An unconventional News Portal.

ಪಂಜಾಬ್; ಗೋವಾ ಗದ್ದುಗೆಗಳಿಗೆ ಮತದಾನ: ಈ ಸಮಯದಲ್ಲಿ ಗಮನಿಸಬೇಕಿರುವ ಪ್ರಮುಖ 10 ಅಂಶಗಳು

ಪಂಜಾಬ್; ಗೋವಾ ಗದ್ದುಗೆಗಳಿಗೆ ಮತದಾನ: ಈ ಸಮಯದಲ್ಲಿ ಗಮನಿಸಬೇಕಿರುವ ಪ್ರಮುಖ 10 ಅಂಶಗಳು

ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶನಿವಾರ ಆರಂಭವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅನಾಣ್ಯೀಕರಣ ಪ್ರಕ್ರಿಯೆ ಘೋಷಿಸಿದ ನಂತರ ದೇಶದಲ್ಲಿ ನಡೆಯುತ್ತಿರುವ ಮೊದಲ ಮತದಾನ ಇದು. ಇದರ ಜತೆಗೆ, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿ ಮುಂದಿನ ವಾರ ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ಪಾಲಿಗೆ ನಾನಾ ಕಾರಣಗಳಿಗಾಗಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಮುಖವಾಗಿದೆ. ಅದಕ್ಕಾಗಿ ಮಾರ್ಚ್ 11ರವರೆಗೆ ಕಾಯಬೇಕಿದೆ.

ಗೋವಾದಲ್ಲಿ ಬೆಳಗ್ಗೆ 7 ಗಂಟೆಗೆ, ಪಂಜಾಬ್‍ನಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಗೋವಾ ರಾಜ್ಯಗಳ ಚುನಾವಣೆ ಕುರಿತು ಗಮನಿಸಬೇಕಾದ ಪ್ರಮುಖ 10 ಅಂಶಗಳ ಪಟ್ಟಿ ಇಲ್ಲಿದೆ.


  1. ಪಂಜಾಬ್‍ನಲ್ಲಿ ಒಟ್ಟು 117 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ವಿಶೇಷ ಅಂದರೆ ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಪಂಜಾಬ್ ಚುನಾವಣಾ ಅಖಾಡದಲ್ಲಿ ಇದೇ ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಎದುರಿಸುತ್ತಿದೆ. ಹೀಗಿದ್ದೂ, ಪಕ್ಷ ದಿಲ್ಲಿ ಪಕ್ಕದ ಪಂಜಾಬ್‍ ರಾಜ್ಯವನ್ನು ಗೆದ್ದುಕೊಳ್ಳಲಿದೆ ಎಂದು ಮತದಾನ ಪೂರ್ವ ಸಮೀಕ್ಷೆಗಳು ಹೇಳಿದ್ದವು. ಸಂಜೆ ಹೊರಬೀಳಲಿರುವ ಮತದಾನೋತ್ತರ ಸಮೀಕ್ಷೆಯಲ್ಲಿಯೂ ಇದೇ ನಿಲುವನ್ನು ಸಮೀಕ್ಷಗಳು ಹೊಂದುವ ಸಾಧ್ಯತೆ ಇದೆ.

  2. ಕಳೆದ ಹತ್ತು ವರ್ಷಗಳಿಂದ ಪಂಜಾಬ್‍ನಲ್ಲಿ ಆಡಳಿತ ನಡೆಸಿಕೊಂಡು ಬಂದವರು ಶಿರೋಮಣಿ ಅಕಾಲಿದಳ- ಬಿಜೆಪಿ ಮೈತ್ರಿಕೂಟ. ರಾಜ್ಯದಲ್ಲಿ ಹೆಚ್ಚಿರುವ ಡ್ರಗ್ಸ್ ಹಾವಳಿ, ನಿರುದ್ಯೋಗ, ರೈತರ ಸಮಸ್ಯೆಗಳು ಆಡಳಿತ ಪಕ್ಷಗಳಿಗೆ ವಿರೋಧಿ ಅಲೆಯನ್ನು ಸೃಷ್ಟಿಸಿವೆ. ಇದು ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ವರದಾನವಾಗಲಿದೆ.

  3. ಚುನಾವಣಾ ಪ್ರಚಾರ ಆರಂಭವಾಗುತ್ತಿದ್ದಂತೆ ಎಎಪಿ ಮುಖ್ಯಮಂತ್ರಿ ಪರ್ಕಾಶ್ ಸಿಂಗ್ ಬಾದಲ್ ಮತ್ತು ಅವರ ಮಗ ಸುಖ್ಬೀರ್ ಬಾದಲ್ ಮೇಲೆ ಗಂಭೀರ ಆರೋಪವನ್ನು ಮಾಡಿತ್ತು. ಬಾದಲ್ ಕುಟುಂಬ ಪಂಜಾಬ್‍ ಆವರಿಸಿಕೊಂಡಿರುವ ಡ್ರಗ್ ಜಾಲಕ್ಕೆ ನೆರವಾಗುತ್ತಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿತ್ತು. ಮೊದಲೇ ಆಡಳಿತ ವಿರೋಧಿ ಅಲೆಯನ್ನು ಎದುರರಿಸುತ್ತಿದ್ದ ಶಿರೋಮಣಿ ಅಖಾಲಿ ದಳಕ್ಕೆ ಇದು ಹೊಡೆತ ಕೊಡಲಿದೆ ಎಂದು ವಿಶ್ಲೇಷಣೆಗಳು ಕೇಳಿಬರುತ್ತಿವೆ.

  4. ಪಂಜಾಬ್‍ನ ಲಂಬಿಯಲ್ಲಿ ಮುಖ್ಯಮಂತ್ರಿ ಅರ್ಕಾಶ್ ಸಿಂಗ್ ಬಾದಲ್ ಮತ್ತು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವೆ ನೇರಹಣಾ ನಡೆಯುತ್ತಿದೆ. ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಭಗವಂತ್ ಸಿಂಗ್ ಮಾನ್ ಮತ್ತು ಸುಖ್ಬೀರ್ ಬಾದಲ್ ನಡುವೆ ಜಲಾಲಬಾದ್‍ನಲ್ಲಿ ಹಣಾಹಣಿ ಏರ್ಪಟ್ಟಿದೆ. ಇವು ಪಂಜಾಬ್‍ ರಾಜ್ಯದಲ್ಲಿ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕಣಗಳು.

  5. ಕಳೆದ ವಾರವಷ್ಟೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿತ್ತು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಗ್‍ಗೆ ಸದಾಭಿಪ್ರಾಯವೂ ಇರುವುದರಿಂದ ಪಕ್ಷಕ್ಕೆ ಇದು ನೆರವಾಗಬಹುದು ಎಂಬಬ ಆಲೋಚನೆ ಇದರ ಹಿಂದೆ ಇದ್ದಂತಿತ್ತು. ಆದರೆ ಎಎಪಿ ಪಂಜಾಬ್‍ನ ಪ್ರಮುಖ ಭಾಗಗಳಲ್ಲಿ ಹಿಡಿತ ಹೊಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ ಹೆಚ್ಚು ಕಡಿಮೆ ಕ್ಲೀನ್ ಸ್ಪೀಪ್ ಮಾಡಿತ್ತು. ಈ ಬಾರಿ ಇದು ಕೊಂಚ ೇರಿಳಿತ ಕಂಡರೂ, ಒಂದು ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

  6. ಈ ಬಾರಿ ಗೋವಾದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿವೆ ಎನ್ನುತ್ತಿವೆ ಸಮೀಕ್ಷೆಗಳು. ಆದರೆ ಬಿಜೆಪಿ ಓಟಕ್ಕೆ ಕಡಿವಾಣ ಹಾಕಲು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ತಯಾರಾಗಿದೆ. ಚುನಾವಣೆ ಘೋಷಣೆಗೆ ಕೆಲವು ದಿನಗಳ ಹಿಂದಷ್ಟೆ ಬಿಜೆಪಿ ಮತ್ತು ಎಂಜಿಪಿ ಪಕ್ಷಗಳ ನಡುವೆ ಸಂಬಂಧ ಹಳಸಿತ್ತು. ಎಂಜಿಪಿ ಸ್ಥಳೀಯ ಪಕ್ಷಗಳ ಮೈತ್ರಿಕೂಟವನ್ನು ಕಟ್ಟಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದೆ. ಹೀಗಾಗಿ ಬಿಜೆಪಿ ಮತಗಳು ವಿಭಜನೆಯಾಗುವ ಸಾಧ್ಯತೆ ನಿಚ್ಚಳವಾಗಿವೆ.

  7. ಕಳೆದ ಬಾರಿ ಮೈತ್ರಿ ಕೂಟದ ಜತೆಗಿದ್ದರೂ ಬಿಜೆಪಿ 40 ಸ್ಥಾನಗಳ ಪೈಕಿ 21 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿತ್ತು. ಹತ್ತು ವರ್ಷಕ್ಕೆ ಹತ್ತು ಮುಖ್ಯಮಂತ್ರಿಗಳನ್ನು ನೋಡಿದ್ದ ರಾಜ್ಯಕ್ಕೆ ಬಿಜೆಪಿ ಸ್ಥಿರವಾದ ಆಡಳಿತ ನೀಡಿತ್ತು. 2014ರಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರನ್ನು ಕೇಂದ್ರ ಆಡಳಿತದಲ್ಲಿ ಸ್ಥಾನ ನೀಡಿ ಬಿಜೆಪಿ ದಿಲ್ಲಿಗೆ ಕರೆಸಿಕೊಂಡಿತ್ತು. ಇದೀಗ ಮತ್ತೆ ಪರಿಕ್ಕರ್ ಗೋವಾ ಆಡಳಿತಕ್ಕೆ ಮರಳಲಿದ್ದಾರೆ ಎಂಬ ಮನ್ಸೂಚನೆಯನ್ನು ಬಿಜೆಪಿ ನೀಡಿದೆ. ಈ ಮೂಲಕ ಮತದಾರರನ್ನು ತನ್ನ ಜತೆಯಲ್ಲಿಯೇ ಉಳಿಸಿಕಕೊಳ್ಳುವ ಪ್ರಯತ್ನ ಮಾಡಿದೆ.

  8. ಕಾಂಗ್ರೆಸ್ ಕಳೆದ ಬಾರಿ 7 ಸ್ಥಾನಗಳನ್ನಷ್ಟೆ ಪಡೆಯಲು ಇಲ್ಲಿ ಸಾಧ್ಯವಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಸ್ಥಾನಗಳು ಪಕ್ಷಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ. ಜತೆಗೆ ಎಎಪಿ ಕೂಡ ಭರ್ಜರಿ ಪ್ರಚಾರ ನಡೆಸಿದೆ. ರ್ಯಾಲಿಗಳಿಗೆ ಲಕ್ಷಾಂತರ ಜನರನ್ನು ಸೇರಿಸಿದೆ. ಸದ್ಯದ ಸಮೀಕ್ಷೆಗಳ ಪ್ರಕಾರ ಗೋವಾ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ.

  9. ದೇಶದಲ್ಲಿ ಅನಾಣ್ಯೀಕರಣದ ನಂತರ ನಡೆಯುತ್ತಿರುವ ಮೊದಲ ಮಹಾ ಸಮರಗಳು ಇವು. ಹೀಗಾಗಿ ಕೇಂದ್ರ ಸರಕಾರ ಯೋಜನೆಗೆ ಜನ ನೀಡುವ ತೀರ್ಪು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಎಂದು ವಿಶ್ಲೇಷಿಸಲಾಗುತ್ತಿದೆ.

  10. ಮುಂದಿನ ವಾರ ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರಾಖಂಡ್ ಮತ್ತು ಮಣಿಪುರರಗಳಲ್ಲಿಯೂ ಮತದಾನ ನಡೆಯಲಿದೆ. ಮಾ. 11ರಂದು ಫಲಿತಾಂಶ ಹೊರಬೀಳಲಿದೆ.

ಇದಿಷ್ಟು ಶನಿವಾರ ನಡೆಯುತ್ತಿರುವ ಎರಡು ರಾಜ್ಯಗಳಲ್ಲಿ ಆರಂಭವಾಗಿರುವ ಮತದಾನದ ಹೈಲೈಟ್ಸ್. ಸಂಜೆ ವೇಳೆಗೆ ಹೊರಬೀಳುವ ಮತದಾನೋತ್ತರ ಸಮೀಕ್ಷೆಗಳನ್ನು ಕಾದು ನೋಡಬೇಕಿದೆ.

Leave a comment

FOOT PRINT

Top