧಾನ ಮಂತ್ರಿ ಹ್ಯಾಂಗ್ ಕ್ಯೋ ಆನ್ ಪ್ರತಿಕ್ರಿಯೆ ನೀಡಿದ್ದಾರೆ.

ಮೂಲಗಳ ಪ್ರಕಾರ, ಬಹಳ ಹಿಂದೆಯೇ ತನ್ನ ಅಣ್ಣನನ್ನು ಕೊಲ್ಲುವಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ಗೂಢಚರರಿಗೆ ಆದೇಶ ನೀಡಿದ್ದರು. 2012ರಲ್ಲೂ ನಾಮ್ ಕೊಲೆ ಮಾಡುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಉತ್ತರ ಕೊರಿಯಾದ ನಡೆಗಳೂ ಅನುಮಾನ ಮೂಡಿಸುತ್ತಿವೆ. ಆರಂಭದಲ್ಲಿ ಮೃತ ದೇಹವನ್ನು ತನಗೊಪ್ಪಿಸುವಂತೆ ಉತ್ತರ ಕೊರಿಯಾ ಕೇಳಿಕೊಂಡಿತ್ತು. ಇದಕ್ಕೆ ಮಲೇಷ್ಯಾ ಒಪ್ಪಿರಲಿಲ್ಲ. ಇದೀಗ ‘ಮಲೇಷ್ಯಾ ಸರಕಾರ ನಡೆಸಿದ ಮರಣೋತ್ತರ ಪರೀಕ್ಷೆಯೇ ಸರಿ ಇಲ್ಲ. ನಾವು ಈ ಮರಣೋತ್ತರ ಪರೀಕ್ಷೆಯ ವರದಿಯನ್ನು ತಿರಸ್ಕರಿಸುತ್ತಿರುವುದಾಗಿ’ ಉತ್ತರ ಕೊರಿಯಾ ರಾಯಭಾರಿ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೆ ದಕ್ಷಿಣ ಕೊರಿಯಾ ಜತೆ ಮಲೇಷ್ಯಾ ಕೈಜೋಡಿಸಿದೆ ಎಂದೂ ಆರೋಪಿಸಿದ್ದಾರೆ.

ಗಡಿಪಾರಾಗಿದ್ದ ಕಿಮ್ ಜಾಂಗ್ ನಾಮ್

ಉತ್ತರ ಕೊರಿಯಾ ಸರ್ವಾಧಿಕಾರಿಯ ಕುಟುಂಬ (ಕೃಪೆ: ಬಿಬಿಸಿ)

ಉತ್ತರ ಕೊರಿಯಾ ಸರ್ವಾಧಿಕಾರಿಯ ಕುಟುಂಬ (ಕೃಪೆ: ಬಿಬಿಸಿ)

ಕಿಮ್ ಜಾಂಗ್ ನಾಮ್ ಮತ್ತು ಕಿಮ್ ಜಾಂಗ್ ಉನ್ ದಿವಂಗತ ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜಾಂಗ್ ಇಲ್ ಮಕ್ಕಳಾಗಿದ್ದಾರೆ. ಆದರೆ ಇಬ್ಬರಿಗೂ ತಾಯಿ ಮಾತ್ರ ಬೇರೆ ಬೇರೆ. ನಾಮ್ ಮೊದಲ ಹೆಂಡತಿಯ ಮಗನಾದರೆ, ಉನ್ ಎರಡನೇ ಹೆಂಡತಿಯ ಮಗನಾಗಿದ್ದಾರೆ. ಕಿಮ್ ಜಾಂಗ್ ನಾಮ್ ರನ್ನು ಉತ್ತರ ಕೊರಿಯಾದಿಂದ ಗಡಿಪಾರು ಮಾಡಲಾಗಿತ್ತು. ಅವರು ದೇಶದ ಹೊರಗೇ ಜೀವಿಸುತ್ತಿದ್ದರು. ಚೀನಾ ಸರಕಾರ ಅವರಿಗೆ ರಕ್ಷಣೆ ನೀಡುತ್ತಿತ್ತು ಎನ್ನಲಾಗಿದೆ. ನಕಲಿ ಪಾಸ್ಪೋರ್ಟಿನಲ್ಲಿ ಅವರು ಚೀನಾದ ಮಕಾವ್, ಮಲೇಷ್ಯಾ, ಸಿಂಗಾಪುರಗಳಲ್ಲಿ ಓಡಾಡಿಕೊಂಡಿದ್ದರು. ಕಿಮ್ ಜಾಂಗ್ ನಾಮ್ ಉತ್ತರ ಕೊರಿಯಾದ ಅಧ್ಯಕ್ಷರಾಗಬೇಕು ಎಂಬ ಒತ್ತಾಯಗಳು ಈ ಹಿಂದಿನಿಂದಲೇ ಕೇಳಿ ಬಂದಿದ್ದವು.

ಆದರೆ ಸರಳ ಜೀವಿಯಾದ ಕಿಮ್ ಜಾಂಗ್ ನಾಮ್ ಮಾತ್ರ ನನಗೆ ದೇಶ ಮುನ್ನಡೆಸುವ ಆಸಕ್ತಿ ಇಲ್ಲ ಎಂದು ಹೇಳಿಕೊಂಡೇ ಬಂದಿದ್ದರು. ಆದರೆ ತಮ್ಮನ ಸರ್ವಾಧಿಕಾರಿ ಧೋರಣೆ ಅವರಿಗೆ ಇಷ್ಟವಿರಲಿಲ್ಲ. ಮತ್ತೊಂದು ವಾದದ ಪ್ರಕಾರ, ಕಿಮ್ ಜಾಂಗ್ ಉನ್ ರನ್ನು ಇಳಿಸಿ ಅಧ್ಯಕ್ಷರಾಗಲು ಕಿಮ್ ಜಾಂಗ್ ಹೊರಟಿದ್ದರು ಎನ್ನಲಾಗಿದೆ.

ಹೀಗೆ ಸರ್ವಾಧಿಕಾರಿ ಅಧ್ಯಕ್ಷರೊಬ್ಬರ ಅಣ್ಣನ ಕೊಲೆ ಹಲವು ಆಯಾಮದ ಚರ್ಚೆ ಜತೆಗೆ ಅನುಮಾನಗಳನ್ನೂ ಹುಟ್ಟು ಹಾಕಿದೆ. ಸಹಜವಾಗಿಯೇ ಗೂಢಚಾರಿ ಜಗತ್ತಿನಲ್ಲಿ ನಡೆದ ಈ ಕೊಲೆಯ ಸತ್ಯ ಹೊರ ಬರಲು ಒಂದಷ್ಟು ಸಮಯ ಹಿಡಿಯಲಿದೆ. ಅಧಿಕಾರ ಹಿಡಿದವರ ಮನಸ್ಥಿತಿಗಳು ಮತ್ತು ಅವರು ತೆಗೆದುಕೊಳ್ಳಬಹುದಾದ ಕ್ರೂರ ನಿರ್ಧಾರಗಳು ಹೇಗಿರುತ್ತವೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿ ನಿಲ್ಲುವ ಎಲ್ಲಾ ಸಾಧ್ಯತೆಗಳು ಇವೆ.

Leave a comment

FOOT PRINT

Top