An unconventional News Portal.

‘ಕಲ್ಲಪ್ಪ ಸಾವಿಗೆ ಪೊಲೀಸ್ ಪ್ರತೀಕಾರ’: ಬೆಟ್ಟಿಂಗ್ ದಂಧೆ ತರಲಿದೆಯಾ ಸಿ. ಟಿ. ರವಿಗೆ ಸಂಚಕಾರ?

‘ಕಲ್ಲಪ್ಪ ಸಾವಿಗೆ ಪೊಲೀಸ್ ಪ್ರತೀಕಾರ’: ಬೆಟ್ಟಿಂಗ್ ದಂಧೆ ತರಲಿದೆಯಾ ಸಿ. ಟಿ. ರವಿಗೆ ಸಂಚಕಾರ?

ಆತ್ಮಹತ್ಯಗೆ ಶರಣಾದ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ‘ಆತ್ಮ’ಕ್ಕೆ ಶಾಂತಿ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ; ಆದರೆ ಚಿಕ್ಕಮಗಳೂರು ಪೊಲೀಸರು ಮಲೆನಾಡಿನ ಸಂಘಪರಿವಾರದ ಸಂಘಟನೆಗಳಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ; ಅವರ ಶಾಂತಿಗೆ ಭಂಗ ತಂದಿದ್ದಾರೆ! 

ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪೊಲೀಸ್ ಕಾರ್ಯಾಚರಣೆ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಹೆಸರಿನಲ್ಲಿ ನಡೆಯುತ್ತಿರುವ ಬಂಧನಗಳು ಹಾಗೂ ಸದ್ಯ ಪೊಲೀಸರು ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ತಲುಪಿಸುತ್ತಿರುವ ಮಾಹಿತಿ ಗಮನಿಸಿದರೆ, ಜಿಲ್ಲೆಯ ಅಂತರಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯಮಟ್ಟದಲ್ಲಿ ರಾಜಕೀಯ ಸಂಚಲನ ಮೂಡಿಸುವ ಮುನ್ಸೂಚನೆ ನೀಡುತ್ತಿವೆ.

ಮಲೆನಾಡಿನ ಪ್ರಕೃತಿ ಸೌಂದರ್ಯದ ನಡುವೆ ನಳನಳಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕಳೆದ ಒಂದು ದಶಕದ ಅಂತರದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಬಾಬಾಬುಡನ್ ಗಿರಿ ವಿಚಾರದಲ್ಲಿ. ‘ದತ್ತಪೀಠ’ದ ಮಾಲೆಯನ್ನು ಹಾಕಿಕೊಂಡು ಬೆಟ್ಟವನ್ನು ಹತ್ತುವವರ ಸಂಖ್ಯೆ ಬೆಳೆಯುತ್ತಿದ್ದಂತೆ ಅದಕ್ಕೆ ಪ್ರತಿರೋಧವೂ ಇಲ್ಲಿ ಹುಟ್ಟಿಕೊಂಡಿತ್ತು. ಹೀಗೊಂದು ‘ಕೋಮು ರಾಜಕಾರಣ’ಕ್ಕೆ ಸಾಕ್ಷಿಯಾದ ಜಿಲ್ಲೆ, ರಾಜ್ಯಕ್ಕೆ ಒಂದಷ್ಟು ಶಾಸಕರು, ಸಂಸದರು ಮತ್ತು ಮಂತ್ರಿಗಳ ಕೊಡುಗೆಯನ್ನೂ ನೀಡಿತ್ತು. ಇವೆಲ್ಲವೂ ಒಂದು ಹಂತ ತಲುಪಿದ ನಂತರ ಡಿವೈಎಸ್ಪಿಯಾಗಿ ಇನ್ನೂ ಯುವ ವಯಸ್ಸಿನ ಬಯಲುಸೀಮೆಯ ಕಲ್ಲಪ್ಪ ಹಂಡಿಭಾಗ್ ವರ್ಗಾವಣೆಯಾಗಿ ಬಂದಿದ್ದರು. ಜಿಲ್ಲೆಯ ಕೋಮು ರಾಜಕಾರಣದ ನೆರಳಿನಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆ ಮತ್ತಿತರ ಜಾಲದಲ್ಲಿ ಸಿಲುಕಿದ ಅವರು ಕೊನೆಗೆ ಆತ್ಮಹತ್ಯೆಗೆ ಶರಣಾದರು; ಚಿಕ್ಕಮಗಳೂರು ಮತ್ತದರ ಕೋಮು ರಾಜಕಾರಣ ಮತ್ತೆ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತು.


ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲಿ ‘ಸಮಾಚಾರ’ದ ವರದಿಗಳು:

‘ಹಂಡಿಭಾಗ್ ಆತ್ಮಹತ್ಯೆ ಪ್ರಕರಣ’: ಸರಣಿ ಬಂಧನ ಭೀತಿಯಲ್ಲಿ ಚಿಕ್ಕಮಗಳೂರು ಭಜರಂಗದಳ!

ಮಲೆನಾಡಿನ ಹಿಂದೂ ಸಂಘಟನೆಗಳಿಗೆ ‘ಖಾಂಡ್ಯ’ ಮುಳುಗು ನೀರು: ಪ್ರವೀಣನನ್ನು ಅರೆಸ್ಟ್ ಮಾಡ್ತಾರಾ ಅಣ್ಣಾಮಲೈ?


ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲಿ ಸಿಐಡಿ ತನಿಖೆ ನಡೆದು ವರದಿಯೂ ಹೊರಬಂತು. ವರದಿಯಲ್ಲಿ ಕಲ್ಲಪ್ಪ ‘ನಿರ್ದೋಷಿ’ ಎಂದು ಹೇಳಲಾಯಿತು. ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯನನ್ನು ಇತ್ತೀಚೆಗಷ್ಟೆ ಚಿಕ್ಕಮಗಳೂರು ಪೊಲೀಸರು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಗುಲ್ಬರ್ಗಾ ಜೈಲಿಗೆ ಕಳುಹಿಸಿದ್ದಾರೆ. “ತನಿಖೆ ಶುರುವಾಗುತ್ತಿದ್ದಂತೆ ಚಿಕ್ಕಮಗಳೂರು ಸುತ್ತ ಹರಡಿರುವ ಹಲವು ಜಾಲಗಳ ಮಾಹಿತಿ ಸಿಕ್ಕಿತ್ತು. ಆದರೆ ಕಾನೂನಿನ ಅಡಿಯಲ್ಲಿ ವ್ಯಾಪ್ತಿ ಮೀರಿ ತನಿಖೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾಹಿತಿಯನ್ನು ಚಿಕ್ಕಮಗಳೂರು ಪೊಲೀಸರಿಗೆ ತಲುಪಿಸಲಾಯಿತು. ಕಲ್ಲಪ್ಪ ವಿಚಾರದಲ್ಲಿ ಮೇಲ್ನೋಟಕ್ಕೆ ಅಪಹರಣ ಪ್ರಕರಣ ಕಂಡು ಬಂದರೆ, ಆಳದಲ್ಲಿ ಜಿಲ್ಲೆಯಲ್ಲಿ ಬೇರು ಬಿಟ್ಟಿರುವ ಜಾಲಗಳು ಕಾರಣ,” ಎನ್ನುತ್ತಾರೆ ಸಿಐಡಿ ಮೂಲಗಳು.

ಇದೀಗ ಚಿಕ್ಕಮಗಳೂರು ಪೊಲೀಸರು ಬೆಟ್ಟಿಂಗ್ ದಂಧೆಯ ಬೆನ್ನು ಹತ್ತಿದ್ದಾರೆ. ಬಿಜೆಪಿ ಪಕ್ಷದ ನಾಯಕ, ಶಾಸಕ ಸಿ. ಟಿ. ರವಿ ಆಪ್ತ, ನಗರ ಸಭೆ ಸದಸ್ಯ ಸಿ. ಎಸ್. ರವಿ ಕುಮಾರ್ ಅಲಿಯಾಸ್ ಕಾಯಿ ರವಿ ಸೇರಿದಂತೆ 7 ಜನರನ್ನು ಬಂಧಿಸಿದ್ದಾರೆ.

“ಪೊಲೀಸರು ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ನಗರಸಭೆಯ ಹಾಲಿ ಹಾಗೂ ಮಾಜಿ ಬಿಜೆಪಿ ಸದಸ್ಯರು ಹಾಗೂ ಜ್ಯುವೆಲ್ಲರಿ ಶಾಪಿನ ಕೆಲವು ಮಾಲೀಕರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪೊಲೀಸರು ಹುಡುಕುತ್ತಿದ್ಧಾರೆ,” ಎನ್ನುತ್ತಾರೆ ಚಿಕ್ಕಮಗಳೂರಿನ ಪತ್ರಕರ್ತರೊಬ್ಬರು.

ಸಿಟಿ ರವಿ ಬುಡಕ್ಕೆ?:

ಜಿಲ್ಲೆಯಲ್ಲಿ ಬಾಬಬುಡನ್ ಗಿರಿ ವಿಚಾರ ತಾರಕ್ಕೇರಿದ ಸಮಯದಲ್ಲಿ ರಾಜಕೀಯವಾಗಿ ಬೆಳೆದು ಬಂದವರು ಬಿಜೆಪಿಯ ಸಿ. ಟಿ. ರವಿ. ಅವರನ್ನು ‘ಕೋಟಿ’ ರವಿ ಅಂತಲೂ ಜನ ಗುರುತಿಸುತ್ತಾರೆ. ಜಿಲ್ಲೆಯ ಪ್ರಬಲ ವೋಟ್ ಬ್ಯಾಂಕ್ ಆಗಿರುವ ಒಕ್ಕಲಿಗ ಸಮುದಾಯದಿಂದ ಬಂದವರು ಅವರು. ಸಂಘಪರಿವಾರದ ಜತೆ ಗುರುತಿಸಿಕೊಂಡು ಬಂದ ಸಿ. ಟಿ. ರವಿ ಅವರ ಆಪ್ತ ಕಾಯಿ ರವಿಯನ್ನು ಪೊಲೀಸರೀಗ ಬಂಧಿಸಿದ್ದಾರೆ. ಆತ ನಡೆಸಿಕೊಂಡು ಬರುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್‌ ದಂಧೆಯನ್ನು ಹೆಡಮುರಿಗೆ ಕಟ್ಟಲು ಅಣಿಯಾಗಿದ್ದಾರೆ.

“ಈ ಬೆಟ್ಟಿಂಗ್ ಹೇಗೆ ನಡೆಯುತ್ತದೆ ಎಂಬುದು ಹಳ್ಳಿಗಳಲ್ಲಿ ಮರದ ಕೆಳಗೆ ಕುಳಿತು ಮಾತನಾಡುವ ಸಮಾಚಾರ ಅಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಸಾಫ್ಟ್‌ವೇರ್ ಟೂಲ್ಸ್ ಬಳಸಿ ಕಾಯಿ ರವಿ ಮತ್ತು ಸಂಗಡಿಗರು ಬೆಟ್ಟಿಂಗ್ ನಡೆಸುತ್ತಿದ್ದರು. ಸ್ಥಳೀಯವಾಗಿ ಅವರು ವಾಟ್ಸ್‌ಆಪ್ ಮೂಲಕ ಸಂವಹನ ನಡೆಸುತ್ತಿದ್ದರು. ನಾವು ಇನ್ನೂ ಅವರ ಬ್ಯಾಂಕ್‌ ಡೀಟೆಲ್ಸ್ ಮತ್ತು ಹಣಕಾಸಿನ ಮಾಹಿತಿ ಕಲೆ ಹಾಕುತ್ತಿದ್ದೇವೆ. ಇದನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ,” ಎನ್ನುತ್ತಾರೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ.

“ಇಡೀ ಪ್ರಕರಣ ಆಳಕ್ಕೆ ಹೋದರೆ ಹಲವು ರಾಜಕೀಯ ಮುಖಂಡರು ಭಾಗಿಯಾದ, ಪಾಲುದಾರರಾದ ಮಾಹಿತಿ ಸಿಗುತ್ತಿದೆ. ಆದರೆ ಈ ಪ್ರಕರಣ ರಾಜಕೀಯಗೊಳ್ಳುವ ಸಾಧ್ಯತೆಯೂ ಇದೆಯಾದ್ದರಿಂದ ಮೇಲಾಧಿಕಾರಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರ ಮೇಲೆ ಗುರುತರವಾದ ಆರೋಪಗಳಿಗೆ ಸಾಕ್ಷಿಗಳು ಬ್ಯಾಂಕ್‌ ಡೀಟೆಲ್ಸ್‌ನಲ್ಲಿ ಸಿಕ್ಕಿವೆ,” ಎನ್ನುತ್ತವೆ ಚಿಕ್ಕಮಗಳೂರು ಪೊಲೀಸ್ ಮೂಲಗಳು.

ಈಗಾಗಲೇ ಮಾಧ್ಯಮಗಳಲ್ಲಿ ಬಂಧನಕ್ಕೊಳಗಾಗಿ ಕಾಯಿ ರವಿ ಬಿಜೆಪಿ ನಾಯಕರಾದ ಸಿ. ಟಿ. ರವಿ ಸೇರಿದಂತೆ ಯಡಿಯೂರಪ್ಪ, ಶೋಭ ಕರಂದ್ಲಾಜೆ, ಅನಂತ ಕುಮಾರ್ ಅವರ ಜತೆ ತೆಗೆದುಕೊಂಡಿದ್ದ ಭಾವಚಿತ್ರಗಳು ಬಹಿರಂಗವಾಗಿವೆ. “ಈ ಫೊಟೋಗಳನ್ನು ಚಿಕ್ಕಮಗಳೂರು ಪೊಲೀಸರೇ ವಾಟ್ಸ್‌ಆಪ್ ಮಾಡಿದರು,” ಎನ್ನುತ್ತಾರೆ ಸ್ಥಳೀಯ ಪತ್ರಕರ್ತರು. ಈ ಮೂಲಕ ಬಿಜೆಪಿ ನಾಯಕನೊಬ್ಬನ ಕ್ರಿಮಿನಲ್ ಹಿನ್ನೆಲೆಯಲ್ಲಿ, ಆತ ನಡೆಸಿಕೊಂಡು ಬಂದ ಬೆಟ್ಟಿಂಗ್ ದಂಧೆಯನ್ನು ಮುಗಿಸಲು ಕಾರ್ಯಾಚರಣೆ ನಡೆದಿದೆ.

kayiravi-bjp-connection-final

ಬಿಜೆಪಿ ನಾಯಕರ ಜತೆ ಬೆಟ್ಟಿಂಗ್ ದಂಧೆಯಲ್ಲಿ ಬಂದನಕ್ಕೆ ಒಳಗಾದ ಕಾಯಿ ರವಿ.

ಪೊಲೀಸರ ತಿರುಗೇಟು:

ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ, ತಮ್ಮ ಸಹೋದ್ಯೋಗಿಯೊಬ್ಬನನ್ನು ಕಳೆದುಕೊಂಡದ್ದಕ್ಕೆ ಚಿಕ್ಕಮಗಳೂರು ಪೊಲೀಸರು ಪ್ರತೀಕಾರ ತೆಗೆದುಕೊಳ್ಳುತ್ತಿರುವ ಸಾಧ್ಯತೆಗಳು ಕಾಣಿಸುತ್ತಿವೆ. ಜಿಲ್ಲೆಯಲ್ಲಿ ಬೆಳೆದು ನಿಂತಿದ್ದ ಬೆಟ್ಟಿಂಗ್ ಮಾಫಿಯಾ ಪೊಲೀಸ್ ಅಧಿಕಾರಿಯನ್ನೂ ಖೆಡ್ಡಾಕ್ಕೆ ಕೆಡವಿಕೊಂಡ ಬಗ್ಗೆ ಅವರಿಗೆ ತೀವ್ರ ರೀತಿಯ ಅಸಮಾಧಾನ ಇದೆ. ಜತೆಗೆ, ಇತ್ತೀಚೆಗೆ ಜಿಲ್ಲೆಯ ಶೃಂಗೇರಿ ತಾಲೂಕಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ವಿಚಾರದಲ್ಲಿ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪೊಲೀಸರ ಮೇಲೆಯೇ ಆರೋಪ ಹೊರಿಸಿತ್ತು. ಅವರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಇದೀಗ, ಅವೆಲ್ಲವಕ್ಕೂ ಚಿಕ್ಕಮಗಳೂರು ಪೊಲೀಸರು ಕಾನೂನಾತ್ಮಕ ತಿರುಗೇಟು ನೀಡುವ ಪ್ರಕ್ರಿಯೆ ಶುರುಮಾಡಿದ್ದಾರೆ.

“ಅನ್ಯಾಯವಾಗಿ ಬೆಟ್ಟಿಂಗ್ ಮಾಫಿಯಾ ಕಲ್ಲಪ್ಪ ಅವರನ್ನು ಸಾವಿನ ದವಡೆಗೆ ನೂಕಿತು. ಆ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಕ್ಷ್ಮವಾಗಿ ನಡೆದಕೊಂಡಿದ್ದರೆ ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲ. ಈಗ ಹೊಸ ವರಿಷ್ಠಾಧಿಕಾರಿ (ಅಣ್ಣಾ ಮಲೈ) ಬಂದಿದ್ದಾರೆ. ಕಲ್ಲಪ್ಪ ಅವರ ಸಾವಿಗೆ ಹೀಗಾದರೂ ಶ್ರದ್ಧಾಂಜಲಿ ಸಿಗಲಿ ಬಿಡಿ,” ಎನ್ನುತ್ತಾರೆ ಹಿಂದೊಮ್ಮೆ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡಿದ್ದ ಡಿವೈಎಸ್ಪಿ ಮಟ್ಟದ ಅಧಿಕಾರಿಯೊಬ್ಬರು.

ಸದ್ಯ ಬೆಟ್ಟಿಂಗ್ ದಂಧೆಯ ಬೆನ್ನಿಗೆ ಜಿಲ್ಲಾ ಪೊಲೀಸರು ಬಿದ್ದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿಕೊಂಡಿರುವ ಮಾಫಿಯಾವನ್ನು ಜಿಲ್ಲಾ ಪೊಲೀಸರು ಭೇದಿಸುವುದು ಕಷ್ಟ. ಆದರೆ, ಸ್ಥಳೀಯವಾಗಿ ಬೆಳೆದ ಈ ಮಾಫಿಯಾ ಮತ್ತು ಅದರ ಫಲಾನುಭವಿಗಳಾದ ರಾಜಕಾರಣಿಗಳನ್ನು ಅವರು ಸಾರ್ವಜನಿಕವಾಗಿ ಬೆತ್ತಲಾಗಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ವಿದ್ಯಮಾನ ಸಹಜವಾಗಿಯೇ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

Leave a comment

FOOT PRINT

Top