An unconventional News Portal.

ಸೌಜನ್ಯ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ತನಿಖೆಯನ್ನು ಹಳ್ಳ ಹಿಡಿಸಿತಾ ಸಿಬಿಐ?

ಸೌಜನ್ಯ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ತನಿಖೆಯನ್ನು ಹಳ್ಳ ಹಿಡಿಸಿತಾ ಸಿಬಿಐ?

ಹಿಂದೊಮ್ಮೆ ಭಾರಿ ಸುದ್ದಿ ಮಾಡುವ ಮೂಲಕ ರಾಜ್ಯದ ಸುದ್ದಿಕೇಂದ್ರಕ್ಕೆ ಬಂದಿದ್ದ ಸೌಜನ್ಯ ಕೊಲೆ ಪ್ರಕರಣದಲ್ಲಿ ‘ಹೆಚ್ಚಿನ ತನಿಖೆ ನಡೆಸುವಂತೆ’ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.

ಪ್ರಕರಣದ ತನಿಖೆ ನಡೆಸಿದ ತನಿಖಾ ಸಂಸ್ಥೆ- ಸಿಬಿಐ- ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹಲವು ನ್ಯೂನತೆಗಳಿವೆ ಎಂದು ಸೌಜನ್ಯ ತಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಪೀಠ ಪುರಸ್ಕರಿಸಿದೆ. ಈ ಮೂಲಕ ನಾಲ್ಕುವರೆ ವರ್ಷಗಳಿಂದ ಸುದ್ದಿಯಾಗುತ್ತ- ಮರೆಗೆ ಸರಿಯುತ್ತಾ- ಬಂದಿರುವ ಸೌಜನ್ಯ ಪ್ರಕರಣದ ಕುರಿತು ಇತ್ತೀಚಿನ ಬೆಳವಣಿಗೆಗಳ ಬೆಳಕು ಚೆಲ್ಲುವ ಅಗತ್ಯವೂ ಬಿದ್ದಿದೆ.

ಸದ್ಯ ಈ ಪ್ರಕರಣದ ಸಂಬಂಧಪಟ್ಟಂತೆ, ‘ಸಮಾಚಾರ’ಕ್ಕೆ ಲಭ್ಯ ಇರುವ ದಾಖಲೆಗಳು, ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿ ಮತ್ತು ವಿಧಿವಿಜ್ಞಾನ ಪ್ರಯೋಗಾಯಲದ ವರದಿಗಳನ್ನು ಗಮನಿಸಿದರೆ, ಪ್ರಕರಣವನ್ನು ದೇಶದ ಪ್ರತಿ‍‍ಷ್ಠಿತ ತನಿಖಾ ಸಂಸ್ಥೆ ಕೂಡ ಹಳ್ಳ ಹಿಡಿಸಿತಾ? ಎಂಬ ಅನುಮಾನಗಳು ಮೂಡುತ್ತಿವೆ.

ಏನಿದು ಪ್ರಕರಣ?:

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2012ರ ಅಕ್ಟೋಬರ್ 9ರಂದು ಚಂದಪ್ಪ ಗೌಡ ಎಂಬುವವರು ತಮ್ಮ ಮಗಳು ಸೌಜನ್ಯ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 19 ವರ್ಷದ ಸೌಜನ್ಯ ಅದೇ ದಿನ ಕಾಲೇಜಿನಿಂದ ಮನೆಗೆ ಬರುವಾಗ ನಾಪತ್ತೆಯಾಗಿದ್ದಳು. ಸಂಜೆ 4. 15ರ ಸುಮಾರಿಗೆ ಆಕೆ ನೇತ್ರಾವತಿ ಸ್ನಾನಘಟ್ಟದ ಬಳಿ ಬಸ್ ಇಳಿದು ಬರುವುದನ್ನು ಆಕೆಯ ಚಿಕ್ಕಪ್ಪ ವಿಠಲ ಗೌಡ ನೋಡಿದ್ದರು. ಆದರೆ ಆಕೆ ಮನೆ ಸೇರಿರಲಿಲ್ಲ.

ಅಕ್ಟೋಬರ್ 10ರಂದು ಅರೆನಗ್ನ ಸ್ಥಿತಿಯಲ್ಲಿದ್ದ ಸೌಜನ್ಯ ಮೃತ ದೇಹ ಮಣ್ಣಸಂಕ ಬಳಿಯ ಪೊದೆಯಲ್ಲಿ ಪತ್ತೆಯಾಗಿತ್ತು. ದೇಹದ ಎಡಗೈಯನ್ನು ಆಕೆಯ ಶಾಲು ಬಳಸಿ ಮರವೊಂದಕ್ಕೆ ಕಟ್ಟಲಾಗಿತ್ತು. ಈ ಹಿನ್ನೆಲೆಯಲ್ಲಿ ಸೌಜನ್ಯ ಸಂಬಂಧಿ ಜಗದೀಶ್ ಎಂಬುವವರು ‘ಯಾರೋ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ’ ಎಂದು ದೂರು ನೀಡಿದ್ದರು. ಮಾರನೇ ದಿನ ಸಂಜೆ ವೇಳೆಗೆ ಈ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಂತೋಷ್ ರಾವ್ ಎಂಬಾತನನ್ನು ಧರ್ಮಸ್ಥಳ ದೇವಾಲಯದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ತನಿಖೆಯ ವೇಳೆ ಈತನೇ ಸೌಜನ್ಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ಪ್ರಕರಣದ ಆರೋಪಿ ಸಂತೋಷ್ ರಾವ್‌ ಮತ್ತು ಕೊಲೆಯಾದ ಸೌಜನ್ಯ.

ಪ್ರಕರಣದ ಆರೋಪಿ ಸಂತೋಷ್ ರಾವ್‌ ಮತ್ತು ಕೊಲೆಯಾದ ಸೌಜನ್ಯ.

ಈ ಬೆಳವಣಿಗೆ ಅನುಮಾನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ‘ಪೊಲೀಸರು ತನಿಖೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂಬ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿಬಂದವು. ಹೀಗಾಗಿ, ರಾಜ್ಯ ಸರಕಾರ 2012ರ ನವೆಂಬರ್ 28ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತನಿಖಾ ಹಂತದಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಇದಾದ ಒಂದು ವರ್ಷದ ನಂತರ ಸಿಐಡಿ ಕೂಡ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಬದಲಿಗೆ ಪೊಲೀಸರ ತನಿಖೆಯನ್ನೇ ಸಿಐಡಿ ಕೂಡ ಅನುಮೋದಿಸಿತು.

ಸೌಜನ್ಯ ಕೊಲೆ ಪ್ರಕರಣಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆಗಳು ಹುಟ್ಟಿಕೊಂಡವು. ಸಾಮಾಜಿಕ ಜಾಲತಾಣಗಳಲ್ಲಿ ‘ಜಸ್ಟಿಸ್ ಫಾರ್ ಸೌಜನ್ಯ’ ಸದ್ದು ಮಾಡಿತು. ಸುದ್ದಿವಾಹಿನಿ ಟಿವಿ9 ಸೇರಿದಂತೆ ಮಾಧ್ಯಮಗಳು ಸೌಜನ್ಯ ಪ್ರಕರಣ ಸಂಬಂಧಪಟ್ಟಂತೆ ನಾಲ್ಕು ದಿನಗಳ ಕಾಲ ನಿರಂತರ ಸುದ್ದಿಯನ್ನು ಪ್ರಸಾರ ಮಾಡಿದವು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಸದಸ್ಯರ ಮೇಲೆ ಗುರುತರ ಆರೋಪಗಳು ಕೇಳಿಬಂದವು. ಅವರೂ ಕೂಡ ಅದಕ್ಕೆ ಸಮಜಾಯಿಷಿ ನೀಡುವ ಸಲುವಾಗಿ ಪತ್ರಿಕಾಗೋಷ್ಠಿಯನ್ನೂ ನಡೆಸಿದರು. ಕೊನೆಗೆ, ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 2013ರ ನವೆಂಬರ್ 6ರಂದು ಪ್ರಕರಣವನ್ನು ಸಿಬಿಐಗೆ ವಹಿಸಿತು.

ಹೋರಾಟ, ನಿರಂತರ ಸುದ್ದಿಗಳು ತೆರೆಯಿಂದ ಮರೆಯಾದವು. ಇದಾದ ಎರಡು ವರ್ಷಗಳ ನಂತರ 2015ರ ಅಕ್ಟೋಬರ್ 26ರಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು. ಅದೂ ಕೂಡ ಆರೋಪಿ ಸಂತೋಷ್ ರಾವ್ ಸೌಜನ್ಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ದೃಢಪಟ್ಟಿದೆ ಎಂದು ಹೇಳಿತು.

ಸಿಬಿಐ ಬಗ್ಗೆ ಅನುಮಾನ:

ಸದ್ಯ ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿ ಮತ್ತು ದಾಖಲೆಗಳ ಹಿನ್ನೆಲೆಯಲ್ಲಿ ವಿಶೇಷನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದೆ. ಈವರೆಗೆ ಒಟ್ಟು 14 ಜನ ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಪೀಠ ದಾಖಲಿಸಿಕೊಂಡಿದೆ. ಇವುಗಳ ಆಧಾರದ ಮೇಲೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಸೌಜನ್ಯ ತಂದ ಚಂದಪ್ಪ ಗೌಡ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿರುವ ಬೇಡಿಕೆಗಳು ಹೀಗಿವೆ:


  1. ಪ್ರಕರಣದ ಮೊದಲ ಸಾಕ್ಷಿ (ಪ್ರಾಸಿಕ್ಯೂಷನ್ ವಿಟ್ನೆಸ್ 1) ದಾಖಲಿಸಿರುವ ಪ್ರಕಾರ, ಘಟನೆ ನಡೆದ ದಿನ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಣ್ಣಸಂಕದ ಬಳಿ ಮಲ್ಲಿಕ್ ಜೈನ್ (ಈತ ಧರ್ಮಸ್ಥಳ ದೇವಾಲಯ ಟ್ರಸ್ಟ್‌ನ ಅಕೌಂಟ್‌ಟೆಂಟ್. ಮಲ್ಲಿಕ್ ಜೈನ್ ತಂದೆ ಕೂಡ ಧರ್ಮಸ್ಥಳದ ಅನ್ನಸಂತರ್ಪಣಾ ವಿಭಾಗದಲ್ಲಿ ಅಧಿಕಾರಿ), ಉದಯ್ ಜೈನ್, ಧೀರಕ್ ಜೈನ್‌ ‘ಬೆಳಗ್ಗಿನ ಹೊತ್ತಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದು ಮಾತನಾಡುತ್ತಾ ನಿಂತುಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಆಗಬೇಕಿದೆ. (ಈ ಮೂವರು ಪ್ರಕರಣದಲ್ಲಿ ಸಾಕ್ಷಿಗಳು ಎಂದು ತನಿಖಾ ಸಂಸ್ಥೆ ಹೆಸರಿಸಿತ್ತು. ಸಾಕ್ಷಿ 1ರ ಹೇಳಿಕೆ ಹಿನ್ನೆಲೆಯಲ್ಲಿ ಆರೋಪಿಗಳು ಎಂದು ಪರಿಗಣಿಸಿರುವ ನ್ಯಾಯಾಕಯ ನೋಟಿಸ್ ಜಾರಿ ಮಾಡಿದೆ. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ತಡೆಯಾಜ್ಷೆ ಪಡೆದುಕೊಂಡಿದ್ದಾರೆ.)

  2. ಪ್ರಕಣದ 9ನೇ ಸಾಕ್ಷಿಯಾಗಿರುವ ಜನಾರ್ಧನ್ ಘಟನೆ ನಡೆದ ದಿನ ಸೌಜನ್ಯ ಕಪ್ಪು ಬಣ್ಣದ ಛತ್ರಿ ಹಿಡಿಕೊಂಡು ಹೋಗಿರುವುದನ್ನು ನೋಡಿದ್ದಾರೆ. ಆದರೆ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪಟ್ಟಿಯಲ್ಲಿ ಛತ್ರಿಯ ಬಗ್ಗೆ ಮಾಹಿತಿಯೇ ಇಲ್ಲ. ಜತೆಗೆ, ಸೌಜನ್ಯ ಮೃತ ದೇಹ ಸಿಕ್ಕಿರುವ ಜಾಗದ ಪಂಚನಾಮೆಗಳ ಪ್ರಕಾರ ಘಟನೆ ಅಲ್ಲಿ ನಡೆಸಿರುವ ಸಾಧ್ಯತೆಯೂ ಇಲ್ಲ.

  3. ಪ್ರಕರಣದಲ್ಲಿ ಆರೋಪಿಯಾಗಿರುವ ಸಂತೋಷ್ ರಾವ್‌ನನ್ನು ಸಾಕ್ಷಿದಾರರಾಗಿರುವ ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ಹೇಳಿದ್ದಾರೆ. ಆದರೆ ಅವರು ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಅವರಿಗೆ ಸಂತೋಷ್ ರಾವ್‌ ಮೇಲೆ ಯಾಕೆ ಅನುಮಾನ ಬಂತು ಎಂಬುದನ್ನು ತಿಳಿಸಿಲ್ಲ. ಸಂತೋಷ್‌ ರಾವ್‌ನನ್ನು ಹಿಡಿಯುವಾಗ ಜತೆಗಿದ್ದ ರವಿ ಪೂಜಾರಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾನೆ. ರವಿ ಪೂಜಾರಿಯ ಸಾವು ಕೊಲೆ ಎಂಬ ಮಾತುಗಳಿವೆ. ಸಿಬಿಐ ಈ ಕುರಿತು ತನಿಖೆ ನಡೆಸಿಲ್ಲ.

  4. ಸೌಜನ್ಯ ಶವವನ್ನು ಪರೀಕ್ಷೆಗೆ ಮಾಡಿದ ಡಾ. ಆದಂ, ಆಕೆಯ ಕನ್ಯಾಪೊರೆ ಹರಿದಿದ್ದನ್ನು ಗುರುತಿಸಿದ್ದಾರೆ. ಗುಪ್ತಾಂಗದಲ್ಲಿ ಆಗಿರುವ ರಕ್ತಸ್ರಾವವನ್ನು ನೋಡಿದರೆ, ಆಕೆಯ ಮೇಲೆ ಭೀಕರವಾದ ಅತ್ಯಾಚಾರ ನಡೆದಿದೆ ಎಂದು ಖಚಿತಪಡಿಸಿದ್ದಾರೆ. ಇನ್ನೊಂದು ಕಡೆ, ಆರೋಪಿ ಸಂತೋಷ್‌ ರಾವ್‌ನನ್ನು ಪರೀಕ್ಷಿಸಿದ ವೈದ್ಯರು ಆತನ ಜನನಾಂಗದ ‘ಫಿಮಾಸಿಸ್’ ಎಂಬ ಚರ್ಮ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಹೇಳಿದ್ದಾರೆ. ಜತೆಗೆ ಆತನ ಜನನಾಂಗದಲ್ಲಿ ಯಾವುದೇ ಗಾಯಗಳು ಇರಲಿಲ್ಲ ಎಂದೂ ಅವರು ಹೇಳಿದ್ದಾರೆ. ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.

  5. ಸೌಜನ್ಯ ದೇಹವನ್ನು ಪರೀಕ್ಷೆಗೆ ಒಳಪಡಿಸಿರುವ ವೈದ್ಯರು ಆಕೆಯ ದೇಹದಲ್ಲಿ ಜೀರ್ಣವಾಗದೇ ಉಳಿದ ಆಹಾರವಿದ್ದನ್ನು ಗುರುತಿಸಿದ್ದಾರೆ. ಸಾಕ್ಷಿಗಳ ಹೇಳಿಕೆ ಪ್ರಕಾರ, ಅಂದು ಸೌಜನ್ಯ ಮನೆಯಲ್ಲಿ ಪೂಜೆ ಇದ್ದ ಕಾರಣ ಆಕೆ ಮಧ್ಯಾಹ್ನ 4 ಗಂಟೆವರೆಗೆ ಏನನ್ನೂ ತಿಂದಿರಲಿಲ್ಲ. ಹೀಗಿರುವಾಗ, ಆಕೆಯ ದೇಹದಲ್ಲಿ ಜೀರ್ಣವಾಗದೇ ಉಳಿದ ಆಹಾರವನ್ನು ಆಕೆಯನ್ನು ಅಪಹರಿಸಿದವರೇ ತಿನ್ನಿಸಿರುವ ಸಾಧ್ಯತೆ ಇದೆ. ಜತೆಗೆ, ಆಕೆ ಅಪಹರಣವಾದ ನಂತರ ರಾತ್ರಿ 12 ಗಂಟೆವರೆಗೂ ಜೀವಂತ ಇರುವುದು ದೃಢಪಡುತ್ತಿದೆ. ಮಣ್ಣಸಂಕದ ಬಯಲು ಪ್ರದೇಶದಲ್ಲಿ ಆಕೆಯನ್ನು ಜೀವಂತ ಇಟ್ಟುಕೊಳ್ಳುವ ಸಾಧ್ಯತೆ ಇಲ್ಲ, ಹೀಗಾಗಿ, ಅಪಹರಣ ಮಾಡಿದವರು ಆಕೆಯನ್ನು ಬೇರೆಯಾವುದೇ ಕಡೆಯಲ್ಲಿ ಇಟ್ಟುಕೊಂಡಿರಬೇಕು ಎಂಬ ಅನುಮಾನ ಮೂಡುತ್ತದೆ. ಈ ಕುರಿತು ತನಿಖೆ ಬೆಳಕು ಚೆಲ್ಲಬೇಕಿತ್ತು.

  6. ಆರೋಪಿ ಸಂತೋಷ್‌ ರಾವ್‌ ಕಡೆಯಿಂದ 3 ಅಂಗಿ, ಒಂದು ಪಂಚೆ, ಒಂದು ಬನಿಯನ್ ಮತ್ತು ಒಂದು ಒಳುಉಡುಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಚ್ಚರಿ ವಿಚಾರ ಎಂದರೆ, ಇವ್ಯಾವುದರಲ್ಲೂ ಒಂದು ರಕ್ತ ಕಲೆಯಾಗಲೀ, ಅಪರಾಧ ನಡೆಸಿರುವುದಕ್ಕೆ ಕುರುಹುಗಳಾಗಲಿ ಸಿಕ್ಕಿಲ್ಲ.

ಹೀಗೆ ಹಲವು ಅಂಶಗಳನ್ನು ಸೌಜನ್ಯ ತಂದೆ ಚಂದಪ್ಪ ಗೌಡ ಮಂಗಳೂರು ಮೂಲದ ವಕೀಲ ಭಾಸ್ಕರ್ ಹೊಳ್ಳ ಸಹಾಯದಿಂದ ಪಟ್ಟಿ ಮಾಡಿದ್ದಾರೆ. ಅದನ್ನು ಅವರೇ ಖುದ್ದಾಗಿ ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ನ್ಯಾಯಾಲಯವೀಗ ಹೆಚ್ಚಿನ ತನಿಖೆ ನಡೆಸುವಂತೆ ತನಿಖಾ ಸಂಸ್ಥೆಗೆ ಆದೇಶ ನೀಡಿದೆ.

ಸೌಜನ್ಯ ಆತ್ಮಕ್ಕೆ ಶಾಂತಿ ಸಿಗಲು ಇನ್ನೆಷ್ಟು ದಿನಗಳ ಕಾಯಬೇಕಿದೆಯೋ?

SUPPORT US:  ಯಾರದ್ದು ಈ ‘ಸಮಾಚಾರ…?

 

Leave a comment

FOOT PRINT

Top