An unconventional News Portal.

ಸೌಜನ್ಯ ಕೊಲೆ ಪ್ರಕರಣ: ಸಿಬಿಐ ತನಿಖಾಧಿಕಾರಿಗಳು ಎಸಗಿದ ಹದಿಮೂರು ತಪ್ಪುಗಳು

ಸೌಜನ್ಯ ಕೊಲೆ ಪ್ರಕರಣ: ಸಿಬಿಐ ತನಿಖಾಧಿಕಾರಿಗಳು ಎಸಗಿದ ಹದಿಮೂರು ತಪ್ಪುಗಳು

ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳನ್ನು ತಟ್ಟುವ ಮೂಲಕ ಭಾರಿ ಪ್ರತಿಭಟನೆಗಳಿಗೆ ಕಾರಣವಾದ ಧರ್ಮಸ್ಥಳ ಮೂಲದ ‘ಸೌಜನ್ಯ ಕೊಲೆ ಪ್ರಕರಣ’ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ.

ಈವರೆಗೂ ನಡೆಸಿರುವ ತನಿಖೆಯಲ್ಲಿ ಲೋಪಗಳಿರುವುದರಿಂದ ‘ಹೆಚ್ಚಿನ ತನಿಖೆ’ ನಡೆಸುವಂತೆ ಸಿಬಿಐಗೆ ವಿಶೇಷ ನ್ಯಾಯಾಲಯ ಫೆ. 7ರಂದು ಆದೇಶ ನೀಡಿದೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವಾಗಲೇ ನ್ಯಾಯಾಲಯ ನೀಡಿರುವ ಈ ಆದೇಶದಿಂದಾಗಿ ಹೊಸ ತಿರುವು ಸಿಕ್ಕಿದೆ. ಜತೆಗೆ, ಪ್ರತಿಷ್ಠಿತ ತನಿಖಾ ಸಂಸ್ಥೆ- ಸಿಬಿಐ- ಬಗ್ಗೆಯೇ ಅನುಮಾನಗಳು ಮೂಡುವಂತೆ ಮಾಡಿವೆ.

ಪ್ರಕರಣ ಸಂಬಂಧಪಟ್ಟಂತೆ ಈವರೆಗೆ ನ್ಯಾಯಾಲಯದಲ್ಲಿ  14 ಸಾಕ್ಷಿಗಳು ನೀಡಿರುವ ಹೇಳಿಕೆಗಳು, ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿರುವ ಅರ್ಜಿ ಮತ್ತು ನ್ಯಾಯಾಲಯದ ಹೊಸ ಆದೇಶವನ್ನು ಇಟ್ಟುಕೊಂಡು ನೋಡಿದರೆ, ತನಿಖೆಯಲ್ಲಿ ಲೋಪಗಳಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಸಿಬಿಐ ತನಿಖೆಯಲ್ಲಿ ಎಸಗಿರುವ 13 ಪ್ರಮುಖ ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಿದೆ. ಸೌಜನ್ಯ ಪ್ರಕರಣದ ನ್ಯಾಯದಾನ ಪ್ರಕ್ರಿಯೆ ಕುರಿತು ರಾಜ್ಯದ ಜನರಿಗೆ ಇರುವ ಆಸಕ್ತಿಯ ಹಿನ್ನೆಲೆಯಲ್ಲಿ ಈ ವರದಿಯನ್ನು ಪ್ರಕಟಿಸಲಾಗುತ್ತಿದೆ.


ಸಿಬಿಐ ತಪ್ಪು- 1:

ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ 3ನೇ ಸಾಕ್ಷಿದಾರರಾದ ಯಶೋಧ (ಸೌಜನ್ಯ ಅವರ ಅತ್ತೆ) ಘಟನೆ ನಡೆದ ದಿನ ಅಕ್ಟೋಬರ್ 9, 2012ರಂದು ‘ಕ್ರೈಂ ಸೀನ್’ ಬಳಿ ಮೂವರು ವ್ಯಕ್ತಿಗಳು ಮಾತನಾಡುತ್ತ ನಿಂತಿದ್ದದ್ದು ಗಮನಕ್ಕೆ ತಂದಿದ್ದಾರೆ. ಧರ್ಮಸ್ಥಳ ದೇವಸ್ಥಾನ ಟ್ರಸ್ಟ್‌ಗೆ ಸಂಬಂಧಪಟ್ಟ ಮಲ್ಲಿಕ್ ಜೈನ್, ಉದಯ್ ಜೈನ್ ಮತ್ತು ಧೀರಜ್ ಜೈನ್ ‘ಹಾಡು ಹಗಲೇ ಕೆಲಸ ಮಾಡುವುದು ಕಷ್ಟ’ ಎಂಬರ್ಥದಲ್ಲಿ ಮಾತನಾಡಿಕೊಂಡಿದ್ದನ್ನು ಇವರು ದಾಖಲಿಸಿದ್ದಾರೆ. ಆದರೆ ತನಿಖೆ ನಡೆಸಿದ ಸಿಬಿಐ ಈ ಕುರಿತು ಹೆಚ್ಚಿನ ವಿಚಾರಣೆ ನಡೆಸದೆ ಕೈ ತೊಳೆದುಕೊಂಡಿರುವುದು ಗುಮಾನಿ ಮೂಡಿಸಿದೆ.


ಸಿಬಿಐ ತಪ್ಪು- 2

ಪ್ರಕರಣದ 1ನೇ ಸಾಕ್ಷಿಯಾದ ಸೌಜನ್ಯ ತಂದೆ ಪ್ರಮುಖ ವಿಚಾರವೊಂದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಕೊಲೆಯಾದ ಸೌಜನ್ಯ ಒಳ ಉಡುಪನ್ನು ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳದಲ್ಲಿ ವಶಕ್ಕೆ ಪಡೆದಿದ್ದಲ್ಲ, ಬದಲಾಗಿ ಮನೆಯಿಂದ ತೆಗೆದುಕೊಂಡು ಹೋಗಿದ್ದರು ಎಂದು ಅವರು ತಿಳಿಸಿದ್ದಾರೆ. ಅತ್ಯಾಚಾರದಂತಹ ಪ್ರಕರಣ ನಡೆದಾಗ, ಅತ್ಯಾಚಾರಕ್ಕೆ ಒಳಗಾದ ಯುವತಿಯ ಒಳ ಉಡುಪು ಘಟನಾ ಸ್ಥಳದಿಂದ ವಶಕ್ಕೆ ಪಡೆಯುವ ಬದಲು, ಮನೆಯಿಂದ ತೆಗೆದುಕೊಂಡು ಹೋಗಿ, ಸಾಕ್ಷಿಗಳ ಪಟ್ಟಿಗೆ ಸೇರಿಸಿರುವುದು ಸಹಜವಾಗಿಯೇ ಅನುಮಾನ ಮೂಡಿಸುತ್ತಿದೆ.


ಸಿಬಿಐ ತಪ್ಪು- 3

ಘಟನೆಯಲ್ಲಿ ಉಡುಪಿ ಮೂಲದ ಸಂತೋಷ್ ರಾವ್‌ ಎಂಬಾತನನ್ನು ಬಂಧಿಸಲಾಗಿದೆ. ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಈತನನ್ನು ಮೊದಲು ಬೆಳ್ತಂಗಡಿ ಪೊಲೀಸರು, ನಂತರ ಸಿಐಡಿ ಹಾಗೂ ತದನಂತರ ಸಿಬಿಐ ಕೂಡ ಆರೋಪಿಯನ್ನಾಗಿಸಿ ತನಿಖೆಯನ್ನು ಪೂರ್ಣಗೊಳಿಸಿದೆ.

ಅಚ್ಚರಿ ವಿಚಾರ ಎಂದರೆ, ಚಂದಪ್ಪ ಗೌಡರ ತಂಗಿ ಯಶೋಧ ಹೇಳಿಕೆಯಲ್ಲಿ ಹೆಸರಿಸಲಾದ ಮಲ್ಲಿಕ್ ಜೈನ್, ಸಂತೋಷ್‌ನನ್ನು ಪೊಲೀಸರಿಗೆ ಹಿಡಿದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಈತನ ಜತೆಗೆ ಆಶ್ರಿತ್ ಜೈನ್, ಶಿವಪ್ಪ ಮಲೆಕುಡಿಯ, ರವಿ ಪೂಜಾರಿ, ಗೋಪಾಲ ಕೃಷ್ಣ ಗೌಡ ಎಂಬುವವರು ಸಂತೋಷ್‌ನನ್ನು ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಬೆಟ್ಟದ ಬಳಿ ಅನುಮಾನದ ಮೇಲೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು ಎಂದು ತನಿಖಾ ವರದಿಗಳು ಹೇಳುತ್ತಿವೆ.

ಆದರೆ, ಸಂತೋಷ್‌ ಮೇಲೆ ಯಾಕೆ ಅನುಮಾನ ಬಂತು? ಅಂತಾಗಲೀ ಅಥವಾ ಆತನೇ ಅತ್ಯಾಚಾರ ಎಸಗಿ ಸೌಜನ್ಯಳನ್ನು ಕೊಲೆ ಮಾಡಿದ್ದಾನೆ ಎಂದು ಗೊತ್ತಾಗಿದ್ದು ಹೇಗೆ ಅಂತಾಗಲೀ? ಎಲ್ಲಿಯೂ ಹೇಳಿಕೆಗಳು ದಾಖಲಾಗಿಲ್ಲ. ಇನ್ನೂ ವಿಶೇಷ ಏನೆಂದರೆ, ಸಂತೋಷ್‌ನನ್ನು ಪೊಲೀಸರಿಗೆ ಹಿಡಿದುಕೊಟ್ಟ ಸಮಯದಲ್ಲಿ ಜತೆಗಿದ್ದ ರವಿ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವು, ಕೊಲೆ ಇರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ. ಇನ್ನೊಬ್ಬ, ಗೋಪಾಲ ಕೃಷ್ಣ ಗೌಡ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ್ದಾರೆ.  ಪ್ರಕರಣದ ತನಿಖೆ ನಡೆಸಿದ ಸಿಬಿಐ ಈವ್ಯಾವ ಅಂಶಗಳ ಬಗ್ಗೆಯೂ ಗಮನ ನೀಡದಿರುವುದು ಅಚ್ಚರಿ ಮೂಡಿಸುತ್ತಿದೆ.


ಸಿಬಿಐ ತಪ್ಪು- 4

ಪ್ರಕರಣದಲ್ಲಿ ಸೌಜನ್ಯಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಬೆಳ್ತಂಗಡಿಯ ತಾಲೂಕು ಜನರಲ್‌ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಆದಂ, ‘ಸೌಜನ್ಯಳ ಮೇಲೆ ಭೀಕರವಾಗಿ ಅತ್ಯಾಚಾರ ನಡೆದಿದೆ’ ಎಂದು ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ, ಮಂಗಳೂರಿನ ಕೆ. ಎಸ್. ಹೆಗಡೆ ಮೆಡಿಕಲ್ ಅಕಾಡೆಮಿಯ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಬಲೇಶ್ವರ ಶೆಟ್ಟಿ, ಆರೋಪಿ ಸಂತೋಷ್‌ ರಾವ್ ‘ಫಿಮಾಸಿಸ್’ ಕಾಯಿಲೆಯಿಂದ ನರಳುತ್ತಿದ್ದ ಎಂದು ದಾಖಲಿಸಿದ್ದಾರೆ. (ಫಿಮಾಸಿಸ್ ಎಂದರೆ, ಪುರುಷರ ಜನನಾಂಗಕ್ಕೆ ಮುಂದಿನ ಚರ್ಮ ಅಂಟಿಕೊಂಡಿರುವುದು. ಇದು ಲೈಂಗಿಕ ಚಟುವಟಿಕೆ ಸಮಯದಲ್ಲಿ ಹಿಂದಕ್ಕೆ ಹೋಗದಂತೆ ತಡೆ ಹಿಡಿದಿರುತ್ತದೆ). ಈ ಎರಡೂ ಹೇಳಿಕೆಗಳ ಜತೆಗೆ, ಸಂತೋಷ್‌ ರಾವ್‌ನನ್ನು ಪರೀಕ್ಷಿಸಿದ ವೈದ್ಯರು ಆತನ ಜನನಾಂಗದಲ್ಲಿ ಯಾವುದೇ ಗಾಯಗಳಾಗಿರಲಿಲ್ಲ ಎಂದೂ ಹೇಳಿದ್ದಾರೆ.

ಒಂದು ಕಡೆ ಸೌಜನ್ಯ ಮೇಲೆ ಭೀಕರವಾದ ಅತ್ಯಾಚಾರ ಎಸಗಲಾಗಿದೆ, ಮತ್ತೊಂದೆಡೆ ಫಿಮಾಸಿಸ್‌ನಿಂದ ಬಳಲುತ್ತಿದ್ದ ಆರೋಪಿಯ ಜನನಾಂಗದಲ್ಲಿ ಯಾವುದೇ ಗಾಯಗಳಾಗಿಲ್ಲ. ಇಂತಹ ವೈರುಧ್ಯ ಸಹಜವಾಗಿ ಅನುಮಾನ ಮೂಡಿಸುತ್ತಿದೆ. ಈ ಕುರಿತು ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಯಾವುದೇ ಉಲ್ಲೇಖಗಳಿಲ್ಲ ಎಂಬುದು ಗಮನಾರ್ಹ.


ಸಿಬಿಐ ತಪ್ಪು- 5

ಡಾ. ಆದಂ ತಮ್ಮ ವೈದ್ಯಕೀಯ ವರದಿಯಲ್ಲಿ ಕೊಲೆಯಾದ ಸೌಜನ್ಯಳ ದೇಹದಲ್ಲಿ ಜೀರ್ಣವಾಗದೇ ಉಳಿದ ಆಹಾರ ಇತ್ತು ಎಂಬುದನ್ನು ದಾಖಲಿಸಿದ್ದಾರೆ. ಅದು ಸಂಜೆ 6 ಗಂಟೆ ಸುಮಾರಿಗೆ ಸೇವಿಸಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಆಕೆಯ ಸಾವು ಮಧ್ಯರಾತ್ರಿ 12ರ ಸುಮಾರಿಗೆ ಸಂಭವಿಸಿರಬಹುದು ಎಂದು ಹೇಳಿದ್ದಾರೆ.

ಆಕೆ ನಾಪತ್ತೆಯಾದ ದಿನ ಸೌಜನ್ಯ ಮನೆಯಲ್ಲಿ ಪೂಜೆ ಇಟ್ಟುಕೊಳ್ಳಲಾಗಿತ್ತು. ಹೀಗಾಗಿ ಆಕೆ ಸಂಜೆವರೆಗೂ ಯಾವುದೇ ಆಹಾರ ತೆಗೆದುಕೊಂಡಿರಲಿಲ್ಲ ಎಂದು ಆಕೆಯ ಜತೆಗಿದ್ದ ಸಾಕ್ಷಿಗಳು ಹೇಳಿಕೆ ನೀಡಿವೆ. ಸೌಜನ್ಯ ಕಾಲೇಜಿನಿಂದ ಮನೆಗೆ ಹೋಗಲು ಬಸ್‌ ಇಳಿದ ನಂತರ ಆಕೆ ಆಹಾರವನ್ನು ಸೇವಿಸಿರಬೇಕು. ಅದೂ ಆಕೆಯ ಮೇಲೆ ಬಲತ್ಕಾರ ನಡೆಯುವ ಮುನ್ನ ಎಂಬುದನ್ನು ವೈದ್ಯಕೀಯ ವರದಿಗಳು ಹೇಳುತ್ತಿವೆ.

ಅಂದರೆ, ಆಕೆಯ ಮೇಲೆ ಮೇಲೆ ಅತ್ಯಾಚಾರ ಎಸಗುವ ಮುನ್ನವೇ ಒತ್ತಾಯ ಪೂರ್ವಕವಾಗಿ ಆಹಾರವನ್ನು ನೀಡಿರುವ ಸಾಧ್ಯತೆ ಇದೆ. ಇದು ಒಬ್ಬರಿಂದ ನಡೆದ ಕೃತ್ಯ ಎಂದು ಹೇಳುತ್ತಿರುವ ತನಿಖಾ ವರದಿ ಸಹಜವಾಗಿಯೇ ಅನುಮಾನ ಮೂಡಿಸುತ್ತಿದೆ.


ಸಿಬಿಐ ತಪ್ಪು- 6

ಆರೋಪಿ ಸಂತೋಷ್‌ ರಾವ್ ಪೊಲೀಸರ ವಶಕ್ಕೆ ಸಿಗುವ ವಾರದ ಹಿಂದಷ್ಟೆ ಶೃಂಗೇರಿಯ ಲಾಡ್ಜ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನಂತರ ಆತ ಧರ್ಮಸ್ಥಳಕ್ಕೆ ಬಂದಿದ್ದ ಎನ್ನುತ್ತವೆ ಸಿಬಿಐ ಕಲೆ ಹಾಕಿರುವ ಸಾಕ್ಷಿಗಳು. ಆತನಿಂದ 3 ಶರ್ಟ್, 1 ಬನಿಯನ್, 1 ಪಂಚೆ ಮತ್ತು 1 ಒಳ ಉಡುಪನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವೆಲ್ಲವನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ಪರೀಕ್ಷಾ ವರದಿಗಳಲ್ಲಿ ಇವ್ಯಾವುದರ ಮೇಲೆಯೂ ಒಂದೇ ಒಂದು ರಕ್ತದ ಕಲೆಯಾಗಲೀ, ಡಿಎನ್‌ಎ ಮಾರ್ಕಿಂಗ್‌ಗಳಾಗಿ ಕಂಡು ಬಂದಿಲ್ಲ. ಅತ್ಯಾಚಾರ ಮತ್ತು ಕೊಲೆ ನಡೆಸಿದ ಆರೋಪಿ ಬಳಿ ಇರುವ ಬಟ್ಟೆಗಳಲ್ಲಿ ಅಂತಹ ಕುರುಹುಗಳು ಸಿಗದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಸಿಬಿಐ ಈ ಕುರಿತು ಯಾವುದೇ ಸಮಾಜಾಯಿಷಿಯನ್ನೂ ನೀಡಿಲ್ಲ.


ಸಿಬಿಐ ತಪ್ಪು- 7

ಇನ್ನು, ಡಿಎನ್‌ಎ ತಜ್ಷ ವಿನೋದ್ ಕೆ. ಲಕ್ಕಪ್ಪ ನೀಡಿರುವ ಹೇಳಿಕೆಯಲ್ಲಿ ಆರೋಪಿ ಸಂತೋಷ್‌ ಪಂಚೆಯಲ್ಲಿ ಕೂದಲುಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ವಿಶೇಷ ಅಂದರೆ, ಈ ಕೂದಲುಗಳು ಇಬ್ಬರು ಪ್ರತ್ಯೇಕ ಪುರುಷರಿಗೆ ಸೇರಿದ್ದು ಎಂದು ಅವರು ಗುರುತಿಸಿದ್ದಾರೆ. ಈ ಕುರಿತು ಸಿಬಿಐ ತನಿಖೆ ಹೆಚ್ಚಿನ ಬೆಳಕು ಬೀರಿಲ್ಲ. ಜತೆಗೆ, ಸೌಜನ್ಯ ಉಗುರುಗಳಲ್ಲಿ ಸಿಕ್ಕಿರುವ ಡಿಎನ್‌ಎಗೂ ಸಂತೋಷ್‌ಗೂ ಯಾವುದೇ ಸಾಮ್ಯತೆ ಇಲ್ಲ.


ಸಿಬಿಐ ತಪ್ಪು- 8

ವಿನೋದ್ ಕೆ. ಲಕ್ಕಪ್ಪ ನೀಡಿರುವ ಬಾಯಿ ಮಾತಿನ ಹೇಳಿಕೆಯಲ್ಲಿ ಕೊಲೆಯಾದ ಸೌಜನ್ಯ ಮೇಲೆ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳಿಂದ ಬಲತ್ಕಾರ ನಡೆದಿರಬಹುದು ಎಂದು ತಿಳಿಸಿದ್ದಾರೆ. ಡಾ. ಆದಂ ಕೂಡ ಇದನ್ನೇ ಪುಷ್ಠೀಕರಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಘಟನೆ ನಡೆದ ದಿನ ಬೆಳ್ತಂಗಡಿಯ ಪೊಲೀಸ್‌ ಡೈರಿಯಲ್ಲಿ ದಾಖಲಾಗಿರುವ ಸಂಗತಿಗಳು ಹಾಗೂ ಸಾಕ್ಷಿ ಯಶೋಧ ನೀಡಿರುವ ಹೇಳಿಕೆಗಳು ಮೂವರು ಯುವಕರತ್ತ ಅನುಮಾನ ವ್ಯಕ್ತಪಡಿಸುತ್ತಿವೆ.

ಹೀಗಿದ್ದೂ ಸಿಬಿಐ ಯಾಕೆ ಈ ನಿಟ್ಟಿನಲ್ಲಿ ತನಿಖೆ ನಡೆಸಲು ಮುಂದಾಗಿಲ್ಲ ಎಂಬ ಅನುಮಾನ ಕಾಡುತ್ತಿದೆ.


ಸಿಬಿಐ ತಪ್ಪು- 9

ಸೌಜನ್ಯಳ ಮೃತ ದೇಹ ಸಿಕ್ಕ ನೇತ್ರಾವತಿ ಸ್ನಾನಘಟ್ಟದ ಬಳಿಯಿರುವ ಮಣ್ಣಸಂಕದಿಂದ ಸುಮಾರು 50 ಅಡಿ ದೂರದಲ್ಲಿ ಆರೋಪಿ ಸಂತೋಷ್ ರಾವ್‌ಗೆ ಸಂಬಂಧಪಟ್ಟ ವಸ್ತುಗಳನ್ನು (ಬಟ್ಟೆಗಳನ್ನು) ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರ ದಾಖಲೆಗಳು ಹೇಳುತ್ತಿವೆ. ಆದರೆ ಅವುಗಳಲ್ಲಿ ಯಾವುದೇ ಕುರುಹು, ಸಾಕ್ಷಿಗಳು ಸಿಗಲಿಲ್ಲ ಎಂಬುದು ಗಮನಿಸಬೇಕಿರುವ ಅಂಶ.

ಪೊಲೀಸರು ನೀಡಿದ ಇದೇ ದಾಖಲೆಗಳನ್ನು ಸಿಬಿಐ ಯಾಕೆ ಮರು ಪರಿಶೀಲನೆಗೆ ಒಳಪಡಿಸಿಲ್ಲ? ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.


ಸಿಬಿಐ ತಪ್ಪು- 10

ಇಡೀ ಪ್ರಕರಣವನ್ನು ಗಮನಿಸಿದರೆ ಅಕ್ಟೋಬರ್ 10, 2012ರಂದು ಸೌಜನ್ಯಳ ಮೃತ ದೇಹ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಮಣ್ಣಸಂಕ ಎಂಬಲ್ಲಿ ಮರದ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಇಲ್ಲಿಗೆ ಹೋಗಬೇಕು ಎಂದರೆ ನೀರಿನ ತೊರೆಯನ್ನು ಹಾಯಬೇಕಿದೆ. ಆರೋಪಿ ಒಬ್ಬನೇ ಆಕೆಯನ್ನು ನೀರಿನ ತೊರೆಯನ್ನು ಹಾದು ಸಾಗಿಸುವುದು ಕಷ್ಟ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ಇದನ್ನು ನ್ಯಾಯಾಧೀಶರೂ ಕೂಡ ಗಮನಿಸಿದ್ದಾರೆ. ಆದರೆ, ಸಿಬಿಐ ತನಿಖೆ ವೇಳೆ ಈ ಕುರಿತು ಆಲೋಚನೆ ಮಾಡದಿರುವುದು ಅನುಮಾನ ಮೂಡಿಸುತ್ತಿದೆ.


ಸಿಬಿಐ ತಪ್ಪು- 11

ಸೌಜನ್ಯ ನಾಪತ್ತೆಯಾದ ದಿನ ಧರ್ಮಸ್ಥಳದ ಸುತ್ತ ಮುತ್ತ ಮಳೆ ಬಂದಿತ್ತು ಎಂದು ಸಾಕ್ಷಿಗಳ ಹೇಳಿಕೆಯಲ್ಲಿ ದಾಖಲಾಗಿದೆ. ಆದರೆ ಕೊಲೆಯಾದ ಸೌಜನ್ಯಳ ಬಟ್ಟೆಯಾಗಲೀ, ಆಕೆಯ ಕಾಲೇಜಿನ ಬ್ಯಾಗ್‌ ಆಗಲಿ ಒದ್ದೆಯಾಗಿಲ್ಲ ಅಥವಾ ಕೆಸರಿನಿಂದ ಮೆತ್ತಿಕೊಂಡಿಲ್ಲ.

ಇದನ್ನು ಗಮನಿಸಿದರೆ, ಆಕೆಯ ಮೇಲೆ ಅತ್ಯಾಚಾರ ನಡೆದ ಸ್ಥಳ ಮತ್ತು ಕೊಲೆಯಾದ ಸ್ಥಳ ಮೃತ ದೇಹ ಪತ್ತೆಯಾದ ಸ್ಥಳವಾಗಿರಲು ಸಾಧ್ಯವಿಲ್ಲ ಎನ್ನುತ್ತವೆ ದಾಖಲೆಗಳು. ಇದನ್ನು ಪ್ರತಿಷ್ಠಿತ ತನಿಖಾ ಸಂಸ್ಥೆ ಸಿಬಿಐ ಯಾಕೆ ಗಮನಿಸಲಿಲ್ಲ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.


ಸಿಬಿಐ ತಪ್ಪು- 12

ಇನ್ನು ಸಿಬಿಐ ದಾಖಲಿಸಿರುವ ಹೇಳಿಕೆಗಳ ಬಗ್ಗೆಯೂ ಅನುಮಾನ ಮೂಡುತ್ತಿದೆ. ಕೊಲೆಯಾಗುವ ಮುನ್ನ ಸೌಜನ್ಯಳ ಜತೆಯಲ್ಲಿ ಬಸ್‌ನಲ್ಲಿ ಬಂದವರ ಹೇಳಿಕೆಗಳು ತನಿಖೆಯಲ್ಲಿ ಸಿಗುವುದಿಲ್ಲ. ಒಂದು ವೇಳೆ ಆಕೆಯ ಜೊತೆಯಲ್ಲಿ ಕೊನೆಯ ಕ್ಷಣದವರೆಗೂ ಇದ್ದವರ ಮಾತುಗಳನ್ನು ಕೇಳಿದ್ದರೆ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಗುವ ಸಾಧ್ಯತೆ ಇತ್ತು. ಇನ್ನೊಂದು ಕಡೆ ಬೆಳ್ತಂಗಡಿ ಪೊಲೀಸರು ಮತ್ತು ಸಿಐಡಿ ದಾಖಲಿಸಿದ ಹೇಳಕೆಗಳನ್ನು ಸಿಬಿಐ ಮರು ಪರಿಶೀಲನೆಗೆ ಒಳಪಡಿಸಿಲ್ಲ.

ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಬೇಕು ಎಂದು ದೊಡ್ಡ ಹೋರಾಟ ನಡೆದ ನಂತರವೇ ಸಿಬಿಐಗೆ ತನಿಖೆಯ ಹೊಣೆ ವಹಿಸಲಾಗಿತ್ತು. ಹೀಗಿದ್ದೂ ಹಿಂದೆ ನಡೆದ ಪೊಲೀಸರ ಮತ್ತು ಸಿಐಡಿ ತನಿಖೆಯನ್ನು ಮರು ಪರಿಶೀಲನೆಗೆ ಒಳಪಡಿಸದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.


ಸಿಬಿಐ ತಪ್ಪು- 13

ಸೌಜನ್ಯಳ ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಗುಪ್ತಾಂಗದಿಂದ ತೆಗೆದ ಸ್ಯಾಂಪಲ್‌ (ಸ್ವಾಬ್) ವಿಧಿ ವಿಜ್ಞಾನ ಪರೀಕ್ಷೆ ವೇಳೆ ಸಹಕಾರಿಯಾಗಿಲ್ಲ ಎಂದು ದಾಖಲೆಗಳು ಹೇಳುತ್ತಿವೆ. ಈ ಕುರಿತು ಡಾ. ಆದಂ ಮರಣೋತ್ತರ ಪರೀಕ್ಷೆಯನ್ನು ರಾತ್ರಿ ವೇಳೆ ನಡೆಸಲಾಗಿತ್ತು; ಅಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಯಾಕೆ ಇಷ್ಟರ ಮಟ್ಟಿಗೆ ಅಸೂಕ್ಷ್ಮವಾಗಿ ನಡೆದುಕೊಳ್ಳಲಾಯಿತು? ಎಂಬುದನ್ನು ನ್ಯಾಯಾಧೀಶರೇ ಪ್ರಶ್ನಿಸಿದ್ದಾರೆ.


ಇವು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಡೆದ ಸಿಬಿಐ ತನಿಖೆಯಲ್ಲಿ ಕಂಡು ಬಂದಿರುವ ನ್ಯೂನ್ಯತೆಗಳು. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಿ, ಏಪ್ರಿಲ್ 24ರಂದು ವರದಿ ಸಲ್ಲಿಸುವಂತೆ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಈ ಮೂಲಕ ಸಾವಿಗೀಡಾದ ಸೌಜನ್ಯಳಿಗೆ ನ್ಯಾಯ ಸಿಗಬಹುದು ಎಂಬ ಭರವಸೆಯನ್ನು ನ್ಯಾಯಾಲಯ ಬಿತ್ತಿದೆ. ಇನ್ನೆರಡು ತಿಂಗಳುಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿರುವ ಸಿಬಿಐ ವರದಿ, ಸೌಜನ್ಯ ಪ್ರಕರಣದಲ್ಲಿ ತನಿಖಾ ಸಂಸ್ಥೆಯ ಹಣೆ ಬರಹವನ್ನು ನಿರ್ಧರಿಸಲಿದೆ.

 More Reading: ಸೌಜನ್ಯ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ತನಿಖೆಯನ್ನು ಹಳ್ಳ ಹಿಡಿಸಿತಾ ಸಿಬಿಐ?

Leave a comment

FOOT PRINT

Top