An unconventional News Portal.

ವೈವಿಧ್ಯಮಯ ಸಿಎಂಗಳನ್ನು ಕಂಡಿದ್ದ ‘ದ್ರಾವಿಡ ಗದ್ದುಗೆ’ & ಪಳನಿಸ್ವಾಮಿ ಎಂಬ ‘ಪ್ರಾಕ್ಸಿ’!

ವೈವಿಧ್ಯಮಯ ಸಿಎಂಗಳನ್ನು ಕಂಡಿದ್ದ ‘ದ್ರಾವಿಡ ಗದ್ದುಗೆ’ & ಪಳನಿಸ್ವಾಮಿ ಎಂಬ ‘ಪ್ರಾಕ್ಸಿ’!

ನಾಯಕತ್ವಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಒಪ್ಪಿಸಿಕೊಂಡರೆ ಮಾತ್ರ ಅಧಿಕಾರ ಎಂಬುದು ತಮಿಳುನಾಡಿನ ರಾಜಕಾರಣದಲ್ಲಿ ಮತ್ತೊಮ್ಮೆ ಸಾಭೀತಾಗಿದೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ನಂತರ ಪಕ್ಷವನ್ನು ಹತೋಟಿಗೆ ತೆಗೆದುಕೊಂಡ ಆಪ್ತೆ ಶಶಿಕಲಾ ಜೈಲು ಪಾಲಾಗಿದ್ದಾರೆ. ಆದರೆ, ತಮ್ಮ ನೆರಳನ್ನು ತಮಿಳುನಾಡಿನ ಮುಖ್ಯಮಂತ್ರಿ ಗಾಧಿಯ ಮೇಲೆ ಕೂರಿಸುವಲ್ಲಿ ಅವರ ಯಶಸ್ವಿಯಾಗಿದ್ದಾರೆ.

ಗುರುವಾರ ನೂತನ ಮುಖ್ಯಮಂತ್ರಿಯಾಗಿ ಎಡಿಪಡ್ಡಿ ಕೆ. ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ ಇನ್ನೂ 30 ಜನ ಎಐಎಡಿಎಂಕೆ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್‌ ಸದನದಲ್ಲಿ ಬಹುಮತ ಸಾಭೀತುಪಡಿಸುವಂತೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ.

ಪಕ್ಷದ ಎರಡನೇ ಸ್ಥಾನದ ನಾಯಕತ್ವದಲ್ಲಿದ್ದ ಓ. ಪನ್ನೀರ್‌ ಸೆಲ್ವಂ ಭಿನ್ನಮತ ಘೋಷಿಸಿದರಾದರೂ, ಕೇವಲ 7 ಶಾಸಕ ಬೆಂಬಲವನ್ನಷ್ಟೆ ಪಡೆಯಲು ಸಾಧ್ಯವಾಯಿತು. ಜತೆಗೆ, ಪಕ್ಷದಿಂದಲೇ ಉಚ್ಛಾಟನೆಗೊಳ್ಳುವ ಮೂಲಕ ನಾಯಕತ್ವಕ್ಕೆ ಸಡ್ಡು ಹೊಡೆದಿದ್ದರ ಫಲವನ್ನೂ ಅನುಭವಿಸುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರಕಾರದ ಶ್ರೀ ರಕ್ಷೆ ಅವರ ಕೈ ಹಿಡಿಯದೇ ಹೋಗಿದೆ.

ತಮಿಳುನಾಡಿನ ರಾಜಕೀಯ:

ದೇಶದ ಸ್ವಾತಂತ್ರ್ಯಕ್ಕೂ ಮುಂಚೆಯೇ ಅಧಿಕಾರ ರಾಜಕಾರಣದ ಪ್ರಯೋಗಕ್ಕೆ ಒಡ್ಡಿಕೊಂಡ ದಕ್ಷಿಣ ಭಾರತದ ರಾಜ್ಯಗಳ ಪೈಕಿ ತಮಿಳುನಾಡು ಪ್ರಮುಖವಾದುದು. ಬ್ರಿಟಿಷ್ ಕಾಲದಲ್ಲಿಯೇ ಮದ್ರಾಸ್ ಪ್ರೆಸಿಡೆನ್ಸಿಯಾಗಿದ್ದ ರಾಜ್ಯದಲ್ಲಿ ಜನಪ್ರತಿನಿಧಿಗಳ ಆಯ್ಕೆ ಆರಂಭವಾಗಿದ್ದು 1920ರ ಸುಮಾರಿಗೆ. ಕೇರಳದ ಮಲಬಾರ್ ಪ್ರದೇಶ, ಆಂಧ್ರಪ್ರದೇಶದ ರಾಯಲುಸೀಮೆ, ಕರ್ನಾಟಕದ ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಪ್ರೆಸಿಡೆನ್ಸಿ ಆಳ್ವಿಕೆಗೆ ಒಳಪಟ್ಟಿದ್ದವು.

1920ರಲ್ಲಿ ನಡೆದ ಮೊದಲ ಶಾಸಕಾಂಗ ಮಂಡಳಿ ಚುನಾವಣೆಯಲ್ಲಿ ಜಸ್ಟಿಸ್ ಪಾರ್ಟಿ ಜಯಗಳಿಸುವ ಮೂಲಕ ಸುಬ್ಬರಾಯಲು ರೆಡ್ಡಿಯಾರ್ ಮದ್ರಾಸ್ ಪ್ರೆಸಿಡೆನ್ಸಿಯ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿಂದ 1947ರವರೆಗೂ ಮದ್ರಾಸ್ ಪ್ರೆಸಿಡೆನ್ಸಿ ಹಲವು ಮುಖ್ಯಮಂತ್ರಿಗಳನ್ನು ಕಂಡಿತಾದರೂ ಹೆಚ್ಚಿನವರು ಎರಡು ವರ್ಷಕ್ಕಿಂತ ಹೆಚ್ಚಿನ ಅಧಿಕಾರ ಅನುಭವಿಸಲು ಸಾಧ್ಯವಾಗಿರಲಿಲ್ಲ ಎಂಬುದು ವಿಶೇಷ.

'ಕಿಂಗ್ ಮೇಕರ್' ಕೆ. ಕಾಮರಾಜ್. (ವಿಕಿ)

‘ಕಿಂಗ್ ಮೇಕರ್’ ಕೆ. ಕಾಮರಾಜ್. (ವಿಕಿ)

ಸ್ವಾತಂತ್ರ್ಯ ನಂತರ, ಮದ್ರಾಸ್ ರಾಜ್ಯ ರಚನೆಗೊಂಡ ನಂತರ 1950ರಲ್ಲಿ ಕುಮಾರಸ್ವಾಮಿ ರಾಜ, 1952ರಲ್ಲಿ ಸಿ. ರಾಜಗೋಪಾಲಾಚಾರಿ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. ಮದ್ರಾಸ್ ರಾಜ್ಯದ ಆಡಳಿತಕ್ಕೊಂದು ಸೆಲೆಬ್ರಿಟಿ ಸ್ಟೇಟಸ್‌ ತಂದುಕೊಟ್ಟವರು ಕೆ. ಕಾಮರಾಜ್. ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಕಾಮರಾಜ್ 1954ರಿಂದ 1964ರ ನಡುವೆ ಸುದೀರ್ಘ 8 ವರ್ಷಗಳವರೆಗೆ ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಿದರು.

ಈ ಸಮಯದಲ್ಲಿ ಅವರು ರಾಷ್ಟ್ರ ರಾಜಕಾರಣದ ‘ಕಿಂಗ್ ಮೇಕರ್’ ಎಂದೇ ಗುರುತಿಸ್ಪಡುತ್ತಿದ್ದರು. ಲಾಲ್‌ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಕಾಮರಾಜ್ ಮಹತ್ವದ ಪಾತ್ರವನ್ನು ವಹಿಸಿದ್ದರು. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ನೀಡುವ ಯೋಜನೆಯನ್ನು ಜಾರಿಗೆ ತಂದವರು ಅವರು. ಅವರ ಮರಣಾ ನಂತರ 1972ರಲ್ಲಿ ಅವರಿಗೆ ‘ಭಾರತ ರತ್ನ’ ಗೌರವವನ್ನೂ ನೀಡಲಾಗಿತ್ತು.

ದ್ರಾವಿಡ ಚಳವಳಿಯ ಬೇರುಗಳು: 

1969ರಲ್ಲಿ ಮದ್ರಾಸ್ ಸ್ಟೇಟ್ ತಮಿಳುನಾಡು ರಾಜ್ಯವಾಗಿ ಬದಲಾಯಿತು. ಅಷ್ಟೊತ್ತಿಗಾಗಲೇ ರಾಜ್ಯದಲ್ಲಿ ದ್ರಾವಿಡ ಚಳವಳಿ ಚಲನೆ ಆರಂಭವಾಗಿತ್ತು. ತಮಿಳುನಾಡು ರಾಜ್ಯ ಘೋಷಣೆಯ ಜತೆಜತೆಗೆ ಹಿಂದಿ ವಿರೋಧಿ, ಕಾಂಗ್ರೆಸ್ ವಿರೋಧಿ ಅಲೆಯ ಮೂಲಕ ಸ್ಥಳೀಯ ರಾಜಕೀಯ ಶಕ್ತಿಯಾಗಿ ದ್ರಾವಿಡ ಮುನ್ನೇತ್ರ ಕಳಗಂ ಅಧಿಕಾರಕ್ಕೇರಿತ್ತು. ಅಣ್ಣಾ ದೊರೈ, ಎಂಜಿಆರ್, ಕರುಣಾನಿಧಿಯಂತ ದ್ರಾವಿಡ ಚಳುವಳಿಯ ವೈವಿದ್ಯಮಯ ನಾಯಕರು ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಗಳನ್ನು ನಿಭಾಯಿಸಿದರು. ಹಲವು ಹಗರಣಗಳ ಆಚೆಗೆ ಇವರೆಲ್ಲರಲ್ಲೂ ರಾಜಕೀಯ ಮತ್ಸದ್ಧಿತನ ಮತ್ತು ವೈಯಕ್ತಿಕ ಮಟ್ಟದಲ್ಲಿ ವರ್ಣಮಯ ವ್ಯಕ್ತಿತ್ವವನ್ನು ದೇಶದ ರಾಜಕೀಯ ಕಂಡಿತ್ತು.

ಮುಂದೆ, 1985ರಲ್ಲಿ ಎಐಎಡಿಎಂಕೆ ಪಕ್ಷದ ನಾಯಕಎಂಜಿಆರ್ ಸಾವಿನ ಮೂಲಕ ಪಕ್ಷದೊಳಗೆ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಯಿತು. ಈ ಸಮಯದಲ್ಲಿ ಪಕ್ಷದ ಪ್ರಶ್ನಾತೀತ ನಾಯಕಿಯಾಗಿ ಹೊರಹೊಮ್ಮಿದವರು ಜೆ. ಜಯಲಲಿತಾ. ಆಗನ್ನೂ ಪಕ್ಷದ ಕೆಳಹಂತ ಕಾರ್ಯಕರ್ತರಾಗಿದ್ದ ಕೆ. ಪಳನಿಸ್ವಾಮಿ ತಮ್ಮ ವಿಧಾನಸಭಾ ಕ್ಷೇತ್ರ ಎಡಪಡ್ಡಿಯಲ್ಲಿ ಪಕ್ಷದ ಪ್ರತ್ಯೇಕ ಬಾವುಟವನ್ನು ಹಾರಿಸಿದರು. ಈ ಮೂಲಕ ಉಪೇಕ್ಷೆಗೆ ಒಳಗಾಗಿದ್ದ ಜಯಲಲಿತಾ ಬೆನ್ನಿಗೆ ನಿಂತರು.

ಹೀಗೆ, ಜಯಾ ಆಪ್ತ ವಲಯಕ್ಕೆ ಬಂದ ಪಳನಿಸ್ವಾಮಿ ಓದಿದ್ದು ವಿಜ್ಞಾನದ ಪದವಿ. 1990ರ ಸುಮಾರಿಗೆ ಪಕ್ಷದ ಉನ್ನತ ಸ್ಥಾನಗಳನ್ನು ಅಲಂಕರಿಸಿದರು. ಜತೆಗೆ, ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಉಳಿಸಿಕೊಂಡು ಬಂದಿದ್ದರು. 1996ರ ಚುನಾವಣೆಯಲ್ಲಿ ರಾಜ್ಯಾದ್ಯಂತ ಎಐಎಡಿಎಂಕೆ ಹೀನಾಯವಾಗಿ ಸೋಲು ಕಂಡಿತು. ಈ ಸಮಯದಲ್ಲಿ ಪಳನಿಸ್ವಾಮಿ ಕೂಡ ಸೋಲನ್ನು ಅನುಭವಿಸಿದರು. “ಇಂತಹ ಸೋಲಿನ ದಿನಗಳಲ್ಲಿ ಪಳನಿಸ್ವಾಮಿ ‘ತಲೈವಿ ಅಮ್ಮ’ ಜತೆ ನಿಂತುಕೊಂಡರು. ಪಕ್ಷಕ್ಕೆ ಅಗತ್ಯವಾಗಿದ್ದ ಆರ್ಥಿಕ ನೆರವು ನೀಡಿದರು. ಮೊದಲಿನಿಂದಲೂ ಪಳನಿಸ್ವಾಮಿ ಪಕ್ಷದ ನಿಧಿ ಎಂದೇ ಗುರುತಿಸಿಕೊಂಡು ಬಂದಿದ್ದವರು,” ಎನ್ನುತ್ತಾರೆ ತಮಿಳುನಾಡಿನ ಆನ್‌ಲೈನ್ ಪತ್ರಕರ್ತರೊಬ್ಬರು.

ಕಾವೇರಿ ವಿಚಾರದಲ್ಲಿ ಮಹತ್ವ ಸಭೆಗಳು ನಡೆಯುವ ಹೊತ್ತಿಗೆ ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಮಯದಲ್ಲಿ ಉಮಾಭಾರತಿ ನಡೆಸಿದ ಸಭೆಯಲ್ಲಿ ತಮಿಳುನಾಡು ಸರಕಾರವನ್ನು ಪ್ರತಿನಿಧಿಸಿದ್ದು ಇದೇ ಪಳನಿಸ್ವಾಮಿ.

ಕಾವೇರಿ ವಿಚಾರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಪಳನಿಸ್ವಾಮಿ.

ಕಾವೇರಿ ವಿಚಾರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಪಳನಿಸ್ವಾಮಿ.

ಜಯಲಲಿತಾ ಸಂಪುಟದಲ್ಲಿ ಮತ್ತು ಆಪ್ತ ವಲಯದಲ್ಲಿಯೇ ತಮ್ಮನ್ನು ತಾವು ಅರ್ಪಿಸಿಕೊಂಡು ಬಂದ ಪಳನಿಸ್ವಾಮಿ ಸದ್ಯದ ಬಿಕ್ಕಟ್ಟಿನ ಸಮಯದಲ್ಲಿ ಶಶಿಕಲಾ ಜತೆಗೆ ನಿಂತರು. ಅದರ ಫಲವಾಗಿಯೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ವೈವಿಧ್ಯಮಯ ವ್ಯಕ್ತಿತ್ವಗಳನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಂಡಿದ್ದ ತಮಿಳುನಾಡು ಪಳನಿಸ್ವಾಮಿ ಅವರನ್ನು ಸಿಎಂ ಆಗಿ ನೋಡುತ್ತಿದೆ. ಎಷ್ಟೇ ಆದರೂ, ಶಶಿಕಲಾ ಅವರ ‘ಪ್ರಾಕ್ಸಿ’ ಎಂದು ಅವರನ್ನು ಗುರುತಿಸಲಾಗುತ್ತಿದೆ. ಜತೆಗೆ, ಇದೊಂದು ತಾತ್ಕಾಲಿಕ ಬದಲಾವಣೆ ಎಂಬ ಸತ್ಯ ಕಳೆದ ಕೆಲವು ದಿನಗಳ ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಅರ್ಥವಾಗುತ್ತಿದೆ.

 

Leave a comment

FOOT PRINT

Top