An unconventional News Portal.

ಎಸ್ಎಂಕೆ ದಿಢೀರ್ ರಾಜೀನಾಮೆ: ‘ನಿವೃತ್ತಿ ಘೋಷಣೆ’ ಆಚೆಗೆ ಮೂಡುವ ಒಂದಷ್ಟು ಪ್ರಶ್ನೆಗಳು

ಎಸ್ಎಂಕೆ ದಿಢೀರ್ ರಾಜೀನಾಮೆ: ‘ನಿವೃತ್ತಿ ಘೋಷಣೆ’ ಆಚೆಗೆ ಮೂಡುವ ಒಂದಷ್ಟು ಪ್ರಶ್ನೆಗಳು

ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ, ಕಾಂಗ್ರೆಸ್ ಮುಖಂಡ ಎಸ್. ಎಂ. ಕೃಷ್ಣ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ಶನಿವಾರ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ಜತೆಗೆ, ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. 84ರ ಇಳೀ ವಯಸ್ಸಿನಲ್ಲಿರುವ ಅನುಭವಿ ರಾಜಕಾರಣಿಯೊಬ್ಬರ ‘ನಿವೃತ್ತಿ ಘೋಷಣೆ’ ಇದು ಎಂದು ವರದಿಗಳು ಹೇಳುತ್ತಿವೆ. ಆದರೆ, ರಾಜ್ಯ ರಾಜಕಾರಣದಲ್ಲಿ ನಡೆದ ಈ ದಿಢೀರ್ ಬೆಳವಣಿಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲಿ ಪ್ರಮುಖವಾದುದು, ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುವುದೇ ಆಗಿದ್ದರೆ, ಎಸ್. ಎಂ. ಕೃಷ್ಣ ಅವರೇಕೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದರು? ಎಂಬುದು.

ಸ್ಥಳೀಯ ಅಸಮಾಧಾನ:

ಇಂತಹ ಪ್ರಶ್ನೆಗೆ ಪ್ರಮುಖ ಆಧಾರವಾಗಿರುವುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತು ಎಸ್. ಎಂ. ಕೃಷ್ಣ ನಡುವೆ ನಡೆದ ಬಹಿರಂಗ ಗುದ್ದಾಟಗಳು. ಕಳೆದ ಮೂರು ವರ್ಷಗಳ ಅಂತರದಲ್ಲಿ ಎಸ್ಎಂಕೆ ಸಾಕಷ್ಟು ಬಾರಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. “ಅಧಿಕಾರ ನಡುಸುವವರಿಗೆ ತಲೆ ಬುಜದ ಮೇಲೆಯೇ ಇರಬೇಕು,” ಎಂದವರು ಕುಟುಕಿದ್ದರು.

ಬಿಬಿಎಂಪಿ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಶತಾಯಗತಾಯ ಗೆಲ್ಲಲೇಬೇಕು ಎಂದು ಹರಸಾಹಸ ನಡೆಸುತ್ತಿದ್ದ ಸಮಯದಲ್ಲಿ ‘ಸಿಲಿಕಾನ್ ಸಿಟಿ’ಯ ಕನಸು ಕಾಣುವ ಮೂಲಕ ನಗರಕೇಂದ್ರಿತ ಚರಿಷ್ಮಾವನ್ನು ಬೆಳೆಸಿಕೊಂಡಿದ್ದ ಕೃಷ್ಣ ಮಾತ್ರ ಪ್ರಚಾರದಿಂದ ದೂರವೇ ಉಳಿದಿದ್ದರು. ಹೆಬ್ಬಾಳ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ, ತಮ್ಮ ಆಪ್ತರಿಗೆ ಟಿಕೆಟ್ ಕೊಡಲು ಮುಂದಾದಾಗ ಅಖಾಡಕ್ಕಿಳಿದ ಎಸ್ಎಂಕೆ ಜಾಫರ್ ಷರೀಫ್ ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಸರಕಾರ ಮೂರು ವರ್ಷಗಳನ್ನು ಪೂರೈಕೆ ಮಾಡಿದ ಸಮಯದಲ್ಲಿ ಎದ್ದ ನಾಯಕತ್ವ ಬದಲಾವಣೆಯ ಕೂಗಿನ ಹಿಂದೆಯೂ ಇವರು ಪ್ರಮುಖ ಪಾತ್ರ ವಹಿಸಿದ್ದರು.

ಇದಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯ ಸರಕಾರದಲ್ಲಿ ತಮಗೆ ಸೂಕ್ತ ಮನ್ನಣೆ ಸಿಗಲಿಲ್ಲ ಎಂಬುದೇ ಆಗಿತ್ತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. “ಅಮೆರಿಕಾದ ಚುನಾವಣೆಗಳಲ್ಲಿ ಕೆಲಸ ಮಾಡಿ ಬಂದವರು ಎಸ್. ಎಂ. ಕೃಷ್ಣ. ಒಳ್ಳೆಯ ಓದು, ರಾಜಕೀಯ ತಂತ್ರಗಾರಿಕೆಯ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದವರು. ಈ ದೇಶದಲ್ಲಿ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗಳನ್ನು ಬಿಟ್ಟರೆ, ಬಹುತೇಕ ಸಾಂವಿಧಾನಿಕ ಹುದ್ದೆಗಳನ್ನು ನಿರ್ವಹಿಸಿದವರು ಅವರು. ಯಾವತ್ತೂ ಸಾರ್ವಜನಿಕವಾಗಿ ಅಸಂಸದೀಯ ಪದಗಳನ್ನು ಪ್ರಯೋಗಿಸಿದವರು ಅವರಲ್ಲ. ಅಂತವರಿಗೆ ರಾಜ್ಯ ಕಾಂಗ್ರೆಸ್ ಅಧಿಕಾರದಲ್ಲಿ ಮನ್ನಣೆ ಸಿಗಲಿಲ್ಲ ಎಂಬ ಕೊರಗು ಇದ್ದಿರಬಹುದು,” ಎನ್ನುತ್ತಾರೆ ಹಿರಿಯ ಪತ್ರಕರ್ತ ಎಲ್. ಪ್ರಕಾಶ್.

ಅಪ್ಪಟ ಆಡಳಿತಗಾರ:

1999-2004ರವರೆಗೆ ರಾಜ್ಯದ ಚುಕ್ಕಾಣಿ ಹಿಡಿದವರು ಎಸ್ಎಂಕೆ. ಅವರು ಮುಖ್ಯಮಂತ್ರಿಯಾಗಿದ್ದಷ್ಟು ದಿನವೂ ರಾಜ್ಯದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಮೊದಲು ಕಂಬಾಲಪಲ್ಲಿಯ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಿಂದ ಆರಂಭವಾಗಿ, ಸಿಇಟಿ ವಿಚಾರ, ರಾಜ್ ಕುಮಾರ್ ಅಪಹರಣ ಪ್ರಕರಣ, ನಾಗಪ್ಪ ಅಪಹರಣ ಮತ್ತು ಹತ್ಯೆ ಪ್ರಕರಣ, ಕಾವೇರಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ನಿಂದ ಛೀಮಾರಿ ಹಾಗೂ ಸತತ ನಾಲ್ಕು ಬರಗಾಲ; ಆಡಳಿತಕ್ಕೆ ಸವಾಲೊಡ್ಡಿದ್ದವು.

ಇದರ ನಡುವೆಯೇ, “ಎಸ್. ಎಂ. ಕೃಷ್ಣ ನನಗೊಂದು ಕನಸಿದೆ ಎಂದು ಆಡಳಿತ ಶುರುಮಾಡಿದರು. ಮುಚ್ಚಿಹೋಗುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಉಳಿಸಿದರು. ಅದರಿಂದ ಬಂದ ಆದಾಯದಲ್ಲಿ ಪ್ಲೈ ಓವರ್ಗಳನ್ನು ಕಟ್ಟಿದರು. ಐಟಿ- ಬಿಟಿ ಕ್ಷೇತ್ರದ ಬೆಳವಣಿಗೆಗೆ ಕೆಲಸ ಮಾಡಿದರು. ಆ ಸಮಯದಲ್ಲಿ ಅವತ್ತಿನ ಆಲೋಚನೆಗೆ ನಿಲುಕದಾದ ಟಾಸ್ಕ್ ಪೋರ್ಸ್, ನಾಲೆಡ್ಜ್ ಸಿಟಿಯಂತಹ ಪರಿಕಲ್ಪನೆಗಳನ್ನು ಆಡಳಿತದಲ್ಲಿ ತಂದರು,” ಎನ್ನುತ್ತಾರೆ ಪ್ರಕಾಶ್.

ಹೀಗೆ, ಒಂದು ಅವಧಿಯನ್ನು ಕಳೆದ ನಂತರ ಎಸ್. ಎಂ. ಕೃಷ್ಣ ಅವರಿಗೆ ಮತ್ತೊಮ್ಮೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಬೇಕು ಎಂಬ ಆಸೆಯೊಂದಿತ್ತು. ಅದನ್ನು ಮುಂದೊಂದು ದಿನ ಮತ್ತೊಬ್ಬ ಹಿರಿಯ ರಾಜಕಾರಣಿ ಎಚ್. ಡಿ. ದೇವೇಗೌಡ ಬಹಿರಂಗಪಡಿಸಿದರು ಕೂಡ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಈ ಅವಧಿಯಲ್ಲಿಯೂ ಒಮ್ಮೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರಿದ್ದಂತಿತ್ತು. ಅದಕ್ಕಾಗಿಯೇ ತಾವು ಟೆನ್ನಿಸ್ ಆಡುವ ಫೊಟೋಗಳನ್ನು ಪತ್ರಿಕೆಗಳಲ್ಲಿ ಬರುವಂತೆ ನೋಡಿಕೊಂಡರು. ಈ ಮೂಲಕ ತಾವು ‘ಫಿಟ್ ಅಂಡ್ ಫೈನ್’ ಆಗಿರುವುದಾಗಿ ಸಂದೇಶ ಕಳುಹಿಸಿದರು. ಸಾಹಿತಿಗಳ ಜತೆ ಉಪಾಹಾರ ಸೇವಿಸಿದರು. ಇಷ್ಟೆಲ್ಲಾ ನಡೆಯುತ್ತಿರುವ ವೇಳೆಯಲ್ಲಿಯೇ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆ ಹೊಸ ನಡೆಯನ್ನು ಇಟ್ಟಾಗಿತ್ತು.

ಹಳೇ ಮೈಸೂರು ರಾಜಕೀಯ:

ದೇಶದ ಮಟ್ಟದಲ್ಲಿ ಕೃಷ್ಣ ನಾನಾ ಸಾಂವಿಧಾನಿಕ ಹುದ್ದೆಗಳನ್ನು ನಿರ್ವಹಣೆ ಮಾಡಿದವರು. ಅವರು ರಾಜಕೀಯದ ಮೂಲ ಇರುವುದು ಹಳೇ ಮೈಸೂರು ಭಾಗದಲ್ಲಿ. ಇಲ್ಲಿನ ತಾಲೂಕು ಕೇಂದ್ರವೊಂದರಲ್ಲಿ ನಡೆದ ಒಕ್ಕಲಿಗರ ಸಮಾವೇಶವೊಂದರಲ್ಲಿ ಎಸ್ಎಂಕೆ ಮತ್ತು ದೇವೇಗೌಡ ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು.

ಹೀಗಿರುವಾಗಲೇ, ಸಿದ್ದರಾಮಯ್ಯ ಮತ್ತು ಅವರ ತಂಡ ಹಿಂದೆ ಜೆಡಿಎಸ್ ಜತೆಗಿದ್ದವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ತಯಾರಿ ನಡೆಸುತ್ತಿದೆ. “ಇವರಲ್ಲಿ ಕೆಲವರನ್ನು ಎಸ್ಎಂಕೆ ವಿರೋಧಿಸಿಕೊಂಡು ಬಂದಿದ್ದರು. ಅದೇ ಮುಖಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತರುವ ಪ್ರಯತ್ನಗಳು ನಡೆದಾಗ ಅವರಿಗೆ ಸಹಜವಾಗಿಯೇ ಬೇಸರ ಮೂಡಿರಬಹುದು,” ಎನ್ನುತ್ತಾರೆ ಸ್ಥಳೀಯ ಪತ್ರಕರ್ತರೊಬ್ಬರು.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದವರು ಎಸ್. ಎಂ. ಕೃಷ್ಣ. ಅವತ್ತು ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಅದೇ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ತಮಗೆ ಮನ್ನಣೆ ಸಿಗಲಿಲ್ಲ ಎಂದು ಎಸ್ಎಂಕೆ ಅಸಾಮಾಧಾನಗೊಂಡಿದ್ದರು; ಹಳೇ ಕಾಂಗ್ರೆಸ್ಸಿಗರಿಗೂ ಇಂತಹದ್ದೇ ಒಳಗುದಿ ಇದೆ. ಅವೆಲ್ಲವೂ ಹೈ ಕಮಾಂಡ್ ಮುಂದೆ ಹೋಗಿದೆಯಾದರೂ, ನಿರೀಕ್ಷಿತ ಮನ್ನಣೆಗಳು ಸಿಕ್ಕಿಲ್ಲ. ಇದೀಗ ಅದು ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕೀಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಹೊಸ ತಿರುವು ಬರಲಿದೆ ಎಂಬುದು ರಾಜಕೀಯ ಲೆಕ್ಕಚಾರಗಳು.

ಎರಡು ದಿನಗಳ ಹಿಂದಷ್ಟೆ ಸೋನಿಯಾಗಾಂಧಿ ಅವರನ್ನು ದೆಹಲಿಯಲ್ಲಿ ಕೃಷ್ಣ ಭೇಟಿ ಮಾಡಿ ಬಂದ ನಂತರ ಅವರ ಕಡೆಯಿಂದ ಈ ತೀರ್ಮಾನ ಹೊರಬಿದ್ದಿದೆ. ಈ ಕುರಿತು ಭಾನುವಾರ ಅವರೇ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡುವ ಸಾಧ್ಯತೆಗಳಿವೆ. ಬಲ್ಲ ಮೂಲಗಳ ಪ್ರಕಾರ, ಅವರಿಗಾಗಿ ಬಿಜೆಪಿ ‘ಗೌರವಾನ್ವಿತ ಹುದ್ದೆಯೊಂದನ್ನು’ ಅಣಿಗೊಳಿಸಿದೆ ಎಂಬ ಸುದ್ದಿ ಇದೆ. ಈ ಎಲ್ಲಾ ಪ್ರಶ್ನೆಗಳಿಗೆ ಕೃಷ್ಣ ಅವರ ನಾಳಿನ ಪತ್ರಿಕಾಗೋಷ್ಠಿ ಉತ್ತರ ನೀಡಲಿದೆ ಎಂಬ ನಿರೀಕ್ಷೆ ಇದೆ.

UPDate: “ಬಲ್ಲ ಮೂಲಗಳ ಪ್ರಕಾರ, ಅವರಿಗಾಗಿ ಬಿಜೆಪಿ ‘ಗೌರವಾನ್ವಿತ ಹುದ್ದೆಯೊಂದನ್ನು’ ಅಣಿಗೊಳಿಸಿದೆ ಎಂಬ ಸುದ್ದಿ ಇದೆ. ಈ ಎಲ್ಲಾ ಪ್ರಶ್ನೆಗಳಿಗೆ ಕೃಷ್ಣ ಅವರ ನಾಳಿನ ಪತ್ರಿಕಾಗೋಷ್ಠಿ ಉತ್ತರ ನೀಡಲಿದೆ ಎಂಬ ನಿರೀಕ್ಷೆ ಇದೆ.”

ಕೃಷ್ಣ ಅವರು ನಡೆಸಿದ ಭಾನುವಾರದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಿಲ್ಲ. ಆದರೆ, ಕೆಲವು ಸುದ್ದಿ ಸಂಸ್ಥೆಗಳು ಈಗಾಗಲೇ ಅವರ ಬಿಜೆಪಿ ಕಡೆಗಿನ ನಡಿಗೆಯನ್ನು ವಿಶ್ಲೇಷಿಸುತ್ತಿವೆ. ಪತ್ರಿಕಾಗೋಷ್ಠಿಯ ವರದಿ ಕೆಳಗಿದೆ.

Leave a comment

FOOT PRINT

Top