An unconventional News Portal.

ರಾಜ್ಯಪಾಲರ ಬೆಡ್ ರೂಮಿಗೆ ಮುಕ್ತ ಪ್ರವೇಶ: ಈ ‘ಬಿಳಿಯಾನೆ’ಗಳ ಖರ್ಚಿಗೆ ಬೇಕಿದೆ ಅಂಕುಶ!

ರಾಜ್ಯಪಾಲರ ಬೆಡ್ ರೂಮಿಗೆ ಮುಕ್ತ ಪ್ರವೇಶ: ಈ ‘ಬಿಳಿಯಾನೆ’ಗಳ ಖರ್ಚಿಗೆ ಬೇಕಿದೆ ಅಂಕುಶ!

ಈಶಾನ್ಯ ಭಾರತದ ಪುಟ್ಟ ರಾಜ್ಯ ಮೇಘಾಲಯದ ರಾಜಭವನದೊಳಗೆ ನಡೆದ ಕರ್ಮಕಾಂಡದ ವರದಿ ಹೊರಬಿದ್ದಿದೆ.

ಮಹಿಳೆಯರಿಗೆ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಿಗೆ ತಮಿಳುನಾಡು ಮೂಲದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯ ವಿ. ಷಣ್ಮಗನಾಥನ್ ಗುರಿಯಾಗಿದ್ದಾರೆ. ಅವರ ವಿರುದ್ಧ ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 90 ನೌಕರರು ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದರು. ಮಹಿಳೆಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದದ್ದು, ಕೆಲವು ಮಹಿಳೆಯರಿಗೆ ಅವರ ಬೆಡ್ ರೂಮಿಗೆ ಮುಕ್ತ ಪ್ರವೇಶವಿದ್ದದ್ದು ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪಗಳ ಪಟ್ಟಿಯು ಪತ್ರದಲ್ಲಿವೆ. ಇದರಿಂದ ಎಚ್ಚೆತ್ತ ಕೇಂದ್ರ ಸರಕಾರ ರಾಜ್ಯಪಾಲ ಷಣ್ಮುಗನಾಥನ್ ಅವರನ್ನು ಹೊಣೆಗಾರಿಕೆಯಿಂದ ಬಿಡುಗಡೆ ಮಾಡಿದೆ. ಇದೇ ವೇಳೆ, ಷಣ್ಮುಗನಾಥನ್ ಕೂಡ ಆರೋಗ್ಯದ ನೆಪ ಮುಂದಿಟ್ಟು ರಾಜೀನಾಮೆ ನೀಡಿದ್ದಾರೆ. ಮಹಿಳಾ ಪರ ಸಂಘಟನೆಗಳು ಮಾಜಿ ರಾಜ್ಯಪಾಲರ ವಿರುದ್ಧ ದೂರು ದಾಖಲಿಸಬೇಕು ಎಂದು ಪ್ರತಿಭಟನೆಯನ್ನು ಮುಂದುರಿಸಿದ್ದಾರೆ.

ಏಳು ವರ್ಷಗಳ ಹಿಂದೆ, 2009 ಕೊನೆಯಲ್ಲಿ ಅಂದಿನ ಆಂಧ್ರಪ್ರದೇಶ ರಾಜ್ಯಪಾಲ, ಕಾಂಗ್ರೆಸ್ ಹಿನ್ನೆಲೆಯ ಎನ್. ಡಿ. ತಿವಾರಿ ಕೂಡ ಲೈಂಗಿಕ ಪ್ರಕರಣವೊಂದರಲ್ಲಿ ಸಿಲುಕು ಸ್ಥಾನದಿಂದ ಕಿತ್ತೊಗೆಯಲ್ಪಟ್ಟಿದ್ದರು. ಅವರ ಮೇಲೆ ರಾಜಭವನದ ಒಳಗೇ ಅನೈತಿಕ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಕೇಳಿಬಂದಿತ್ತು. ಸಾಕ್ಷಿ ಎಂಬಂತೆ ವಿಡಿಯೋಗಳು ದೃಶ್ಯಮಾಧ್ಯಮಗಳ ಕೈಗೆ ಸಿಕ್ಕಿತ್ತು. ಇದೀಗ, ,7 ವರ್ಷಗಳ ನಂತರ ಮತ್ತೆ ಅಂತಹದ್ದೇ ಆರೋಪವೊಂದು ಮೇಘಾಲಯದ ರಾಜಭವನದಿಂದ ಹೊರಬಿದ್ದಿದೆ. ಈ ಮೂಲಕ ದೇಶದ ಎಲ್ಲಾ ರಾಜ್ಯಗಳಲ್ಲಿರುವ ರಾಜಭವನಗಳು ಮತ್ತು ಅವುಗಳಿಗೆ ನಡೆಯುವ ನೇಮಕಾತಿಗಳ ಕುರಿತು ಚರ್ಚೆ ಶುರುವಾಗಿದೆ.

ಬಿಳಿ ಆನೆಗಳು ಈ ರಾಜಭವನಗಳು:

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ರಾಜಭವನಗಳಿವೆ. ಇಲ್ಲಿಗೆ ಪ್ರತಿ ಐದು ವರ್ಷಕ್ಕೊಮ್ಮೆ ರಾಜ್ಯಪಾಲರ ನೇಮಕಾತಿ ನಡೆಯುತ್ತದೆ. ಈ ಸಮಯದಲ್ಲಿ ಕೇಂದ್ರ ಸರಕಾರದಲ್ಲಿರುವ ಪಕ್ಷದ ಹಿರಿಯ ನಾಯಕರನ್ನು ನೇಮಕ ಮಾಡುವ ಪರಿಪಾಠ ನಡೆದುಕೊಂಡು ಬಂದಿದೆ. ಇದೊಂದು ರೀತಿಯಲ್ಲಿ ನಿವೃತ್ತ ಜೀವನವಕ್ಕೆ ಅಧಿಕಾರದ ಮುಖವಾಡ ತೊಡಿಸುವ ಪ್ರಕ್ರಿಯೆ ಎಂಬ ಆರೋಪವೂ ಇದೆ. ಹೀಗಾಗಿ, ರಾಜ್ಯಪಾಲರ ನೇಮಕಾತಿಯನ್ನು ಮರುಪರಿಶೀಲನೆ ಮಾಡಬೇಕು ಎಂಬ ಆಗ್ರಹಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ.

“ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ ರಾಜ್ಯಪಾಲರ ನೇಮಕಾತಿ ನಡೆಯುತ್ತದೆ. ಆದರೆ ರಾಷ್ಟ್ರಪತಿಗಳಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಶಿಫಾರಸು ಮಾಡುತ್ತದೆ. ಸರಕಾರ ನಡೆಸುವ ಪಕ್ಷದ ಹಿರಿಯ ನಾಯಕರನ್ನು ಇನ್ನೇನು ಅವರ ರಾಜಕೀಯ ಜೀವನ ಕೊನೆಯ ಘಟ್ಟದಲ್ಲಿ ನೇಮಕ ಮಾಡುವ ಪರಿಪಾಠ ನಡೆದುಕೊಂಡು ಬಂದಿದೆ. ಇದನ್ನು ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ಇದೀಗ ಮೇಘಾಲಯದಲ್ಲಿ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ ಅಷ್ಟೆ. ನಂತರದ ದಿನಗಳಲ್ಲಿ ಇದು ತಣ್ಣಗಾಗುತ್ತದೆ,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಪಾದರ್ಶಕತೆಯ ಕೊರತೆ:

ಇತ್ತೀಚಿನ ದಿನಗಳಲ್ಲಿ ರಾಜಭವನದಲ್ಲಿ ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿಡುವ ಪ್ರಯತ್ನ ಜೋರಾಗಿಯೇ ನಡೆಯುತ್ತಿದೆ. ಗೋವಾ ರಾಜಭವನ ಸುಪ್ರಿಂ ಕೋರ್ಟ್ನಲ್ಲಿರುವ ವಿಶೇಷ ಮನವಿವೊಂದನ್ನು ಅಸ್ತ್ರವಾಗಿಟ್ಟುಕೊಂಡಿರುವ ದೇಶದ ನಾನಾ ರಾಜಭವನಗಳು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ನಿರಾಕರಿಸುತ್ತಿವೆ. ಕರ್ನಾಟಕದ ರಾಜಭವನದ ಮಾಹಿತಿ ಕೋರಿ 2011ರಲ್ಲಿ ಸಲ್ಲಿಸಿರುವ ಅರ್ಜಿಯೊಂದರ ವಿಚಾರಣೆಯಲ್ಲಿ ಮೊನ್ನೆ ಜ. 22ರಂದು ‘ಕರ್ನಾಟಕ ಮಾಹಿತಿ ಹಕ್ಕು ಆಯೋಗ’ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಸುಮಾರು 6 ವರ್ಷಗಳ ನಂತರವೂ ಮಾಹಿತಿ ನೀಡಲು ಮತ್ತೆ 6 ತಿಂಗಳ ಕಾಲಾವಧಿ ಕೋರಿದ ರಾಜಭವನದ ಅಧಿಕಾರಿಗಳಿಗೆ ಆಯೋಗ ಅವಕಾಶ ನೀಡಿ ಆದೇಶವನ್ನು ಹೊರಡಿಸಿದೆ.

KIC-Raj_Bhavan-order

ಕರ್ನಾಟಕ ರಾಜಭವನಕ್ಕೆ ಕಾಲಾವಧಿ ನೀಡಿ ಮಾಹಿತಿ ಹಕ್ಕು ಆಯೋಗ ನೀಡಿದ ಆದೇಶದ ಪ್ರತಿ. (ಕೃಪೆ: ಎನ್. ಶ್ರೀನಿವಾಸ್ )

ಸದ್ಯದ ಪರಿಸ್ಥಿತಿ ಹೀಗಿರುವಾಗಲೇ, ರಾಜಭವನದೊಳಗಿನ ಕರ್ಮಕಾಂಡದ ಮಾಹಿತಿ ಮೇಘಾಲಯದಿಂದ ಹೊರಬಿದ್ದಿದೆ. “ನಮ್ಮಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಆದರೆ ಅದನ್ನು ಪ್ರಶ್ನಿಸುವ ವ್ಯವಸ್ಥೆ ಇಲ್ಲವಾಗಿದೆ. ಒಂದು ವೇಳೆ, ರಾಜಭವನದ ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿಟ್ಟರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ,” ಎನ್ನುತ್ತಾರೆ ಕರ್ನಾಟಕದ ರಾಜಭವನದ ಹಿರಿಯ ಅಧಿಕಾರಿಯೊಬ್ಬರು.

ತೆರಿಗೆ ಹಣದಲ್ಲಿ ಖರ್ಚು ವೆಚ್ಚ: 

ಒಬ್ಬ ರಾಜ್ಯಪಾಲರನ್ನು ರಾಜ್ಯದ ಜನತೆ ತಮ್ಮ ತೆರಿಗೆ ಹಣದಲ್ಲಿ ಸಾಕಲು ದೊಡ್ಡಮಟ್ಟದಲ್ಲಿ ಖರ್ಚು ಮಾಡುತ್ತಾರೆ. ಕರ್ನಾಟಕದ ರಾಜಭವನವನ್ನೇ ಉದಾಹರಣೆಗೆ ತೆಗೆದುಕೊಂಡರೆ, ರಾಜಭವನದ ಖರ್ಚು ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ರಾಜ್ಯಪಾಲ ವಾಜುಬಾಯಿ ವಾಲಾ ಅವರ ವಿಮಾನ ವೆಚ್ಚದ ವಿವರಗಳು ಈ ಹಿಂದೆ ಬಹಿರಂಗಗೊಂಡಿದ್ದವು. ಅದರ ಜತೆಗೆ, ಅವರ ಚಾಕರಿ ನೋಡಿಕೊಳ್ಳಲು ಅಪಾರ ಸಂಖ್ಯೆಯ ಸಿಬ್ಬಂದಿಗಳಿಗಾಗಿ ವರ್ಷಕ್ಕೆ 9 ಕೋಟಿ ಖರ್ಚಾಗುತ್ತಿದೆ.

26 ಎಕರೆ ವಿಸ್ತೀರ್ಣದಲ್ಲಿರುವ ಈ ಭವನದಲ್ಲಿ 18 ಎಕರೆ ತೋಟವಿದ್ದರೆ ಉಳಿದ ಭಾಗದಲ್ಲಿ ರಾಜ್ಯಪಾಲರ ಕಚೇರಿ, ವಿವಿಐಪಿ ಅಥಿತಿ ಗೃಹ, ಪ್ರಧಾನಿ ಮಂತ್ರಿ ಸೂಟ್, ಸಿಬ್ಬಂದಿ ವಸತಿ ಗೃಹಗಳು, ಆಸ್ಪತ್ರೆ, ಅಂಚೆ ಕಚೇರಿ, ಬ್ಯಾಂಕ್ ಹೀಗೆ ಎಲ್ಲಾ ಸೌಲಭ್ಯಗಳೂ ಇವೆ.

ಕಾಲಿಗೊಂದಾಳು, ಕೈಗೊಂದಾಳು ಇರುವ ರಾಜಭವನದ ನಿರ್ವಹಣೆಗಾಗಿ 2014-15ನೇ ವರ್ಷದಲ್ಲಿ ಬರೋಬ್ಬರಿ 9.08 ಕೋಟಿ ಮೀಸಲಿಡಲಾಗಿತ್ತು. ಕರ್ನಾಟಕ ರಾಜ್ಯಪಾಲರಾಗಿ ವಜೂಭಾಯಿ ವಾಲಾ ಅಧಿಕಾರ ಸ್ವೀಕರಿಸಿದ್ದು 2014 ಸೆಪ್ಟೆಂಬರ್ 1ರಂದು. 2015ರ ಮಾರ್ಚ್ ಅಂತ್ಯಕ್ಕೆ ಅವರ ಸಿಬ್ಬಂದಿಗಳ ವೇತನಗಳು ಈ ಕೆಳಗಿನಂತಿವೆ.

ರಾಜ್ಯಪಾಲರ ಮತ್ತು ಸಿಬ್ಬಂದಿಗಳ ವೇತನಗಳು:

ರಾಜ್ಯಪಾಲ ವಾಜೂಬಾಯಿ ವಾಲಾ.

ರಾಜ್ಯಪಾಲ ವಾಜೂಬಾಯಿ ವಾಲಾ.

2015ರ ಅಂತ್ಯಕ್ಕೆ ನೀಡಿದ ವಿವರಗಳ ಪ್ರಕಾರ ರಾಜ್ಯಪಾಲ ವಜೂಭಾಯಿ ವಾಲಾರಿಗೆ ತಿಂಗಳಿಗೆ 1.10 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತಿತ್ತು. ರಾಜಭವನದ ವಿಶೇಷ ಕಾರ್ಯದರ್ಶಿ ಡಾ. ವಿಜಯಕುಮಾರ್ ಎನ್ ತೋರ್ಗಲ್ ಅವರಿಗೆ 88,394 ರೂ. ಸಂಬಳ ನಿಗದಿ ಮಾಡಲಾಗಿತ್ತು. ಇನ್ನು ಇವರ ಕೆಳಗೆ ಬರುವ ಐವರು ಅಧೀನ ಕಾರ್ಯದರ್ಶಿ ಮತ್ತು ವಿಶೇಷ ಕಾರ್ಯದರ್ಶಿಗಳಿಗೂ 50 ಸಾವಿರದ ಆಸುಪಾಸಿನಲ್ಲಿ ಸಂಬಳ ನೀಡಲಾಗಿದೆ.

ವಾಲಾ ಆಪ್ತ ಕಾರ್ಯದರ್ಶಿ ಮಂಜುನಾಥ. ಎಚ್ ಅವರಿಗೆ 71,068 ರೂಪಾಯಿ ಸಂಬಳ ನೀಡಿದ್ದಾರೆ. ರಾಜ್ಯಪಾರಿಗೆ ಸಲಹೆಗಾರರಾಗಿರುವ ರಾಜಶೇಖರ್ ಆರ್ ಮತ್ತು ಸೌರಭ್ ಯಾದವ್ಗೆ ಕ್ರಮವಾಗಿ 95,032 ಹಾಗೂ 77,687 ರೂಪಾಯಿ ವೇತನವನ್ನು ತೆರಿಗೆದಾರರ ಹಣದಲ್ಲಿ ನೀಡಿದ್ದಾರೆ.

ರಾಜಭವನದಲ್ಲಿ ವೈದ್ಯಕೀಯ ಸಿಬ್ಬಂದಿಗಳೂ ಇದ್ದಾರೆ. ಸರ್ಜನ್ ದರ್ಜೆಯ ಮುಖ್ಯ ವೈದ್ಯಾಧಿಕಾರಿ ಡಾ. ನವೀನ್ ಕುಮಾರ್ ಜಿ ಅವರಿಗೆ ತಿಂಗಳಿಗೆ 75,818 ರೂ. ಪಾವತಿಸಲಾಗಿದೆ. ಇನ್ನು ನರ್ಸ್ ಸುನೀತಾ ಸರ್ಕಾರ್ 47,668 ರೂ. ಪಡೆದುಕೊಂಡಿದ್ದಾರೆ. ಇತರ ಮೂವರು ಸಿಬ್ಬಂದಿಗಳೂ ಸುಮಾರು 29 ಸಾವಿರದಂತೆ ಸಂಬಳ ಪಡೆದುಕೊಂಡಿದ್ದಾರೆ.

ಮುಖ್ಯ ಚಾಲಕ ದೊಡ್ಡೇಗೌಡ 38,320 ರೂಪಾಯಿ ಸಂಬಳ ಪಡೆದಿದ್ದರೆ, ರಾಜಭವನದ ಸಿಬ್ಬಂದಿ ಪಡೆದ ಕನಿಷ್ಠ ಸಂಬಳ 13,827 ರೂ. ಆಗಿದೆ. ಇನ್ನು ವಿಶೇಷ ಅಂದರೆ ಕೆಲವು ಟೈಪಿಸ್ಟ್ ಅಸಿಸ್ಟೆಂಟ್ಗಳು 40 ಸಾವಿರಕ್ಕೂ ಹೆಚ್ಚು ಸಂಬಳ ಪಡೆದುಕೊಂಡಿದ್ದಾರೆ.

ಒಟ್ಟಾರೆ ರಾಜಭವನದ ಸಿಬ್ಬಂದಿಗಳ ಸಂಬಳಕ್ಕಾಗಿಯೇ ವರ್ಷವೊಂದಕ್ಕೆ 4.46 ಕೋಟಿ ಖರ್ಚಾಗಿದೆ. ವರ್ಷದ ಹಿಂದೆ ಅಂದರೆ 2013-14ರಲ್ಲಿ ಈ ವೆಚ್ಚ 3.69 ಕೋಟಿಯಾಗಿತ್ತು.

ಇತರೆ ಖರ್ಚು:

ಇನ್ನು ಬಜೆಟ್ನಲ್ಲಿ ಪ್ರಯಾಣ, ಪ್ರವಾಸ ಮತ್ತು ಸಾರಿಗೆಗಾಗಿ 67 ಲಕ್ಷ ರೂ. ತೆಗೆದಿರಿಸಲಾಗಿತ್ತು. ರಾಜ್ಯಪಾಲರ ಕಚೇರಿ ಖರ್ಚಿಗಾಗಿ 1.3 ಕೋಟಿ, ಟೆಲಿಫೋನ್ ಬಿಲ್ಗಾಗಿ 17 ಲಕ್ಷ ಎತ್ತಿಡಲಾಗಿತ್ತು. ರಾಜಭವನದ ಸಿಬ್ಬಂದಿಗಳ ಮನೆ ನವೀಕರಣ, ಪೀಠೋಪಕರಣಗಳ ಖರೀದಿಗಾಗಿಯೇ 16.5 ಲಕ್ಷ ವೆಚ್ಚ ಮಾಡಲು ಬಜೆಟ್ನಲ್ಲಿ ಅವಕಾಶ ನೀಡಲಾಗಿತ್ತು.

2014-15ನೇ ಸಾಲಿನಲ್ಲಿ ಒಟ್ಟು 114 ಜನ ರಾಜಭವನದಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಜಭವನದ ವೆಚ್ಚ ವರ್ಷ ವರ್ಷವೂ ಏರಿಕೆಯಾಗುತ್ತಲೇ ಸಾಗಿದ್ದು ಸದ್ಯ 10 ಕೋಟಿ ದಾಟಿರುವ ಸಾಧ್ಯತೆಗಳಿವೆ. ಇತ್ತೀಚೆಗಿನ ಖರ್ಚು ವೆಚ್ಚಗಳನ್ನು ಆರ್.ಟಿ.ಐ ಅಡಿಯಲ್ಲಿ ಕೇಳಲಾಗಿತ್ತಾದರೂ ಮಾಹಿತಿ ನಿರಾಕರಿಸಲಾಗಿದೆ.

Leave a comment

FOOT PRINT

Top