An unconventional News Portal.

‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’

‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’

(ಈ ಬಾರಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಕುರಿತು ಏಕತಾನತೆಯ ವರದಿಗಳನ್ನು ಮಾಧ್ಯಮಗಳು ಮುಂದಿಟ್ಟಿವೆ. ಜನಪ್ರಿಯತೆಗೆ ಒತ್ತು ನೀಡದೆ ದೂರದೃಷ್ಟಿಯನ್ನು ಪ್ರದರ್ಶಿಸಿದ ‘ಪ್ರಗತಿಪರ’ ಬಜೆಟ್ ಇದು ಎಂದು ಅವು ಹಾಡಿ ಹೊಗಳಿದೆ. ಜೇಟ್ಲಿ ಮಂಡಿಸಿದ ಮುಂಗಡ ಪತ್ರದ ಕುರಿತು ಆರ್ಥಿಕ ವಿಶ್ಲೇಷಣೆಗಳಿಗೆ ಹೆಸರಾದ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ (EPW) ನಿಖರ ಒಳನೋಟಗಳನ್ನು ಒಳಗೊಂಡ ಸಂಪಾದಕೀಯವನ್ನು ಬರೆದಿದೆ. ಅದು ನಾಳೆ-ಶನಿವಾರ- ಪ್ರಕಟವಾಗಲಿದೆ. ಅದರ ಕನ್ನಡಾನುವಾದ ಇಲ್ಲಿದೆ)


ಕನ್ನಡಕ್ಕೆ: ಶಿವಸುಂದರ್   


ಕೇಂದ್ರ ಸರ್ಕಾರದ 2017-18ನೇ ಸಾಲಿನ ಬಜೆಟ್ಟನ್ನು ನಿರೀಕ್ಷಿಯಂತೆಯೇ ಬಹಳಷ್ಟು ಮಾಧ್ಯಮಗಳು ‘ಅತಿಯಾದ ಜನಪ್ರಿಯ’ ದಾರಿಗೆ ಶರಣಾಗದೆ ‘ವಿತ್ತೀಯ ದೂರದೃಷ್ಟಿಯನ್ನು ಪ್ರದರ್ಶಿಸಿರುವ’ ಬಜೆಟ್ಟೆಂದು ಹಾಡಿಹೊಗಳಿವೆ. ಈ ಬಜೆಟ್ಟು ಮೋದಿ ಸರ್ಕಾರದ ಬಡವರ ಪರವಾದ ಧೋರಣೆಯನ್ನು ಮತ್ತೊಮ್ಮೆ ಸಾಬೀತುಪಡಿಸುವ, ರೈತರಿಗೆ ಅನೂಕಲಕಾರಿಯಾಗಿರುವ, ಕಪ್ಪುಹಣದ ವಿನಿಯೋಜನೆಯನ್ನು ಕಡಿತಗೊಳಿಸುವ ಮತ್ತು ತೆರಿಗೆ ಸ್ವರೂಪವನ್ನು ಮತ್ತಷ್ಟು ‘ಪ್ರಗತಿಪರ’ವಾಗಿಸಿರುವ ಬಜೆಟ್ಟೆಂದು ಬಣ್ಣಿಸಲಾಗಿದೆ. ಆದರೆ ಬಜೆಟ್ಟಿನ ಸೂಕ್ಷ್ಮ ವಿವರಗಳನ್ನು ನಿಕಟವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಿದರೆ ಮೇಲಿನ ಯಾವುದೇ ಹೆಗ್ಗಳಿಕೆಗಳು ಸತ್ಯವಲ್ಲವೆಂದು ಮತ್ತು ಈ ಬಜೆಟ್ಟಿನಲ್ಲಿ ಸಾರಕ್ಕಿಂತ ಅಬ್ಬರವೇ ಜಾಸ್ತಿಯೆಂಬುದು ತಿಳಿಯುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಕಳೆದ ನವಂಬರ್ 8 ರಂದು ಚಲಾವಣೆಯಲಿದ್ದ ಶೇ.86ರಷ್ಟು ನಗದನ್ನು ದಿಢೀರನೇ ನಿಷೇಧಗೊಳಿಸಿದ್ದರಿಂದ ಜನರ ಬದುಕಿನಲ್ಲಿ ಮತ್ತು ಆರ್ಥಿಕತೆಯಲ್ಲಿ ಅಸಾಮಾನ್ಯ ಕೋಲಾಹಲ ಮತ್ತು ತಳಮಳಗಳು ಉಂಟಾದವು. ಇದರಿಂದಾಗಿ ಸಾಮಾನ್ಯ ದೇಶವಾಸಿಗಳು ಅದರಲ್ಲೂ ಬಡಜನರು ಅನುಭವಿಸಿದ ಯಾತನೆ ಮತ್ತು ಸಂಕಷ್ಟಗಳನ್ನು ನಿವಾರಿಸುವ ಯಾವುದೇ ಕ್ರಮಗಳೂ ಈ ಬಜೆಟ್ಟಿನಲ್ಲಿಲ್ಲ.

ಭಾರತದಲ್ಲಿ ಬಜೆಟ್ಟೆಂಬುದು ಸರ್ಕಾರದ ಲೆಕ್ಕಪತ್ರಗಳ ಬೋಳು ಹೇಳಿಕೆಗಳಷ್ಟೇ ಅಲ್ಲ. ಇವುಗಳು ಖಚಿತವಾದ ರಾಜಕೀಯ ಘೋಷಣೆಗಳೇ ಆಗಿರುತ್ತವೆ. ಈ ಬಜೆಟ್ಟು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಬರಲಿರುವ ವಿಧಾನಸಭಾ ಚುನಾವಣೆಗಳಲ್ಲಿ, ಅದರಲ್ಲೂ ದೇಶದ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಉತ್ತರ ಪ್ರದೇಶದಲ್ಲಿ ಚುನಾವಣಾ ಲಾಭವನ್ನು ತಂದುಕೊಡುತ್ತದೆಯೇ ಎಂಬುದು ಮಾರ್ಚ್ 11 ಕ್ಕೆ ಹೇಗಿದ್ದರೂ ತಿಳಿದುಬರುತ್ತದೆ. ಆದರೆ ಈ ಬಜೆಟ್ಟು ನಿರ್ಲಕ್ಷಿತ ಜನತೆಯ ಬದುಕಿನ ಸ್ತರವನ್ನು ಮೇಲೆತ್ತುವ, ಅಸಮಾನತೆಯನ್ನು ಕಡಿಮೆ ಮಾಡುವ, ಉದ್ಯೋಗಗಳನ್ನು ಸೃಷ್ಟಿಸುವ, ಸಾರ್ವಜನಿಕ ಬ್ಯಾಂಕುಗಳು ಕೊಡಮಾಡಿರುವ ಕೆಟ್ಟಸಾಲಗಳ ಗಾತ್ರವನ್ನು ಕಡಿಮೆ ಮಾಡುವ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ನಿರ್ವಹಣೆಯನ್ನು ಗಮನಾರ್ಹವಾಗಿ ಉತ್ತಮಪಡಿಸುವ ಸಾಧ್ಯತೆಯಂತೂ ದೂರವಾಗಿದೆ.

ನರೇಗಾ ಯೋಜನೆ. (ಸಾಂದರ್ಭಿಕ ಚಿತ್ರ).

ನರೇಗಾ ಯೋಜನೆ. (ಸಾಂದರ್ಭಿಕ ಚಿತ್ರ).

ಬೆಜೆಟ್ ಭಾಷಣದುದ್ದಕ್ಕೂ ಜೈಟ್ಲಿಯವರು ‘ರಾಷ್ಟ್ರದ ಪಿತಾಮಹ’ನ ಹೆಸರನ್ನು ಉದ್ದರಿಸುತ್ತಲೇ ಇದ್ದರು. ಆದರೆ ಆ ಪಿತಾಮಹನ ಹೆಸರಲ್ಲಿ ಪ್ರಾರಂಭಿಸಲಾಗಿರುವ ದೇಶದ ಅತ್ಯಂತ ದೊಡ್ಡ ಉದ್ಯೋಗ ಸೃಷ್ಟಿಯ ಕಾರ್ಯಕ್ರಮವಾದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ’ (MNREGA)ಗೆ ಈ ಬಜೆಟ್ಟಿನಲ್ಲಿ ಅತ್ಯಂತ ಜಿಪುಣತನದಿಂದ ಕೇವಲ ಶೇಕಡಾ 1ರಷ್ಟು ಹೆಚ್ಚುವರಿ ಅನುದಾನವನ್ನು ನೀಡಲಾಗಿದೆ. ಆದರೆ ಅದನ್ನೇ ಈವರೆಗೆ ನೀಡಲಾಗಿರುವ ಅತಿ ಹೆಚ್ಚಿನ ಅನುದಾನವೆಂದು ಕೊಚ್ಚಿಕೊಳ್ಳಲಾಗುತ್ತಿದೆ. ಆದರೆ ಸಾಕ್ಷಾತ್ ಜೈಟ್ಲಿಯವರೇ ತಮ್ಮ ಬಜೆಟ್ ಭಾಷಣದಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದಂತೆ MNREGA ಯೋಜನೆಗೆ 2016-17ನೇ ಸಾಲಿನಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ ನೀಡಲಾಗಿರುವ ಮೊತ್ತ 47,500 ಕೋಟಿಯಾಗಿತ್ತು. ಹೀಗಾಗಿ 2017-18ರ ಸಾಲಿನಲ್ಲಿ ಈ ಬಾಬತ್ತಿಗೆ 500 ಕೋಟಿ ಮಾತ್ರ ಹೆಚ್ಚಳ ಮಾಡಿ 48,000 ಕೋಟಿಗೆ ಏರಿಸಲಾಗಿದೆ. ಈ ಕಾರ್ಯಕ್ರಮದಡಿ ಗ್ರಾಮಗಳಲ್ಲಿ ಶಾಶ್ವತ ಸಂಪತ್ತನ್ನು ಸೃಷ್ಟಿಸಬೇಕೆಂದು ಹಣಕಾಸು ಮಂತ್ರಿಯವರು ಪದೇಪದೇ ಹೇಳುತ್ತಲೇ ಇದ್ದರಾದರೂ ಇದರಡಿ ಸೃಷ್ಟಿಸಲು ಉದ್ದೇಶಿಸಲಾಗಿರುವ 10 ಲಕ್ಷ ಕುಂಟೆಗಳು ಮತ್ತು ಅಂದಾಜು ಅಷ್ಟೇ ಸಂಖ್ಯೆಯ ಹೊಂಡಗಳು (ಅಂದರೆ ಅಂದಾಜು ದೇಶದ ಎಲ್ಲಾ ಹಳ್ಳಿಗಳಿಗೂ ಒಂದಕ್ಕಿಂತ ಹೆಚ್ಚು) ಹೇಗೆ ಶಾಶ್ವತ ಸಂಪತ್ತಾಗಬಲ್ಲವು ಎಂಬುದರ ಸ್ಪಷ್ಟತೆ ಕಾಣಲಿಲ್ಲ.

ಅಂದಹಾಗೆ, ಇದೇ ಕಾರ್ಯಕ್ರಮವನ್ನೇ ಮೋದಿಯವರು ಕಾಂಗ್ರೆಸ್ಸಿನ ವೈಫಲ್ಯಕ್ಕೆ ‘ಜೀವಂತ ಸ್ಮಾರಕ’ವೆಂದು ಬಣ್ಣಿಸಿದ್ದರು. ಮತ್ತು ಈಗ ಅದನ್ನೇ ಹಾಡಿಹೊಗಳುತ್ತಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ನೋಟು ನಿಷೇಧದ ನಂತರದಲ್ಲಿ ಜೀವನೋಪಾಯವನ್ನು ಕಳೆದುಕೊಂಡು ಜನರು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಮರಳಿದ್ದರಿಂದಾಗಿಯೇ ಕಳೆದ ಕೆಲವು ತಿಂಗಳುಗಳಲ್ಲಿ MNREGAಕ್ಕೆ ಈ ಪರಿ ಬೇಡಿಕೆ ಹೆಚ್ಚಲು ಕಾರಣವಾಗಿದೆಯೆಂಬುದಕ್ಕೆ ಇದು ಪ್ರಾಥಮಿಕ ಸಾಕ್ಷ್ಯಗಳನ್ನು ಒದಗಿಸುತ್ತಿದೆ. ವಿಪರ್ಯಾಸವೆಂದರೆ ಈ ಯೋಜನೆಯ ಪರಿಕಲ್ಪನೆಯೇ ಹಳ್ಳ್ಳಿಗಳಿಂದ ನಗರಗಳಿಗೆ ವಲಸೆಯನ್ನು ತಡೆಯುವುದಾಗಿತ್ತು. ಇದೀಗ ಅದಕ್ಕೆ ತದ್ವಿರುದ್ಧವಾದದ್ದು ಸಂಭವಿಸುತ್ತಿರುವಂತಿದೆ.

ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಸಾಮಗ್ರಿಗಳು. (ಸಾಂದರ್ಭಿಕ ಚಿತ್ರ)

ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಸಾಮಗ್ರಿಗಳು. (ಸಾಂದರ್ಭಿಕ ಚಿತ್ರ)

ರಾಜಕೀಯ ಪಕ್ಷಗಳು ಪಡೆದುಕೊಳ್ಳುವ ದೇಣಿಗೆಯ ವಿದ್ಯಮಾನವನ್ನು ಹೆಚ್ಚು ಪಾರದರ್ಶಕ ಮಾಡುವ ಪ್ರಸ್ತಾಪದ ಬಗ್ಗೆ ಹೆಚ್ಚೆಚ್ಚು ಚರ್ಚೆ ನಡೆಯುತ್ತಿದೆ. ಚುನಾವಣಾ ಅಯೋಗದ ಶಿಫಾರಸ್ಸುಗಳಂತೆ ರಾಜಕೀಯ ಪಕ್ಷಗಳು ಒಬ್ಬ ಅನಾಮಧೇಯ ವ್ಯಕ್ತಿಯಿಂದ ಪಡೆದುಕೊಳ್ಳಬಹುದಾದ ದೇಣಿಗೆಯ ಮೊತ್ತವನ್ನು ರೂ.20, 000ದಿಂದ ರೂ. 2,000ಕ್ಕೆ ಇಳಿಸುವ ಪ್ರಸ್ತಾಪವನ್ನು ಹಣಕಾಸು ಮಂತ್ರಿಗಳು ಮುಂದಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆಗೆ ಒಂದು ತಿದ್ದುಪಡಿ ತಂದು ಚುನಾವಣಾ ಬಾಂಡ್‍ಗಳನ್ನು ಮಾರುಕಟ್ಟೆಗೆ ತರುವ ಪ್ರಸ್ತಾಪದ ಜೊತೆಗೆ ಗೊತ್ತುಪಡಿಸಿದ ಅವಧಿಯೊಳಗೆ ಪ್ರತಿಯೊಂದು ರಾಜಕೀಯ ಪಕ್ಷವು ತಮ್ಮ ಆದಾಯ ತೆರಿಕೆ ಲೆಕ್ಕಪತ್ರವನ್ನು ಸಲ್ಲಿಸಬೇಕೆಂದೂ ಜೈಟ್ಲಿಯವರು ಹೇಳಿದ್ದಾರೆ.

ಆದರೆ ಈ ಕ್ರಮಗಳು ಕೇವಲ ಅಲಂಕಾರಿಕವಾಗಿದ್ದು ಚುನಾವಣೆಗಳಲ್ಲಿ ಕಪ್ಪುಹಣದ ವಿಸ್ತೃತಬಳಕೆಗೆ ಯಾವ ತಡೆಯನ್ನೂ ಒಡ್ಡುವುದಿಲ್ಲ.

ಅದಕ್ಕೆ ಕಾರಣಗಳಿವೆ; ಮೊಟ್ಟಮೊದಲ ಮತ್ತು ಅತಿಮುಖ್ಯವಾದ ವಿಷಯವೆಂದರೆ ರಾಜಕೀಯ ಪಕ್ಷಗಳು ಅಧಿಕೃತವಾಗಿ ಘೋಷಿಸುವ ಅದಾಯವು ಅವರು ಚುನಾವಣೆಗಳಲ್ಲಿ ಮಾಡುವ ವೆಚ್ಚದ ಅತಿ ಸಣ್ಣ ಭಾಗವಷ್ಟೇ ಆಗಿರುತ್ತದೆ. ಅತಿ ಹೆಚ್ಚು ಭಾಗವು ಲೆಕ್ಕಪುಕ್ಕವಿಲ್ಲದ ಅಥವಾ ಕಪ್ಪುಹಣವೇ ಆಗಿರುತ್ತದೆ. ಎರಡನೆಯದಾಗಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಪ್ರಜಾತಾಂತ್ರಿಕ ಸುಧಾರಣೆಗಾಗಿನ ಸಂಸ್ಥೆ) ಎತ್ತಿ ತೋರಿಸಿರುವಂತೆ ಈ ರಾಜಕೀಯ ಪಕ್ಷಗಳು ತೋರಿಸುವ ಆದಾಯವನ್ನು ಸ್ವತಂತ್ರ ಲೆಕ್ಕಪರಿಶೋಧಕರು ಪರಿಶೀಲಿಸುವ ಅಥವಾ ನಿಯಮಗಳ ಉಲ್ಲಂಘನೆ ಆಗಿದ್ದರೆ ದಂಡವನ್ನು ವಿಧಿಸುವ ಯಾವುದೇ ಪ್ರಸ್ತಾಪವು ಅದರೊಳಗಿಲ್ಲ. ಮೂರನೆಯದಾಗಿ, ಸಮಯಕ್ಕೆ ಸರಿಯಾಗಿ ಲೆಕ್ಕಪತ್ರವನ್ನು ಸಲ್ಲಿಸುವ ವಿಷಯದಲ್ಲಿ ನೋಡಿದರೆ, 2010-11 ಮತ್ತು 2014-15ರ ನಡುವೆ ಲೆಕ್ಕಪತ್ರ ಸಲ್ಲಿಕೆಯಲ್ಲಿ ಬಿಜೆಪಿ ಪಕ್ಷ ಸರಾಸರಿ 182 ದಿನಗಳಷ್ಟು ಮತ್ತು ಕಾಂಗ್ರೆಸ್ ಪಕ್ಷ ಸರಾಸರಿ 166 ದಿನಗಳಷ್ಟು ತಡಮಾಡಿದೆ. ಕೊನೆಯದಾಗಿ, ಬಜೆಟ್ ಮಂಡನೆಯ ನಂತರದಲ್ಲಿ ಮಾಧ್ಯಮಗಳ ಜೊತೆಗೆ ನಡೆದ ಸಂವಾದದಲ್ಲಿ ಭಾಗವಹಿಸಿಸುತ್ತಾ ಜೈಟ್ಲಿಯವರು ಚುನಾವಣಾ ಬಾಂಡ್‍ಗಳ ಪ್ರಸ್ತಾಪದ ಬಗ್ಗೆ ಮತು ಅದನ್ನು ಕೊಳ್ಳುವವರ ಗೋಪ್ಯತೆಯನ್ನು ಕಾಪಾಡುವ ಬಗ್ಗೆ ನೀಡಿರುವ ಹೇಳಿಕೆಗಳು ಭಾರತದಲ್ಲಿ ರಾಜಕೀಯ ದೇಣಿಗೆಯ ವ್ಯವಸ್ಥೆಯಲ್ಲಿ ಅಷ್ಟು ತ್ವರಿತವಾಗಿ ಪಾರದರ್ಶಕತೆ ತರುವ ಯಾವುದೇ ಭರವಸೆಗಳನ್ನು ಮೂಡಿಸುವುದಿಲ್ಲ.


MORE READING: ರಾಜಕೀಯ ಪಕ್ಷಗಳ ದೇಣಿಗೆಗೆ ಕಡಿವಾಣ: ‘ರಂಗೋಲಿ ಕೆಳಗೆ ತೂರುವವರಿಗೆ’ ಇಲ್ಲಿದೆ ಅವಕಾಶ!


ಬಜೆಟ್ಟಿನಲ್ಲಿ ಆದಾಯ ಸಂಗ್ರಹದ ಬಗ್ಗೆ ನೀಡಲಾಗಿರುವ ಅಂಕಿಅಂಶಗಳ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲೂ ವಿಶೇಷವಾಗಿ ಪರೋಕ್ಷ ತೆರಿಗೆ ಸಂಗ್ರಹದ ಬಗ್ಗೆ ನೀಡಲಾಗಿರುವ ಅಂಕಿಅಂಶಗಳು ಎಷ್ಟು ನೈಜ ಮತ್ತು ನಿಖರ ಎಂಬ ಬಗ್ಗೆ ಅನುಮಾನಗಳಿವೆ. ಬಜೆಟ್ ಮಂಡನೆಯ ದಿನಾಂಕವನ್ನು ಒಂದು ತಿಂಗಳಷ್ಟು ಮುಂಚಿತವಾಗಿ ಮಾಡಿಕೊಂಡಿರುವುದರಿಂದ ಬಜೆಟ್ ಅಂದಾಜು (Budget Estimates-BE) ಮತ್ತು ಪರಿಷ್ಕೃತ ಅಂದಾಜು (Revised Esimates – RE) ಗಳ ಬಗ್ಗೆ ಹಣಕಾಸು ಇಲಾಖೆ ಊಹಂದಾಜುಗಳನ್ನು ಮಾಡುವಾಗ ಲಭ್ಯವಿರಬೇಕಾಗಿದ್ದ ದತ್ತಾಂಶಗಳು, ಈ ಹಿಂದಿನ ಪದ್ಧತಿಗಳಿಗೆ ಹೋಲಿಸಿದರೆ, ಈ ಬಾರಿ ಸಾಕಾಗುವಷ್ಟಿರಲಿಲ್ಲ. ಇದು ನೋಟು ನಿಷೇಧವು ಮಾಡಿರುವ ಕೋಲಾಹಲದ ಪ್ರಭಾವವನ್ನು ಕಡಿಮೆ ಮಾಡಿ ತೋರಿಸಬೇಕೆಂಬ ಬಿಜೆಪಿಯ ರಾಜಕಿಯ ಉದ್ದೇಶಗಳಿಗೆ ಸಹಕಾರಿಯಾಗಿದ್ದರೂ, ಇದಕ್ಕೆ ಮತ್ತೊಂದು ಆಯಾಮವಿದೆ. ಬರಲಿರುವ ವಿತ್ತೀಯ ವರ್ಷದಲ್ಲಿ ದೇಶವು ಸರಕು ಮತ್ತು ಸೇವಾ ತೆರಿಗೆ (GST) ಪದ್ದತಿಯೆಡೆಗೆ ಮನ್ನೆಡೆಯುತ್ತದೆ ಎಂದು ಸರ್ಕಾರವು ಹೇಳಿಕೊಳ್ಳುತ್ತಿದೆ. ಆದರೆ ಈ ಹೊಸಬಗೆಯ ಮತ್ತು ಸ್ಪಷ್ಟವಾಗಿ ವಿಭಿನ್ನವಾದ ತೆರಿಗೆ ಪದ್ಧತಿಯು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಅಬ್ಕಾರಿ ಮತ್ತು ಸೇವಾ ತೆರಿಗೆ ಸಂಗ್ರಹವನ್ನು ಮತ್ತು ಹಂಚಿಕೆಗಳನ್ನು ಯಾವ ರೀತಿ ಪ್ರಭಾವಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಮತ್ತೊಂದು ಅನಿಶ್ಚಿತತೆಯ ಅಂಶವೆಂದರೆ, ನಿರೀಕ್ಷಿತವಾಗಿರುವ ಜಾಗತಿಕ ತೈಲಬೆಲೆ ಹೆಚ್ಚಳಗಳು ಹೇಗೆ ಹಣದುಬ್ಬರದ ನಿರೀಕ್ಷೆಗಳನ್ನು ಪ್ರಭಾವಿಸುತ್ತದೆ ಎಂಬುದು.

ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ ಅವರು 2015-16ರಲ್ಲಿ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಹೆಚ್ಚಳವಾದಂತೆ ಈ ಬಾರಿ ಹಾಲು, ಸಕ್ಕರೆ, ಆಲೂಗಡ್ಡೆ ಮತ್ತು ಈರುಳ್ಳಿಗಳ ಬೆಲೆಗಳಲ್ಲಿ ಹೆಚ್ಚಳವಾಗಬಹುದೆಂದು ಎಚ್ಚರಿಸಿದ್ದಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ 2017-18ರಲ್ಲಿ ಬಳಕೆದಾರರ ಬೆಲೆ ಸೂಚ್ಯಂಕವನ್ನು 4.25- 5% ವ್ಯಾಪ್ತಿಯಲ್ಲಿ ಹಿಡಿದಿಡಬಹುದೆಂಬ ಬಜೆಟ್ಟಿನ ಗುಪ್ತ ಗ್ರಹಿಕೆ ಸುಳ್ಳಾಗಬಹುದು. ಈ ಸಂಭಾವ್ಯ ಹೆಚ್ಚಿನ ಹಣದುಬ್ಬರವು ಸರ್ಕಾರದ ವಿತ್ತೀಯ ಕೊರತೆಯ ಗುರಿಗಳನ್ನು ಈಡೇರಿಸಬಹುದಾದರೂ ಬಡಜನರ ಬೆನ್ನು ಮೂಳೆ ಮುರಿಯುತ್ತದೆ. ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚತತೆ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚುತ್ತಿರುವ ವಿದೇಶಿ ವಿರೋಧಿ ಸ್ವರಕ್ಷಣಾ ನೀತಿಗಳು ಭಾರತಕ್ಕೆ ಒಳ್ಳೆಯ ಸುದ್ದಿಯೇನಲ್ಲ.

ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆತ ಮತ್ತು ವ್ಯೂಹಾತ್ಮಕ ಮಾರಾಟಗಳ (ಅರ್ಥಾತ್ ಖಾಸಗೀಕರಣ) ಬಗ್ಗೆ ರಾಜಕೀಯ ಏಕಾಭಿಪ್ರಾಯ ರೂಪಿಸುವುದು ಸುಲಭ ಸಾಧ್ಯವಲ್ಲವೆಂದೂ ಸಹ ಸುಬ್ರಹ್ಮಣ್ಯಂ ಅವರು ಎಚ್ಚರಿಸಿದ್ದಾರೆ. ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣದಿಂದ ದಕ್ಕಿಸಿಕೊಳ್ಳಬಹುದಾದ ಮೊತ್ತದ ಗುರಿಯನ್ನು ವರ್ಷಾನುವರ್ಷ ಮುಟ್ಟಲಾಗದಿರುವುದು ಸ್ಪಷ್ಟ. ಹಾಗಿದ್ದರೂ ಸರ್ಕಾರವು 2016-17ರ ಪರಿಷ್ಕೃತ ಅಂದಾಜಿಗಿಂತ 2017-18ರ ಬಜೆಟ್ ಅಂದಾಜಿನಲ್ಲಿ ಶೇ.60ರಷ್ಟು ಹೆಚ್ಚಿನ ಹಣವು ಈ ಬಾಬತ್ತಿನಿಂದ ದೊರೆಯುತ್ತದೆಂದು ಅಂದಾಜುಮಾಡಿಕೊಂಡಿದೆ. ಈಗಾಗಲೇ ಆದಾಯ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದ್ದರೂ ಅದರ ಮೇಲೆ ಶೇ.25ರಷ್ಟು ಹೆಚ್ಚಿನ ಸಂಗ್ರಹವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ಹಾಗದಲ್ಲಿ ಇದರ ಅರ್ಥ ಜೈಟ್ಲಿಯವರೇ ಬಣ್ಣಿಸಿದಂತೆ “ಬಹುಪಾಲು ತೆರಿಗೆ ಪಾವತಿಗೆ ಬದ್ದರಲ್ಲದ ಸಮಾಜ”ವಾಗಿರುವ ನಮ್ಮ ದೇಶದ ಆದಾಯ ತೆರಿಗೆ ಪಾವತಿದಾರರು ಇದ್ದಕ್ಕಿದ್ದ ಹಾಗೆ ಸಜ್ಜನ ತೆರಿಗೆದಾರರಾಗಿಬಿಡುತ್ತಾರೆಯೋ ಅಥವಾ ಬಿಜೆಪಿಯು ತಾನು ಅಧಿಕಾರದಲ್ಲಿ ಇಲ್ಲದೇ ಇರುವಾಗ ಯಾವುದನ್ನೂ “ಇನ್ಸ್ಪೆಕ್ಟರ್ ರಾಜ್” , “ತೆರಿಗೆ ಭಯೋತ್ಪಾದನೆ” ಎಂದು ಬಣ್ಣಿಸುತ್ತಿದ್ದರೋ ಆ ಯುಗಕ್ಕೆ ವಾಪಸ್ ಮರಳುತ್ತೇವೆಯೋ ಎಂಬುದು ಈ ಹಂತದಲ್ಲಿ ಸ್ಪಷ್ಟವಾಗುತ್ತಿಲ್ಲ. ಅದೇನೇ ಇದ್ದರೂ, ಈ ಬಗೆಯ ವಿಸ್ತೃತ ಮತ್ತು ವ್ಯಾಪಕ ‘ತೆರಿಗೆಹೋಕತನ’ದಿಂದಾಗಿ ತೆರಿಗೆ ಪಾವತಿಯ ಹೆಚ್ಚಿನ ಭಾರ ಪ್ರಾಮಾಣಿಕ ತೆರಿಗೆದಾರರೇ ಹೊರುವಂತಾಗಿದೆ.

CBGA-1ಬೆಜೆಟ್ಟಿನಲ್ಲಿ ಇನ್ನೂ ಕೆಲವು ಕಳವಳಕಾರಿ ಅಂಶಗಳಿವೆ. ಸೆಂಟರ್ ಫಾರ್ ಬಜೆಟ್ ಅಂಡ್ ಗವರ್ನೆನ್ಸ್ ಅಕೌಂಟಬಿಲಿಟಿ (CBGA) ಯ ವಿಶ್ಲೇಷಣೆ ಪ್ರಕಾರ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳ ಪಾಲು ವಿಭಜನೆಯಾಗುವ ನಿಧಿಯಲ್ಲಿ ರಾಜ್ಯಗಳ ಪಾಲು ಹೆಚ್ಚಿದರೂ ರಾಜ್ಯಗಳಿಗೆ ವರ್ಗಾವಣೆಯಾಗುವ ಸಂಪನ್ಮೂಲಗಳ ಒಟ್ಟಾರೆ ಮೊತ್ತ ಮಾತ್ರ ಹೆಚ್ಚಳವಾಗಿಲ್ಲ. ಇದು ಕಳವಳಕಾರಿಯಾದ ಬೆಳವಣಿಗೆ. ಏಕೆಂದರೆ ಇದೀಗ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯಗಳ ಮೇಲೇ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಿಸಲಾಗುತ್ತಿದೆ. ಕೇಂದ್ರವು ಸರ್‍ಚಾರ್ಚ್ ಮತ್ತು ಸೆಸ್ (ಸ್ವಚ್ಚ ಭಾರತ್ ಮತ್ತು ಕೃಷಿ ಕಲ್ಯಾಣ್ ಸೆಸ್‍ಗಳನ್ನೂ ಒಳಗೊಂಡಂತೆ)ಗಳ ಮೂಲಕ ಅಧಿಕ ತೆರಿಗೆ ಸಂಪನ್ಮೂಲವನ್ನು ಕ್ರೂಢೀಕರಿಸುತ್ತಿದ್ದರೂ, ಇದರಿಂದ ಸಂಗ್ರಹವಾದ ಮೇಲ್‍ತೆರಿಗೆಗಳು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಾದ ಸಂಚಿತನಿಧಿಯ ಭಾಗವಾಗಿರುವುದಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕಾರ್ಯಕ್ರಮಗಳ ಮೇಲಿನ ವೆಚ್ಚದಲ್ಲಿ ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮಹಿಳೆಯರನ್ನೇ ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡ ವೆಚ್ಚಗಳಲ್ಲೂ ಹೆಚ್ಚಳವೇನೂ ಆಗಿಲ್ಲ.

ಬಂಡವಾಳ ಹೂಡಿಕೆಯ ಬಾಬತ್ತನ್ನು ತೆಗೆದುಕೊಂಡರೆ ಸಂಘಟಿತ ಖಾಸಗಿ ಕ್ಷೇತ್ರದ ಮೂಲಕ ಬಂಡವಾಳ ಹೂಡಿಕೆ ಬರುವುದಿಲ್ಲವೆಂಬ ತೀರ್ಮಾನಕ್ಕೆ ಬಂದಂತಿರುವ ಕೇಂದ್ರ ಸರ್ಕಾರ ಅದನ್ನು ಸರ್ಕಾರದ ಹೂಡಿಕೆಯ ಮೂಲಕ ತುಂಬಬೇಕೆಂಬ ನಿಲುವಿನಲ್ಲಿದೆ. ಆರ್ಥಿಕತೆಯ ಅಭಿವೃದ್ಧಿಯ ದರದಲ್ಲಿ ಕುಸಿತವಾಗಿರುವುದರಿಂದ ಅದು ಉದ್ಯೋಗ ಸೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕೂಡಾ ಬಜೆಟ್ಟಿನಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿಲ್ಲ.

ಸಾರಾಂಶದಲ್ಲಿ ಹೇಳುವುದಾದರೆ ಈ ಬಜೆಟ್ಟಿನ ಹಿಂದೆ “ಬಡವರ ಪರ”, “ಶ್ರೀಮಂತರ ವಿರೋಧಿ” ನಿಲುವಿದೆ ಎಂಬ ಅಬ್ಬರದ ಹೆಗ್ಗಳಿಕೆಗಳು ಮತ್ತು ನುಡಿಗಟ್ಟುಗಳ ಬಣ್ಣನೆಯಿದ್ದರೂ (ಹಿಂದೆಯೂ ಪ್ರತಿಯೊಬ್ಬ ಹಣಕಾಸು ಮಂತ್ರಿಯೂ ಇದೇ ಬಗೆಯಲ್ಲಿ ಬಣ್ಣಿಸಿಕೊಳ್ಳುತ್ತಿದ್ದರು), ಈ ಬಜೆಟ್ಟಿನಲ್ಲಿರುವ ಪ್ರಸ್ತಾವಗಳು ಅಸಮಾನತೆಯನ್ನು ತಗ್ಗಿಸುವುದಿಲ್ಲ. ದೇಶದ ವಂಚಿತ ಸಮುದಾಯಗಳ ಬದುಕಿನಲ್ಲಿ ಯಾವ ದೊಡ್ಡ ವ್ಯತ್ಯಾಸವನ್ನೂ ಉಂಟುಮಾಡುವುದಿಲ್ಲ.

ಕೃಪೆ: Economic and Political Weekly

Leave a comment

FOOT PRINT

Top