An unconventional News Portal.

‘ಪಕ್ಷಕ್ಕಷ್ಟೆ ರಾಜೀನಾಮೆ; ರಾಜಕೀಯದಿಂದ ನಿವೃತ್ತಿ ಇಲ್ಲ’: ಕುತೂಹಲ ಮೂಡಿಸಿದ ಎಸ್ಎಂಕೆ ನಡೆ

‘ಪಕ್ಷಕ್ಕಷ್ಟೆ ರಾಜೀನಾಮೆ; ರಾಜಕೀಯದಿಂದ ನಿವೃತ್ತಿ ಇಲ್ಲ’: ಕುತೂಹಲ ಮೂಡಿಸಿದ ಎಸ್ಎಂಕೆ ನಡೆ

ಹಿರಿತನಕ್ಕೆ ಸಿಗದ ಬೆಲೆ, ಇರುವಿಕೆಗೆ ಸಿಗದ ಮನ್ನಣೆ, ನೋವು- ಸಂಕಟಗಳ ತಾಕಲಾಟ, ಹಳೇ ದಿನಗಳ ಮೆಲುಕಾಟ, ಪಕ್ಷದಿಂದಷ್ಟೆ ಹೊರಕ್ಕೆ; ರಾಜಕೀಯದಲ್ಲಿ ಮಂದುವರಿಕೆ, ‘ನಿವೃತ್ತಿ ಘೋಷಣೆ’ಯ ಊಹಾಪೋಹದ ವರದಿಗಳಿಗೆ ತೆರೆ…

ಇವು ಭಾನುವಾರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಕರೆಯಲಾದ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಎಸ್. ಎಂ. ಕೃಷ್ಣ ಅವರ ತುರ್ತು ಪತ್ರಿಕಾಗೋಷ್ಠಿಯ ಹೈಲೈಟ್ಸ್. ಶನಿವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಅವರ ರಾಜೀನಾಮೆ ವಿಚಾರ ಹೊರಬೀಳುತ್ತಿದ್ದಂತೆ ‘ಸಮಾಚಾರ’ ಅವರ ‘ನಿವೃತ್ತಿ ಘೋಷಣೆ’ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿತ್ತು. ಜತೆಗೆ, ಒಂದಷ್ಟು ಪ್ರಶ್ನೆಗಳನ್ನು ವರದಿಯ ಮೂಲಕ ಮುಂದಿಟ್ಟಿತ್ತು. ನಿರೀಕ್ಷೆಯಂತೆಯೇ, ತಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು, ರಾಜಕೀಯದಿಂದ ನಿವೃತ್ತಿ ಇಲ್ಲ ಎಂಬುದನ್ನು ಸ್ವತಃ ಎಸ್. ಎಂ. ಕೃಷ್ಣ ಅವರೇ ಸ್ಪಷ್ಟಪಡಿಸಿದ್ದಾರೆ. ‘ಮುಂದಿನ ನಡೆಗಾಗಿ ಕಾಯಿರಿ’ ಎನ್ನುವ ಮೂಲಕ, ಅವರ ನಡೆಯ ಕುರಿತಾದ ಕುತೂಹಲವನ್ನು ಇನ್ನಷ್ಟು ಕಾಲ ಮುಂದಕ್ಕೆ ಹಾಕಿದ್ದಾರೆ.

ಅಲೆಯಲ್ಲಿ ತೇಲಿಬಂದವನಲ್ಲ:

5 ದಶಕಗಳ ಕಾಲ ನಾನಾ ತಲೆಮಾರುಗಳ ಪತ್ರಕರ್ತರ ಜತೆಗಿನ ಒಡನಾಟವನ್ನು ಸ್ಮರಿಸುತ್ತಲೇ ತಮ್ಮ ಮಾತು ಆರಂಭಿಸಿದರು ಎಸ್. ಎಂ. ಕೃಷ್ಣ. “1962ರಲ್ಲಿ ಅಮೆರಿಕಾದಿಂದ ಬಂದೆ. ಆಗ ದೇಶದಲ್ಲಿ ಶಾರ್ವತ್ರಿಕ ಚುನಾವಣೆಯ ಕಾಲ. ನಾನು ಪ್ರತಿಷ್ಠಿತರೊಬ್ಬರ ವಿರುದ್ಧ ಮದ್ದೂರು ಕ್ಷೇತ್ರದಲ್ಲಿ ಪ್ರಜಾ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದೆ. ಆಗ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಲು ಪಂಡಿತ್ ಜವಹರ್ ಲಾಲ್ ನೆಹರೂ ಕೂಡ ಬಂದಿದ್ದರು. ಅವರ ಮೆರವಣಿಗೆಯನ್ನು ನಾನು ಪಕ್ಷದ ಕಚೇರಿಯಿಂದ ನೋಡುತ್ತಿದ್ದರೆ. 25- 30 ಸಹಸ್ರ ಸಂಖ್ಯೆಯಲ್ಲಿ ಜನ ನೆಹರೂ ಭಾಷಣ ಕೇಳಲು ಸೇರಿದ್ದರು. ಆದರೆ ನಾನು ಅಧೀರನಾಗಲಿಲ್ಲ. ಬದಲಿಗೆ, ಪ್ರಬಲ ಪೈಪೋಟಿ ನೀಡಿ ಚುನಾವಣೆಯನ್ನು ಗೆದ್ದು ಬಂದೆ. ಇದನ್ನು ಯಾಕೆ ನೆನಪಿಸುತ್ತಿದ್ದೇನೆ ಎಂದರೆ ನಾನು ಅಲೆಯಲ್ಲಿ ಗೆದ್ದು ಬಂದ ರಾಜಕಾರಣಿ ಅಲ್ಲ ಎಂಬುದನ್ನು ಹೇಳುವುದಕ್ಕೆ,” ಎಂದರು ಕೃಷ್ಣ.

“ಇದು ನನ್ನ ಬದುಕಿನ ನೋವಿನ ಸಂದರ್ಭ. 46 ವರ್ಷಗಳಿಂದ ನೆಮ್ಮದಿಯಾಗಿ ವಾಸವಾಗಿದ್ದ ಸ್ವಂತ ಮನೆ(ಕಾಂಗ್ರೆಸ್ ಪಕ್ಷ)ಯನ್ನು ತೊರೆಯಬೇಕಾಗಿ ಬಂದಿದೆ. 1968ರಲ್ಲಿ ಲೋಕಸಭೆಗೆ ಆಯ್ಕೆಯಾಗಿ ಹೋದಾಗ ಕಾಂಗ್ರೆಸ್ ಪಕ್ಷ ಇದ್ಭಾಗವಾಗಿತ್ತು. ಆ ಸಮಯದಲ್ಲಿ ಇಂದಿರಾಗಾಂಧಿ ನೇತೃತ್ವದಲ್ಲಿ ರಚನೆಗೊಂಡ ಮೈನಾರಿಟಿ ಸರಕಾರಕ್ಕೆ ನಮ್ಮ ಬೆಂಬಲ ನೀಡಿದೆವು. ಅವರು ಜಾರಿಗೆ ತಂದ ಬ್ಯಾಂಕುಗಳ ರಾಷ್ಟ್ರೀಕರಣ, ಭೂ ಸುಧಾರಣೆ ಕಾಯ್ದೆಗಳನ್ನು ಬೆಂಬಲಿಸುವಂತೆ ನಮ್ಮ ಪಕ್ಷದಲ್ಲಿ ಕೇಳಿಕೊಂಡಿದ್ದೆ. ಈ ಕಾರಣಗಳಿಗಾಗಿ ಇಂದಿರಾಗಾಂಧಿಯವರ ಜತೆಯಲ್ಲಿ ಗಾಢವಾದ ಮೈತ್ರಿ ಬೆಳೆದಿತ್ತು. ನಾನು ಒಂದು ರೀತಿಯಲ್ಲಿ ಪಿಎಸ್ಪಿ ಮತ್ತು ಕಾಂಗ್ರೆಸ್ ನಡುವೆ ರಾಯಭಾರಿಯಾಗಿದ್ದೆ,” ಎಂದು ತಮ್ಮ ಮತ್ತು ಇಂದಿರಾಗಾಂಧಿ ನಡುವಿನ ಸಂಬಂಧವನ್ನು ಮೆಲುಕು ಹಾಕಿದರು.

ಮ್ಯಾನೇಜರ್ಗಳು ಬೇಕಾಗಿದ್ದಾರೆ:

ತಾವು ಪಕ್ಷ ತೊರೆಯುವುದಕ್ಕೆ ಇರುವ ಕಾರಣಗಳನ್ನು ಮಾರ್ಮಿಕವಾಗಿ ಎಸ್. ಎಂ. ಕೃಷ್ಣ ಮುಂದಿಟ್ಟರು. “46 ವರ್ಷಗಳ ನಂತರ ಇವತ್ತು ಅತ್ಯಂತ ನೋವು ಸಂಕಟದಿಂದ ಪಕ್ಷವನ್ನು ತೊರೆದಿದ್ದೇನೆ. ಈ ಸುದೀರ್ಘ ಅವಧಿಯಲ್ಲಿ ಒಳ್ಳೆಯದನ್ನು ನೋಡಿದ್ದೇನೆ- ಕೆಟ್ಟದ್ದನ್ನು ಅನುಭವಿಸಿದ್ದೇನೆ. ಸಿಹಿಯನ್ನು ಉಂಡಿದ್ದೇನೆ- ಕಹಿಯನ್ನು ಜೀರ್ಣಿಸಿಕೊಂಡಿದ್ದೇನೆ. ಆದರೆ ಯಾವತ್ತೂ ಪಕ್ಷ ನಿಷ್ಟೆ ಬದಲಾಗಿಲ್ಲ. ನನಗನ್ನಿಸುತ್ತದೆ ಇವತ್ತು ಕಾಂಗ್ರೆಸ್ ಪಕ್ಷ ಜನ ಸಮುದಾಯಗಳ ನಾಯಕರಿಗಿಂತ ಪರಿಸ್ಥಿತಿಯನ್ನು ನಿಭಾಯಿಸುವ ಮ್ಯಾನೇಜರ್ಗಳು ಸಾಕು ಎಂಬ ತೀರ್ಮಾನಕ್ಕೆ ಬಂದಿದೆ ಅನ್ನಿಸುತ್ತದೆ. ಇಂದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇಂತಹದ್ದೇ ಗೊಂದಲವಿದೆ. ಅದನ್ನು ಅವು ಮೆಟ್ಟಿ ನಿಲ್ಲಬೇಕಿದೆ,” ಎಂದು ಕೃಷ್ಣ ಹೇಳಿದರು.

ರಾಜೀವ್ ಗಾಂಧಿ ಅವರನ್ನು ನೆನಪಿಸಿಕೊಂಡು ಮಾತನಾಡಿದ ಇಳೀ ವಯಸ್ಸಿನಲ್ಲಿರುವ ರಾಜಕಾರಣಿ, “ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ರಾಗ ದ್ವೇಷ ರಹಿತವಾಗಿರಬೇಕು. ಅಧಿಕಾರ ಪಡೆದ ಮೇಲೆ ಎಲ್ಲಾ ಸಮುಯದಾಗಳನ್ನು ಒಂದೇ ದೃಷ್ಟಿಯಿಂದ ನೋಡಬೇಕು,” ಎಂದರು.

ವಯಸ್ಸಿನ ಕುರಿತು:

ರಾಜಕೀಯ ಪಕ್ಷಗಳಲ್ಲಿ ಹಿರಿತನಕ್ಕೆ ಬೆಲೆ ಸಿಗುತ್ತಿಲ್ಲ ಎಂಬ ವಿಚಾರವನ್ನು ನೋವಿನಿಂದಲೇ ಕೃಷ್ಣ ಪ್ರಸ್ತಾಪಿಸಿದರು. “ವಯಸ್ಸಿನ ಒಂದೇ ಕಾರಣ ಇಟ್ಟುಕೊಂಡು ಒಬ್ಬ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತನನ್ನು ಅಂಚಿಗೆ ತಳ್ಳುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ನನಗೆ ಕಾಡುತ್ತಲೇ ಇತ್ತು. ವಯಸ್ಸು ಎಂಬುದು ಮನಸ್ಥಿತಿಯ ಮೇಲೆ ನಿಲ್ಲುತ್ತದೆ. ಎಷ್ಟೋ ಜನ 46ನೇ ವಯಸ್ಸಿಗೆ ವಯಸ್ಸಾದವರಂತೆ ನಡೆದುಕೊಳ್ಳುತ್ತಾರೆ. ಇನ್ನು ಕೆಲವರು 80 ದಾಟಿದರೂ ಚಟುವಟಿಕೆಯಿಂದ ಓಡಾಡುತ್ತಾರೆ. ನಿಜ, ನನಗೆ ನಡೆದಾಡುವಲ್ಲಿ ಸ್ವಲ್ಪ ಸಮಸ್ಯೆ ಇದೆ. ಆದರೆ, ಅದು ವಯಸ್ಸು, ಪ್ರಾಯದ ಜತೆಗೆ ಬರುವ ಪ್ರಾಕೃತಿಕ ಬದಲಾವಣೆ. ಈ ಹಿಂದೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ನನಗೆ ಕೊಟ್ಟಿದೆ ಎಂದು ಹೇಳಿದ್ದೆ. ಆತ್ಮಗೌರವ, ಸ್ವಾಭಿಮಾನ, ಹಿರಿತನಳು ಮುಖ್ಯವಾದವುಗಳು. ಹಿರಿತನಕ್ಕೆ ಬೆಲೆ ನೀಡದ ರಾಜಕೀಯ ಪಕ್ಷಗಳಿಗೆ ಭವಿಷ್ಯವಿಲ್ಲ,” ಎಂದರು.

“ಹಿರಿತನಕ್ಕೆ ಬೆಲೆ ನೀಡಿ. ಅವರು ಹೇಳಿದ್ದೆಲ್ಲವನ್ನೂ ಪಾಲನೆ ಮಾಡಿ ಎಂದು ಹೇಳುತ್ತಿಲ್ಲ. ಬಹಳ ನೋವಿನಿಂದ ಸಂಕಟದಿಂದ ನಾನು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧವಾಗಿದ್ದೇನೆ,” ಎಂದು ಎಸ್. ಎಂ. ಕೃಷ್ಣ ಹೇಳಿದರು.

ರಾಜಕೀಯ ನಿವೃತ್ತಿಯ ಕುರಿತು ಜನರಲ್ ಮೆಕಾರ್ಥಿಯ ಮಾತುಗಳನ್ನು ಉದಾಹರಣೆಯಾಗಿ ತೆಗೆದುಕೊಂಡ ಅವರು, “ರಾಜಕಾರಣಿಗೆ ನಿವೃತ್ತಿ ಎಂಬುದು ಇವುದಿಲ್ಲ. ಆತ ಕಾಲದ ಜತೆಯಲ್ಲಿ ಮರೆಯಾಗುತ್ತಾನೆ ಅಷ್ಟೆ,” ಎನ್ನುವ ಮೂಲಕ ತಮ್ಮ ನಿವೃತ್ತ ಜೀವನದ ಕುರಿತು ಎದ್ದಿದ್ದ ಊಹಾಪೋಹದ ವರದಿಗಳಿಗೆ ತೆರೆ ಎಳೆದರು. ಈ ಮೂಲಕ ಅವರ ಮುಂದಿನ ನಡೆಯ ಕುರಿತು ಸಣ್ಣದೊಂದು ಕುತೂಹಲವನ್ನೂ ಉಳಿಸಿ ಹೋದರು.

ಹೆಚ್ಚಿನ ಓದಿಗೆ:

ಎಸ್ಎಂಕೆ ದಿಢೀರ್ ರಾಜೀನಾಮೆ: ‘ನಿವೃತ್ತಿ ಘೋಷಣೆ’ ಆಚೆಗೆ ಮೂಡುವ ಒಂದಷ್ಟು ಪ್ರಶ್ನೆಗಳು

Leave a comment

FOOT PRINT

Top