An unconventional News Portal.

‘ವಿಚಿತ್ರ ಕಾನೂನು’: ಇಲ್ಲಿ ಬಡವರಿಗೆ ಆಹಾರ ನೀಡಿದರೆ ಪೊಲೀಸರು ಬಂಧಿಸುತ್ತಾರೆ!

‘ವಿಚಿತ್ರ ಕಾನೂನು’: ಇಲ್ಲಿ ಬಡವರಿಗೆ ಆಹಾರ ನೀಡಿದರೆ ಪೊಲೀಸರು ಬಂಧಿಸುತ್ತಾರೆ!

ವಸತಿ ರಹಿತರಿಗೆ ಅನ್ನ, ಆಹಾರ ನೀಡಲು ಹೋದವರಿಗೆ ಕೈಕೋಳ ತೊಡಿಸುವ ಕಾನೂನುಗಳು ಅಮೆರಿಕಾದಲ್ಲಿವೆ ಎಂದರೆ ನೀವು ನಂಬಬೇಕು. ಇಲ್ಲಿನ ಫ್ಲೋರಿಡಾದ ಟ್ಯಾಂಪ ನಗರದಲ್ಲಿ ಇರುವ ಇಂತದೊಂದು ವಿಚಿತ್ರ ಕಾನೂನು ಆಗಾಗ್ಗೆ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕಲ ದಿನಗಳ ಹಿಂದೆ ಟ್ಯಾಂಪಾ ಪಾರ್ಕೊಂದರಲ್ಲಿ ಬಡವರಿಗೆ ಊಟ ಮತ್ತು ಬಟ್ಟೆಗಳನ್ನು ವಿತರಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?:

ಲೈಕ್ಸ್ ಗ್ಯಾಸ್ಲೈಟ್ ಪಾರ್ಕ್ನಲ್ಲಿ ‘ಫುಡ್ ನಾಟ್ ಬಾಂಬ್ಸ್’ ಎನ್ನುವ ಸಂಘಟನೆಯ ಕಾರ್ಯಕರ್ತರು ಮನೆಯಿಲ್ಲದ ಜನರಿಗೆ ಊಟವನ್ನ ವಿತರಿಸುತ್ತಿದ್ದರು. ಜಾಗತಿಕ ಯುದ್ಧ ಹಾಗೂ ಬಡತನದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ಉಚಿತ ಆಹಾರ ಹಂಚಿಕೆ ಕಾರ್ಯ ನಡೆಯುತ್ತಿತ್ತು. ಈ ವೇಳೆ ಪಾರ್ಕ್ಗೆ ಆಗಮಿಸಿದ ಟ್ಯಾಂಪಾ ಪೊಲೀಸರು ವಿಚಾರಣೆ ನಡೆಸಿದರು. ಕೊನೆಗೆ 7ಜನ ಕಾರ್ಯಕರ್ತರನ್ನ ಬಂಧಿಸಿದ್ದರು.

ಈ ನಗರದ ಪಬ್ಲಿಕ್ ಪಾರ್ಕ್ನಲ್ಲಿ ಊಟ ಹಂಚಬೇಕಾದರೆ, ಭಾರೀ ಹಣ ತೆತ್ತು ಪರವಾನಿಗೆ ಪಡೆಯುಬೇಕು. ಒಂದು ವೇಳೆ ಪರವಾನಿಗೆ ಪಡೆದುಕೊಂಡರೂ, ವಾರದಲ್ಲಿ ಕೇವಲ ಎರಡು ದಿನ ಮಾತ್ರ ಆಹಾರ ಹಂಚಲು ಅವಕಾಶವಿದೆ. ಅಲ್ಲದೆ, ನಿರ್ಗತಿಕರಿಗೆ ಆಹಾರ ವಿತರಿಸಲು ಮುಂದಾಗುವ ಸಂಘಟನೆ ದುಬಾರಿ ಮೊತ್ತದ ವಿಮೆಯನ್ನೂ ಮಾಡಿಸಿಕೊಳ್ಳಬೇಕು ಅಂತ ಹೇಳುತ್ತೆ ಕಾನೂನು.

ಹೀಗಾಗಿ, ಒಂದು ವಾರದ ಮೊದಲೇ ಪೊಲೀಸರು, ಕಾರ್ಯಕರ್ತರಿಗೆ ‘ಆಹಾರ ಹಂಚುವ’ ಕಾನೂನು ಬಾಹಿರ ಕೃತ್ಯವನ್ನ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಪೊಲೀಸರಿಗಿಂತ ಮಾನವೀಯತೆಯೇ ಮುಖ್ಯ ಅನ್ನೋ ನೀತಿಯನ್ನು ಪಾಲಿಸಿದ ಕಾರ್ಯಕರ್ತರು ಪೊಲೀಸರ ಎಚ್ಚರಿಕೆಯನ್ನ ಧಿಕ್ಕಿರಿಸಿ ತಮ್ಮ ನಿತ್ಯದ ಮಾನವೀಯ ಕೆಲಸ ಮುಂದುವರಿಸಿದ್ದರು. ಆಹಾರ ವಿತರಣೆ ನಡೆಯುತ್ತಿದ್ದ ದೃಶ್ಯವನ್ನ ಕಂಡ ಪೊಲೀಸರು ಮೂರು ನಿಮಿಷದಲ್ಲಿ ಸ್ಥಳದಿಂದ ತೆರಳುವಂತೆ ಗುಂಪಿಗೆ ತಾಕೀತು ಮಾಡಿದರು. ಪೊಲೀಸರು ಎಚ್ಚರಿಕೆಗೆ ತಲೆಕೆಡಿಸಿಕೊಳ್ಳದ ಕಾರ್ಯಕರ್ತರು ಆಹಾರ ವಿತರಣೆ ಮುಂದುವರಿಸಿದರು. ಆಗ, “ಪೊಲೀಸರು 7 ಜನ ಕಾರ್ಯಕರ್ತರನ್ನ ಸೇರಿದಂತೆ ಹಸಿವು ನೀಗಿಸಿಕೊಳ್ಳಲು ಆಹಾರ ಅರಸಿ ಬಂದಿದ್ದ ಓರ್ವ ನಿರ್ಗತಿಕನನ್ನೂ ಬಂಧಿಸಿದ್ದಾರೆ,” ಅಂತಾ ಕಾರ್ಯಕರ್ತನೋರ್ವ ತಿಳಿಸಿದ್ದಾನೆ.

food-not-bombs-2

ಒಂದು ವರ್ಷ ಕಾಲ ಈ ಪಾರ್ಕ್ಗೆ ಮರಳದಂತೆ ಸಂಘಟನೆಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಏಳು ಜನ ಕಾರ್ಯಕರ್ತರ ಬಂಧಿನದಿಂದ ಸಂಘಟನೆ ವಿಚಲಿತಗೊಂಡಂತೆ ಕಾಣುತ್ತಿಲ್ಲ. ಮುಂದಿನ ವಾರವೇ ಈ ಪಾರ್ಕ್ಗೆ ಬಂದು ಆಹಾರ ವಿತರಿಸುವ ಕಾರ್ಯ ಮುಂದುವರಿಸುವುದಾಗಿ ಕಾರ್ಯಕರ್ತರು ಧೈರ್ಯ ತೋರಿದ್ದಾರೆ. ಆಹಾರ ವಿತರಿಸುವ ಮೂಲಕ ನಗರದ ಕ್ರೂರತೆಯನ್ನ ಹೊರಗೆಳೆಯಲು ‘ಫುಡ್ ನಾಟ್ ಬಾಂಬ್ಸ್’ ಸಂಘಟನೆ ನಿರ್ಧರಿಸಿದೆ. ನಗರದಲ್ಲಿ ತಳ ಸಮುದಾಯದ ಜನ ಅನುಭವಿಸುತ್ತಿರುವ ಅಹಾರ ಅಭದ್ರತೆ, ಮಾನಸಿಕ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳು, ಬಡತನ ಹಾಗೂ ವಸತಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸಂಘಟನೆ ಶ್ರಮಿಸುತ್ತಿದೆ ಅಂತಾ ಕಾರ್ಯಕರ್ತರು ತಿಳಿಸಿದ್ದಾರೆ.

ಬಡತನ ಮರೆಮಾಚುವ ಯತ್ನ:

ಕಳೆದ ಕೆಲ ವರ್ಷಗಳಿಂದ ನಗರದ ಪಾರ್ಕ್ನಲ್ಲಿ ಸಂಘಟನೆ ಆಹಾರ ವಿತರಿಸುತ್ತಲೇ ಬಂದಿದೆ. ಇದಕ್ಕೆ ಪೊಲೀಸರು ಸಹ ಯಾವುದೇ ಆಕ್ಷೇಪವೆತ್ತದೆ ಸಹಕರಿಸಿದ್ದರಂತೆ. ಆದರೆ ಈಗ ಟ್ಯಾಂಪಾ ನಗರದಲ್ಲಿ ನ್ಯಾಷನಲ್ ಲೆವೆಲ್ ಕಾಲೇಜ್ ಫುಟ್ಬಾಲ್ ಚಾಂಪಿಯನ್ಷಿಪ್ ನಡೆಯುತ್ತಿದೆ. ಹೀಗಾಗಿ, ನಗರಕ್ಕೆ ಪ್ರವಾಸಿಗರ ದಂಡು ದೌಡಾಯಿಸುತ್ತಿದೆ. ಅಲ್ಲದೆ, ಕ್ರೀಡಾಕೂಟದ ಅಂಗವಾಗಿ ಕಳೆದ ಎರಡು ವಾರಗಳಿಂದ ನಗರದಲ್ಲಿ ಹಲವು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು, ಸೆಲೆಬ್ರೆಟಿಗಳು ನಗರಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ನಗರದಲ್ಲಿ ನಿರ್ಗತಿಕರಿಗೆ ಆಹಾರ ವಿತರಿಸುವ ದೃಶ್ಯಗಳು ಪ್ರವಾಸಿಗರ ಕಣ್ಣಿಗೆ ಬಿದ್ದರೆ, ಅವಮಾನ ಅನ್ನೋ ಉದ್ದೇಶದಿಂದ ಪೊಲೀಸರು ಆಹಾರ ವಿತರಣೆಗೆ ಅಡ್ಡಿ ಮಾಡುತ್ತಿದ್ದಾರೆ.

ಹಸಿದವರೊಂದಿಗೆ ಆಹಾರ ಹಂಚಿಕೊಳ್ಳುವ ಅನಿಯಂತ್ರಿತ ಮಾನವ ಪ್ರೀತಿಯನ್ನ ಮನಸಾರೆ ಅಪ್ಪಿಕೊಂಡಿರೋ ಕಾರ್ಯಕರ್ತರು ತಮ್ಮ ಸಹಾಭೂತಿಯನ್ನ ಮುಂದುವರಿಸಲು ನಿರ್ಧರಿಸಿದ್ದಾರೆ. ಪೊಲೀಸರು ತಮ್ಮ ಧ್ವನಿಯನ್ನ ಅಡಗಿಸಲು ಯತ್ನಿಸುತ್ತಿದ್ದರೂ, ಕಾರ್ಯಕರ್ತರು ಮಾತ್ರ ಯಾವುದಕ್ಕೂ ಕುಗ್ಗದೆ ಮಾನವ ಪ್ರೀತಿಯನ್ನ ಮೆರೆಯುತ್ತಿದ್ದಾರೆ.

ಇಲ್ಲಿನ ಪೊಲೀಸರ ಪಾಲಿಗೆ ಬಡವರಿಗೆ ಹಂಚುವ ಆಹಾರವೇ ಬಾಂಬ್ ರೀತಿಯನ್ನು ಕಾಣಿಸುತ್ತಿದೆ. ಅಭಿವೃದ್ಧಿ ಭರಾಟೆಯಲ್ಲಿ ತಾವು ಬದಲಾಗಿದ್ದೇವೆ ಎಂದು ತೋರಿಸಿಕೊಳ್ಳಲು ಬಡತನವನ್ನು ನಿರ್ಮೂಲನೆ ಮಾಡಬೇಕೇ ಹೊರತು, ಬಡರನ್ನು ಅಲ್ಲ. ಆದರೆ, ಅಮೆರಿಕಾದ ಈ ನಗರದ ಪೊಲೀಸರು ಮತ್ತು ಕಾನೂನುಗಳು ಇದಕ್ಕೆ ವ್ಯತಿರಿಕ್ತವಾಗಿವೆ ಎಂಬುದು ವ್ಯಂಗ್ಯವಷ್ಟೆ.

Leave a comment

FOOT PRINT

Top