An unconventional News Portal.

‘ತುಮಕೂರು ಚಲೋ’ ಒಂದು ದಿನ ಬಾಕಿ: ‘ಇದು ಹೊಸ ತಲೆಮಾರಿನ ದಲಿತ- ದಮನಿತರ ಹೋರಾಟ’

‘ತುಮಕೂರು ಚಲೋ’ ಒಂದು ದಿನ ಬಾಕಿ: ‘ಇದು ಹೊಸ ತಲೆಮಾರಿನ ದಲಿತ- ದಮನಿತರ ಹೋರಾಟ’

‘ಉಡುಪಿ ಚಲೋ’ ಕಾರ್ಯಕ್ರಮದ ಮೂಲಕ ರಾಜ್ಯದ ಸುದ್ದಿ ಕೇಂದ್ರಕ್ಕೆ ಬಂದಿದ್ದ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ (ಡಿಡಿಎಸ್‌ಎಚ್‌ಎಸ್) ಗುರುವಾರ ‘ತುಮಕೂರು ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇತ್ತಿಚೆಗೆ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಲಿತ ಯುವಕನ ಮೇಲೆ ನಡೆದ ಬರ್ಬರ ಹಲ್ಲೆ ಮತ್ತು ರಾಜ್ಯ ಇತರೆ ಭಾಗಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳ ಅಂತರದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು ‘ಚಲೋ’ ಹಮ್ಮಿಕೊಳ್ಳಲು ಕಾರಣ. ಈಗಾಗಲೇ ತುಮಕೂರಿನ ತಾಲೂಕುಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿರುವ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಗುಜರಾತ್‌ ಮೂಲದ ಹೊಸ ತಲೆಮಾರಿನ ದಲಿತ ಹೋರಾಟಗಾರ ಜಿಗ್ನೇಶ್ ಮೆವಾನಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆ ಗುಬ್ಬಿ ಗೇಟ್‌ನಿಂದ ಆರಂಭವಾಗುವ ಮೆರವಣಿಗೆ ನಂತರ ಕಾರ್ಯಕ್ರಮ ರಾಜ್ಯದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಗಮನ ಸೆಳೆಯಲಿದೆ.

ಹೀಗಿರುವಾಗಲೇ, ‘ತುಮಕೂರು ಚಲೋ’ ಕುರಿತು ಒಂದು ವಲಯದಲ್ಲಿ ಅಸಮಾಧಾನ ಹುಟ್ಟಿಕೊಂಡಿದೆ. ಗುಬ್ಬಿ ಯುವಕನ ಮೇಲೆ ಹಲ್ಲೆ ನಡೆಸಿದವರು ಬಂಧನಕ್ಕೆ ಒಳಗಾದ ನಂತರವೂ ಯಾಕೀ ಹೋರಾಟ? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯ ಕೆಲವು ನಾಯಕರು ಇಡೀ ಹೋರಾಟದಿಂದ ಒಂದು ಅಂತರವನ್ನು ಕಾಯ್ದುಕೊಂಡಿದ್ದಾರೆ. ‘ಉಡುಪಿ ಚಲೋ’ ಸಮಯದಲ್ಲಿ ಜತೆಗಿದ್ದ ಒಂದು ಸಣ್ಣ ವರ್ಗ ‘ತುಮಕೂರು ಚಲೋ’ದಿಂದ ಹೊರಗೆ ಉಳಿದಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಚಲೋ, ಸಮಿತಿಯ ಅಂತರಿಕ ವಿಚಾರಗಳು, ಎದುರಾಗಿರುವ ವಿರೋಧಗಳು ಮತ್ತು ಅವರಿಗಿರುವ ಸ್ಪಷ್ಟತೆಗಳ ಕುರಿತು ಸಮಿತಿಯ ಕೋರ್ ಕಮಿಟಿಯ ಸದಸ್ಯರಲ್ಲಿ ಒಬ್ಬರಾದ ಎಸ್‌. ಸಿ. ದಿನೇಶ್ ಕುಮಾರ್ ಅವರನ್ನು ‘ಸಮಾಚಾರ’ ಮಾತಿಗೆ ಎಳೆಯಿತು.  ಅವರ ಜತೆಗಿನ ಸಂದರ್ಶನ ಇಲ್ಲಿದೆ:


ಡಿಡಿಎಸ್‌ಎಚ್‌ಎಸ್‌ನ ಎಸ್‌. ಸಿ. ದಿನೇಶ್ ಕುಮಾರ್.

ಡಿಡಿಎಸ್‌ಎಚ್‌ಎಸ್‌ನ ಎಸ್‌. ಸಿ. ದಿನೇಶ್ ಕುಮಾರ್.

ಸಮಾಚಾರ: ಯಾಕೀ ತುಮಕೂರು ಚಲೋ? ದಲಿತ ಯುವಕನ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಲಾಗಿದೆ. ಹೀಗಿರುವಾಗ ನೀವು ಹೋರಾಟ ಹಮ್ಮಿಕೊಂಡಿದ್ದರ ಔಚಿತ್ಯವೇನು? 

ದಿನೇಶ್ ಕುಮಾರ್: ನಿಜ, ಗುಬ್ಬಿಯ ದಲಿತ ಯುವಕ ಅಭಿಷೇಕ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅದೇ ಪೊಲೀಸರು ಅಭಿಷೇಕ್ ಮೇಲೆ ಪೋಕ್ಸೋ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೆ. ಕೆಲವರು ಹೇಳುತ್ತಾರೆ ನಾವು ಬಂದ ನಂತರವೇ ಆತನ ಮೇಲೆ ಪೋಕ್ಸೋ ಕಾಯ್ದೆ ಬಳಸಲಾಯ್ತು ಅಂತ. ಅಂದರೆ ದಲಿತ ಯುವಕನ ಪರವಾಗಿ ದನಿ ಎತ್ತಿದ ಮಾತ್ರಕ್ಕೆ ಸರಕಾರ ಅಥವಾ ಪೊಲೀಸರು ಪೋಕ್ಸೋ ಕಾಯ್ದೆ ಬಳಸುತ್ತಾರಾ? ಇಷ್ಟಕ್ಕೂ ನಾವು ಗುಬ್ಬಿ ಪ್ರಕರಣವನ್ನು ಮಾತ್ರವೇ ಗಮನದಲ್ಲಿ ಇಟ್ಟುಕೊಂಡು ಇಷ್ಟು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ದಲಿತರ ಮೇಲೆ ಹಲ್ಲೆಗಳಾಗಿವೆ. ಕೆಲವೆಡೆ ಕೊಲೆಗಳೂ ನಡೆದಿವೆ. ನಾಗರೀಕ ಸಮಾಜದಲ್ಲಿ ಒಂದು ವರ್ಗ, ಜಾತಿಯ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೆ ದನಿ ಎತ್ತಬೇಕಾದವರು ಸುಮ್ಮನಿದ್ದಾರೆ. ನಾವು ಅನಿವಾರ್ಯವಾಗಿ ಹೋರಾಟಕ್ಕೆ ಇಳಿದಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಸಮಾಚಾರ: ತುಮಕೂರಿನಲ್ಲಿ ಹಲ್ಲೆಗೊಳಗಾದ ಯುವಕ ಮಾದಿಗ ಸಮುದಾಯಕ್ಕೆ ಸೇರಿದವನು. ಹಲ್ಲೆ ನಡೆಸಿದವರು ತಿಗಳರು. ನಿಮ್ಮ ಈ ಹೋರಾಟ ತಿಗಳ ಸಮುದಾಯ ವಿರುದ್ಧ ಅಂತ ಕೆಲವರು ಹೇಳುತ್ತದ್ದಾರೆ?

ದಿನೇಶ್: ಇದು ಅತ್ಯಂತ ತಪ್ಪು ಅಭಿಪ್ರಾಯ. ನಮ್ಮ ಹೋರಾಟಕ್ಕೆ ತಿಗಳ ಸಮುದಾಯದ ನಾಯಕರೂ ಜತೆಯಾಗಿದ್ದಾರೆ. ತಿಗಳ ಸಮುದಾಯದ ಬಗ್ಗೆ ನಮಗೆ ಗೌರವ ಇದೆ. ಅನ್ನದಾತ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವುದು ತಿಗಳರು. ಅಂತಹ ಸಮುದಾಯದಲ್ಲಿ ಒಂದು ಗುಂಪು ಕೆಳಜಾತಿಯ ಯುವಕನ ಮೇಲೆ ಹಲ್ಲೆ ನಡೆಸಿದೆ. ನಾವು ಹೋರಾಟಕ್ಕೆ ಇಳಿದಿದ್ದೇವೆ. ಈ ಮೂಲಕ ತಿಗಳರ ವಿರುದ್ಧ ಅಲ್ಲ; ಬದಲಿಗೆ ಎಲ್ಲಾ ಮೇಲ್ಜಾತಿಗಳ ಮನಸ್ಸಿನಲ್ಲಿರುವ ಈ ಜಾತಿಯ ಕೊಳೆಯನ್ನು ತೊಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ತಿಗಳರು ಸೇರಿದಂತೆ ಅನೇಕ ಮೇಲ್ಜಾತಿಯ ಸ್ನೇಹಿತರು ಕೈ ಜೋಡಿಸಿದ್ದಾರೆ. ಹೀಗಾಗಿ, ದಯವಿಟ್ಟು ಈ ವಿಚಾರದಲ್ಲಿ ಜಾತಿಗಳಲ್ಲಿ ಎತ್ತಿಕಟ್ಟುವ ಡರ್ಟಿ ಪಾಲಿಟಿಕ್ಸ್‌ಗೆ ಬಲಿಯಾಗಬೇಡಿ.

ಸಮಾಚಾರ: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಗೂ, ದಲಿತ ಸಂಘರ್ಷ ಸಮಿತಿಗಳಿಗೂ ಇರುವ ಸಾಮ್ಯತೆ ಏನು? ಅಥವಾ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಏನಾದರೂ ಇದೆಯಾ?

ದಿನೇಶ್: ನಮ್ಮ ಹೆಸರಿನಲ್ಲಿಯೇ ಇರುವಂತೆ ನಾವು ದಲಿತ ಮತ್ತು ದಮನಿತ ಸಮುದಾಯಗಳನ್ನು ಪ್ರತಿನಿಧಿಸುವ ಹೊಸ ತಲೆಮಾರಿನ ಹೋರಾಟವನ್ನು ರೂಪಿಸಲು ಬಂದಿದ್ದೇವೆ. ದಮನಿತರು ಎಂದರೆ ಮಹಿಳೆಯರು, ಮಕ್ಕಳು ಎಲ್ಲರೂ ಬರುತ್ತಾರೆ. ಹಿಂದೆ ಉಡುಪಿ ಚಲೋ ಸಮಯದಲ್ಲಿ ನಾವು ‘ಆಹಾರ ನಮ್ಮ ಆಯ್ಕೆ- ಭೂಮಿ ನಮ್ಮ ಹಕ್ಕು’ ಎಂಬ ವಿಶಾಲ ಘೋಷಣೆಯನ್ನು ನೀಡಿದ್ದೆವು. ಅದೇ ನಮ್ಮ ಮೂಲ ಅಜೆಂಡಾ ಕೂಡ. ತುಮಕೂರು ಚಲೋ ಮೂಲಕ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಹೊರಟಿದ್ದೇವೆ. ಅದಕ್ಕಾಗಿಯೇ ಕಾರ್ಯಕ್ರಮಕ್ಕೆ ‘ಮಾನವತಾ ಸಮಾವೇಶ’ ಎಂದು ಹೆಸರು ನೀಡಿದ್ದೇವೆ. ಅಂತಿಮವಾಗಿ ಜಾತಿ ದೌಜನ್ಯಗಳು ನಿಲ್ಲಲಿ, ಮಾನವತೆ ಉಳಿಯಲಿ ಎಂಬುದು ನಮ್ಮ ಆಶಯ.

ಇದಕ್ಕೆ ಆಯಾ ಭಾಗಗಳ ದಲಿತ ಸಂಘರ್ಷ ಸಮಿತಿಗಳು ನಮ್ಮ ಜತೆಯಲ್ಲಿ ಬಂದಿದ್ದಾರೆ. ನಾವು ಒಂದು ಸಂಘಟನೆ ಅನ್ನುವುದಕ್ಕಿಂತ ಒಂದು ಒಕ್ಕೂಟದ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರಗತಿಪರ- ದಲಿತ ಸಂಘಟನೆಗಳನ್ನು ಒಂದು ಸೂರಿನಡಿ ಇರುವ ಪ್ರಯತ್ನ ನಮ್ಮದು. ಅದು ಈ ಕಾಲದ ಅಗತ್ಯ ಕೂಡ. ನಾವೆಲ್ಲಾ ಒಟ್ಟಾಗಿ ಹೋರಾಟ ಮಾಡಿದರೆ ದನಿ ಜೋರಾಗುತ್ತದೆ. ತಲುಪಬೇಕಾದವರಿಗೆ ತಲುಪುತ್ತದೆ.

'ತುಮಕೂರು ಚಲೋ'ಗಾಗಿ ಕಾರ್ಯಕರ್ತರ ಪ್ರಚಾರ.

‘ತುಮಕೂರು ಚಲೋ’ಗಾಗಿ ಕಾರ್ಯಕರ್ತರ ಪ್ರಚಾರ.

ಸಮಾಚಾರ: ಹಿಂದೆ ಉಡುಪಿ ಚಲೋದಲ್ಲಿ ಇದ್ದ ಬಹುತೇಕರು ಇವತ್ತು ತುಮಕೂರು ಚಲೋ ಜತೆಗೆ ಇಲ್ಲ ಅನ್ನಿಸುತ್ತದೆ. ಯಾಕೆ ಹೀಗೆ? 

ದಿನೇಶ್: ಉಡುಪಿ ಚಲೋದಲ್ಲಿ ಇದ್ದ ಬಹುತೇಕರು ಅನ್ನುವುದಕ್ಕಿಂತ ಕೆಲವರು ಇವತ್ತು ನಮ್ಮ ಜತೆ ಇಲ್ಲ ಎಂಬುದು ನಿಜ. ಅದು ಶೇ. 10ರಷ್ಟು ಅನ್ನಬಹುದು. ಅದಕ್ಕೆ ಕಾರಣವೂ ಇದೆ. ಉಡುಪಿ ಚಲೋ ವಿಶಾಲವಾದ ಅಜೆಂಡಾ ಇಟ್ಟುಕೊಂಡಿತ್ತು. ರಾಜಕೀಯ ಪಕ್ಷಗಳೂ ನಮ್ಮ ಬೆಂಬಲ ನೀಡಿದ್ದವು. ಆದರೆ ಯಾವಾಗ ದಲಿತ ದೌರ್ಜನ್ಯದ ವಿಚಾರವನ್ನು ಕೈಗೆತ್ತಿಕೊಂಡೆವೋ, ಅಧಿಕಾರದಲ್ಲಿ ಇರುವವರಿಗೆ ಇದು ಸಮಸ್ಯೆಯಾಗಿ ಕಾಣಿಸಿತು. ಹೀಗಾಗಿ ಒಂದಷ್ಟು ಜನ ನಮ್ಮ ಜತೆ ಬರಲು ಹಿಂದೇಟು ಹಾಕಿರಬಹುದು. ಆದರೆ ಮುಂದಿನ ದಿನಗಳಲ್ಲಿ ಅವರು ಮತ್ತೆ ನಮ್ಮ ಜತೆ ಸೇರಿಕೊಳ್ಳಲಿದ್ದಾರೆ ಎಂಬ ಆಶಯ ಇದೆ.

ಸಮಾಚಾರ: ಹೊಸ ತಲೆಮಾರಿನ ದಲಿತ ಹೋರಾಟ ಕಟ್ಟುತ್ತಿದ್ದೇವೆ ಎಂದು ಹೇಳುತ್ತಿದ್ದೀರಿ. ಏನಿದು ಹೊಸತನ? ಹಿಂದಿನ ಹೋರಾಟಗಳು ದಿಕ್ಕು ತಪ್ಪಿದ್ದನ್ನು ನೋಡಿದ್ದೀರಿ. ನೀವು ಅದೇ ಹಾದಿಯಲ್ಲಿ ಸಾಗುವುದಿಲ್ಲ ಎಂಬುದನ್ನು ಹೇಗೆ ಪ್ರಾಮಾಣಿಕರಿಸುತ್ತೀರಿ?

ದಿನೇಶ್: ಇವತ್ತು ನಮ್ಮ ಸಮಿತಿಯಲ್ಲಿ ಇರುವ ಬಹುತೇಕರು ಯುವಕರು, ದಲಿತ ಸಮುದಾಯದಿಂದ ಬಂದ ವಿದ್ಯಾವಂತರು. ಭಾಸ್ಕರ್ ಪ್ರಸಾದ್, ಹುಲಿಕುಂಟೆ ಮೂರ್ತಿ, ವಿಕಾಸ್ ಮೌರ್ಯ, ಹರ್ಷ ಕುಮಾರ್ ಕುಗ್ವೆ, ಗೌರಿ, ರಾಜಶೇಖರ್, ತ್ರಿಮೂರ್ತಿ ಹೀಗೆ ನೀವು ಯಾರನ್ನೇ ನೋಡಿದರೂ ಹೊಸಬರ ಮುಖಗಳೇ ಕಾಣಿಸುತ್ತವೆ. ಇವರೆಲ್ಲರಿಗೂ ಹಿಂದಿನ ಚಳುವಳಿಗಳು ಯಾಕೆ ದಾರಿ ತಪ್ಪಿದವು ಎಂಬುದರ ಸ್ಪಷ್ಟ ಅರಿವಿದೆ. ನಾವು ಯಾವ ತಪ್ಪು ಮಾಡಬಾರದು ಎಂಬ ಬಗ್ಗೆ ಸ್ಪಷ್ಟತೆ ಇದೆ. ಮುಂದಿನ ದಿನಗಳಲ್ಲಿ ನಮ್ಮ ಚಳವಳಿಯನ್ನು ದಲಿತ ಸಮುದಾಯದಿಂದ ಬಂದವರೇ ಮುನ್ನಡೆಸಲಿದ್ದಾರೆ. ನಮಗ್ಯಾರಿಗೂ ವೇದಿಕೆ ಬೇಕು ಎಂಬ ವ್ಯಕ್ತಿಗತ ಅಹಂ ಇಲ್ಲ. ನಮಗೆ ನಾವು ಹೇಳುವ ವಿಚಾರ ಅಷ್ಟೆ ಮುಖ್ಯ.

ಮತ್ತು, ನಾವು ರೂಪಿಸುವ ಹೋರಾಟಗಳಲ್ಲಿ ಹೊಸತನಕ್ಕಾಗಿ ಹುಡುಕಾಟ ನಡೆಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುತ್ತಿದ್ದೇವೆ. ನಮ್ಮ ಪ್ರಚಾರ ಶೈಲಿಯೂ ಬದಲಾಗಿದೆ. ನಮ್ಮ ಅಪ್ರೋಚ್ ಕೂಡ ಹೊಸತನದಿಂದ ಕೂಡಿದೆ. ಹೀಗಾಗಿ ದೊಡ್ಡದೊಂದು ವಿಶಾಲ ತಿಳಿವಳಿಕೆಯ ದಲಿತ ಹೋರಾಟವನ್ನು ನಾವು ರೂಪಿಸುತ್ತಿವಿ ಎಂಬ ನಂಬಿಕೆ ಇದೆ. ಅದಕ್ಕಾಗಿ ನಾವು ನಾಯಕತ್ವಕ್ಕಿಂತ ಪ್ರಜಾಪ್ರಭುತ್ವದ ಮಾದರಿಗೆ ಹೆಚ್ಚು ಬೆಲೆ ನೀಡುತ್ತಿದ್ದೇವೆ. ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಇದು ಆರಂಭ ಅಷ್ಟೆ. ತಪ್ಪು ಮಾಡಿದರೆ ಎಚ್ಚರಿಸಲು ನೀವು ಇದ್ದೀರ. ಅಷ್ಟು ಸಾಕು ನಮಗೆ.


 

Leave a comment

FOOT PRINT

Top